ರಾತ್ರಿ ಊಟಮಾಡುವಾಗ ಮಗ ಹೇಳಿದ ಮಾತೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿತ್ತು. “ಅಮ್ಮಾ ನಾಳೆ ಬೆಳಗ್ಗೆ ಬೇಗನೆ ಎದ್ದು ಸ್ನಾನಪೂಜಾದಿಗಳನ್ನು ಮುಗಿಸಿ ರೆಡಿಯಾಗಿ. ವೃದ್ಧಾಶ್ರಮಕ್ಕೆ ಹೋಗಬೇಕು. ಅಲ್ಲಿ ಎಲ್ಲಾ ಹೇಳಿ ವ್ಯವಸ್ಥೆ ಮಾಡಿ ಬಂದಿದ್ದೇನೆ”.
ಕಮಲಮ್ಮನವರು “ದೇವರೇ ಎಲ್ಲ ಮಕ್ಕಳಿಗಿಂತ ನನ್ನ ಮಗ ಬೇರೆ ಎಂದೇ ಭಾವಿಸಿಕೊಂಡಿದ್ದೆ. ಈಗ ಇವನೂ ಅವರಂತೆಯೇ ಬದಲಾಗಿಬಿಟ್ಟನೇ. ಹೂ..ಅವನೆಲ್ಲಿ ಬದಲಾಗುತ್ತಾನೆ. ಹಾಗೆ ಬದಲಾಗುವಂತೆ ಮಾಡಿದ್ದಾಳೆ ನನ್ನ ಮುದ್ದು ಸೊಸೆ. ಆಹಾ ! ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತಾಡುತ್ತಾಳೆ. ಅಕ್ಕರೆ, ಪ್ರೀತಿ ಇರುವಂತೆ ತೋರಿಕೆ. ಅವಳದ್ದೇ ಇಂತಹ ಚಿತಾವಣೆ.” ನಾಲ್ಕು ವರ್ಷಗಳ ಹಿಂದೆ ತಮ್ಮಿಂದ ಅಗಲಿದ ಸಂಗಾತಿಯನ್ನು ನೆನಪು ಮಾಡಿಕೊಂಡರು ಕಮಲಮ್ಮ. “ನಾನಿನ್ನೂ ಬದುಕಿದ್ದು ಇನ್ನೂ ಏನೇನು ಅನುಭವಿಸಬೇಕೋ. ಹಣೆಯಲ್ಲಿ ಬರೆದಂಗಾಗುತ್ತದೆ” ಎಂದು ಮಲಗಿದರು.
ರಾತ್ರಿಯೆಲ್ಲ ಇದೇ ಆಲೋಚನೆಯಲ್ಲಿ ಕತ್ತಲೆ ಹರಿದು ಬೆಳಗಾಯಿತು. ಒಲ್ಲದ ಮನಸ್ಸಿನಿಂದ ಎದ್ದು ಮಗ ಹೇಳಿದಂತೆ ಸಿದ್ಧರಾಗುತ್ತಿದ್ದರು. ಪಕ್ಕದ ರೂಮಿನಲ್ಲಿ ಮಗ ಸೊಸೆಯರ ನಡುವೆ ಮಾತುಕತೆ ನಡೆಯುತ್ತಿತ್ತು. ಬೇಡವೆಂದರೂ ಕಮಲಮ್ಮನವರ ಕಿವಿ ಆ ಕಡೆಗೆ ನೆಟ್ಟಿತು.
ಮಗ: “ಎಲ್ಲ ಸಿದ್ಧ ಮಾಡಿಯಾಯಿತಾ?”
ಸೊಸೆ: ಓ ನೆನ್ನೆ ರಾತ್ರಿಯೇ ರೆಡಿಯಾಗಿದೆ”
“ಹೂಂ ಮಾಡದೇ ಏನು. ಆದಷ್ಟು ಬೇಗ ತೊಲಗಿದರೆ ಸಾಕು ಎಂದು ಭಾವಿಸಿದ್ದಾಳೆ” ಎಂದುಕೊಂಡು ವೇದನೆಯಿಂದ ಸೆರಗಿನಿಂದ ಕಣ್ಣೊತ್ತಿಕೊಂಡರು. ಕಮಲಮ್ಮ.
ಮಗ: “ನಿಮ್ಮದೆಲ್ಲಾ ರೆಡಿಯಾಯ್ತಾ? ಅಮ್ಮಾ, ಹೊರಡೋಣ ಬನ್ನಿ”
ಕಮಲಮ್ಮನವರು “ಬಂದೇಪ್ಪಾ” ಎಂದು ಹೇಳುತ್ತಾ ಈ ಮನೆಯ ಋಣ ಇವತ್ತಿಗೆ ತೀರಿತು ಎಂಬಂತೆ ತಮ್ಮ ರೂಮಿನಿಂದ ಹೊರಕ್ಕೆ ಬಂದರು.
ಮಗನ ಕಾರಿನಲ್ಲಿ ಮೌನವಾಗಿ ದಾರಿಯಲ್ಲಿ ಮಗ ಸೊಸೆ ನಡುವೆ ನಡೆಯುತ್ತಿದ್ದ ಮಾತುಕತೆಯಲ್ಲಿ ತಲೆಹಾಕದೇ ಬಿಮ್ಮನೆ ಕುಳಿತಿದ್ದರು. ವೃದ್ಧಾಶ್ರಮ ಸಮೀಪಿಸಿತು. ಮಗ ಸೊಸೆ ಕೆಳಗಿಳಿದು ತಾವು ತಂದಿದ್ದ ಹಲವಾರು ಸಾಮಾನುಗಳನ್ನು ಡಿಕ್ಕಿಯಿಂದ ಇಳಿಸಿಕೊಂಡರು. ನಂತರ “ಅಮ್ಮಾ ನೀವು ಇಲ್ಲಿಯೇ ಕುಳಿತಿರಿ. ಇದನ್ನೆಲ್ಲ ಒಳಗಿಟ್ಟು ಬರುತ್ತೇವೆ. ಆಮೇಲೆ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಉತ್ತರಕ್ಕೂ ಕಾಯದೇ ಒಳಕ್ಕೆ ಹೋದರು.
ಕಾರಿನೊಳಗೇ ಕುಳಿತಿದ್ದ ಕಮಲಮ್ಮನವರು ಕಿಟಕಿಯಿಂದ ವೃದ್ಧಾಶ್ರಮವನ್ನು ಅವಲೋಕಿಸಿದರು. ಬಹಳ ದೊಡ್ಡದೇನಲ್ಲ. ಎಷ್ಟು ಜನರಿದ್ದಾರೋ? ಇಲ್ಲಿ ಹೇಗಿದ್ದಾರೋ? ಊಟ ತಿಂಡಿ ಹೇಗಿರುತ್ತದೆಯೋ? ಎಂದೆಲ್ಲ ಯೋಚನೆ. ಹೂಂ, ಹೇಗಿದ್ದರೂ ಇರಲೇಬೇಕಲ್ಲ. ಎಂದು ಆಲೋಚಿಸುವಷ್ಟರಲ್ಲಿ ಸೊಸೆ ಬಂದು ಬಾಗಿಲು ತೆರೆದು “ಅತ್ತೆ ಬನ್ನಿ” ಎಂದು ಅವರನ್ನು ಕೆಳಗಿಳಿಸಿದಳು. ವೃದ್ಧಾಶ್ರಮದ ಬಾಗಿಲಲ್ಲೇ ಅಲ್ಲಿನ ಸಿಬ್ಬಂದಿ ಬಂದು ಗೌರವಾದರಗಳಿಂದ ಕೈಹಿಡಿದು ಒಳಕ್ಕೆ ಕರೆದೊಯ್ದರು. ಅವರು ಒಳಗೆ ಪ್ರವೇಶಿಸಿ ತಲೆಯೆತ್ತುತ್ತಿದ್ದಂತೆ ಅಲ್ಲಿದ್ದವರೆಲ್ಲರೂ ಒಟ್ಟಾಗಿ “ಹ್ಯಾಪಿ ಬರ್ತ್ಡೇ ಟು ಯೂ” ಎಂದು ಹಾರೈಸಿದರು. ಕಮಲಮ್ಮನವರಿಗೆ ಗಲಿಬಿಲಿಯಾಯಿತು.
ಕಕ್ಕಾಬಿಕ್ಕಿಯಾದ ಕಮಲಮ್ಮನವರು ಸಮೀಪದಲ್ಲಿ ನಿಂತಿದ್ದ ಮಗನೆಡಗೆ ಪ್ರಶ್ನಾರ್ಥಕವಾಗಿ ನೋಡಿದರು. ಪಕ್ಕದಲ್ಲೇ ಇದ್ದ ಸೊಸೆ “ಇವತ್ತು ನಿಮ್ಮ ಹುಟ್ಟದಹಬ್ಬ. ನಿಮಗೆ ಹೀಗೆ ಸರ್ ಪ್ರೈಸ್ ಕೊಡಬೇಕೆಂದು ನಿಮ್ಮನ್ನು ಇಲ್ಲಿಗೆ ಕರೆತಂದು ಇವರೆಲ್ಲರೊಡನೆ ಹಬ್ಬವನ್ನು ಆಚರಿಸಬೇಕೆಂಬುದು ನಿಮ್ಮ ಮಗನ ಪ್ಲಾನ್. ನನಗೂ ಇದನ್ನು ತಿಳಿಸಬೇಡವೆಂದು ಕಟ್ಠಾಜ್ಞೆ ಮಾಡಿದ್ದರು. ಅದಕ್ಕೇ ಮೊದಲೇ ಏನನ್ನೂ ಹೇಳಲಿಲ್ಲ. ಬನ್ನಿ ನಿಮ್ಮ ಕೈಯಿಂದಲೇ ಎಲ್ಲರಿಗೂ ಸಿಹಿತಿಂಡಿ ಹಂಚಿ, ಬಟ್ಟೆಗಳ ಗಿಫ್ಟ್ ನೀಡಿ” ಎಂದಳು. ಮಗನೂ “ ಅಮ್ಮಾ ಎಲ್ಲರಿಗೂ ಸಿಹಿಹಂಚಿ, ಬಟ್ಟೆಗಳನ್ನು ನೀಡಿದನಂತರ ಇವರೆಲ್ಲರೊಡನೆ ಕೂಡಿ ಭೋಜನ ಮಾಡಿ ಮನೆಗೆ ಹೋಗೋಣ” ಎಂದು ಕರೆದನು.
ಕಮಲಮ್ಮನವರಿಗೆ ಹಿಂದಿನ ದಿನ ತಾವು ಪಟ್ಟ ವೇದನೆಯೆಲ್ಲ ಕ್ಷಣಮಾತ್ರದಲ್ಲಿ ಮಾಯವಾಗಿ ಹೃದಯ ತುಂಬಿ ಬಂತು. ಮನಸ್ಸಿನಲ್ಲೇ ಮಗ, ಸೊಸೆಯನ್ನು ಹರಸುತ್ತಾ ಅವರು ಹೇಳಿದಂತೆ ಸಿಹಿ ಮತ್ತು ಬಟ್ಟೆಗಳನ್ನು ಅಲ್ಲಿದ್ದವರಿಗೆ ಹಂಚಿದರು. ಅವರೆಲ್ಲರಿಂದ ಶಭಾಶಯಗಳನ್ನು ಸ್ವೀಕರಿಸಿದರು. ಧನ್ಯತೆಯ ಭಾವ ಅವರ ಮನಸ್ಸಿನಲ್ಲಿ ಮೂಡಿತು.
ತಂದೆ ತಾಯಿಗಳನ್ನು ಪೂಜ್ಯಭಾವನೆಯಿಂದ ಗೌರವಿಸುವ ಇಂತಹ ಮಕ್ಕಳ ಸಂಖ್ಯೆ ಹೆಚ್ಚಲೆಂದು ಹಾರೈಸಿದರು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಕತೆಯೇನೋ ಸೊಗಸಾಗಿದೆ; ಹೃದಯನೀತಿ ಮತ್ತು ಮನಸಿನ ಪ್ರೀತಿ ಎರಡೂ ಧಾರಾಳವಾಗಿದೆ.
ಆದರೆ ರಾತ್ರಿಯಿಡೀ ಆ ವಯಸಾದ ಜೀವಕೆ ಚಿಂತೆಯನು ತರಿಸಿ, ಯಾತನಿಸಿದ್ದನ್ನು ಕಲ್ಪಿಸಿಕೊಂಡು
ನಾನು ವಿಹ್ವಲನಾದೆ. ಛೇ, ಪಾಪ!
ಕತೆಗಾರ್ತಿಯಾದ ನೀವಾದರೂ ಅವರಿಗೆ ಈ ರಹಸ್ಯವನು ಹೇಳಬಾರದಿತ್ತೇ? ನಿಮ್ಮ ಬಗ್ಗೆ ನನಗೆ
ಸಮಾ ಸಿಟ್ಟೇ ಬಂದಿದೆ. ಇನ್ನು ಮೇಲೆ ಹೀಗೆ ಮಾಡಬೇಡಿ, ದಯಮಾಡಿ !!
ನಿಮ್ಮ ಪ್ರೀತಿ ಯ ಪ್ರತಿಕ್ರಿಯೆ ಗೆ ಧನ್ಯವಾದಗಳು ಇನ್ನ ಮೇಲೆ ಹಾಗೇ ಮಾಡುತ್ತೇನೆ..ಸಾರ್
ತುಂಬ ಒಳ್ಳೆಯ ಕಥೆ. ಓದುಗರಿಗ, ಓದುತ್ತೋದುತ್ತಾ ಭಾರವಾದ ಮನ ಹಗುರವಾಗುವುದರಲ್ಲಿ ಸಂಶಯವಿಲ್ಲ.
ಚಂದದ ಕಥೆ
ಧನ್ಯವಾದಗಳು ನಯನಮೇಡಂ
ಕಥೆ ಚೆನ್ನಾಗಿದೆ
ಧನ್ಯವಾದಗಳು ಹೈಮಾವತಿ ಮೇಡಂ
ನಿಮ್ಮ ಸ್ಪಂದನಕ್ಕೆ ನನ್ನ ಧನ್ಯವಾದಗಳು ಪದ್ಮಾ ಮೇಡಂ
ಅತೀ ಸಂತಸದ ತಿರುವಿನೊಂದಿಗೆ ಮೂಡಿಬಂದ ಕಥೆಯು ತಮ್ಮ ಸುಂದರ ರೇಖಾಚಿತ್ರದಿಂದ ಸಂಪನ್ನಗೊಂಡಿದೆ, ನಾಗರತ್ನ ಮೇಡಂ.
ನಿಮ್ಮ ಪ್ರತಿ ಕ್ರಿಯೆಗೆ ಧನ್ಯವಾದಗಳು ಶಂಕರಿ ಮೇಡಂ