ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ
ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಸಂಸ್ಕೃತಿಯ ಹೊರತು ನಾಗರಿಕತೆಯಾಗಲಿ, ಧರ್ಮವಾಗಲಿ ಬೆಳೆಯಲಾರದು. ಇವು ಕೊಂಡಿಯಿದ್ದಂತೆ. ಹಾಗಾಗಿ ಒಂದು ಕೊಂಡಿ ತಪ್ಪಿದರೂ ಸಂಸ್ಕೃತಿಗೆಯೇ ಪೆಟ್ಟು.
ಭಾರತದ ಮೊದಲನೇಯ ಪ್ರಧಾನಿ ಜವಹರಲಾಲ್ ನೆಹರೂರವರು ನಮ್ಮ ದೇಶವನ್ನು ’ಕರಗಿಸುವ ಮೂಸೆ’ ಎಂಬುವುದಾಗಿ ಬಣ್ಣಿಸಿದ್ದರು; ಅರ್ಥಾತ್ ಹಲವು ಜಾತಿ, ಧರ್ಮಗಳನ್ನು ಹೊಂದಿರುವ ದೇಶ ನಮ್ಮದು. ಆದರೆ ದಯಾನೀಯ ಸಂಗತಿಯೆಂದರೆ; ನಮ್ಮ ದೇಶವು ವೈಜ್ಞಾನಿಕತೆ, ತಾಂತ್ರಿಕತೆಯಲ್ಲಿ ಮುಂದುವರಿದಷ್ಟೂ ದೇಶದ ಉತ್ತಮ ನಾಗರಿಕರಾಗಬೇಕಿರುವ ಯುವಜನತೆ ಸಿನೀ ಪ್ರಪಂಚಕ್ಕೆ ಮಾರುಹೋಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುತ್ತಾ ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿರುವರು. ಕಂಪ್ಯೂಟರ್ ಹಾವಳಿಗೆ ಸಿಕ್ಕು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ ಆಪ್, ಟ್ವಿಟರ್ ಮುಂತಾದುವುಗಳಲ್ಲಿ ಮುಳುಗಿ ಹೋಗಿದ್ದಾರೆ. ಇವುಗಳಿಂದ ಯುವಜನತೆ ಸಂಸ್ಕೃತಿಯ ರಕ್ಷಣೆ ಜೊತೆಗೆ ತಮ್ಮ ಸೃಜನಶೀಲತೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಕುಳಿತು ಓದಲು, ಬರೆಯಲೂ ಪುರುಸೊತ್ತು ಸಿಗದ ಇವರು ತಮ್ಮದೇ ಪ್ರಪಂಚದಲ್ಲಿ ಮುಳುಗಿಹೋಗಿದ್ದಾರೆ ಅನ್ನಿಸುತ್ತಿದೆ. ಮುತ್ತೈದೆಯರ ಕೊರಳಲ್ಲಿ ಕರಿಮಣಿ ಕಾಣೆಯಾಗಿದೆ. ಹಣಗಳಿಕೆಯ ಭರದಲ್ಲಿ ಗಂಡಸು ಮಾನವೀಯತೆ, ಕರುಣೆ ಮೊದಲಾದ ಮಾನವಧರ್ಮವನ್ನು ಮರೆತು ಕಠಿಣನಾಗಿದ್ದಾನೆ.
ಉಳಿದ ಜಾತಿ, ಧರ್ಮಗಳನ್ನು ಹಳಿಯುವ, ಟೀಕಿಸುವ ಮೊದಲು; ನಾವು ನಮ್ಮ ಧರ್ಮದಲ್ಲಿದ್ದೇವೆಯೇ? ಸಂಸ್ಕೃತಿಗೆ ನಮ್ಮಿಂದ ಕೊಡುಗೆಯೇನು? ಎಂಬುದಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಾವು ಹೇಗೆಯೋ ಹಾಗೆಯೇ ನಮ್ಮ ಮುಂದಿನ ಪೀಳಿಗೆ. ಹಾಗಾಗಿ ನಮ್ಮ ನಡತೆ ಮಾದರಿಯಾಗಿರಬೇಕು. ಇನ್ನೂ ಕಾಲ ಮಿಂಚಿಲ್ಲ.
ಇನ್ನಾದರೂ ನಮ್ಮ-ನಮ್ಮ ಧರ್ಮವನ್ನು ಗೌರವಿಸೋಣ. ಸಂಸ್ಕೃತಿಯನ್ನು ರಕ್ಷಿಸೋಣ.
– ಅಕ್ಷಯ ಕಾಂತಬೈಲು
True. We seem to be living in a postmodern bubble.
ಬರಹ ಚೆನ್ನಾಗಿದೆ ಅಕ್ಷಯ್