ಪ್ರವಾಸ

ಪುನರುತ್ಥಾನದ ಪಥದಲ್ಲಿ: ಹೆಜ್ಜೆ 30

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ  10:
ಬಯೋನ್ ಮಂದಿರ, ಅಪ್ಸರಾ ನೃತ್ಯ

ಊಟದ ನಂತರ, ಮಾರ್ಗದರ್ಶಿ ನಮ್ಮನ್ನು ಸುಮಾರು 4 ಕಿಮೀ ದೂರದಲ್ಲಿದ್ದ , ಖ್ಮೇರ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ‘ಆಂಗ್ ಕೋಟ್ ಥಾಮ್’ ಗೆ ಕರೆತಂದ. ಇಲ್ಲಿರುವ ಬಯೋನ್ ಮಂದಿರವು ತನ್ನ ವಿಶಿಷ್ಟವಾದ ಸಂಕೀರ್ಣ ವಾಸ್ತುಶಿಲ್ಪಕ್ಕಾಗಿ ಪ್ರಸಿದ್ಧವಾಗಿದೆ. 12 ನೆಯ ಶತಮಾನದ ಕೊನೆಯಲ್ಲಿ ಇಲ್ಲಿ ರಾಜ್ಯವಾಳಿದ್ದ ಜಯವರ್ಮನ್ VII ನ ಕಾಲದಲ್ಲಿ ಬಯೋನ್ ಮಂದಿರವು ಉಚ್ಚ್ರಾಯ ಸ್ಥಿತಿಯಲ್ಲಿತ್ತು.

ಆಂಗ್ ಕೋರ್ ವಾಟ್ ಮತ್ತು ಬಯೋನ್ ಎರಡೂ ಪ್ರಮುಖ ಖ್ಮೇರ್‍ ಸಾಮ್ರಾಜ್ಯದ ನಿರ್ಮಿತಿಗಳಾದರೂ, ಬಯೋನ್ ಮತ್ತು ಅಂಕೋರ್ ವಾಟ್ ಹಲವಾರು ವಿಧಗಳಲ್ಲಿ ಭಿನ್ನವಾಗಿವೆ. ಆಂಗ್ ಕೋರ್‍ ವಾಟ್ ಆರಂಭದಲ್ಲಿ ವಿಷ್ಣು ದೇವಾಲಯವಾಗಿದ್ದು ಆಮೇಲೆ ಬೌದ್ಧರ ಆರಾಧನಾ ಮಂದಿರವಾಯಿತು. ಆದರೆ ಬಯೋನ್ ಬೌದ್ಧ ಆರಾಧನೆಗೆ ಮೀಸಲಾಗಿದ್ದ ಮಂದಿರ. ಆಂಗ್ ಕೋಟ್ ವಾಟ್ ತನ್ನ ಗಾತ್ರ ಹಾಗೂ ವೈಶಾಲ್ಯದಿಂದ ಪ್ರಸಿದ್ಧವಾಗಿದೆ. ಬಯೋನ್ ತನ್ನ ಸಂಕೀರ್ಣ ವಾಸ್ತುಶಿಲ್ಪ ಮತ್ತು ಬೃಹತ್ ಕಲ್ಲಿನ ಮುಖಗಳುಳ್ಳ ಗೋಪುರಗಳಿಗಾಗಿ ಪ್ರಖ್ಯಾತವಾಗಿದೆ. ಈ ಗೋಪುರಗಳ ವಿಶಿಷ್ಟ ಲಕ್ಷಣವೆಂದರೆ ಪ್ರಶಾಂತ, ನಿಗೂಢ ಮುಖಗಳು. ಈ ಶಿಲ್ಪಗಳಲ್ಲಿ ನಗುತ್ತಿರುವ ಮುಖಗಳು ಬುದ್ಧನ ಪ್ರತಿನಿಧಿಗಳೆಂದು ನಂಬಲಾಗುವ ಬೋಧಿಸತ್ವ, ಅವಲೋಕಿತೇಶ್ವರ ಮೊದಲಾದವರನ್ನು ಬಿಂಬಿಸುತ್ತವೆಯಂತೆ. ಹೆಚ್ಚಿನ ಮುಖಶಿಲ್ಪಗಳನ್ನು ಅಂದಿನ ರಾಜ ಜಯವರ್ಮನ್ VII ರ ಮುಖವನ್ನು ಹೋಲುವಂತೆ ಕೆತ್ತಲಾಗಿದೆಯೆಂದೂ ಹೇಳುತ್ತಾರೆ. ಈ ಆವರಣದಲ್ಲಿ 200 ಕ್ಕೂ ಹೆಚ್ಚು ವಿವಿಧ ಗಾತ್ರದ ಪ್ರಶಾಂತ ಮುದ್ರೆಯ ಮುಖಶಿಲ್ಪಗಳಿವೆಯಂತೆ. ಬಯೋನ್ ಮಂದಿರದ ಹೊರಗಿನ ಆವರಣದ ಗೋಡೆಯಲ್ಲಿ ಪೌರಾಣಿಕ, ಐಸ್ತಿಹಾಸಿಕ ಹಾಗೂ ಜನಜೀವನವನ್ನು ನಿರೂಪಿಸುವ ಉಬ್ಬುಶಿಲ್ಪಗಳಿವೆ. ಇಂದಿಗೂ ಸುಸ್ಥಿತಿಯಲ್ಲಿರುವ ಈ ವಿಶಿಷ್ಟ ಶಿಲ್ಪಗಳು ಖ್ಮೇರ್ ಶಿಲ್ಪಿಗಳ ಕೌಶಲ್ಯದ ಪ್ರತೀಕವಾಗಿವೆ.

ಬಯೋನ್ ಮಂದಿರ, ಕಾಂಬೋಡಿಯಾ, ಮುಖಶಿಲ್ಪಗಳು

ಬಯೋನ್ ಮಂದಿರದ ಮುಖ್ಯದ್ವಾರದಲ್ಲಿ ಎರಡೂ ಬದಿ ಬೃಹತ್ತಾದ ನಾಗಶಿಲ್ಪಗಳಿವೆ. ಹಾವಿನ ಹೆಡೆಯ ನಂತರ ಉದ್ದವಾದ ಶರೀರದ ರೀತಿಯ ರಚನೆಯ ಮೇಲೆ ಹಲವಾರು ಮಂದಿ ಸಾಲಾಗಿ , ಒಬ್ಬರ ಹಿಂದೆ ಒಬ್ಬರು ಕುಳಿತುಕೊಂಡಂತೆ ಇರುವ ನೂರಾರು ಆಳೆತ್ತರದ ಶಿಲ್ಪಗಳಿವೆ . ಇವುಗಳಲ್ಲಿ ಕೆಲವು ಭಗ್ನಗೊಂಡ ಮೂರ್ತಿಗಳೂ ಇವೆ. ನಮ್ಮ ಮಾರ್ಗದರ್ಶಿ ತಿಳಿಸಿದ ಪ್ರಕಾರ, ಜಯವರ್ಮನ್ VII ಬೌದ್ಧ ಧರ್ಮದ ಶಾಖೆಯಾದ ‘ತೆರವಾಡ’ ಪಂಥವನ್ನು ಸ್ವೀಕರಿಸಿದ ನಂತರ, ಹಿಂದೂ -ಬೌದ್ಧ ಸಹಿಷ್ಣುತೆಯನ್ನು ಬೆಂಬಲಿಸುವ ಸಲುವಾಗಿ ಈ ಮಾದರಿಯ ಶಿಲ್ಪಗಳನ್ನು ಕೆತ್ತಿಸಿದನಂತೆ.

ಬಯೋನ್ ಮಂದಿರ, ಕಾಂಬೋಡಿಯಾ

ಬಯೋನ್ ಮಂದಿರ, ಕಾಂಬೋಡಿಯಾ

ಅಲ್ಲಿ ಸ್ವಲ್ಪ ಸುತ್ತಾಡಿದೆವು. ಚನ್ಮನ್ ಬಳಿ ಇನ್ನೆಷ್ಟು ಮಂದಿರಗಳಿವೆ, ಎಷ್ಟು ನಡೆಯಬೇಕು ಎಂದು ವಿಚಾರಿಸಿದೆವು. ಆತ ನಗುತ್ತಾ, ಇನ್ನೂ ಬೇಕಾದಷ್ಟು ಮಂದಿರಗಳಿವೆ. ನೀವು ನೋಡಲು ಇಷ್ಟಪಡುವುದಾದರೆ ಸಂಜೆ 05 ಗಂಟೆಯ ವರೆಗೂ ತೋರಿಸಬಲ್ಲೆ ಎಂದ. ಹೈಮವತಿಯವರಿಗೂ ನನಗೂ ಅದಾಗಲೇ ಸುಸ್ತು ಎನಿಸತೊಡಗಿತ್ತು. ಚಾರಿತ್ರಿಕ ಹಿನ್ನೆಲೆಗಳು, ಕಾಲಘಟ್ಟಗಳು ಸ್ವಲ್ಪ ವಿಭಿನ್ನ ಎಂಬುದನ್ನು ಬಿಟ್ಟರೆ, ನಾವು ಆ ವರೆಗೆ ನೋಡಿರುವ ಎಲ್ಲವೂ ಬಹುತೇಕ ಪಾಳುಬಿದ್ದ ದೈತ್ಯಾಕಾರದ ಮಂದಿರಗಳು. ಪ್ರಮುಖವಾದುದನ್ನು ನೋಡಿ ಆಯಿತು, ಈವತ್ತಿಗೆ ಇಷ್ಟು ನಡಿಗೆ ಸಾಕು ಅನಿಸಿತ್ತು. ”ಹಾಗಾದರೆ ಹೊರಡೋಣವೇ? ನಿಮಗೆ ಆಸಕ್ತಿ ಇದ್ದರೆ, ಆಂಗ್ ಕೋರ್‍ ವಾಟ್ ನಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ, ಅದರಲ್ಲಿ ಕಾಂಬೋಡಿಯಾದ ‘ಅಪ್ಸರಾ ಡ್ಯಾನ್ಸ್ ‘ ಪ್ರಮುಖವಾದುದು, ಆದರೆ ಇದು ನಮ್ಮ ನಿಗದಿತ ಕಾರ್ಯಕ್ರಮ ಪಟ್ಟಿಯಲ್ಲಿ ಇಲ್ಲ, ನಿಮ್ಮ ಖರ್ಚಿನಲ್ಲಿ ಹೋಗುವುದಾದರೆ ವ್ಯವಸ್ಥೆ ಮಾಡುವೆ. ನೃತ್ಯ ವೀಕ್ಷಿಸಲು ಮಾತ್ರ ಆದರೆ ಒಬ್ಬರಿಗೆ 12 ಡಾಲರ್ ಟಿಕೆಟ್, ಅಲ್ಲಿ ಊಟ ಬೇಕಿದ್ದರೆ ಹೆಚ್ಚುವರಿ ಕೊಡಬೇಕು” ಎಂದ. ಹಾಗಾದರೆ, ಒಳ್ಳೆಯದೇ ಆಯಿತು, ನಮಗೆ ಊಟರಹಿತ ಟಿಕೆಟ್ ವ್ಯವಸ್ಥೆ ಮಾಡಿ ಎಂದೆವು.

ಆಮೇಲೆ ಬಯೋನ್ ನಿಂದ ಹೊರಟ ನಾವು ಉಳಕೊಂಡಿದ್ದ ಹೋಟೆಲ್ ಪಿಯರಿಗೆ ಬಂದೆವು. ಚನ್ಮನ್ ಯಾರಿಗೋ ಫೋನ್ ಮಾಡಿ ನಮಗಿಬ್ಬರಿಗೂ ತಲಾ 12 ಡಾಲರ್ ನ ಎರಡು ಟಿಕೆಟ್ ಗೆ ವ್ಯವಸ್ಥೆ ಮಾಡಿದ. ನಮ್ಮಲ್ಲಿ ಡಾಲರ್ ಕರೆನ್ಸಿ ಇರಲಿಲ್ಲ. ಪಕ್ಕದಲ್ಲಿ ಇದ್ದ ಅಂತರಾಷ್ಟ್ರೀಯ ಎ.ಟಿ.ಎಮ್ ನಿಂದ ನಾಲ್ಕು ಡಾಲರ್ ಶುಲ್ಕ ಪಾವತಿಸಿ ಡಾಲರ್ ಕರೆನ್ಸಿ ಪಡೆದು ಚನ್ಮನ್ ಗೆ ಕೊಟ್ಟೆವು. ಆತ ನಮ್ಮ ಬಳಿ, ಸಂಜೆ ಏಳುವರೆ ಗಂಟೆಗೆ ‘ಮೊರಕೋಟ್ ರೆಸ್ಟಾರೆಂಟ್’ ನಲ್ಲಿ ಸಾಂಪ್ರದಾಯಿಕ ಕಾಂಬೋಡಿಯನ್ ನೃತ್ಯ ಆರಂಭವಾಗುತ್ತದೆಯೆಂದೂ, ನಮ್ಮನ್ನು ಕರೆದೊಯ್ಯಲು ‘ಟುಕ್ ಟುಕ್’ ಎಂಬ ಮೋಟರ್ ಬೈಕ್ ಚಾಲಿತ ರಿಕ್ಷಾ ಬರುತ್ತದೆಯೆಂದೂ, ಆಮೇಲೆ ಆದೇ ರಿಕ್ಷಾದವನು ರಾತ್ರಿಯ ಊಟಕ್ಕೆ ಕರೆದೊಯ್ಯುವನೆಂದೂ ತಿಳಿಸಿ, ಹೊರಟ.

ನಾವು ಹೋಟೇಲ್ ನಲ್ಲಿ ಸ್ವಲ್ಪ ವಿಶ್ರಮಿಸಿ, ಸಂಜೆ ಏಳು ಗಂಟೆಗೆ ಸಿದ್ಧರಾದೆವು. ಹೋಟೆಲ್ ಗೆ ಎದುರುಗಡೆ ಅದಾಗಲೇ ಬಂದಿದ್ದ ಟುಕ್ ಟುಕ್ ಚಾಲಕ ನಮ್ಮನ್ನು ಸ್ವಲ್ಪ ದೂರವಿದ್ದ ‘ ಮೊರಾಕೋಟ್’ ಎಂಬ ರೆಸ್ಟಾರೆಂಟ್ ಬಳಿ ತಲಪಿಸಿದ. ಬಾಗಿಲಿನಲ್ಲಿ ಟಿಕೆಟ್ ನೋಡಿ ಒಳಗೆ ಬಿಟ್ಟರು.

ಅದೊಂದು ವಿಶಾಲವಾದ, ಭವ್ಯವಾದ ರೆಸ್ಟಾರೆಂಟ್. ಆಧುನಿಕ ಸವಲತ್ತುಗಳು, ಜಗಮಗಿಸುವ ವಿದ್ಯುದ್ದೀಪಗಳು, ಆರಾಮವಾಗಿ ಕುಳಿತುಕೊಂಡು ವಿವಿಧ ಆಹಾರ ಸೇವಿಸುತ್ತಿದ್ದ ಪ್ರೇಕ್ಷಕರು , ಸೊಗಸಾದ ವೇದಿಕೆ, ಇತ್ಯಾದಿ ನೋಡುತ್ತಾ ಒಂದೆಡೆ ಕುಳಿತೆವು. ನಿಮಗೇನಾದರೂ ಆಹಾರ, ಡ್ರಿಂಕ್ಸ್ ತಂದು ಕೊಡಲೇ ಎಂದರು ಸಿಬ್ಬಂದಿ. ಬೇಡವೆಂದು ವೇದಿಕೆಯತ್ತ ನೋಡುತ್ತಾ ಇದ್ದೆವು. ಸ್ವಲ್ಪ ಸಮಯದಲ್ಲಿ ಕಾರ್ಯಕ್ರಮ ಆರಂಭವಾಯಿತು. ಕಾಂಬೋಡಿಯಾ ಶೈಲಿಯ ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಲಲನೆಯೊಬ್ಬಳು ಇಂಗ್ಲಿಷ್ ಮತ್ತು ಖ್ಮೇರ್‍ ಭಾಷೆಯಲ್ಲಿ ಸ್ವಾಗತ ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡತೊಡಗಿದಳು. ಮುಂದೆ ಒಂದು ಗಂಟೆಗಳ ಕಾಲ ಬಹಳ ಸೊಗಸಾದ ನೃತ್ಯ ಕಾರ್ಯಕ್ರಮ ನಮ್ಮ ಮುಂದೆ ಅನಾವರಣಗೊಂಡಿತು. ನನಗೆ ಅರ್ಥವಾದ ಮಟ್ಟಿಗೆ ಅವುಗಳಲ್ಲಿ ಸ್ವಾಗತ ನೃತ್ಯ, ಬೇಟೆಗಾರರ ನೃತ್ಯ, ಮಾರ್ಷಲ್ ಆರ್ಟ್ ಎಂಬ ಕುಸ್ತಿ, ನವಿಲಿನ ನೃತ್ಯ, ಜಾನಪದ ಹಾಡಿಗೆ ಸಾಮೂಹಿಕ ನೃತ್ಯ, ದೇವ-ದೇವಿಯರ ನೃತ್ಯ ಇತ್ಯಾದಿಗಳಿದ್ದುವು. ಕಾರ್ಯಕ್ರಮದ ಕೊನೆಯದಾಗಿ ‘ಅಪ್ಸರಾ ನೃತ್ಯ’ವಿತ್ತು. ನಮ್ಮ ದೇಶದ ಭರತನಾಟ್ಯಕ್ಕೆ ಇರುವಂತಹ ಶಾಸ್ತ್ರೀಯತೆ ಮತ್ತು ಘನತೆ ಕಾಂಬೋಡಿಯಾದ ‘ಅಪ್ಸರಾ ನೃತ್ಯ’ಕ್ಕೆ ಇದೆ ಅನಿಸಿತು. ಇದು ಸ್ವಲ್ಪ ನಿಧಾನ ಗತಿಯ ಲಯ, ಹಾವ ಭಾವ ಪ್ರಸ್ತುತಿಗಳುಳ್ಳ ಸೊಗಸಾದ ನೃತ್ಯ ಪ್ರಕಾರ. ಈಗಿನ ಅಪ್ಸರಾ ನೃತ್ಯವನ್ನು ಬೆಳೆಸಿ ಪೋಷಿಸಿದ ಕೀರ್ತಿ 20 ನೇ ಶತಮಾನದ ರಾಣಿ ಸಿಸೊವಾತ್ ಕೊಸಮಾಕ್ ಗೆ (Sisowath Kossmak) ಸಲ್ಲುತ್ತದೆ. ಆಕೆ ಆಂಗ್ ಕೋರ್‍ ವಾಟ್ ನ ದೇವಾಲಯದ ಆವರಣದಲ್ಲಿರುವ ಅಪ್ಸರೆಯರ ಉಬ್ಬುಶಿಲ್ಪಗಳನ್ನು ಅಧ್ಯಯನ ಮಾಡಿ, ನಶಿಸಿಹೋಗಿದ್ದ ಖ್ಮೇರ್ ಸಾಮ್ರ್ಯಾಜ್ಯದ ಅದ್ಭುತ ಕಲೆಯಾದ ಅಪ್ಸರಾ ನೃತ್ಯವನ್ನು ಪುನಶ್ಚೇತನಗೊಳಿಸಿದಳಂತೆ.

ಅಪ್ಸರಾ ನೃತ್ಯ

ಹೀಗೆ ಒಂದು ಗಂಟೆಯ ಕಾಲು ನಡೆದ ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಿದೆವು. ಆಮೇಲೆ ‘ಟುಕ್ ಟುಕ್’ ಚಾಲಕ ನಮ್ಮನ್ನು ರಾತ್ರಿಯ ಊಟಕ್ಕಾಗಿ ಹೋಟೆಲ್ ‘ವಣಕ್ಕಂ’ ಎಂಬಲ್ಲಿಗೆ ಕರೆದೊಯ್ದ. ಸ್ಥಳೀಯರು ನಿರ್ವಹಿಸುವ , ಭಾರತೀಯ ಮೂಲದವರ ಹೋಟೆಲ್ ಅದು. ಊಟ ಚೆನ್ನಾಗಿತ್ತು. ‘ಟುಕ್ ಟುಕ್’ ಚಾಲಕ ನಮ್ಮನ್ನು ಹೋಟೇಲ್ ಪಿಯರಿಗೆ ತಲಪಿಸಿದ. ಅವನಿಗೆ ಕೊಡಬೇಕಾದ ಹಣವನ್ನು ಕೊಟ್ಟು, ಆ ದಿನದ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆವು.

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : http://surahonne.com/?p=42676

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

12 Comments on “ಪುನರುತ್ಥಾನದ ಪಥದಲ್ಲಿ: ಹೆಜ್ಜೆ 30

    1. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

    1. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

  1. ಮತ್ತೆ ನಾನು ನೋಡಿದ್ದೆಲ್ಲ ನೆನಪಾಯ್ತು. ಥ್ಯಾಂಕ್ಸ್. ಡಾನ್ಸ್ ಎಷ್ಟು ಚಂದ ಅಲ್ಲವಾ

    1. ಹೌದು ಮೇಡಂ. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು

  2. ಎಂದಿನಂತೆ ಚೆಂದದ ನಿರೂಪ; ಅನಾವರಣಗೊಂಡಿದೆ ಕಾಂಬೋಡಿಯಾ ಬಹುರೂಪ !
    ಬರೆಹದ ಜೊತೆಗೆ ಚಿತ್ರಗಳೂ !!
    ಎಷ್ಟು ಚೆಂದವಿವೆ, ನೋಡಲೇ ಸೊಗಸು ; ಮರೆತು ಎಲ್ಲ ವಯಸು…..

    ಮುಂದುವರೆಯಲಿ ಮೇಡಂ,
    ಧನ್ಯವಾದ ನಮ್ಮನೂ ಜೊತೆಗೆ ಪ್ರವಾಸಿಸಿದ್ದಕೆ…..

    1. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು

  3. ನಡೆದೂ ನಡೆದೂ ಸುಸ್ತಾದ ಕಾಲುಗಳಿಗೆ ಆರಾಮ ನೀಡಿ, ಅಪ್ಸರಾ ನೃತ್ಯವನ್ನು ವೀಕ್ಷಿಸಿ, ವಿವರಗಳನ್ನು ನಮಗೆ ನೀಡಿದ ಪ್ರವಾಸ ಕಥನದ ಚಂದದ ನಿರೂಪಣೆ.

    1. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು

  4. ವಿಶಾಲವಾದ ಬೌದ್ಧ ಮಂದಿರಗಳು, ಮಂದಸ್ಮಿತ ಮೊಗದ ಬೃಹದಾಕಾರ ಶಿಲ್ಪ ಗೋಪುರಗಳು, ಸುಸ್ತಾದ ಕಾಲುಗಳು ವಿಶ್ರಾಂತಿ ಬಯಸಿದಾಗ, ಆರಾಮವಾಗಿ ಕುಳಿತು ನೋಡಿ ಆನಂದಿಸಿದ ವೈವಿಧ್ಯಮಯ ನೃತ್ಯಗಳ ಜೊತೆ, ಗೊಂಬೆಗಳಂತೆ ಕಾಣುವ ಸುಂದರ ನೃತ್ಯಗಾತಿಯರ ಅಪ್ಸರಾ ನೃತ್ಯ ವೀಕ್ಷಣೆ, ಟುಕ್ ಟುಕ್ ರಿಕ್ಷಾದಲ್ಲಿ ಪಯಣ…
    ಎಲ್ಲವೂ ಕಣ್ಮುಂದೆ ಹಾದು ಹೋದವು.
    ಎಂದಿನಂತೆ ಸುಂದರ ಚಿತ್ರಗಳೊಂದಿಗಿನ ನಿರೂಪಣೆ ಖುಷಿ ಕೊಟ್ಟಿತು.

    1. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *