ಪ್ರವಾಸ

ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-2

Share Button

Ruakuri Caves PC: Internet

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವೈಟೋಮಾ ಸುಣ್ಣದ ಕಲ್ಲಿನ ಗುಹೆಗಳು

ಇದು ಯಾವ ಶಿಲ್ಪಿ ರಚಿಸಿದ ಕಲೆಯ ಬಲೆಯೋ? ಈ ಗುಹೆಗಳನ್ನು ಅಲಂಕರಿಸಿದವರು ಯಾರು? ಒಂದೊಂದು ಶಿಲೆಯೂ ಒಂದೊಂದು ವಿಶಿಷ್ಟವಾದ ಆಕಾರ ತಳೆದು ಅಲೌಕಿಕವಾದ ಅವಿಸ್ಮರಣೀಯವಾದ ಅನುಭವ ನೀಡುವಂತಿದೆ. ಗುಹೆಯ ಅಡಿಯಲ್ಲಿ ಗಂಗೆ ಬಳುಕುತ್ತಾ ಸಾಗಿದರೆ, ಗುಹೆಯ ಮೇಲ್ಭಾಗದಲ್ಲಿ ಸಾವಿರಾರು ಮಿಂಚುಹುಳಗಳು ಆಗಸದಲ್ಲಿ ಹೊಳೆಯುವ ನಕ್ಷತ್ರಗಳಂತೆ ಗೋಚರಿಸುತ್ತವೆ. ನರ್ಸರಿ ಹಾಡು ನೆನಪಾಗುತ್ತದೆ, ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ವರ್ಮ್ (ಸ್ಟಾರ್), ಹೌ ಐ ವಂಡರ್ ವಾಟ್ ಯು ಅರ್’ .

ವೈಟೋಮಾ ಎಂದರೆ ಮಾವೊರಿ ಭಾಷೆಯಲ್ಲಿ ‘ನೀರಿನ ಗುಂಡಿ’. ‘ರುಕರಿ ಕೇವ್ಸ್’, (Ruakuri Caves) ‘ಅರನೋಯ್ ಕೇವ್ಸ್’ (Aranui Caves) ಇಂತಹ ಅದ್ಭುತವಾದ ಸುಣ್ಣಕಲ್ಲಿನ ಗುಹೆಗಳು ಇಲ್ಲಿವೆ. ಯಕ್ಷಲೋಕದಂತಿರುವ ಈ ವೈಟೋಮಾ ಗುಹೆಯ ಸ್ವಗತವನ್ನು ಕೇಳೋಣ ಬನ್ನಿ – ‘ನಾನು ಸುಮಾರು ಮೂವತ್ತು ಮಿಲಿಯನ್ ವರ್ಷಗಳ ಹಿಂದೆ ಕಡಲಾಳದಲ್ಲಿ ಮೆದುವಾದ ಮಣ್ಣಿನ ರೂಪದಲ್ಲಿದ್ದೆ. ನನ್ನ ಮಡಿಲಲ್ಲಿ ಹಲವು ಜಲಚರಗಳು ಆಶ್ರಯ ಪಡೆದಿದ್ದವು. ನನ್ನ ಮಡಿಲಲ್ಲೇ ಕೊನೆಯುಸಿರನ್ನೂ ಎಳೆದವು. ಮೀನು, ಏಡಿ, ಕಪ್ಪೆಚಿಪ್ಪು, ಕಡಲ್ಗುದುರೆ ಮುಂತಾದ ಜೀವಿಗಳು ತಮ್ಮ ಗುರುತಿನ ಮುದ್ರೆಯನ್ನು ನನ್ನ ಉದರದಲ್ಲಿ ಅಚ್ಚಳಿಯದಂತೆ ಒತ್ತಿದವು. ನಾನು ಈ ನೋವನ್ನೆಲ್ಲಾ ನುಂಗುತ್ತಾ ಗಟ್ಟಿಯಾಗುತ್ತಾ ಕಲ್ಲೆದೆಯವಳಾದೆ, ಆಗ ನನ್ನನ್ನು ‘ಸೆಡಿಮೆಂಟರಿ ರಾಕ್ಸ್’ ಎಂದು ಕರೆದರು. ಒಂದು ದಿನ ನಾನು ಮಲಗಿದ್ದ ಭೂಮಿಯು ಅಲ್ಲೋಲಕಲ್ಲೋಲವಾಗಿ, ಜ್ವಾಲಾಮುಖಿಯೊಂದು ಸ್ಫೋಟಿಸಿದಾಗ ಸಾಗರದಡಿಯಲ್ಲಿದ್ದ ನಾನು ಬೆಟ್ಟ ಗುಡ್ಡಗಳ ಆಕಾರ ಹೊತ್ತು ಮೇಲೇರಿದೆ. ನನ್ನೊಳಗೆ ಹಲವಾರು ಗುಹೆಗಳು ರೂಪುಗೊಂಡಿದ್ದವು. ಸುಂದರವಾದ ಕಲೆಯ ಬಲೆಯಿಂದ ನಾನು ಅಲಂಕರಿಸಲ್ಪಟ್ಟಿದ್ದೆ. ನೋಡಿಲ್ಲಿ ಗಣಪತಿಯ ಸೊಂಡಿಲಿನಂತೆ ತೂಗು ಬಿದ್ದ ಆಕೃತಿ, ಪಕ್ಕದಲ್ಲಿ ಕಮಲಾದಾಕೃತಿಯಲ್ಲಿ ಕಂಡು ಬರುವ ಶಿಲೆ. ಇಲ್ಲೊಂದು ಶಿವನ ಕೈಲಾಸ ಪರ್ವತವೇ ರೂಪುಗೊಂಡಿದೆ, ಶಿವಲಿಂಗದ ಸುತ್ತಲೂ ವಿವಿಧ ಆಕೃತಿಗಳಲ್ಲಿ ನಿಂತಿರುವ ಗಣಂಗಳು. ನಿಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದೆಲ್ಲಾ ಇಲ್ಲಿ ಪ್ರತ್ಯಕ್ಷ. ಛಾವಣಿಯಿಂದ ತೂಗು ಬಿದ್ದಿರುವ ಕಲಾಕೃತಿಗಳಿಗೆ ‘ಸ್ಟಾಲಕ್ಟೈಟ್ಸ್’ ಎಂದೂ ನೆಲದಿಂದ ಉದ್ಭವಿಸಿದ ಶಿಲೆಗಳಿಗೆ ‘ಸ್ಟಾಲಗ್ಮೈಟ್ಸ್’ ಎಂದೂ ಭೂವಿಜ್ಞಾನಿಗಳು ಹೆಸರಿಸಿದರು.

PC: Internet

ನನ್ನ ಒಡಲಲ್ಲಿರುವ ಸುಂದರ ಕಲಾಕೃತಿಗಳನ್ನು ಬೆಳಗಲು ಈ ಮಿಂಚುಹುಳಗಳು ಹಾರಿಬಂದವು, ನಾನು ಅವುಗಳಿಗೂ ಆಶ್ರಯವಿತ್ತೆ. ಈ ಹುಳಗಳು ಮೊಟ್ಟೆಯಿಟ್ಟು, ಲಾರ್ವೆ ಆದವು, ತಮ್ಮ ಬಾಲದಲ್ಲಿ ‘ಲ್ಯುಸಿಫೆರ್’ ಎಂಬ ರಾಸಾಯನಿಕವನ್ನು ಸುರಿಸಿ, ಹಸಿರು ಮಿಶ್ರಿತ ನೀಲ ವರ್ಣದ ಬೆಳಕನ್ನು ಪಸರಿಸಿದವು. ಲಾರ್ವೆ ‘ಪ್ಯೂಪಾ’ ಆಯಿತು. ಪೊರೆ ಕಳಚಿ ಹೊರಬಂದ ಹೆಣ್ಣು ಗಂಡು ಮಿಂಚು ಹುಳಗಳು ಸಂಭ್ರಮದಿಂದ ಕೂಡಿದವು, ತಮ್ಮ ಸಂತಾನೋತ್ಪತ್ತಿ ಮಾಡಿದವು. ಈ ಮಿಂಚುಹುಳಗಳಿಂದ ನನ್ನಲ್ಲಿದ್ದ ಕಲಾಕೃತಿಗಳು ಬೆಳಕಿಗೆ ಬಂದವು. ಮಳೆ ಸುರಿದಾಗ ನನ್ನ ಕೊರಕಲುಗಳಲ್ಲಿ ಇಳಿದಳು ಗಂಗೆ, ನನ್ನ ಮೈ ಸವರುತ್ತಾ, ನನ್ನ ತನುವಿನಲ್ಲಿರುವ ಸುಣ್ಣವನ್ನು ಕರಗಿಸುತ್ತಾ ನವ ನವೀನ ಆಕಾರಗಳನ್ನು ಸೃಷ್ಟಿಸಿದಳು. ನನ್ನಡಿಯಲ್ಲಿ ಸಿಲುಕಿದ ಗಂಗೆ ಒಮ್ಮೆ ಬಂಡೆಯಿಂದ ಬಂಡೆಗೆ ಚಿಮ್ಮಿದಳು, ಮತ್ತೊಮ್ಮೆ ಬಂಡೆಗಳ ಮೇಲಿನಿಂದ ಧುಮ್ಮಿಕ್ಕಿದಳು, ಇನ್ನೊಮ್ಮೆ ಗಾಂಭೀರ್ಯದಿಂದ ಗಜಗಮನೆಯಂತೆ ಚಲಿಸಿದಳು.’

ಸುಣ್ಣದ ಕಲ್ಲಿನ ಗುಹೆಯ ಸ್ವಗತ ಮುಂದುವರೆದಿತ್ತು, ‘ಕತ್ತಲೆಯಲ್ಲಿ ಜನಿಸಿದ್ದ ನಾನು ಕತ್ತಲೆಯಲ್ಲಿಯೇ ಬದುಕುಳಿದೆ. ಮಿಂಚುಹುಳಗಳ ಇನಿದನಿ, ಗಂಗೆಯ ಅಲೆಗಳ ಸದ್ದನ್ನು ಕೇಳುತ್ತಾ ವಿರಮಿಸಿದ್ದೇನೆ. ಹೀಗೆಯೇ ನೀರವ ವಾತಾವರಣದಲ್ಲಿ ಕತ್ತಲೆಯ ಮುಸುಕು ಹೊದ್ದು, ಅಜ್ಞಾತವಾಸದಲ್ಲಿ ಸಾವಿರಾರು ವರ್ಷ ಕಳೆದಿದ್ದೆ. ಎಲ್ಲಿಂದಲೋ ಬಂದು ಇಲ್ಲಿ ತಳವೂರಿದ ಮಾವೊರಿ ಜನರು ನನ್ನ ಮಡಿಲಲ್ಲಿ ಕುಳಿತು ತಮ್ಮ ನೋವು ನಲಿವನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದರು, ಮಕ್ಕಳು ಮಿಂಚುಹುಳಗಳಂತೆ ಕುಣಿದು ಕುಪ್ಪಳಿಸಿದರೆ, ಯುವಕ ಯುವತಿಯರು ತಮ್ಮ ಪ್ರೇಮಿಗಳ ಜೊತೆ ವಿಹರಿಸುವ ತಾಣ ಇದಾಗಿತ್ತು, ಹಿರಿಯರು ತಮ್ಮ ಕಳೆದು ಹೋದ ಬಾಳಿನ ಸಿಹಿ ಕಹಿಯನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದರು. ಒಂದು ದಿನ ಒಬ್ಬ ಮಾವೊರಿ ನಾಯಕ ತನ್ನ ಬ್ರಿಟಿಷ್ ಗೆಳೆಯನೊಂದಿಗೆ ಬಂದ. ಅವನು ನನ್ನನ್ನು ನೋಡಿ ಅವಾಕ್ಕಾಗಿ ನಿಂತ. ಇಂತಹ ಚೆಲುವಾದ ಸ್ಥಳವನ್ನು ನಾನು ನೋಡಿಯೇ ಇಲ್ಲ ಎಂದು ಉದ್ಗಾರ ತೆಗೆದ. ಅಂದಿಗೆ ನನ್ನ ಅಜ್ಞಾತವಾಸದ ಪೊರೆ ಕಳಚಿತ್ತು. ನಾನು ಪ್ರವಾಸೋದ್ಯಮದ ಭಾಗವಾದೆ. ನನ್ನ ಏಕಾಂತವಾಸ ಮುಗಿದಿತ್ತು. ದೇಶ ವಿದೇಶಗಳಿಂದ ಜನಸಾಗರವೇ ಹರಿದು ಬಂತು. ಜನರ ಹರ್ಷೋದ್ಗಾರ, ಮೆಚ್ಚುಗೆಯ ಮಾತುಗಳಿಂದ ನಾನು ಪುಳಕಿತಳಾದೆ. ಇಂದು ನಾನು ಜಗತ್ತಿನ ಪ್ರವಾಸೀ ತಾಣಗಳಲ್ಲಿ ಹತ್ತನೆಯ ಸ್ಥಾನದಲ್ಲಿರುವೆ. ಪ್ರವಾಸಿಗರಿಗಾಗಿ ಹೊಟೇಲ್, ರೆಸಾರ್ಟ್, ಲಾಡ್ಜ್, ಮೋಟೆಲ್‌ಗಳನ್ನು, ಕಟ್ಟಲಾಗಿದೆ. ಬದಲಾವಣೆ ಜಗದ ನಿಯಮವಲ್ಲವೇ?’

ಬದಲಾವಣೆಗೆ ಹೊಂದಿಕೊಂಡ ಗುಹೆ ತನ್ನ ಮಾತುಗಳನ್ನು ಮುಂದುವರೆಸಿತ್ತು, ‘ಈಗ ಪ್ರವಾಸಿಗರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನನ್ನ ಉರುಟುರುಟಾದ ನೆಲದ ಮೇಲೆ ಕಲ್ಲಿನ ಚಪ್ಪಡಿಗಳನ್ನು ಹಾಸಲಾಗಿದೆ, ಅಲ್ಲಲ್ಲಿ ಮೆಟ್ಟಿಲುಗಳನ್ನು ಕಟ್ಟಲಾಗಿದೆ, ಪ್ರವಾಸಿಗರು ಜಾರದಿರಲೆಂದು ಕಂಬಿಗಳನ್ನು ನೆಟ್ಟಿದ್ದಾರೆ. ಗಲಾಟೆ ಮಾಡಬೇಡಿ, ಫೋಟೋ ತೆಗೆಯಬೇಡಿ, ಮಿಂಚುಹುಳಗಳಿಗೆ ತೊಂದರೆಯಾದೀತು ಎಂಬ ಫಲಕಗಳನ್ನು ತೂಗು ಹಾಕಿದ್ದಾರೆ. ನನ್ನ ಕಥೆ ಹೇಳುವ ಮಾವೊರಿ ಗೈಡ್‌ಗಳು ಸಿದ್ಧರಾಗಿ ನಿಂತಿದ್ದಾರೆ. ಮಂದವಾದ ಬೆಳಕು ಬೀರುವ ದೀಪಗಳ ಮುಂದೆ ನಿಂತು ಅವರು ಹೇಳುವ ಕಥೆಯನ್ನು ನಾನೂ ಕೇಳಿಸಿಕೊಳ್ಳುತ್ತೇನೆ. ಪ್ರವಾಸಿಗರನ್ನು ಆಕರ್ಷಿಸಲು, ನನ್ನಡಿಯಲ್ಲಿ ಹರಿಯುವ ನದಿಯಲ್ಲಿ ಜಲಕ್ರೀಡೆಗಳನ್ನೂ ಆಯೋಜಿಸಿದ್ದಾರೆ, ಶಾಂತವಾಗಿ ಚಲಿಸುವ ನದಿಯಲ್ಲಿ ದೋಣಿ ವಿಹಾರ, ರಭಸವಾಗಿ ನೀರು ಹರಿಯುವ ಸ್ಥಳದಲ್ಲಿ ‘ರಿವರ್ ರ‍್ಯಾಫ್ಟಿಂಗ್’ ಹಾಗೂ ನೀರು ಧುಮ್ಮಿಕ್ಕುವ ಕಡೆ ಬಂಡೆಗಳನ್ನು ಹತ್ತಿಹೋಗುವ ಸಾಹಸ ಕ್ರೀಡೆ.’ ಹೀಗೆ ಹೇಳುತ್ತಾ ಹೇಳುತ್ತಾ ಸುಣ್ಣದ ಕಲ್ಲಿನ ಗುಹೆ ಮೌನಕ್ಕೆ ಶರಣಾಗಿತ್ತು.

Ruakuri Caves PC: Internet

ಸುಣ್ಣದ ಕಲ್ಲಿನ ಗುಹೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ನಾವು ದೋಣಿ ವಿಹಾರ ಹೊರಟೆವು. ದೋಣಿ ಸಾಗುವಾಗ ಹುಟ್ಟು ಹಾಕುವ ಸದ್ದೂ ಇರಲಿಲ್ಲ, ಮಿಂಚು ಹುಳಗಳಿಗೆ ತೊಂದರೆಯಾಗಬಾರದೆಂದು ದೋಣಿಯನ್ನು ಒಂದು ಹಗ್ಗದಿಂದ ಎಳೆಯಲಾಗುತ್ತಿತ್ತು. ತಲೆ ಎತ್ತಿ ನೋಡಿದರೆ ಸಾವಿರಾರು ನಕ್ಷತ್ರಗಳು ಫಳಫಳನೇ ಹೊಳೆಯುತ್ತಿದ್ದವು ಹಾಗೆಯೇ ಅವುಗಳಿಂದ ಮುತ್ತಿನ ಮಾಲೆಯಂತಹ ದಾರಗಳು ತೂಗು ಬಿದ್ದಿದ್ದವು. ಗಂಧರ್ವ ಲೋಕದಲ್ಲಿ ವಿಹರಿಸುತ್ತಿರುವ ಅನುಭವ ನಮ್ಮದಾಗಿತ್ತು. ನಮ್ಮ ಜೊತೆಯಿದ್ದ ವೈದ್ಯರೊಬ್ಬರು ಈ ಮಿಂಚುಹುಳಗಳ ಅದ್ಭುತವಾದ ಪ್ರೇಮಗಾಥೆಯನ್ನು ಬಣ್ಣಿಸಿದರು, ‘ಈ ಲಾರ್ವೆಗಳ ಹೊಳೆ ಹೊಳೆಯುವ ಬೆಳಕು ಏನು ಗೊತ್ತೆ? ಹೆಣ್ಣು ಗಂಡನ್ನು ಆಕರ್ಷಿಸಿ, ಲೈಂಗಿಕ ಕ್ರೀಡೆಗಾಗಿ ಅಹ್ವಾನಿಸಲು ಈ ಬಗೆಯ ಬೆಳಕನ್ನು ಬೀರುವುದು. ಮಿಂಚುಹುಳಗಳು ತಮ್ಮ ಆಹಾರಕ್ಕಾಗಿ ಕೀಟಗಳನ್ನು ಹಿಡಿದು ಭಕ್ಷಿಸಲು, ಒಂದು ಬಗೆಯ ದ್ರವವನ್ನು ಸ್ರವಿಸಿದಾಗ, ಮುತ್ತಿನ ಹಾರಗಳಂತೆ ತೂಗು ಬಿದ್ದಿರುವ ದಾರಗಳ ರಚನೆಯಾಗುತ್ತವೆ. ಅಂಟು ಅಂಟಾದ ಈ ದಾರಗಳ ಬಳಿ ಕೀಟಗಳು ಬಂದಾಗ ಸಿಕ್ಕಿ ಬಿದ್ದು, ಮಿಂಚುಹುಳಗಳಿಗೆ ಆಹಾರವಾಗುತ್ತವೆ. ಈ ಸುಣ್ಣಕಲ್ಲಿನ ಗುಹೆ ಹಾಗೂ ಮಿಂಚುಹುಳಗಳ ಸಾಂಗತ್ಯ ಭೂಗರ್ಭಶಾಸ್ತ್ರ ಹಾಗೂ ಜೀವಶಾಸ್ತ್ರದ ಅದ್ಭುತ ಸಮ್ಮಿಲನ.’ ಪ್ರಕೃತಿಯ ಅದ್ಭುತ ಸೃಷ್ಟಿಯ ವಿಸ್ಮಯಕಾರಿಯಾದ ಸಂಗತಿಗಳನ್ನು ಮನನ ಮಾಡಿಕೊಳ್ಳುತ್ತಾ ನಾವು ಮುಂದೆ ಸಾಗಿದೆವು.

ಅಂದಿನ ಪ್ರವಾಸ ಮುಗಿದಿತ್ತು, ಕೋಚ್‌ನಲ್ಲಿ ಕುಳಿತು ಲಾಡ್ಜಿಗೆ ಹಿಂದಿರುಗುವಾಗ ಸುಣ್ಣ ಕಲ್ಲಿನ ಗುಹೆಯ ಮಾತುಗಳು ಮನದಲ್ಲಿ ಪ್ರತಿಧ್ವನಿಸುತ್ತಿದ್ದವು, ‘ನೋಡು ನನ್ನನ್ನು, ಪಾತಾಳದಲ್ಲಿ ಅಡಗಿದ್ದೆ, ಜ್ವಾಲಾಮುಖಿ ಸ್ಫೋಟಿಸಿದಾಗ ಸಾಗರದಾಳದಿಂದ ಮೇಲೆದ್ದು ಬಂದೆ. ಆಗಸದೆತ್ತರಕ್ಕೆ ಬೆಳೆದು ನಿಂತೆ, ಹಸಿರುಡುಗೆ ಉಟ್ಟು ನಿಂದೆ. ನನ್ನೊಡಲೊಳಗೆ ಗುಹೆಗಳುಂಟು, ನೀರಿನ ಹೊಂಡಗಳುಂಟು, ತುಂಬಿ ಹರಿಯುವ ನದಿಗಳುಂಟು, ಭೋರ್ಗರೆಯುವ ಜಲಪಾತಗಳುಂಟು.’ ಹೌದು ಇದೊಂದು ಯಕ್ಷಿಣಿ ಲೋಕವೇ ಸರಿ. ಈ ರಮ್ಯವಾದ ಪ್ರಕೃತಿಗೆ ನನ್ನದೊಂದು ಸಲಾಂ!

ಈ ಪ್ರವಾಸಕಥನದ ಹಿಂದಿನ ಪುಟ ಇಲ್ಲಿದೆ: http://surahonne.com/?p=42973

(ಮುಂದುವರಿಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.

11 Comments on “ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-2

  1. ನಾನೂ ೨೦೨೩ರಲ್ಲಿ ಈ ಗುಹೆಗಳಿಗೆ ಪ್ರವಾಸ ಕೈಗೊಂಡು ಸಂತಸಪಟ್ಟಿದ್ದೆ.ನಿಮ್ಮ ವಿವರಣೆ ಸೊಗಸಾದ ಕಾವ್ಯಭಾಷೆಯಿಂದ ಆಕರ್ಷಿಸುತ್ತದೆ.

  2. ಆಕರ್ಷಕ ಬರಹ.ನಾನೂ ೨೦೨೩ರಲ್ಲಿ ಈ ಗುಹೆಗಳಿಗೆ ಭೇಟಿ ನೀಡಿ ಸಂತಸಪಟ್ಟಿದ್ದೆ

  3. ಪ್ರವಾಸ ಕಥನ ಓದಿಸಿಕೊಂಡುಹೋಯಿತು ಎಂದಿನಂತೆ ಸೊಗಸಾದ ನಿರೂಪಣೆ.. ಸೂಕ್ತ ಚಿತ್ರ ಗಳು ಮನಸೆಳೆದವು ಧನ್ಯವಾದಗಳು ಮೇಡಂ

  4. ನಾವೆಲ್ಲಾ ಪ್ರಯಾಣಿಸದೇ ಪ್ರವಾಸ ಮಾಡಿದೆವು.
    ಖರ್ಚು ಆಯಾಸವಿಲ್ಲದೇ, ಇದಲ್ಲವೇ ಬೆನಿಫಿಟ್ಟು!

    ಬೇರೆ ಬೇಕೆ ಅಫಿಡೆವಿಟ್ಟು !?

  5. ಲೇಖನವನ್ನು ಓದಿ ಪ್ರತಿಕ್ರಿಯಿಸಿದ ಎಲ್ಲಾ ಸಹೃದಯ ಓದುವರಿಗೂ ನನ್ನ ಮನ ಪೂರ್ವಕ ವಂದನೆಗಳು

  6. ರಮಣೀಯ ಗುಹೆಯೊಳಗಿನ ಪ್ರವಾಸ ಚೆನ್ನಾಗಿತ್ತು ಮೇಡಂ. ಅಮೆರಿಕದಲ್ಲಿ ಲಾವಾ ಗುಹೆಯೊಳಗೆ ಓಡಾಡಿದ ನೆನಪು ಮರುಕಳಿಸಿತು. ನಿರೂಪಣೆ ಸೂಪರ್.

  7. ಲೇಖನ ಅತ್ಯಂತ ಮುದ ನೀಡಿತು. ಸುಣ್ಣ ಕಲ್ಲಿನ ಗುಹೆಗಳ ಸ್ವಗತ ನಿಮ್ಮ ಲೇಖನಿಯಲ್ಲಿ ನಲಿದಾಡಿತು.

Leave a Reply to Hema Mala Cancel reply

 Click this button or press Ctrl+G to toggle between Kannada and English

Your email address will not be published. Required fields are marked *