ವಿಜ್ಞಾನ

ಕಂಪ್ಯೂ ಬರೆಹ : ತಾಂತ್ರಿಕ ತೊಡಕು ಮತ್ತು ತೊಡಗು :- ಭಾಗ 3

Share Button

ಈಗಂತೂ ಬಹುತೇಕ ಹೊಸ ತಲೆಮಾರಿನ ಲೇಖಕರು ನೇರವಾಗಿ ಕಂಪ್ಯೂಬರೆಹವನ್ನೇ ಟೈಪಿಸುವವರು; ಹಳಬರು ಮತ್ತು ಸೃಜನಶೀಲ ಕೃತಿಗಳನ್ನು ರಚಿಸುವವರು ಮಾತ್ರ ಇನ್ನೂ ಬಿಳಿಹಾಳೆ, ನೋಟ್‌ಪುಸ್ತಕಗಳನ್ನು ಬಳಸುತ್ತಿದ್ದಾರೆ. ನನ್ನ ಅನುಭವದ ಮೂಲಕ ಮಾತಾಡುವುದಾದರೆ, ನೇರವಾಗಿ ಕಂಪ್ಯೂಟರಿನಲ್ಲಿ ಟೈಪಿಸುವುದೇ ಎಲ್ಲ ರೀತಿಯಲ್ಲೂ ಅನುಕೂಲಕಾರಿಯಾಗಿದೆ. ಬರೆದು ಮತ್ತದನ್ನು ಟೈಪಿಸುವುದು ಕೆಲಸದ ಪುನರಾವೃತ್ತಿ ಎನಿಸಿದೆ. ಬರೆಯಲು ಕುಳಿತರೆ ಅದಕ್ಕೇ ಗಮನವೀಯಬೇಕು ಮತ್ತು ಅದಕ್ಕಾಗಿ ಕುಳಿತುಕೊಳ್ಳಬೇಕು. ಆದರೆ ವೃತ್ತಿ ನಿಮಿತ್ತ ಬೇರೆ ಬೇರೆ ಕೆಲಸಗಳನ್ನು ಕಂಪ್ಯೂಟರ್ ಬಳಸಿ ಆನ್‌ಲೈನಿನಲ್ಲೇ ಮಾಡಬೇಕಾದ ಕಾರಣ, ಬೆಳಗಿನಿಂದ ಸಂಜೆಯವರೆಗೂ ಸಿಸ್ಟಮ್ ಆನ್ ಆಗಿಯೇ ಇರುವುದರಿಂದ ನಡು ನಡುವೆ ಕೊಂಚ ಬಿಡುವು ಸಿಕ್ಕಿ, ‘ಸ್ವಂತದ್ದು ಏನಾದರೂ ಬರೆಯಬೇಕು’ ಎನಿಸಿದಾಗ ಇದು ಸುಲಭ. ಬರೆಯುತ್ತಿರುವುದನ್ನು ಹಾಗೆಯೇ ಮಿನಿಮೈಸ್ ಮಾಡಿ, ಬೇರೆ ಕೆಲಸ ಮಾಡಬಹುದು; ಹಾಗೆಯೇ ಬಿಟ್ಟು ಎದ್ದು ಹೋಗಬಹುದು; ಒಟ್ಟಿನಲ್ಲಿ ಇದು ಬಳಕೆದಾರ ಸ್ನೇಹಿ ಮಾತ್ರವಲ್ಲ; ಬರೆಹಗಾರ ಸ್ನೇಹಿ ಕೂಡ. ಇಷ್ಟು ಮಾತ್ರವಲ್ಲದೇ ಮೈಕ್ರೋಸಾಫ್ಟ್‌ನ ಒನ್ ಡ್ರೈವ್‌ನಲ್ಲಿರುವ ಅನುಕೂಲತೆಯೆಂದರೆ, ಮೈಕ್ರೋಸಾಫ್ಟ್‌ ಔಟ್‌ಲುಕ್ ಇಮೇಲ್ ಹೊಂದಿರುವ ಯಾರಿಗೇ ಆದರೂ ಇನ್ನೊಂದು ಸಿಸ್ಟಮಿನಲ್ಲಿ ತಮ್ಮ ಕಡತಗಳನ್ನು ನೋಡಬಹುದು ಮತ್ತು ಎಡಿಟ್ ಮಾಡಬಹುದು!

ನಾನು ಕಾಲೇಜಿನಲ್ಲಿ ಬಳಸುವ ಡೆಸ್ಕ್‌ಟಾಪ್‌ನಲ್ಲಿರುವ ಕಡತಗಳನ್ನು ಮನೆಯಲ್ಲಿರುವ ಲ್ಯಾಪ್‌ಟಾಪ್‌ನಲ್ಲೂ ಓಪನಿಸಿಕೊಂಡು, ಅರ್ಧಂಬರ್ಧ ಬರೆದದ್ದನ್ನು ಪೂರ್ಣಗೊಳಿಸುತ್ತೇನೆ. ಹಾಗಾಗಿ ಬರೆದದ್ದು ಅಳಿಸಿ ಹೋದೀತು, ಒಂದು ಲೇಖನ ಶುರುವಿಟ್ಟುಕೊಂಡಿದ್ದು ಅಲ್ಲಿಯೇ ಉಳಿಯಿತು ಎಂಬ ಭಯಾತಂಕವಿಲ್ಲ. ಒಂದಂತೂ ಸತ್ಯ: ನಂನಮ್ಮ ಪ್ರವೃತ್ತಿಯನ್ನು ರೂಪಿಸಿಕೊಂಡ ಮೇಲೆ ಆಧುನಿಕ ತಾಂತ್ರಿಕ ಸಲಕರಣೆಗಳನ್ನು ಬಳಸಿಕೊಂಡು ವೃತ್ತಿ ಮತ್ತು ಪ್ರವೃತ್ತಿ- ಎರಡನ್ನೂ ಹೇಗೆ ಸುಲಭ ಮತ್ತು ಸರಳಗೊಳಿಸಿಕೊಳ್ಳಬಹುದೆಂಬುದನ್ನು ನಾವೇ ಕಂಡುಕೊಳ್ಳಬೇಕು. ನನ್ನ ವಿಚಾರದಲ್ಲಿ ಬೆಳಗಿನ ಒಂಬತ್ತು ಗಂಟೆಯಿಂದ ಸಂಜೆ ಆರೇಳು ಗಂಟೆಯವರೆಗೆ ಸತತ ಹತ್ತು ಗಂಟೆಗಳ ಕೆಲಸದ ಅವಧಿಯಲ್ಲಿ ಕಾಲೇಜಿನ ನನ್ನ ಪಾಲಿನ ಬೋಧನೆ, ವಿಭಾಗಮುಖ್ಯಸ್ಥತನ, ಸ್ನಾತಕೋತ್ತರ ತರಗತಿಗಳ ಸಂಯೋಜಕತ್ವ, ಆಂತರಿಕ ಗುಣಮಟ್ಟ ನಿರ್ವಹಣಾ ಕೋಶ (ಐಕ್ಯುಎಸಿ) ಮೊದಲಾದ ಸಮಿತಿಗಳ ಪಾಲಿನ ಕೆಲಸ, ಸಹೋದ್ಯೋಗಿಗಳಿಗೆ ನೆರವು, ವಿದ್ಯಾರ್ಥಿಗಳಿಗೆ ನೆರವು ಮತ್ತು ಮಾರ್ಗದರ್ಶನ, ವಿಶೇಷೋಪನ್ಯಾಸ-ಪಠ್ಯೇತರ ಕಾರ್ಯಕ್ರಮಗಳು, ಗ್ರಂಥಾಲಯದಲ್ಲಿ ಪರಾಮರ್ಶನ ಮತ್ತು ಪೂರ್ವಸಿದ್ಧತೆ, ಪ್ರಾಚಾರ್ಯರು ಮತ್ತು ಆಡಳಿತಾಂಗಕ್ಕೆ ನೆರವು, ಕಛೇರಿಯೊಂದಿಗೆ ಸಂಪರ್ಕ, ಕೆಲಸ ನಿರ್ವಹಿಸಿದ್ದರ ಡಿಜಿಟಲ್ ದಾಖಲೀಕರಣ, ಹೊಸತನ್ನು ಕಲಿಯುವುದು ಈ ಎಲ್ಲವುಗಳ ಜೊತೆಗೇನೇ ಬಿಡುವು (ಸಿಗುವುದಿಲ್ಲ; ಮಾಡಿಕೊಳ್ಳಬೇಕು!) ಸಿಕ್ಕಾಗಲೆಲ್ಲಾ ಸ್ವಂತ ಲೇಖನ ವ್ಯವಸಾಯವನ್ನೂ ಮಾಡುವ ಸುಯೋಗ. ಮನೆಗೆ ಬಂದ ಮೇಲೆ ಅಗತ್ಯ ಬಿದ್ದರೆ ಮತ್ತು ಸಮಯಾವಕಾಶ ಒದಗಿದರೆ ಕಾಲೇಜಿನ ಕೆಲಸವನ್ನು ಮಾಡುವುದು ಅಥವಾ ಅಧ್ಯಯನ. ತಡರಾತ್ರಿ ಒಂದು ಹಂತದ ನಿದ್ದೆ ಮುಗಿದು ಎದ್ದ ಗಳಿಗೆಯಲ್ಲಿ ಬೆಳಗಿನ ಜಾವದವರೆಗೂ ಲೇಖನ ವ್ಯವಸಾಯ. ಹಾಗಾಗಿ ನನಗೆ ಕಾಲೇಜಿಗೂ ಮನೆಗೂ ಯಾವ ವ್ಯತ್ಯಾಸವೇ ಇಲ್ಲ; ಇದೆಲ್ಲ ಸಾಧ್ಯವಾಗುವುದು ಆನ್ಲೈನ್ ಡ್ರೈವ್ಗಳಲ್ಲಿ ಸೇವ್ ಮಾಡಿಟ್ಟ ಎಂ ಎಸ್ ಆಫೀಸ್  ಕಡತಗಳಿಂದ. ಆನ್‌ಲೈನ್ ಡ್ರೈವ್‌ಗಳನ್ನು ಬಳಸಿಕೊಳ್ಳುವ ಚಾತುರ್ಯ ತಿಳಿಯುವ ಮುಂಚೆ ಟೈಪಿಸಿದ್ದನ್ನು ಪೆನ್‌ಡ್ರೈವ್‌ಗೆ ಹಾಕಿಕೊಳ್ಳುವುದು, ಸ್ವಂತ ಮೇಲ್‌ಗೆ ರವಾನಿಸಿಕೊಳ್ಳುವುದು, ಟೈಪಿಸಿದ್ದನ್ನು ಪ್ರಿಂಟ್ ತೆಗೆದುಕೊಂಡು ಪರಿಶೀಲಿಸುವುದು ಇವೆಲ್ಲಾ ಕಸರತ್ತುಗಳ ಕಾರ್ಖಾನೆಯಿಂದಲೇ ಸಮಯ ತಿನ್ನುತ್ತಿತ್ತು. ಈಗ ನಿರಾಳ ಮತ್ತು ನಿರಾತಂಕ. ಅಂತಿಮ ಮಾತೆಂದರೆ, ನಮ್ಮ ಕೆಲಸ ಕಾರ್ಯಗಳ ಆದ್ಯತಾನುಸಾರ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು. ಈ ಎಚ್ಚರ ನಮ್ಮಲ್ಲಿದ್ದರೆ ಸಾಕು. ಏಕೆಂದರೆ, ಕಂಪ್ಯೂಟರ್ ಆಗಲೀ, ಮೊಬೈಲ್ ಫೋನಾಗಲೀ ನಮ್ಮನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ಕಂಗಾಲಾಗಿಸಿ ಬಿಡುತ್ತದೆ. ಬರೀ ಇನ್ನೊಬ್ಬರು ಅಪ್‌ಲೋಡಿಸಿದ್ದನ್ನು ಡೌನ್‌ಲೋಡಿಸುವುದು, ಆಪ್ತೇಷ್ಟರಿಗೆ ಕಳಿಸುವುದು ಇವೇ ಸರ್ಕಸ್ಸು; ಸ್ವಂತ ಸೃಷ್ಟಿಶೀಲ ವಿಚಾರಶೀಲ ಬರೆಹಗಳಿಗೆ ಮುಗಿದ ಆಯಸ್ಸು!

ಲೇಖನಿಯ ಮೂಲಕ ಬರೆಯುವಾಗಿನ ಚಿಂತನಧಾಟಿಗೂ ಕಂಪ್ಯೂಟರಿನಲ್ಲೇ ನೇರವಾಗಿ ಟೈಪಿಸುವಾಗಿನ ಆಲೋಚನಾಧಾಟಿಗೂ ವ್ಯತ್ಯಾಸವಿದೆಯೇ? ಅಥವಾ ವ್ಯತ್ಯಾಸವಾಗುತ್ತದೆಯೇ? ಎಂದು ಕೇಳಿಕೊಂಡರೆ ಉತ್ತರ ಸ್ಪಷ್ಟವಿಲ್ಲ. ಇಂಥದೊಂದು ಅನುಭವವು ಸಾಪೇಕ್ಷವೇ ವಿನಾ ನಿರಪೇಕ್ಷವಲ್ಲ. ಅವರವರಿಗೆ ಸರಿ ಕಂಡ ಅನುಕೂಲ ಎಂದೇ ಹೇಳಬೇಕಾಗುತ್ತದೆ. ಟೈಪು ಮಾಡುವಾಗ ಅಲ್ಲಲ್ಲಿಯೇ ಸೇರಿಸುವ, ತಿದ್ದುವ, ಡಿಲೀಟಿಸುವ ಸೌಕರ್ಯ ಇರುವುದರಿಂದ ಕಂಪ್ಯೂಬರೆಹವು ವಿಚಾರ ಸಂಗತಿಗಳ ಓತಪ್ರೋತ ಗುಣಕ್ಕೇನೂ ಅಡ್ಡಿ ಮಾಡುವುದಿಲ್ಲ. ಕಾಗದದಲ್ಲಿ ಬರೆಯುವುದಕಿಂತಲೂ ವೇಗವಾಗಿ ಟೈಪು ಮಾಡುವ ಕೌಶಲ್ಯ ನಮಗಿದ್ದರೆ ಇದೇ ಸುಲಭವೆನಿಸೀತು. ಕೈಯಲ್ಲಿ ಬರೆಯುತ್ತಿದ್ದರೆ ನೋಡಿದವರು ಹೆಚ್ಚು ಡಿಸ್ಟರ್ಬ್ ಮಾಡಲಾರರು; ಆದರೆ ಕಂಪ್ಯೂಟರಿನಲ್ಲಿ ಟೈಪಿಸುವವರಿಗೆ ಅಡಚಣೆ ಜಾಸ್ತಿ; ಜೊತೆಗೆ ಆಕರ್ಷಣೆಯೂ! ಟೈಪು ಮಾಡದೇ ಅಲ್ಲಿಗೇ ನಿಲ್ಲಿಸಿ, ಸೋಷಿಯಲ್ ಮೀಡಿಯಾಗೆ ನೆಗೆದು ಬಿಡುವುದು, ಮೇಲ್ ಚೆಕ್ ಮಾಡುವುದು, ಪಾಪ್ ಅಪ್‌ಗಳ ಲಿಂಕು ತೆರೆಯುವುದು ಹೀಗೆ ಹೂವಿಂದ ಹೂವಿಗೆ ಹಾರುವ ದುಂಬಿ ಹುಚ್ಚುಖೋಡಿ ಮನಸು! ಕೈ ಬರೆವಣಿಗೆಯಾದರೆ ಮುಕ್ತಾಯವಾದ ಮೇಲೆ ಒಂದಲ್ಲ ಎರಡು ಬಾರಿ ಓದಿ, ತಿದ್ದುಪಡಿಗಳನ್ನು ಮಾಡುವ ಅವಕಾಶ ಮತ್ತು ಆಸಕ್ತಿ ಮೂಡುತ್ತದೆ. ಕಂಪ್ಯೂಬರೆಹವಾದರೆ ತಿದ್ದುಪಡಿ ಹೆಚ್ಚಿರುವುದಿಲ್ಲ; ಟೈಪು ಮಾಡುವಾಗಲೇ ತಿದ್ದುಪಡಿ ಕಾರ್ಯ ಅವ್ಯಾಹತವಾಗಿ ನಡೆದು ಬಿಟ್ಟಿರುತ್ತದೆ. ಆದರೆ ವಿಚಾರಗಳ ಸಾತತ್ಯಕ್ಕೆ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಬರೆಯುವಾಗಲೂ ಟೈಪು ಮಾಡುವಾಗಲೂ ತಲೆಯಲ್ಲಿ ವಿಚಾರತರಂಗಗಳು ಇಡಿಕಿರಿಯುವುದು ಸಾಮಾನ್ಯ. ಯಾವ ಕೋನವನ್ನು ಆಯ್ಕೆ ಮಾಡಿಕೊಂಡು ಮುಂಬರಿಯಬೇಕು? ಯಾವ ದೃಷ್ಟಿಯನ್ನು ಪಕ್ಕಕ್ಕೆ ಸರಿಸಬೇಕು? ಎಂಬ ಆಯ್ಕೆ ಸಹ ಎರಡರಲ್ಲೂ ಒಂದೇ. ಅಲ್ಲಿ ಲೇಖನಿಯಿಂದ ಬರೆಯುತ್ತೇವೆ; ಇಲ್ಲಿ ಟೈಪಿಸುತ್ತೇವೆ ಅಷ್ಟೇ ಎಂಬುದು ನನ್ನ ಅನುಭವದ ಅನಿಸಿಕೆ. ನಾವು ಹೇಗೆ ಅಭ್ಯಾಸ ಮಾಡಿಕೊಂಡಿರುತ್ತೇವೆಯೋ ಅದು ಹೆಚ್ಚು ಇಷ್ಟವಾಗುವುದು ಲೋಕಾರೂಢಿ. ಈಗಂತೂ ವಾಯ್ಸ್ ಟೈಪಿಂಗ್ ಕಾಲ. ಸ್ಪೀಚ್‌ ಟು ಟೆಕ್ಸ್‌ಟ್‌ ಮತ್ತು ಟೆಕ್ಸ್‌ಟ್‌ ಟು ಸ್ಪೀಚ್‌ ಎರಡೂ ಸೌಲಭ್ಯಗಳಿವೆ. https://huggingface.co/spaces/ai4bharat/IndicF5 ಎಂಬ ಅಂತರ್ಜಾಲ ಪುಟದಲ್ಲಿ ಉತ್ತಮ ಗುಣಮಟ್ಟದ ಇಂಥ ಸೇವೆ ದೊರೆಯುತ್ತಿದೆ. ಈ ಸಂಬಂಧ ಹಲವು ಉಚಿತ ತಂತ್ರಾಂಶಗಳಿವೆ; ಮೊಬೈಲ್‌ ಫೋನ್‌ ಅಪ್ಲಿಕೇಶನ್‌ಗಳಿವೆ. ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪುಗಳಲ್ಲಿ ಈಗಾಗಲೇ ಈ ಸೌಲಭ್ಯವಿದೆ. ನಂನಮ್ಮ ಇಮೇಲ್ ಮೂಲಕ ಲಾಗಿನ್ ಆದ ಗೂಗಲ್ ಡ್ರೈವ್‌ನಲ್ಲಿ ವಾಯ್ಸ್ ಟೈಪಿಂಗ್ ಆಯ್ಕೆ ಇದೆ. ಗೂಗಲ್ ಡಾಕ್ಸ್ ತೆರೆದು ಅಲ್ಲಿನ ವಾಯ್ಸ್ ಟೈಪಿಂಗ್ ಓಪನಿಸಿ, ಹೇಳುತ್ತಾ ಹೋದರೆ ಅದು ಬರೆದುಕೊಳ್ಳುತ್ತಾ ಹೋಗುತ್ತದೆ. ಬಾಯಲ್ಲಿ ಮಾತಾಡುವುದು ಮತ್ತು ಕೈಯಲ್ಲಿ ಟೈಪಿಸುವುದು ಎರಡೂ ಮೂಲಭೂತವಾಗಿ ಬೇರೆ. ಮೊದಲನೆಯದು ಬಾಹ್ಯ; ಎರಡನೆಯದು ಆಂತರಂಗಿಕ. ಬರೆಹವು ಯಾವತ್ತೂ ಏಕಾಂತದಲ್ಲಿ ಸೃಷ್ಟಿಯಾಗುವ ಲೋಕಾಂತ; ಜಗದ ಒಳ ಹೊರಗನ್ನು ತೆರೆದು ತೋರುವ ಅಯಸ್ಕಾಂತ!

ಹಾಗಿರುವಾಗ ಭಾಷಣೋಪನ್ಯಾಸಗಳನ್ನು ಲೇಖನರೂಪವಾಗಿಸುವಾಗ ಇದು ಸೂಕ್ತ; ಉಳಿದಂತೆ ಟೈಪಿಸುವುದರಲ್ಲೇ ಆಸಕ್ತ. ನಾನಂತೂ ಕಗಪದ ನುಡಿ 5.0 ಹಾಗೂ ನುಡಿ 6.0 ಎರಡೂ ತಂತ್ರಾಂಶಗಳನ್ನು ದಿನನಿತ್ಯ ಬಳಸುತ್ತೇನೆ. ಯುನಿಕೋಡ್‌ಗಿಂತ ನುಡಿಯಲ್ಲಿ ಟೈಪಿಸುವುದೇ ಹೆಚ್ಚು ಇಷ್ಟ ಮತ್ತು ಸರಾಗ. ಅಗತ್ಯ ಬಿದ್ದಾಗ ಅರವಿಂದ ಅವರ ‘ಸಂಕ’ದ ಮೂಲಕ ಯುನಿಕೋಡಿಗೆ ಪರಿವರ್ತನೆ ಮಾಡಿಕೊಳ್ಳುತ್ತೇನೆ. ಆದರೆ ನೂತನ ಒಎಸ್‌ಗಳಲ್ಲಿ ನುಡಿಯ ಕಡತಗಳು ಕೇವಲ ರೀಡ್‌ ಓನ್ಲಿ! ಯುನಿಕೋಡ್ ಹಾಗಲ್ಲ; ಅದರ ಹೆಸರೇ ಹೇಳುವಂತೆ ಸರ್ವಾಂತರ್ಯಾಮಿ. ಒಟ್ಟಿನಲ್ಲಿ ಇದು ನನ್ನ ಬರೆಹದ ಪ್ರಯಾಣದನಿಸಿಕೆ. ಇನ್ನೊಬ್ಬರದು ಇದಕಿಂತ ವಿಭಿನ್ನವೂ ಆಗಿರಬಹುದು ಮತ್ತು ವಿರುದ್ಧವೂ ಆಗಿರಬಹುದು. ಆಯ್ಕೆಗಳು ಹೆಚ್ಚಿದ್ದಷ್ಟೂ ಗೊಂದಲ ಸಹಜ; ತಂತ್ರಜ್ಞಾನವು ಮುಂದುವರೆದ ಹಾಗೆ, ಹೊಸ ತೊಡಕುಗಳು ಎದುರಾಗುತ್ತಿರುತ್ತವೆ. ಅವನ್ನು ಜಾಣುಮೆ ಮತ್ತು ತಾಳುಮೆಗಳಿಂದ ನಿವಾರಿಸಿಕೊಳ್ಳಬೇಕು. ಇಕ್ಕಟ್ಟು ಮತ್ತು ಬಿಕ್ಕಟ್ಟುಗಳು ಎದುರಾದಾಗಲೆಲ್ಲಾ ಮೊದಲು ಗೂಗಲಿಗೆ ಕೇಳುತ್ತಿದ್ದೆ. ಈಗ ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದ್ದೇನೆ. ಚಾಟ್‌ ಜಿಪಿಟಿಯಂಥ ಕೃತಕ ಬುದ್ಧಿಮತ್ತೆಗೆ ಕೇಳುತ್ತೇನೆ. ಪರಿಹರಿಸುವ ವಿಧಾನವನ್ನೂ ಅದಕ್ಕನುಗುಣವಾದ ತಂತ್ರಾಂಶದ ಕೊಂಡಿಯನ್ನೂ ಕೊಡುತ್ತದೆ. ಬಳಸಿಕೊಳ್ಳುತ್ತೇನೆ. ನನ್ನ ಲೇಖನಕ್ಕೆ ಚಿತ್ರಗಳನ್ನು ಹುಡುಕಿ ಕೊಡುವುದೂ ಇದೇ! ಕಳೆದ ಒಂದು ತಿಂಗಳ ಹಿಂದೆ ಮರಾಠಿ ಭಾಷೆಯ ಪಿಡಿಎಫ್‌ ರೂಪದ ಕುಂಡಲಿ ಸಹಿತ ಜಾತಕವೊಂದನ್ನು ಕನ್ನಡಕ್ಕೆ ತಂದುಕೊಳ್ಳಬೇಕಾಗಿತ್ತು. ಏಐಗೆ ವಹಿಸಿದೆ. ಒಂದು ನಿಮಿಷದಲ್ಲಿ ನಾನು ಕೇಳಿದ ವಿನ್ಯಾಸದಲ್ಲಿ ಕೊಟ್ಟಿತು. ಇದಲ್ಲವೇ ಒಲವು ಮತ್ತು ಗೆಲುವು! ಲೋಕದಲ್ಲಿ ಎಲ್ಲವೂ ಅಷ್ಟೇ. ಸ್ವಲ್ಪ ದಿನ ಕಾಯುವಂತಾದರೆ ಪರಿಹಾರಗಳೂ ಸಿಗುತ್ತವೆ. ನಿಧಾನವಾಗಿರುವುದನ್ನು ಕಲಿಯಬೇಕಷ್ಟೇ. ಈ ವಿಚಾರದಲ್ಲಿ ಕಾಯುವುದೇ ತಪ್ಪಂ ಅಲ್ಲ; ‘ಕಾಯುವುದು ತಪಂ!’ ಏಐ ಈಗ ಭಾವನಾತ್ಮಕತೆಯನ್ನೂ ಅಳವಡಿಸಿಕೊಳ್ಳುತ್ತಿದೆ, ನಮ್ಮ ಹಾಗೆಯೇ! ಎರಡೂ ಪ್ಲಸ್‌ ಎರಡೂ ಒಟ್ಟು ನಾಲ್ಕು. ಆದರೆ ನಮ್ಮ ಬಾಸ್‌ ಐದು ಎನ್ನುತ್ತಿದ್ದಾರಲ್ಲ! ಎಂದು ಅದಕ್ಕೊಂದು ಪ್ರಶ್ನೆ ಎಸೆದೆ. ಆಗ ಅದು ನಿನ್ನ ಉತ್ತರ ಸರಿ; ಆದರೆ ನಿನ್ನ ಬಾಸ್‌ನ ಉತ್ತರ ಹೆಚ್ಚು ಸರಿ. ಏಕೆಂದರೆ ನಿನ್ನ ಬಾಸ್‌ ಹೇಳುವುದನ್ನು ಕೇಳಿಸಿಕೊ, ಇದು ನಿನ್ನ ಮಾನಸಿಕ ನೆಮ್ಮದಿಗೆ ಸೋಪಾನ. ವಾದ ಮಾಡಬೇಡ ಎಂದು ಬುದ್ಧಿ ಹೇಳಿತು. ಹಾಗಾಗಿ ಇದು ಯಾಂತ್ರಿಕ ಕಾಲವಲ್ಲ; ಮಾಂತ್ರಿಕ ಕಾಲ!          

ಈ ಬರಹದ ಹಿಂದಿನ ಕಂತು ಇಲ್ಲಿದೆ :http://surahonne.com/?p=42941

(ಮುಗಿಯಿತು)

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ                                                      

11 Comments on “ಕಂಪ್ಯೂ ಬರೆಹ : ತಾಂತ್ರಿಕ ತೊಡಕು ಮತ್ತು ತೊಡಗು :- ಭಾಗ 3

  1. ಉತ್ತಮ ಮಾಹಿತಿ ಯಳ್ಳ ಬರೆಹ ಅದರಲ್ಲಿ ಎರಡು ಮಾತಿಲ್ಲ ಅದನ್ನು ಬಳಸಿಕೊಳ್ಳುವುದು ಬಿಡುವುದು ನಮಗೆ ಸೇರಿದ್ದು.. ಹಂತ ಹಂತವಾಗಿ ಪ್ರಯತ್ನ ಮಾಡೋಣ ಎಂದುಕೊಂಡಿದ್ದೇನೆ.. ಆದರೆ ಬರೆಹ ಮಾತ್ರ ಈಗಲೂ ನಾನು ಹಾಳೆಯ ಮೇಲೆ ಬರೆದೇ ಆನಂತರ ಟೈಪಿಗುಳಿಯುವುದು ನನ್ನ ಅನ್ನದಾತ

    1. ಧನ್ಯವಾದ. ಹಂತಹಂತವಾಗಿಯೇ ಪ್ರಯತ್ನಿಸಿ. ಶುಭವಾಗಲಿ

  2. ಉತ್ತಮ ಮಾಹಿತಿ ಯುಳ್ಳ ಬರೆಹ ಕೊಟ್ಟಿದಕ್ಕೆ ಧನ್ಯವಾದಗಳು ಮಂಜು ಸಾರ್.. ಉಪಯೋಗಿಸಿ ಕೊಳ್ಳುವುದು ಬಿಡುವುದು ನಮಗೆ ಸೇರದ್ದು..ಪಾಠ ಮಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ..

    1. ಪ್ರಣಾಮಗಳು ಮೇಡಂ….ಇದು ನನಗೆ ನಾನೇ ಮಾಡಿಕೊಂಡ ಪಾಠ !

  3. ಕನ್ನಡ ಟೈಪಿಂಗ್ ಕುರಿತು ಸಾಕಷ್ಟು ಮಾಹಿತಿಗಳನ್ನು ಹೊತ್ತ ತಮ್ಮ ಲೇಖನಮಾಲೆ ಬಹಳ ಉಪಯುಕ್ತವಾಗಿದೆ… ಧನ್ಯವಾದಗಳು.

    1. ಧನ್ಯವಾದ ಮೇಡಂ, ಒಂಚೂರು ನಿಮಗೆ ನೆರವಾದರೆ ನನ್ನ ಟೈಪಿಂಗು ಸಾರ್ಥಕ.
      ಸುರಹೊನ್ನೆ ನಮ್ಮ ನಡುವಿನ ಸೇತು;
      ಇದು ಯಾವತ್ತೋ ಗೊತ್ತಾಯ್ತು !!

  4. ನಿಜಕ್ಕೂ ಅತ್ಯಂತ ಮಾಹಿತಿಪೂರ್ಣ ಬರಹ. ಹಲವಾರು ವಿಚಾರಗಳ ಅನಾವರಣ. ಬಹಳವಾಗಿ ಉಪಯುಕ್ತವಾಗಿದೆ. ಧನ್ಯವಾದಗಳು ಸರ್ ತಮಗೆ.

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *