
ಅಷ್ಟಮ ಸ್ಕಂದ – ಅಧ್ಯಾಯ 4
-: ಮತ್ಸಾವತಾರ – 2 :-
ವೈವಸ್ವತ ಮನುಪದವಿ ಪಡೆದ
ರಾಜಶ್ರೀ ಸತ್ಯವ್ರತ
ಕೃತಮಾಲೆ ನದಿಯ ದಡದಿ
ಬೊಗಸೆಯಲಿ ಜಲವ ತುಂಬಿ
ಜಲತರ್ಪಣವ ಅರ್ಪಿಸಲನುವಾದ
ಸಮಯದಿ
ಬೊಗಸೆಯಲ್ಲಿರ್ಪ ಜಲದಲಿ ಸಣ್ಣ
ಮೀನೊಂದ ಕಂಡು
ಅದ ನೀರಲಿ ವಿಸರ್ಜಿಸ ಹೊರಟಾಗ
ಆ ಸಣ್ಣ ಮೀನು ಮನುಷ್ಯ ಭಾಷೆಯಲಿ
ದಯಾಳು ರಾಜ, ನನ್ನನ್ನು ಈ ನದಿಯಲಿ
ವಿಸರ್ಜಿಸದಿರು, ಅಲ್ಲಿರುವ
ಇತರೆ ಜಲಚರಗಳ ಆಹಾರ ನಾನಾಗಲಾರೆ
ದಯಮಾಡಿ ನನ್ನ ರಕ್ಷಿಸು, ಎಂಬ
ಸಣ್ಣ ಮೀನಿನ ಮನವಿಯನೊಪ್ಪಿ
ತನ್ನ ಕಮಂಡಲದಿಂ ಅದ ರಕ್ಷಿಸಿ
ಮರುದಿನ ಸುರಕ್ಷಿತ ಸ್ಥಳದಿ ಅದ
ಬಿಡಬೇಕೆಂಬ ಯೋಚನೆಯಲ್ಲಿದ್ದರೆ
ಮರುದಿನ ಪ್ರಾಥಃಕಾಲದಿ ಆ ಮೀನು
ಬೆಳೆಯುತ್ತಾ
ಮೊದಲು ಕಮಂಡಲದ ತುಂಬಾ ಆಕ್ರಮಿಸಿ
ನಂತರದಿ ದೊಡ್ಡ ಕಡಾಯಿಯನ್ನೂ ಮೀರಿ
ಬೆಳೆದಾಗ
ಸತ್ಯವ್ರತ
ಆ ಮೀನನ್ನು ಸರೋವರದಲ್ಲಿ ಬಿಟ್ಟ
ಅಲ್ಪಾವಧಿಯಲಿ ಸರೋವರವೂ
ಮೀನಿಗೆ ಸಾಲದಾಗದೆ ಹಿಗ್ಗುತಿರಲು
ಆಶ್ಚರ್ಯಗೊಂಡ ಸತ್ಯವ್ರತ
ಅದ ಒಂದು ಅಗಾಧವಾದ ಮಡುವಿಗೆ ಸಾಗಿಸೆ
ಅಗಾಧ ಮಡುವನ್ನೂ ಮೀರಿ ಬೆಳೆದುದ ಕಂಡು
ಇದು ಸಾಮಾನ್ಯ ಮತ್ಸವಲ್ಲ, ಮಹಾ ಸಮುದ್ರವೇ
ಇದಕ್ಕೆ ತಕ್ಕ ನೆಲೆ ಎಂದೋಚಿಸೆ,
ಆ ಮತ್ಸ್ಯ,
ರಾಜಾ,
ನದೀ, ಮಡು, ಸರೋವರಗಳಿಂದ
ನನ್ನ ರಕ್ಷಿಸಿ,
ಈ ಅಗಾಧ ಸಮುದ್ರಕೆ ನನ್ನ ಬಲಿಯಾಗಿಸಿ
ಮಹಾಮತ್ಸ್ಯ ತಿಮಿಂಗಲ ಮೊಸಳೆಯ ಬಾಯಿಗೆ
ಆಹಾರವಾಗಲು
ನನ್ನ ಈ ಶರದಿಗರ್ಪಿಸುವೆಯಾ
ಎಂದಾಗ
ಸತ್ಯವ್ರತ, ಈ ಮತ್ಸ್ಯ ಆ ಭಗವಂತ
ನಾರಾಯಣ ರೂಪವೇ ಎಂದು ನಿರ್ಧರಿಸಿ
ಸಾಷ್ಟಾಂಗ ನಮಿಸಿ,
ಭಗವಂತಾ, ನನ್ನ ಅನೇಕ
ಜನುಮದ ಸುಕೃತದ ಫಲ ನಿನ್ನ
ಮತ್ಸ್ಯಾವತಾರದ ದರುಶನದ ಫಲ
ನನಗಾಯಿತು
ನಿನ್ನವತಾರದ ಉದ್ಧೇಶವ ನೋಡುವ ಭಾಗ್ಯವ
ನನಗನುಗ್ರಹಿಸಿ ಕಾಪಾಡು
ಎಂದು ನಮಿಸೆ
ಮತ್ಸ್ಯರೂಪಿ ಭಗವಂತ
ಕೇಳು ರಾಜೇಂದ್ರ,
ಇಂದಿನಿಂದ ಏಳು ದಿನಕೆ
ಮಹಾಪ್ರಳಯ ಉಂಟಾಗಿ
ಲೋಕವೆಲ್ಲವೂ ಸಮುದ್ರ ಜಲದಿ ಮುಳುಗೆ
ನನ್ನ ಭಕ್ತರ ಜೀವ ಉಳಿಸಲೇ
ಈ ಮತ್ಸ್ಯಾವತಾರ
ಅಗಾಧವಾದ ಪ್ರಳಯ ಜಲದಿ
ತೇಲಿಬರುವ ಒಂದು ಹಡಗಲಿ
ಈ ಜಗದ ಸಕಲ ಬಗೆಯ ಬೀಜಗಳು,
ಔಷಧಿ, ವನಸ್ಪತಿಗಳೊಡನೆ
ಸಪ್ತೃಷಿಗಳೊಡನೆ ಹಡಗಲಿ ನೀನೂ
ಹೆದರದೆ ಕುಳಿತರೆ
ಮಹಾ ಮತ್ಸ್ಯಾಕೃತಿಯಿಂದ
ಹಡಗಿನ ಸಮೀಪ ಬರುವ ನನ್ನ
ಮುಖದ ಮೇಲಿರುವ ಶೃಂಗಕೆ
ಒಂದು ಸರ್ಪವ ಕಟ್ಟಿ
ಅದರಿಂ ಹಡಗ ಕಟ್ಟಿಬಿಡು, ಎಂದರುಹಿ
ಪ್ರಳಯ ಮಾರುತದ ರಭಸಕೆ ಸಿಕ್ಕಿ ಮುಳುಗದೆ
ಈ ಜಗವ, ಜಗದೆಲ್ಲ ಜೀವಿಗಳ ರಕ್ಷಿಸಿ
ಬ್ರಹ್ಮನ ಸೃಷ್ಟಿಕಾರ್ಯ ಪುನರಾರಂಭಗೊಳಿಸಿ
ಹಯಗ್ರೀವನಿಂದ ವೇದಗಳ ರಕ್ಷಿಸಿ
ನಿರ್ಗಮಿಸಿದ ನಾರಾಯಣ
ಸತ್ಯವ್ರತ “ವೈವಸ್ವತ ಮನ್ವಂತರಧಿಪತಿಯಾದ”
–ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=42908
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಪ್ರಕಟಿಸಿದ “ಸುರಹೊನ್ನೆ”ಗೆ ವಂದನೆಗಳು.
ಚೆನ್ನಾಗಿದೆ
ಎಂದಿನಂತೆ ಕಾವ್ಯ ಭಾಗವತ ಓದಿಸಿಕೊಂಡುಹೋಯಿತು… ಸಾರ್
ವೈವಸ್ವತ ಮನ್ವಂತರಧಿಪತಿಯಾದ ಈ ಭಾಗವೂ ಕೌತುಕಮಯವಾಗಿ ಮೂಡಿ ಬಂದಿದೆ.
ಮತ್ಸ್ಯಾವತಾರದ ಮುಂದುವರಿದ ಕಥಾನಕ ಸೊಗಸಾಗಿದೆ ಸರ್.