ಭಾರತ ಕೃಷಿ ಪ್ರಧಾನವಾದ ದೇಶ. ರೈತರೇ ಈ ರಾಷ್ಟ್ರದ ಪ್ರಗತಿಗೆ ಕಾರಣ. ಅವರೇ ದೇಶದ ಬೆನ್ನೆಲಬು. ಹಸಿವು ಇಂಗಿಸುವ ರೈತನನ್ನು ಅನ್ನದಾತ, ನೇಗಿಲ ಯೋಗಿ ಎಂದೆಲ್ಲಾ ವೈಭವೀಕರಿಸಿದರೂ ಆತನ ಕಾಯಕಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನೀಡುವಲ್ಲಿ, ಕೃಷಿ ಕೆಲಸಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದರಲ್ಲಿ ದೇಶದ ಜನತೆ ಬಹಳ ತಡವಾಗಿ ಕಣ್ಣುಬಿಟ್ಟಿದೆ. ವಿಜ್ಞಾನದ ಇತರ ಕ್ಷೇತ್ರಗಳಿಗೆ ದೊರೆತ ಮನ್ನಣಿಯೂ ಕೃಷಿ ಕ್ಷೇತ್ರಕ್ಕೆ ಲಭಿಸಿಲ್ಲವೆನ್ನುವುದು ಕಟುಸತ್ಯ. ಇಂತಹ ಅಂಧಕಾರಭರಿತ ಸಮಾಜದಲ್ಲಿ ಮಹಾದೇವಪ್ಪನವರು ಆಗಸ್ಟ್ 4, ೧೯೩೭ರಂದು ಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಉದಯಿಸಿದ ಬೆಳಕಿನ ಕಿರಣ. ತಂದೆ ಮಾದಪ್ಪ ಮತ್ತು ತಾಯಿ ಪುಟ್ಟಬಸಮ್ಮನವರ ಸುಪುತ್ರ. ಪ್ರಾಥಮಿಕ ಶಿಕ್ಷಣವನ್ನು ಚಾಮರಾಜನಗರ ಮತ್ತು ಮೈಸೂರಿನಲ್ಲಿ ಪಡೆದ ನಂತರ ಮದರಾಸು ವಿಶ್ವವಿದ್ಯಾಲಯದಿಂದ ಕೃಷಿ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಎಂ.ಎಸ್‍ಸಿ ಮತ್ತು ಕೊಯಮತ್ತೂರಿನಲ್ಲಿ ಪಿಎಚ್.ಡಿ. ಪದವಿಗಳನ್ನು ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಎರಡು ಬಾರಿ ಕುಲಪತಿಗಳಾಗಿ ಅಮೋಘ ಸೇವೆ ಸಲ್ಲಿಸಿದರು. ಇವರ ಸೇವೆ ಹಾಗೂ ಮಾರ್ಗದರ್ಶನಗಳ ಫಲವಾಗಿ 2000ದ ವರ್ಷದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ರಾಷ್ಟ್ರದಲ್ಲೇ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯ ಎಂದು ಗುರುತಿಸಿ, ಸರ್ದಾರ್ ಪಟೇಲ್ ಪದಕ ಲಭಿಸಿತು. ಇವರು ಬೋಧನೆ ಮತ್ತು ತಮ್ಮ ಸಂಶೋಧನೆಯ ಜೊತೆಗೆ ಅನೇಕ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪದವಿ ಗಳಿಕೆಗೆ ಮಾರ್ಗದರ್ಶನ ನೀಡಿದ್ದಾರೆ. ಭಾರತ ಸರ್ಕಾರದ ಕೃಷಿ ಸೇವಾ ವಿಜ್ಞಾನಿಗಳು ಮತ್ತು ಆಡಳಿತಗಾರರ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
ಪಿಎಚ್.ಡಿ. ಗಳಿಸಿದ ನಂತರವೂ ೪೦ ವರ್ಷಗಳಷ್ಟು ಸುದೀರ್ಘ ಕಾಲ ಸಂಶೋಧನೆಗಳಲ್ಲಿ ತತ್ಪರರಾಗಿ, ಕೃಷಿ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಮೀಸಲಿರಿಸಿದ್ದರು. ಭತ್ತದ ತಳಿ ಸಂಶೋಧನೆಯಲ್ಲಿ ಸದಾಕಾಲ ಮಗ್ನರಾಗಿರುತ್ತಿದ್ದ ಮಹಾದೇವಪ್ಪನವರ ಕಾಳಜಿಯನ್ನು ಕಂಡು ಅವರ ಬಾಳ ಸಂಗಾತಿ ಸುಧಾರವರು ‘ನಾನು ನಿಮಗೆ ಎರಡನೆಯ ಹೆಂಡತಿ. ಮೊದಲನೆಯ ಹೆಂಡತಿ ಭತ್ತ’ ಎಂದು ಹಾಸ್ಯ ಮಾಡುತ್ತಿದ್ದರಂತೆ. ಸುಧಾರವರು ಹೇಳುವಂತೆ ಮಹಾದೇವಪ್ಪನವರ ಮೇಲೆ ಬಸವಣ್ಣನವರ ‘ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲವಯ್ಯ, ಎನಗಿಂತ ಕಿರಿಯರಿಲ್ಲ’ ಎನ್ನುವ ಮಾತುಗಳು ಬಹಳ ಪ್ರಭಾವ ಬೀರಿದ್ದವು. ಜಾತಿಗಿಂತಲೂ ಅಪಾರ ಗುಣವಂತರಿಗೆ ಬೆಲೆ ಕೊಡುತ್ತಿದ್ದರಂತೆ.
ಇಂದಿನ ದಿನಗಳಲ್ಲಿ ಅಕ್ಕಿ ಮಹಾದೇವಪ್ಪ ಎಂದೇ ಜನಪ್ರಿಯವಾಗಿರುವ ಡಾ.ಮಹಾದೇವಪ್ಪನವರು ಫಿಲಿಪೈನ್ಸ್, ತೈವಾನ್, ಥೈಲ್ಯಾಂಡ್, ಮಲೇಷಿಯಾ, ಕೀನ್ಯಾ, ಆಸ್ಟ್ರೇಲಿಯಾ, ಅಮೆರಿಕಾ ದೇಶಗಳಿಗೆ ಪ್ರವಾಸ ಮಾಡಿ, ತಮ್ಮ ಸಂಶೋಧನೆಯ ಹರಿವನ್ನು ವಿಸ್ತರಿಸಿದ್ದರು. ಫಿಲಿಪೈನ್ಸ್‌ನಲ್ಲಿರುವ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದಲ್ಲಿ ಎರಡೂವರೆ ವರ್ಷಗಳ ಕಾಲ ಸಂಶೋಧನೆ ನಡೆಸಿದ್ದರು. ಸತತ ಸಂಶೋಧನೆಯ ಫಲವಾಗಿ ಇವರು ಮಧು, ಮಂಗಳ, ಪುಷ್ಪ, ಪ್ರಾಗ್ಮಾಟಿಕ್ಸ್, ಇನ್‍ಟಾನ್, ವಿಕ್ರಮ್, ಜಿ. ಎಂ.ಕೆ-೧೭, ಮುಕ್ತಿ ಮತ್ತು ಬಿಳಿಮುಕ್ತಿ ಹೆಸರಿನ ಒಂಭತ್ತು ಭತ್ತದ ತಳಿಗಳಿಗೆ ಕಾರಣರಾಗಿ ಭಾರತದ ಹೈಬ್ರಿಡ್ ಭತ್ತ ಯೋಜನೆಯ ಪಿತಾಮಹ ಎನ್ನುವ ಹೆಸರು ಗಳಿಸಿದರು.
ರಾಜ್ಯದ ಭತ್ತದ ತಳಿಗಳನ್ನು ಸಂಶೋಧಿಸಿದ್ದಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಕೆ ಆರ್ ಎಚ್ 1 ಮತ್ತು 2 ಹೆಸರುಗಳ ಎರಡು ಸಂಕರಗಳನ್ನು ಕಂಡುಹಿಡಿದಿದ್ದಾರೆ. ಭತ್ತದ ಬೆಳೆಯ ವಿವಿಧ ಹಂತಗಳಲ್ಲಿ ಉಂಟಾಗುವ ನಷ್ಟವನ್ನು ಕಡಿಮೆ ಮಾಡುವ ಹಾಗೂ ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ಪ್ರಯತ್ನಗಳಲ್ಲಿ ಯಶಸ್ವಿಯಾಗಿದ್ದಾರೆ. ಅಪಾಯಕಾರಿ ಕಳೆ ಪಾರ್ಥೇನಿಯಮ್ ಹಾಗೂ ಅದರ ನಿಯಂತ್ರಣದ ಬಗ್ಗೆ, ಮಾನವ ಹಾಗೂ ಜಾನುವಾರುಗಳು ಅದರಿಂದ ಪಾರಾಗುವ ಮತ್ತು ಕಳೆಯನ್ನು ಹತೋಟಿಯಲ್ಲಿಡುವ ತಂತ್ರಜ್ಞತೆಯ ಬಗ್ಗೆ ಸಂಶೋಧನೆ ನಡೆಸಿದ್ದರು. ಅದನ್ನು ಕುರಿತು ವಿಶ್ವದಲ್ಲಿರುವ ಏಕೈಕ ಇಂಗ್ಲೀಷ್ ಮತ್ತು ಕನ್ನಡ ಪುಸ್ತಕವನ್ನೂ ರಚಿಸಿದ್ದಾರೆ. ಪಾರ್ಥೇನಿಯಮ್ ಕಳೆ ನಿರ್ವಹಣೆ ಬಗ್ಗೆ ಇವರು ರೂಪಿಸಿರುವ ತಂತ್ರಜ್ಞತೆ ಎಲ್ಲ ಕಡೆಯೂ ಉಪಯೋಗವಾಗುತ್ತಿದೆ. ನಿವೃತ್ತಿಯ ನಂತರವೂ ಹಲವಾರು ಪ್ರತಿಷ್ಠಿತ ಕೃಷಿ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ‘ಭಾರತ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿರುವುದಕ್ಕೆ ಡಾ.ಮಹಾದೇವಪ್ಪನವರ ಕೊಡುಗೆ ಅಪರಿಮಿತ’ ಎಂದು ಪ್ರಶಂಸಿಸಿದ್ದರು.
ಮಹಾದೇವಪ್ಪನವರು ಕೇವಲ ವಿಜ್ಞಾನಿಯಲ್ಲದೆ ತಾವು ಸಂಶೋಧಿಸಿದ ವಿಷಯಗಳ ಬಗ್ಗೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನೂ, ಕೃಷಿ ವಿಜ್ಞಾನ ಹಾಗೂ ತಂತ್ರಜ್ಞಾನ ಕುರಿತ ಅನೇಕ ಕೃತಿಗಳನ್ನೂ ರಚಿಸಿದ್ದರು. ಇಪ್ಪತ್ನಾಲ್ಕು ಮೂಲ ಕೃತಿಗಳು, ನಾಲ್ಕಾರು ಭಾಷಾಂತರಗಳು, ನೂರಾರು ಜನಪ್ರಿಯ ಲೇಖನಗಳನ್ನು ಪ್ರಕಟಿಸಿದ್ದರು. ವೈಜ್ಞಾನಿಕ ಲೇಖನಗಳನ್ನೂ ಬರೆದಿರುವುದಲ್ಲದೆ ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ.
ಅವರ ಪ್ರಮುಖ ಕೃತಿಗಳು ಹೀಗಿವೆ.
ಕರ್ನಾಟಕದಲ್ಲಿ ಭತ್ತದ ಕೃಷಿ, ಭತ್ತದ ಕೃಷಿ, ಭತ್ತ, ಬೀಜೋತ್ಪಾದನೆ ಮತ್ತು ತಾಂತ್ರಿಕತೆ, ಭತ್ತದ ಉತ್ಪಾದನೆಯ ಸಮಸ್ಯೆಗಳು ಮತ್ತು ಪರಿಹಾರ, ಭತ್ತ (ಮಾನೋಗ್ರಾಫ್), ಸುಧಾರಿತ ಬೀಜೋತ್ಪಾದನೆ, ಪಾರ್ಥೇನಿಯಮ್, ಪಾರ್ಥೇನಿಯಮ್ ಮತ್ತು ಪರಿಸರ ನಿರ್ವಹಣೆ ಇತ್ಯಾದಿ ವಿಜ್ಞಾನ ಕೃತಿಗಳನ್ನೂ, ರೈತ ಗೀತೆ, ಕೃಷಿ ಸಂಗಮ, ಅನ್ನದಾತನ ಹಾಡುಗಳು, ಸಮಗ್ರ ಕೃಷಿ ಕಾವ್ಯ ಇತ್ಯಾದಿ ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ.
ಇಂತಹ ಪ್ರತಿಭಾವಂತರಿಗೆ ಅರಸಿ ಬಂದ ಪ್ರಶಸ್ತಿಗಳೂ ಹಲವಾರು.
ವಾಟಮಲ್ ಫೌಂಡೇಷನ್ ಪ್ರಶಸ್ತಿ, ಹವಾಯಿ (1987), ಪದ್ಮಶ್ರೀ ಪ್ರಶಸ್ತಿ (2005), ಹೂಕರ್ ಪ್ರಶಸ್ತಿ (1981), ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ (1999), ಛೋಟೂರಾಂ ಪ್ರಶಸ್ತಿ (1996), ಜೀವಮಾನ ಸಾಧನೆ ಪ್ರಶಸ್ತಿ – Leader summit-Agri Today(2009), ಜೀವಮಾನ ಸಾಧನೆ ಪ್ರಶಸ್ತಿ – Indian Socity for applied Bio-tech(2011), ಪದ್ಮಭೂಷಣ ಪ್ರಶಸ್ತಿ (2013), ರಾಜ್ಯೋತ್ಸವ ಪ್ರಶಸ್ತಿ (2013), ಕನ್ನಡದ ಶ್ರೇಷ್ಠ ಕೃತಿ ಬರಹ ಪ್ರಶಸ್ತಿ (2005), ಕೆ.ಕೆ.ಎಂ ಪ್ರಶಸ್ತಿ (1972), ನಾಗಮ್ಮ ದತ್ತಾತ್ರೇಯ ಪ್ರಶಸ್ತಿ (1989) ಮುಂತಾದವು ಸಂದಿವೆ. ಪದ್ಮಭೂಷಣ ಹಾಗೂ ಪದ್ಮಶ್ರೀ – ಈ ಎರಡೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಏಕೈಕ ಕನ್ನಡಿಗ ಎನ್ನುವ ಖ್ಯಾತಿ ಮಹಾದೇವಪ್ಪನವರಿಗೆ. ಅವರ ಜೀವಮಾನ ಸಾಧನೆಗಾಗಿ ಇತ್ತೀಚೆಗೆ ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿಯು ಗೌರವಿಸಿದೆ.
ಇವರಿಗೆ ಅಭಿನಂದನಾ ಪೂರ್ವಕವಾಗಿ ಸಮರ್ಪಿಸಿರುವ ಗ್ರಂಥಗಳೆಂದರೆ ಕೃಷಿ ಪ್ರತಿಭೆ, ಹೊನ್ನೇರು ಮತ್ತು ಡಾ.ಎಂ.ಮಹಾದೇವಪ್ಪ.
ಭಾರತದ ಹೈಬ್ರಿಡ್ ಭತ್ತದ ಯೋಜನೆಯ ಪಿತಾಮಹ, ಮೇರು ಕೃಷಿ ವಿಜ್ಞಾನಿ, ಡಾ.ಮಹಾದೇವಪ್ಪನವರು 2021 ರ ಮಾರ್ಚಿ 6 ರಂದು ತಮ್ಮ 83 ನೇ ವಯಸ್ಸಿನಲ್ಲಿ ವಿಧಿವಶರಾದರು.
ನಡೆದಾಡುವ ದೇವರೆಂದೇ ಸಮಸ್ತ ಕನ್ನಡಿಗರ ಹೃದಯವನ್ನು ಗೆದ್ದಿದ್ದ ಡಾ.ಶಿವಕುಮಾರ ಸ್ವಾಮಿಗಳು ಮಹಾದೇವಪ್ಪನವರ ನಿಧನದ ಸುದ್ದಿ ಕೇಳಿ ‘ಪ್ರತಿಭೆ, ವಿದ್ವತ್ತು, ಶ್ರದ್ಧೆ, ಸೇವಾಕಾಂಕ್ಷೆಗಳ ಸಮ್ಮಿಲನದ ವಿನಯ ಸೌಜನ್ಯಶೀಲ ಸುಸಂಸ್ಕೃತರು ಡಾ.ಮಹಾದೇವಪ್ಪನವರು. ಕೃಷಿಯಂತಹ ಪವಿತ್ರ ಕ್ಷೇತ್ರದಲ್ಲಿ ವೃತ್ತಿಯನ್ನು ಧರ್ಮವೆಂದೇ ಪರಿಭಾವಿಸಿದ್ದ ಡಾ.ಮಹಾದೇವಪ್ಪನವರು ನಾವು ಕಂಡಂತೆ ರಾಷ್ಟ್ರದ ಅಮೂಲ್ಯ ಆಸ್ತಿ’ ಎಂದು ನುಡಿದರು.
ಭಾರತದ ಹಸಿರು ಕ್ರಾಂತಿಯ ಹರಿಕಾರರೆಂದೇ ಪ್ರಸಿದ್ಧರಾದ ಚೆನ್ನೈನ ಡಾ.ಎಂ.ಎಸ್.ಸ್ವಾಮಿನಾಥನ್ ಅವರೂ ಡಾ.ಮಹಾದೇವಪ್ಪನವರು ವಿಧಿವಶರಾದಾಗ ಬಹಳ ದುಃಖದಿಂದ ‘ನಮ್ಮ ದೇಶದ ಕೃಷಿ ಸಂಶೋಧನೆಗೆ, ಶಿಕ್ಷಣಕ್ಕೆ ಮತ್ತು ದೇಶದ ಪ್ರಗತಿಗೆ ವಿಶೇಷವಾಗಿ ಕರ್ನಾಟಕಕ್ಕೆ ಡಾ.ಮಹಾದೇವಪ್ಪನವರ ಕೊಡುಗೆ ಅಪಾರ. ಅವರನ್ನು ರಾಷ್ಟ್ರದ ಹೈಬ್ರಿಡ್ ಯೋಜನೆಯ ಪಿತಾಮಹ ಎಂದು ಪರಿಗಣಿಸುವುದು ಅತ್ಯಂತ ಸೂಕ್ತ. ಅವರು ತಳಿ ಸಂಶೋಧಕರಾಗಿ ಯಶಸ್ಸು ಗಳಿಸಿದಂತೆ ಯುವಪೀಳಿಗೆಯವರಿಗೆ ಉತ್ತಮ ನಾಯಕರೂ ಆಗಿದ್ದರು.’ ಎಂದು ಸ್ಮರಿಸಿದರು.
ಜಾನಪದ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿರುವ ಗೊ.ರು.ಚನ್ನಬಸಪ್ಪನವರು ‘ಪರಂಪರೆಯ ಒಕ್ಕಲುತನದ ಅನುಭವಗಳ ಹಿನ್ನೆಲೆಯಲ್ಲೇ ಆಧುನಿಕ ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ತಿಳಿ ಹೇಳುವ ಡಾ.ಮಹಾದೇವಪ್ಪ ಕೃಷಿ ಸಂಬಂಧದ ನುಡಿಗಟ್ಟುಗಳನ್ನು ಬಳಸಿ ಕೃಷಿಕರ ಮನಮುಟ್ಟುತ್ತಾರೆ’ ಎಂದು ನುಡಿದರು.
ಭಾರತದ ಅನ್ನದಾತರಿಗೆ ದಾತರಾದ ಕೃಷಿ ಪಂಡಿತ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತ್ಯ ಪರಿಣಿತ, ಕರ್ನಾಟಕದ ಮೇರು ವಿಜ್ಞಾನಿಗಳಲ್ಲೊಬ್ಬರಾದ ಪದ್ಮವಿಭೂಷಣ ಡಾ. ಮಾದಾಪುರ ಮಹಾದೇವಪ್ಪನವರಂತಹ ಮತ್ತಷ್ಟು ಮೇರು ವಿಜ್ಞಾನಿಗಳು ಈಗಿನ ಸಮಾಜಕ್ಕೆ ಅತ್ಯಗತ್ಯ.
-ಜಿ.ವಿ.ನಿರ್ಮಲ
ಮಾಹಿತಿಪೂರ್ಣ ಬರಹ
ವಿಜ್ಞಾನಿಗಳ ಪರಿಚಯಾತ್ಮಕ ಲೇಖನ ಬರೆಯುತ್ತಿರುವ ನಿಮಗೆ ವಂದನೆಗಳು ನಿರ್ಮಲಾ ಮೇಡಂ.. ಸುಧಾ ಮೇಡಂ ಅಷ್ಟೇ.. ಉಪಯುಕ್ತವಾದ ಲೇಖನ ಗಳು..
ಕನ್ನಡಿಗರೊಬ್ಬರ ಮೇರು ವ್ಯಕ್ತಿತ್ವವನ್ನು ಸಮಂಜಸವಾಗಿ ಪರಿಚಯಿಸುವ ಸುಂದರ ಲೇಖನ.
ಅಪರೂಪದ ಭತ್ತ ತಳಿ ಸಂಶೋಧಕರಾದ ಡಾ. ಮಹಾದೇವಪ್ಪ ಅವರ ಕುರಿತ ವಿಸ್ತೃತ ಮಾಹಿತಿಪೂರ್ಣ ಲೇಖನ ಚೆನ್ನಾಗಿದೆ.
ನಿರ್ಮಲ ಒಳ್ಳೆಯ ಲೇಖನ