ಲಹರಿ

ಥಟ್ ಅಂತ ಹೇಳುವ/ಕೇಳುವ ಮುನ್ನ…..!

Share Button

ತುಂಬಾ ಜನರಿಗೊಂದು ಅಭ್ಯಾಸ. ತಮಗೆ ತೋಚಿದ್ದನ್ನು ಥಟ್ ಅಂತ ಹೇಳಿಬಿಡುವುದು ಹಾಗೆಯೇ ಏನಾದರೂ ಕೇಳಬೇಕೆಂದಿದ್ದರೆ ಥಟ್ ಅಂತ ಕೇಳಿಬಿಡುವುದು. ಆ ಸಂದರ್ಭದಲ್ಲಿ ಸುತ್ತ ಮುತ್ತ ಯಾರಿದ್ದಾರೆ ಅಂತ ಗಮನಿಸುವುದೂ ಇಲ್ಲ. ಗಮನಿಸಿದರೂ ಆ ಬಗ್ಗೆ ಲಕ್ಷ್ಯವಿಲ್ಲ. ತನ್ನ ಮಾತು ಕೇಳಿದವರ ಮೇಲೆ ಯಾವ ಪರಿಣಾಮ ಬೀರಬಹುದು ಅಂತಾ ಆಲೋಚಿಸುವುದಿಲ್ಲ.

ಇತ್ತೀಚೆಗೆ ನನ್ನ ಹತ್ತಿರದ ಬಂಧುವೊಬ್ಬರು ತನ್ನ ಐವತ್ತನೆಯ ಹುಟ್ಟುಹಬ್ಬದಂದು ಕೆಲವು ಆಪ್ತರನ್ನು ಮನೆಗೆ ಆಹ್ವಾನಿಸಿದ್ದರು. ಆದರೆ ತನ್ನ ಹುಟ್ಟುಹಬ್ಬದ ನಿಮಿತ್ತ ಎಂದು ಹೇಳಿರಲಿಲ್ಲ. ಒಂದು ತಿಂಗಳ ಹಿಂದೆಯಷ್ಟೇ ಅವರ ಭವ್ಯ ಬಂಗಲೆಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು. ಗೃಹಪ್ರವೇಶದ ದಿನ ಬರಲಾಗದ ಕೆಲವು ಆಪ್ತರಿಗೊಂದು ಒಳ್ಳೆಯ ಊಟ ಕೊಡುವ ಮನಸ್ಸು ಅಂತ ಹೇಳಿ  ನಮ್ಮನ್ನು ಆಹ್ವಾನಿಸಿದ್ದರು. ಅಲ್ಲಿಗೆ ಆಗಮಿಸಿದ್ದ ಮಹಿಳೆಯೊಬ್ಬರು “ನಮ್ಮನ್ನೆಲ್ಲಾ ಯಾಕೆ ಕರೆದದ್ದು ಹೇಳು” ಅಂತ ನನ್ನ ಬಂಧುವಿನ ಬಳಿ ದುಂಬಾಲು ಬಿದ್ದರು. ಹುಟ್ಟು ಹಬ್ಬ ಅಂತ ಗೊತ್ತಾದ ಬಳಿಕ “ಎಷ್ಟನೇ ವರ್ಷದ ಹುಟ್ಟುಹಬ್ಬ? ಅರುವತ್ತನೆಯ ಜನ್ಮದಿನವಾ?” ಅಂತ ಕೇಳುವುದೇ ಆ ಮಹಿಳೆ? ಆಗ ಆ ಮಹಿಳೆಯ ಗಂಡ “ಅವನು ನನಗಿಂತ ಸಣ್ಣವ ಅಲ್ವಾ? ನನಗೇ ಅರುವತ್ತು ಆಗಲಿಲ್ಲ” ಅಂದರು. ಆಲೋಚನೆ ಮಾಡದೆ ಥಟ್ ಅಂತ ಹೇಳಬೇಕಾದ ಅಗತ್ಯ ಆ ಮಹಿಳೆಗೆ ಇರಲಿಲ್ಲ ಅಲ್ವಾ?

ಇತ್ತೀಚೆಗೆ ನನ್ನ ಹಳೆಯ ಪರಿಚಯದವಳೊಬ್ಬಳು ಸಿಕ್ಕಿದ್ದಳು. ನನ್ನನ್ನು ನೋಡಿದ ಕೂಡಲೇ “ಯಬ್ಬಾ ! ಎಷ್ಟು ದಪ್ಪ ಆಗಿದ್ದೀ ಮಾರಾಯ್ತೀ!” ಅಂದಳು. ನಾನು ನಸು ನಕ್ಕೆ. ಅಷ್ಟಕ್ಕೂ ಅವಳು ನನಗೆ ಸಿಕ್ಕಿದ್ದು ಸುಮಾರು 35 ವರ್ಷಗಳ ಬಳಿಕ. 35 ವರ್ಷದ ಹಿಂದೆ ನಾನು ಹುಡುಗಿ. ಈಗ ಅರ್ಧ ಶತಕ ದಾಟಿದ ಬಳಿಕವೂ ಆಗ ಹೇಗಿದ್ದೆ ಹಾಗೆಯೇ ಇರಲು ಸಾಧ್ಯವೇ? ಇದೊಂದು ಉದಾಹರಣೆ ಮಾತ್ರ. ಇದೇ ಪ್ರಶ್ನೆ ಕೇಳಿದವರ ಪಟ್ಟಿ ಉದ್ದವಿದೆ.  ವಿದ್ಯಾರ್ಥಿ ದಿನಗಳಲ್ಲಿ  ನರಪೇತಲಿಯಂತಿದ್ದ ನಾನೀಗ ಮೈ ಕೈ ತುಂಬಿಕೊಂಡಿದ್ದೇನೆ. ಯಾವ ಡಯಟ್ ಮಾಡಿದರೂ ದೇಹ ಒಂದಿಂಚೂ ಕೆಳಗಿಳಿಯುವುದಿಲ್ಲ. ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ನನ್ನ ತೂಕ ಒಂದೇ ರೀತಿ ಇರುವುದು ನನಗೆ ಗೊತ್ತಿರುವ ವಿಚಾರ. ಕೆಲವರು “ನೀವು ಇನ್ನೂ ಕೂಡಾ ದಪ್ಪ ಆಗಿದ್ದೀರ” ಅನ್ನುವುದು, ಹಾಗೆಯೇ ಇನ್ನು ಕೆಲವರು “ನೀವು ಅವತ್ತಿಗಿಂತ ಸ್ವಲ್ಪ ಇಳಿದು ಹೋಗಿದ್ದೀರಾ” ಅನ್ನುವುದು ಇದೆಲ್ಲಾ ಕೇಳಿ ಕೇಳಿ ಸುಸ್ತಾಗಿ ಹೋಗಿದೆ. ಯಾರಿಗೂ ಸಮಜಾಯಿಷಿ ಕೊಡುವ ಗೋಜಿಗೆ ಹೋಗದೇ  ನಸುನಕ್ಕು ಸುಮ್ಮನಿರುತ್ತೇನೆ.

ನನ್ನನ್ನು ನೋಡಿದ ಕೂಡಲೇ ಥಟ್ ಅಂತ ಹಲವರು ಕೇಳುವಂತಹ ಇನ್ನೊಂದು ಪ್ರಶ್ನೆ! “ನೀವು ಇನ್ನೂ ಸರ್ವಿಸಿನಲ್ಲಿ ಇದ್ದೀರಾ?”, “ನೀವು ನಿವೃತ್ತರಾಗಿದ್ದೀರಾ?”, “ನಿವೃತ್ತಿಯಾಗಲು ಇನ್ನೂ ಎಷ್ಟು ವರ್ಷವಿದೆ?  – ಸ್ನಾತಕೋತ್ತರ ಪದವಿ ಮುಗಿದ ಕೂಡಲೇ ಉದ್ಯೋಗಕ್ಕೆ ಸೇರಿದುದರಿಂದ 32 ವರ್ಷಗಳ ಸೇವಾನುಭವ ನನ್ನದು.  ನನಗನ್ನಿಸುವುದು ಬಹುಶಃ ಅವರಿಗೆ ನನ್ನ ಪರಿಚಯವಾದಾಗಿನಿಂದ ನಾನು ಉದ್ಯೋಗದಲ್ಲಿರುವುದು ಗೊತ್ತಿದೆ. ಹಾಗಾಗಿ ಈಕೆಗೆ ವಯಸ್ಸಾಯಿತು ಅನ್ನುವ ಭಾವವಿರಬಹುದು. ವಯಸ್ಸೇನೂ ನಿಲ್ಲುವುದಿಲ್ಲ ಬಿಡಿ. ಅದರ ಪಾಡಿಗೆ ಅದು ಓಡುತ್ತಾ ಇರುತ್ತದೆ. ಕೆಲವರು ತಮ್ಮ ವಯಸ್ಸಿಗಿಂತ ಹಿರಿಯರಂತೆ ಕಾಣಿಸಬಹುದು. ಅದಕ್ಕೆ ಆರೋಗ್ಯ ಸಮಸ್ಯೆಯೂ ಕಾರಣ ಇರಬಹುದು. ದೇಹದ ಬಗ್ಗೆ ಕಾಳಜಿ ವಹಿಸಲು ಸಮಯವಿಲ್ಲದಿರಬಹುದು. ಹಾಗೆಯೇ ಇನ್ನು ಕೆಲವರಿಗೆ ಪ್ರಾಯ ಜಾಸ್ತಿಯಾದರೂ ಗೊತ್ತೇ ಆಗುವುದಿಲ್ಲವಾದ್ದರಿಂದ ಕಿರಿಯರಂತೆ ಕಾಣಿಸುತ್ತಾರೆ. ವಯಸ್ಸಿನಲ್ಲಿ ಕಿರಿಯಳಾಗಿದ್ದರೂ ತಂಗಿ ಅಕ್ಕನಿಗಿಂತ ವಯಸ್ಸಾದವಳಂತೆ ಕಾಣಿಸಬಹುದು. ಕೆಲವರಿಗೆ ಛೇಡಿಸುವುದೆಂದರೆ ಅದೇನೋ ಖುಷಿ. “ಅಕ್ಕನಿಗಿಂತ ಜಾಸ್ತಿ ಪ್ರಾಯ ಆದ ಹಾಗೇ ಕಾಣಿಸ್ತೀಯಾ” ಅನ್ನುವವರಿಗೇನೂ ಕಡಿಮೆಯಿಲ್ಲ. ನೊಂದುಕೊಳ್ಳುವವರು ನೊಂದುಕೊಳ್ಳುತ್ತಾರೆ. ಇನ್ನು ಕೆಲವರು “ಅದರಿಂದ ನಿಮಗೇನು ತೊಂದರೆ?” ಅಂತ ಕೇಳಿಯೂ ಬಿಡುತ್ತಾರೆ.

ಕೆಲವು ವರ್ಷಗಳ ಹಿಂದಿನ ನೆನಪು. ತರಬೇತಿ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ನನ್ನಂತೆಯೇ ತರಬೇತಿ ಪಡೆಯಲು ಬಂದಿದ್ದ ಆಕೆ ನನ್ನನ್ನು ನೋಡಿದೊಡನೆಯೇ “ನಿಮ್ಮ ಸೀರೆಯ ಬಣ್ಣಗಳ ಹೊಂದಾಣಿಕೆ ನನಗೆ ಇಷ್ಟ ಆಗಲಿಲ್ಲ” ಅನ್ನುವುದೇ!. ಅವರಿಗೆ ಇಷ್ಟವಾಗುವಂತಹ ಸೀರೆ ನಾನು ಉಡಲು ಸಾಧ್ಯವೇ? ಅವರಿಗೆ ಇಷ್ಟ ಆಗಲಿಲ್ಲ ಅಂತಲೇ ಇರಲಿ. ಅದನ್ನು ಹೇಳುವ ಅಗತ್ಯ ಆಕೆಗೆ ಖಂಡಿತಾ ಇರಲಿಲ್ಲ. ಕೆಲವೊಮ್ಮೆ ಕೆಲವರು ನೀಡುವ ಇಂತಹ ಅಸಂಬದ್ಧ ಪ್ರತಿಕ್ರಿಯೆಗಳಿಂದ ನೊಂದುಕೊಳ್ಳುವ ಜೀವಗಳು ಕೂಡಾ ಇವೆ. “ಅಜ್ಜಿ ಸೀರೆ ಅಂತ ತಾತ್ಸಾರ ಬೇಡ, ನನ್ನ ಸಾಕಷ್ಟು ಸೀರೆಗಳು ಕಪಾಟಿನಲ್ಲಿ ರಾಶಿ ಬಿದ್ದಿವೆ. ನೀನು ಹೇಗೂ ಉದ್ಯೋಗಕ್ಕೆ ಹೋಗುವವಳು. ದಿನಾ ಒಂದೊಂದು ಸೀರೆ ಉಡು. ಗಾಳಿಯಾದರೂ ಆಡಲಿ” ಅಂತ ಹೇಳಿದ ಅತ್ತೆಯ ಮಾತಿಗೆ ಬೆಲೆ ಕೊಟ್ಟು ದಿನಾಲೂ ಅತ್ತೆಯ ಸೀರೆಗಳನ್ನುಟ್ಟು ಬರುತ್ತಿದ್ದ ಓರ್ವ ಸಹೋದ್ಯೋಗಿಯನ್ನು ಕಂಡೊಡನೆ. “ನೀನೋ! ನಿನ್ನ ಸೀರೆಗಳೋ! ಒಳ್ಳೆ ಅಡುಗೂಲಜ್ಜಿ ಸೀರೆಗಳಂತಿವೆ” ಅಂದಳು ಇನ್ನೋರ್ವ ಸಹೋದ್ಯೋಗಿ.  ಕೇಳಿದವಳು ಹೇಳಿದವಳ ಬೆವರಿಳಿಸಿಬಿಟ್ಟಳು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ?

ಇಂತಹ ಹಲವು ಸನ್ನಿವೇಶಗಳನ್ನು ಎಲ್ಲರೂ ಎದುರಿಸಿರುತ್ತಾರೆ. ಕೆಲವರು ಬೇಕು ಬೇಕೆಂದೇ ಅಂದರೆ ಮನಸು ನೋಯಿಸಲೆಂದು ಕೇಳಿದರೆ, ಇನ್ನು ಕೆಲವರು ತೀರಾ ಸಹಜವಾಗಿ ವಿಚಾರಿಸುವವರೂ ಇದ್ದಾರೆ. ಎಲ್ಲರ ಸ್ವಭಾವವೂ ಒಂದೇ ರೀತಿ ಇರುವುದಿಲ್ಲ ತಾನೇ?  ಸೂಕ್ಷ್ಮ ಮನಸ್ಥಿತಿಯವರು ನೊದುಕೊಳ್ಳುತ್ತಾರೆ ಆದರೆ ಎದುರಾಡಲು ಹೋಗುವುದಿಲ್ಲ. “ನನ್ನ ಚಿಂತೆ ನಿಮಗೆ ಯಾಕೆ? ನಿಮಗಿದೆಲ್ಲಾ ಯಾಕೆ?” ಅಂತ ಕೇಳುವವರೂ ಇದ್ದಾರೆ.  ಹಾಗಾಗಿ ನನಗನ್ನಿಸುವುದು- ನಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಕೇಳುವ ಮುನ್ನ ಕೊಂಚ ಆಲೋಚನೆ ಮಾಡಿದರೆ ಒಳ್ಳೆಯದಲ್ಲವೆ ಅನ್ನುವುದು. ಯಾರನ್ನೂ ನೋಯಿಸಬಾರದು. ನೋಯಿಸುವ ಹಕ್ಕೂ ನಮಗಿಲ್ಲ. ಇನ್ನೊಬ್ಬರ ವಿಷಯದಲ್ಲಿ ಮೂಗು ತೋರಿಸುವ ಜಾಯಮಾನ ಯಾಕೆ? ಎಲ್ಲರಿಗೂ ಅವರವರದೇ ಆದ ಯೋಚನಾ ವಿಧಾನವಿದೆ. ಅಭಿವ್ಯಕ್ತಿಸುವ  ಸ್ವಾತಂತ್ರ್ಯ ಇದೆ. ನಾವು ಬದುಕುವುದು ನಮಗೋಸ್ಕರ. ಉಳಿದವರಿಗೋಸ್ಕರ ಅಲ್ಲ. ಥಟ್ ಅಂತ ಹೇಳುವ/ಕೇಳುವ/ಪ್ರತಿಕ್ರಿಯಿಸುವ ಜಾಯಮಾನ ಕಡಿಮೆ ಮಾಡಿಕೊಳ್ಳೋಣ ಅಲ್ಲವೇ?

ಡಾ. ಕೃಷ್ಣಪ್ರಭ ಎಂ, ಮಂಗಳೂರು

9 Comments on “ಥಟ್ ಅಂತ ಹೇಳುವ/ಕೇಳುವ ಮುನ್ನ…..!

  1. ತುಂಬಾ ಒಳ್ಳೆಯ ಬರಹ. ಎಲ್ಲರೂ ಯೋಚಿಸಬೇಕಾದ ವಿಷಯ. ನೀವಂದಂತೆ ಸೂಕ್ಷ್ಮ ಮನಸ್ಸಿನವರಿಗೆ ಅರಗಿಸಿಕೊಳ್ಳುವುದು ಕಷ್ಟವೇ ಸರಿ.

  2. ಥಟ್ ಅಂತ… ಹೇಳುವ ಶೀರ್ಷಿಕೆ ನೋಡಿದಾಗ ಮೊದಲು ನೆನಪಾದುದು ಡಾ. ನಾ. ಸೋಮೇಶ್ವರ ಅವರನ್ನು! ಓದಿದ ಮೇಲೆ ವಿಷಯ ನಿಜಕ್ಕೂ ಗಂಭೀರವೆನಿಸಿತು. ಕೆಲವೊಮ್ಮೆ ಇಂತಹ ಮಾತುಗಳು ಈಟಿಯಂತೆ ಚುಚ್ಚಿ ನೋಯಿಸುತ್ತವೆ. ನಮ್ಮ ಆಫೀಸಿನಲ್ಲಿ ಇಂತಹದೇ ಗುಣದ ಮಹಿಳೆ ಸಹೋದ್ಯೋಗಿಗೆ ಕೇಳಿದ ಪ್ರಶ್ನೆಗೆ, “ನನ್ನ
    ದಪ್ಪವನ್ನು ನಾನು ತಾನೇ ಹೊರುವುದು, ನಿಮಗೇನು ತೊಂದ್ರೆ?” ಎಂದು ನೀರಿಳಿಸಿ ಬಿಟ್ಟದ್ದು ನೆನಪಾಯ್ತು. ಸುದೀರ್ಘ ಬಿಡುವಿನ ಬಳಿಕದ ನಿಮ್ಮ ಲೇಖನ ಇಷ್ಟವಾಯ್ತು ಮೇಡಂ.

  3. ಈ ತರದ ಅನುಭವ ಆಗಾಗ ಆಗುತ್ತಿರುತ್ತದೆ… ಅದನ್ನ ಬರೆದು ಅನುಭವ ಹಂಚಿಕೊಂಡದ್ದರಿಂದ ನಮ್ಮ ಅನಿಸಿಕೆಯನ್ನು ಹೇಳಿಕೊಂಡ ಅನುಭವ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *