ಬೆಳಕು-ಬಳ್ಳಿ

ಮೌನ

Share Button

ರಸ್ತೆಯ ಗೇಟಿಗೆ ಮುಖಮಾಡಿದ ಕುರ್ಚಿ
ಮಾವಿನೆಲೆಗಳ, ದಾಸವಾಳ ಹೂಗಳ ಜೊತೆ
ದಿನಗಳ ಲೆಕ್ಕವ ನಿಧಾನಕೆ ಕಳೆಯುತಿದೆ.

ಕ್ಷಣಮಾತ್ರದಿ ಮನೆಸೇರುವ ಕಾತುರದಿ,
ಹುಡುಗರ ಚಪ್ಪಲಿಯ ಸದ್ದು,
ಗೋಡೆಯ ಬಿರುಕುಗಳಲಿ ಅರಳಿದ ಅರಳಿ
ಮರವನ್ನು ಕೆಣಕಲು,
ಹಲ್ಲು ಕಾಣದ ಬಾಯಿ ಮೃದುವಾಗಿ ನಕ್ಕಿದೆ.

ಪದಗಳಾಟದಿ ಅಕ್ಷರ ಸೇರದ ಚೌಕಗಳು,
ಹಠಾತ್ತನೆ ಫ್ಯಾನ್ ರೆಕ್ಕೆಗಳಿಂದ,
ಧೂಳಾಗಿ ಕೆಳಗೆ ಬಿದ್ದಿವೆ.

ಇರುವ ಸ್ಥಳಕ್ಕೂ ಸೇರಬೇಕಾದ ಗಮ್ಯಕ್ಕೂ,
ಚಕ್ರಗಳ ಸದ್ದಾಗಿ ಕರಗಿದ ಕಾಲದ
ನೆನಪುಗಳು ಮೆಲುಕು ಹಾಕಿವೆ.

ಒಂದೇ ಒಂದು ಜೊತೆ ಬಟ್ಟೆಗಳ ಹೊತ್ತು,
ಒಂಟಿ ಹಿತ್ತಲ ಕಂಬಿಯು
ಮಳೆಹನಿಗಳ ಹಾರವ ಧರಿಸಿ,
ತುಳಸಿ ಕಟ್ಟೆಗೆ ಸುಣ್ಣ ಬಳಿಯಲು
ಅರ್ಜಿಯ ಸಲ್ಲಿಸಿದೆ.

ಅಡುಗೆಮನೆಯ ಚಿಕ್ಕ ಪಾತ್ರೆಗಳು,
ಎದುರು ಮನೆಯ ಅಂಗಳದ ಮಕ್ಕಳಂತೆ,
ದಾಸ್ತಾನು ಕೋಣೆಯ ದೊಡ್ಡ ಪಾತ್ರೆಗಳನು
ನೋಡಿ ಮಂದಹಾಸ ಬೀರಿವೆ.

ಮಧ್ಯಾಹ್ನದ ಒಂದು ಗಂಟೆಗೆ, ಒಂಟಿ ಕೋಗಿಲೆ,
ರಾತ್ರಿ ನುಂಗುವ ನಿದ್ರೆ ಮಾತ್ರೆಗಳ ಹೆಸರು
ಪಿಸುಗುಟ್ಟಿ ತಳಮಳವ ಹೆಚ್ಚಿಸಿದೆ.

ನಿಶ್ಯಬ್ಧವು ತನ್ನ ಮನೆಯಲಿ ಸಿಲುಕಿಕೊಂಡು,
“ನನಗೇನು? ಚೆನ್ನಾಗಿದ್ದೇನೆ,” ಎಂದು
ಸುಳ್ಳು ಹೇಳುತಿದೆ.

ವಯಸ್ಸಾದ ಮನೆಯಂಗಳದಲ್ಲಿ,
ಹಗಲುಗನಸುಗಳ ಸಾಮ್ರಾಜ್ಯ ವಿಸ್ತರಿಸಿದೆ.

ತೆಲುಗು ಮೂಲ : ಡಾ|| ಕಾಳ್ಳಕೂರಿ ಶೈಲಜ
ಕನ್ನಡ ಅನುವಾದ: ಕೊಡೀಹಳ್ಳಿ  ಮುರಳೀಮೋಹನ್

11 Comments on “ಮೌನ

  1. ಮೌನದ ಬಗ್ಗೆ ಹೊಸ ನೋಟ ಬಹಳ ವಿಶೇಷವಾಗಿದೆ.
    ಕೊನೆಯ ಸಾಲುಗಳು ಇಡಿ ಕವಿತೆಯ ಸಾರವನ್ನು ಬಿಂಬಿಸಿದೆ..

  2. ನನಗಿಷ್ಟವಾದ ಕವಿ ವಾಸುದೇವ ನಾಡಿಗರು ಗುರುತಿಸಿದಂತೆ
    ಮೌನದ ಮೆಹನತ್ತು, ಅದರ ತಾಕತ್ತು ಸೊಗಸಾಗಿ ವಿನೂತನವಾಗಿ ಬಂದಿದೆ.

    ಕೊನೆಯ ಎರಡು ಸಾಲುಗಳ ಸಾಲದಿಂದಲೇ ಉಳಿದವನ್ನು
    ಅರ್ಥೈಸಿಕೊಳ್ಳುವ ಜುಲುಮೆ ನಮಗಾಗಿದೆ !

    ಅಬ್ಬಾ ! ವಯಸೂ ಅನುಭವವೂ ಕೂಡಿ ಕೊಂಡ, ಕೊಂಡು ಕೊಂಡ
    ಸಿರಿವಂತಿಕೆ; ಪ್ರತಿ ಪದವೂ ಶೋಧ; ಸಂಶೋಧ; ಮನಕೆ ಬೋಧ !!

    ಧನ್ಯವಾದಗಳು

  3. ಮೌನವನ್ನು ಮೌನವಾಗಿ ಸವಿಯುವ ಸುಂದರ ಕವನ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *