ಭಾರತದ ಅಂತರಿಕ್ಷ ಪಯಣಿಗರಿಗೆ/ಸೈನಿಕರಿಗೆ ಸಿದ್ಧ ಆಹಾರ ರೂಪಿಸಿದ ವಿಜ್ಞಾನಿ

Share Button

‘ದಂಡು ಬರಲಿ ದಾಳಿ ಬರಲಿ ಉಂಡಿರು ಮಗನೆ’ ಎನ್ನುವುದು ಗಾದೆ ಮಾತು. ಉಣ್ಣಲು ಊಟ ತಯಾರಿಸಲೇಬೇಕು. ಮನೆಗಳಲ್ಲಿ ಬಿಸಿ ಅಡುಗೆ ಮಾಡಿ ಉಣ್ಣುವುದು ಸರಿ. ಪ್ರಯಾಣದಲ್ಲಿರುವಾಗ ಬುತ್ತಿಯೂಟವೋ, ಆ ಸ್ಥಳದಲ್ಲೇ ಸಿಗುವ ಊಟವೋ ನಡೆಯುತ್ತದೆ. ಆದರೆ ಗಡಿಯಲ್ಲಿ ಹಲವು ತಿಂಗಳುಗಳೇ ಕಳೆಯುವ ಸೈನಿಕರಿಗೆ, ಹಲವಾರು ದಿನಗಳು ಅಂತರಿಕ್ಷದಲ್ಲಿರುವ ಪಯಣಿಗರಿಗೆ ಇದು ಸಾಧ್ಯವೇ? ಆಹಾರವನ್ನು ತಿನ್ನದಿರಲೂ ಸಾಧ್ಯವಿಲ್ಲ. ಇಂತಹ ಸಮಯಕ್ಕಾಗಿಯೇ ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದವರು(Defence Food Research Laboratory-DFRL) ಸೂಕ್ತ ಆಹಾರ ಮತ್ತು ಆಹಾರದ ಪೊಟ್ಟಣಗಳನ್ನು ತಯಾರಿಸಿದ್ದಾರೆ.

ಭಾರತದ ಮೊಟ್ಟ ಮೊದಲ ಗಗನಯಾತ್ರಿ ಯಾರು? ಎನ್ನುವ ಪ್ರಶ್ನೆಗೆ ‘ಥಟ್‍’ ಎಂದು ಉತ್ತರಿಸುವವರಿದ್ದಾರೆ. ಯಾವಾಗ ಎನ್ನುವ ಪ್ರಶ್ನೆಗೆ ಕೆಲವರು ಏಪ್ರಿಲ್‍ 2, 1984 ಎಂದು ಉತ್ತರಿಸಬಹುದು. ಅವರಿಗೆ ಅಂತರಿಕ್ಷದಲ್ಲಿದ್ದಷ್ಟು ದಿನಗಳು ಆಹಾರ ಪೂರೈಕೆ ಮಾಡಿದವರು ಯಾರು ಎಂದು ಕೇಳಿದಾಗ ಉತ್ತರಿಸುವುದು ಬೆರಳೆಣಿಕೆಯಷ್ಟೇ ಜನ ಎನ್ನುವುದು ನನ್ನ ನಂಬಿಕೆ. ಒಂದು ದೊಡ್ಡ ಯೋಜನೆಯ ಯಶಸ್ಸಿನ ಹಿಂದೆ ಅನೇಕ ಜನರಿರುತ್ತಾರೆ. ಎಲ್ಲರ ಪಾತ್ರವೂ ಮುಖ್ಯವೇ. ಅಂತರಿಕ್ಷ ವಾಸದಲ್ಲಿ ರಾಕೇಶ್‍ ಶರ್ಮರವರಿಗೆ ಯಾವ ಬಗೆಯ ಊಟ ಒಳ್ಳೆಯದು ಹಾಗೂ ಅವರು ಯಾವ ರೀತಿಯ ಊಟ ಮಾಡಲು ಇಚ್ಛಿಸುತ್ತಾರೆ ಎಂದು ಸೂಕ್ಷ್ಮವಾಗಿ ಯೋಚಿಸಿ, ತಯಾರಿಸಿ ಉಣಬಡಿಸಿದ ವಿಜ್ಞಾನಿಗಳಲ್ಲಿ ಅಪ್ಪಟ ಕನ್ನಡಿಗ ಡಾ. ಕೆ.ರಾಧಾಕೃಷ್ಣರವರೂ ಒಬ್ಬರು. ಆ ಸಮಯದಲ್ಲಿ ಆಗ ತಾನೇ ಪ್ರಯೋಗಾಲಯಕ್ಕೆ ಕಾಲಿಟ್ಟಿದ್ದ ಡಾ.ಕೆ.ರಾಧಾಕೃಷ್ಣ ತಾವು ಹಿರಿಯ ಸಹೋದ್ಯೋಗಿಗಳ ಜೊತೆ ಆ ಯೋಜನೆಯಲ್ಲಿ ಪಾಲ್ಗೊಂಡಿದ್ದು ಅವಿಸ್ಮರಣೀಯ ಅನುಭವ ಎನ್ನುತ್ತಾರೆ.

ಮಾರ್ಚಿ 30, 1954ರಂದು ಜನಿಸಿದ ಡಾ.ರಾಧಾಕೃಷ್ಣರವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅಜ್ಜಾವರದವರು. ಇವರ ತಂದೆ ಕೊಲ್ಪೆ ವಾಸುದೇವ ಶರ್ಮ ಮತ್ತು ತಾಯಿ ಕೆ.ವಿ. ಶಂಕರಿಯವರು. ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿ ಮಾಡಿದ ನಂತರ ಮೈಸೂರಿನ ದಳವಾಯಿ ಹೈಸ್ಕೂಲಿನಲ್ಲಿ ಎಸ್‍.ಎಸ್‍.ಎಲ್‍.ಸಿ ಮುಗಿಸಿದರು. ಮುಂದೆ ಶಾರದಾ ವಿಲಾಸ ಕಾಲೇಜಿನಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತದಲ್ಲಿ ಬಿ.ಎಸ್‍.ಸಿ ಪದವಿ ಗಳಿಸಿದರು. ಅನಂತರ ಆಹಾರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಾಗಿ ಇವರು ಆಯ್ಕೆ ಮಾಡಿಕೊಂಡದ್ದು ರಕ್ಷಣಾ ಆಹಾರ ಮತ್ತು ಸಂಶೋಧನಾ ಪ್ರಯೋಗಾಲಯ. ಮಾಂಸದ ತಂತ್ರಜ್ಞತೆಯಲ್ಲಿ ಪಿಎಚ್‍.ಡಿ ಪದವಿಯನ್ನೂ ಇಲ್ಲಿಯೇ ಮುಗಿಸಿ ಉದ್ಯೋಗವನ್ನು ಗಳಿಸಿದರು.

ಪ್ರಯೋಗಾಲಯಕ್ಕೆ ಕಾಲಿಡುತ್ತಿದ್ದಂತೆ ಇಂಡೋ-ಸೋವಿಯಟ್ ಒಪ್ಪಂದದಡಿ ಗಗನಯಾತ್ರೆಗೆ ಸಿದ್ಧವಾಗುತ್ತಿದ್ದ ಯಾತ್ರಿಗಳಿಗೆ ಕೇವಲ ಆರು ತಿಂಗಳಲ್ಲಿ ಸೂಕ್ತ ಆಹಾರ ತಯಾರಿಸುವ ಬೇಡಿಕೆ ಬಂತು. ಇವರ ತಂಡದವರು ಅನಾನಸ್ ರಸ, ಬಿಸ್ಕೆಟ್ ಮತ್ತು ಮಾವಿನ ಹಣ್ಣಿನ ಬರ‍್ಗಳನ್ನು ತಯಾರಿಸಿದರಂತೆ. ಅವುಗಳಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ಬಾರ್ ಮಾತ್ರವೇ ಆಯ್ಕೆಯಾಗಿ ಗಗನಕ್ಕೆ ಹಾರಿತು. ಈ ಮಾವಿನ ಬಾರ್ ಸ್ವಾದವನ್ನು ರಷ್ಯಾದವರೂ ಮೆಚ್ಚಿಕೊಂಡರಂತೆ.

ಮುಂದೆ 1985ರಲ್ಲಿ ‘ಮಿಷನ್ 61 I’ ಯೋಜನೆಗೆ ತಯಾರಿ ಪ್ರಾರಂಭವಾಯ್ತು. ಈ ಯೋಜನೆಯಲ್ಲಿ ಇಸ್ರೋ ಸಂಸ್ಥೆಯ ಎನ್.ಸಿ.ಭಟ್ ಮತ್ತು ಪಿ.ರಾಧಾಕೃಷ್ಣನ್ ಇಬ್ಬರೂ ಗಗನಕ್ಕೆ ಹೊರಡುವ ತಯಾರಿ ಶುರು ಮಾಡಿಕೊಂಡರು. ಇತ್ತ ಡಿಎಫ್ಆರ್ ಎಲ್ ಪ್ರಯೋಗಾಲಯದ ವಿಜ್ಞಾನಿಗಳ ಪಾಕ ತಯಾರಿಕೆಯೂ ಶುರುವಾಯ್ತು. ಬೆಳಗಿನ ಟೀ ಇಂದ ರಾತ್ರಿ ಊಟದ ನಂತರದ ‘ಡೆಸರ್ಟ್’ ವರೆಗೆ ಸುಮಾರು 17 ಬಗೆಯ ಅಡುಗೆಗಳ ಪಟ್ಟಿ ಸಿದ್ಧವಾಯ್ತು. ಮಾಂಸಾಹಾರದ ಅಗತ್ಯ ತಿಳಿದಿದ್ದು, ಅನುಭವವೂ ಗಳಿಸಿದ್ದರಿಂದ ರಾಧಾಕೃಷ್ಣರವರ ಜವಾಬ್ದಾರಿ ಹೆಚ್ಚಾಗಿತ್ತು. ಈ ವಿಜ್ಞಾನಿಗಳ ತಂಡ ಸಿದ್ಧಪಡಿಸಿದ ತರಕಾರಿ ಪಲಾವ್, ಚಿಕನ್ ಪಲಾವ್, ಚಪಾತಿ, ಖೀರು, ರವೆ ಹಲ್ವಾ ಮುಂತಾದ 17 ಖಾದ್ಯಗಳಲ್ಲಿ ನಾಸಾದ ಪರಿಣಿತರು 13 ಖಾದ್ಯಗಳನ್ನು ಆಯ್ಕೆ ಮಾಡಿದ್ದು ಪ್ರಯೋಗಾಲಯದ ಹೆಗ್ಗಳಿಕೆ. ಎನ್.ಸಿ.ಭಟ್ ಅವರಂತೂ ರವೆ ಹಲ್ವಾ ತಮ್ಮ ಮಡದಿ ತಯಾರಿಸುವ ಹಲ್ವಾದಷ್ಟೇ ಚೆನ್ನಾಗಿದೆ ಎಂದು ಸಂತೋಷಪಟ್ಟರಂತೆ. ಇವುಗಳಿಗೆ ಹೋಲಿಸಿದಾಗ ನಾಸಾದವರ ಆಹಾರ ಸ್ವಲ್ಪ ಸಪ್ಪೆ ಎಂದರಂತೆ. ಆಹಾರ ಚೆನ್ನಾಗಿರುವುದರ ಜೊತೆಗೆ ಅದನ್ನು ಪೊಟ್ಟಣದಲ್ಲಿಡುವ, ಸಂರಕ್ಷಿಸುವ ಬಗೆಯೂ ಮುಖ್ಯ. ಶೂನ್ಯ ಗುರುತ್ವಾರ‍್ಷಣೆಯಲ್ಲಿ ಪೊಟ್ಟಣಗಳನ್ನು ಬಿಸಾಡುವುದು ಸಾಧ್ಯವಿಲ್ಲ. ಡಿಎಫ್ ಆರ್ ಎಲ್ ನ ಪ್ಯಾಕೇಜ್ ವ್ಯವಸ್ಥೆ ನಾಸಾದ ವ್ಯವಸ್ಥೆಯಷ್ಟೇ ಚೆನ್ನಾಗಿತ್ತು ಎಂದು ರಾಧಾಕೃಷ್ಣರವರು ಹೇಳಿದ್ದಾರೆ. ಇಷ್ಟೆಲ್ಲಾ ಸಿದ್ಧತೆಗಳಾದರೂ ‘ಮಿಷನ್ 61 I’ ಉಡಾವಣೆಯಾಗಲಿಲ್ಲ. ಆದರೆ ಆಹಾರ ತಜ್ಞರು ಖಾದ್ಯಗಳನ್ನು ತಯಾರಿಸಲು ರೂಪಿಸಿದ್ದ ವಿಧಾನಗಳು ವ್ಯರ್ಥವಾಗಲಿಲ್ಲ. ಅವು ಈಗಲೂ ಲಭ್ಯವಿವೆ ಎನ್ನುತ್ತಾರೆ ಡಾ.ರಾಧಾಕೃಷ್ಣ.

ರಾಧಾಕೃಷ್ಣರವರು ‘Freeze-dried’ ಹಲಸಿನ ಹಣ್ಣು ತಯಾರಿಸುವುದರಲ್ಲಿಯೂ ಯಶಸ್ವಿಯಾಗಿದ್ದಾರೆ. ಅವರು ತಮ್ಮ ಪ್ರಯೋಗಾಲಯದಲ್ಲಿ ಪ್ರದರ್ಶಿಸಿರುವ ‘Freeze-dried’ ಹಲಸಿನ ಹಣ್ಣು ಒಣಗಿಸಿದ (desiccated) ತೆಂಗಿನಕಾಯಿಗಳ ಚೂರುಗಳಂತೆ ಕಾಣುತ್ತದೆ; ಸುದ್ದಿಪತ್ರಿಕೆಗಿಂತ ಹಗುರವಾಗಿರುತ್ತದೆ. ಇದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸೇರಿಸಿದರೆ ತಾಜಾ ಹಣ್ಣಿನಂತೆ ಆಗುತ್ತದೆ. ಇದನ್ನು ಮೊಸರಿನ ಜೊತೆ ಅಥವಾ ಬೇರೆ ರೂಪದಲ್ಲಿಯೂ ತಿನ್ನಬಹುದು.

2010ರಲ್ಲಿ ಮುಂದಿನ ಅಂತರಿಕ್ಷ ಪಯಣಗಳಿಗೆ ಇಡ್ಲಿ, ದೋಸೆಗಳನ್ನು ಮಾಡುವುದು ಡಿಎಫ್‍ಆರ್‍ಎಲ್ ಯೋಜನೆಯಾಗಿತ್ತು. ತಮ್ಮ ಬಳಿ ಇರುವ ತಂತ್ರಜ್ಞತೆಗೆ ಈ ಸಾಮರ್ಥ್ಯವಿದೆ. ಆದರೆ ಇಡ್ಲಿ, ದೋಸೆಗಳ ಗಾತ್ರಗಳು ಅಂತರಿಕ್ಷ ನೌಕೆಯಲ್ಲಿ ತಿನ್ನಲು ಅನುಕೂಲಕರವಾಗಿರಬೇಕು ಎನ್ನುವುದು ರಾಧಾಕೃಷ್ಣರವರ ಆಲೋಚನೆಯಾಗಿತ್ತು. ಬಹಳ ದೊಡ್ಡ ಗಾತ್ರದ ದೋಸೆಗಳು ಸರಿಹೊಂದುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಒಟ್ಟಿನಲ್ಲಿ ಅಂತರಿಕ್ಷ ಯಾತ್ರಿಕರಿಗಾಗಿ ಸಿದ್ಧಪಡಿಸುವ ದೋಸೆ, ಇಡ್ಲಿಗಳ ಪೌಷ್ಠಿಕತೆ, ರುಚಿ, ತಯಾರಿಕೆ, ಗಾತ್ರ ನಿರ್ಣಯ, ಸಂರಕ್ಷಣೆ ಹಾಗೂ ಪೊಟ್ಟಣದಲ್ಲಿ ಕಟ್ಟಿಡುವಿಕೆ ಎಲ್ಲದರಲ್ಲಿಯೂ ವೈಜ್ಞಾನಿಕ ತಳಹದಿಯ ಅಗತ್ಯ ಮತ್ತು ಡಾ.ಕೆ.ರಾಧಾಕೃಷ್ಣರಂತಹ ವಿಜ್ಞಾನಿಗಳ ಪರಿಣಿತಿಯ ಅವಶ್ಯಕತೆಯನ್ನು ಮನಗಾಣಬಹುದು. ಈ ಯೋಜನೆಯಲ್ಲಿ ತಯಾರಿಸಿದ ಇಡ್ಲಿ, ಸಾಂಬಾರ್‍ ಮತ್ತು ಚಟ್ನಿಗಳನ್ನು ತಯಾರಿಸಿದ ವಿವರಣೆ ಯಾವುದೇ ವೈಜ್ಞಾನಿಕ ಪ್ರಯೋಗಕ್ಕೂ ಸರಿಸಾಟಿಯಾಗುವುದು. ಇಡ್ಲಿಯ ಗಾತ್ರ 2 ರೂಪಾಯಿಯ ನಾಣ್ಯದಷ್ಟು. ಜೊತೆಗೆ ಅತಿ ಹಗುರವಾದ ಕೆಂಪನೆಯ ಸಾಂಬಾರ್‍ ಧೂಳು ಮತ್ತು ಹಾಲುಬಣ್ಣದ ಚಟ್ನಿಯ ಧೂಳು. ಇಡ್ಲಿಗಳನ್ನು ಬೇಯಿಸಿದ ನಂತರ ಅತಿಗೆಂಪು ವಿಕಿರಣದಲ್ಲಿ 700 ಡಿಗ್ರಿ ತಾಪಮಾನದಲ್ಲಿ ಒಣಗಿಸಿ, ಉಳಿದಿರಬಹುದಾದ ಮತ್ತಷ್ಟು ತೇವಾಂಶವನ್ನು ಮೈಕ್ರೋವೇವ್‍ ಕಿರಣದಲ್ಲಿ ಒಣಗಿಸಿದಾಗಲೂ ರುಚಿಗೆ, ಪರಿಮಳಕ್ಕೆ ಮತ್ತು ಪೌಷ್ಠಿಕತೆಗೆ ಧಕ್ಕೆಯಾಗಬಾರದು. ಇಷ್ಟಾದರೂ ದಕ್ಷಿಣ ಕನ್ನಡದ ರುಚಿ ಬಲ್ಲ ಡಾ.ರಾಧಾಕೃಷ್ಣರವರಿಗೆ ಈ ಇಡ್ಲಿಗಳು ಮಲ್ಲಿಗೆ ಇಡ್ಲಿಯಂತಿರುವುದಿಲ್ಲ ಎನ್ನುವ ಬೇಸರ ಇದ್ದೇ ಇದೆ. ಅಂತರಿಕ್ಷದಲ್ಲಿ ಇಂತಹ ಇಡ್ಲಿ-ಸಾಂಬಾರ್‍ಗಳನ್ನು ತಿನ್ನುವಾಗ ಬಿಸಿ ನೀರು ಬೆರಸಬೇಕು. ಚಟ್ನಿಗೆ ತಣ್ಣೀರು ಸೇರಿಸಬೇಕು ಎಂದು ಹೇಳುತ್ತಾರೆ. ಪೊಟ್ಟಣದಲ್ಲಿರುವ ಇಡ್ಲಿಗಳ ತೂಕ 12ಗ್ರಾಂ. ನೀರು ಬೆರೆಸಿದ ನಂತರ 25ಗ್ರಾಂಗೆ ಏರುವುದಂತೆ. ಒಂದು ಪೊಟ್ಟಣದಲ್ಲಿ 10 ಇಡ್ಲಿಗಳನ್ನು ಇಟ್ಟಲ್ಲಿ ಅದು ಸಾಧಾರಣ ಗಾತ್ರದ 3 ಇಡ್ಲಿಗಳಿಗೆ ಸಮವಾಗಿರುತ್ತದೆ. ಹೀಗೆ ಸಂಪೂರ್ಣವಾಗಿ ನಿರ್ಜಲೀಕರಣವಾದ ಇಡ್ಲಿಗಳನ್ನು ಒಂದು ವರ್ಷಕಾಲ ಕೆಡದಂತೆ ಇಡಬಹುದೆಂದೂ ಹೇಳಿದ್ದಾರೆ. ಇವು ನಮ್ಮ ಸೈನಿಕ ವರ್ಗದವರಿಗೂ ಉಪಯೋಗವಾಗುತ್ತಿದ್ದು ಅವರಿಂದಲೂ ಮೆಚ್ಚುಗೆ ಬಂದಿದೆ ಎಂದು ವಿಜ್ಞಾನಿಗಳಿಗೆ ಸಂತಸವಾಗಿದೆ. ಈ ತಂತ್ರಜ್ಞತೆಯನ್ನು ತರಕಾರಿಗಳನ್ನು ಬೇಯಿಸಲೂ ಬಳಸಲು ಸಾಧ್ಯವೆಂದು ವಿಜ್ಞಾನಿಗಳು ಹೇಳುತ್ತಾರೆ. ಹೀಗೆ ಸತತವಾಗಿ 28 ವರ್ಷಗಳ ಕಾಲ ಡಾ.ಕೆ.ರಾಧಾಕೃಷ್ಣರವರು ಅಂತರಿಕ್ಷಯಾತ್ರಿಕರಿಗೆ, ಸೈನಿಕ ವರ್ಗದವರಿಗೆ ಪೌಷ್ಠಿಕ ಹಾಗೂ ರುಚಿಕರ ಆಹಾರ ತಯಾರಿಸುವುದರಲ್ಲಿ ನಿರತರಾಗಿದ್ದಾರೆ. ಇವರೆಲ್ಲ ಯಾವುದೇ ಆತಂಕವಿಲ್ಲದೆ ರುಚಿಕರ ಆಹಾರವನ್ನು ಸೇವಿಸಬಹುದು.

ಅಂತರಿಕ್ಷದವರಿಗಾಗಲೀ, ಸೈನಿಕರಿಗಾಗಲೀ ಒಳ್ಳೆಯ ಸಿಹಿತಿಂಡಿಯೂ ಬೇಕಲ್ಲವೇ? ಇದಕ್ಕಾಗಿ ಡಿಎಫ್ಆರ್‍ಎಲ್‍ ಪ್ರಯೋಗಾಲಯ ತಯಾರಿಸಿರುವುದು ಅಂತರಿಕ್ಷದ ರಸಗುಲ್ಲಾ! ಇವುಗಳ ಗಾತ್ರವೂ ಚಿಕ್ಕ ಗೋಲಿಗಳಷ್ಟು ಅಂದರೆ ನಾಫ್ತಲೀನ್‍ ಬಾಲ್ಸ್‍ನಷ್ಟು ಇರುವುದಂತೆ. ಇವುಗಳನ್ನು -20ರಿಂದ -40 ಡಿಗ್ರಿಗಳಷ್ಟು ತಣಿಸಿ ನಿರ್ಜಲೀಕರಣಗೊಳಿಸಿರುತ್ತಾರೆ. ಇದರಿಂದ ಪರಿಮಳಕ್ಕೆ ಧಕ್ಕೆಯಾಗುವುದಿಲ್ಲ. ಪಾಕವನ್ನು ಹಗುರವಾದ ಪುಡಿಯಂತೆ ಪೊಟ್ಟಣದಲ್ಲಿರಿಸುತ್ತಾರೆ. ಇಂತಹ ರಸಗುಲ್ಲಾ ಸೃಷ್ಟಿಸಲು ಡಾ.ರಾಧಾಕೃಷ್ಣರವರು ತೆಗೆದುಕೊಂಡ ಸಮಯ ಕೇವಲ ಒಂದೂವರೆ ವರ್ಷ. ಆಗಾಗ್ಗೆ ಈ ಕ್ರಮದಲ್ಲಿ ಬದಲಾವಣೆಗಳನ್ನೂ ಮಾಡಿ ಸುಧಾರಿಸಿದ ರಸಗುಲ್ಲಾ ತಯಾರಿಸಲು ಪ್ರಯತ್ನಿಸುತ್ತಾರಂತೆ.

ಡಾ.ಕೆ. ರಾಧಾಕೃಷ್ಣ

ಯಾವುದೇ ಖಾದ್ಯವನ್ನು ತಯಾರಿಸಿದ ನಂತರ ಅದನ್ನು ಅಂತರಿಕ್ಷ ಯೋಗ್ಯವೆಂದು ನಿರ್ಣಯಿಸಲು ಹಲವಾರು ಪರೀಕ್ಷೆಗಳಿಗೆ ಒಳಪಡಿಸುವುದು ಅಗತ್ಯವೆಂದು ಡಾ.ರಾಧಾಕೃಷ್ಣರವರು ವಿವರಿಸುತ್ತಾರೆ. ಅವುಗಳೆಂದರೆ ಖಾದ್ಯದ ಪರಿಮಳ ಮತ್ತು ರುಚಿಗಾಗಿ ರಾಸಾಯನಿಕ ಪರೀಕ್ಷೆ. ನೋಡಲು ಸರಿಯಾಗಿರುವುದೇ ಎನ್ನುವ ಭೌತಿಕ ಪರೀಕ್ಷೆ. ಸೂಕ್ಷ್ಮಜೀವಿಗಳಿಲ್ಲವೆಂದು ದೃಢಪಡಿಸಿಕೊಳ್ಳುವ ಪರೀಕ್ಷೆ. ಎಲ್ಲಕ್ಕಿಂತ ಮಿಗಿಲಾಗಿ ಉಡಾವಣೆಯ ಸಮಯದಲ್ಲಿ ಗುರುತ್ವಾಕರ್ಷಣೆ ಬಲಗಳು ಬದಲಾದಾಗ ಯಾವುದೇ ಪರಿಣಾಮವಾಗುವುದಿಲ್ಲವೆಂದು ಖಚಿತ ಪಡಿಸಿಕೊಳ್ಳುವ ಪರೀಕ್ಷೆ. ಇವೆಲ್ಲವನ್ನೂ ಅರಿತಾಗ ಅಂತರಿಕ್ಷ ಯಾತ್ರಿಕರ ಅಂತರಂಗವನ್ನೇ ಅರಿತಂತಾಗುತ್ತದೆ.

ಇಷ್ಟಾದರೂ ಡಾ.ಕೆ.ರಾಧಾಕೃಷ್ಣರ ಉತ್ಸಾಹ ಹೆಚ್ಚುತ್ತಲೇ ಇದೆ. ಇವರು ಅಂತರಿಕ್ಷದ ಮೊಸರು(ಯೋಗರ್ಟ್‍) ತಯಾರಿಕೆಯ ಬಗ್ಗೆ ಹೇಳುವ ಕೆಲವು ಮಾತುಗಳು ಹೀಗಿವೆ. ಯೋಗರ್ಟ್‍ ತಯಾರಿಸಲು ವಿದ್ಯುತ್‍ಕ್ಷೇತ್ರ ತಂತ್ರಜ್ಞತೆಯನ್ನು ಬಳಸಿರುವುದಾಗಿ ಹೇಳುತ್ತಾರೆ. ದ್ರವ ಮೊಸರಿನ ಮೂಲಕ ವಿದ್ಯುತ್‍ ಮಿಡಿತ(pulses)ಗಳನ್ನು ಹಾಯಿಸಿದರಂತೆ. ಕೆಟ್ಟ ಸೂಕ್ಷ್ಮಾಣು ಜೀವಿಗಳನ್ನು ನಿಷ್ಕ್ರಿಯಗೊಳಿಸಿ,  ಒಳ್ಳೆಯ ಸೂಕ್ಷ್ಮಾಣು ಜೀವಿಗಳಿಗೆ ಹಾನಿಯಾಗದಂತೆ ಉಳಿಸಿಕೊಳ್ಳುವುದೇ ಈ ಪ್ರಕ್ರಿಯೆಯಲ್ಲಿರುವ ಚಮತ್ಕಾರ. ಇದು ಬಹಳ ಉತ್ತಮ ವಿಧಾನ ಎಂದು ಹರ್ಷಿಸುತ್ತಾರೆ.

ಡಾ.ರಾಧಾಕೃಷ್ಣರವರ ವಿವಾಹವಾದಾಗ ಮಡದಿ ಗೀತಾರವರಿಗೆ ತಮ್ಮ ಪತಿ ಪ್ರತಿದಿನ ಬೆಳಗ್ಗೆ ಆರು ಗಂಟೆಗೇ ಮಾರುಕಟ್ಟೆಯಿಂದ ತರಕಾರಿ, ಕಿರಾಣಿಗಳನ್ನು ಖರೀದಿಸಿ, ಆಫೀಸಿಗೆ ಹೋಗುವುದು ಮತ್ತು ರಾತ್ರಿ ಹತ್ತು ಘಂಟೆಗೆ ವಾಪಸ್ಸು ಬರುವುದನ್ನು ನೋಡಿ ಆಫೀಸಿನಲ್ಲಿ ತಮ್ಮ ಪತಿ ಅಡುಗೆ ಭಟ್ಟರೇ ಎಂದೂ ಅನುಮಾನವಾಗಿತ್ತಂತೆ. ದಕ್ಷಿಣ ಕನ್ನಡದ ಜನ ಅಡುಗೆ ತಯಾರಿಕೆಯಲ್ಲಿ ನಿಷ್ಣಾತರೆನ್ನುವುದು ಲೋಕಪ್ರಸಿದ್ಧವಾದ್ದರಿಂದ ಹೀಗೆ ಆಲೋಚಿಸಿರಬಹುದು. ಯುವ ವಿಜ್ಞಾನಿಯಾಗಿದ್ದ ಡಾ.ರಾಧಾಕೃಷ್ಣರವರಿಗೆ ತಮ್ಮ ಕೆಲಸದಲ್ಲಿ ಎಷ್ಟು ಆಸಕ್ತಿ ಎನ್ನುವುದೂ ಈ ಪ್ರಸಂಗದಿಂದ ತಿಳಿಯುತ್ತದೆ.

ಭಾರತೀಯ ಸೈನಿಕರಿಗಾಗಿ ಹಲವಾರು ಗಂಟೆಗಳ ಕಾಲ ನಿದ್ದೆ, ಸುಸ್ತುಗಳನ್ನು ತಡೆಗಟ್ಟಿ, ಆತಂಕವನ್ನು ದೂರಾಗಿಸುವ ಆಹಾರವನ್ನು ತಯಾರಿಸಲು ಡಿಎಫ್‍ಆರ್‍ಎಲ್‍ ಪ್ರಾರಂಭಿಸಿದೆ. ಜೊತೆಗೆ ಹವಾಗುಣ ವೈಪರೀತ್ಯವನ್ನು ಎದುರಿಸುವ ಮತ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೂ ಸಾಕಷ್ಟು ಪೌಷ್ಠಿಕತೆ ದೊರೆಯುವ ಆಹಾರವನ್ನು ತಯಾರಿಸುವ ಉದ್ದೇಶವೂ ಇದೆ. ದೇಶದ ರಕ್ಷಣೆಯಲ್ಲಿ ನಿರತರಾಗಿರುವ ಸೈನಿಕರಿಗಾಗಿ ಮಾಂಸವನ್ನು ಅಧಿಕ ಕಾಲದವರೆಗೆ ಕೆಡದಂತೆ ತಂಪಾಗಿರುಸುವ ‘ಕಿಟ್‍’ಗಳನ್ನು ತಯಾರಿಸುವುದರಲ್ಲಿಯೂ ಮುಂದಾಳತ್ವ ವಹಿಸಿದ್ದರು. ಡಾ.ರಾಧಾಕೃಷ್ಣರವರು ಜಂಟಿನಿರ್ದೇಶಕರಾಗಿದ್ದಾಗ 2013ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡರು. ಇವರ ಕಾಲದಲ್ಲಿ ತಯಾರಾದ ಹಲವು ತಂತ್ರಜ್ಞತೆಗಳು ಉದ್ದಿಮೆಗಳಿಗೂ ಹಸ್ತಾಂತರವಾಗಿ ಪ್ರಯೋಗಾಲಯಕ್ಕೆ ಹಣವೂ ಒದಗಿ ಬಂದಿದೆ. 

ತಮ್ಮ ಸೇವಾವಧಿಯಲ್ಲಿ ಹಲವು ವಿದ್ವತ್ಪೂರ್ಣ ಲೇಖನಗಳನ್ನು ಬರೆದು ಅಂತಾರಾಷ್ಟ್ರೀಯ ಹಾಗೂ ಪ್ರಸಿದ್ಧ ಭಾರತೀಯ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸುಮಾರು ಹತ್ತು ಪೇಟಂಟ್‍ಗಳನ್ನೂ ಪಡೆದಿದ್ದಾರೆ. ಹಲವಾರು ಆಹಾರ ಸಂಬಂಧಿತ ಸಮಾವೇಶಗಳಲ್ಲಿ ಪಾಲ್ಗೊಂಡು ಜನಪ್ರಿಯರಾಗಿರುವ ಡಾ.ರಾಧಾಕೃಷ್ಣರವರು ಪ್ರತಿಷ್ಠಿತ ಸಂಸ್ಥೆಗಳ ಜೀವಾವಧಿ ಸದಸ್ಯತ್ವವನ್ನೂ ಪಡೆದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪಿಎಚ್‍.ಡಿ ಗಳಿಸಿದ ವಿದ್ಯಾರ್ಥಿಗಳೂ ಇವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಕೇವಲ ವೈಜ್ಞಾನಿಕ ಕ್ಷೇತ್ರದಲ್ಲಲ್ಲದೆ ಆಡಳಿತಾತ್ಮಕ ಕ್ಷೇತ್ರದಲ್ಲಿಯೂ ಇವರು ಬಹಳ ದಕ್ಷರೆಂದು ಹೆಸರು ಗಳಿಸಿದ್ದಾರೆ. ಪ್ರಯೋಗಾಲಯದ ಅನೇಕ ಜಟಿಲ ಸಮಸ್ಯೆಗಳನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದವರು. ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ನಿವೃತ್ತಿಯ ಸಮಯದಲ್ಲಿ ಜಂಟಿನಿರ್ದೇಶಕ(Associate Director)ರಾಗಿದ್ದರು.  ಡಾ.ರಾಧಾಕೃಷ್ಣರವರು 2012ರಲ್ಲಿ ‘DRDO Scientist Of The Year’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿ.ವಿ.ನಿರ್ಮಲ

4 Responses

  1. ಶುಭಲಕ್ಷ್ಮಿ ಆರ್ ನಾಯಕ. says:

    ಆಹಾರ ವಿಜ್ಞಾನಿ ಡಾ.ಕೆ ರಾಧಾಕೃಷ್ಣ ರ ಸಾಧನೆ, ಜ್ಞಾನಕ್ಕೆ ಶಿರಬಾಗುವೆ. ವೈಜ್ಞಾನಿಕ ಮಾಹಿತಿಯನ್ನು ಉಣಬಡಿಸಿದ ಮೇಡಮ್ ತಮಗೆ ಧನ್ಯವಾದಗಳು. ಶುಭವಾಗಲಿ.
    ………ಶುಭಲಕ್ಷ್ಮಿ

  2. ಉತ್ತಮ ವಾದ ಬರೆಹ… ಆಹಾರ ವಿಜ್ಞಾನಿ..ಡಾ.ರಾಧಾಕೃಷ್ಣ ಅವರ ಪರಿಚಯಮಾಡಿಸಿದ ನಿಮಗೆ ನಮನ…ಮೇಡಂ

  3. ನಯನ ಬಜಕೂಡ್ಲು says:

    Nice

  4. ಶಂಕರಿ ಶರ್ಮ says:

    ಯಾರೂ ಅಷ್ಟಾಗಿ ತಿಳಿದಿರದ, ಗಮನಿಸಿರದ, ಅಂತರಿಕ್ಷ ಪಯಣಿಗರಿಗೆ ಹಾಗೂ ಸೈನಿಕರಿಗೆ ಸಿದ್ಧ ಆಹಾರವನ್ನು ಸಿದ್ಧ ಪಡಿಸುವ ವಿಭಾಗದ ವಿಜ್ಞಾನಿ ನಮ್ಮ ಕಡೆಯವರೆಂಬುದು ಹೆಮ್ಮೆಯ ಸಂಗತಿ. ಡಾ. ಕೆ. ರಾಧಾಕೃಷ್ಣರ ಪರಿಚಯ ಲೇಖನ ಆಪ್ತವಾಗಿ ಮೂಡಿಬಂದಿದೆ.

Leave a Reply to ಶುಭಲಕ್ಷ್ಮಿ ಆರ್ ನಾಯಕ. Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: