ಅರವತ್ತು ವರ್ಷವು ಮಾನವನ ಜೀವನದಲ್ಲಿ ಒಂದು ಮೈಲಿಗಲ್ಲು. ಇದು ಆರು ದಶಕಗಳ ಜೀವನ ಅನುಭವಗಳು ಮತ್ತು ಸಾಧನೆಗಳನ್ನು ಮರುಪರೀಶೀಲಿಸುವ ಹಂತ. ಬೇರೆ ಬೇರೆ ಹುದ್ದೆಗಳಲ್ಲಿ ಇದ್ದು ಕರ್ತವ್ಯ ಸಲ್ಲಿಸಿದವರಿಗೆ ಸಂಪೂರ್ಣ ವಿಶ್ರಾಂತಿಯ ಸಮಯ. ನಾನೂ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಸುದೀರ್ಘ ಸೇವೆಯ ಬಳಿಕ ಕಳೆದ ವರ್ಷ ವಯೋನಿವೃತ್ತಿ ಹೊಂದಿದೆ. ನಿವೃತ್ತಿಯ ಅಂಚಿನಲ್ಲಿರುವಾಗ ಸಹಜವಾಗಿಯೇ ಮನಸ್ಸು ದುಡಿಮೆಯಿಂದ ಮುಕ್ತಿಯನ್ನೂ, ದೇಹ ವಿಶ್ರಾಂತಿಯನ್ನೂ ಬಯಸಿತ್ತು. ಒಮ್ಮೆ ಈ ಯಾಂತ್ರಿಕ ಜೀವನದಿಂದ ಬಿಡುಗಡೆಗೊಂಡರೆ ಸಾಕಪ್ಪಾ ಎಂದು ಎಲ್ಲರಲ್ಲೂ ಹೇಳಿಕೂಳ್ಳುತ್ತಿದ್ದೆ. ದೈನಂದಿನ ಜಂಜಾಟ, ಕಛೇರಿ ರಾಜಕೀಯ ಹಾಗೂ ಕೆಲಸದ ಒತ್ತಡಗಳಿಂದ ಮುಕ್ತಳಾಗಿ ಆರಾಮ ಬದುಕನ್ನು ಎದುರು ನೋಡುತ್ತಿದ್ದೆ. ಅಲ್ಲದೆ ನಾನು ಇದುವರೆಗೆ ನಿರ್ಲಕ್ಷಿಸಿದ ಕೆಲವೂಂದು ಆಸಕ್ತಿ, ಹವ್ಯಾಸಗಳನ್ನು ಕೈಗೊತ್ತಿಕೊಳ್ಳಬಹುದು ಎಂದೂ ಕನಸು ಕಾಣುತ್ತಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತ್ತು.
ನನ್ನ ಜೀವನದ ಸುವರ್ಣ ಕಾಲವು ಪ್ರಾರಂಭವಾಗಿತ್ತು. ಮೊದಲಿನ ಒಂದೆರಡು ತಿಂಗಳು ವಿಶೇಷ ರೀತಿಯ ಉತ್ಸಾಹ, ಸಂಭ್ರಮ, ಆತುರ, ಕಾತುರದಿಂದ ಸರಿದವು. ನನ್ನ ಬದುಕು ನನ್ನದು ಎಂಬಂತೆ ಸ್ವತಂತ್ರ ಹಕ್ಕಿಯಾಗಿ ಹಾರಾಡಿದೆ. ವೇಳಾಪಟ್ಟಿಯ ಮೇಲೆ ನನ್ನದೇ ಸಂಪೂರ್ಣ ನಿಯಂತ್ರಣದಿಂದ, ಏನೊಂದು ಸಮಯದ ಗಡುವಾಗಲೀ ಇಲ್ಲದ ಒತ್ತಡ ರಹಿತ ಬದುಕಿಗೆ ಮನವು ಆನಂದದಿಂದಲೇ ಒಗ್ಗಿಕೊಂಡಿತ್ತು. ನನ್ನ ಹಿತೈಷಿಯೊಬ್ಬರು ನನಗೆ ಹೊಸ ಒಂದು ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದರೂ ನಾನು ಯಾವ ರೀತಿಯ ಆಮಿಷಕ್ಕೂ ಮರುಳಾಗದೆ, ಸ್ವಚ್ಚಂದ ಬದುಕನ್ನು ಆಯ್ಕೆ ಮಾಡಿದ್ದೆ. ಹಾಯಾದ ಈ ಹೊಸ ಬದುಕಿನ ಆಗಮನದೊಂದಿಗೆ ನನ್ನ ಮನಸ್ಸು ತೇಲಾಡಿತ್ತು. ಆದರೆ ಈ ವಿರಾಮ ಬದುಕಿನ ಸಂಭ್ರಮ, ಖುಷಿ ಬಹು ಕಾಲ ಉಳಿಯಲಿಲ್ಲ. ದಿನ ಕಳೆದಂತೆ ಯಾವುದೋ ಯಾತನೆ, ಮಾನಸಿಕ ಅಭದ್ರತೆ ನನ್ನನ್ನು ಕಾಡುತ್ತಿತ್ತು. ಹಲವಾರು ವರ್ಷ ವೃತ್ತಿಜೀವನದೊಂದಿಗೆ ಪೂರ್ಣವಾಗಿ ತೊಡಗಿಸಿಕೊಂಡ ಕಾರಣ, ಬೇಸರ ಹಾಗೂ ಒಂಟಿತನವನ್ನು ಅನುಭವಿಸುತ್ತಿದ್ದೆ. ಪ್ರತಿನಿತ್ಯವೂ ನನ್ನ ಕಾರ್ಯಕ್ಷೇತ್ರ, ಅವಿರತ ದುಡಿಮೆಯ ನನ್ನ ದಿನಚರಿಯನ್ನು ನೆನೆದು ತ್ರಾಸವಾಗುತ್ತಿತ್ತು. ನನ್ನ ವೃತ್ತಿಯನ್ನು ಹಾಗೂ ವಿದ್ಯಾರ್ಥಿ ಮಿತ್ರರನ್ನು ಬಹುವಾಗಿ ಮಿಸ್ ಮಾಡುತ್ತಿದ್ದೆ. ಏನೋ ಅಮೂಲ್ಯ ವಸ್ತುವನ್ನು ಕಳಕೊಂಡ ಭಾವನೆ. ಈ ನಡುವೆ ಒಮ್ಮೆ ನಾನು ಸೇವೆ ಸಲ್ಲಿಸಿದ ಕಾಲೇಜಿನಲ್ಲಿ ಮುಖ್ಯ ಅತಿಥಿಯಾಗಿ ಹೋದಾಗ ತವರುಮನೆಗೆ ಮರಳಿ ಬಂದಷ್ಟೇ ಸಂತೋಷಿಸಿದ್ದೆ. ಮುಂದಿನ ಪೀಳಿಗೆಗೆ ಉದ್ಯೋಗ ದೊರೆಯಲು, ನಮ್ಮಂತ ಹಳೆತಲೆಗಳು ವಿರಮಿಸಬೇಕೆಂಬ ಸತ್ಯದ ಅರಿವಿದ್ದರೂ, ಇನ್ನೂ ಒಂದೆರಡು ವರ್ಷಗಳ ಕಾಲ ಸೇವೆಯಲ್ಲಿ ಇರಬೇಕೆಂದು ಮನ ಬಯಸಿತ್ತು. ನಕಾರಾತ್ಮಕ ಚಿಂತನೆಗಳು ಮನಸ್ಸನ್ನು ಪೀಡಿಸುತ್ತಿದ್ದವು. ಈ ನಡುವೆ ಕೆಲವೊಮ್ಮೆ ಹಳೆಯ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಲು ಬರುತಿದ್ದಾಗ ಅತೀವ ಆನಂದವಾಗುತ್ತಿತ್ತು. ನೆರೆಹೊರೆಯವರ ಮಕ್ಕಳು ಏನಾದರೂ ಪಾಠದ ಬಗ್ಗೆ ಕೇಳಿದಾಗಲೆಲ್ಲಾ ಮನಸ್ಸಿಗೆ ಸಮಾಧಾನವಾಗುತ್ತಿತ್ತು. ಸಂತೋಷದಿಂದಲೇ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದೆ. ಹೀಗೆ ದಿನಗಳು ಬಹು ದೀರ್ಘವಾಗಿ ಕಳೆಯುತ್ತಿದ್ದವು. ವೃತ್ತಿ ಜೀವನದಲ್ಲಿ ಈ ಘಟ್ಟವು ಎಲ್ಲರಿಗೂ ಅನಿವಾರ್ಯ ಎಂದು ನನ್ನ ಮನೆಯವರು ತಿಳಿಹೇಳುತ್ತಿದ್ದರು. ಆದರೂ ಬದುಕಿನಲ್ಲಿ ಅಪೂರ್ಣತೆ ನನ್ನನ್ನು ಕಾಡುತಿತ್ತು.
ಈ ವೈಫಲ್ಯದ ಭಾವನೆಗಳು ನನ್ನ ದೇಹದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರುವುದರ ಅರಿವಾದೊಡನೆ ನಾನು ಜಾಗೃತಳಾದೆ. ಏನಾದರೂ ಹೊಸ ಚಟುವಟಿಕೆಗಳತ್ತ ಮನಸ್ಸನ್ನು ಕೇಂದ್ರೀಕರಿಸಬೇಕೆಂಬ ಹಂಬಲದಿಂದ ನನ್ನ ನೆಚ್ಚಿನ ಅಭಿರುಚಿಯಾದ ತೋಟಗಾರಿಕೆಯಲ್ಲಿ ನನ್ನನ್ನು ತೊಡಗಿಸಿದೆ. ದಿನಾಲೂ ಗಿಡಮರಗಳ ಜೊತೆ ಸಮಯ ಕಳೆಯುವುದೇ ನನ್ನ ಹವ್ಯಾಸವಾಯಿತು. ಸಾಯಂಕಾಲ ಮನೆಯ ಪಕ್ಕ ಇರುವ ಕ್ರೀಡಾಂಗಣಕ್ಕೆ ಗೆಳತಿಯ ಜೊತೆ ವಾಕಿಂಗ್ ಹೋಗುವುದು, ನೆರೆಯ ಸಾರ್ವಜನಿಕ ಗ್ರಂಥಾಲಯಕ್ಕೆ ಅಪರೂಪಕ್ಕೆ ಭೇಟಿ ಕೊಡುವುದು, ಒಟಿಟಿಯಲ್ಲಿ ಹಳೆಯ ಸಿನೇಮಾ ವೀಕ್ಷಣೆ, ಕಿಂಚಿತ್ ಸಮಾಜ ಸೇವೆ ಇತ್ಯಾದಿ ಆರೋಗ್ಯಕರ ಚಟುವಟಿಕೆಗಳಲ್ಲಿ ನನ್ನನ್ನು ತೊಡಗಿಸಿದೆ. ಆತ್ಮೀಯರೊಡನೆ ಹರಟೆ, ಹೊಸರುಚಿಯನ್ನು ಕಲಿಯುವುದು ನನ್ನ ಬಹು ಇಷ್ಟದ ಬಿಡುವಿನ ವೇಳೆಯಾಗಿತ್ತು. ಅಲ್ಲದೆ ಕಳೆದರೆಡು ವರ್ಷಗಳಿಂದ ಬದಿಗಿರಿಸಿದ್ದ ಬರವಣಿಗೆಯನ್ನು ಪುನ: ಕೈಗೊತ್ತಿಕೊಂಡೆ. ಸ್ನೇಹಿತರ ಜೊತೆಗೂಡಿ ಪ್ರವಾಸ, ಮಗಳ ಮನೆಗೆ ಆಗಾಗ್ಗೆ ಭೇಟಿ, ಆಧ್ಯಾತ್ಮದ ಕಡೆ ಒಲವು, ಇವೆಲ್ಲಾ ರೀತಿಯ ಹೊಸ ಜೀವನ ಶೈಲಿಯು ಮನಸ್ಸಿಗೆ ವಿಶೇಷ ಮುದವನ್ನು ನೀಡಿತ್ತಲ್ಲದೇ, ಸಮಾಧಾನವನ್ನು ತಂದುಕೊಟ್ಟಿತ್ತು. ಈ ನಡುವೆ ಬೆಂಗಳೂರಿನಲ್ಲಿ ನಡೆದ ಆಧ್ಯಾತ್ಮಿಕ ಮತ್ತು ಮನಸ್ಸಿಗೆ ಸಂಬಂಧಿಸಿದ ಅದ್ಭುತ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದೆ. ಬಳಿಕ ನನ್ನಲ್ಲಿ ಅಭೂತಪೂರ್ವ ಬದಲಾವಣೆಯನ್ನು ಕಂಡುಕೊಂಡೆ. ಕಾಲಕ್ರಮೇಣ ನಾನು ನಿವೃತ್ತಿ ಮನಸ್ಥಿತಿಯ ಗುಂಗಿನಿಂದ ಹೊರಬಂದು ಸಂತೃಪ್ತಿಯ ಜೀವನವನ್ನು ನಡೆಸಲು ಶಕ್ತಳಾದೆ.
ನಿವೃತ್ತಿ ಜೀವನವು ನಮ್ಮೆಲ್ಲರ ಪಾಲಿಗೆ ನಿಜಕ್ಕೂ ಒಂದು ನಿರ್ಣಾಯಕ ಘಟ್ಟವಾಗಿದ್ದು, ನಮ್ಮ ಸಾಧನೆಯ ಬಗ್ಗೆ ಮೆಲುಕು ಹಾಕುವ ಹಂತವಾಗಿದೆ. ಇದು ನಮ್ಮ ಜೀವನದ ಹೊಸ ಅಧ್ಯಾಯವೇ ಸರಿ. ನಮಗೆ ವಿಶ್ರಾಂತಿಯನ್ನು, ನೆಮ್ಮದಿಯನ್ನು ಹಾಗೂ ಮನ:ಶಾಂತಿಯನ್ನು ನೀಡುವುದರೊಂದಿಗೆ ಅನೇಕ ಸವಾಲುಗಳನ್ನೂ, ಅವಕಾಶಗಳನ್ನೂ ಒಡ್ಡುತ್ತದೆ. ಈ ಸವಾಲುಗಳು ಆರ್ಥಿಕ ಯೋಜನೆಗಳನ್ನು ಎಚ್ಚರಿಕೆಯಿಂದ ರೂಪಿಸುವುದಾಗಲೀ, ಇಳಿವಯಸ್ಸಿನಲ್ಲಿ ಉಂಟಾಗುವ ದೈಹಿಕ ಏರುಪೇರುಗಳಾಗಲೀ ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ನಿವೃತ್ತಿ ಬಳಿಕ ಸಾಮಾಜಿಕ ಜೀವನದಲ್ಲೂ ಹಲವಾರು ಬದಲಾವಣೆಗಳನ್ನು ಕಾಣಬಹುದು. ಒಂದು ಕಾಲದಲ್ಲಿ ಅನುಭವಿಸಿದ ಅಧಿಕಾರ, ಹುದ್ದೆಯ ಘನತೆ, ಗೌರವ ಸಹಜವಾಗಿ ಕಣ್ಮರೆಯಾಗುವುದು, ಕುಟುಂಬದಲ್ಲಿ ನಿರ್ಲಕ್ಷ್ಯತನದ ಅನುಭವ, ಇನ್ನಿತರ ಕ್ಷುಲಕ ಕಾರಣಗಳಿಂದಾಗಿ ಮನಸ್ಸು ನೋಯುತ್ತದೆ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಕುಸಿಯುತ್ತದೆ. ಈ ಎಲ್ಲಾ ಸಂದರ್ಭಗಳನ್ನು ನಾನೂ ಎದುರಿಸಿದ್ದೆ. ಆದರೆ ಇವೆಲ್ಲಾ ನಿವೃತ್ತಿಯ ಬಳಿಕ ಸಾಮಾನ್ಯ ಸಂಗತಿ. “ಕೆಲಸದಿಂದ ನಿವೃತ್ತಿ, ಆದರೆ ಜೀವನದಿಂದ ಅಲ್ಲ” ಎಂಬ ನುಡಿಮುತ್ತಿನಂತೆ, ನನ್ನ ಕಳೆದು ಹೋದ ಬದುಕಿಗಿಂತ, ಮುಂದೆ ಬರುವ ಜೀವನ ಬಹಳ ಮುಖ್ಯ. ಬದಲಾದ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಸಾಮಾಜಿಕ, ದೈಹಿಕ, ಮತ್ತು ಮಾನಸಿಕವಾಗಿಯೂ ಸಕ್ರಿಯವಾಗಿದ್ದು, ನಿವೃತ್ತಿಯನ್ನೇ ಪ್ರವೃತ್ತಿಯಾಗಿಸಿ ಗುಣಮಟ್ಟದ ಬದುಕನ್ನು ಸಾಗಿಸುವುದರಲ್ಲಿ ಇರುವ ಆನಂದವನ್ನು ಕಂಡುಕೊಂಡೆ. ವಿಶೇಷವಾದ ಗೌರವದ ನಿರೀಕ್ಷೆಯಿಂದ ಹೊರಬಂದು, ಬಂದದ್ದನ್ನು ಸ್ವೀಕರಿಸುವ ಚಿತ್ತಶಕ್ತಿಯನ್ನು ಬೆಳೆಸಿಕೊಂಡೆ. ಜೀವನದ ಪ್ರತೀ ಕ್ಷಣವನ್ನು ಸಂಭ್ರಮಿಸುವ ಮನಸ್ಥಿತಿಯನ್ನು ತನ್ನದಾಗಿಸಿದೆ. “ಬದಲಾವಣೆ ಜಗದ ನಿಯಮ” ಎಂಬಂತೆ ನಮ್ಮ ಮನ:ಶಾಂತಿಯ ಆಯ್ಕೆ ನಾವು ಪೋಷಿಸುವ ಆಲೋಚನೆಗಳಲ್ಲಿ ಅಡಗಿವೆ ಎಂಬ ಕಟು ಸತ್ಯದ ಅರಿವಾಯಿತು.
–ಶೈಲಾರಾಣಿ ಬೋಳಾರ್, ಮಂಗಳೂರು.
Post retirement life of a Teaching professional beautifully narrated by Dr. Shaila Rani . Truly inspiring .
Thank you so much Dr. Geetha .
Realistic and beautiful writing.i loved reading it.
Thank you dear
Thank you Madam
Heart touching….
Thank you
You have penned down your feelings very nicely shaila ma’am.
Thank you
ಹೌದು ನಮ್ಮ ಮನಸನ್ನು ಮೊದಲೇ ಸಿದ್ದಪಡಿಸಿ ಕೊಂಡಿದ್ದರೆ ಬದುಕು ಯಾವಾಗಲೂ ಸುಂದರ..ಆಲೋಚನೆಗೆ ಹಚ್ಚುವಂತಹ ಬರೆಹ..ಧನ್ಯವಾದಗಳು ಮೇಡಂ
Thanks madam
ನಿಮ್ಮ ಈ ಬರಹದಲ್ಲಿ ನಿಮ್ಮ ಮನದ ಮಾತುಗಳನ್ನು ತುಂಬಾ ಚೆನ್ನಾಗಿ ಹಂಚಿಕೊಂಡಿರುವಿರಿ
You are an inspiration. Thank you
ಜಾಗೃತ ಮನಸ್ಸು ಬದುಕಿನ ಸಂಜೀವಿನಿ ಎಂಬ ಒಳನೋಟದ ಬರಹ. ಸುಂದರವಾಗಿ ಮೂಡಿಬಂದಿದೆ. ವೃತ್ತಿ ಜೀವನಕ್ಕೆ ದಾರಿಯಾದರೆ ಪ್ರವೃತ್ತಿ ಬದುಕಿ ಆನಂದ ಪರಮಾನಂದ.
Thank you so much
ನಿನ್ನ ಲೇಖನ ತುಂಬಾ ಅರ್ಥ ಪೂರ್ಣ ವಾಗಿದೆ. ಇದು ಮನುಷ್ಯನ ಸಹಜ ಭಾವನೆಗಳು ಹಾಗೂ ಅನುಭವಗಳು. ನಿವ್ರಿತ್ತಿ ಜೀವನಕ್ಕಾಗಿ ಕಾಯುವುದು ಹಾಗೂ ಅದು ಎದುರಾದಾಗ ದುಃಕ್ಕಿಸುವುದು. ಎಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ. ಜೀವನವೇ ಒಂದು Adjustment. ನಿವ್ರಿತ್ತಿಯ ಮೊದಲಾಗಲಿ, ನಂತರವಾಗಲಿ, Adjustment, ಬಹಳ ದೊಡ್ಡ ಪಾತ್ರ ವಹಿಸುತ್ತದೆ. ನಿವ್ರಿತ್ತಿಯ ನಂತರವೂ, ನಿನ್ನನ್ನು ನೋಡುವಾಗ, ಒಂದು ಕ್ಷಣವೂ ನಿನ್ನಲ್ಲಿ ಈ ರೀತಿಯ ಮನಸ್ಸಿನ ಗೊಂದಲ ಇತ್ತೆಂದೂ, adjustment ಗೆ ಇಷ್ಟೊಂದು ಕಷ್ಟ ಪಟ್ಟಿದ್ದೀಯೆಂದೂ ಅನ್ನಿಸಲೇ ಇಲ್ಲ. ನಿನ್ನ ಬರವಣಿಗೆಯನ್ನು ಮುಂದುವರಿಸು. ಜೀವನದ ಪ್ರತಿಯೊಂದು ಹಂತವನ್ನೂ ಎದುರಿಸಲೇ ಬೇಕು. ನೀನು ಯಾವಾಗಲೂ ಎಲ್ಲರಿಗೂ ಸ್ಫೂರ್ತಿದಾಯಕಳು. ನೀನು ಸದಾ ನಿನ್ನ ನಗು, ಹಾಸ್ಯ ವನ್ನು ಎಲ್ಲರಿಗೂ ಉಣ ಬಡಿಸಿದವಳು. ನೀನು ಎಂದೆಂದಿಗೂ ಹಾಗೆ ಇರಬೇಕು. ನಿನ್ನ ಬರಹ ನಿವ್ರಿತ್ತಿ ಜೀವನದಲ್ಲಾಗುವ ಸಹಜ ಪರಿಸ್ಥಿತಿ ಹಾಗೂ ಹೇಗೆ ಆ ಗೊಂದಲದಿಂದ ಹೊರಗೆ ಬರಬುದೆಂದು ಚೆನ್ನಾಗಿ ವಿವರಿಸಿದ್ದೀಯ. ಬರಹವನ್ನು ಮುಂದುವರಿಸು ಶೈಲಾ.
thank you . Appreciate it.
Thanks vishala
Thanks everyone for your input and feedback
ನಿವೃತ್ತಿಯ ನಂತರದ ಬದುಕು ನಾವು ರೂಪಿಸಿದಂತೆ ಸಾಗುತ್ತದೆ. ನಮಗೆ ನಮ್ಮ ಆಸಕ್ತಿಯನ್ನು ಮುಂದುವರಿಸಲು ಅವಕಾಶ ದೊರೆಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹೊಸ ಜಾಡಿನಲ್ಲಿ ಮುಂದೆ ಸಾಗಬೇಕು. ಹಲವು ಪದವಿಗಳನ್ನು ಪಡೆದವರನ್ನೂ ಕಾಣಬಹುದು. It is a golden period.
Thanks madam
ಎಲ್ಲರಿಗೂ ಧನ್ಯವಾದಗಳು
ನಮ್ಮಂತೆ ನೌಕರಿಯಲ್ಲಿದ್ದು ಸೇವಾ ನಿವೃತ್ತಿ ಹೊಂದಿದವರೆಲ್ಲರಲ್ಲೂ ಮೊದಲಿಗೆ ಇದೇ ಮನಸ್ಥಿತಿಯನ್ನು ಕಾಣಬಹುದು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಲ್ಲಿ, ನಿವೃತ್ತಿ ಜೀವನವನ್ನು ಖುಷಿಯಿಂದ ಕಳೆಯಬಹುದು. ತಮ್ಮ ಅನುಭವ ಲೇಖನ ಸೊಗಸಾಗಿ ಮೂಡಿಬಂದಿದೆ ಮೇಡಂ.
ಸೇವಾ ನಿವೃತ್ತಿಯ ನಂತರ ಈ ರೀತಿ ಎಲ್ಲರಿಗೂ ಅನಿಸುವುದು ಸಹಜ. ನಿವೃತ್ತಿಯ ಬಳಿಕ ಯೋಗ್ಯ ರೀತಿಯಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ತಮ್ಮ ಅನುಭವ ಕಥನ ಬಹಳ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ.
ನಿವೃತ್ತಿಯ ಅಂಚಿನಲ್ಲಿರುವವರು ಮತ್ತು ನಾವು ನಿವೃತ್ತರಾಗಿಬಿಟ್ಟಿದ್ದೇವೆ ಎಂದುಕೊಳ್ಳುವವರಿಗೆ ಬೆಳಕಿನ ಕಿರಣವಾಗಬಲ್ಲ ಲೇಖನ ಇದಾಗಿದೆ
“ಅರವತ್ತು ವರ್ಷವು ಮಾನವನ ಜೀವನದಲ್ಲಿ ಒಂದು ಮೈಲಿಗಲ್ಲು” ಎಂಬ ಲೇಖನವು ನಿವೃತ್ತಿ ಜೀವನದ ಮನೋಭಾವ, ಸಂತೋಷ-ದುಃಖಗಳ ತೋಳುತಾಕಾಟ ಮತ್ತು ಹೊಸ ಬದುಕಿನತ್ತ ನಡೆದ ಬದಲಾವಣೆಗಳನ್ನು ಮನದಟ್ಟುಗೊಳಿಸುತ್ತದೆ. ಲೇಖಕಿ ಡಾ. ಶೈಲಾರಾಣಿ ಬೋಳಾರ್ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡು, ನಿವೃತ್ತಿಯ ಸಂತೋಷ ಹಾಗೂ ಎದುರಾಗುವ ಮನೋವೈಜ್ಞಾನಿಕ ಸಂಕಟಗಳನ್ನು ಬಹಳ ಸರಳ ಶೈಲಿಯಲ್ಲಿ ವಿವರಿಸಿದ್ದಾರೆ. ಬರಹದಲ್ಲಿ ಆರಂಭಿಕ ಉತ್ಸಾಹದ ನಂತರದ ಖಾಲಿತನ, ಅದರಿಂದ ಹೊರಬರಲು ಕೈಗೊಂಡ ಹವ್ಯಾಸಗಳು ಮತ್ತು ಚಟುವಟಿಕೆಗಳು ಓದುಗರ ಮನಸ್ಸಿಗೆ ಪ್ರೇರಣೆಯನ್ನು ನೀಡುತ್ತವೆ.
ಲೇಖನವು ನಿವೃತ್ತಿಯು “ಅಂತ್ಯವಲ್ಲ, ಹೊಸ ಪ್ರಾರಂಭ” ಎಂಬ ಸಂದೇಶವನ್ನು ಬಲವಾಗಿ ಒತ್ತಿ ಹೇಳುತ್ತದೆ. ತೋಟಗಾರಿಕೆ, ವಾಚನ, ಆಧ್ಯಾತ್ಮ, ಸ್ನೇಹ ಹಾಗೂ ಸಮಾಜ ಸೇವೆಯಂತಹ ಚಟುವಟಿಕೆಗಳ ಮೂಲಕ ಜೀವನದಲ್ಲಿ ಸಮತೋಲನ ಮತ್ತು ಸಂತೃಪ್ತಿ ಕಂಡುಕೊಳ್ಳುವ ದೃಷ್ಟಿಕೋನ ಓದುಗರಿಗೂ ಆಳವಾದ ಸ್ಪಂದನೆಯನ್ನುಂಟುಮಾಡುತ್ತದೆ.
ಒಟ್ಟಾರೆಯಾಗಿ, ಈ ಬರಹವು ಜೀವನದ ತಿರುಗುಬಾಣವಾದ ನಿವೃತ್ತಿಯಲ್ಲಿಯೂ ಉತ್ಸಾಹದಿಂದ, ಸಕಾರಾತ್ಮಕವಾಗಿ ಬದುಕಲು ಓದುಗರನ್ನು ಪ್ರೇರೇಪಿಸುವ ಹೃದಯಸ್ಪರ್ಶಿ ಅನುಭವಕಥನವಾಗಿದೆ.