ಮನವಿ ಮಾಡಿದೆ ಮರವು

ಹಸಿರನು ಹೊದ್ದು ನೆರಳನು ನೀಡುತ
ಹರಡುವೆ ಪ್ರಾಣ ವಾಯುವನು
ಬಿಸಿಲಿನ ತಾಪವ ಕಡಿಮೆ ಮಾಡುತ
ಖಗಮಿಗ ಸಂಕುಲ ರಕ್ಷಿಸುವೆನು//
ಗೂಡನು ಕಟ್ಟಲು ಆಸರೆಯಾಗುತ
ಹಕ್ಕಿ ಪಿಕ್ಕಿಗಳ ಸಲಹುತಿಹೆ
ಬೀಸಿಬರುವ ತಂಗಾಳಿಯಲ್ಲಿ
ಎಲೆಗಳ ಕೂಡಿ ನಲಿಯುತಿಹೆ//
ನೆಲದ ಆಳಕೆ ಬೇರನು ಬಿಟ್ಟು
ಮಣ್ಣಿನ ಸವಕಳಿ ತಪ್ಪಿಸುವೆ
ಕೊಂಬೆಯ ರೆಂಬೆಯ ಹೊರಕ್ಕೆ ಚಾಚಿ
ಬೃಹತ್ತಾಗಿ ಬೆಳೆಯುತಿರುವೆ//
ಮಳೆಯು ಸುರಿಯಲು ಉಸಿರ ನೀಡಲು
ಇಳೆಯಲಿ ನಾನು ಅವಶ್ಯವು
ಭೂಮಿಯ ತಾಪವ ಹಿಡಿತಕೆ ತರಲು
ನನ್ನಯ ಸಂಕುಲ ಮಹತ್ವವು//
ನನ್ನನು ಕೊಂದರೆ ಏನನು ಪಡೆಯುವೆ
ಕಂಬನಿ ಹೊರತು ಏನಿಲ್ಲ
ದುಡ್ಡು ಹಣವು ಎನ್ನುತ ಬದುಕಲು
ನನ್ನನು ಮುಂದಕೆ ಕಾಣಲ್ಲ//
ಕಡಿಯದೆ ಉಳಿಸಿರಿ ನನ್ನಯ ದೇಹವ
ನಿಮ್ಮಯ ನಲ್ಮೆಯ ಮರನಾನು
ಧರಣಿಯ ಮಣ್ಣಲಿ ಬೆಳೆಸಿರಿ ನನ್ನಯ
ಸಸಿಗಳೆಂದು ಬೇಡುವೆನು//
ಮನವಿಯ ನಾನು ಮಾಡುವೆ ನರನೆ
ಕಡಿದು ಕೊಚ್ಚಿ ಹಾಕದಿರು
ನಿನ್ನಯ ಬದುಕಿನ ಸಖನು ನಾನು
ಎಂಬುದ ಅರಿತೂ ಕೊಲ್ಲದಿರು//
–ಶುಭಲಕ್ಷ್ಮಿ ಆರ್ ನಾಯಕ, ಉಡುಪಿ
ಬಹಳ ಅರ್ಥಪೂರ್ಣ ಕವನ. ಸತ್ಯವನ್ನು ಸಾರುತ್ತದೆ, ನಾವು ಎಚ್ಚರ ಗೊಂಡು ಈ ಮನವಿಯನ್ನು ಗಮನಿಸಬೇಕಿದೆ
ಧನ್ಯವಾದಗಳು ಮೇಡಂ
ಮನುಜನಿಗೆ ಎಚ್ಚರಿಕೆ ಯ ಸುಳಿವು ನೀಡುವ ಕವನ..ಚೆನ್ನಾಗಿದೆ…
ಮೂರು ನಾಲ್ಕು ಮಾತ್ರೆ ಗಣದಲ್ಲಿ, ನಾಲ್ಕು ಸಾಲಿನಲ್ಲಿ ರಚಿತವಾದ
ನಿಮ್ಮ ಈ ಕವಿತೆಯು ಸರಳವಾಗಿದೆ; ಆದರೆ ಅದರ ಅರ್ಥ
ಗಹನವಾಗಿದೆ.
ಮರವೇ ಮಾತಾಡುವ ಈ ಪರಿ ನಮ್ಮ ಆಂತರ್ಯವನ್ನು ಕಲಕುತ್ತದೆ
(ಅಂತರಾತ್ಮ ಇರುವವರಿಗೆ) ಅಂಥವರೇ ತಾನೇ ಕವಿತಾ ಓದುಗರು.
ಸಂವೇದನೆ ಇಲ್ಲದ್ದು ಕವಿತೆಯಲ್ಲ; ಅದು ಇನ್ನೇನೋ ಆಗಬಹುದು ಅಷ್ಟೇ.
ವೇದನೆಯನ್ನು ಸಂವೇದನೆ ಮಾಡುವ ಚಮತ್ಕಾರ ಕವಿಹೃದಯದ್ದು.
ಬರೀ ಮರಕ್ಕೆ ಮಾತ್ರ ಅನ್ವಯಿಸದು ನಿಮ್ಮ ಸಾಲುಗಳ ವಿಷಾದ. ಬದುಕಿನ
ಸಖರು ಯಾರ್ಯಾರು ಇದ್ದಾರೋ ಅವರೆಲ್ಲರಿಗೂ ಅದಕೆಲ್ಲಕೂ ಅನ್ವಯಿಸಿ
ನಾವು ಓದಿಕೊಂಡರೆ ಕವಿತೆಯ ಅರ್ಥವು ಹಿರಿದಾಗುವುದು.
ಅವರು ನೇರವಾಗಿ ಮರವು ಮಾಡಿದ ಮನವಿ ಅಂದಮೇಲೆ ನಿಮ್ಮದೇನು
ಪ್ರತಿಷ್ಠೆ ಎನ್ನಬಹುದು ಬರೀ ಸಾಲುಗಳನ್ನು ವಾಕ್ಯವಾಗಿಸಿಕೊಂಡು ಅರ್ಥ
ಮಾಡಿಕೊಳ್ಳುವ ಇತರರು. ಕವಿತೆಯ ಧ್ವನಿ, ರಸ ಮತ್ತು ಔಚಿತ್ಯಗಳು
ಬಹಳ ಮುಖ್ಯ. ಈ ಮೂರೂ ಕಾವ್ಯಗಾಯತ್ರಿಗಳು ನಿಮ್ಮ ಈ ಪದ್ಯದಲ್ಲಿವೆ.
ನಾನು ಕನ್ನಡ ಎಂಎ ತರಗತಿಗೆ ಪಾಠ ಮಾಡುವಾಗ ಇಂಥದನ್ನು
ಬಳಸಿಕೊಳ್ಳುತ್ತೇನೆ. ಉದಯೋನ್ಮುಖರನ್ನು ಕಾವ್ಯಕ್ಷೇತ್ರಕ್ಕೆ ಸೆಳೆಯುವ
ಒಂದಂಶವಾಗಿ. ಅದಕ್ಕಾಗಿ ನಿಮಗೆ ವೈಯಕ್ತಿಕವಾಗಿ ಧನ್ಯವಾದಗಳು.
ನಿಜಕೂ ಸರಳ ಸುಂದರ ಮತ್ತು ನೇರ. ಸ್ವಲ್ಪ ಆಯ ತಪ್ಪಿದ್ದರೂ
ಕೇವಲ ವರದಿವಾಚನ ಆಗುತ್ತಿತ್ತು. ಇದೀಗ ಕಾವ್ಯವಾಚನ ಆಗಿದೆ.
ಅದಕಾಗಿ ನಾನು ಇಷ್ಟೆಲ್ಲ ಬರೆದೆ. ಪ್ರಣಾಮಗಳು. ಮುಖ್ಯವಾಗಿ
ಪ್ರಕಟಿಸಿದ ಸುರಹೊನ್ನೆಗೆ ಶರಣು.
ಅಂತರಾತ್ಮದಿಂದ ಕವನ ಓದಿ, ಸವಿಸ್ತಾರವಾಗಿ ಕವನದ ಬಗ್ಗೆ ಅಭಿಪ್ರಾಯವನ್ನು ನೇರವಾಗಿ ಹೊರಗೆಡುಹಿದ ಹಾಗೂ ವಿಮರ್ಶೆಯಲ್ಲಿಯೇ ಸಲಹೆ,ನೀಡಿದ ತಮಗೆ ವಂದನೆಗಳು. ಪ್ರಕಟಿಸಿದ ಸುರ ಹೊನ್ನೆಗೆ ಮನಃಪೂರ್ವಕವಾಗಿ ಆಭಾರಿಯಾಗಿರುವೆ.
Welcome madam……..ಪ್ರತಿಕ್ರಿಯಿಸಿದ ನಿಮಗೂ ಸಹ ವಂದನೆಗಳು.
ಉಸಿರನ್ನು ನೀಡುವ ಹಸಿರ ಸ್ವಗತ ಕಣ್ತೆರೆಸುವಂತಿದೆ.
ಮರದ ಮೊರೆಯನ್ನು ಕೇಳಿ ಓದುಗರ ಅಂತಕರಣ ಕಲಕುತಿದೆ
ಪ್ರಕೃತಿಯೊಂದಿಗೆ ಕೂಡಿ ಬಾಳಬೇಕಾದ ನರನು, ಅದರ ಮಾರಣಹೋಮ ಮಾಡುವುದರ ಬಗ್ಗೆ ಎಚ್ಚರಿಕೆ ನೀಡುತ್ತಾ, ಉತ್ತಮ ಸಂದೇಶವನ್ನು ಹೊತ್ತ ಭಾವಪೂರ್ಣ ಕವನ ಚೆನ್ನಾಗಿದೆ.