ಯಾರು ಹಿತವರು?

Share Button


ಬೆಳಗಿನ ವಾಕಿಂಗ್ ಮುಗಿಸಿ ಮನೆಯಕಡೆಗೆ ಹಾದಿಹಿಡಿದಿದ್ದರು ಕುಮುದಾ, ಸದಾನಂದ ದಂಪತಿಗಳು. ಮನೆಯ ಗೇಟಿನಬಳಿ ನಿಂತಿದ್ದ ತಮ್ಮ ಚಿಕ್ಕಪ್ಪನ ಮಗಳು ರೇವತಿಯನ್ನು ಕಂಡು ಅಚ್ಚರಿಪಟ್ಟರು ಸದಾನಂದ.

“ಇದೇನೇ ಕುಮುದಾ ಬೆಳಗ್ಗೆ ಬೆಳಗ್ಗೇನೆ ಇವಳಿಲ್ಲಿ? ಮತ್ತೇನು ಯಡವಟ್ಟು ಮಾಡಿಕೊಂಡು ಬಂದಿದ್ದಾಳೋ ಈ ಹುಡುಗಿ? ಪಾಪ ಬಂಗಾರದಂತಹ ಗಂಡ, ಇವಳ ಯಾವ ಮಾತಿಗೂ ಎದುರಾಡದ ಅತ್ತೆಮಾವಂದಿರು, ಮುದ್ದಾದ ಮಗು. ಆದರೂ ಇವಳು ಇಲ್ಲದ ಸಮಸ್ಯೆ ಹುಟ್ಟುಹಾಕಿಕೊಂಡು ಬರುತ್ತಾಳೆ. ನನಗೂ ಬುದ್ಧಿ ಹೇಳಿ ಹೇಳಿ ಸಾಕಾಗಿದೆ. ಈ ಸಾರಿ…”

“ಷ್ ! ಸ್ವಲ್ಪ ಸುಮ್ಮನಿರುತ್ತೀರಾ. ಈಗವಳು ಮೊದಲಿನಂತಿಲ್ಲ. ಬಹಳ ಬದಲಾಯಿಸಿದ್ದಾಳೆ. ಅವಳ ಅತ್ತೆಗೇನೋ ಹುಷಾರಿಲ್ಲ ಎನ್ನುತ್ತಿದ್ದಳು. ಏನಾಗಿದೆಯೊ? ಅವಳ ಗಂಡ ದಿನಕರ ಆಫೀಸಿನ ಕೆಲಸದಮೇಲೆ ಹೊರಗಡೆ ಹೋಗಿದ್ದಾನೆ. ಏನೋ ಕೇಳಲು ಬಂದಿರಬೇಕು. ಬೇಗ ಹೆಜ್ಜೆ ಹಾಕಿ” ಎಂದು ತನ್ನ ಗಂಡನನ್ನು ಸಮಾಧಾನಪಡಿಸಿದರು ಕುಮುದಾ. “ಸರಿ” ಎನ್ನುತ್ತಾ ದಾಪುಗಾಲು ಹಾಕುತ್ತಲೇ ಬಂದ ಸದಾನಂದರು ಗೇಟಿನ ಬೀಗ ತೆಗೆದು ಮುಂದೆ ನಡೆದರು. ಅವರೊಡನೆಯೇ ಬಂದ ಕುಮುದಾ ರೇವತಿಯ ಕಡೆ ನೋಡಿದರು.

ಕೆದರಿದ ತಲೆ, ಕೆಂಪಾದ ಕಣ್ಣು, ಮುದುಡಿದ ಉಡುಪು. ಏನೂ ಮಾತನಾಡದೆ ಅವಳ ಕೈಹಿಡಿದು ಒಳಕ್ಕೆ ಕರೆದುಕೊಂಡು ಹೋದರು ಅಷ್ಟರಲ್ಲಾಗಲೇ ಮುಂದಿನ ಬಾಗಿಲ ಬೀಗ ತೆಗೆದು ಬಾಗಿಲನ್ನು ದೊಡ್ಡದಾಗಿ ತೆರೆದಿದ್ದರು ಸದಾನಂದ. ಅವರಿಬ್ಬರಿಗೂ ಒಳಗೆ ಬರಲು ಅನುವು ಮಾಡಿಕೊಟ್ಟರು. ಹಾಲಿನಲ್ಲಿದ್ದ ಸೋಫಾದ ಮೇಲೆ ಕುಸಿದು ಕುಳಿತ ರೇವತಿ ಬಿಕ್ಕಿಬಿಕ್ಕಿ ಅಳತೊಡಗಿದಳು. ಕಾರಣ ತಿಳಿಯದ ದಂಪತಿಗಳು ಕಕ್ಕಾಬಿಕ್ಕಿಯಾದರು. ಸಮಾಧಾನ ಹೊಂದಲಿ ನಿಧಾನವಾಗಿ ಕೇಳೋಣವೆಂದು ಸುಮ್ಮನೆ ಕುಳಿತರು. ಸುಮಾರು ಹೊತ್ತಾದರೂ ಅವಳ ದುಃಖ ಶಮನವಾಗದ್ದು ಕಂಡು ಕುಮುದಾ ಸದಾನಂದರಿಗೆ ಸಂಜ್ಞೆಮಾಡಿ ತಾವು ಅಡುಗೆಮನೆಗೆ ಹೋದರು.

“ರೇವತಿ..ಹೀಗೆ ಸುಮ್ಮನೆ ಅಳುತ್ತಿದ್ದರೆ ನಮಗೇನು ಗೊತ್ತಾಗುತ್ತೆ? ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆಯೇ? ಮಹಾರಾಯಿತಿ ಅಳು ನಿಲ್ಲಿಸಿ ಏನಾಯಿತೆಂದು ಹೇಳು” ಎಂದು ಅನುನಯದಿಂದ ಕೇಳಿದರು ಸದಾನಂದ. ಅಷ್ಟರಲ್ಲಿ ಕಾಫಿ ತಂದು “ಹೌದು ರೇವತಿ ತಗೋ ಕಾಫಿಕುಡಿ ಸುಧಾರಿಸಿಕೋ. ಏನೆಂಬುದನ್ನು ಹೇಳು” ಎಂದರು ಕುಮುದಾ.

ಅವರು ಕೊಟ್ಟ ಕಾಫಿ ಕುಡಿದ ರೇವತಿ ಕಣ್ಣೊರೆಸಿಕೊಳ್ಳುತ್ತಾ “ಆಂಟಿ, ಅಂಕಲ್ ನನ್ನ ಫ್ರೆಂಡ್ ಶಾಲಿನಿ ಇನ್ನಿಲ್ಲ. ಚಾಮರಾಜಪುರಂ ಸ್ಟೇಷನ್ನಿನ ರೈಲ್ವೇಹಳಿಯ ಮೇಲೆ ಅವಳ ದೇಹ” ಎಂದು ಬಿಕ್ಕಿದಳು.

“ಏನೆಂದೇ ! ಶಾಲಿನಿ ದೇಹವೇನಾ? ನೀನು ಸರಿಯಾಗಿ ನೋಡಿದೆಯಾ?” ಎಂದರು ಒಕ್ಕೊರಲಿನಿಂದ ಇಬ್ಬರೂ.
“ಸರಿಯಾಗೇ ನೋಡಿದೆ. ಅವಳದ್ದೇ ದೇಹ. ಅವಳ ಹೆತ್ತವರು, ಅಣ್ಣ ಅತ್ತಿಗೆ ಎಲ್ಲಾ ಅಲ್ಲೇ ಇದ್ದರು. ದೇಹ ಅತಿಯಾಗಿ ಛಿದ್ರವಾಗಿರಲಿಲ್ಲ. ರುಂಡ ಮುಂಡ ಬೇರೆಬೇರೆಯಾಗಿ ಬಿದ್ದಿದ್ದವು. ಅವಳ ವ್ಯಾನಿಟಿ ಬ್ಯಾಗು ಒಂದೆಡೆ ಬಿದ್ದಿತ್ತು. ಶನಿವಾರ ನಾವಿಬ್ಬರೂ ಬ್ಯಾಂಕಿನ ಕೆಲಸ ಮುಗಿಸಿಕೊಂಡು ಒಟ್ಟಗೇ ಬಂದೆವು. ನೆನ್ನೆ ಭಾನುವಾರ ರಜೆ. ಅವಳು ಯಾರನ್ನೋ ನೋಡಲು ಹೋಗಿದ್ದಳು. ಹೇಗೆ ಅಲ್ಲಿಗೆ ಬಂದಳೋ ಅರ್ಥವಾಗುತ್ತಿಲ್ಲ. ಒಂದು ಸಣ್ಣ ಸಂಗತಿಯಾದರೂ ನನ್ನೊಡನೆ ಹಂಚಿಕೊಳ್ಳುತ್ತಿದ್ದಳು. ಈಗ ಒಂದೂ ಹೇಳದೇ…”

ಅವಳ ಮಾತನ್ನು ಅರ್ಧದಲ್ಲೇ ತಡೆದು ಸದಾನಂದರು “ಏ..,ರೇವತಿ ನಿನ್ನ ಮನೆ ಇರುವುದು ಅಲ್ಲೇ ಸಮೀಪದಲ್ಲೇ ಅಲ್ಲವೆ? ನಿನ್ನ ಮನೆಗೇನಾದರೂ ಬರುತ್ತಿದ್ದಳೇನೋ ಆಕಸ್ಮಿಕವಾಗಿ ಸ್ಕಿಡ್ ಆಗಿ ಹೀಗಾಗಿರಬಹದೇ?”
“ಅಂಕಲ್, ಫೋನ್ ಮಾಡದೇ ಅವಳೆಂದೂ ನಮ್ಮ ಮನೆಗೆ ಬರುತ್ತಿರಲಿಲ್ಲ. ನಿಮಗೇ ಗೊತ್ತಿಲ್ಲವಾ ನಮ್ಮ ಮನೆಯಲ್ಲಿ ಎಲ್ಲರಿಗೂ ಶಾಲಿನಿಯನ್ನು ಕಂಡರೆ ಅಷ್ಟಕಷ್ಟೇ. ಆಕೆ ಗಂಡುಬೀರಿ, ಆನೆ ನಡೆದದ್ದೇ ದಾರಿ ಎಂಬಂತೆ ಬಿಂದಾಸಾಗಿ ಇದ್ದಾಳೆಂದು ಅವರ ಅಭಿಪ್ರಾಯ. ಮೂದಲಿಸುತ್ತಲೇ ಇರುತ್ತಾರೆ. ನನಗೂ ಆಗಾಗ ಅವಳ ಜೊತೆ ಸುತ್ತುವುದನ್ನು ಕಡಿಮೆ ಮಾಡು ಎಂದು ಹೇಳುತ್ತಲೇ ಇರುತ್ತಾರೆ. ಈಗಂತೂ ನಾವಿಬ್ಬರೂ ಒಂದೇಕಡೆ ಕೆಲಸ ಮಾಡುತ್ತಿದ್ದುದರಿಂದ ಏನೇ ಮಾತುಕತೆ ಇದ್ದರೂ ಹೊರಗೇ” ಎಂದಳು.

“ಅದು ಸರಿಯನ್ನು, ಈಗ ಈ ವಿಷಯ ನಿನಗೆ ಯಾರು ತಿಳಿಸಿದರು? ಹೇಗೆ ಗೊತ್ತಾಯ್ತು?” ಎಂದು ಕೇಳಿದರು ಕುಮುದಾ.
“ನಮ್ಮ ಪಕ್ಕದ ಮನೆಯ ಹುಡುಗ ಪಿ.ಯು.ಸಿ., ಅವನು ಬೆಳ್ಳಂಬೆಳಗ್ಗೆಯೇ ಪಾಠಕ್ಕೆ ಹೋಗಿ ಹಿಂದಿರುಗುವಾಗ ರೈಲ್ವೇ ಸ್ಟೇಷನ್ನಿನ ಬಳಿ ಜನಗಳು ಗುಂಪಾಗಿರುವುದು, ಪೋಲೀಸ್ ವ್ಯಾನು ಬಂದಿರುವುದು ನೋಡಿದನಂತೆ. ಕುತೂಹಲದಿಂದ ಅಲ್ಲಿಗೆ ಹೋಗಿದ್ದಾನೆ. ಶಾಲಿನಿಯನ್ನು ನನ್ನ ಜೊತೆಯಲ್ಲಿ ಓಡಾಡುವಾಗ ಅವನು ನೋಡಿದ್ದ. ತಕ್ಷಣ ಮನೆಗೆ ಬಂದು ನನಗೆ ತಿಳಿಸಿದ. ಸುದ್ಧಿ ಕೇಳಿದ ಕೂಡಲೇ ನಾನು ಅತ್ತೆ ಮಾವ ಕೂಗುತ್ತಿದ್ದರೂ ಲೆಕ್ಕಿಸದೇ ಅಲ್ಲಿಗೆ ಹೋಗಿ ನೋಡಿದೆ. ಕೈಕಾಲುಗಳಲ್ಲಿನ ಶಕ್ತಿಯೆಲ್ಲ ಉಡುಗಿಹೋದಂತಾಯ್ತು. ಅಲ್ಲಿ ಪೋಲಿಸರಾದಿಯಾಗಿ ಸೇರಿದವರೆಲ್ಲರ ಬಾಯಲ್ಲೂ ಆತ್ಮಹತ್ಯೆಯಿರಬಹುದೆಂಬ ಮಾತೇ ಕೇಳಬರುತ್ತಿತ್ತು. ನನಗೆ ತಲೆಕೆಟ್ಟು ಹೋದಂತಾಯ್ತು. ನನ್ನ ಗೆಳತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ, ಅವಳು ಹಾಗೆ ಮಾಡಿಕೊಳ್ಳುವಂತಿದ್ದರೆ ಯಾವತ್ತೋ ಮಾಡಿಕೊಳ್ಳಬೇಕಾಗಿತ್ತು. ಹಾಗೆಂದು ಕೂಗಿ ಕೂಗಿ ಹೇಳಬೇಕೆನಿಸುತ್ತಿತ್ತು. ಆದರೆ ನನ್ನ ಬಾಯಿಂದ ಪದಗಳೇ ಹೊರಡಲಿಲ್ಲ. ಆಂಟಿ ಅಂಕಲ್ ಎನಾಗಿಹೋಯ್ತು..” ಎಂದು ಹಣೆಹಣೆ ಬಡಿದುಕೊಂಡು ಪ್ರಲಾಪಿಸತೊಡಗಿದಳು ರೇವತಿ.

ಹೌದು, ರೇವತಿ ಹೇಳಿದಂತೆ ಶಾಲಿನಿ ಆತ್ಮಹತ್ಯೆ ಮಾಡಿಕೊಳ್ಳುವ ಹಾಗಿದ್ದರೆ ಎಂದೋ ಮಾಡಿಕೊಳ್ಳುತ್ತಿದ್ದಳು. ಈಗ ಹೀಗೇಕೆ? ಕುಮುದಾಳ ಮನಸ್ಸು ಆ ಬಡಾವಣೆಗೆ ಅವರು ಬಂದು ನೆಲೆಸಿದಂದಿನಿಂದ ನಡೆದ ವಿದ್ಯಮಾನಗಳನ್ನು ಮೆಲುಕು ಹಾಕತೊಡಗಿತು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಾ ವರ್ಗಾವಣೆಗೊಂಡ ಹಲವಾರು ಊರುಗಳಲ್ಲಿ ಇದ್ದು ನಿವೃತ್ತರಾದ ಕುಮುದಾ ಸದಾನಂದ ದಂಪತಿಗಳು ತಮ್ಮ ವಿಶ್ರಾಂತ ಬದುಕನ್ನು ಮೈಸೂರಿನಲ್ಲಿ ನಡೆಸಲು ನಿರ್ಧರಿಸಿಕೊಂಡರು. ಮಕ್ಕಳಿಲ್ಲದ ಅವರು ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿ ಕಟ್ಟಿದ್ದ ಮನೆಯೊಂದನ್ನೇ ಕೊಂಡು ವಾಸಕ್ಕೆ ಬಂದರು. ಎದುರು ಮನೆಯೇ ಶಾಲಿನಿಯಿದ್ದದ್ದು. ಅವರ ತಾಯಿ ಗೌರಮ್ಮ ಪರಿಚಯವಾಗಿದ್ದರು. ಅವರೇ ಹೇಳಿದಂತೆ ಶಾಲಿನಿಯ ತಂದೆ ಬಸಪ್ಪ ಯಾವುದೋ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಶಾಲಿನಿ, ಶಂಕರ. ಶಂಕರ ಎಲ್.ಐ.ಸಿ.,ಯಲ್ಲಿ ಕೆಲಸ ಮಾಡುತ್ತಿದ್ದ. ಶಾಲಿನಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಳು. ಮಗನು ಮದುವೆಯಾಗಿ ತನ್ನ ಹೆಂಡತಿ ಇಬ್ಬರು ಮಕ್ಕಳೊಡನೆ ಇದೇ ಊರಿನಲ್ಲಿ ಬೇರೆ ಕಡೆ ವಾಸವಾಗಿದ್ದನು. ಆಗ ಕುಮುದಾ ಸಹಜವಾಗಿಯೇ “ತಪ್ಪು ತಿಳಿಯಬೇಡಿ ನಿಮ್ಮ ಮಗಳಿಗೆ ಮದುವೆ ಮಾಡಿಲ್ಲವೇ?” ಎಂದು ಕೇಳಿದ್ದರು.

“ಎಂಥಾ ಮಾತೂಂತ ಆಡ್ತೀರಾ ಕುಮುದಾರವರೇ, ಮೊದಲು ಅವಳಿಗೇ ಮದುವೆ ಮಾಡಿದ್ದು. ಒಳ್ಳೆಯ ಅನುಕೂಲವಂತ ಕುಟುಂಬ. ಹುಡುಗನೂ ಚೆನ್ನಾಗಿದ್ದ. ಅವರೇ ನನ್ನ ಮಗಳನ್ನು ಕೇಳಿಕೊಂಡು ಬಂದಿದ್ದರು. ಮದುವೆಯೇನೋ ಮಾಡಿದೆವು. ಈಗಿನ ಕಾಲದ ಹುಡುಗಿಯರಿಗೆ ಸಂಬಂಧದ ಬೆಲೇನೇ ಗೊತ್ತಿಲ್ಲಾರಿ. ಸಣ್ಣ ಸಣ್ಣ ವಿಷಯಕ್ಕೂ ಆಕಾಶ ಭೂಮಿ ಒಂದಾದಂತೆ ಆರ್ಭಟಿಸುತ್ತಾರೆ. ನನ್ನ ಮಗಳೂ ಹಾಗೇ ಮಾಡಿದಳು. ಹಾರಾಡಿಕೊಂಡು ಗಂಡನನ್ನು ಬಿಟ್ಟು ಇಲ್ಲೇನೋ ಕಡಿದು ಕಟ್ಟೆ ಹಾಕ್ತೀನಿ ಅಂತ ಬಂದು ಬಿಟ್ಟವಳೆ. ಇದರಿಂದಾಗಿ ನನ್ನ ಮಗ ಇದೇ ಊರಿನಲ್ಲಿದ್ದರೂ ಬೇರೆ ವಾಸವಿದ್ದಾನೆ. ಇವಳೊಬ್ಬಳು ಬೆನ್ನಿಗೆ ಬಿದ್ದ ಬೇತಾಳದಂತಾಗಿದ್ದಾಳೆ” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸಮಯ ಸಿಕ್ಕಾಗಲೆಲ್ಲ ಮಗಳ ಮೇಲೆ ಒಂದಲ್ಲ ಒಂದು ದೂರು ಹೇಳುವುದನ್ನು ಕೇಳಿ ಸಾಕಾಗಿ ಅವರ ಹತ್ತಿರ ಎಷ್ಟು ಬೇಕೋ ಅಷ್ಟರಲ್ಲಿದ್ದರು ಕುಮುದಾ. ಹೀಗಿರುವಾಗ ಒಂದು ದಿನ ಸದಾನಂದರ ಚಿಕ್ಕಪ್ಪನ ಮಗಳು ರೇವತಿಯ ಜೊತೆ ಶಾಲಿನಿ ಕುಮುದಾರ ಮನೆಗೆ ಬಂದಳು.

ರೇವತಿ ಗೆಳತಿಯನ್ನು ಪರಿಚಯಿಸುತ್ತಾ “ಆಂಟೀ ಇವಳು ನನ್ನ ಸಹಪಾಠಿ, ಸಹೋದ್ಯೋಗಿ ಮತ್ತು ಆತ್ಮೀಯ ಗೆಳತಿ ಶಾಲಿನಿ” ಅಂತ ಹೇಳಿದಳು.
ಅತಿಯಾದ ರೂಪವತಿಯಲ್ಲದಿದ್ದರೂ ಲಕ್ಷಣವಾಗಿ ಒಳ್ಳೆಯ ಮೈಮಾಟವನ್ನು ಹೊಂದಿ ನಾಲ್ಕು ಜನರಲ್ಲಿ ಎದ್ದು ಕಾಣುವಂತಿದ್ದಳು ಶಾಲಿನಿ. “ನೀನು ಗೌರಮ್ಮನವರ ಮಗಳಲ್ಲವೇ? ಒಂದೆರಡು ಸಾರಿ ದೂರದಿಂದ ನೋಡಿದ್ದೆ. ಪರಿಚಯವಾಗಿರಲಿಲ್ಲ.” ಎಂದರು ಕುಮುದಾ.
“ಹೇ ಪರಿಚಯವಾಗಲಿಕ್ಕೆ ಇವಳು ಕೈಗೆ ಸಿಕ್ಕರೆ ತಾನೇ. ಇವಳು ತುಂಬಾ ಬಿಜಿ ಆಂಟಿ. ಕಾಗೆ ರ‍್ರೆನ್ನುವಷ್ಟರಲ್ಲಿ ತಾನೂ ಮನೆ ಬಿಟ್ಟರೆ ಮತ್ತೆ ಕಾಗೆ ಗೂಡು ಸೇರುವಷ್ಟರಲ್ಲಿ ತಾನೂ ಮನೆ ಸೇರುತ್ತಾಳೆ. ಅಪ್ಪಿತಪ್ಪಿ ಯಾವಾಗಲಾದರೂ ಕಣ್ಣಿಗೆ ಬಿದ್ದಿರಬಹುದಷ್ಟೇ” ಎಂದಳು ರೇವತಿ.
“ಛೇ ಸುಮ್ಮನಿರೇ ಸಾಕು. ಆಂಟಿ ಅದೆಲ್ಲಾ ಏನಿಲ್ಲ. ಸುಮ್ಮನೆ ಇಲ್ಲದ್ದೆಲ್ಲ ಬಿಲ್ಡಪ್ ಮಾಡುತ್ತಿದ್ದಾಳಷ್ಟೇ” ಎಂದು ವಿಷಯಾಂತರ ಮಾಡಿ ಸ್ವಲ್ಪ ಹೊತ್ತಿದ್ದು ಹೊರಟು ಹೋದಳು ಶಾಲಿನಿ.

ಅವಳು ಮನೆಗೆ ಹೋದನಂತರ ಕುಮುದಾ ರೇವತಿಯನ್ನು ಶಾಲಿನಿಯ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ರೇವತಿ “ ಆಂಟಿ ಪಾಪ ಅವಳದೊಂದು ದುರಂತಕಥೆ. ಬಿ.ಎಸ್ಸಿ.,ಮೊದಲ ವರ್ಷ ಪರೀಕ್ಷೆ ಮುಗಿಯುತ್ತಿದ್ದಂತೆ ಅವರ ತಂದೆಯ ದೂರದ ಸಂಬಂಧಿಯೊಬ್ಬರು ತಮ್ಮ ಮಗನಿಗೆ ಶಾಲಿನಿಯನ್ನು ತಂದುಕೊಳ್ಳಲು ಉತ್ಸಾಹ ತೋರಿ ಇವರ ಮನೆಗೆ ಬಂದರು. ಆಗ ಶಾಲಿನಿಯು ಎಷ್ಟೋ ರೀತಿಯಲ್ಲಿ ಮದುವೆ ಬೇಡವೆಂದು ಪ್ರತಿಭಟಿಸಿದಳು, ಉಪವಾಸ ಮಾಡಿ ಹೆದರಿಸಿದಳು. ಊಹುಂ ಅವಳ ಹೆತ್ತವರು ಯಾವುದಕ್ಕೂ ಜಗ್ಗದೆ “ಏಯ್ ಶಾಲಿನಿ, ನೀನು ಓದಬೇಕೆಂದು ತಾನೇ ಮದುವೆ ಬೇಡ ಎನ್ನುತ್ತಿರುವುದು. ಅವರೇ ನಿನ್ನನ್ನು ಮುಂದಕ್ಕೆ ಓದಿಸುತ್ತಾರಂತೆ. ಇನ್ನೇನು ಬೇಕು. ಹೆಣ್ಣು ಹೆತ್ತವರು ನಾವು ಮನೆಮನೆಗೆ ಅಲೆಯಬೇಕಾಗಿರುವಾಗ ಅವರಾಗಿಯೇ ನಮ್ಮ ಮನೆಯ ಬಾಗಿಲಿಗೆ ಬಂದಿದ್ದಾರೆ. ಇಂಥಹ ಅವಕಾಶ ಯಾರಾದರೂ ಬಿಡುತ್ತಾರಾ. ಹೋಗಲಿ ನಾವೇನು ಕುಬೇರರೇ?” ಎಂದು ಬಾಯಿಮುಚ್ಚಿಸಿ ವಿವಾಹ ಮಾಡಿಯೇ ಬಿಟ್ಟರು.

ಮದುವೆ ಮಾಡಿಕೊಂಡ ಮಾರನೆಯ ದಿನ ಗಂಡನ ಮನೆಗೆ ಹೋಗಿದ್ದ ಶಾಲಿನಿ ಕೇವಲ ಮೂರನೆಯ ದಿನವೇ ತವರಿಗೆ ಹಿಂದಿರುಗಿದಳು. ಹೆತ್ತವರ, ಸೋದರನ, ನೆಂಟರಿಷ್ಟರ ಉಪದೇಶಕ್ಕೂ ಬಗ್ಗದೆ ತನ್ನ ವಿದ್ಯಾಭ್ಯಾಸ ಮುಂದುವರೆಸಿದಳು. ಪ್ರತಿದಿನವೂ ಮನೆಯಲ್ಲಿ ಗೋಳು. ಅವಳಿಗೆ ಯಾವುದಕ್ಕೂ ಒಂದು ದಮ್ಮಡಿಯನ್ನೂ ಕೊಡುತ್ತಿರಲಿಲ್ಲ. ಅದಕ್ಕೂ ಹೆದರದೆ ಅವಳು ಟುಟೊರಿಯಲ್ ಒಂದರಲ್ಲಿ ಬೆಳಗಿನ ಹೊತ್ತು ಪಾಠಹೇಳಿ ತನ್ನ ಖರ್ಚಿಗೆ ದಾರಿಮಾಡಿಕೊಂಡು ಓದಿದಳು. ಊಟತಿಂಡಿಗಳನ್ನೂ ಸರಿಯಾಗಿ ನೀಡದೇ ತತ್ವಾರ ಮಾಡಿದರು. ಬೇಕರಿಯಲ್ಲಿ ಸಿಕ್ಕುವ ಬ್ರೆಡ್, ಬಾಳೇಹಣ್ಣು ತಿಂದು ಕಾಲಹಾಕಿದಳು. ತುಂಬ ಹತ್ತಿರದಿಂದ ಕಂಡಿದ್ದ ನಾನು ಮನೆಯಿಂದ ಹೆಚ್ಚಾಗಿ ತಿಂಡಿ, ಊಟ ಹಾಕಿಸಿಕೊಂಡು ಬಂದು ಅವಳ ಜೊತೆ ಹಂಚಿಕೊಳ್ಳುತ್ತಿದ್ದೆ. ಪುಸ್ತಕಗಳನ್ನು ಪರಿಚಯಸ್ಥ ಲೆಕ್ಚರರ್‌ಗಳ ನೆರವಿನಿಂದ ಲೈಬ್ರರಿಯಲ್ಲಿ ಎರವಲು ಪಡೆಯುತ್ತಿದ್ದಳು. ನಾನೂ ಸಹ ನನಗೆ ತಿಳಿದಂತೆ ಅವಳು ನಿರಾಕರಿಸಿದರೂ ಕೇಳದೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದೆ. ಹಬ್ಬಹರಿದಿನಗಳಲ್ಲಿ ಬಟ್ಟೆಗಳನ್ನು ತೆಗೆದು ಒತ್ತಾಯಮಾಡಿ ಕೊಡುತ್ತಿದ್ದೆ.” ಎಂದಳು ರೇವತಿ.

“ಸರಿ..ರೇವತಿ ಗಂಡನ ಮನೆಯಲ್ಲಿ ಓದಿಸುತ್ತೇನೆಂದರೂ ಕೇಳದೆ ಅಹಂಕಾರ ದರ್ಪ ತೋರಿ ಹೊರಬಂದಳಂತೆ ಎಂದು ಅವರಮ್ಮ ನನಗೆ ಹೇಳಿದ್ದರು” ಎಂದರು.
“ಹಾ..ನಿಜ ಆಂಟಿ. ಅದಕ್ಕೆ ಬಲವಾದ ಕಾರಣವಿದೆ. ಅದು ಶಾಲಿನಿಯ ಅಮ್ಮನ ಕಣ್ಣಿಗೆ ಕಾಣಿಸುವುದೇ ಇಲ್ಲ. ಶಾಲಿನಿಯ ಗಂಡನಾದವನಿಗೆ ಅದಕ್ಕೆ ಮೊದಲೇ ಮದುವೆಯಾಗಿ ಮಕ್ಕಳಿದ್ದವಂತೆ. ಮೊದಲ ರಾತ್ರಿಯ ದಿನವೇ ವಿಷಯ ತಿಳಿದ ಶಾಲಿನಿ ಪೃಶ್ನೆ ಮಾಡಿದಾಗ ಆತ ಅದೇನು ಪ್ರಪಂಚ ಮುಳುಗಿಹೋದಂತೆ ಎಗರುತ್ತೀಯೆ. ಅವಳೂ ಇರುತ್ತಾಳೆ. ನೀನೂ ಇರು. ಅವಳು ನಾನು ಮೆಚ್ಚಿದವಳು. ನೀನು ನಮ್ಮಮ್ಮ ಮೆಚ್ಚಿದವಳು. ನಾನು ಯಾರನ್ನೂ ಬಿಡುವುದಿಲ್ಲ ಎಂದನಂತೆ ಆ ಮಹಾರಾಯ. ಮೊದಲ ಹೆಂಡತಿಯು ಬದುಕಿರುವಾಗಲೇ ಇನ್ನೊಬ್ಬಳನ್ನು ಮದುವೆಯಾಗುವುದು ಕಾನೂನಿಗೆ ವಿರುದ್ಧ, ಅದು ಶಿಕ್ಷಾರ್ಹವೆಂದರೆ ಆತ ಬೇಕಾದರೆ ಕೇಸಾಕಿಕೋ ಹೆಣ್ಣೇ, ಮೊದಲನೆಯವಳ ಒಪ್ಪಿಗೆ ಪಡೆದುಕೊಂಡೇ ನಿನ್ನನ್ನು ಮದುವೆಯಾಗಿರುವುದು. ಅಲ್ಲದೆ ಈ ಸಂಗತಿಯನ್ನು ಮೊದಲೇ ನಿಮ್ಮಪ್ಪನಿಗೆ ತಿಳಿಸಿದ್ದೇವೆ. ನಾವೇನೂ ಗುಟ್ಟು ಮಾಡಿಲ್ಲ. ಬೇಕಿದ್ದರೆ ನಿಮ್ಮಪ್ಪನನ್ನು ಕೇಳಿಕೋ ಎಂದನಂತೆ. ಅರ್ಧ ರಾತ್ರಿಯಲ್ಲೇ ಅತ್ತು ಕರೆದು ರಣರಂಪಾಟವಾಯಿತಂತೆ. ಅವಳ ಜೊತೆಗೆ ಹೋಗಿದ್ದ ಬಂಧುಗಳು ಆಗಿದ್ದು ಆಗಿಹೋಯಿತು, ಹೇಗೋ ಹೊಂದಿಕೊಂಡು ಇದ್ದುಬಿಡು ಎಂದು ಬುದ್ಧಿ ಹೇಳಿದರಂತೆ. ಅರ‍್ಯಾರ ಮಾತಿಗೂ ಮಣೆ ಹಾಕದೇ ಇವಳು ಬೆಳಗಾಗುವವರೆಗೂ ಮನೆಯ ಹೊರಗಡೆಯೇ ಕುಳಿತಿದ್ದು ಹಿಂತಿರುಗಿ ಬಂದುಬಿಟ್ಟಳಂತೆ. ಅದಾದ ಮೇಲೆ ಈ ಮೊದಲು ನಾನು ಹೇಳಿದ್ದೆಲ್ಲಾ ನಡೆಯಿತು. ಅವಳ ಅದೃಷ್ಟಕ್ಕೆ ಪದವಿ ಪಡೆದಾದ ಮೇಲೆ ಬ್ಯಾಂಕಿನ ಪರೀಕ್ಷೆ ಬರೆದಳು. ಕೆಲಸವೂ ಸಿಕ್ಕಿಬಿಟ್ಟಿತು. ಅಷ್ಟರಲ್ಲಿ ಅವಳಣ್ಣನೂ ಒಂದೆಡೆಯಲ್ಲಿ ಕೆಲಸಕ್ಕೆ ಸೇರಿದ್ದ. ಅವನು ಇಷ್ಟಪಟ್ಟವಳೊಂದಿಗೆ ಮದುವೆಯಾಗಿ ತನ್ನಷ್ಟಕ್ಕೆ ತಾನು ಇದ್ದಾನೆ.”

“ಅವಳ ಗಂಡನ ಮನೆಯವರು ಮತ್ತೆ ಬರಲೇ ಇಲ್ಲವೇ?” ಕೇಳಿದರು ಕುಮುದಾ.
“ಇಲ್ಲಾ ಆಂಟಿ, ಶಾಲಿನಿಯೇ ವಿಚ್ಛೇದನಕ್ಕೆ ಅರ್ಜಿ ಹಾಕಿದಳು. ಅದೊಂದು ದೊಡ್ಡ ಹಗರಣ. ಸುಮಾರು ವರ್ಷಗಳವರೆಗೆ ಎಳೆದಾಡಿದ ನಂತರ ವಿಚ್ಛೇದನ ದೊರಕಿತು. ಈಗ ಶಾಲಿನಿ ಅವರಪ್ಪ ಅಮ್ಮ ವಾಸವಾಗಿದ್ದಾರಲ್ಲಾ ಮನೆಯನ್ನೂ ಶಾಲಿನಿಯೇ ಕಟ್ಟಿಸಿದ್ದು. ನೋಡಿ ಹೋರಾಡುತ್ತಾ ಬದುಕು ನಡೆಸುತ್ತಾ ಈ ಹಂತಕ್ಕೆ ಬಂದಿದ್ದಳು. ಈಗಲೂ ಟುಟೊರಿಲ್‌ನಲ್ಲಿ ಪಾಠ ಮಾಡಲು ಹೋಗುತ್ತಿದ್ದಾಳೆ” ಎಂದಳು ರೇವತಿ.
ಅವಳು ಹೇಳಿದ್ದನ್ನೆಲ್ಲ ಕೇಳಿದ ಕುಮುದಾ “ಆಕೆ ಮತ್ತಾರನ್ನಾದರೂ ಮದುವೆಯಾಗಬಹುದಿತ್ತಲ್ಲ?” ಎಂದು ಪೃಶ್ನಿಸಿದರು.
“ಹೂಂ ಆಂಟಿ ಶಾಲಿನಿ ಯಾರನ್ನೋ ಇಷ್ಟಪಡುತ್ತಿರುವಂತಿದೆ. ನನ್ನ ಊಹೆ ಇನ್ನೂ ನಿರ್ಧಾರವಾದಂತಿಲ್ಲ. ಅದರ ಬಗ್ಗೆ ಶಾಲಿನಿಯ ಬಾಯಿಂದಲೇ ಕೇಳಬೇಕೆಂದು ಕಾಯುತ್ತಿದ್ದೇನೆ.” ಅಂದಳು.

ಶಾಲಿನಿ ಕೆಲಸ ಮಾಡಿದ್ದು ಮೈಸೂರಿನ ಸುತ್ತಮುತ್ತಲ ಊರುಗಳಲ್ಲಿರುವ ಬ್ಯಾಂಕಿನ ಬ್ರಾಂಚುಗಳಲ್ಲಿ. ಹಾಗಾಗಿ ನಮ್ಮಿಬ್ಬರ ಸಂಪರ್ಕ ಬಿಟ್ಟಿರಲಿಲ್ಲ. ಈಗಂತೂ ಇಬ್ಬರೂ ಒಂದೇಕಡೆ ಕೆಲಸ ಮಾಡುತ್ತಿದ್ದೇವೆ. ಹೇಗೋ ಅವಳಿಗೆ ಒಳ್ಳೆಯದಾದರೆ ನನಗೆ ಸಂತೋಷ” ಎಂದಳು ರೇವತಿ.
ಅನಂತರದ ದಿನಗಳಲ್ಲಿ ಶಾಲಿನಿ ಆಗಾಗ ಕುಮುದಾರ ಮನೆಗೆ ಬಂದುಹೋಗುತ್ತಿದ್ದಳು. ಸಾದಂರ್ಭಿಕವಾಗಿ ಒಂದೊಂದು ಮಾತು ಬಿಟ್ಟು ಗಂಡಹೆಂಡತಿ ಅವಳ ವೈಯಕ್ತಿಕ ವಿಷಯಗಳ ಬಗ್ಗೆ ಯಾವುದನ್ನೂ ಕೇಳುತ್ತಿರಲಿಲ್ಲ. ಹೀಗಾಗಿ ಅವರ ನಡುವಿನ ಸಂಬಂಧ ಹಿತಕರವಾಗಿಯೇ ಇತ್ತು. ಶಾಲಿನಿ ಸಾಮಾನ್ಯವಾಗಿ ಪುಸ್ತಕಗಳ, ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಳು. ಕುಮುದಾರ ಬಳಿ ಅಡುಗೆ, ತಿಂಡಿ ತಯಾರಿಸುವ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದಳು. ಅವಳು ಸಾಯುವ ಹಿಂದಿನ ದಿನ ಕೂಡ ಬಂದು ಸಂತಸದಿಂದ ವಾಂಗಿಬಾತ್ ಮಾಡುವ ವಿಧಾನವನ್ನು ಕೇಳಿ ತಿಳಿದುಕೊಂಡಳು. ಆಗ ಕುಸುಮಾ ಕುತೂಹಲದಿಂದ “ಯಾರಿಗೆ ಶಾಲಿನಿ? ಯಾರಾದರೂ ಗೆಸ್ಟ್ ಬರುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದ್ದರು.
“ನನಗೆ ಬೇಕಾದವರೊಬ್ಬರಿಗೆ ಇದು ತುಂಬ ಇಷ್ಟವಾದದ್ದು. ನಾನೇ ತಯಾರಿಸಿ ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತೇನೆ” ಎಂದಳು ಮುಗುಳ್ನಗುತ್ತಾ ಶಾಲಿನಿ.
“ಅದು ಯಾರೆಂಬುದನ್ನು ನನಗೂ ಹೇಳೋಲ್ಲವೇ”
“ನೀವೊಬ್ಬರು..ನಿಮಗೆ, ರೇವತಿಗಲ್ಲದೆ ಮತ್ತಾರಿಗೆ ಹೇಳಲಿ ಆಂಟಿ. ಖಂಡಿತಾ ಹೇಳುತ್ತೇನೆ” ಎಂದು ಹೋದವಳು ಈಗ ನೋಡಿದರೆ ಯಾರಿಗೂ ಹೇಳದೇ ಹೋಗಿಬಿಟ್ಟಳು ಎಂದುಕೊಂಡರು ಕುಮುದಾ.

ಅಷ್ಟು ಹೊತ್ತಿಗೆ ಸರಿಯಾಗಿ ಸದಾನಂದರು “ಲೇ ಕುಮುದಾ ಎಲ್ಲಿ ಕಳೆದುಹೋಗಿದ್ದೀಯೆ?” ಎಂದು ಅವರ ಭುಜ ಹಿಡಿದು ಎಚ್ಚರಿಸಿದರು. ಆಗ ವಾಸ್ತವಕ್ಕೆ ಮರಳಿದ ಕುಮುದಾ “ಹೀಗೇ ಶಾಲಿನಿಯ ಬಗ್ಗೆ ರೇವತಿ ಹಿಂದೆ ಹೇಳಿದ್ದನ್ನು ಜ್ಞಾಪಿಸಿಕೊಳ್ಳುತ್ತಿದ್ದೆ.. ಅಂದ ಹಾಗೆ ರೇವತಿಯೆಲ್ಲಿ?”
“ನಾನೇ ಅವಳನ್ನು ಸಮಾಧಾನಪಡಿಸಿ ಮುಖ ತೊಳೆದುಕೊಂಡು ಬಾ ಎಂದು ಬಾತ್‌ರೂಮಿಗೆ ಕಳುಹಿಸಿದೆ. ಪಾಪದ ಹುಡುಗಿ ಅಷ್ಟೆಲ್ಲ ಕಷ್ಟಪಟ್ಟು ಎಲ್ಲವನ್ನು ಎದುರಿಸಿದವಳು ಈಗೇಕೆ ಹೀಗೆ ಮಾಡಿಕೊಂಡಳು?”
“ಅಂದರೆ ನೀವೂ ಅವಳು ಆತ್ಮಹತ್ಯೆ ಮಾಡಿಕೊಂಳು ಎನ್ನುವ ತೀರ್ಮಾನಕ್ಕೆ ಬಂದುಬಿಟ್ದಿರಾ?”
“ಮತ್ತಿನ್ನೇನು ಬೇರೆ ಏನೂ ಹೊಳೆಯುತ್ತಿಲ್ಲ.”

ಅಷ್ಟರಲ್ಲಿ ಮುಖ ತೊಳೆದುಕೊಂಡು ಬಂದ ರೇವತಿ “ಇಲ್ಲಾ ಅಂಕಲ್, ಇದು ಆತ್ಮಹತ್ಯೆಯಲ್ಲ. ಕೊಲೆ. ಇದರ ಹಿಂದೆ ಯಾರದ್ದೋ ಕೈವಾಡವಿದೆ ಎನ್ನಿಸುತ್ತೆ” ಎಂದಳು.
“ಮಹಾರಾಯ್ತೀ, ಇಲ್ಲಿ ನಮ್ಮ ಮುಂದೆ ಹೇಳಿದೆ ಒಳ್ಳೆಯದಾಯ್ತು. ಹೊರಗೆಲ್ಲಾರೂ ಬಾಯಿಬಿಟ್ಟೀಯೆ ತೆಪ್ಪಗಿರು. ಹೋದವಳು ಹೋದಳು ಆದರೆ ನೀನು ನಿನ್ನ ಕುಟುಂಬ ಇದರಿಂದಾಗಿ ಬೀದಿಗೆ ಬರುತ್ತೀರಿ. ನೆನಪಿಟ್ಟುಕೋ. ಮೊದಲೇ ನಿಮ್ಮ ಮನೆಯಲ್ಲಿ ಶಾಲಿನಿಯನ್ನು ಕಂಡರೆ ಎಲ್ಲರಿಗೂ ಅಷ್ಟಕಷ್ಟೇ ಎಂದಿದ್ದೆ. ಹುಷಾರು” ಎಂದೆಚ್ಚರಿಸಿದರು ಸದಾನಂದ.
ಆದರೆ ಕುಮುದಾ “ಅದು ಹೇಗಾಗುತ್ತೇರಿ? ನಾನೂ ರೇವತಿಯ ಜೊತೆಯಲ್ಲಿ ಹೋಗಿ ಪೋಲಿಸ್ ಕಂಪ್ಲೇಂಟ್ ಕೊಡೋಣಾ ಅಂತಿದ್ದೀನಿ. ಎಲ್ಲರೂ ನಮಗ್ಯಾಕೆ ಅಂತ ಸುಮ್ಮಿನಿದ್ದರೆ ಸರೀನೇ?”
“ಏನೆಂದೇ, ನೀನೂ ರೇವತಿಗೆ ಬುದ್ಧಿ ಹೇಳೋದು ಬಿಟ್ಟು. ನೋಡು ಕುಮುದಾ ಶಾಲಿನಿಯ ಮೇಲಿನ ಕನಿಕರದಿಂದಲೋ ಅವಳ ದಾಷ್ಟಿಕತೆಯ ಬಗ್ಗೆ ಅಭಿಮಾನಕ್ಕೋ ಅವಳೊಡನೆ ಒಡನಾಟ ಬೆಳೆಸಿಕೊಂಡಿರಬಹುದು. ಅವರವರ ಮನೆ ವಿಚಾರ ಅವರಿಗೇ ಸೇರಿದ್ದು. ಒಳಗೆ ಏನೇನಿರುತ್ತೋ ಏನೋ ನಮಗೇಕೆ ಇಲ್ಲದ ಉಸಾಬರಿ. ಅತಿಯಾದ ಉತ್ಸಾಹ ತೋರಿಸಬೇಡ ಸ್ವಲ್ಪ ಅನುಮಾನ ಬಂದರೂ ಪೋಲೀಸಿನವರು ಇಲ್ಲಸಲ್ಲದ ಪ್ರಶ್ನೆ ಹಾಕುತ್ತಾರೆ. ಇಷ್ಟರ ಮೇಲೇನಾದರೂ ನೀನು ರೇವತಿಯನ್ನು ಕರೆದುಕೊಂಡು ಹೋದರೆ ನಾನು ಸುಮ್ಮನಿರುವದಿಲ್ಲ.” ಎಂದಂದು ದುರ್ದಾನ ತೆಗೆದುಕೊಂಡವರಂತೆ ಎದ್ದು ತಮ್ಮ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು ಸದಾನಂದ.

‘ಆಂಟಿ, ಬೇಸರ ಮಾಡಿಕೊಳ್ಳಬೇಡಿ. ಅಂಕಲ್ ಹೇಳಿದ್ದರಲ್ಲಿ ಸತ್ಯವಿದೆ. ಆಗಲೇ ನಮ್ಮ ಮನೆಯಿಂದಲೂ ಫೋನ್ ಬಂದಿತ್ತು. ಊರಿಗೆ ಹೋಗಿರುವ ನನ್ನವರಿಗೆ ಯಾರಿಂದಲೋ ವಿಷಯ ತಿಳಿದ ಹಾಗಿದೆ. ನನಗೆ ವಾರ‍್ನಿಂಗ್ ನೀಡಿದ್ದಾರೆ. ಈಗ ನಾನಿನ್ನು ಬರುತ್ತೇನೆ ಅಂಟಿ” ಎಂದು ರೇವತಿ ಮೇಲಕ್ಕೆದ್ದಳು.
“ಸೀದಾ ಮನೆಗೆ ಹೋಗುತ್ತೀಯಾ? ಅಥವಾ..”
“ಇಷ್ಟೆಲ್ಲ ಆದಮೇಲೂ ಮನೆಗೆ ಹೋಗದಿದ್ದರೆ ಬಯಲಿಗೆ ಬರಬೇಕಾಗುತ್ತೆ ಆಂಟಿ. ಬಾಡಿ ಪೋಸ್ಟ್ಮಾರ್ಟಂಗೆ ಹೋಗಿದೆಯಂತೆ. ಅದು ಬರುವುದು ಎಷ್ಟೊತ್ತಾಗುತ್ತೋ ಗೊತ್ತಿಲ್ಲ. ಈಗ ಅವಳಿಗೆ ಇಲ್ಲಿ ಸಲ್ಲಿಸಿದೆನಲ್ಲಾ ಅಶ್ರುತರ್ಪಣ ಅಷ್ಟೇ” ಎಂದು ಹೊರ ನಡೆದಳು ರೇವತಿ.
ಜೀವನದಲ್ಲಿ ಆಗಿದ್ದ ಏರುಪೇರುಗಳಿಂದ ಹಲವು ಕಾಲದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಅದಕ್ಕಾಗಿ ಚಿಕಿತ್ಸೆ ಕೂಡ ನಡೆದಿತ್ತು. ಇಂತಹ ವೇಳೆಯಲ್ಲೇ ಹೀಗೆ ಮಾಡಿಕೊಂಡಿದ್ದಾಳೆ. ಎಂದು ಮನೆಯವರಿಂದ ಅಶ್ರುಮಿಶ್ರಿತ ಹೇಳಿಕೆ ಕೊಟ್ಟಿದ್ದರಿಂದ ಶಾಲಿನಿಯ ಅಂತ್ಯಕ್ಕೆ ಆತ್ಮಹತ್ಯೆಯ ಕಾರಣವನ್ನೇ ನೀಡಿ ಪೋಲೀಸಿನವರೂ ಕೇಸ್ ಕ್ಲೋಸ್ ಮಾಡಿದರು. ಅವಳ ಅಂತ್ಯ ಸಂಸ್ಕಾರವನ್ನೂ ಮುಗಿಸಿದರು.

ಬೇರೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಶಾಲಿನಿಯ ಅಣ್ಣ ಈಗ ತಂದೆತಾಯಿಯಿದ್ದ ಶಾಲಿನಿ ಕಟ್ಟಿಸಿದ ಮನೆಗೇ ಸಂಸಾರ ಸಮೇತ ಹಿಂದಿರುಗಿದ. ಈ ಘಟನೆ ನಡೆದು ತಿಂಗಳು ಕಳೆದರೂ ಕುಮುದಾ, ರೇವತಿಯರು ಶಾಲಿನಿಯನ್ನು ಮರೆಯಲು ಸಾಧ್ಯವಾಗದೆ ಒಳಗೊಳಗೇ ದುಃಖ ನುಂಗಿಕೊಂಡು ಪರಸ್ಪರ ಭೇಟಿಯಾದಾಗ ಸಮಾಧಾನ ಮಾಡಿಕೊಳ್ಳುತ್ತಿದ್ದರು.

ಕೆಲವುಕಾಲ ಕಳೆಯಿತು. ಸದಾನಂದ ಕುಮುದಾ ಅಖಿಲ ಭಾರತದ ಪ್ರವಾಸಕ್ಕಾಗಿ ಹೋಗಿ ಬಂದರು. ಅದರಿಂದ ವಿಶೇಷವಾಗಿ ಕುಮುದಾರಿಗೆ ಸ್ವಲ್ಪ ಮಾನಸಿಕ ನೆಮ್ಮದಿಯಾಯಿತು. ಒಂದು ದಿನ ಸದಾನಂದರ ಸ್ನೇಹಿತರಾದ ವಕೀಲ ವಾಸುದೇವರಾವ್ ಮನೆಗೆ ಬಂದರು. ಯೋಗಕ್ಷೇಮ ವಿಚಾರಿಸಿದ ನಂತರ ಮಾತನಾಡುತ್ತಾ “ನಿಮಗೊಂದು ವಿಷಯ ತಿಳಿದ ಹಾಗೆ ಕಾಣಿಸುತ್ತಿಲ್ಲ.” ಎಂದರು.
“ಏನದು?”
“ನೀವು ಉತ್ತರಭಾರತದ ಪ್ರವಾಸಕ್ಕೆ ಹೋಗಿದ್ದಿರಿ. ಆಗ ನಡೆದದ್ದು. ಅದೇ ನಿಮ್ಮ ಎದುರುಗಡೆ ಶಾಲಿನಿಯ ಮನೆಯಲ್ಲಿ ನಡೆದದ್ದು”
“ಏನೆಂದಿರಿ? ಶಾಲಿನಿಯ ಮನೆಯಲ್ಲಿ ನಡೆದದ್ದೇ? ರೇವತಿ ನಮಗೆ ಏನನ್ನೂ ಹೇಳಲಿಲ್ಲವಲ್ಲಾ” ಎಂದರು ಕುಮುದಾ.
“ಅಯ್ಯೋ ಬಿಡಪ್ಪಾ ಅವರ ಸುದ್ಧಿ ಮತ್ಯಾಕೆ ಈಗ” ಎಂದರು ಸದಾನಂದ ಅನಾಸಕ್ತಿಯಿಂದ.
“ತಡೀರಿ ಅದೇನಂತ ಕೇಳೋಣ. ನೀವು ಹೇಳಿ ವಾಸಣ್ಣಾ” ಎಂದು ಆಸಕ್ತಿ ತೋರಿದರು ಕುಮುದಾ.
“ಶಾಲಿನಿಯ ಅಣ್ಣನಿದ್ದನಲ್ಲ ಶಂಕರ, ಅವನೂ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದ”
“ಏಕೆ ? ಅವನಿಗೇನಾಗಿತ್ತು?” ಎಂದರು ಒಮ್ಮೆಲೇ ದಂಪತಿಗಳಿಬ್ಬರು ಅಚ್ಚರಿಯಿಂದ.

”ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅವನು ಮಾಡಿದ್ದ ಪಾಪಕ್ಕೆ ಅವನೇ ಬಲಿಯಾದ” ಎಂದರು ವಾಸು.
“ವಾಸು ಅದೇನೆಂದು ಬಿಡಿಸಿ ಹೇಳಪ್ಪ” ಎಂದು ಕೋರಿದರು ಸದಾನಂದ.
“ಕೇಳಿ, ಶಾಲಿನಿಯು ತನಗೆ ವಿಚ್ಛೆದನ ದೊರಕಿದ ಮೇಲೆ ಮತ್ತೊಬ್ಬ ಹುಡುಗನೊಡನೆ ಗೆಳೆತನ ಬೆಳೆಸಿದ್ದಳು. ಅವನ ಜೊತೆಯಲ್ಲಿ ಓಡಾಡುತ್ತಿದ್ದು ಅವನಿಗೆ ತಿಂಡಿ ತಿನಿಸುಗಳನ್ನು ತಾನೇ ಮಾಡಿ ಕೊಂಡೊಯ್ದು ಕೊಡುತ್ತಿದ್ದಳಂತೆ. ಈ ಸಂಗತಿ ಅವಳಣ್ಣ ಶಂಕರನಿಗೆ ಗೊತ್ತಾಗಿ ಅನುಮಾನದಿಂದ ಅವಳ ಹಿಂದೆ ಬೇಹುಗಾರಿಕೆ ನಡೆಸುತ್ತಿದ್ದನಂತೆ. ಶಾಲಿನಿಯ ಗೆಳೆಯ ಒಬ್ಬ ಅನಾಥನಾಗಿದ್ದು ಒಂದು ಸಣ್ಣ ಉದ್ಯಮ ನಡೆಸುತ್ತಿದ್ದ. ನೋಡಲು ಚೆನ್ನಾಗಿದ್ದ. ಅವನು ಬ್ಯಾಂಕಿನ ವ್ಯವಹಾರಕ್ಕಾಗಿ ಬಂದಾಗಲೆಲ್ಲ ಶಾಲಿನಿಯನ್ನು ಭೇಟಿಯಾಗುತ್ತಿದ್ದ. ಇದನ್ನು ಶಂಕರ ತನ್ನ ತಂದೆತಾಯಿಗಳಿಗೆ ತಿಳಿಸಿದನಂತೆ. ಇದರಿಂದಾಗಿ ಮನೆಯಲ್ಲಿ ವಾದವಿವಾದಗಳು ನಡೆದುವಂತೆ. ಆಗ ಸಿಟ್ಟಿಗೆದ್ದ ಶಾಲಿನಿ “ಹೌದು ನಾನು ಅವರನ್ನು ಇಷ್ಟಪಟ್ಟಿದ್ದೇನೆ. ಅವರೂ ಸಹ ನನ್ನನ್ನು ಇಷ್ಟಪಟ್ಟಿದ್ದಾರೆ. ನಾವಿಬ್ಬರೂ ಇಷ್ಟರಲ್ಲೇ ಮದುವೆ ಮಾಡಿಕೊಳ್ಳಬೇಕೆಂದಿದ್ದೇವೆ. ನೀವು ನಮ್ಮ ತಂಟೆಗೆ ಬಂದರೆ ನಾನು ಸುಮ್ಮನಿರುವುದಿಲ್ಲ. ತೆಪ್ಪಗಿರುವುದಾದರೆ ನನ್ನ ಜೊತೆಗಿರಿ, ಇಲ್ಲವಾದರೆ ನಿಮ್ಮ ವ್ಯವಸ್ಥೆ ನೀವು ಮಾಡಿಕೊಂಡು ಬೇರೆ ಹೋಗಬಹುದು. ಇದು ನನ್ನ ದುಡಿಮೆಯಿಂದ ಕಟ್ಟಿದ ನನ್ನ ಮನೆ. ನನಗೆ ಯಾರ ಹಂಗೂ ಬೇಕಿಲ್ಲ” ಎಂದು ಜೋರು ಮಾಡಿದಳಂತೆ. ಇದರಿಂದಾಗಿ ಅವರಿಗೆಲ್ಲ ಅಸಮಾಧಾನ ಭುಗಿಲೆದ್ದು ತಂದೆ, ತಾಯಿ, ಅಣ್ಣ ಕೂಡಿಯೇ ಶಾಲಿನಿಯ ಕೊಲೆಗೆ ಯಾರಿಗೋ ಸುಪಾರಿ ಕೊಟ್ಟು ಅವಳನ್ನು ಮುಗಿಸಿದರಂತೆ. ಆದರೆ ಕೆಲವೇ ದಿನಗಳಲ್ಲಿ ಶಂಕರನ ಚಿಕ್ಕ ಮಗುವೊಂದು ಕಾಣೆಯಾಗಿ ಅದರ ಹೆಣ ಒಂದು ಹಾಳುಬಾವಿಯಲ್ಲಿ ದೊರಕಿತು. ಇದಕ್ಕೆ ಕಾರಣ ಇವರು ಸುಪಾರಿ ಕೊಟ್ಟಿದ್ದ ವ್ಯಕ್ತಿಗೂ ಇವರಿಗೂ ಹಣದ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯವಂತೆ. ಮಾತಿನಂತೆ ನಡೆಯದಿದ್ದುದರಿಂದ ಶಂಕರನ ಮಗುವನ್ನು ಅವರೇ ಕೊಲೆ ಮಾಡಿದರೆಂದು ಸುದ್ಧಿ. ಇದರಿಂದ ಶಾಲಿನಿಯ ಅಣ್ಣ ಶಂಕರನು ಮಾನಸಿಕವಾಗಿ ಜರ್ಝರಿತನಾದ. ಪಾಪಪ್ರಜ್ಞೆ ಅವನನ್ನು ಬಾಧಿಸಿತು. ತಡೆದುಕೊಳ್ಳಲಾರದೆ ನಡೆದ ಕುಕೃತ್ಯಗಳಿಗೆ ತಾನೇ ಕಾರಣನೆಂದು ನೋಟ್ ಬರೆದಿಟ್ಟು ಯಾವುದೋ ಲಾಡ್ಜ್ ಒಂದರಲ್ಲಿ ನೇಣು ಹಾಕಿಕೊಂಡು ಸತ್ತುಹೋದ. ಅಲ್ಲಲ್ಲಿ ಗುಸುಗುಸು ಸುದ್ಧಿ ಹರಡಿದರೂ ಶಂಕರನ ಮಾವನವರು ಹಣ ಖರ್ಚು ಮಾಡಿ ಗದ್ದಲವಾಗದಂತೆ ಎಲ್ಲವನ್ನೂ ಮುಚ್ಚಿಹಾಕಿಸಿದರಂತೆ. ಈಗ ಶಾಲಿನಿಯ ತಂದೆ, ತಾಯಿ ಸೊಸೆ, ಒಬ್ಬ ಮೊಮ್ಮಗ ಅದೇ ಮನೆಯಲ್ಲಿದ್ದಾರೆ. ಎಲ್ಲವನ್ನೂ ನೆನೆಸಿಕೊಂಡರೆ ಹೇಸಿಗೆಯಾಗುತ್ತದೆ. ಎಂತೆಂಥವರು ಇರುತ್ತಾರೆ ಹಣದಾಸೆ, ದುರಾಸೆಯಿಂದ ಏನೇನೆಲ್ಲ ಮಾಡುತ್ತಾರೆ ಎಂದು ಆಲೋಚಿಸಿದರೆ “ಯಾರು ಯಾರಿಗೆ ಹಿತವಾದವರು?” ಎಂಬ ಅನುಮಾನ ಉಂಟಾಗುತ್ತದೆ.

“ಶಾಲಿನಿಗೆ ಇವರು ಕೊಟ್ಟ ಕಿರುಕುಳವನ್ನು ಸಹಿಸಿಕೊಂಡರೂ ಅವಳು ಕಟ್ಟಿದ ಮನೆಯಲ್ಲಿ ಇವರೆಲ್ಲ ಸುಖವಾಗಿರಬೇಕೆಂದು ಬಯಸಿದರಲ್ಲಾ. ಅದಕ್ಕಾಗಿ ಅವಳನ್ನೇ ಬಲಿಕೊಡಲೂ ಹೇಸಲಿಲ್ಲ. ಗೆದ್ದಲು ಕಷ್ಟಪಟ್ಟು ಕಟ್ಟಿದ ಹುತ್ತದೊಳಗೆ ವಿಷದ ಹಾವು ಬಂದು ಸೇರಕೊಂಡ ಹಾಗಾಯ್ತು. ಮಾನವೀಯತೆಗೆಲ್ಲಿದೆ ಬೆಲೆ?” ಎಂದು ದಂಪತಿಗಳಿಬ್ಬರೂ ನಿಟ್ಟುಸಿರು ಬಿಟ್ಟರು.

ಬಿ.ಆರ್.ನಾಗರತ್ನ, ಮೈಸೂರು

13 Responses

  1. ಪ್ರಕಟಣೆಗಾಗಿ ಸುರಹೊನ್ನೆ ಪತ್ರಿಕೆ ಯ ಸಂಪಾದಕರಾದ ಹೇಮಾ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು

  2. ಪದ್ಮಾ ಆನಂದ್ says:

    ಅತ್ಯಂತ ಭಾವನಾತ್ಮಕ, ಕುತೂಹಲಭರಿತ ಚಂದದ ಕಥೆ. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡುಬಿಟ್ಟಿತು.

  3. MANJURAJ H N says:

    ವಿಷಾದನೀಯ; ದುರಂತ…………

    ಓದಿ ಮನಸು ಮುದುಡಿತು.
    ಈ ಜಗಕೆ ಏನಾಗಿದೆ; ಮನುಜನೆಂದರೆ ಸ್ವಾರ್ಥಿ ಎಂದಾಗಿದೆ.

    ಸಾಹಿತ್ಯಕ್ಕೆ ನಮ್ಮನ್ನು ಅಲ್ಲಾಡಿಸಿ ಬಿಡುವ ಶಕ್ತಿಯಿದೆ. ನಿಮ್ಮ
    ಕತೆಯ ಕಲೆಗಾರಿಕೆಗೆ ಅಭಿನಂದನೆ ಮೇಡಂ.

  4. ಪ್ರೋತ್ಸಾಹಕರ ಪ್ರತಿ ಕ್ರಿಯೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಮಂಜು ಸರ್

  5. ನಯನ ಬಜಕೂಡ್ಲು says:

    ಹೃದಯವಿದ್ರಾವಕ ಕಥೆ. ಕಥೆ ಹೆಣೆದ ರೀತಿ ಬಹಳ ಸೊಗಸಾಗಿದೆ

  6. ಮ.ನ.ಲತಾಮೋಹನ್ says:

    ಕುತೂಹಲದಿಂದ ಕೂಡಿದ ಕತೆ

  7. ನಿಮ್ಮ ಪ್ರೀತಿಯ ಪ್ರತಿಕ್ರಿಯೆ ಗೆ ಧನ್ಯವಾದಗಳು ನಯನಮೇಡಂ

  8. ಓದುಗರ ಮನದಲ್ಲಿ ಕುತೂಹಲ ಮೂಡಿಸುವ ಕಥೆ ಧನ್ಯವಾದಗಳು

  9. ನಿಮ್ಮ ಸ್ಪಂದನೆಗೆ ಧನ್ಯವಾದಗಳು ಗಾಯತ್ರಿ ಮೇಡಂ

  10. ಶಂಕರಿ ಶರ್ಮ says:

    ಮಾಡಿದ್ದುಣ್ಣೋ ಮಹಾರಾಯ…!! ಕಥಾಹಂದರ ಬಹಳ ಚೆನ್ನಾಗಿದೆ ನಾಗರತ್ನ ಮೇಡಂ. ಸರಣಿ ಸಾವುಗಳು ಮನಹಿಂಡಿದವು.

  11. ಧನ್ಯವಾದಗಳು ಶಂಕರಿ ಮೇಡಂ

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: