ಪ್ರವಾಸ

ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-1

Share Button


ಮನಸ್ಸು ಹಕ್ಕಿಯಂತೆ ಉಲ್ಲಾಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿತ್ತು. ನಾವು ಕೋಚ್‌ನಲ್ಲಿ ಕುಳಿತು ಸಾಗುತ್ತಿದ್ದ ಹಾದಿಯುದ್ದಕ್ಕೂ ಮುಗಿಲೆತ್ತರಕ್ಕೆ ಎದ್ದು ನಿಂತ ಪರ್ವತಶ್ರೇಣಿಗಳು, ಆ ಗಿರಿ ಶಿಖರಗಳನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಶ್ವೇತವರ್ಣದ ಮೋಡಗಳು, ಮೋಡಗಳ ಮರೆಯಿಂದ ಬಾಗುತ್ತಾ ಬಳುಕುತ್ತಾ ಧುಮ್ಮಿಕ್ಕುತ್ತಿರುವ ಜಲಧಾರೆಗಳು, ಆ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ನೀಲಮಣಿಯಂತೆ ಕಂಗೊಳಿಸುತ್ತಿದ್ದ ಸರೋವರಗಳು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದವು. ಆ ಬೆಟ್ಟಗಳ ಸಾಲು ವೈವಿಧ್ಯಮಯವಾಗಿತ್ತು, ಒಂದು ಬಂಡೆಗಳಿಂದಾವೃತವಾದ ಬಲಭೀಮನಂತೆ ಕಂಡರೆ ಮತ್ತೊಂದರಲ್ಲಿ ಕೇವಲ ಕುರುಚಲು ಗಿಡಗಳು, ಮಗದೊಂದರಲ್ಲಿ ಎಲ್ಲಿ ನೋಡಿದರೂ ಹಸಿರು. ಈ ಹಸಿರಾದರೂ ಒಂದೇ ಬಣ್ಣವಲ್ಲ, ತಿಳಿಹಸಿರು, ಗಾಢವಾದ ಹಸಿರು, ಗಿಳಿ ಹಸಿರು, ಪಚ್ಚೆ ಹಸಿರು, ಹೊಂಬಣ್ಣದ ಹಸಿರು ಇತ್ಯಾದಿ. ಆ ಹಸಿರಿನ ಮಧ್ಯೆ ಹೊಳೆಯುತ್ತಿದ್ದ ಚಿಗುರೆಲೆಗಳ ಹವಳದ ಬಣ್ಣ, ಕಂದು ಬಣ್ಣದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಒಂದೆಡೆ ವಿಶಾಲವಾದ ಪೆಸಿಫಿಕ್ ಸಾಗರ ಮತ್ತೊಂದೆಡೆ ದಕ್ಷಿಣ ಆಲ್ಫ್ಸ್ ಪರ್ವತಗಳ ಶ್ರೇಣಿಗಳು ನಮಗೆ ಸ್ವಾಗತ ಕೋರುತ್ತಿದ್ದವು. ನಾನು ನ್ಯೂಝಿಲ್ಯಾಂಡ್ ಪ್ರವಾಸ ಹೋದಾಗ ಕಂಡ ದೃಶ್ಯಕಾವ್ಯವಿದು.

ನಮ್ಮ ದೇಶದಿಂದ ಸುಮಾರು ಹನ್ನೆರೆಡು ಸಾವಿರ ಕಿ.ಮೀ. ದೂರದಲ್ಲಿರುವ ನ್ಯೂಝಿಲ್ಯಾಂಡಿನ ರಸ್ತೆಗಳಲ್ಲಿ ಪಯಣಿಸುತ್ತಿರುವಾಗ ನನಗೆ ಹೊರದೇಶದಲ್ಲಿರುವ ಭಾವ ಮೂಡಲೇ ಇಲ್ಲ. ಒಮ್ಮೆ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಪಯಣಿಸಿದಂತೆ, ಮತ್ತೊಮ್ಮೆ ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ಕಂಡಂತೆ, ಇನ್ನೊಮ್ಮೆ ವಿಂಧ್ಯ ಪರ್ವತದ ಸಾಲುಗಳನ್ನು ನೋಡಿದಂತೆ, ಹಿಮಾಲಯ ಪರ್ವತದ ಬಳಿ ಸುಳಿದಾಡಿದಂತೆ ಎನ್ನುವ ಭಾವ ಮೂಡುತ್ತಿತ್ತು. ಯಾಕೆ ಹೀಗೆ ಎಂದು ಮನಸ್ಸು ಬುದ್ಧಿಯನ್ನು ಪ್ರಶ್ನಿಸಿತ್ತು, ಆಗ ಕೇಳಿ ಬಂದ ಉತ್ತರ ಕುತೂಹಲಕಾರಿಯಾಗಿತ್ತು – ಸರಿ ಸುಮಾರು ಆರುನೂರು ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿಯ ಬಹುಪಾಲು ಭಾಗ ಗೊಂಡ್ವಾನಾ ಎಂಬ ಖಂಡಕ್ಕೆ ಸೇರಿತ್ತು, ಈ ಖಂಡದಲ್ಲಿ ಈಗಿನ ದಕ್ಷಿಣ ಅಮೆರಿಕ, ಆಫ್ರಿಕ, ಅರೇಬಿಯ, ಮಡಗಾಸ್ಕರ್, ಅಂಟಾರ್ಟಿಕ, ಆಸ್ಟ್ರೇಲಿಯ ಹಾಗೂ ಭಾರತ ಒಂದಾಗಿ ಸೇರಿಕೊಂಡಿದ್ದವು. ನಿಧಾನವಾಗಿ ಭೂಮಿಯ ಕೆಳಪದರದಲ್ಲಿರುವ ಬಂಡೆಗಲ್ಲುಗಳು ಚಲಿಸಿದಾಗ ಈ ಭೂ ಪ್ರದೇಶಗಳು ಚೂರು ಚೂರಾಗಿ ಬೇರೆ ಬೇರೆ ದೇಶಗಳಾಗಿ ಮಾರ್ಪಾಡಾದವು. ಸಾಕ್ಷಿಯೆಂಬಂತೆ ‘ಗೊಂಡಾರಣ್ಯ’ ಎಂಬ ಪದವು ಭಾರತದ ಭಾಷೆಗಳಲ್ಲಿ ಕಂಡುಬರುವುದು, ಜೊತೆಗೆ ಮಧ್ಯಪ್ರದೇಶದ ‘ಗೊಂಡ’ ರಾಜವಂಶಕ್ಕೆ ಸೇರಿದ ರಾಜರು ಆಳಿದ ಪ್ರದೇಶಗಳಿಗೆ ಗೊಂಡ್ವಾನ ಎಂಬ ಹೆಸರು ಬಂತು. ಮಹಾರಾಷ್ಟçದಲ್ಲಿ ‘ಗೊಂಡ್ವಾನ ಪೀಪಲ್ಸ್ ಪಾರ್ಟಿ’ ಎಂಬ ರಾಜಕೀಯ ಪಕ್ಷವೂ ಅಸ್ತಿತ್ವದಲ್ಲಿದೆ.

ನಾನು ಐದಾರು ವರ್ಷಗಳಿಂದ ಕಂಡ ಕನಸು ಇಂದು ನನಸಾಗಿತ್ತು. 2025, ಫೆಬ್ರವರಿ ಎರಡರಿಂದ ಹದಿಮೂರರವರೆಗೆ ಕೇಸರಿ ಪ್ರವಾಸಿ ಸಂಸ್ಥೆಯವರು ಆಯೋಜಿಸಿದ್ದ ಹನ್ನೆರೆಡು ದಿನಗಳ ನ್ಯೂಝಿಲ್ಯಾಂಡ್ ಪ್ರವಾಸದಲ್ಲಿ ಗೆಳತಿ ಸುವರ್ಣಾಳೊಂದಿಗೆ ಪಾಲ್ಗೊಂಡಿದ್ದೆ. ನಮ್ಮ ತಂಡದಲ್ಲಿ ಮೂವತ್ತೆರೆಡು ಸದಸ್ಯರಿದ್ದು, ಹೆಚ್ಚಿನವರು ಮುಂಬೈನವರೇ ಆಗಿದ್ದರು. ಎಲ್ಲರೂ ಮರಾಠಿ ಮಾತನಾಡುತ್ತಿದ್ದುದರಿಂದ ಅವರೊಂದಿಗೆ ಸಲೀಸಾಗಿ ಬೆರೆಯಲು ಆಗಲೇ ಇಲ್ಲ. ತಂಡದ ಮ್ಯಾನೇಜರ್ ಆದ ಅವಿನಾಶ್ ಈ ನಾಡನ್ನು ಸಂಕ್ಷಿಪ್ತವಾಗಿ ನಮಗೆ ಪರಿಚಯಿಸುತ್ತಿದ್ದ, ‘ಹದಿಮೂರನೇ ಶತಮಾನದಲ್ಲಿ ಪಾಲಿನೇಷಿಯಾದಿಂದ ತೆಪ್ಪಗಳನ್ನು ಕಟ್ಟಿಕೊಂಡು ಗುಂಪು ಗುಂಪಾಗಿ ಬಂದ ಮಾವೊರಿಗಳು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿಯೇ ನೆಲಸುವರು. ಗಿರಿ ಶಿಖರಗಳ ಸುತ್ತಲೂ ಹರಡಿರುವ ಉದ್ದನೆಯ ಬಿಳಿ ಮೋಡಗಳನ್ನು ಕಂಡವರು, ಈ ನಾಡಿಗೆ ‘ಔಟಿಯರಾವ್’(ಂoಣeಚಿಡಿoಚಿ) ಅಂದರೆ ಮಾವೊರಿ ಭಾಷೆಯಲ್ಲಿ ಉದ್ದನೆಯ ಬಿಳಿಯ ಮೋಡಗಳ ನಾಡೆಂದು ಹೆಸರಿಸುತ್ತಾರೆ. ಜಲಚರಗಳನ್ನು ಬೇಟೆಯಾಡುತ್ತಾ, ಕಾಡುಗಳಲ್ಲಿ ಗೆಡ್ಡೆಗೆಣಸುಗಳನ್ನಾರಿಸುತ್ತಾ ತಮ್ಮ ಉದರ ಪೋಷಣೆಯನ್ನು ಮಾಡಿಕೊಳ್ಳುತ್ತಾರೆ. ಆಕ್ರಮಣಕಾರಿ ಪ್ರವೃತ್ತಿಯುಳ್ಳ ಇವರು, ಪ್ರಕೃತಿಯಲ್ಲಿಯೇ ತಮ್ಮ ದೈವಗಳನ್ನು ಕಾಣುತ್ತಾ ಹಾಡುತ್ತಾ, ಕುಣಿಯುತ್ತಾ ತಮ್ಮ ಜನಾಂಗದ ಕಥೆಯನ್ನು ಹೇಳುತ್ತಾ, ವಿಶಿಷ್ಟವಾದ ಮಾವೋರಿ ಸಂಸ್ಕೃತಿಯನ್ನು ರಚಿಸುತ್ತಾರೆ.

ಮಾವೊರಿಗಳ ನಾಡಾದ ಔಟಿಯರಾವ್ ಬಹಳ ಕಾಲ ಉಳಿಯಲಿಲ್ಲ. ಹತ್ತೊಂಭತ್ತನೇ ಶತಮಾನದಲ್ಲಿ ತಮ್ಮ ಜಹಜುಗಳಲ್ಲಿ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಂದಿಳಿದ ಯೂರೋಪಿಯನ್ನರು ಈ ನಾಡನ್ನು ‘ಸೀ ಲ್ಯಾಂಡ್’ ಅಂದರೆ ಸಮುದ್ರದಿಂದ ಸುತ್ತುವರೆಯಲ್ಪಟ್ಟ ನಾಡು ಎಂದು ಕರೆದರು, ಮುಂದೆ ಈ ಪ್ರದೇಶವು ‘ನ್ಯೂಝೀಲ್ಯಾಂಡ್’ ಎಂದೇ ಕರೆಯಲ್ಪಟ್ಟಿತು. ವ್ಯಾಪಾರಿಗಳಾಗಿ ಬಂದ ಯೂರೋಪಿಯನ್ನರು ಅಸಂಘಟಿತರಾದ ಮೂಲ ನಿವಾಸಿಗಳ ಮೇಲೆ ಆಕ್ರಮಣ ಮಾಡಿ ಆಳ್ವಿಕೆ ನಡೆಸುವರು. ಹಲವು ಆಮಿಷಗಳ ಬಲೆಯೊಡ್ಡಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದರು. ಅಲ್ಲಿ ವಾಸವಾಗಿದ್ದ ಹಲವು ಬುಡಕಟ್ಟು ಜನಾಂಗದವರ ನಡುವೆ ಸದಾ ನಡೆಯುತ್ತಿದ್ದ ಒಳ ಜಗಳಗಳ ಲಾಭ ಪಡೆದ ಬ್ರಿಟಿಷರು ಈ ನೆಲವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಂಡರು. ಇಂದಿಗೂ ನಿರಂತರವಾಗಿ ಮಾವೊರಿಗಳ ಹಾಗೂ ಬ್ರಿಟಿಷರ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಈ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು 1840, ಫೆಬ್ರವರಿ 6 ರಂದು ‘ವೈಟಾಂಗಿ ಒಪ್ಪಂದ’ವನ್ನು ಮಾಡಿಕೊಳ್ಳುತ್ತಾರೆ. (ಖಿಡಿeಚಿಣಥಿ oಜಿ Wಚಿiಣಚಿಟಿgi). ಆದರೂ ಆಳುವ ಪಕ್ಷದ ವಿರುದ್ಧ ಮಾವೊರಿಗಳ ಪ್ರತಿಭಟನೆ ನಡೆಯುತ್ತಲೇ ಇದೆ. ಫೆಬ್ರವರಿ ಆರರಂದು ನಾವು ನ್ಯೂಝಿಲ್ಯಾಂಡಿನ ಪ್ರಸಿದ್ದ ನಗರ ಆಕ್‌ಲ್ಯಾಂಡಿನಲ್ಲಿದ್ದೆವು. ಅಂದು ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು, ಮಾವೊರಿಗಳು ಮೌನವಾಗಿ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದರು.

ನ್ಯೂಝಿಲ್ಯಾಂಡಿನ ಬೀದಿಗಳಲ್ಲಿ ಹಲವು ಅಂಗಡಿಗಳ ಮುಂದೆ ‘ಕಿವಿ’ ಹೆಸರು ಹೊತ್ತ ಫಲಕಗಳು ಕಂಡು ಬಂದವು. ಆಗ ನೆನಪಾಗಿದ್ದು ಮೊಮ್ಮಗ ಯಶೂ ಕೇಳಿದ್ದ ಪ್ರಶ್ನೆ, ಅಜ್ಜಿ, ನ್ಯೂಝಿಲ್ಯಾಂಡಿನ ಕ್ರಿಕೆಟ್ ಟೀಮನ್ನು ‘ಕಿವೀಸ್’ ಎಂದು ಏಕೆ ಕರೀತಾರೆ? ‘ಕಿವಿ’ ಎಂಬ ಹಕ್ಕಿ ಈ ನಾಡಿನ ರಾಷ್ಟ್ರೀಯ ಲಾಂಛನ ಎಂದು ಮಗಳು ಅಪರ್ಣ ಉತ್ತರಿಸಿದ್ದಳು. ನನಗೆ ‘ಕಿವಿ’ಯನ್ನು ನೋಡುವ ಕುತೂಹಲ, ಆದರೆ ಆ ಹಕ್ಕಿಯ ದರ್ಶನ ಅಷ್ಟು ಸುಲಭವಾಗಿರಲಿಲ್ಲ. ನಾವು ‘ಕಿವಿ ಸಂರಕ್ಷಣಾ ಕೇಂದ್ರ’ದ ಒಳ ಹೊಕ್ಕಾಗ ಕತ್ತಲೆ, ನಿಶ್ಯಬ್ಧ. ದೊಡ್ಡ ದೊಡ್ಡ ಗಾಜಿನ ಆವರಣಗಳಲ್ಲಿ ಹಕ್ಕಿಗಳನ್ನು ಕೂಡಲಾಗಿತ್ತು. ಮಂಕಾದ ದೀಪದ ಬೆಳಕಿನಲ್ಲಿ ಆಲ್ಲಿದ್ದ ಎರಡು ಪಕ್ಷಿಗಳನ್ನು ನೋಡಿದೆವು. ನಮ್ಮನ್ನು ಕಂಡ ತಕ್ಷಣ ಹಕ್ಕಿಗಳು ಅಲ್ಲಿದ್ದ ಪೊಟರೆಗಳಲ್ಲಿ ಅಡಗಿಕೊಂಡವು. ಮಾವೊರಿಗಳು ಈ ಪಕ್ಷಿಯನ್ನು ‘ಥಾನೆ ಎಂಬ ವನದೇವತೆಯ ಮಡಿಲಲ್ಲಿ ಅಡಗಿಕೊಂಡಿರುವ ಹಕ್ಕಿ’ ಎಂದು ಕರೆದರು. ದಟ್ಟವಾದ ಅರಣ್ಯಗಳಲ್ಲಿ ವಾಸಿಸುವ ಈ ಹಕ್ಕಿ ನಿಶಾಚರಿ ಅಂದರೆ ರಾತ್ರಿ ಮಾತ್ರ ಸಂಚರಿಸುವ ಹಕ್ಕಿ. ಇದು ಹಾರಲು ಬಾರದ ಪಕ್ಷಿ. ಹಕ್ಕಿಯ ಕಣ್ಣುಗಳು ತುಂಬಾ ಪುಟ್ಟದಾಗಿದ್ದು, ದೃಷ್ಟಿ ಕ್ಷೀಣ. ಆದರೆ ಇದರ ಕಿವಿ ತುಂಬಾ ಚುರುಕು, ನಾಸಿಕಾಗ್ರವೂ ತೀಕ್ಷ್ಣ. ಒಂದು ಕಾಲದಲ್ಲಿ, ಐವತ್ತರಿಂದ ಅರವತ್ತು ವರ್ಷ ಬದುಕುವ ಈ ಪಕ್ಷಿಗಳು ನ್ಯೂಝಿಲ್ಯಾಂಡಿನ ಅಡವಿಗಳಲ್ಲಿ ಹೇರಳವಾಗಿ ಕಂಡುಬರುತ್ತಿದ್ದವು. ಮಾವೊರಿಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ಕಿವಿಗೆ ವಿಶೇಷ ಸ್ಥಾನಮಾನ. ಇವರ ಜಾನಪದ ಕಥೆಗಳಲ್ಲಿ ಕಿವಿಯದ್ದೇ ಕಾರುಬಾರು. ವನದೇವತೆಯ ಅಚ್ಚುಮೆಚ್ಚಿನ ಹಕ್ಕಿ ಎಂಬ ನಂಬಿಕೆಯೂ ಇವರಲ್ಲಿ ಮನೆ ಮಾಡಿದೆ. ಕಿವಿಯ ರೆಕ್ಕೆ ಪುಕ್ಕಗಳಿಂದ ನೇಯ್ದ ‘ಕಾಹು ಕಿವಿ’ ಎಂಬ ಮೇಲುಡುಪನ್ನು ಶ್ರೀಮಂತರು ಮಾತ್ರ ಧರಿಸುವರು. ಅಚ್ಚರಿಯ ಸಂಗತಿಯೆಂದರೆ, ಹಾರಲು ಬಾರದ ಈ ಪಕ್ಷಿ, ನ್ಯೂಝಿಲ್ಯಾಂಡಿನ ವಾಯುಪಡೆಯ ಲಾಂಛನ. ಕಿವಿಯ ಸಂತತಿ ಕ್ಷೀಣಿಸುತ್ತಿರುವುದರಿಂದ ಸರ್ಕಾರವು ಕಿವಿ ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಿಂದ ಕಿವಿ ಪಕ್ಷಿಯ ಸಂರಕ್ಷಣೆ ಆಗುವುದಲ್ಲದೆ, ಸ್ಥಳೀಯ ಬುಡಕಟ್ಟು ಜನಾಂಗದವರ ಜೀವನೋಪಾಯವೂ ಆಗುವುದು. ಯುವ ಜನಾಂಗದವರಿಗೆ ತಮ್ಮ ಪೂರ್ವಜರ ಸಾಂಸ್ಕೃತಿಕ ಪರಿಚಯವೂ ಆಗುವುದು.

(ಮುಂದುವರಿಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.

9 Comments on “ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-1

  1. ೨೦೨೩ರ ನವೆಂಬರ್ ನಲ್ಲಿ ನಾನೂ ಪ್ರವಾಸ ಮಾಡಿದ್ದೆ.ಅತ್ಯಂತ ಮನೋಹರವಾದ ಪ್ರಖ್ಯಾತಿ.

  2. ನ್ಯೂಜಿಲೆಂಡಿನ ಪ್ರವಾಸ ಕಥನವನ್ನು ಪ್ರಕಟಿಸಿರುವ ಹೇಮಮಾಲಾರವರಿಗೆ ವಂದನೆಗಳು

  3. ವಾವ್ ಪ್ರವಾಸಕಥನ ಮತ್ತೊಂದು ಪ್ರಾರಂಭವಾದದ್ದು ಖುಷಿ ತಂದುಕೊಟ್ಟಿತು. ಅಲ್ಲಿಗೆ ಹೋಗಲಾಗದಿದ್ದರೂ ನಿಮ್ಮ ಅನುಭವವೇ ಅಲ್ಲಿಗೆ ಕರೆದೊಯ್ಯುತ್ತದೆ..ಅಂದರೆ ನಿರೂಪಣೆ ಅಷ್ಟು ಸೊಗಸಾಗಿರುತ್ತದೆ..ಮೇಡಂ.. ಧನ್ಯವಾದಗಳು.

  4. ನ್ಯೂಜಿಲೆಂಡ್ ಪ್ರವಾಸ ಕಥನದ ಶುಭಾರಂಭ ಹಲವಾರು ಮಾಹಿತಿಗಳನ್ನು ಒಳಗೊಂಡಂತೆ ಸೊಗಸಾಗಿ ಪ್ರಾರಂಭವಾಗಿದೆ.

  5. ನ್ಯೂಝಿಲ್ಯಾಂಡಿನ ಅದ್ಭುತ ಪ್ರಕೃತಿ ಸೌಂದರ್ಯ, ಸಮೃದ್ಧ ನಾಡಿನ ಮೂಲನಿವಾಸಿಗಳಾದ ಮಾವೊರಿಗಳ ಅತಂತ್ರ ಸ್ಥಿತಿ ಹಾಗೂ ಅವರ ಪ್ರತಿಭಟನಾ ಮೆರವಣಿಗೆಯ ಪ್ರತ್ಯಕ್ಷ ದರ್ಶನ, ನ್ಯೂಝಿಲ್ಯಾಂಡ್ ಹೆಸರಿನ ಮೂಲ, ಕ್ಷೀಣಿಸುತ್ತಿರುವ ರಾಷ್ಟ್ರೀಯ ಪಕ್ಷಿ ಕಿವಿಯ ಸಂತತಿ ಹಾಗೂ ಅದರ ಸಂರಕ್ಷಣಾ ಯೋಜನೆ, ಹಾರಲು ಬಾರದ ಈ ಪಕ್ಷಿಯೇ ವಾಯು ಪಡೆಯ ಲಾಂಛನವಾಗಿರುವ ವಿರೋಧಾಭಾಸ….ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರವಾಸ ಲೇಖನವು ಮುದನೀಡಿತು ಗಾಯತ್ರಿ ಮೇಡಂ.

  6. ಸುದೀಘವಾದ ಪ್ರತಿಕ್ರಿಯೆ ತಿಳಿಸಿರುವ ಶಂಕರ್ ಮೇಡಂ ಅವರಿಗೆ ಹೃದಯಪೂರ್ವಕ ವಂದನೆಗಳು

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *