ಪೂರ್ವದಿಕ್ಕಿನಲ್ಲಿ ಆಗ ತಾನೇ ಮೂಡುತ್ತಿದ್ದ ಸೂರ್ಯ. ಬೆಳಗಿನ ಹಕ್ಕಿಗಳ ಕಲರವ. ಬಿರುಬಿಸಿಲಿಂದ ಒಣಗಿದ್ದ ನೆಲ ರಾತ್ರಿ ಬಿದ್ದ ಮಳೆಯಿಂದ ತನ್ನೆಲ್ಲ ಕೊಳೆಯನ್ನು ತೊಳೆದುಕೊಂಡು ಲಕಲಕಿಸುತ್ತಿತ್ತು. ಒಂದೇ ಎರಡೇ ಎಲ್ಲಾ ಸಕಾರಾತ್ಮಕ ಚಟುವಟಿಕೆಗಳಿಂದ ಇಡೀ ವಾತಾವರಣವೇ ಆಹ್ಲಾದಕರವಾಗಿತ್ತು.
ಆದರೆ ಇವೆಲ್ಲ ಸಂತಸವನ್ನು ಸವಿಯುವ ಮನಸ್ಥಿತಿ ಡಾ. ಪ್ರಸಾದನಿಗಿರಲಿಲ್ಲ. ಮೈಸೂರಿನ ಕಾಮಾಕ್ಷಿ ಆಸ್ಪತ್ರೆೆಯ ಕಾರಿಡಾರ್ನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದ್ದ. ರಾತ್ರಿಯೆಲ್ಲ ನಿದ್ರೆಯಿಲ್ಲದೆ ಕೆಂಪಡರಿದ್ದ ಕಣ್ಣುಗಳು, ಕೆದರಿದ ತಲೆಗೂದಲು, ಸುಕ್ಕುಸುಕ್ಕಾಗಿದ್ದ ಉಡುಪು, ಒಂದೆಡೆ ಕುಳಿತುಕೊಳ್ಳಲೂ ಆಗದೆ ಘಳಿಗೆಗೊಮ್ಮೆ ಆಸ್ಪತ್ರೆಯ ಒಳಕೊಠಡಿಯತ್ತ ದೃಷ್ಟಿ ಬೀರುತ್ತಾ ಚಡಪಡಿಸುತ್ತಿದ್ದನು.
ಅದೇ ಕಾರಿಡಾರಿನ ಮತ್ತೊಂದು ಬದಿಯಲ್ಲಿ ಡಾ. ಪ್ರಸಾದರ ಮಾವ ಮೋತಿಲಾಲ್ ಜೈನ್, ಅತ್ತೆ ಯಶೋದಾ ಅಳಿಯನ ಆತಂಕ, ಧಾವಂತಗಳನ್ನು ನೋಡುತ್ತಾ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
“ಅಲ್ಲಾ ಸ್ವತಃ ವೈದ್ಯರಾಗಿರುವ ಈ ಅಳಿಯಂದಿರು ಇಂತಹ ಎಷ್ಟೋ ಕೇಸುಗಳನ್ನು ನೋಡಿರುತ್ತಾರೆ. ಅಂಥಾದ್ದರಲ್ಲಿ ರಾತ್ರಿಯಿಂದ ಒದ್ದಾಡುತ್ತಿದ್ದಾರಲ್ಲ.” ಎಂದು ಪತಿಯ ಕಿವಿಯ ಹತ್ತಿರ ಪಿಸುಗುಟ್ಟಿದರು. ಯಶೋದಾ. “ಷ್..ಸುಮ್ಮನಿರು, ವೈದ್ಯರೇ ಆದರೂ ಮನುಷ್ಯರಲ್ಲವೇ? ಅದೂ ತಾವು ತಾಳಿಕಟ್ಟಿದ ಹೆಂಡತಿಯ ಚೊಚ್ಚಲ ಹೆರಿಗೆ. ಸಾಲದ್ದಕ್ಕೆ ವಯಸ್ಸು ಹತ್ತಿರ ಹತ್ತಿರ ನಲವತ್ತು. ಅಲ್ಲದೆ ಅವರಿಗೆ ಈ ಡಾಕ್ಟರ್ ಬಗ್ಗೆ ಏಕೋ ಅಪನಂಬಿಕೆ” ಎಂದರು ಜೈನ್.
“ಅದೇನು ವಿಚಿತ್ರ, ನಮ್ಮ ಅಳಿಯಂದಿರು ಮೈಸೂರಿನಲ್ಲೇ ಅಲ್ಲವೇ ಎಂ.ಎಸ್. ಮಾಡಿದ್ದು. ನಮ್ಮ ಹರಿ ಹೇಳ್ತಾ ಇದ್ದ ಇದ್ದುದರಲ್ಲಿ ಈ ಆಸ್ಪತ್ರೆಯೇ ಬಹಳ ಚೆನ್ನಾಗಿದೆ. ಹಳೆಯದು ಮತ್ತು ಹೆಸರುವಾಸಿಯಾಗಿದೆ ಅಂತ. ಸೀನಿಯರ್ ಡಾಕ್ಟರ್ ನಿರ್ಮಲಾರವರು…” ಅಷ್ಟುಹೊತ್ತಿಗೆ “ಯಶೋದಾ ಅಳಿಯಂದಿರು ಇತ್ತಕಡೆಗೇ ಬರುತ್ತಿದ್ದಾರೆ ಸುಮ್ಮನಿರು. ಸದ್ಯ ಯಾವ ತೊಂದರೆಯೂ ಆಗದಂತೆ ಹೆರಿಗೆಯಾಗಿ ತಾಯಿ, ಮಗು ಕ್ಷೇಮವಾಗಿಬಿಟ್ಟರೆ ಸಾಕು” ತಗ್ಗಿದ ದನಿಯಲ್ಲಿ ಹೆಂಡತಿಯ ಬಾಯಿ ಮುಚ್ಚಿಸಿದರು.
ಅವರಿಬ್ಬರನ್ನೂ ನೋಡಿ ಡಾ. ಪ್ರಸಾದ್ “ಅಬ್ಬಾ ! ಇವರಿಬ್ಬರು ನನ್ನಷ್ಟು ಚಡಪಡಿಸುತ್ತಿಲ್ಲ. ಅವರಿಗೆ ವೈದ್ಯರ ಮೇಲೆ ಅಪಾರ ನಂಬಿಕೆ. ನನಗೆ? ಊಹುಂ..ನಾನೇ ಮಾಡಿಕೊಂಡ ಪ್ರಮಾದವಿದು. ಯಾರಲ್ಲೂ ಹೇಳಿಕೊಳ್ಳಲೂ ಆಗದ ಒಡಲ ಬೇಗುದಿ. ನಾವೇ ಬಂದು ಇಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ. ಇದರ ಪರಿಣಾಮ ಸೇಡಿನಲ್ಲಿ ಕೊನೆಗೊಂಡರೆ?.. ಛೇ..ಛೇ.. ಹಾಗೆ ಆಗಲಾರದು. ಭಗವಂತಾ, ನನಗಿದು ಬೇಕಿತ್ತಾ?” ಅವನ ಮನಸ್ಸಿನೊಳಗೆ ಅಡಗಿದ್ದ ಹಿಂದಿನ ಘಟನೆಗಳು ಬಿಚ್ಚಿಕೊಳ್ಳತೊಡಗಿದವು.
ಇಪ್ಪತ್ತು ವರ್ಷಗಳ ಹಿಂದಿನ ಮಾತು. ಗುಲ್ಬರ್ಗಾ ಕಾಲೇಜಿನಲ್ಲಿ ಪ್ರಸಾದ್ ಎಂ.ಬಿ.ಬಿ.ಎಸ್. ಮುಗಿಸಿ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಮಾಡಲೆಂದು ಮೈಸೂರು ಮೆಡಿಕಲ್ ಕಾಲೇಜಿಗೆ ಸೇರಿದ್ದನು. ಅಲ್ಲಿಯೇ ಮೈಸೂರಿನಲ್ಲೇ ಎಂ.ಬಿ.ಬಿ.ಎಸ್. ಮುಗಿಸಿದ್ದ ಸಬೀಹಾಬಾನು ಗೈನಕಾಲಜಿಯಲ್ಲಿ ಎಂ.ಡಿ. ಮಾಡಲು ಸೇರಿದ್ದವಳು ಇವನಿಗೆ ಪರಿಚಯವಾದದ್ದು. ಸಬೀಹಾ ಚಂದದ ಚಲುವೆ. ನೀಳದೇಹ, ತಿದ್ದಿತೀಡಿದಂತಹ ಅಂಗಸೌಷ್ಟವ, ಕೆನೆಹಾಲಿನಂತಹ ಬಣ್ಣ, ಮೆಲುಮಾತಿನ, ಗುಳಿಕೆನ್ನೆಯ ಕನ್ಯೆ. ಮೊದಲ ನೋಟದಲ್ಲೇ ಅವನನ್ನು ಸೆಳೆದಳು.
ಈ ಸೆಳೆತ ಅವರಿಬ್ಬರನ್ನೂ ಹತ್ತಿರಕ್ಕೆ ತಂದು ಸ್ನೇಹಕ್ಕೆ ಅಡಿಪಾಯ ಹಾಕಿತು. ದಿನಗಳೆದಂತೆ ಒಬ್ಬರಿನ್ನೊಬ್ಬರ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವ ಹಂತ ತಲುಪಿದರು. ಪ್ರಸಾದ ಅವನ ತಂದೆ ತಾಯಿಗೆ ಏಕೈಕ ಪುತ್ರ. ಕಟ್ಟಾ ಜೈನ ಸಂಪ್ರದಾಯದ ಮನೆತನ. ಬೆಂಗಳೂರಿನಲ್ಲಿ ಅವರ ತಂದೆಯದು ಸ್ವಂತ ಉದ್ಯಮ. ಸಬೀಹಾಳದ್ದು ತಂದೆತಾಯಿಗಳ ಜೊತೆಗೆ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣಂದಿರಿದ್ದ ಅವಿಭಕ್ತ ಕುಟುಂಬ. ಆಕೆಯ ತಂದೆ ಮತ್ತು ಚಿಕ್ಕಪ್ಪ ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿದ್ದರು. ಅವರುಗಳು ವರ್ಷಕ್ಕೊಮ್ಮೆಯೋ, ಎರಡು ವರ್ಷಕ್ಕೊಮ್ಮೆಯೋ ಊರಿಗೆ ಬರುತ್ತಿದ್ದರು. ಇತ್ತೀಚಿಗೆ ಸಬೀಹಾಳ ಇಬ್ಬರು ಸೋದರರೂ ಅಲ್ಲಿಗೇ ನೌಕರಿಗೆಂದು ಹೋಗಿದ್ದರು. ಅವರದ್ದು ಅಲ್ಲಿ ಹೋಟೆಲಿನ ಬಿಸಿನೆಸ್ಸು. ಓದಿನಲ್ಲಿ ಆಸಕ್ತಿಯಿದ್ದ ಸಬೀಹಾ ತನ್ನ ಇಷ್ಟದಂತೆ ಮೆಡಿಕಲ್ ಸೇರಿದ್ದಳು.
ಹೀಗೆ ಅವರಿಬ್ಬರೂ ತಾವು ಆಯ್ಕೆ ಮಾಡಿಕೊಂಡಿದ್ದ ವಿಷಯಗಳಲ್ಲಿ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿದರು. ಪ್ರಸಾದ್ ಸರ್ಜನ್ ಆಗಿ, ಸಬೀಹಾ ಗೈನಕಾಲಜಿಸ್ಟ್ ಆಗಿ ಕಾಲೇಜಿನಿಂದ ಹೊರಬಂದರು. ಅಷ್ಟುಹೊತ್ತಿಗೆ ಅವರಿಬ್ಬರಲ್ಲಿ ಪ್ರೀತಿ ಬೆಳೆದು ಹೆಮ್ಮರವಾಗಿಬಿಟ್ಟಿತ್ತು. ಯಥಾರೀತಿ ಇಬ್ಬರ ಕುಟುಂಬಗಳ ಹಿರಿಯರಿಗೆ ಇವರ ಸಂಬಂಧ ಒಪ್ಪಿಗೆಯಾಗಿರಲಿಲ್ಲ. ಮನೆಯಿಂದ ಹೊರಬಂದ ಅವರು ರಿಜಿಸ್ಟ್ರಾರ್ ಸಮ್ಮುಖದಲ್ಲಿ ನೋಂದಣಿಯ ಮೂಲಕ ದಂಪತಿಗಳಾದರು.
ಪ್ರಸಾದ್ ತಾವು ಇಲ್ಲಿಯೇ ಇದ್ದರೆ ಕುಟುಂಬದವರಿಂದ ಏನಾದರೂ ತೊಂದರೆಗಳಾಗಬಹುದೆಂದು ಆಲೋಚಿಸಿ ಗುಲ್ಬರ್ಗಾದಲ್ಲಿ ತನ್ನ ಕೆಲವು ಸ್ನೇಹಿತರ ಸಹಕಾರದಿಂದ ಒಂದು ಚಿಕ್ಕದಾದ ಸ್ವಂತ ಕನ್ಸಲ್ಟೇಷನ್ ಕ್ಲಿನಿಕ್ ತೆರೆದರು. ಆ ವೇಳೆಯಲ್ಲಿ ಸಬೀಹಾಬಾನು ತನ್ನ ಹೆಸರನ್ನೂ ‘ಡಾ. ಮಿಸೆಸ್ ಜೈನ್’ ಎಂದು ಬದಲಾಯಿಸಿಕೊಂಡುಬಿಟ್ಟಳು. ಕೈಗುಣ, ಸಹನೆ, ಪ್ರೀತಿವಿಶ್ವಾಸದಿಂದ ನಡೆದುಕೊಳ್ಳುತ್ತಾ ಅವರು ಜನಾನುರಾಗಿಗಳಾಗಲು ತಡವಾಗಲಿಲ್ಲ. ಬೇರೆಬೇರೆ ನರ್ಸಿಂಗ್ಹೋಂಗಳಿಂದ ಅವರಿಗೆ ಆಹ್ವಾನ ಬರತೊಡಗಿದವು. ಕೆಲವು ಹೊರದೇಶಗಳ ಆಸ್ಪತ್ರೆಗಳಿಂದಲೂ ಕರೆ ಬರುತ್ತತ್ತು. ಆದರೆ ಮಿಸೆಸ್ ಜೈನ್ ಹೊರದೇಶಗಳಿಗೆ ಹೋಗಲು ಆಸಕ್ತಿ ತೋರುತ್ತಿರಲಿಲ್ಲ. ಪ್ರಸಾದ್ಗೆ ಮಾತ್ರ ಅದರಲ್ಲಿ ತುಂಬ ಆಸಕ್ತಿ. ಹಾಗೆ ಕೆಲವುಕಾಲ ಪ್ರಸಾದ್ ಹೊರಗಡೆ ಹೋದಾಗಲೆಲ್ಲ ಕ್ಲಿನಿಕ್ಕಿನ ಸಂಪೂರ್ಣ ಜವಾಬ್ದಾರಿ ಮಿಸೆಸ್ ಜೈನ್ ಮೇಲೇ ಬೀಳುತ್ತಿತ್ತು. ಅದನ್ನು ಆಕೆ ಬಹಳ ಚೆನ್ನಾಗಿ ನಿಭಾಯಿಸಿದರು.
ಹೀಗೇ ಸುಮಾರು ಹತ್ತುವರ್ಷಗಳು ಸಂಸಾರ ಸಾಗಿತು. ಇದ್ದಕ್ಕಿದ್ದಂತೆ ಡಾ. ಪ್ರಸಾದ್ ಕ್ಲಿನಿಕ್ಕಿನ ಕೆಲಸಗಳಿಂದ ವಿಮುಖರಾಗತೊಡಗಿದರು. ಹೆಚ್ಚು ಹೆಚ್ಚು ಹೊರಗಿನ ಕರೆಗಳಿಗೇ ಕಾಯುತ್ತಿದ್ದರು. ಮನೆಯ ವ್ಯವಹಾರ, ಮಡದಿಯ ಕಡೆ ಗಮನವಿಲ್ಲದಂತೆ ಇರತೊಡಗಿದರು. ಇದನ್ನು ಗಮನಿಸಿದ ಸಬೀಹಾ ಆತಂಕಗೊಂಡು ಒಂದುದಿನ “ಪ್ರಸಾದ್, ನಾನು ಸುಮಾರು ಒಂದು ವರ್ಷದಿಂದ ಗಮನಿಸುತ್ತಿದ್ದೇನೆ. ನಿಮಗೆ ಕ್ಲಿನಿಕ್ಕಿನ ಡ್ಯೂಟಿಗಳ ಮೇಲೆ ಆಸಕ್ತಿ ಇಲ್ಲ. ಮನೆಯಲ್ಲೂ ನನ್ನ ಇರುವಿಕೆಯನ್ನೂ ಮರೆತಂತೆ ಇರುತ್ತೀರಿ. ನಾನಾಗಿಯೇ ಬಲವಂತವಾಗಿ ಮಾತಿಗೆಳೆದರೆ ಚುಟುಕಾದ ಉತ್ತರ ಕೊಟ್ಟು ಸುಮ್ಮನಾಗುತ್ತೀರಿ. ಏನಾಗಿದೆ ನಿಮಗೆ?” ಎಂದು ಕಳಕಳಿಯಿಂದ ಪ್ರಶ್ನಿಸಿದಳು.
“ ಹೂಂ, ಏಕೋ ನನಗೆ ಒಂಟಿತನ ಕಾಡುತ್ತಿದೆ. ನಿಜ ಹೇಳಲಾ.. ನಮಗೆ ಒಂದು ಮಗು ಬೇಕೆನ್ನಿಸಿದೆ ಸಬೀಹಾ” ಎಂದರು ಪ್ರಸಾದ್.
ಗಂಡ ಹೇಳಿದ ಮಾತನ್ನು ಕೇಳಿ ಸಬೀಹಾ ಒಂದು ಕ್ಷಣ ಅವಾಕ್ಕಾದಳು. “ಏನೆಂದಿರಿ? ಮಗೂನಾ,? ಏಕೆ ನಾವಿಬ್ಬರೂ ಮದುವೆಯಾಗುವಾಗ ನಮಗೆ ನಾವೇ ಹಾಕಿಕೊಂಡಿದ್ದ ಕರಾರನ್ನು ಮರೆತುಬಿಟ್ಟಿರಾ? ಪ್ರಸಾದ್” ಎಂದಳು.
“ ಮರೆತಿಲ್ಲ, ಸಬೀಹಾ ನೆನಪಿದೆ. ನಮ್ಮಿಬ್ಬರ ಜಾತಿಗಳ ವ್ಯತ್ಯಾಸದ ದೆಸೆಯಿಂದ ಎರಡೂ ಕುಟುಂಬಗಳು ನಮ್ಮ ಮದುವೆಗೆ ಸಮ್ಮತಿಸಲಿಲ್ಲ. ನಮ್ಮನ್ನು ದೂರಮಾಡಿದರು. ನಾವು ಎಲ್ಲರೂ ಇದ್ದರೂ ಪರದೇಶಿಗಳಂತಾದೆವು. ಆಗ ಇಷ್ಟೆಲ್ಲ ತಿಳಿವಳಿಕೆ ಇದ್ದ ಹಿರಿಯರ ವರ್ತನೆಯಿಂದ ಸಾಕಷ್ಟು ನೊಂದು ಬೆಂದ ನಾವು ಇದು ನಮ್ಮ ತಲೆಗೇ ಸಾಕು. ನಾವು ಮಕ್ಕಳನ್ನು ಮಾಡಿಕೊಳ್ಳುವುದು ಬೇಡವೆಂಬ ತೀರ್ಮಾನಕ್ಕೆ ಬದ್ಧರಾದೆವು.”
“ಸರಿ ಮತ್ತೆ ಇದು ನೆನಪಿದ್ದೂ ಈಗ ಅದೂ ಈ ವಯಸ್ಸಿನಲ್ಲಿ ನಿಮಗೆ ಬಂದ ಬಯಕೆ ಏನಿದು? ನನಗೇಕೋ ತುಂಬ ಮುಜುಗರ ಉಂಟುಮಾಡುತ್ತಿದೆ.” ಎಂದಳು.
“ಹಾ..ಹಾ.. ಸಬೀಹಾ ನಾನು ಹಾಗಲ್ಲಾ ಹೇಳಿದ್ದು. ನಾವಿಬ್ಬರೂ ಮಕ್ಕಳು ಮಾಡಿಕೊಳ್ಳೋಣಾಂತಾ ಅಲ್ಲಾ”
“ಮತ್ತೆ ಹೇಗೆ? ಒಂದು ಮಗುವನ್ನು ದತ್ತು ತೆಗೆದುಕೊಳ್ಳೋಣವೆಂದೇ? ಪ್ರಸಾದ್ ಅದು ಈಗ ಬೇಡ. ಈಗಿನ ನಮ್ಮ ಕಾರ್ಯಬಾಹುಳ್ಯದಲ್ಲಿ ನಮಗೆ ಅದನ್ನು ನೋಡಿಕೊಳ್ಳಲು ಸಮಯವೆಲ್ಲಿದೆ? ಅದಕ್ಕೆಲ್ಲ ಒಂದು ವಯಸ್ಸು, ಕಾಲವಿರುತ್ತದೆ. ಜವಾಬ್ದಾರಿಯನ್ನು ತೆಗೆದುಕೊಂಡ ಮೇಲೆ ಅದನ್ನು ಸರಿಯಾಗಿ ನಿರ್ವಹಿಸಬೇಡವೇ? ನಲವತ್ತರ ಹಂತ ಮುಟ್ಟಿರುವ ನಾನು, ನೀವು ! ಅಂತಹ ಆಲೋಚನೆಯನ್ನು ಬಿಟ್ಟುಬಿಡಿ” ಎಂದಳು.
“ಸಬೀಹಾ, ನಾನು ಹೇಳುತ್ತಿರುವುದು ಅವೆರಡೂ ಅಲ್ಲ. ನನ್ನದೇ ಒಂದು ಮಗುವನ್ನು ಪಡೆಯುವುದು. ಅದೂ ನನ್ನ ಜನಾಂಗಕ್ಕೇ ಸೇರಿದ್ದಾಗಿರಬೇಕು”
ಪ್ರಸಾದನ ಮಾತುಗಳನ್ನು ಕೇಳಿದ ಸಬೀಹಾಳಿಗೆ ಮೈಯೆಲ್ಲಾ ಬೆಂಕಿಹತ್ತಿ ಉರಿದಂತ ಅನುಭವವಾಯಿತು. ಸಿಟ್ಟಿನಿಂದ “ಸ್ಟಾಪ್ಇಟ್ ಪ್ರಸಾದ್, ಏನು ಮಾತನಾಡುತ್ತಿದ್ದೀರಾ? ನಿಮ್ ಪ್ರಜ್ಞೆ ಎಲ್ಲಿಹೋಗಿದೆ? ನಾವು ಪ್ರೀತಿಸುತ್ತಿದ್ದಾಗ ನಮಗೆ ಜಾತಿಯು ಅಡ್ಡಬರಲಿಲ್ಲ. ಎಲ್ಲರನ್ನೂ ಎದುರು ಹಾಕಿಕೊಂಡು ದಂಪತಿಗಳಾದಾಗ ಜಾತಿಯು ಅಡ್ಡಬರಲಿಲ್ಲ. ಅಷ್ಟೇ ಏಕೆ ಈ ಹತ್ತು ವರ್ಷಕ್ಕೂ ಮೀರಿ ಸಂಸಾರ ನಡೆಸುವಾಗ ಜಾತಿಯು ಅಡ್ಡಬರಲಿಲ್ಲ. ಈಗ..ಛೀ ! ನೀವಾದರೋ ನಿಮ್ಮ ತಂದೆ ತಾಯಿಗಳನ್ನು ಮಾತ್ರ ಬಿಟ್ಟುಬಂದಿರಿ. ನಾನು ನನ್ನ ದೊಡ್ಡ ಕುಟುಂಬ, ಆತ್ಮೀಯ ಬಂಧುಗಳನ್ನೆಲ್ಲ ಬಿಟ್ಟುಬಂದೆ. ಯಾರಿಗೂ ಹೊರಗಿನವರಿಗೆ ತಿಳಿಯಬಾರದೆಂದು ಜಾತಿಸೂಚಕವಾದ ನನ್ನ ಹೆಸರನ್ನೂ ಬದಲಾಯಿಸಿಕೊಂಡು ಮಿಸೆಸ್ ಜೈನ್ ಆದೆ. ನಮ್ಮಿಬ್ಬರನ್ನು ಹೊರತುಪಡಿಸಿ ಬೇರಾರಿಗೂ ನಿಜವಿಷಯ ತಿಳಿಯದು. ಸಹಪಾಠಿಗಳಿಗೆ ತಿಳಿದಿದ್ದರೂ ಅವರೊಡನೆ ನಮಗೆ ಹೆಚ್ಚಿನ ಒಡನಾಟವೇ ಇಲ್ಲ. ಅಂಥಹುದರಲ್ಲಿ ನೀವೇ ನನ್ನ ಸರ್ವಸ್ವವೆಂದು ತಿಳಿದುಕೊಂಡಿರುವ ನನಗೆ ನಿಮ್ಮ ಈಗಿನ ಆಲೋಚನೆ, ಅಪರೂಪದ ಬಯಕೆ ಕೇಳಿದನಂತರ ನನಗೆ ಬೇರೇನೋ ವಾಸನೆ ಹೊಡೆಯುತ್ತಿದೆ. ದಯವಿಟ್ಟು ಸಲ್ಲದ ಆಲೋಚನೆಗಳನ್ನು ಮಾಡಿ ನನ್ನನ್ನು ನಡುನೀರಿನಲ್ಲಿ ಕೈಬಿಡಬೇಡಿ ಪ್ಲೀಸ್” ಎಂದು ಬೇಡಿದಳು.
“ನೋಡು ಸಬೀಹಾ, ನಾನೇನೂ ನಿನ್ನನ್ನು ಬರಿಗೈ ದಾಸಯ್ಯಳಾಗಿ ಮಾಡುತ್ತಿಲ್ಲ. ನಾವಿಬ್ಬರೂ ಕಟ್ಟಿ ಬೆಳೆಸಿರುವ ಈ ಕ್ಲಿನಿಕ್ ನಿನ್ನದೇ. ನಾವಿರುವ ಮನೆಯೂ ನಿನಗೇ ಇರಲಿ. ಆದರೆ ನನ್ನನ್ನು ಮಾತ್ರ ಬಿಟ್ಟುಕೊಡು”
“ಅಂದರೆ ಪ್ರಸಾದ್, ನಿಮ್ಮ ಮಾತಿನ ಅರ್ಥ ! ಯು ವಾಂಟ್ ಡೈವೋರ್ಸ್ ಫ್ರಂ ಮಿ” ಎಂದಳು
“ಎಸ್, ಅರ್ಥ ಮಾಡಿಕೋ” ಎಂದ ಪ್ರಸಾದ್.
“ಹೌದು ಅರ್ಥ” ಹೂಂ ಎನ್ನುತ್ತಾ ತನ್ನಲ್ಲೇ ಗೊಣಗಿಕೊಳ್ಳುತ್ತಾ ಅಲ್ಲಿ ನಿಲ್ಲದೆ ಹೊರ ನಡೆದಳು. ನನ್ನ ಮಾತಿಗೆ ಅಳುತ್ತಾಳೆ, ನನ್ನನ್ನು ಕಾಡಿಬೇಡುತ್ತಾಳೆ, ಆಗ ನಾನು ಹೇಗೆ ಮಾತನಾಡಿ ಒಪ್ಪಿಸಬೇಕೆಂದು ಲೆಕ್ಕಾಚಾರ ಹಾಕಿಕೊಂಡಿದ್ದ ಪ್ರಸಾದನಿಗೆ ಅವಳು ಮೌನವಾಗಿ ನಿರ್ಗಮಿಸಿದ್ದು ಒಗಟಾಗಿ ಕಂಡಿತು. ನೋಡೋಣ ಎಂದು ಸುಮ್ಮನಾದನು.
ಅಂದಿನಿಂದ ಮನೆಯ ವಾತಾವರಣ ಬದಲಾಗಬಹುದೆಂದುಕೊಂಡಿದ್ದ ಪ್ರಸಾದನಿಗೆ ಹೆಂಡತಿಯ ಸಹಜವೆಂಬಂತಹ ನಡೆ ನುಂಗಲಾರದ ತುತ್ತಾಯಿತು. ಸಿಟ್ಟು, ಸೆಡವು, ಬಿಂಕ, ಬಿಗುಮಾನ, ಅಸಹನೆ, ಊಹುಂ ಯಾವುದೂ ಇಲ್ಲ. ಆದರೆ ಅಸಹನೀಯ ಮೌನ ಅವನನ್ನು ಅಧೀರನನ್ನಾಗಿ ಮಾಡಿತು. ತಾನು ತೆಗೆದುಕೊಂಡ ನಿರ್ಧಾರ ಸರಿಯೇ?…ಹೀಗೆ…ಇಲ್ಲ…ಇದಕ್ಕೆ ಒಪ್ಪದಿದ್ದರೆ….ಬೇರೆ ಏನು ಮಾಡಬಹುದೆಂದು ಯೋಚಿಸತೊಡಗಿದ. ಅದೇ ವೇಳೆಗೆ ಸಿಂಗಪುರದಿಂದ ಸೆಮಿನಾರ್ ಒಂದಕ್ಕೆ ಅವನಿಗೆ ಕರೆಯೋಲೆ ಬಂತು. ಒಂದು ಕ್ಷಣವೂ ಯೋಚಿಸದೆ ಬರುತ್ತೇನೆಂದು ಒಪ್ಪಿಗೆ ಕೊಟ್ಟುಬಿಟ್ಟ. ಹೋಗುವ ಮೊದಲು ವಕೀಲರೊಬ್ಬರ ಸಲಹೆಯ ಮೇರೆಗೆ ವಿಚ್ಛೇದನಾ ಅರ್ಜಿಗೆ ತನ್ನ ಸಹಿ ಹಾಕಿ ಅದನ್ನು ಆಕೆಯ ಟೇಬಲ್ಲಿನ ಮೇಲೆ ಇರಿಸಿ ಹೊರಟುಹೋದ. ಕೊಟ್ಟ ಕಾರಣ ಸ್ವಯಿಚ್ಛೆಯಿಂದ ತಾವಿಬ್ಬರೂ ಬೇರ್ಪಡುತ್ತಿದ್ದೇವೆ ಎಂಬುದಾಗಿತ್ತು.
ತನ್ನ ಕೆಲಸವನ್ನು ಮುಗಿಸಿ ಸಿಂಗಪುರದಿಂದ ಹಿಂತಿರುಗಿ ಬಂದ ಪ್ರಸಾದನನ್ನು ಸ್ವಾಗತಿಸಿದ್ದು ಸಬೀಹಾಳಿಲ್ಲದ ಮನೆ ಮತ್ತು ಬೀಗಹಾಕಿದ್ದ ಕ್ಲಿನಿಕ್. ಟೇಬಲ್ಲಿನ ಮೇಲೆ ಅವನಿರಿಸಿದ್ದ ವಿಚ್ಛೇದನಾ ಅರ್ಜಿಗೆ ಸಬೀಹಾ ಸಹಿ ಮಾಡಿದ್ದಳು. ಲಗತ್ತಿಸಿದ್ದ ಪುಟ್ಟ ಪತ್ರ.”ಪ್ರಸಾದ್, ನಾನು ನಿಮ್ಮ ಇಚ್ಛೆಯಂತೆ ನಿಮಗೆ ಬಿಡುಗಡೆ ಕೊಟ್ಟಿದ್ದೇನೆ. ನಿಮ್ಮ ಮನೆ, ಮನ, ಕ್ಲಿನಿಕ್ ಎಲ್ಲವನ್ನೂ ನಿಮಗೇ ಬಿಟ್ಟು ಹೋಗುತ್ತಿದ್ದೇನೆ. ಇಷ್ಟು ವರ್ಷ ನೀವು ನೀಡಿದ ಪ್ರೀತಿಗಾಗಿ ನಾನು ಋಣಿಯಾಗಿದ್ದೇನೆ. ವಂದನೆಗಳು”
ಮುಂದೆ ಯಾವುದೇ ತಕರಾರಿಲ್ಲದೆ ವಿಚ್ಛೇದನೆ ದೊರಕಿತು. ಬಿಡುಗಡೆ ಸಿಕ್ಕಿದ್ದಕ್ಕೆ ಸಂತಸಪಟ್ಟ ಪ್ರಸಾದ್ ಮತ್ತೊಂದನ್ನು ಯೋಚಿಸದೇ ಕನ್ಯೆಯ ಹುಡುಕಾಟಕ್ಕೆ ಮೊದಲಿಟ್ಟ. ಬಳ್ಳಾರಿಯಲ್ಲಿ ದೊಡ್ಡ ಉದ್ಯಮಿಯಾಗಿದ್ದ ಮೋತಿಲಾಲ್ ಜೈನ್ರಿಗೆ ಮೂರುಜನ ಗಂಡುಮಕ್ಕಳ ನಂತರ ಹುಟ್ಟಿದ ಮಗಳು ಗೀತಾ. ಮನೆಯವರಿಗೆಲ್ಲ ಪ್ರೀತಿಪಾತ್ರಳು. ಸ್ನಾತಕೋತ್ತರ ಪದವೀಧರೆ. ಸುಗುಣ ಸುಂದರಿ. ಶ್ರೀಮಂತ ಕನ್ಯೆ. ಆದರೂ ಏಕೋ ಯಾವುದೂ ಸಂಬಂಧ ಕೂಡಿಬಂದಿರಲಿಲ್ಲ. ವಯಸ್ಸು ಮೂವ್ವತ್ತೆಂಟರ ಸಮೀಪ. ಪ್ರಸಾದನ ಗೆಳಯರೊಬ್ಬರ ಮಧ್ಯಸ್ಥಿಕೆಯಿಂದ ನಲವತ್ತೈದರ ಪ್ರಸಾದರೊಟ್ಟಿಗೆ ಅವಳಿಗೆ ಕಂಕಣಭಾಗ್ಯ ಕೂಡಿಬಂದಿತು. ಪ್ರಸಾದರ ಹಳೆಯ ಕಥೆ ಕೇಳಿಯೂ ಅವರ ಮನೆಯಿಂದ ಯಾವ ತಕರಾರೂ ಇಲ್ಲದೆ ಮದುವೆ ನಡೆಯಿತು. ಅಷ್ಟುಹೊತ್ತಿಗೆ ಪ್ರಸಾದನ ಹೆತ್ತವರು ಕೈಲಾಸವಾಸಿಗಳಾಗಿದ್ದುದರಿಂದ ಅವರಿಗೆ ಇದನ್ನು ಕಾಣುವ ಭಾಗ್ಯ ದೊರಕಲಿಲ್ಲ. ಆದರೂ ಅವರು ಬಿಟ್ಟುಹೋಗಿದ್ದ ಅಪಾರ ಸಂಪತ್ತಿಗೆ ತಮ್ಮ ಪುತ್ರನನ್ನೇ ವಾರಸುದಾರನನ್ನಾಗಿಸಿ ವಿಲ್ ಬರೆದಿದ್ದರು.
ಪ್ರಸಾದ್ ಗುಲ್ಬರ್ಗಾದಲ್ಲಿನ ತಮ್ಮ ಕ್ಲಿನಿಕ್ಕನ್ನು ಗೆಳೆಯನೊಬ್ಬನ ಸುಪರ್ದಿಗೆ ವಹಿಸಿಬಿಟ್ಟರು. ತಾವು ಬೇರಡೆಯಲ್ಲಿ ಮತ್ತೆ ಕ್ಲಿನಿಕ್ ತೆರೆಯುವ ಆಲೋಚನೆಯನ್ನೇ ಮಾಡಲಿಲ್ಲ. ಹೊರಗಡೆಯಿಂದ ಬರುವ ಕನ್ಸಲ್ಟೇಷನ್ನುಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡರು. ತಮ್ಮ ಹೊಸ ಸಂಸಾರವನ್ನು ಮಾವನ ಊರಾದ ಬಳ್ಳಾರಿಯಲ್ಲೇ ಪ್ರಾರಂಭ ಮಾಡಿದರು. ಹೀಗೇ ಎರಡು ವರ್ಷ ಕಳೆಯುವಷ್ಟರಲ್ಲಿ ಅವರ ಆಸೆ ಫಲಿಸುವ ಲಕ್ಷಣಗಳು ಗೀತಾಳಲ್ಲಿ ಕಾಣಿಸಿಕೊಂಡವು. ದಂಪತಿಗಳ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಅದೇ ವೇಳೆಯಲ್ಲಿ ಮತ್ತೆ ಪ್ರಸಾದ್ ಸಿಂಗಪುರಕ್ಕೆ ಹೋಗಬೇಕಾಯಿತು. ಕಾಂಟ್ರಾಕ್ಟ್ ಒಂದಕ್ಕೆ ಸಹಿ ಹಾಕಿದ್ದರಿಂದ ಅಲ್ಲಿಯೇ ಕೆಲವು ಕಾಲ ಉಳಿಯಬೇಕಾಯಿತು. ಅತ್ತೆಮಾವ, ಭಾವಮೈದುನರು ನಾವೆಲ್ಲ ನೋಡಿಕೊಳ್ಳುತ್ತೇವೆಂದು ಆಶ್ವಾಸನೆ ಕೊಟ್ಟರು. ಒಲ್ಲದ ಮನಸ್ಸಿನಿಂದ ಪ್ರಸಾದ್ ಪ್ರವಾಸ ಕೈಕೊಂಡರು. ಪ್ರತಿದಿನ ದೂರವಾಣಿಯಲ್ಲಿ ಕ್ಷೇಮಸಮಾಚಾರ ವಿನಿಮಯ ನಡೆದಿತ್ತು.
ಗೀತಾಳ ಒಬ್ಬ ಅಣ್ಣ ಮೈಸೂರಿನಲ್ಲಿ ತನ್ನ ಉದ್ಯಮ ನಡೆಸುತ್ತಿದ್ದುದರಿಂದ ಕುಟುಂಬದವರೆಲ್ಲ ಅಲ್ಲಿಗೆ ಹೋಗಿದ್ದರು. ಆಗ ಗೀತಾಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಯಿತು. ಅಲ್ಲಿನ ತಜ್ಞ ವೈದ್ಯರ ಸಲಹೆಯ ಮೇರೆಗೆ ಅವಳಿಗೆ ಡೆಲಿವರಿ ಆಗುವವರೆಗೂ ಪ್ರಯಾಣ ನಿಷಿದ್ಧ ಎಂದು ಅಲ್ಲಿಯೇ ಉಳಿದಿದ್ದರು. ಪ್ರತಿಸಾರಿ ಚೆಕಪ್ಗೆ ಹೋದಾಗಲೆಲ್ಲ ಡಾಕ್ಟರ್ ಪರೀಕ್ಷೆ ಮಾಡಿ ಸಲಹೆ, ಸೂಚನೆ ಕೊಡುತ್ತಿದ್ದರು. ವೈದ್ಯರ ಬಗ್ಗೆ ಗೀತಾಳ ಕುಟುಂಬದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅವರ ಗುಣಗಾನ ಮಾಡುತ್ತಿದ್ದರು. ಹೇಗೋ ಸುಖವಾಗಿ ತೊಂದರೆ ಕಳೆದರೆ ಸಾಕೆಂದು ಇದ್ದವನಿಗೆ ಸಿಂಗಪುರದಿಂದ ಹಿಂದಿರುಗಿದಾಗಲೇ ತಿಳಿದದ್ದು ಡಾಕ್ಟರ್ ಯಾರು ಎಂಬ ವಿಷಯ. ಅವರಿಂದ ಚಿಕಿತ್ಸೆ ತಪ್ಪಿಸಲು ಏನೇನೋ ಸಬೂಬುಗಳನ್ನು ಹೇಳಿದರೂ ಕುಟುಂಬದವರ ಅಭಿಪ್ರಾಯ ಬದಲಿಸಲು ಸಾಧ್ಯವಾಗಲಿಲ್ಲ. ಆಗ “ನಾನೆಂತಹ ಮೂರ್ಖ, ಮೊದಲೇ ಡಾಕ್ಟರ್ ಹೆಸರನ್ನು ಕೇಳಿ ತಿಳಿದುಕೊಳ್ಳಲಿಲ್ಲ. ಆಗಲೇ ಗೊತ್ತಾಗಿದ್ದರೆ ಅವರನ್ನು ಬಿಟ್ಟು ಬೇರೆಯವರ ಬಳಿಗೆ ಕರೆದುಕೊಂಡು ಹೋಗಬಹುದಿತ್ತು. ಆದರೆ ಕಾಲ ಮಿಂಚಿತ್ತು. ನಿಜವನ್ನು ಹೇಳಲಾಗದೇ ಅನುಭವಿಸಬೇಕಾಯಿತು. ಅಂತೂ ಸಂಕಟದಲ್ಲೇ ದಿನಗಳನ್ನು ದೂಡಿದನು.
ಹೆರಿಗೆ ನೋವು ಕಾಣಿಸಿಕೊಂಡ ದಿನ ಆಸ್ಪತ್ರೆಗೆ ಅಡ್ಮಿಷನ್ ಮಾಡಿದಾಗ ಸೀನಿಯರ್ ಡಾಕ್ಟರ್ ನಿರ್ಮಲಾರವರು ಆ ಕೇಸಿಗಾಗಿ ಡಾ. ಮಿಸೆಸ್ ಜೈನ್ರನ್ನು ಕೂಡಲೇ ಕರೆಸಿ ಎಂದು ಆದೇಶಿಸಿದರು. ಆಗ ಪ್ರಸಾದ್ ಅವರೇ ಏಕೆ ಡಾಕ್ಟರ್, ಬೇರೆಯವರನ್ನು ಅರೇಂಜ್ ಮಾಡಿ ಎಂದು ಕೋರಿದಾಗ ಅವರು “ನೋಡಿ ಡಾ. ಪ್ರಸಾದ್, ಇಂತಹ ಕೇಸಿಗೆ ಬೇರೆಯವರು ಏಕೆ ಬೇಕು? ವಯಸ್ಸು ಮೀರಿದ ನಂತರ ಗರ್ಭ ನಿಂತಿದೆ. ಎರಡು ಜೀವಗಳ ಅಳಿವು ಉಳಿವಿನ ಪ್ರಶ್ನೆಯಿದೆ. ನಿಮ್ಮ ಶ್ರೀಮತಿಯವರನ್ನು ಇದುವರೆಗೆ ನೋಡಿಕೊಂಡದ್ದು ಡಾ. ಮಿಸೆಸ್ ಜೈನ್ರವರೇ. ಅವರು ಎಂಥೆಂತದ್ದೋ ಕಾಂಪ್ಲಿಕೇಟೆಡ್ ಕೇಸುಗಳನ್ನು ಲೀಲಾಜಾಲವಾಗಿ ಸಕ್ಸೆಸ್ಫುಲ್ಲಾಗಿ ಹ್ಯಾಂಡಲ್ ಮಾಡಿದ್ದಾರೆ. ಶಿ ಇಶ್ ದಿ ಬೆಸ್ಟ್ ಇನ್ ಸಚ್ ಕೇಸಸ್. ಅವರಂಥವರು ನಮ್ಮ ಆಸ್ಪತ್ರೆಯಲ್ಲಿದ್ದಾರೆ ಎಂಬುದೇ ನಮಗೆ ಹೆಮ್ಮೆಯ ವಿಷಯ. ಹೆದರಬೇಡಿ ಷಿ ವಿಲ್ ಟೇಕೆ ಕೇರ್ ಆಫ್ ಎವ್ವೆರಿಥಿಂಗ್” ಎಂದರು. ಮುಂದಿನ ಮಾತಿಗೆ ಅವಕಾಶವೇ ಕೊಡಲಿಲ್ಲ.
ಇವರಿಗೆ ನಾನು ಹೇಗೆ ಹೇಳಲಿ? ನಾನು ಅವಳಿಗೆ ಮಾಡಿದ ಅನ್ಯಾಯಕ್ಕೆ ಈಗ ಅವಳೇನಾದರೂ ಪ್ರತೀಕಾರ ಕೈಗೊಂಡರೆ ಏನು ಗತಿ? ಅವಳಿಗೆ ಅವಕಾಶ ಸಿಕ್ಕಿದೆ. ಕುಂಬಳಕಾಯಿಯೂ ಅವಳ ಕೈಯಲ್ಲಿದೆ, ಕುಡುಗೋಲೂ ಅವಳ ಕೈಯಲ್ಲಿದೆ. ಭಗವಂತಾ ಎಂದು ಕಣ್ಮುಚ್ಚಿ ಪ್ರಾರ್ಥಿಸತೊಡಗಿದ. ಅಷ್ಟರಲ್ಲಿ “ಡಾ. ಪ್ರಸಾದ್” ಎಂಬ ಕರೆ ಕೇಳಿಸಿತು. ವಾಸ್ತವಕ್ಕೆ ಬಂದ. ಗಲಿಬಿಲಿಯಿಂದ “ಯಾರು ಕರೆದದ್ದು?” ಎಂದ.
“ಕಂಗ್ರಾಚುಲೇಷನ್ಸ್, ನೀವು ಗಂಡು ಮಗುವಿನ ತಂದೆಯಾಗಿದ್ದೀರಿ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಇನ್ನು ಸ್ವಲ್ಪ ಹೊತ್ತಿಗೆ ವಾರ್ಡಿಗೆ ಶಿಫ್ಟ್ ಮಾಡುತ್ತಾರೆ. ಬಯಸೀ ಬಯಸೀ ಮಗನನ್ನು ಪಡೆದಿದ್ದೀರಿ, ಜೋಪಾನವಾಗಿ ನೋಡಿಕೊಳ್ಳಿ” ಎಂದ ಮಾತಿಗೆ ಬೆಚ್ಚಿ ತಲೆ ಎತ್ತಿನೋಡಿದ.
ಅದೇ ಗಂಭೀರ, ಶಾಂತ ಮುಖದ ಸಬೀಹಾ ಅಲ್ಲಲ್ಲ ಡಾ ಮಿಸೆಸ್ ಜೈನ್ ನಿಂತಿದ್ದರು. ತನ್ನೊಳಗೆ ಹುಟ್ಟಿದ್ದ ದುಷ್ಟ ಆಲೋಚನೆಗಳಿಗೆ ತಾನೇ ನಾಚಿಕೊಂಡು ಅವಳ ಭವ್ಯ ವ್ಯಕ್ತಿತ್ವದ ಮುಂದೆ ತಾನೆಷ್ಟು ಕುಬ್ಜನಾದಂತೆನ್ನಿಸಿ ಗಂಟಲಿನಿಂದ ಅವನಿಗೆ ಮಾತುಗಳೇ ಬರಲಿಲ್ಲ. ಬರೀ ಎರಡೂ ಕೈಗಳನ್ನು ಜೋಡಿಸಿದ ಡಾ. ಪ್ರಸಾದ್.
ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ಹೇಮಾ
ತುಂಬಾ ಚೆನ್ನಾಗಿದೆ
ತಡವಾಗಿ ಯಾದರೂ ಪ್ರೀತಿಯಿಂದ ಓದಿ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದಗಳು ನಯನಮೇಡಂ
ಸಂಕುಚಿತ ಹೃದಯದ ಪ್ರಸಾದನಿಗೆ, ಕೊನೆಗೂ ತಾನು ಮಾಡಿದ ತಪ್ಪನ್ನು ಕ್ಷಮಿಸಿದ
ತನ್ನ ಹಿಂದಿನ ಪತ್ನಿ ಸಬೀಹಾಳು ದೇವತೆಯಂತೆ ಕಂಡಳು…. ಅವನ ಪ್ರಶ್ನೆಗೆ ನಿಖರವಾದ ಉತ್ತರವನ್ನು ಅವನು ಪಡೆದಿದ್ದ.
ಎಂದಿನಂತೆ ಕೊನೆ ವರೆಗೂ ತನ್ನ ಬಿಗುವನ್ನು ಕಳೆದುಕೊಳ್ಳದೆ ಸುಖಾಂತ್ಯವನ್ನು ನೀಡಿದ ಕಥೆ ತುಂಬಾ ಹಿಡಿಸಿತು ನಾಗರತ್ನ ಮೇಡಂ.
ನಿಮ್ಮ ಸಹೃದಯ ಸ್ಪಂದನೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಶಂಕರಿ ಮೇಡಂ.
ಮನುಷ್ಯ ಸಹಜ ಗುಣಗಳನ್ನು ಅನಾವರಣಗೊಳಿಸುತ್ತಾ ಕುತೂಹಲಭರಿತವಾಗಿ ಸಾಗಿದ ಕಥೆ ಅತ್ಯಂತ ಸೊಗಸಾಗಿ ಹೆಣಎಯಲ್ಪಟ್ಟಿದೆ.
ಧನ್ಯವಾದಗಳು ಪದ್ಮಾ ಮೇಡಂ