
ಮದುವೆಗೆಂದು ಮನೆ ಮುಂದೆ ಹಾಕಿದ ಹಂದರ ಒಣಗಿತ್ತು
ಬಂಧು ಬಳಗದವರಿಂದ ತುಂಬಿ ಹೋಗಿದ್ದ ಮನೆ ಖಾಲಿಯಾಗಿತ್ತು
ಕೈಯಲ್ಲಿರುವ ಮದರಂಗಿಯ ಬಣ್ಣ ಮಾಸಿತ್ತು
ಕಟ್ಟಿದ ಕಂಕಣದ ಎಲೆಯೆಲ್ಲಾ ಉದುರಿ ಹಳದಿ ದಾರ ಮಾತ್ರ ಉಳಿದಿತ್ತು
ನಾಳೆ ನನ್ನ ಗಂಡನ ಮನೆಗೆ ಕಳುಹಿಸಿ ಬರಲು ಚಿಕ್ಕಮ್ಮನನ್ನು ಅಮ್ಮ ಒಪ್ಪಿಸುತ್ತಿದ್ದಳು
ಬಟ್ಟೆಯ ಮಡಿಸುತಾ ಉಪಾಯವಾಗಿ ನೀತಿ ಮಾತುಗಳ ಹೇಳುತ್ತಿದ್ದಳು
ಅಗಲ ಕಣ್ಣಿನ ವಿಶಾಲ ಎದೆಯ ಸುಂದರಾಂಗನ ನೋಡಿ ಒಪ್ಪಿಗೆ ಕೊಟ್ಟಿದ್ದೆ
ಈಗ ಬೆಳೆದ ಮನೆಯ ತೊರೆದು ಹೋಗುವ ಸಮಯ ಬಂದಾಗ ಕುಸಿದು ಕೂತಿದ್ದೆ
ತಡರಾತ್ರಿಯವರೆಗೆ ಓದಿರುತ್ತಾಳೆ ಎಂದು ಅಮ್ಮ ಬೇಗನೆ ಏಳಿಸುತ್ತಿರಲಿಲ್ಲ
ಎಲ್ಲಿ ರವಿಯ ಕಿರಣಗಳು ಮಗಳ ಕಣ್ಣು ಕುಕ್ಕುತ್ತವೆ ಎಂದು ಅಪ್ಪ ಪರದೆ ಸರಿಸುತ್ತಿರಲಿಲ್ಲ
ಹತ್ತುವರೆಗೆ ಬಂದರೂ ಅಮ್ಮನ ಹೆಂಚು ಕಾದು ಬಿಸಿ ದೋಸೆಯ ಕೊಡುತ್ತಿತ್ತು
ಸ್ವಲ್ಪ ಮೈಬಿಸಿಯಾದರೂ ಅಪ್ಪನ ಗಾಡಿ ವೈದ್ಯರ ಬಳಿ ಕರೆತರುತ್ತಿತ್ತು
ಹರಡಿದ ಕೋಣೆಯ ಸ್ವಚ್ಚತೆ ಅಮ್ಮ ಗೊಣಗುತ್ತಲೇ ಮಾಡುತ್ತಿದ್ದಳು
ಅಲ್ಲಲ್ಲಿ ಎಸೆದ ವಸ್ತ್ರಗಳ ಆಯ್ದುಕೊಂಡು ಒಗೆದು ಒಣಗಿಸುತ್ತಿದ್ದಳು
ಬೇಕು ಬೇಡಗಳೆನ್ನೆಲ್ಲಾ ಅಪ್ಪ ಮೊದಲೇ ತಿಳಿದು ಪೂರೈಸುತ್ತಿದ್ದರು
ದುಃಖ ಬೇಸರಗಳ ಮೂಟೆ ಕಟ್ಟಿ ಮೂಲೆಗೆಸಿಯಲು ತಂದೆಯ ಸೂಳ್ನುಡಿಗಳು ಸಾಕಾಗಿದ್ದವು
ವೃದ್ಧ ಅತ್ತೆ ಮಾವರ ನೋಡಿಕೊಳ್ಳುತ್ತಾ ಆ ದೊಡ್ಡ ಮನೆಯ ನಿಭಾಯಿಸಬಲ್ಲೆನೇ
ಲೋಟ ಕಾಫಿಯ ಕಾಯಿಸಲು ಗೊತ್ತಿಲ್ಲದ ನಾನು ಅಡುಗೆ ಮಾಡಬಲ್ಲನೇ
ಇನಿಯನ ತುಟಿಯಂಚಿನ ಕಿರುನಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ
ಹಸಿರ ಬಳೆಗಳ ಸದ್ದು ಕಿವಿಗೆ ಮುದವ ನೀಡುತ್ತಿದೆ
ಮಧುರ ಮಾತುಗಳ ಮಹಿಮೆಯಿಂದ ಗೊತ್ತಿಲ್ಲದ ಕೆಲಸಗಳ ಮಾಡುವುದ ಕಲಿತಿರುವೆ
ಹೊಸ ಜನರ ಹೊಗಳಿಕೆಗಾಗಿ ಹಗಲಿರುಳು ದುಡಿಯುತ್ತಿರುವೆ
ಆಕಸ್ಮಿಕವಾಗಿ ರುಚಿಗಟ್ಟಿದ ರಸಪಾಕ ಮತ್ತೆ ಚೆನ್ನಾಗಿಸುವ ಜವಾಬ್ದಾರಿ ತರುತ್ತಿದೆ
ಪೋನಿನಲ್ಲಿ ಅತ್ತೆ ಎನ್ನ ಬಗ್ಗೆ ಆಡುವ ಮೆಚ್ಚುಗೆ ಮಾತುಗಳು ಆಯಾಸ ಮರೆಸುತ್ತಿವೆ
ಅಂಗಳ ಅಡುಗೆ ಮನೆಗಳು ನನ್ನವೇ ಎನ್ನುವ ಭಾವ ಮೂಡುತ್ತಿದೆ
ಮನೆಯಿಂದಲೇ ಕಛೇರಿಯ ಕೆಲಸ ಮಾಡುತ್ತಾ ಸೈ ಎನಿಸಿಕೊಳ್ಳುವ ಕಲೆ ಕರಗತವಾಗುತ್ತಿದೆ
ಬೆಳಗಿನ ಜಾವದಲ್ಲಿ ವಾಕ್ ಮುಗಿಸಿಕೊಂಡು ಹಾಲು ತರಕಾರಿ ತಂದ ಮಾವನ ಕೈಗೆ ಬಿಸಿ ಚಹಾ ಕೊಟ್ಟಿರುವೆ
ಪೂಜೆ ಪುನಸ್ಕಾರಗಳ ಜೊತೆಗೆ ಅಡುಗೆ ಕೆಲಸಕೆ ನೆರವಾಗುವ ಅತ್ತೆಗೆ ಮನದಲ್ಲೇ ನಮಿಸಿರುವೆ
ಹೊರೆ ಎಂದುಕೊಳ್ಳದೆ ತನ್ನದೆಂದುಕೊಂಡು ಪ್ರೀತಿಸಿದರೆ ಪವಾಡವೇ ಜರುಗುತ್ತದೆ
ಪ್ರೇಮಮಯ ವಾತಾವರಣ ಮನೆಯ ಅಂದವನ್ನೇ ಹೆಚ್ಚಿಸುತ್ತದೆ
ನನ್ನ ಮನೆ ಮುಂದೆ ಎನ್ನ ಕಂದಮ್ಮಗಳ ತಪ್ಪು ಹೆಜ್ಜೆಗಳಿಗೆ ನೆಲೆಯಾಗುವ ತಾಣವಿದುವೆಂದು ಅನಿಸತೊಡಗಿದೆ
ಒಲವ ಹಂಚಿ ಒಲವು ಪಡೆದುಕೊಳ್ಳುವ ಈ ಮೋಡಿಯ ಮುಂದೆ ದಿನ ಕಳೆಯುತ್ತಿರುವುದು ಗೊತ್ತಿಲ್ಲವಾಗಿದೆ
–ಶರಣಬಸವೇಶ ಕೆ. ಎಂ
ಬದುಕಿನಲ್ಲಿ ಹೊಂದಾಣಿಕೆ.. ಮಾಡಿಕೊಂಡಾಗ ಮಾತ್ರ ಆ ಬದುಕು ಚಂದ…ಕವಿತೆ ಮೂಲಕ ಹೇಳುರುವ ರೀತಿ ಚೆನ್ನಾಗಿ ದೆ ಸಾರ್
ಹೆಣ್ಣಿನ ಬದುಕಿನ ಪೂರ್ತಿ ಚಿತ್ರಣ ಇಲ್ಲಿದೆ.
ಎಂಥಹ ಚಂದದ ಪರಿಕಲ್ಪನೆ! ಮನಸ್ಸಿಗೆ ಮುದ ನೀಡುವ ಆಲೋಚನೆ.
ಎಲ್ಲ ಹೆಣ್ಣುಗಳಿಗೂ ಇಂತಹ ಪ್ರೇಮಮಯ ವಾತಾವರಣ ಸಿಕ್ಕಿದ್ದರೆ
ಚಂದದ ಕವನ
ಪ್ರೇಮಮಯ ವಾತಾವರಣದ ಸೃಷ್ಟಿಕರ್ತರು ಸ್ವತಃ ನಾವೇ ಹೊರತು ಬೇರೆಯವರಲ್ಲ…
ಸುಂದರ, ಭಾವಪೂರ್ಣ ಕವನ ಚೆನ್ನಾಗಿದೆ.