ಲಹರಿ

ಲವಣದ ಸುತ್ತ

Share Button


ಲವಣ ಅಥವಾ ಉಪ್ಪು ಒಂದು ಅದ್ಭುತವಾದ ಎರಡು ಮೂಲ ವಸ್ತುಗಳಾದ ಸೋಡಿಯಂ ಹಾಗೂ ಕ್ಲೋರಿನ್‌ನ ಸಂಯುಕ್ತ ಪದಾರ್ಥ. ಅಡುಗೆಯ ದಿಕ್ಕನ್ನೇ ಬದಲಿಸುವ ಅಪಾರ ಶಕ್ತಿಯುತವಾದದ್ದು. ಮಾನವ ದೇಹದಲ್ಲಿ ಈ ಉಪ್ಪಿನಲ್ಲಿರುವ ಸೋಡಿಯಂನ ಅಲ್ಪ ವ್ಯತ್ಯಾಸವಾದರೂ ಆರೋಗ್ಯದಲ್ಲಿ ವಿಪರೀತ ಏರುಪೇರಾಗುವ ಸಾಧ್ಯತೆ ಇದೆ. ಇದು ಸ್ನಾಯುಗಳ ಚಲನವಲನಗಳಿಗೆ ಸಹಕರಿಸುವುದಲ್ಲದೆ ದೇಹದ ನೀರಿನ ಹಾಗೂ ಖನಿಜಾಂಶಗಳ ಸಮತೋಲನ ಕಾಪಾಡಲು ಅತ್ಯವಶ್ಯ. ಮಾನವ ದೇಹದಲ್ಲಿ 250 ಗ್ರಾಂ ನಷ್ಟು ಸೋಡಿಯಂ ಅಂಶ ಇರುವುದು ವಿಶೇಷ. ಅಂದರೆ 640 ಗ್ರಾಂ ನಷ್ಟು ಉಪ್ಪಿದೆ ಎಂದರ್ಥ. ದೇಹದಲ್ಲಿ ಸೋಡಿಯಂನ ಅಂಶ ಅತೀ ಕಡಿಮೆ.ಆದರೆ ‘Hyponatremia’ ಎಂಬ ಕಾಯಿಲೆಗೆ ತುತ್ತಾಗುತ್ತಾರೆ. ಇದೆಷ್ಟು ಭಯಂಕರವೆಂದರೆ ಇದರಿಂದ ಮೊದಲು ಸ್ನಾಯುಗಳ ಎಳೆತ, ವಾಕರಿಕೆ, ವಾಂತಿ, ಶಿರೋಭ್ರಮಣೆ, ಆಘಾತ, ಕೋಮ ಕೊನೆಗೆ ಸಾವು. ಆದ್ದರಿಂದ ದೇಹದಲ್ಲಿ ಉಪ್ಪಿನ ಅಥವಾ ಸೋಡಿಯಂನ ಸಮತೋಲನ ಅತ್ಯಂತ ಮುಖ್ಯ. ಹಾಗೆಯೇ ಹೆಚ್ಚಿನ ಉಪ್ಪಿನಂಶ ಕೂಡ ಆಘಾತಕಾರಿ. ಇದು ದೇಹದಲ್ಲಿ ಹೆಚ್ಚಿನ ನೀರಿನ ಅಂಶ ಇರುವಂತೆ ಮಾಡಿ, ಹೃದಯ, ಕಿಡ್ನಿ ಹಾಗೂ ಮೆದುಳಿಗೆ ಹೆಚ್ಚಿನ ಒತ್ತಡ ನೀಡಿ ಹೃದಯಾಘಾತ, ಯಕೃತ್‌ನ ವಿಫಲ ಹಾಗೂ ಮೆದುಳಿಗೆ ಆಘಾತವಾಗಿ ಪ್ರಾಣಭಯವೂ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಇನ್ನೂ ಉಪ್ಪಿನ ಬಗ್ಗೆ ಹಲವಾರು ಗಾದೆಗಳು ಅರ್ಥಪೂರ್ಣವಾಗಿದೆ. ”ಉಪ್ಪು ತಿಂದವ ನೀರು ಕುಡಿಯಲೇಬೇಕು”, ”ಉಪ್ಪಿನ ಋಣ ಸಾಯುವವರೆಗೂ ತೀರದು”. ”ಉಪ್ಪು ತಿಂದ ಮನೆಗೆ ಎರಡು ಬಗೆಯದಿರು” ಇತ್ಯಾದಿ. ಪ್ರತಿ ಗಾದೆಯೂ ಅರ್ಥಪೂರ್ಣವಾದುದು.

ಪುರಾತನ ಕಾಲದಲ್ಲಿ ಉಪ್ಪಿನ ಬೆಲೆ ಎಷ್ಟಿತ್ತೆಂದರೆ ರೋಮನ್ ಸೈನಿಕರಿಗೆ ಸಂಬಳವನ್ನು ಉಪ್ಪಿನ ರೂಪದಲ್ಲಿ ನೀಡುತ್ತಿದ್ದರು. ‘Salary’ ಎಂಬ ಲ್ಯಾಟಿನ್ ಪದ Salt ಅಂದರೆ ಉಪ್ಪು ನಿಂದ ಬಂದಿದೆ. ಸೈನಿಕರು ಸರಿಯಾಗಿ ಕೆಲಸ ಮಾಡದಿದ್ದರೆ ಅವರ ಉಪ್ಪಿನ ಪ್ರತಿಫಲ ಕಡಿಮೆ ಮಾಡುತ್ತಿದ್ದರು. ಅದರಿಂದಲೇ Not worth his salt ಎಂಬ ಪದ ಬಳಕೆಗೆ ಬಂತು.

ಉಪ್ಪು ಒಂದು ಉತ್ತಮ ಸಂರಕ್ಷಕ. ಮೀನು, ಮಾಂಸ, ತರಕಾರಿ, ಉಪ್ಪಿನಕಾಯಿ ಇವುಗಳು ಹಾಳಾಗದಂತೆ ಇಡಲು ಉಪ್ಪು ಬಹಳ ಸಹಾಯಕಾರಿ. ಇಟಲಿಯ ವೆನಿಸ್‌ನ ಕಾಲುವೆಗಳ ಮೂಲಕ ಉಪ್ಪಿನ ವಹಿವಾಟು ಆಗಿದ್ದರಿಂದ ಆ ಸ್ಥಳ ಇಂದು ಇಷ್ಟು ಪ್ರಸಿದ್ಧಿಗೆ ಬಂದಿದೆ ಎಂಬ ಮಾತಿದೆ.

ಇನ್ನು ಉಪ್ಪು ಆಹಾರ ಪದಾರ್ಥಗಳಲ್ಲಿ ವಿಶೇಷ ರುಚಿಯಲ್ಲದೆ ವಿಶಿಷ್ಟವಾದ ಒಂದು ಪಾತ್ರವನ್ನು ವಹಿಸಬಲ್ಲದು. ಇದಲ್ಲದೆ ಉಪ್ಪನ್ನು ಚರ್ಮದ ಹದ ಮಾಡುವಿಕೆ, ಬಣ್ಣ ಹಾಕುವ ಉದ್ದಿಮೆಗಳಲ್ಲಿ, ಬೆಳ್ಳಗೆ ಮಾಡಬೇಕಾದ ಸಂದರ್ಭಗಳಲ್ಲಿ, ಕುಂಬಾರಿಕೆ, ಸೋಪು ಇತ್ಯಾದಿ ಮಾರ್ಜಕ ವಸ್ತುಗಳ ತಯಾರಿಕೆಯಲ್ಲಿ ಬಹಳ ಹೆಚ್ಚಾಗಿ ಬಳಕೆಯಾಗುತ್ತದೆ.

ವಿಶೇಷವೆಂದರೆ ಬೈಬಲ್‌ನಲ್ಲಿ ಕೂಡ ‘Salt of the earth’ ‘A Piller of Salt’, ‘A Covenant of Salt’ ಎಂಬ ಉಪ್ಪಿನ ಬಗೆಗೆ ಹಲವಾರು ಸಾರಿ ಪ್ರಸ್ತಾಪಿಸಿರುವುದು ಅದರ ಸಂರಕ್ಷಣೆಯ ಬಗೆಗೆ ರೂಪಾಲಂಕಾರವನ್ನು ಶಾಶ್ವತ ಹಾಗೂ ಬದ್ಧತೆಯ ಬಗ್ಗೆ ದೃಢಪಡಿಸಲು ಉಪ್ಪಿನ ಒಂದು ಸ್ಥಾನದ ಅರಿವಾದೀತು.

ಭಾರತದ FSSAI ಪ್ರಕಾರ ಸರಾಸರಿ ಭಾರತೀಯನ ಲವಣದ ಬಳಕೆ ಪ್ರತಿನಿತ್ಯ 10 ಗ್ರಾಂ. ಇದು ಜಗತ್ತಿನ ಸರಾಸರಿ ಗಿಂತ ಎರಡು ಪಟ್ಟು ಅಧಿಕ. ಇದು ಅಪಾಯಕಾರಿ ಬೆಳವಣಿಗೆ. ಇದರಿಂದ ರಕ್ತದೊತ್ತಡ, ಮೂತ್ರಪಿಂಡಗಳ ಮೇಲೆ ಒತ್ತಡ ಇತ್ಯಾದಿ ಆರೋಗ್ಯ ಸಮಸ್ಯೆಗಳು ಉದ್ಭವವಾಗುವುದು ನಿಶ್ಚಿತ. ಇದರ ಬಗ್ಗೆ ಒಂದು ಚಿಂತನೆ ಅತ್ಯಗತ್ಯವೆನಿಸುತ್ತದೆ. ಪೀಟ್ಜಾ ಹಾಗೂ ಬರ್ಗರ್‌ನಂತಹ ತಿನಿಸುಗಳಲ್ಲಿ ಲವಣಾಂಶ ಅತ್ಯಧಿಕವಾಗುತ್ತದೆ. ಉಪ್ಪಿಗೆ ಪರ‍್ಯಾಯವಾಗಿ ಬೆಳ್ಳುಳ್ಳಿ, ಮೆಣಸು, ಏಲಕ್ಕಿ, ಲವಂಗ ಇತ್ಯಾದಿ ಮಸಾಲೆಯ ಸಾಂಬಾರ ಪದಾರ್ಥಗಳನ್ನು ಬಳಸಬಹುದು. ಥೈರಾಯ್ಡ್ ಸಮಸ್ಯೆ ಪರಿಹರಿಸಲು ಸರಕಾರ ಉಪ್ಪಿಗೆ ಐಯೋಡಿನನ್ನು ಸೇರಿಸಿ ಮಾರಾಟ ಮಾಡಲು ಆಜ್ಞೆ ಹೊರಡಿಸಿದೆ.

ಇನ್ನೊಂದು ವಿಶೇಷವೆಂದರೆ ಸತ್ತ ಸಮುದ್ರ (Dead Sea) ದ ಉಪ್ಪಿನ ಅಂಶ ಬೇರೆ ಸಮುದ್ರದ ನೀರಿಗಿಂತ 10 ಪಟ್ಟು ಹೆಚ್ಚು ಇದೆ. ಇದು ಪ್ರಪಂಚದ 5ನೇ ಹೆಚ್ಚು ಲವಣಾಂಶ ಇರುವ ನೀರು ಎಂದು ಪ್ರಸಿದ್ಧಿ ಪಡೆದಿದೆ. ಅಂಟಾರ್ಟಿಕದ ಪ್ರದೇಶದಲ್ಲಿರುವ ಡಾನ್ ಜುವಾನ್ ಪಾಂಡ್ ಪ್ರಪಂಚದ ಅತ್ಯಂತ ಉಪ್ಪಿನಂಶ ಇರುವ ಹೊಂಡ ಎಂದು ಪ್ರಸಿದ್ಧಿಯಾಗಿದೆ. ಸಾಮಾನ್ಯವಾಗಿ ಶೇಕಡ 40 ಲವಣಾಂಶ ಇರುವ ನೀರು ಹೆಪ್ಪುಗಟ್ಟದು.

ಸಮುದ್ರದಿಂದಲ್ಲದೆ ಭೂಮಿಯಲ್ಲೂ ಉಪ್ಪಿನ ನಿಧಿ ಹಾಗೂ ಹಿಮಾಲಯದಲ್ಲಿ ಸಿಗುವ Pink Salt ಜಗತ್ಪ್ರಸಿದ್ಧ. ಈ ಎರಡೂ ಲವಣಗಳು ಸ್ವಲ್ಪ ದುಬಾರಿ. ಅದರಲ್ಲೂ ಹಿಮಾಲಯದ ಲವಣ ಔಷಧ ಗುಣಗಳಿರುವುದರಿಂದ ಆಯುರ್ವೇದದಲ್ಲಿ ಬಳಕೆಯಾಗುತ್ತದೆ. ಅದಲ್ಲದೆ ಸುಮಾರು ಹನ್ನೆರಡು ತರಹದ ವಿವಿಧ ಲವಣಗಳೂ ಲಭ್ಯ.

ಕೆ.ರಮೇಶ್, ಮೈಸೂರು

3 Comments on “ಲವಣದ ಸುತ್ತ

  1. ಲವಣದ ಜನ್ಮ ಜಾಲಾಡುವುದರ ಜೊತೆಗೆ, ಅದರಲ್ಲಿರುವ ಸೋಡಿಯಂನ ಇರುವಿಕೆಯಲ್ಲಿರುವ
    ಏರುಪೇರು ಹೇಗೆ ನಮ್ಮ ಶರೀರಕ್ಕೆ ಮಾರಣಾಂತಿಕವಾಗಬಲ್ಲುದು ಎಂಬ ತಿಳುವಳಿಕೆಯನ್ನು ಮೂಡಿಸುವ ಮಾಹಿತಿಯಕ್ತ ಲೇಖನ!

  2. ಉಪ್ಪಿನ ಕುರಿತಾದ ವಿವರಣಾತ್ಮಕ ಲೇಖನ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟಿತು.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *