ಬೊಗಸೆಬಿಂಬ

ಸಪ್ತರ್ಷಿಮಂಡಲ !

Share Button


“Dedication matters more than Designation. Sincerity outweighs Seniority.
Values are more valuable than Valuables. Mindset surpasses Marks.
Effort is greater than Results. Loyalty is nobler than Royalty. And above all,
Real work is more important than mere Paperwork.”

ಮೇಲಿನ ದರ್ಶನೋಕ್ತಿಯಲ್ಲಿ ಒಟ್ಟು ಏಳು ಸಾಲುಗಳಿವೆ. ಒಂದೊಂದು ಸಾಲೂ ಅರ್ಥಗರ್ಭಿತವಾಗಿದೆ. ಹಾಗಾಗಿ ಇದನ್ನು ಸಪ್ತರ್ಷಿ ಮಂಡಲ ಎಂದು ಕರೆಯುವುದು ಸೂಕ್ತ. ಏಕೆಂದರೆ ವಿಶ್ಲೇಷಿಸಿ ನೋಡಿದರೆ ಇವು ಋಷಿಸದೃಶವಾಕ್ಯಗಳು. ನಮ್ಮ ಮನಸ್ಥಿತಿ, ಪರಿಸ್ಥಿತಿ ಮತ್ತು ಲೋಕದ ಯಥಾಸ್ಥಿತಿ ಈ ಮೂರನ್ನೂ ಅರ್ಥ ಮಾಡಿಸುವ ತತ್ತ್ವಜ್ಞಾನವೇ ಇದಾಗಿದೆ. ಅದರಲ್ಲೂ ವಿದ್ಯಾವಂತ ಪ್ರಜ್ಞಾವಂತರೆನಿಸಿಕೊಂಡವರಿಗೆ ಇದು ಚಾಟಿಯೇಟು; ಪ್ರತಿದಿನವೂ ಉದ್ಯೋಗದ ಸ್ಥಳದಲ್ಲಿ ನೌಕರನೋ ಅಧಿಕಾರಿಯೋ ಒಟ್ಟಿನಲ್ಲಿ ಒಮ್ಮೆ ಗುನುಗಿಕೊಳ್ಳಲೇಬೇಕಾದ ಕಾಯಕದ ಶ್ಲೋಕ! ನಮ್ಮ ತಲೆಯಲ್ಲಿ ತುಂಬಿಕೊಂಡ ತರಹೇವಾರಿ ಅಹಮಿನ ತಲೆತಿರುಗು ಈ ಮೂಲಕವಾದರೂ ಕಡಮೆಯಾಗಲು ಸಾಧ್ಯವಾದೀತು. ಏಕೆಂದರೆ ಆಧುನಿಕ ವಿದ್ಯೆಯು ತಂದಿತ್ತಿರುವ ಹಲವು ಹಳವಂಡಗಳೇ ಮುಂದಾಗಿ, ಕೆಲಸ ಕಡಮೆಯಾಗಿದೆ; ಗತ್ತು ಗೈರತ್ತು ದರ್ಪ ದೌಲತ್ತು ಹೆಚ್ಚಾಗಿದೆ. ಯಾವುದೇ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗಿಂತ ಕೆಲಸ ಮಾಡಿಸುವವರೇ ಸಮಸ್ಯೆಯಾಗಬಾರದು; ಯಾರು ತಿಳಿವಳಿಕೆ ಹೊಂದಬೇಕೋ ಅವರೇ ತಿಳಿವಳಿಕೆಯ ಕೊರತೆಯಿಂದ ನರಳಬಾರದು. ಒಂದು ಕಾಲದಲ್ಲಿ ಹಲವು ವೃತ್ತಿಗಳು ಆಯ್ಕೆಯಾಗಿತ್ತೇ ವಿನಾ ಅವಕಾಶ ಆಗಿರಲಿಲ್ಲ. ಆದರೀಗ ಹೊಟ್ಟೆ ಹೊರೆಯುವ ಸಲುವಾಗಿ ಅರ್ಹತೆ ಇದೆಯೋ ಯೋಗ್ಯತೆ ಇದೆಯೋ ಕೇಳಿಕೊಳ್ಳುವ ಮುಂಚೆಯೇ ಅದನ್ನು ಹೊಂದುವ ಮುಂಚೆಯೇ ನಾವದನ್ನು ಆಕ್ರಮಿಸಿರುತ್ತೇವೆ; ಎಲ್ಲವನ್ನೂ ನಿರ್ವಹಿಸಬಲ್ಲೆ; ಎಲ್ಲಕೂ ನನ್ನ ಜೋರುಮಾತಿನ ಸೊಲ್ಲೇ! ‘ಏನೇ ಬಂದರೂ ಸಾಮ ದಾನ ಭೇದ ದಂಡಗಳೆಂಬ ಚತುರೋಪಾಯಗಳನ್ನೇ ಮುಂದು ಮಾಡಿಕೊಂಡು ನಿಭಾಯಿಸಬಲ್ಲೆ’ ಎಂದುಕೊಂಡು ಮುನ್ನುಗ್ಗುತ್ತೇವೆ. ಅಹಂಭಾವವನ್ನೇ ಆತ್ಮವಿಶ್ವಾಸ ಎಂದುಕೊಂಡ ಭ್ರಮಾಧೀನ ಕಾಲವಿದು. ತನ್ನ ತಿಳಿವಿನ ಆಳವನ್ನು ಹೆಚ್ಚು ಮಾಡಿಕೊಂಡು ಅಂತರ್ಯಾತ್ರೆ ಕೈಗೊಂಡು, ವಿವೇಕ ಹೆಚ್ಚಿಸಿಕೊಳ್ಳುವ ಬದಲಿಗೆ ಸೀಮಿತ ಅರಿವಿನ ವ್ಯಾಪ್ತಿಯಲ್ಲೇ ಬಿದ್ದು ಒದ್ದಾಡುವ ದುರಂತವಿದು. ವ್ಯಕ್ತಿತ್ವಕ್ಕಿಂತ ವ್ಯಕ್ತಿಗೂ ಕೆಲಸಕ್ಕಿಂತ ಹುದ್ದೆಗೂ ಗುಣಮಟ್ಟಕ್ಕಿಂತ ಗಾತ್ರಕ್ಕೂ ಯೋಗ್ಯತೆಗಿಂತ ಅರ್ಹತೆಗೂ ಮನ್ನಣೆಯ ಮಣೆ ಹಾಕಿದ ಪರಿಣಾಮವಿದು. ಕೆಲಸ ಮಾಡುವವರಲ್ಲಿ ಆವರಿಸಿಕೊಂಡಿರುವ ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳಿಗಿಂತಲೂ ಕೆಲಸ ಮಾಡಿಸುವವರಲ್ಲಿ ಮನೆ ಮಾಡಿರುವ ಅಹಮಿನ ಹುತ್ತ ಅಪಾಯಕಾರಿ. ಇದು ತನ್ನನ್ನೇ ನಾಶ ಮಾಡುವ ಕಬ್ಬಿಣದ ತುಕ್ಕು; ಅಲ್ಲಿಂದಲೇ ಹುಟ್ಟಿ ಅದನ್ನೇ ಅನುಪಯೋಗಿಯಾಗಿಸುವ ಕಳ್ಳಬೆಕ್ಕು! ಸಂಚು ಮಾಡಿ ಹೊಂಚು ಹಾಕಿ ವಂಚಿಸುವ ಜೀವಾತ್ಮದ ಸೊಕ್ಕು.

‘ಡೆಡಿಕೇಶನ್’ ಎಂಬುದು ‘ಡೆಸಿಗ್ನೇಷಿನ್’ ಗಿಂತಲೂ ಹಿರಿದು ಮತ್ತು ಪವಿತ್ರವಾದುದು. ಏಕೆಂದರೆ ಮೊದಲನೆಯದು ಮೌಲ್ಯ; ಇದಕ್ಕೊಂದು ಪಾವಿತ್ರ್ಯವಿದೆ, ದೈವತ್ವದ ಸೋಂಕಿದೆ! ಆದರೆ ಎರಡನೆಯದು ಕೇವಲ ಲೌಕಿಕ, ಆಧುನಿಕತೆಯ ನರಕ!! ಹಾಗೆಂದು ಹುದ್ದೆ ಮತ್ತು ಪದವಿಗಳನ್ನು ನಿರಾಕರಿಸಿದಂತಲ್ಲ; ಕುರ್ಚಿಯಲ್ಲಿ ಕುಳಿತುಕೊಳ್ಳಲು ಅಷ್ಟೇ; ಕುರ್ಚಿಗೇ ಅಂಟಿಕೊಳ್ಳಬಾರದು. ‘ಕಾಯಕವೇ ಕೈಲಾಸ’ ಎಂದ ಅಣ್ಣ ಬಸವಣ್ಣನವರ ವಿಶ್ವಮಾನವ ಭಾವ ನಮ್ಮ ಚರಿತ್ರೆಯಲ್ಲೇ ಸಂಭವಿಸಿದ ಮಹತ್ತರ ಪವಾಡ. ಎಲ್ಲರ ಮನೆಯ ಮಗನಾಗಿ ದೀಪದಿಂದ ದೀಪ ಹಚ್ಚಿದ ಕೈಂಕರ್ಯವೇ ಇದಕ್ಕೆ ಸಾಕ್ಷಿ. ಅವರೋರ್ವ ವಿತ್ತಮಂತ್ರಿ ಎಂಬುದು ನಮ್ಮರಿವಿಗೇ ಬರುವುದಿಲ್ಲ; ಜಗಜ್ಯೋತಿ ಎಂಬುದಷ್ಟೇ ತಕ್ಷಣಕೆ ಹೊಳೆವ ಹೊಳಹು. ಮನದ ಕದ ಕಿಟಕಿಗಳನ್ನು ತೆರೆದು ಬೆಳಕನೂಡುವ ಬಂಧು ಎಂದು. ಯಾವತ್ತೂ ದೊಡ್ಡವರು ಹಾಕಿಕೊಡುವ ಮಾರ್ಗವೇ ಇಂಥದು. ಅವರು ನಡೆವ ಹಾದಿ ಕಲ್ಲುಮುಳ್ಳಾದರೂ ನಮಗೆ ಹೂವಿನ ಹಾಸು, ಅವರ ಆದರ್ಶ ಮತ್ತು ಸಿದ್ಧಾಂತಗಳನ್ನು ಅನ್ವಯಿಸಿಕೊಂಡರೆ! ಇಲ್ಲದಿದ್ದರೆ ಮತ್ತದೇ ನರಕದಲ್ಲಿ ನರಳುವ ತೊಂದರೆ. ವ್ಯಕ್ತಿಗಿಂತ ಹುದ್ದೆ ದೊಡ್ಡದು ನಿಜ. ಆದರೆ ಹುದ್ದೆಗಿಂತಲೂ ಕಾಯಕದ ನಿರತಗುಣ (Dedication) ಅಂದರೆ ಅರ್ಪಣಾ ಮನೋಭಾವ ದೊಡ್ಡದು. ಹುದ್ದೆಗೆ ಗೌರವ ಬರುವುದು ಯೋಗ್ಯತೆಯಿಂದ. ಅರ್ಹತೆಯನ್ನು ಹೊಂದಲು ಕಷ್ಟ ಪಡುತ್ತೇವೆ, ನಿಜ. ಆದರೆ ಅರ್ಹತೆಯೇ ಎಲ್ಲಕೂ ಮಾನದಂಡವಲ್ಲ. ಏಕೆಂದರೆ ಇಂದಿನ ಕಪಟ ಅಕರಾಳ ವಿಕರಾಳ ಲೋಕದಲ್ಲಿ ಯಾವು ಯಾವುದೋ ಮಾರ್ಗದಿಂದ ಸಂಪಾದಿಸಿ ಬಿಡಬಹುದು. ಯಾವು ಯಾವುದೋ ರೀತಿಯಿಂದ ನಾನು ಅರ್ಹ ಎಂದಾಗಬಹುದು; ಆದರೆ ಯೋಗ್ಯತೆಯನ್ನು ಹಾಗೆಲ್ಲಾ ಬಾಹ್ಯ ಪರಿಸರದಿಂದ ಹೊಂದಲಾಗದು. ಅದಕ್ಕೆ ಬೇಕಾದದ್ದು ಅಂಕಗಳಿಂದಲೋ ಪದವಿ ಪ್ರಶಸ್ತಿ ಸಾರುವ ಸರ್ಟಿಫಿಕೇಟುಗಳಿಂದಲೋ ಕೂಡಿದ ದೃಢೀಕರಣವಲ್ಲ; ಸ್ವಾರ್ಥರಹಿತ ಸಮರ್ಪಣಾ ಸಾಮರ್ಥ್ಯ. ತಾನು ಮಾಡುವ ಕೆಲಸದಲ್ಲಿ ತೋರುವ ನಿರ್ವಂಚನೆ ಮತ್ತು ನಿರಂತರ ಸಹನೆ! ಬಲದಿಂದಲೋ ಚಲದಿಂದಲೋ ಅಡ್ಡದಾರಿಯಿಂದಲೋ ಪುಸಲಾಯಿಸುವುದರಿಂದಲೋ ಹುದ್ದೆಯನ್ನು ಆಕ್ರಮಿಸಬಹುದು; ಅಲಂಕರಿಸಬಹುದು. ಆದರೆ ಡೆಡಿಕೇಶನ್ ಹಾಗಲ್ಲ. ಅದೊಂದು ಪಾಂಗಿತ ಸಿದ್ಧತೆ ಮತ್ತು ಪವಿತ್ರ ಬದ್ಧತೆ. ಸಂಬಳದ ಮೇಷ್ಟ್ರುಗಳಿಗೂ ಬದುಕಿಗೇ ಬೆಳಕಾಗುವ ಗುರುಗಳಿಗೂ ಇರುವ ಅಂತರದಂತೆ. ಕಲಿಸುವವರು ಶಿಕ್ಷಕರು; ಬಾಳನ್ನು ಹದಗೊಳಿಸಿ, ಬೀಜಾಂಕುರಿಸಿ, ಸಸಿಯ ಪೋಷಿಸಿ, ವ್ಯಕ್ತಿತ್ವದ ಹೆಮ್ಮರವನು ರೂಪಿಸುವವರು ಗುರು. ಗುರುಗಳೆಲ್ಲಾ ಶಿಕ್ಷಕರೇ; ಆದರೆ ಶಿಕ್ಷಕರೆಲ್ಲಾ ಗುರುಗಳಲ್ಲ. ಇಂಥದೊಂದು ಮಹತ್ತರ ವ್ಯತ್ಯಾಸವನ್ನು ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆಯು ಪೋಷಿಸಿಕೊಂಡು ಬಂದಿದೆ. ಯಾರಿಗೆ ಯಾವುದು ಬೇಕೋ ಯಾರು ಏನಾಗಬೇಕೋ? ಆಯಾಯ ದಾರಿಯನ್ನು ಆಯ್ದುಕೊಳ್ಳುವಲ್ಲೂ ಉದಾರತೆ ತೋರಿದೆ. ಕೆಲವೊಮ್ಮೆ ಇಂಥಲ್ಲಿ ಗುರುವೂ ದ್ರೋಹಿ ಆಗಬಹುದು; ಆದರೆ ಗುರುವನ್ನು ನಂಬಿದ ಶಿಷ್ಯನಲ್ಲಿ ಏಕಾಗ್ರತೆ ಮತ್ತು ನಿಷ್ಠೆ ಇದ್ದರೆ ಕಲಿಕೆ ಸಾಧ್ಯ ಎಂಬುದಕೆ ನಮ್ಮ ಏಕಲವ್ಯನ ಪ್ರಸಂಗವೇ ಸಾಕ್ಷಿ. ಗುರುವಿಗೇ ಗುರುವಾಗುವ ಏಕಲವ್ಯನ ನಡೆನುಡಿಯು ಕುವೆಂಪು ಅವರ ‘ಬೆರಳ್ಗೆ ಕೊರಳ್’ ನಾಟಕದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಇಂಥಲ್ಲಿ ಶಿಷ್ಯನಿಂದಲೂ ಕಲಿಯುವುದಿದೆ ಎಂಬುದನ್ನು ನಮ್ಮ ಪುರಾಣ, ಮಹಾಕಾವ್ಯ ಮತ್ತು ಚರಿತ್ರೆಗಳು ಸಾರಿವೆ. ಹುದ್ದೆಯು ಶಾಶ್ವತವಲ್ಲ; ಆ ಹುದ್ದೆಯಲ್ಲಿದ್ದ ಅವಧಿಯಲ್ಲಿ ಕೈಗೊಂಡ ಕೆಲಸಕಾರ್ಯಗಳು ಶಾಶ್ವತ. ಹಾಗಾಗಿಯೇ ಕುವೆಂಪು ಅವರು ಹೇಳಿದ್ದು: ‘ಟೀಕೆಗಳು ಸಾಯುತ್ತವೆ; ಕೆಲಸಗಳು ಉಳಿಯುತ್ತವೆ’ ಎಂದು.

ಸಿನ್ಸಿಯಾರಿಟಿ ಮತ್ತು ಸೀನಿಯಾರಿಟಿ ಇವೆರಡೂ ವಿರುದ್ಧಾರ್ಥಕಗಳಲ್ಲ. ಆದರೆ ನಮ್ಮ ಸಂಕುಚಿತ ಮನಸ್ಸು ಹಾಗೆಂದುಕೊಂಡಿದೆ ಅಷ್ಟೆ. ಹಿರಿತನ ಬೇರೆ; ಹಿರಿಯರು ಬೇರೆ. ಹಿರಿಯರಲ್ಲಿ ಹಿರಿತನ ಇಲ್ಲದೇ ಹೋದಾಗ ಇಂಥ ತುಲನೆ ಸಹಜ. ಕೆಲಸ ಮಾಡುವ ಜಾಗದಲ್ಲಿ ಇದಂತೂ ಬಹು ದೊಡ್ಡ ತಲೆನೋವು. ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತೆ ಕೆಲಸಕ್ಕಿಂತ ಕಚ್ಚಾಟವೇ ಹೆಚ್ಚು. ಯಾವುದೋ ಒಂದು ಉದ್ದೇಶಕ್ಕಾಗಿ ಈ ಹಿರಿಯ ಮತ್ತು ಕಿರಿಯ ಎಂಬ ಸೇವಾಜೇಷ್ಠತೆಯನ್ನು ಜಾರಿಗೆ ತರಲಾಗಿದೆ. ‘ಅನುಭವ ಪ್ರಾಮಾಣ್ಯ’ ಎಂಬುದು ಜಗದ ಒಂದು ನಿಯಮ. ಇದು ತನ್ನ ಸದಾಶಯವನ್ನು ಅರಿತು ಅದರಂತೆ ವರ್ತಿಸಬೇಕು. ಕಿರಿಯರಿಗೆ ಆದರ್ಶವಾಗಬೇಕು; ಮಾರ್ಗದರ್ಶಕವಾಗಬೇಕು. ಅಸಮಾಧಾನಕ್ಕೂ ಅಸಹನೆಗೂ ಕಾರಣವಾಗಬಾರದು. ಇಂದು ಹಿರಿಯರಾಗಿರುವವರು ಹಿಂದೊಮ್ಮೆ ಕಿರಿಯರಾಗಿದ್ದವರು; ಈಗ ಕಿರಿಯರಾಗಿರುವವರು ಮುಂದೊಮ್ಮೆ ಹಿರಿಯರಾಗುವವರು. ಪಂಪಭಾರತದಲ್ಲಿ ತನ್ನ ಬದಲು ಭೀಷ್ಮನಿಗೆ ಪಟ್ಟ ಕಟ್ಟಿದರೆಂದು ಕೂಗಾಡುವ ಕರ್ಣನಿಗೆ ತಾಳುಮೆಯಿಂದ ಉತ್ತರ ಕೊಡುತ್ತಾರೆ ಪಿತಾಮಹರು: ‘ಎಲ್ಲರಿಗೂ ಸರದಿ ಬರುತ್ತದೆ, ಸ್ವಲ್ಪ ತಾಳು!’ ಎಂದು. ಸಾಯಲು ಯಾರೂ ಸೀನಿಯಾರಿಟಿಯನ್ನು ಕ್ಲೇಮು ಮಾಡುವುದಿಲ್ಲ; ಆದರೆ ಎಲ್ಲರೂ ಈ ಲೋಕದಲ್ಲಿ ಸಾಯುವವರೇ. ಒಬ್ಬರು ಮುಂದೆ; ಇನ್ನೊಬ್ಬರು ಹಿಂದೆ ಅಷ್ಟೇ. ಸದಾ ಹಿರಿತನವನ್ನು ಕುರಿತು ಚಿಂತಿಸುವವರು ಒಂದೋ ಸೋಮಾರಿಗಳು ಅಥವಾ ಕೆಲಸಗಳ್ಳರು. ನಮ್ಮ ಹಿರಿತನಕ್ಕೆ ಉಳಿದವರು ಗೌರವ ಕೊಡುವಂಥ ವರ್ತನೆ ನಮ್ಮದಾಗಿರಬೇಕು; ನಾವೇ ಪದೇ ಪದೇ ‘ಗೌರವ ಕೊಡಿ’ ಎಂದು ಅಂಗಲಾಚಬಾರದು. ಪ್ರಾಮಾಣಿಕತೆ ಎಂಬುದೊಂದು ಮೌಲ್ಯ; ಅದನ್ನು ಅಪ್ರಬುದ್ಧರಿಂದ ನಿರೀಕ್ಷಿಸುವುದು ತಪ್ಪು. ಹಿರಿಯರು ಪ್ರಾಮಾಣಿಕರೂ ಆಗಿರಬೇಕು. ಇದೇ ಅನುಕರಣೀಯ ವ್ಯಕ್ತಿತ್ವ. ಈಗಂತೂ ತಾಂತ್ರಿಕ ಯುಗ. ಪ್ರತಿ ಪೀಳಿಗೆಯೂ ನೂತನ ತಂತ್ರಕೌಶಲಗಳನ್ನು ಗಳಿಸಿ ಮುನ್ನುಗ್ಗುತ್ತಿರುತ್ತದೆ. ಅಂತಹುದರಲ್ಲಿ ವಯಸ್ಸಾದ ಹಿರಿಯರು ಹೊಸದನ್ನು ಕಲಿಯುವುದನ್ನು ನಿಲ್ಲಿಸಿರುತ್ತಾರೆ ಅಥವಾ ಕಲಿಯದೇ ಬಿಟ್ಟಿರುತ್ತಾರೆ. ಹೀಗಾಗಿ ಕಿರಿಯರ ಸಹಾಯ ಮತ್ತು ಸಹಕಾರಗಳಿಲ್ಲದೇ ಹಿರಿಯರು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿರುವವರೇ. ಹಾಗಿರುವಾಗ ಪರಸ್ಪರ ಅನುನಯ ಮತ್ತು ಸಮನ್ವಯ – ಇವೆರಡರಿಂದ ಕೆಲಸದ ಘನತೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ದೂರುವುದನ್ನೇ ದಾರಿಯಾಗಿಸಿ ಕೊಳ್ಳಬಾರದು. ಹಾಗಾದಾಗ ಬಹು ಬೇಗ ಅವರ ಬೆಲೆ ಬಿದ್ದು ಹೋಗುತ್ತದೆ. ಸಂತೆ ಕಟ್ಟಿದ ದಿನ ಸಂಜೆಯಾಗುತ್ತಿದ್ದಂತೆ ವಸ್ತುಗಳ ಬೆಲೆ ಬಿದ್ದು ಹೋಗುವಂತೆ! ಸಾಕಷ್ಟು ಸಿದ್ಧತೆ ಮತ್ತು ತನ್ನ ವೃತ್ತಿನಿರತ ಬದ್ಧತೆಗಳಿಂದ ಕೆಲಸ ಮಾಡುವವರಿಗೆ ಸೀನಿಯಾರಿಟಿ ಮ್ಯಾಟರೇ ಅಲ್ಲ; ಹಿರಿತನವು ಕೇವಲ ಕಾಲಮಾನದಿಂದ ದಕ್ಕಿದರೆ, ಪ್ರಾಮಾಣಿಕತೆಯು ಮೌಲ್ಯಯುತ ವ್ಯಕ್ತಿತ್ವದಿಂದ ಸಿದ್ಧಿಸುವಂಥದು.


 

ಇಂಥಲ್ಲಿ ನಮ್ಮ ಚರ್ಚೆಗೆ ಗ್ರಾಸವಾಗುವುದು: ಮೌಲ್ಯಗಳು. ಧನ, ಕನಕ, ಆಸ್ತಿ, ಆಭರಣಗಳಿಗಿಂತ ಜೀವನಮೌಲ್ಯಗಳು ಎಂದಿಗೂ ಶ್ರೇಷ್ಠವಾದವು. ವ್ಯಾಲ್ಯೂಸ್ ಬೇರೆ; ವ್ಯಾಲ್ಯೂಬಲ್ಸ್ ಬೇರೆ! ಮೌಲ್ಯವುಳ್ಳವು ಎಂದರೇನೇ ಬೆಲೆ ಬಾಳುವಂಥವು; ಲೌಕಿಕಕಷ್ಟೇ. ಆದರೆ ಮನುಜನನ್ನು ಅಳೆಯುವುದು ಆತನು ಅಳವಡಿಸಿಕೊಂಡು ಅನುಸರಿಸುತ್ತಿರುವ ನೀತಿಮೌಲ್ಯಗಳಿಂದ. ಯಾರೋ ಯಾವುದನ್ನೋ ಮುಖ್ಯವೆಂದುಕೊಂಡ ಮಾತ್ರಕ್ಕೇ ಅವು ಮುಖ್ಯವಾಗುವುದಿಲ್ಲ. ನಮ್ಮ ಹೆಜ್ಜೆಗುರುತು ಮೂಡಬೇಕಾಗಿರುವುದು ನಡತೆಯಿಂದಲೇ ವಿನಾ ನಡಿಗೆಯಿಂದಲ್ಲ. ನಡಿಗೆಯು ನಮ್ಮ ದೈಹಿಕ ಆರೋಗ್ಯಕ್ಕೆ; ಆದರೆ ನಡತೆಯು ಸಾಮಾಜಿಕ ಸ್ವಾಸ್ಥ್ಯಕ್ಕೆ! ಚಿನ್ನಕ್ಕೆ ಮೌಲ್ಯ ಬಂದಿರುವುದು ಅದರ ಬಾಳಿಕೆಯ ಮತ್ತು ತಾಳಿಕೆಯ ಗುಣದಿಂದ. ಅದರ ಅಪರೂಪಕ್ಕಾಗಿ. ಯಾವತ್ತೂ ಕಬ್ಬಿಣಕ್ಕೂ ಚಿನ್ನಕ್ಕೂ ವ್ಯತ್ಯಾಸ ಇದ್ದೇ ಇರುತ್ತದೆ. ಎರಡರ ಉಪಯೋಗ ಬೇರೆ ಬೇರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಹೋಲಿಸಬೇಕು. ಪದಾರ್ಥಗಳೇ ಬದುಕಲ್ಲ; ಪದಾರ್ಥಗಳಿಂದ ಬದುಕು! ಮನುಷ್ಯರನ್ನು ದ್ವೇಷಿಸುತ್ತಾ ಪದಾರ್ಥಗಳನ್ನು ಪ್ರೀತಿಸಿದರೆ ಅದನ್ನು ಮೌಲ್ಯಯುತ ಜೀವನ ಎನ್ನಲಾಗದು. ಹತ್ತು ಸಾವಿರ ರೂಗಳ ಚಪ್ಪಲಿ ಕೊಂಡು, ರಸ್ತೆಯಲ್ಲೆಲ್ಲಾ ಓಡಾಡಿ, ಮನೆಯ ಶೋಕೇಸಿನಲ್ಲಿ ಇಡಲಾಗದು; ಹಾಗಾದಾಗ ಅದು ಅಪಮೌಲ್ಯ ಜೊತೆಗೆ ಅವಮರ್ಯಾದೆ. ಅದರ ಜಾಗವೇನಿದ್ದರೂ ಚಪ್ಪಲಿಯ ಗೂಡೊಳಗೆ. ಮಾನವೀಯ ಮೌಲ್ಯಗಳಿಂದ ನಾನು ನನ್ನ ಬದುಕನ್ನು ಸಿಂಗರಿಸಿಕೊಳ್ಳಬೇಕೇ ವಿನಾ ಆಭರಣಗಳಿಂದಲ್ಲ. ಬೆಲೆಬಾಳುವ ವಸ್ತುಗಳು ಕಷ್ಟಕ್ಕಾಗಬಹುದು; ಮಾರಿದಾಗ ಮಾತ್ರ. ಮೌಲ್ಯಗಳು ಹಾಗಲ್ಲ; ಅವು ನಮ್ಮ ಉಸಿರು; ಅವೇ ನಮ್ಮ ಹೆಸರು.

 ಇನ್ನು ಮನಸ್ಥಿತಿಯೇ ಮುಖ್ಯ ; ಮಾರ್ಕ್ಸ್ ಅಲ್ಲ! ಎಷ್ಟು ಅಂಕಗಳನ್ನು ಗಳಿಸಿದ್ದರೇನು? ಜ್ಞಾನ ಮತ್ತು ಕೌಶಲ್ಯಗಳನ್ನು ಕೆಲಸ ಮಾಡುವ ಜಾಗದಲ್ಲಿ ಅಳವಡಿಸಿಕೊಳ್ಳದೇ ಹೋದರೆ! ‘ಫಸ್ಟ್ ರಾಂಕ್ ರಾಜು’ ಆಗಬಾರದು; ಸಾಮಾನ್ಯಜ್ಞಾನ ಮತ್ತು ಔಚಿತ್ಯಪ್ರಜ್ಞೆಗಳನ್ನು ಹೊಂದಿರಬೇಕು. ಅಂಕಗಳು ನಮ್ಮ ಮೇಧಾಶಕ್ತಿಯ ಅಳತೆಗೋಲುಗಳಲ್ಲಿ ಒಂದು; ಅದೊಂದೇ ಅಲ್ಲ! ಎಷ್ಟು ಓದಿದರೇನು? ‘ಓದಿದಾ ಓದು ತಾ ಮೇದ ಕಬ್ಬಿನಾ ಸಿಪ್ಪೆ, ಓದಿನಾ ಒಡಲನರಿದಿಹರೆ, ಸಿಪ್ಪೆ ಕಬ್ಬಾದಂತೆ’ ಎಂದಿಲ್ಲವೇ ಸರ್ವಜ್ಞ ಕವಿ. Knowledge is Power; Knowledge on Fire is the real Power.‌ ಜ್ಞಾನವು ಶಕ್ತಿಯಾದರೂ ಅದಕ್ಕೆ ಪ್ರಾಶಸ್ತ್ಯ ಸಿಗುವುದು ಹೊರ ಪ್ರಪಂಚಕ್ಕೆ ಉಪಯೋಗವಾದಾಗ ಮಾತ್ರ. ಸ್ವಿಚ್ ಹಾಕಿದಾಕ್ಷಣ ಬಲ್ಬು ಹೊತ್ತಿ ಉರಿಯುವ ತೆರದಿ! ಕರೆಂಟಿದೆ, ವೈರಿದೆ, ಬಲ್ಬು ಸಹ ಇದೆ. ಆದರೆ ಸ್ವಿಚ್ ಹಾಕುವ ಮೂಲಕ ಅದು ಕ್ರಿಯಾತ್ಮಕವಾಗಬೇಕು. ಆಗಲೇ ಜ್ಞಾನಕ್ಕೆ ಮನ್ನಣೆ. ಜ್ಞಾನವು ವಿವೇಕವಾಗುವುದೇ ಇಂಥಲ್ಲಿ. ನಂನಮ್ಮ ಮನಸ್ಥಿತಿಯೇ ವಿವೇಕದ ಕೈಗನ್ನಡಿ. ಅಂಕಗಳು ನಮ್ಮನ್ನು ಸಂದರ್ಶನದ ಬಾಗಿಲಿನವರೆಗೆ ಕರೆದುಕೊಂಡು ಹೋಗಬಹುದು; ಆದರೆ ಅಲ್ಲಿಂದಾಚೆಗೆ ಅಂಕಗಳು ನಿಷ್ಪ್ರಯೋಜಕ. ನಿಜವಾದ ಕಲಿಕೆಯು ವಿವೇಕವನ್ನು ಮೂಡಿಸುವುದು; ನೈಪುಣ್ಯವನ್ನು ಕರಗತ ಮಾಡಿಕೊಡುವುದು. ನಾವು ಕೆಲಸ ಮಾಡುವ ಜಾಗದಲ್ಲಿ ನಮ್ಮ ಅಗತ್ಯವನ್ನು ಒತ್ತಿ ಹೇಳುವುದು. ಯಾವತ್ತೋ ಹೇಗೋ ಪಡೆದುಕೊಂಡ ಅಂಕಗಳ ಆಧಾರದ ಮೇರೆಗೆ ಇಂದೂ ನನ್ನನ್ನು ಗೌರವಿಸಬೇಕೆಂದರೆ ಅದು ಧೂರ್ತತನ. ಕಾಲಕಾಲಕ್ಕೆ ಅಪ್‌ಡೇಟ್ ಆಗದೇ ಹೋದರೆ ಔಟ್‌ಡೇಟೆಡ್ ಆಗುತ್ತೇವೆಂಬ ಪರಿಜ್ಞಾನ ನಮ್ಮಲ್ಲಿ ಇಲ್ಲದೇ ಹೋದಾಗ ನಮ್ಮ ಮನಸ್ಥಿತಿಯು ಆರೋಗ್ಯಕಾರಿಯಾಗಿರುವುದಿಲ್ಲ ಅಷ್ಟೇ. ಏಕೆಂದರೆ ಅಂಕಗಳು ಕೇವಲ ಲಿಖಿತ ಪರೀಕ್ಷೆಯ ಮಾನದಂಡದ ಫಲಿತ. ಮನಸ್ಥಿತಿ ಹಾಗಲ್ಲ. ಅದು ಪ್ರತಿನಿತ್ಯ ಪರೀಕ್ಷಿಸುವ ಅಗ್ನಿಕಾರ್ಯ.

ಪ್ರಯತ್ನಗಳೇ ಇಲ್ಲದೇ ಫಲವಿಲ್ಲ. ದುಡ್ಡು ಕೊಟ್ಟು ಹಣ್ಣುಗಳನ್ನು ಖರೀದಿಸಿ ತಿನ್ನುತ್ತೇವೆ; ನಮಗೆ ಅದರ ಬೆಳೆ ಮತ್ತು ಶ್ರಮದ ಬೆಲೆ ಎರಡೂ ತಿಳಿದಿರುವುದಿಲ್ಲ. ದುಡ್ಡು ಕೊಡುವುದು ವ್ಯಾಪಾರ. ದುಡ್ಡು ಕೊಟ್ಟ ಮಾತ್ರಕೇ ಅದರ ಮೌಲ್ಯ ಅರಿತೆವೆಂಬುದು ಅಹಂಕಾರ! ಯಾವುದನ್ನೂ ಹಾಗೆ ಕೇವಲ ಹಣದಿಂದ ಬೆಲೆಗಟ್ಟಲು ಸಾಧ್ಯವಿಲ್ಲ. ಕೇವಲ ಲೌಕಿಕ ವ್ಯವಹಾರಕ್ಕಾಗಿ ಹಣವನ್ನು ನಿಗದಿ ಮಾಡಿಕೊಂಡಿದ್ದೇವೆ ಅಷ್ಟೇ. ಹಣವು ಕೇವಲ ವಿನಿಮಯ ಮಾಧ್ಯಮ; ಅದೆಂದೂ ಆಗದು ಜೀವನ ವಿಕ್ರಮ. ಅಂದರೆ ಪಾತಿ ಮಾಡಿ, ಸಸಿ ನೆಟ್ಟು, ನೀರುಣಿಸಿ ಬೆಳೆಸಿ, ಗಿಡಕೆ ಗೊಬ್ಬರ ತೋರಿ ಮರವಾಗಿಸಿದಾಗ; ಅದು ಹೂವನರಳಿಸಿ, ಕಾಯಿ-ದೋರುಗಾಯಾಗಿ ಕಂಡಾಗ ಕಿತ್ತು ತಂದು ಪೂರ್ಣ ಹಣ್ಣಾಗುವುದರೊಳಗೆ ಮಾರಬೇಕು. ನಾವೂ ಅಷ್ಟೇ: ಕಳಿತು ಕೊಳೆತು ಹೋಗುವುದರೊಳಗೆ ತಂದು ತಿನ್ನಬೇಕು. ಇದು ಏಕಕಾಲಕ್ಕೆ ವ್ಯಾಪಾರವೂ ಹೌದು; ಪ್ರಕೃತಿ ವ್ಯಾಪಾರವೂ ಹೌದು! ಕಾಯಬೇಕು; ಕಾಯಿ ಮಾಗಬೇಕು; ಮಾಗಿದ ಮೇಲೆ ಬಾಗಬೇಕು, ಇದೇ ಫಲವಂತಿಕೆ! ಅಂದರೆ ಏನೆಲ್ಲಾ ಪ್ರಯತ್ನಗಳು ಫಲಿತಾಂಶದ ಹಿಂದೆ ಅಡಗಿರುತ್ತವೆಂಬುದು ಅವರವರಿಗೆ ಗೊತ್ತು. ಹಾಗೆಯೇ ದುಡ್ಡು ಕೊಟ್ಟು ಖರೀದಿ ಮಾಡುವವರದು ಕೂಡ. ಅಷ್ಟು ದುಡ್ಡು ಸಂಪಾದಿಸಲು ಏನೆಲ್ಲಾ ಪ್ರತಿಭೆ, ಕೌಶಲ್ಯಗಳನ್ನು ಹೊಂದಿ, ಅಡೆತಡೆಗಳನ್ನು ನಿಭಾಯಿಸಿ, ಕೆಲಸ ನಿರ್ವಹಿಸಿರುತ್ತಾರೆಂಬುದು ಸಹ. ಕೊನೆಯಲ್ಲಿ ಯಶಸ್ಸು ಸಿಗಬಹುದು; ಸಿಗದೆಯೂ ಹೋಗಬಹುದು. ಆದರೆ ನಾವು ಮಾಡಿದ ಪ್ರಾಮಾಣಿಕ ಪ್ರಯತ್ನಗಳು ಮಾತ್ರ ನಮ್ಮ ವ್ಯಕ್ತಿತ್ವದ ರೂಪಣೆ. ನಿನ್ನ ಕೆಲಸವನ್ನು ನೀನು ಮಾಡು; ಫಲಾಫಲಗಳನ್ನು ನನಗೆ ಬಿಡು ಎಂದ ಗೀತಾಚಾರ್ಯನನ್ನು ನೆನೆದು ಶ್ರಮಿಸುವುದು ಮುಖ್ಯ. ಒಂದಲ್ಲ ಒಂದು ದಿನ ನಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಪರಿ ಪರಿ ಪರಿಶ್ರಮಕ್ಕೆ ಜಯ ಲಭಿಸುವುದು ಖಂಡಿತ. The Last stroke of the hammer breaks a stone. This does not mean that the first stroke is useless! Success is the result of continuous effort!! ಕೊನೆಯ ಹೊಡೆತದಲ್ಲಿ ಕಲ್ಲು ಸೀಳಬಹುದು; ಹಾಗಂತ ಮೊದಲಿನ ಹೊಡೆತಗಳು ವ್ಯರ್ಥವೆಂದಲ್ಲ.

ಹಾಗೆಯೇ ವಿಶ್ವಾಸಾರ್ಹತೆ! ಇದು ಅತ್ಯಂತ ಗಮನಾರ್ಹವಾದುದು. ಸಂಭಾವನೆಗಿಂತಲೂ ಸದ್ಭಾವನೆ ದೊಡ್ಡದು! ಒಂದು ಹಂತದಲ್ಲಿ ಹಣ, ಅಧಿಕಾರ, ಅಂತಸ್ತು, ಪದವಿ, ಪ್ರತಿಷ್ಠೆ, ಸ್ಥಾನಮಾನಗಳಿಗಿಂತಲೂ ಅಧಿಕವಾದದ್ದು. ಇದನ್ನು ಯಾವುದಕ್ಕೂ ಹೋಲಿಸಲಾಗದು; ಬೆಲೆ ಕಟ್ಟಲಾಗದು. ಶ್ವಾಸವಿರುವತನಕ ವಿಶ್ವಾಸ. ಇದುವೇ ಪ್ರತಿ ಉಚ್ಛ್ವಾಸ ಮತ್ತು ನಿಶ್ವಾಸಗಳ ಏರಿಳಿತ. ಯಾವ ಗೌರವಧನ, ಇನಾಮು, ಕಾಣಿಕೆ, ಕೊಡುಗೆಗಳಿಗಿಂತಲೂ ನಂಬಿಕೆ ಮತ್ತು ವಿಶ್ವಾಸಗಳು ಶ್ರೇಷ್ಠವಾದುದು. ಅಪರೂಪಕ್ಕೊಮ್ಮೆ ನಾವು ನಮ್ಮ ಜೀವನದಲ್ಲಿ ನಂನಮ್ಮ ವರ್ತನೆಗಳ ಮೂಲಕ ದೊಡ್ಡವರಾಗುವ ಅವಕಾಶಗಳು ಒದಗಿ ಬರುತ್ತವೆ. ಇಟ್ಟುಕೊಳ್ಳುವುದಕ್ಕಿಂತ ಕೊಟ್ಟು ಬಿಡುವುದರಲ್ಲಿ ಯಾವತ್ತೂ ಸುಖವಿದೆ, ಇದೊಂಥರ ತ್ಯಾಗದ ಮಹಿಮೆ. ಭಕ್ತಿ ಗೌರವಗಳು ನಿಂತಿರುವುದೇ ಇಂಥದ್ದರ ಮೇಲೆ. ಬೆಲೆ ಬಾಳುವ ವಸ್ತು ಪದಾರ್ಥಗಳನ್ನು ಬಿಟ್ಟು ಹೋದವರಿಗೆ ಮತ್ತೆ ತಲಪಿಸುವುದು, ನಮ್ಮದಲ್ಲದ್ದನ್ನು ಬಳಸದೇ ಇರುವುದು ಇಂಥವುಗಳಲ್ಲಿ ಮುಖ್ಯವಾದವು. ಅಗತ್ಯ ಮತ್ತು ಅನಿವಾರ್ಯಗಳು ಎದುರಾದಾಗ ಮಾತ್ರ ಇನ್ನೊಬ್ಬರ ನೆರವು ಪಡೆಯುವುದು ಸಲ್ಲಕ್ಷಣ. ಸಹಾಯ ಮಾಡುವವರು ಇದ್ದಾರೆಂದು ಪದೇ ಪದೇ ಅವರಲ್ಲಿ ಮೊರೆಯಿಡಬಾರದು. ಇದು ಘನತೆ. ಕೊಡುವವರು ಇದ್ದಾರೆಂದು ಪಡೆದುಕೊಳ್ಳುವುದಲ್ಲ. ಯಾವತ್ತೂ ಸೇವೆ, ಸಹಾಯ ಮತ್ತು ದಾನಗಳು ಕೊಡುವವರ ಯೋಗ್ಯತೆ ಮತ್ತು ಪಡೆಯುವವರ ಅರ್ಹತೆ. ಅಪಾತ್ರದಾನವು ದಾನ ಮಾಡದೇ ಇರುವುದಕಿಂತಲೂ ತಪ್ಪಾದುದು! ನಾವು ವಿಶ್ವಾಸಾರ್ಹತೆಯನ್ನು ಹೊಂದಿದ್ದೇವೆಂದರೆ ಇಂದಲ್ಲ, ನಾಳೆ, ನಮ್ಮನ್ನು ಆದರಿಸುವವರೂ ಪ್ರೀತಿಸುವವರೂ ಇದ್ದೇ ಇರುತ್ತಾರೆ. ಇದನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ; ಮಾತು ಮತ್ತು ವರ್ತನೆಗಳಿಂದ ಗಳಿಸಿಕೊಳ್ಳುವಂಥದು. ನಂಬಿಕೆ ಮತ್ತು ವಿಶ್ವಾಸಗಳನ್ನು ಉಳಿಸಿಕೊಳ್ಳುವುದೇ ಜೀವದ ಧ್ಯೇಯ. ಉಳಿದದ್ದು ಇವುಗಳ ಕಾಲಬುಡದಲ್ಲಿ! ‘ನಂಬಿ ಕೆಟ್ಟವರಿಲ್ಲವೋ ಹರಿಯ, ನಂಬದೇ ಕೆಟ್ಟರೆ ಕೆಡಲಿ’ ಎಂಬುದು ದಾಸವಾಣಿ.

ಕೊನೆಯ ದರ್ಶನೋಕ್ತಿ : ಮನವಿಟ್ಟು ಮಾಡಿದ ಕೆಲಸವೇ ಶ್ರೇಷ್ಠ; ದಾಖಲಾತಿಗಾಗಿ ಹೊಸೆದದ್ದಲ್ಲ! ‘ಪ್ರಾಪರ್ ವರ್ಕ್’ ಎಂಬುದು ಶಿಸ್ತು ಮತ್ತು ಸಂಯಮಗಳಿಂದ ಕೂಡಿದ, ಪ್ರತಿಭೆ ಮತ್ತು ಕೌಶಲ್ಯಗಳನ್ನು ಸಂಯೋಜಿಸಿದ ತಪಸ್ಸಿನ ಪರಿಣಾಮ. ‘ಶುದ್ಧಿ ಮೇಣ್ ಶ್ರದ್ಧೆಯಿರೆ, ತುದಿಗೆ ತಪ್ಪದು ಸಿದ್ಧಿ, ಸಾಧನೆಗೆ’ ಎಂಬುದು ಕವಿ ಕುವೆಂಪು ಅವರ ನುಡಿ. ಆದರೆ ಕಾಲಾಯ ತಸ್ಮೈ ನಮಃ. ಅಂದರೆ ವ್ಯವಸ್ಥೆಯು ಸರಿಯಾದ ಕೆಲಸಕ್ಕಿಂತ ಕೆಲಸ ಮಾಡಿದುದರ ದಾಖಲೆ ಕೇಳುವುದರಿಂದ ಡಾಕ್ಯುಮೆಂಟೇಷನ್ನಿಗಾಗಿ ಸಂತೆಯ ಹೊತ್ತಿಗೆ ಮೂರು ಮೊಳ ನೇಯುವುದೇ ಆಗಿದೆ. ಈಗ ಎಲ್ಲೆಡೆಯೂ ಗಡಿಯಾರವೇ; ಆದರೆ ಸಮಯಪ್ರಜ್ಞೆ ನಗಣ್ಯವೇ! ಮುಖ್ಯವಾದುದಕ್ಕೆ ಸಮಯ ಮೀಸಲಿಡುವ ಪರಿಪಾಠವೇ ಇಲ್ಲ. ಯಾವುದು ಮುಖ್ಯವೋ ಅದನ್ನೇ ಅಮುಖ್ಯ ಮಾಡಿಕೊಳ್ಳುವ ಕೆಲಸದ್ರೋಹಿಗಳೇ ಹೆಚ್ಚು. ವ್ಯವಸ್ಥೆಯು ರೂಪಿತವಾಗಿರುವುದೇ ಹೀಗೆ. ಯಾವ ಸಮಯಕ್ಕೆ ಬಂದರು? ಯಾವ ಸಮಯಕ್ಕೆ ಹೋದರು? ಎಂಬುದೇ ಮುಖ್ಯವಾಗಿದೆ; ಇರುವ ಸಮಯದಲ್ಲಿ ಏನು ಮಾಡಿದರು? ಎಂಬುದು ಯಾರಿಗೂ ಬೇಡವಾಗಿದೆ. ಗಡಿಯಾರಕ್ಕೆ ನೇತು ಹಾಕಿಕೊಳ್ಳುವ ಆಡಳಿತಶಾಹಿ; ಕಾಲವಂಚನೆಗೈಯುವ ನೌಕರಶಾಹಿಗೆ ಇದು ಅರ್ಥವಾಗುವುದಿಲ್ಲ. ಅದಕಾಗಿಯೇ ಖಾಸಗೀ ರಂಗದಲ್ಲಿ ಟಾರ್ಗೆಟ್ ಮುಖ್ಯವಾಗಿರುವುದು. ಇಂತಿಷ್ಟು ಕೆಲಸವನ್ನು ಮಾಡಲೇಬೇಕು ಎಂಬ ಗಡುವು. ಬುದ್ಧಿವಂತರು ವಾರದ ಕೆಲಸವನ್ನು ಎರಡೇ ದಿನದಲ್ಲಿ ಮಾಡಿ ಮುಗಿಸಿ, ಉಳಿದ ಸಮಯದಲ್ಲಿ ಹೊಸದನ್ನು ಕಲಿಯುವರು; ಉಳಿದವರಿಗಿಂತ ಮೇಲೇರುವರು! ಗಾತ್ರಕಿಂತ ಗುಣವೇ ಹಿರಿದು. ಕೆಲಸದ ಗುಣಮಟ್ಟಕಿಂತ ಕೆಲಸದ ಸಮಯವೇ ಮುನ್ನೆಲೆಯಾದಾಗ ಆಗುವ ದುರಂತವಿದು. ಯಾವತ್ತೂ ಅಷ್ಟೇ: ರಿಯಲ್ ವರ್ಕ್ ಮತ್ತು ಪೇಪರ್ ವರ್ಕ್ ಇವುಗಳ ನಡುವಿನ ವ್ಯಾಪಕ ವ್ಯತ್ಯಾಸವಿದೆ. ಒಂದರದು ಆತ್ಮತೃಪ್ತಿ; ಇನ್ನೊಂದರದು ಕೇವಲ ತೋರಿಕೆ. ನೂರಕ್ಕೆ ತೊಂಬತ್ತು ಮಂದಿಯು ಹೊಸ ಸವಾಲುಗಳನ್ನೂ ಹೊಸ ಕೌಶಲ್ಯಗಳನ್ನೂ ಅರಿಯದೇ ತಮ್ಮ ಎಂದಿನ ಹಳೆಯ ಮಾದರಿಯಲ್ಲೇ ಕೆಲಸ ನಿರ್ವಹಿಸುವುದರಿಂದ ಅಪ್‌ಡೇಟ್ ಎಂಬುದು ಮರೀಚಿಕೆ; ಔಟ್‌ಡೇಟೆಡ್ ಎಂಬುದೇ ನಿತ್ಯಬೂಟಾಟಿಕೆ.

 ಯಾವುದೇ ಸಭೆ ಸಮಾರಂಭಗಳಲ್ಲಿ, ತರಬೇತಿ ಕಾರ್ಯಾಗಾರಗಳಲ್ಲಿ, ಪ್ರೇರಣಾದಾಯಕ ಮಾತುಕತೆಗಳಲ್ಲಿ ಬಳಸಬಹುದಾದ ಚಿಮ್ಮುಹಲಗೆಯಂತಿವೆ ಈ ಸಪ್ತರ್ಷಿ ಮಂಡಲ. ಇದು ಏಕಕಾಲಕ್ಕೆ ನಮ್ಮೊಳಗನ್ನೂ ನಮ್ಮಾಚೆಗಿರುವ ಹೊರಗನ್ನೂ ಬೆಳಗಬಲ್ಲ ದೇದೀಪ್ಯಮಾನ. ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬಾಳುವೆಗೊಂದು ಅರ್ಥಪೂರ್ಣ ಚೌಕಟ್ಟು ಲಭಿಸೀತು; ಹಾಗೇ ಆಲೋಚಿಸುತ್ತಾ ಕುಳಿತರೆ ಮನಸ್ಸು ಮಥಿಸೀತು! ಮನುಷ್ಯ ಬರೀ ವಿದ್ಯಾಬುದ್ಧಿ ಗಳಿಸಿದರೆ ಸಾಲದು; ಹೃದಯಪೂರ್ವಕವಾಗಿ ಜೀವಿಸುವುದನ್ನು ಕಲಿಯಬೇಕು. ಎಲ್ಲಕಿಂತ ಅಪಾಯಕಾರಿಯಾದುದು ಆತ್ಮವಂಚನೆ. ನಾವು ನಮ್ಮನ್ನೇ ವಂಚಿಸಿಕೊಳ್ಳುತ್ತಾ ಇದ್ದರೆ ಬಂಡತನವೂ ಹುಂಬತನವೂ ಮೈಗೂಡುವುದು. ಇದೇ ಅಭ್ಯಾಸವಾಗಿ ಸಂವೇದನಾಶೂನ್ಯರಾಗಿ ಹತ್ತರೊಳಗೆ ಹನ್ನೊಂದು ಎಂದಾಗುವುದು. ನಮ್ಮ ಬೆನ್ನ ಹಿಂದೆಯೂ ನಮಗೆ ಪ್ರೀತಿ ಗೌರವಗಳು ಸಿಗುತ್ತವೆಂದಾದರೆ ನಾವು ಕೆಲಸಗಳ್ಳರಲ್ಲ ಎಂದರ್ಥ. ನಮ್ಮನ್ನು ಕಂಡರೆ ಇನ್ನೊಬ್ಬರು ಅಸೂಯೆ ಪಡುತ್ತಿದ್ದಾರೆಂದರೆ ನಿಸ್ಸಂಶಯವಾಗಿ ನಮ್ಮದು ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಎಂದೇ. ಇದು ವೃತ್ತಿ ಗೆಲುವಿನ ಮತ್ತು ಪ್ರವೃತ್ತಿ ಚೆಲುವಿನ ಸಂಕೇತ. ಇಂಗ್ಲಿಷಿನ ಈ ಏಳು ಉಕ್ತಿಗಳು ಏಳು ಸಾಗರಗಳಿಗೆ ಸಮ. ಈ ಸಪ್ತಸಾಗರದಲ್ಲಿ ನಮ್ಮಾತ್ಮದ ಸುಪ್ತಸಾಗರವಡಗಿದೆ. ಅಂತೆಯೇ ಹಮ್ಮು ಬಿಮ್ಮು ಕಳೆದ ವಿನೀತವಾದ ನಡೆನುಡಿ ಅಡಗಿದೆ. ಇದನ್ನು ಅರಗಿಸಿಕೊಳ್ಳಲು ವಿವೇಕಹೀನರಿಗೆ ಕಷ್ಟವಾಗುತ್ತದೆ; ವಿವೇಕಪೂರ್ಣರಿಗೆ ಇಷ್ಟವಾಗುತ್ತದೆ.

ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

9 Comments on “ಸಪ್ತರ್ಷಿಮಂಡಲ !

  1. Excellent. ಜೀವನ ಮೌಲ್ಯಗಳನ್ನು ಸೊಗಸಾಗಿ ವಿವರಿಸಿದ್ದೀರಿ.

    1. ಧನ್ಯವಾದ ಮೇಡಂ, ಮನವಿಟ್ಟು ಬರೆದೆ ಎಂಬುದಕಿಂತ ಅದು ಬರೆಸಿಕೊಂಡು ಹೋಯಿತು ಅಷ್ಟೇ.
      ಓದಿ ಪ್ರತಿಕ್ರಿಯಿಸುವುದು ನಿಮ್ಮ ದೊಡ್ಡ ಗುಣ; ಇದಕಾಗಿ ನನ್ನ ಅನಂತ ಪ್ರಣಾಮ

  2. ಸಪ್ತರ್ಷಿಗಳಂತಹ ಉತ್ಕೃಷ್ಟ ಸ್ಥಾನವನ್ನು ಪಡೆದ ಏಳು ಮೌಲ್ಯಯುತ ಸಾಲುಗಳು, ಅವುಗಳ ಆಳವಾದ, ದೀರ್ಘ ವಿಶ್ಲೇಷಣೆ ಚಿಂತನಯೋಗ್ಯವಾಗಿದೆ…ಧನ್ಯವಾದಗಳು.

    1. ಹೌದು ಸರ್.‌ ಸಪ್ತರ್ಷಿಗಳೇ ಇವು ನಮ್ಮ ಪಾಲಿಗೆ. ಪ್ರಾತಃಸ್ಮರಣೀಯ ಹಾಗೂ ಅನುಕರಣೀಯ
      ನಿಮ್ಮ ಓದಿಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದ.

  3. ವ್ಯಕ್ತಿತ್ವ ವಿಕಸನಕ್ಕೆ ಪೂರಕ ಮತ್ತು ಪ್ರೇರಕವಾದ ಬರಹವು ಇಂದಿನ ಕಾಲಮಾನಕ್ಕೆ ಅತ್ಯಂತ ಔಚಿತ್ಯಪೂರ್ಣವಾಗಿ ಮೂಡಿ ಬಂದಿದೆ.

    1. ಧನ್ಯವಾದಗಳು ಗೆಳೆಯರೇ, ಬರೆದ ಮೇಲೆ ಗೊತ್ತಾಯಿತು. ಹೌದು, ಇದು ವ್ಯಕ್ತಿತ್ವವಿಕಸನ ಸಂಬಂಧೀ ಬರೆಹ ಎಂದು.
      ವ್ಯಕ್ತಿಗಿಂತ ವ್ಯಕ್ತಿತ್ವ, ಆಚಾರಕ್ಕಿಂತ ವಿಚಾರ, ತತ್ತ್ವಕಿಂತ ಸತ್ವ ಮುಖ್ಯವೆಂದುಕೊಂಡವ ನಾನು. ಹಾಗಾಗಿ
      ಸಹಜವಾಗಿ ಇಂಥ ಪ್ರೇರಣಾದಾಯಕ ನುಡಿಗಟ್ಟು ನನ್ನನ್ನು ಸೆಳೆಯುತ್ತದೆ. ಜೊತೆಗೇ ಬರೆಸಿಕೊಳ್ಳುತ್ತದೆ.
      ಪ್ರಕಟಿಸುವ ಸುರಹೊನ್ನೆಯ ಹೃದಯ ವೈಶಾಲ್ಯ ಇಲ್ಲಿ ಸ್ಮರಣೀಯ. ಸುರಹೊನ್ನೆಗಾಗಿಯೇ ಎಷ್ಟೋ ಬರೆದದ್ದಿದೆ.

      ನಿಮ್ಮ ಪ್ರತಿಕ್ರಿಯೆ ಅಮೂಲ್ಯ. ಅನಂತ ಧನ್ಯವಾದಗಳು. ನೀವೂ ಬರೆಹಗಾರರೇ. ದಯಮಾಡಿ ಸುರಹೊನ್ನೆಗೆ
      ಬರೆದು ಕಳಿಸಿ ಕೊಡಿ. ಏಕೆಂದರೆ ಇದು ʼಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗೆ ಮೀಸಲಾದ ಜಾಲತಾಣ!ʼ

  4. ಜೀವನದ ಮೌಲ್ಯಗಳನ್ನು ಎತ್ತಿ ಹಿಡಿದು ಮನಸ್ಸಿಗೆ ನಾಟುವಂತೆ ಮಾಡಿದ ಮೌಲ್ಯಯುತ ಲೇಖನ.

Leave a Reply to vishwa kavi Cancel reply

 Click this button or press Ctrl+G to toggle between Kannada and English

Your email address will not be published. Required fields are marked *