ಪರಾಗ

ವಾಟ್ಸಾಪ್ ಕಥೆ 63: ಮನಮಿಡಿಯುವ ಮಾನವೀಯತೆ.

Share Button

ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು

ಒಂದೂರಿನಲ್ಲಿ ಅಂಚೆ ಪೇದೆಯೊಬ್ಬನಿದ್ದ. ಅವನು ಮನೆಮನೆಗೆ ಅಂಚೆಯನ್ನು ಹಂಚುವ ತನ್ನ ಕೆಲಸವನ್ನು ಕರ್ತವ್ಯನಿಷ್ಠೆಯಿಂದ ಮಾಡುತ್ತಿದ್ದ. ಒಮ್ಮೆ ಒಬ್ಬರಿಗೆ ರಿಜಿಸ್ಟರ್ ಪೋಸ್ಟ್ ಬಂದಿತ್ತು. ಅದನ್ನು ವಿತರಿಸಲು ವಿಳಾಸದ ಮನೆಗೆ ಹೋದ. ಅದೊಂದು ಸಾಧಾರಣ ಜನರ ಮನೆ. ಬಾಗಿಲು ಮುಚ್ಚಿತ್ತು. ಹೊರಗಿನಿಂದ ‘ಪೋಸ್ಟ್’ ಎಂದು ಕೂಗಿದ. ಒಳಗಿನಿಂದ “ಹೊರಗಿಟ್ಟಿರುವ ಡಬ್ಬದಲ್ಲಿ ಹಾಕಿಬಿಡಿ” ಎಂಬ ಹೆಂಗಸಿನ ಧ್ವನಿ ಕೇಳಿಸಿತು.

ಅಂಚೆಯವನು “ಇದು ಡಬ್ಬದಲ್ಲಿ ಹಾಕುವಂತಿಲ್ಲ. ರಿಜಿಸ್ಟರ್ ಪೋಸ್ಟ್ ಆದ್ದರಿಂದ ನೀವೇ ಸಹಿಮಾಡಿ ತೆಗೆದುಕೊಳ್ಳಬೇಕು” ಎಂದು ಕೂಗಿದ. “ಓ..ಹೌದೇ, ಹಾಗಿದ್ದರೆ ಬರುತ್ತೇನೆ ತಾಳಿ” ಎಂದ ಹೆಣ್ಣುಮಗಳು ಬಹಳ ತಡವಾದರೂ ಬಂದು ಬಾಗಿಲು ತೆಗೆಯಲಿಲ್ಲ. ಅಂಚೆಯವನಿಗೆ ಅವಸರ. ಅವನು “ಏನಮ್ಮಾ ಈಗಲೇ ತಡವಾಗಿದೆ. ನಾನಿನ್ನೂ ಬಹಳ ಜನರ ಮನೆಗಳಿಗೆ ಪೋಸ್ಟ್ ತಲುಪಿಸಬೇಕು. ಒಬ್ಬೊಬ್ಬರೂ ಇಷ್ಟು ಸಮಯ ತೆಗೆದುಕೊಂಡರೆ ನನಗೆ ಕಷ್ಟವಾಗುತ್ತದೆ” ಎಂದ.

ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆಯಿತು. ಬಾಗಿಲಲ್ಲೇ ಕುಳಿತಿದ್ದ ಹೆಣ್ಣುಮಗಳು “ಕ್ಷಮಿಸಿ ತಡವಾಯಿತು. ಮನೆಯಲ್ಲಿ ಬೇರೆ ಯಾರೂ ಇಲ್ಲ.” ಎಂದು ತೆವಳುತ್ತ ಬಂದು ಸಹಿಹಾಕಿ ಪತ್ರವನ್ನು ಪಡೆದುಕೊಂಡಳು. ಅವಸರ ಮಾಡಿದ ಪೋಸ್ಟ್ಮನ್‌ ಅವಳ ಸ್ಥಿತಿ ನೋಡಿ “ನನಗೆ ಪರಿಸ್ಥಿತಿ ಗೊತ್ತಾಗಲಿಲ್ಲ ಕ್ಷಮಿಸಿ” ಎಂದು ಹೇಳಿದ.

ಆಕೆ “ಅಮ್ಮ ಸಾಮಾನು ತರಲು ಪೇಟೆಗೆ ಹೋಗಿದ್ದಾಳೆ. ನನಗೆ ಬಾಲ್ಯದಿಂದಲೂ ಕಾಲುಗಳಿಲ್ಲ. ನಾನು ಯಾವಾಗಲಾದರೂ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತೇನೆ. ಅದರದ್ದೇ ಸಂಬಂಧವಾಗಿ ಈ ಪತ್ರ” ಎಂದಳು. ಪೋಸ್ಟ್ಮನ್‌ ಅಲ್ಲಿಂದ ಹೊರಟುಹೋದ. ಆತನಿಗೆ ಹೆಣ್ಣುಮಗಳ ಸ್ಥಿತಿಯನ್ನು ಕಂಡು ಮನಸ್ಸು ಮರುಗಿತು. ಹುಡುಗಿ ಪೋಸ್ಟ್ಮನ್‌ನನ್ನು ನೋಡಿದಳು. ಅವನು ಬರಿಗಾಲಿನಲ್ಲಿ ಬಿಸಿಲಲ್ಲಿ ಮನೆಮನೆಗೆ ಓಡಾಡುತ್ತಿದ್ದ. ಅವಳಿಗೂ ಅಯ್ಯೋ ಎನ್ನಿಸಿತು.

ಅಂದಿನಿಂದ ಆಕೆಯ ವಿಳಾಸಕ್ಕೆ ಯಾವುದೇ ಪತ್ರಬಂದರೂ ಅಂಚೆಯವನು ಬಹಳ ಮುತುವರ್ಜಿಯಿಂದ ಕೂಗಿ ಕಾಯ್ದಿದ್ದು ಪತ್ರವನ್ನು ಕೊಟ್ಟು ಹೋಗುತ್ತಿದ್ದ. ಹೀಗೇ ಬಹಳ ಕಾಲ ನಡೆಯಿತು. ಆ ಹೆಣ್ಣುಮಗಳಿಗೂ ಅಂಚೆಯವನಿಗೂ ಬಾಂಧವ್ಯವೊಂದು ಬೆಸೆದುಕೊಂಡಿತು. ಆ ಹೆಣ್ಣುಮಗಳು ತುಂಬ ಆಲೋಚಿಸಿ ತನಗೆ ಬಹಳ ಮಹತ್ವ ಕೊಡುತ್ತಿದ್ದ ಅಂಚೆಯವನಿಗೆ ಏನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿದಳು. ತಾನು ಕೂಡಿಟ್ಟ ಹಣದಿಂದ ಒಂದು ಜೊತೆ ಚಪ್ಪಲಿಗಳನ್ನು ತಾಯಿಯ ನೆರವಿನಿಂದ ಖರೀದಿಸಿ ಅವನು ಮತ್ತೊಮ್ಮೆ ಬಂದಾಗ ಒತ್ತಾಯಪೂರ್ವಕವಾಗಿ ಅವನಿಗೆ ಕೊಟ್ಟಳು. ಅವನಿಗೆ ತಾನು ಬರಿಗಾಲಿನಲ್ಲಿ ನಡೆದಾಡುವುದನ್ನು ಗಮನಿಸಿ ಆಕೆ ಈ ಕೊಡುಗೆ ನೀಡಿದ್ದಾಳೆ ಎಂಬುದು ಅರಿವಾಯಿತು. ತನಗೆ ಕಾಲಿಲ್ಲದೆ ಇದ್ದರೂ ನನ್ನಂತಹವನ ಬಗ್ಗೆ ಆಕೆ ತೋರಿದ ಮಾನವೀಯತೆಗಾಗಿ ಮನ ತುಂಬಿಬಂತು. ಆಕೆಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟುಹೋದನು.

ತನ್ನ ಇಲಾಖೆಯ ಅಧಿಕಾರಿಯ ಬಳಿಗೆ ಹೋಗಿ ಅಂಚೆಯವನು “ಸರ್, ನನ್ನನ್ನು ಬೇರೆ ಊರಿಗೆ ವರ್ಗಮಾಡಲು ಸಾಧ್ಯವೇ? ಹಾಗಿದ್ದರೆ ಮಾಡಿ” ಎಂದು ಪ್ರಾರ್ಥಿಸಿದ. ಒಳ್ಳೆಯ ಕೆಲಸಗಾರನಾದ ಅವನನ್ನು ವರ್ಗ ಮಾಡಲು ಅಧಿಕಾರಿಗೆ ಇಷ್ಟವಿರಲಿಲ್ಲ. ಕಾರಣವೇನು ಎಂದು ಪ್ರಶ್ನಿಸಿದಾಗ ಅಂಚೆಯವನು “ ನಡೆದುದನ್ನೆಲ್ಲ ಅವರಿಗೆ ತಿಳಿಸಿದ. ಸರ್ ಬರಿಗಾಲಿನಲ್ಲಿ ನಾನು ಓಡಾಡುತ್ತಿದ್ದುದನ್ನು ಕಂಡು ಕಾಲಿಲ್ಲದ ಹೆಣ್ಣುಮಗಳು ಚಪ್ಪಲಿಗಳನ್ನು ಕೊಡುಗೆಯಾಗಿ ನೀಡಿದಳು. ಆದರೆ ನಾನು ಪ್ರತಿಯಾಗಿ ಆಕೆಗೆ ಕಾಲುಗಳನ್ನು ನೀಡಲಾಗುತ್ತಿಲ್ಲವಲ್ಲಾ ಎನ್ನುವ ನೋವು ಪದೇಪದೇ ನನ್ನನ್ನು ಚುಚ್ಚುತ್ತದೆ” ಎಂದನು.

ಇನ್ನೊಬ್ಬರ ಕಷ್ಟ ಸುಖ, ನಗು ಅಳು, ಎಲ್ಲವನ್ನೂ ಅರಿತು ತಾನೇ ಸ್ಪಂದಿಸುವಂತಹ ಶಕ್ತಿಯಿರುವುದು ಯೋಚನಾಶಕ್ತಿ ಇರುವ ಮನುಷ್ಯನಿಗೆ ಮಾತ್ರ. ‘ಅರಿತರೆ ಮಾನವ, ಮರೆತರೆ ದಾನವ’ ಎಂಬ ಮಾತನ್ನು ಎಲ್ಲರೂ ತಿಳಿದಿರಬೇಕು.

ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು

20 Comments on “ವಾಟ್ಸಾಪ್ ಕಥೆ 63: ಮನಮಿಡಿಯುವ ಮಾನವೀಯತೆ.

  1. ಸೂಕ್ಷ್ಮ ಸಂವೇದನೆಯ ಚಂದದ ಕಥೆ. ರೇಖಾ ಚಿತ್ರವೂ ಅತ್ಯಂತ ಪೂರಕವಾಗಿದೆ.

  2. ಸ್ಪಂದಿಸುವ ಸೂಕ್ಷ್ಮ ಮನಸ್ಸು ಇದ್ದರೆ…..ಈ ಜಗತ್ತೇ ಸ್ನೇಹಮಯವಾಗುತ್ತದೆ.‌ತುಂಬಾ ಚೆನ್ನಾಗಿ ಮೂಡಿಬಂದಿದೆ ಬರಹ

  3. ಸ್ಪಂದಿಸುವ ಸೂಕ್ಷ್ಮ ಮನಸ್ಸು ಇದ್ದರೆ ಈ ಜಗತ್ತೇ ಸ್ನೇಹಮಯವಾಗುತ್ತದೆ.‌ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಥೆ

  4. ಸ್ಪಂದಿಸುವ ಸೂಕ್ಷ್ಮ ಮನಸ್ಸು ಇದ್ದರೆ ಇಡೀ ಜಗತ್ತೇ ಸ್ನೇಹಮಯವಾಗುತ್ತದೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ‌ ಕಥೆ ಮೇಡಂ

  5. ಇನ್ನೊಬ್ಬರ ನೋವಿಗೆ ಮಿಡಿಯುವ ಹೃದಯಸ್ಪರ್ಶಿ ಕಥೆಯು ಸುಂದರ ಪೂರಕ ಚಿತ್ರದೊಂದಿಗೆ ಕಳೆಗಟ್ಟಿದೆ… ನಾಗರತ್ನ ಮೇಡಂ.

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *