ಕಾದಂಬರಿ : ತಾಯಿ – ಪುಟ 20
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಒಂದು ವಾರ ಕಳೆಯಿತು. ಕೃಷ್ಣವೇಣಿಯ ಗಂಡನಾಗಲಿ, ಮಗನಾಗಲಿ ಆಶ್ರಮದ ಕಡೆ ಸುಳಿಯಲಿಲ್ಲ. ಅಥವಾ ಫೋನ್ ಮಾಡಿ ಕೃಷ್ಣವೇಣಿಯ ಬಗ್ಗೆ ವಿಚಾರಿಸಲಿಲ್ಲ. ಕೃಷ್ಣವೇಣಿ ಮಾತ್ರ ಆರಾಮವಾಗಿದ್ದರು. ಅವರ ಬಳಿ ಮೊಬೈಲ್ ಇದ್ದರೂ ಯಾರಿಗೂ ಫೋನ್ ಮಾಡಿದಂತೆ ಕಾಣಲಿಲ್ಲ.
“ನಿಮ್ಮ ಮಗಳಿಗೆ ನೀವು ಇಲ್ಲಿರುವುದು ಗೊತ್ತಾ?”
“ಇಲ್ಲ. ಅವಳಿಗೆ ಈ ವಿಷಯ ತಿಳಿದರೆ ತುಂಬಾ ಬೇಜಾರು ಮಾಡಿಕೊಳ್ತಾಳೆ. ಅವಳು ಇಲ್ಲಿರುವಾಗ ಎಲ್ಲಾ ಚೆನ್ನಾಗಿತ್ತು. ಅವಳು ಮದುವೆಯಾಗಿ ಹೋದಮೇಲೆ ನನ್ನ ನೆಮ್ಮದಿ ಹಾಳಾಯಿತು.”
“ಯಾಕೆ?” ಭವಾನಿ ಕೇಳಿದರು.
“ನನ್ನ ಗಂಡ ಒಳ್ಳೆಯವರಲ್ಲ. ಹೆಣ್ಣುಬಾಕ. ಚೆನ್ನಾಗಿರುವ ಹೆಂಗಸರ ಹಿಂದೆ ಸುತ್ತುತ್ತರ‍್ತಾನೆ. ನನ್ನ ಮಗಳು ಇದ್ದಾಗ ಅವರು ಸುಮ್ಮನಿದ್ದರು. ಆಮೇಲೆ ಬಾಲ ಬಿಚ್ಚಿದರು.”
“ಏನ್ಮಾಡಿದ್ರು?”
“ನನ್ನನ್ನು ಅಸಹಾಯಕಳನ್ನಾಗಿ ಮಾಡಿದರು. ನಾನು ಹುಷಾರಾಗಿದ್ದರೂ ಖಾಯಿಲೆಯ ಪಟ್ಟಿಕಟ್ಟಿ ಅಡಿಗೆಯವರನ್ನು ಗೊತ್ತು ಮಾಡಿದರು. ಮೂರು ಜನ ಅಡಿಗೆಯವರು ಕೆಲಸ ಬಿಟ್ಟು ಹೋದರು. ನಾಲ್ಕನೆಯವಳನ್ನು ನಾನೇ ಓಡಿಸಿದೆ.”
“ಯಾಕೆ?”
“ಅವಳ ಜೊತೆ ಇವರ ಚಕ್ಕಂದ ಶುರುವಾಯಿತು. ಅವಳು ತನ್ನ ಪಾಡಿಗೆ ತಾನು ತಿಂಡಿ-ಅಡಿಗೆ ಮಾಡ್ತಿದ್ದಳು. ಇವರು ಅವಳಿಗೆ ಸಹಾಯ ಮಾಡಲು ಹೋಗ್ತಿದ್ರು. ಅವಳಿಗೆ ತರಕಾರಿ ಹೆಚ್ಚಿಕೊಡಕ್ಕೆ ಹೋಗ್ತಿದ್ರು. ಮಿಕ್ಸಿ ಮಾಡಿಕೊಡಕ್ಕೆ ಹೋಗ್ತಿದ್ರು. ಅವಳು ಊಟ ಮಾಡುವಾಗ ಇವರು ಹೋಗಿ ಬಡಿಸಿ ಉಪಚಾರ ಮಾಡ್ತಿದ್ರು. ಆದ್ದರಿಂದ ನಾನೇ ಅವಳನ್ನು ಓಡಿಸಿದೆ.”
“ನಿಮ್ಮ ಮಗ-ಸೊಸೆ ನಿಮ್ಮ ಜೊತೆ ಇಲ್ವಾ?”
“ಮಗಳು ಇರುವವರೆಗೂ ಇದ್ದರು. ಆಮೇಲೆ ಬೇರೆ ಮನೆ ಮಾಡಿಕೊಂಡು ಹೋದರು.”
“ಯಾಕೆ?”
“ನನ್ನ ಸೊಸೆ ತುಂಬಾ…. ಮುದ್ದಾಗಿದ್ದಾಳೆ. ಇವರೇನೋ ತರಲೆ ಮಾಡಿರಬೇಕು. ಅದಕ್ಕೆ ಏನೋ ನೆಪ ತೆಗೆದು ಬೇರೆ ಮನೆ ಮಾಡಿದಳೂಂತ ಕಾಣತ್ತೆ.”
“ನಿಮ್ಮ ಸೊಸೆ ನಿಮ್ಮ ಜೊತೆ ಹೇಗಿದ್ದಾರೆ?”
“ತುಂಬಾ ಚೆನ್ನಾಗಿದ್ದಾಳೆ. ‘ನಮ್ಮನೇಗೆ ಬಂದಿರಿ’ ಅಂತಾನೂ ಕರೆದಳು. ನಾನು ಗಂಡನನ್ನು ಬಿಟ್ಟು ಹೋದರೆ ಚೆನ್ನಾಗಿರುತ್ತದಾ?”
“ನಿಮ್ಮನ್ನು ಯಾಕೆ ಇಲ್ಲಿ ಬಿಟ್ಟಿದ್ದಾರೆ?”
“ಅದೊಂದು ದೊಡ್ಡ ಕಥೆ. ಇನ್ಯಾವತ್ತಾದರೂ ಹೇಳ್ತೀನಿ” ಎಂದರು ಕೃಷ್ಣವೇಣಿ.
ರಾಜಲಕ್ಷ್ಮಿ ಚಿನ್ಮಯಿ-ಭಾಸ್ಕರರ ವಿಚಾರ ಗೌರಮ್ಮನಿಗೆ ಹೇಳಬೇಕಿತ್ತು. ಆದರೆ ಕೃಷ್ಣವೇಣಿಯ ಪ್ರಕರಣದಿಂದ ಆ ಕೆಲಸ ಮುಂದೆ ಹೋಗಿತ್ತು.
ಅಂದು ಸಾಯಂಕಾಲ ಗೌರಮ್ಮನನ್ನು ಕರೆದುಕೊಂಡು ರಾಜಲಕ್ಷ್ಮಿ ಡಾಕ್ಟರ್ ಮನೆಗೆ ಹೋದರು. ಡಾ|| ಜಯಲಕ್ಷ್ಮಿ ಮನೆಯಲ್ಲೇ ಇದ್ದರು. ಅವರ ಗಂಡ ವಾಕಿಂಗ್ ಹೋಗಿದ್ದರು. ಡಾಕ್ಟರ್ ಇಬ್ಬರ ಬಿ.ಪಿ. ಚೆಕ್ ಮಾಡಿದರು. ಬಿ.ಪಿ. ನಾರ್ಮಲ್ ಇತ್ತು.
“ಏನು ವಿಷಯ ಗೌರಮ್ಮ? ಯಾವತ್ತೂ ಬಿ.ಪಿ. ಚೆಕಪ್‌ಗೆ ಬರದೇ ಇರುವವರು ಇವತ್ತು ಬಂದಿದ್ದೀರಾ?”
“ವಾರದಿಂದ ನಿದ್ರೇನೇ ಇಲ್ಲ. ತಲೆ ಕೆಟ್ಟಂತಾಗಿದೆ. ರಾಜಮ್ಮನಿಗೆ ಹೇಳೋಣ ಅಂದ್ಕೊಂಡೆ. ಆದರೆ ಕೃಷ್ಣವೇಣಿ ಬಂದಿದ್ದರಿಂದ ಹೇಳಕ್ಕೆ ಬಿಡುವಾಗಲಿಲ್ಲ.”
“ಕೃಷ್ಣವೇಣಿಯಾರು?”
ರಾಜಲಕ್ಷ್ಮಿ ಡಾ|| ಜಯಲಕ್ಷ್ಮಿಗೆ ಕೃಷ್ಣವೇಣಿ ವಿಚಾರ ಹೇಳಿದರು.
“ತುಂಬಾ ವಿಚಿತ್ರವಾಗಿದೆ. ಎಲ್ಲರೂ ಇರುವಾಗ ಅವರು ವೃದ್ಧಾಶ್ರಮದಲ್ಲಿ ಯಾಕೆ ಇರಬೇಕು?” ಡಾಕ್ಟರ್ ಕೇಳಿದರು.
“ಯಾರ ಮನೆಯಲ್ಲಿ ಏನು ಕಥೆ ಇದೆಯೋ ಯಾರಿಗೆ ಗೊತ್ತು? ಒಂದು ತಿಂಗಳರ್ತಾರೇಂತ ಹೇಳಿದ್ದಾರೆ ನೋಡೋಣ” ಎಂದರು ರಾಜಲಕ್ಷ್ಮಿ
.
“ನೀವು ಯಾಕೆ ಒಂದು ವಾರದಿಂದ ತಲೆ ಕೆಡಿಸಿಕೊಂಡಿದ್ದೀರಾ ಗೌರಮ್ಮ?”
“ಹೆಣ್ಣು ಮಕ್ಕಳನ್ನು ಸಾಕುವುದು ಸೆರಗಿನಲ್ಲಿ ಕೆಂಡಕಟ್ಟಿಕೊಂಡ ಹಾಗೆ ನೋಡಿ. ನಮ್ಮ ಚಿನ್ಮಯಿ ನನಗೆ ತಲೆ ನೋವಾಗಿಬಿಟ್ಟಿದ್ದಾಳೆ.”
“ಯಾಕೆ? ಚಿನ್ಮಯಿ ಏನು ಮಾಡಿದಳು?”
“ಭಾಸ್ಕರನ ಜೊತೆ ತಿರುಗ್ತಿದ್ದಾಳಂತೆ. ಕಳೆದ ವಾರ ಭಾಸ್ಕರನ ಜೊತೆ ಜೂಗೆ ಹೋಗಿದ್ದಳಂತೆ. ಅಲ್ಲಿ ಶ್ರೀರಂಗಪಟ್ಟದವರು ಯಾರೋ ನೋಡಿದವರು ನನ್ನ ಮೈದುನನ ಹೆಂಡತಿಗೆ ಹೇಳಿದ್ದಾರೆ. ಅವಳು ಫೋನ್ ಮಾಡಿದ್ದಳು.”
“ನೀವು ಚಿನ್ಮಯೀನ್ನ ಕೇಳಬೇಕಾಗಿತ್ತು.”
“ಕೇಳದೆ ರ‍್ತೀನಾ? ಹೋದವಾರಾನೇ ಕೇಳ್ದೆ. ನಿಜಾಂತ ಒಪ್ಪಿಕೊಂಡಳು. ‘ನಾವಿಬ್ಬರೂ ಪ್ರೀತಿಸ್ತಿದ್ದೇವೆ, ಮದುವೆ ಆಗ್ತೇವೆ’ ಅಂದಳು.”
“ಅವರವರೇ ತೀರ್ಮಾನ ಮಾಡಿಕೊಂಡರೆ ಸಾಕಂತಾ?”
“ಅಮ್ಮಾ, ನಾನು ವಿಷಯ ಹೇಳಿದ್ದೀನಿ. ನಾನು ಭಾಸ್ಕರಾನ್ನ ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲ್ಲ. ನೀನು ಭಾಸ್ಕರನ ಹತ್ತಿರ ಮಾತಾಡು ಎಂದಳು.”
“ನೀವು ಮಾತಾಡಿದ್ರಾ?”
“ಇಲ್ಲ. ರಾಜಮ್ಮ, ಭಾಸ್ಕರ ನಿಮ್ಮ ಕಡೆಯ ಹುಡುಗ. ನೀವೇ ಅವನ ಹತ್ತಿರ ಮಾತನಾಡಿ.”
“ನಿಜ ಹೇಳಬೇಕೂಂದ್ರೆ ನಮಗೆಲ್ಲರಿಗೂ ಈ ವಿಚಾರಗೊತ್ತು. ಭಾಸ್ಕರ ತುಂಬಾ ಒಳ್ಳೆಯ ಹುಡುಗ. ಅದರಲ್ಲಿ ಸಂದೇಹ ಬೇಡ. ಆದರೆ ಅವನಿಗೆ ಈಗ ರ‍್ತಿರುವ ಸಂಬಳದಲ್ಲಿ ಮನೆ ಬಾಡಿಗೆ ಕೊಟ್ಟುಕೊಂಡು ಸಂಸಾರ ಮಾಡಲು ಸಾಧ್ಯಾನಾ?”
“ಚಿಕ್ಕ ಮನೆ ಮಾಡಿಕೊಂಡರೆ ಎಲ್ಲಾ ಸಾಧ್ಯವಾಗತ್ತೆ….”
“ನೀವು ಎಷ್ಟು ದಿನ ನಿಮ್ಮನೆಯವರನ್ನು ನಿಮ್ಮ ಮೈದುನನ ಮನೆಯಲ್ಲಿ ಬಿಟ್ಟರ‍್ತೀರಾ? ನಿಮ್ಮ ಓರಗಿತ್ತಿ ಚಿನ್ಮಯೀನ್ನ ತನ್ನ ತಮ್ಮನಿಗೆ ತಂದುಕೋಬೇಕೂಂತ ಆಸೆ ಇಟ್ಕೊಂಡಿದ್ದಾಳೆ. ಚಿನ್ಮಯಿ ಭಾಸ್ಕರನ್ನ ಮದುವೆಯಾದರೆ ಅವಳು ಸುಮ್ಮನರ‍್ತಾಳಾ? ನಿಮ್ಮನೆಯವರನ್ನು ಹೊರಗೆ ಹಾಕ್ತಾಳೆ. ಆಗ ಅವರು ಎಲ್ಲಿರಬೇಕು?”
“ಈಗೇನು ಮಾಡೋದು ರಾಜಮ್ಮ?”
“ನೀವೇ ಇಬ್ಬರಿಗೂ ಬುದ್ಧಿ ಹೇಳಿ. ಮೊದಲು ಭಾಸ್ಕರ ಒಳ್ಳೆಯ ಸಂಬಳ ಬರುವ ಕೆಲಸಕ್ಕೆ ಸೇರಲಿ. ಆಮೇಲೆ ಮದುವೆ ಮಾತು. ಅವರಿಬ್ಬರೂ ತುಂಬಾ ತಿರುಗಾಡ್ತಿದ್ದಾರೆ. ಅದಕ್ಕೆ ಫುಲ್‌ಸ್ಟಾಪ್ ಹಾಕಿ.”
“ರಾಜಮ್ಮ ಭಾಸ್ಕರನಿಗೆ ಒಳ್ಳೆಯ ಕೆಲಸ ಸಿಗುವವರೆಗೂ ಕಾಯಬೇಕಾ?”
“ವಿಧೀನೇ ಇಲ್ಲ. ಚಿನ್ಮಯಿ ಓದು ಮುಗಿಯ ಬೇಕಲ್ವಾ? ಅವಳು ಓದು ನಿಲ್ಲಿಸಕ್ಕಾಗತ್ತಾ? ಈಗ ಮದುವೆಗೇನವಸರ? ಮುಂದಾಲೋಚನೆ ಇಲ್ಲದೆ ದುಡುಕಿ ಮದುವೆಯಾಗೋದು ಬೇಡ.”
“ಭಾಸ್ಕರ ನನ್ನ ಮಾತು ಕೇಳ್ತಾನಾ?”
“ಸಮಯ ನೋಡಿ ಅವನಿಗೆ ನಾನೇ ಹೇಳ್ತೀನಿ. ನೀವು ಚಿನ್ಮಯಿಗೆ ಹೇಳಿ. ಒಂದು ವೇಳೆ ಅವರು ನಮ್ಮ ಮಾತುಮೀರಿ ಮದುವೆಯಾದರೆ ಚಿನ್ಮಯಿಗೆ ವೃದ್ಧಾಶ್ರಮದಲ್ಲಿ ಇರುವುದಕ್ಕೆ ಅವಕಾಶವಿರಲ್ಲ.”
“ನೀವು ಹೀಗಂದ್ರೆ ಹೇಗೆ ರಾಜಮ್ಮ? ಗೌರಮ್ಮ ಅಳುತ್ತಾ ಕೇಳಿದರು.
“ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಿ ಗೌರಮ್ಮ. ಅವರಿಗೆ ನೀವು-ನಿಮ್ಮನೆಯವರು ಈ ವಯಸ್ಸಿನಲ್ಲಿ ದೂರ ದೂರ ಇರುವುದು ಇಷ್ಟವಿಲ್ಲ. ಭಾಸ್ಕರಂಗೆ ಒಳ್ಳೆಯ ಕೆಲಸ ಸಿಕ್ಕಿದರೆ ನೀವು ನಾಲ್ಕು ಜನರೂ ಮನೆ ಮಾಡಿಕೊಂಡು ಒಟ್ಟಿಗೆ ಇರಬಹುದು. ನೀವು ನಿಮ್ಮ ಯಜಮಾನರನ್ನು ನೋಡಿಕೊಳ್ಳಬಹುದು. ಹಾಗೇ ಪುಡಿಗಿಡಿ, ಹಪ್ಪಳ ಸಂಡಿಗೆ, ಉಪ್ಪಿನಕಾಯಿ ಮಾಡಿಕೊಂಡು ಆರಾಮವಾಗಿರಬಹುದು.”
“ನಿಮ್ಮ ಮನಸ್ಸು ಎಷ್ಟು ಒಳ್ಳೆಯದು ರಾಜಮ್ಮ. ನಮ್ಮನೆಯವರು ತಮ್ಮನ ಮನೆಯಲ್ಲಿ ತುಂಬಾ ಕಷ್ಟ ಅನುಭವಿಸ್ತಿದ್ದಾರೆ. ತಿಂಗಳಿಗೆ 25,000 ರೂ. ಅವರನ್ನು ನೋಡಿಕೊಳ್ಳಲು ಸಾಕಾಗಲ್ಲವಂತೆ. ಇನ್ನೂ ಜಾಸ್ತಿಬೇಕಂತೆ……”
“ಗೌರಮ್ಮ ತಿಂಗಳಿಗೆ 25,000 ರೂ. ಗೋದಾಮಣಿ ಕೊಡ್ತಿದ್ದಾರೆ. ಅವರು ಕೊಡೋದು ನಿಲ್ಲಿಸಿದರೆ ಏನ್ಮಾಡ್ತೀರ? ನಿಮಗೆ 25,000 ಕೊಡಕ್ಕಾಗತ್ತದಾ?”
“ನನಗೆಲ್ಲಿ ಅಷ್ಟು ಹಣ ಹೊಂದಿಸಲು ಸಾಧ್ಯ ರಾಜಮ್ಮ?”
“ನೀವು ನಿಮ್ಮ ಯಜಮಾನರ ಬಗ್ಗೆ ಮೊದಲು ಯೋಚಿಸಿ ಮೈಸೂರಲ್ಲಿ ಒಂದು ಚಿಕ್ಕ ಮನೆ ಮಾಡಿ. ಅವರನ್ನು ಕರೆಸಿಕೊಳ್ಳಿ. ಆ ಮೇಲೆ ಮಗಳ ಮದುವೆ ಬಗ್ಗೆ ಯೋಚಿಸಿ.”
“ನೀವು ಹೇಳ್ತಿರೋದು ನಿಜ ರಾಜಮ್ಮ. ನಾನು ಮೊದಲು ನೀವು ಹೇಳಿದ ಕೆಲಸ ಮಾಡ್ತೀನಿ.”
ಅವರು ವಾಪಸ್ಸು ಬರುವ ವೇಳೆಗೆ ಕೃಷ್ಣವೇಣಿ ಎಲ್ಲರನ್ನೂ ಸೇರಿಸಿಕೊಂಡು ಸ್ವಾರಸ್ಯವಾಗಿ ಕಥೆ ಹೇಳುತ್ತಿದ್ದರು. ಆ ಗುಂಪಿನಲ್ಲಿ ಗೋದಾಮಣಿ, ಮಧುಮತಿ ಕೂಡ ಇದ್ದರು.
“ರಾಜಮ್ಮ ಕೃಷ್ಣವೇಣಿಯವರು ತುಂಬಾ ಚೆನ್ನಾಗಿ ಕಥೆ ಹೇಳ್ತಾರೆ. ನಮಗೆ ಹೊತ್ತು ಕಳೆದಿದ್ದೇ ಗೊತ್ತಾಗಲಿಲ್ಲ.”
“ಒಳ್ಳೆಯದಾಯ್ತು. ದಿನಾ ಅವರ ಕೈಲಿ ಕಥೆ ಹೇಳಿಸಿಕೊಳ್ಳಿ” ಎಂದರು ರಾಜಲಕ್ಷ್ಮಿ.
ಅಂದು ರಾತ್ರಿ ಗೌರಮ್ಮ ಮಗಳಿಗೆ ಸಾಯಂಕಾಲ ರಾಜಲಕ್ಷ್ಮಿ ಹೇಳಿದ ವಿಚಾರ ಹೇಳಿದರು.
“ಅವರಿಗೆ ಈ ಮದುವೆ ಇಷ್ಟವಿಲ್ಲವೇನಮ್ಮಾ?”
“ಅವರು ಏನು ಹೇಳಿದ್ರೂಂತ ಅರ್ಥಮಾಡಿಕೋ. ಮೊದಲು ನಾವು ಚಿಕ್ಕ ಮನೆ ಮಾಡಿಕೊಂಡು ನಿಮ್ಮಪ್ಪನ್ನ ಕರೆಸಿಕೊಳ್ಳಬೇಕು. ಇಲ್ಲದಿದ್ರೆ 25,000 ಪ್ರತಿ ತಿಂಗಳೂ ನಿಮ್ಮ ಚಿಕ್ಕಮ್ಮಂಗೆ ಕೊಡಬೇಕು. ಗೋದಾಮಣಿ ಮೇಡಂ ಯಾವಾಗ ಹಣ ಕೊಡುವುದನ್ನು ನಿಲ್ಲಿಸುತ್ತಾರೋ ಗೊತ್ತಿಲ್ಲ.’
“ನೀನೇ ಈ ವಿಚಾರ ಭಾಸ್ಕರ್‌ಗೆ ಹೇಳಮ್ಮ.”
“ರಾಜಮ್ಮ ಹೇಳ್ತಾರೆ. ನೀವು ಒಟ್ಟಿಗೆ ತಿರುಗಾಡುವುದನ್ನು ನಿಲ್ಲಿಸಿ. ಮದುವೆಗೆ ಮೊದಲು ನಾನು-ನಿಮ್ಮಪ್ಪ ಕೆಟ್ಟ ಮಾತುಗಳನ್ನು ಕೇಳುವುದಕ್ಕೆ ಅವಕಾಶ ಕೊಡಬೇಡ.”
ಚಿನ್ಮಯಿ ಮಾತನಾಡಲಿಲ್ಲ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=42279
-ಸಿ.ಎನ್. ಮುಕ್ತಾ
ಕಾದಂಬರಿ ಓದಿಸಿಕೊಂಡುಹೋಯಿತು… ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಕಾಣೆವು…ಮೇಲ್ನೋಟಕ್ಕೆ ಯರನ್ನು ದೂಷಿಸಲು ಹೋಗಬಾದೆಂಬ ಸೂಕ್ಷ್ಮ ಅವಲೋಕನ ಕ್ಕೆ ಎಡೆಮಾಡಿಕೊಟ್ಟಿದೆ..ಈಕಂತು ಮೇಡಂ
ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬ ಕುತೂಹಲಕರ ಘಟ್ಟದಲ್ಲಿ ಬಂದು ನಿಂತುಬಿಟ್ಟತಲ್ಲಾ ಈ ಕಂತು, ಛೆ. .
ಕೃಷ್ಣವೇಣಿಯವರ ನಿಜವಾದ ಕಥೆ ಏನಿರಬಹುದೂಂತ ಕುತೂಹಲ. ಚಿನ್ಮಯಿ ಮದುವೆಗೆ ಕಾಯಬೇಕಲ್ಲಾ ಹೇಗೂ …ನೋಡೋಣ. ಖುಷಿಯಿಂದ ಓದಿಸಿಕೊಂಡು ಹೋಗುತ್ತಿದೆ, ಕಾದಂಬರಿ.
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಹಾಗೂ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರಿಗೆ ಧನ್ಯವಾದಗಳು.
ಕುತೂಹಲ ಹೆಚ್ಚಿಸುತ್ತಿರುವ ಕಾದಂಬರಿ.ಧನ್ಯವಾದಗಳು