ಕಾದಂಬರಿ : ತಾಯಿ – ಪುಟ 19

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಮರುದಿನ ಸುಮಾರು 11 ಗಂಟೆಗೆ ರಾಜಲಕ್ಷ್ಮಿ ಪೇಪರ್ ನೋಡುತ್ತಾ ಕುಳಿತಿದ್ದಾಗ ಫೋನ್ ರಿಂಗಾಯಿತು.
“ನಮಸ್ಕಾರ, ರಾಜಲಕ್ಷ್ಮಿ ಮೇಡಂ ಇದ್ದಾರಾ?”
“ನಮಸ್ಕಾರ. ನಾನೇ ಮಾತಾಡ್ತಿರೋದು. ತಾವು ಯಾರು?”
“ಸದಾಶಿವರಾವ್ ಅಂತ. ಎಲ್.ಐ.ಸಿ.ಯಲ್ಲಿ ಡೆವಲಪ್‌ಮೆಂಟ್ ಆಫೀಸರ್ ಆಗಿದ್ದೆ. ಈಗ ಮನೇಲಿದ್ದೀನಿ.”
“ನೆನ್ನೆ ಬಂದಿದ್ದವರು ನೀವೇನಾ?”
“ಹೌದು ನಾನೇ. ಇವತ್ತು ಯಾವಾಗ ಬರಲಿ ಮೇಡಂ?”
“ಬನ್ನಿ. ನಾನು ಈಗ ಬಿಡುವಾಗಿದ್ದೇನೆ.”

ಅರ್ಧ ಗಂಟೆಯಲ್ಲಿ ತಂದೆ-ಮಗ ವೃದ್ಧಾಶ್ರಮದಲ್ಲಿದ್ದರು. ಸದಾಶಿವರಾವ್ ತಮ್ಮ ಮಗ ಶ್ರೀರಾಮ್‌ನನ್ನು ಪರಿಚಯಿಸಿದರು.
“ನನ್ನ ಮಗ ಶ್ರೀರಾಮ್. ಇನ್‌ಫೋಸಿಸ್‌ನಲ್ಲಿ ಇಂಜಿನಿಯರ್. ಇವನ ಹೆಂಡತಿ ರೋಹಿಣಿನೂ ಇಂಜಿನಿಯರ್.”
“ಸಂತೋಷ…..”
“ನನಗೊಬ್ಬಳೇ ಮಗಳು ಸರಯೂ. ಅವಳು ಎಂ.ಬಿ.ಎ. ಮಾಡಿದ್ದಾಳೆ. ಎರಡು ತಿಂಗಳ ಹಿಂದೆ ಅವಳ ಮದುವೆ ಮಾಡಿದೆ. ಅವಳು ಮದುವೆಯಾಗಿ ಹೈದರಾಬಾದ್‌ಗೆ ಹೋಗಿದ್ದಾಳೆ. ಅಂದಿನಿಂದ ನನ್ನ ಹೆಂಡತಿ ತುಂಬಾ ವಿಚಿತ್ರವಾಗಿ ಆಡ್ತಿದ್ದಾಳೆ.”
“ಈ ವಿಚಾರವೆಲ್ಲಾ ನನಗ್ಯಾಕೆ ಹೇಳ್ತಿದ್ದೀರಾ?”
“ಮೇಡಂ ನಮಗೆ ದುಡ್ಡಿಗೆ ಕೊರತೆಯಿಲ್ಲ. ನನ್ನ ಹೆಂಡತಿ ಕೃಷ್ಣವೇಣಿ ಲೆಕ್ಚರರ್ ಆಗಿ ರಿಟೈರ್ ಆಗಿದ್ದಾಳೆ. ಕೈ ತುಂಬಾ ಪೆನ್ಷನ್ ತೊಗೋತಿದ್ದಾಳೆ. ಆದರೆ ಅವಳಿಗೆ ತೃಪ್ತಿಯಿಲ್ಲ. ತುಂಬಾ ವಿಚಿತ್ರವಾಗಿ ಆಡ್ತಿದ್ದಾಳೆ. ಅವಳನ್ನು ಒಂದು ತಿಂಗಳು ನಿಮ್ಮ ವೃದ್ಧಾಶ್ರಮದಲ್ಲಿಟ್ಟುಕೊಂಡರೆ ಅವಳು ಬದಲಾಗಬಹುದು ಅನ್ನಿಸ್ತಿದೆ.”
“ಇಲ್ಲಿಗೆ ಬಂದಮೇಲೆ ಅವರು ಹೇಗೆ ಬದಲಾಗಲು ಸಾಧ್ಯ?”

“ಅವಳು ನಿವೃತ್ತಿಯ ನಂತರ ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡು ಬಿಟ್ಟಿದ್ದಾಳೆ. ನಾವು ಎಷ್ಟೇ ಚೆನ್ನಾಗಿ ನೋಡಿಕೊಳ್ತಿದ್ರೂ ಅವಳಿಗೆ ಸಮಾಧಾನವಿಲ್ಲ. ನನಗೆ 65 ವರ್ಷ. ನಾನು ಈಗ ಯಾವ ಹೆಂಗಿಸನ ಜೊತೆ ಮಾತನಾಡಿದರೂ ಅನುಮಾನಪಡ್ತಾಳೆ.”
“ಮಗ-ಸೊಸೆ ಜೊತೆ ಹೇಗಿದ್ದಾರೆ?”
“ನನ್ನ ಹೆಂಡತಿ ತಲೆ ಕಂಡರಾಗಲ್ಲ. ಅವಳು ಏನೇ ತಿನ್ನಕ್ಕೆ ಕೊಟ್ಟರೂ ‘ವಿಷ ಹಾಕಿದ್ದೀಯ ಬೇಡ’ ಅಂತಾರೆ. ‘ನೀವೆಲ್ಲರೂ ಸೇರಿ ನನ್ನನ್ನು ಸಾಯಿಸಲು ಪ್ರಯತ್ನ ಪಡ್ತಿದ್ದೀರಾಂತ ಅನುಮಾನ ಪಡುತ್ತರ‍್ತಾರೆ. ಅದಕ್ಕೆ ಈಗ ಅಡಿಗೆಯವರನ್ನು ಇಟ್ಟುಕೊಂಡಿದ್ದೇವೆ. ಆದರೂ ನೆಮ್ಮದಿಯಿಲ್ಲ.”
“ಯಾಕೆ?”
“ನಮ್ತಂದೆ ಅಡಿಗೆಯವರ ಜೊತೆ ಮಾತಾಡಿದರೆ ಅನುಮಾನ ಪಡ್ತಾರೆ. ಯಾವಾಗಲೂ ಅವರ ಹಿಂದೆ ತಿರುಗ್ತರ‍್ತಾರೆ. ಇಬ್ಬರು ಅಡಿಗೆಯವರು ಬಿಟ್ಟು ಹೋದರು. ಈಗ ಹೊಸಬರು ಬಂದಿದ್ದಾರೆ. ಅವರಿಗೆ 60 ವರ್ಷವಿರಬಹುದು. ಅಚ್ಚುಕಟ್ಟಾಗಿ ಕೆಲಸ ಮಾಡ್ತಾರೆ. ತುಂಬಾ ಸ್ಮಾರ್ಟಾಗಿದ್ದಾರೆ. ಅವರು ಬಂದ ಕೂಡಲೆ ನಮ್ತಂದೇನ್ನ ‘ನೀವು ನನ್ನ ಮುಂದೆ ಕುಳಿತಿರಿ ಎಲ್ಲೂ ಹೋಗಬೇಡಿ’ ಅಂತಾರೆ.”
“ನಿಮ್ಮ ತಾಯಿ ಯಾಕೆ ಅಡಿಗೆ-ತಿಂಡಿ ಮಾಡಲ್ಲ?”
“ಅವರು ರುಚಿಯಾಗಿ ಮಾಡಲ್ಲ. ಚೆನ್ನಾಗಿಲ್ಲಾಂದ್ರೆ ರಾಮಾಯಣ ಮಾಡ್ತಾರೆ.”
“ನೀವು ಅವರನ್ನು ಡಾಕ್ಟರ್‌ಗೆ ತೋರಿಸಿದರೆ ಒಳ್ಳೆಯದಲ್ವಾ? ಇಲ್ಲಿಗೆ ಅವರನ್ನು ಕಳಿಸಿದರೆ ಅವರಿಗೇನು ಪ್ರಯೋಜನವಾಗತ್ತೆ?”
“ಇಲ್ಲಿರುವವರನ್ನು ನೋಡಿದಾಗ ‘ಬೇರೆಯವ ಮನೆಯ ಪರಿಸ್ಥಿತಿ ಅರ್ಥವಾಗಿ, ನಮ್ಮ ಮನೆಯೇ ಚೆನ್ನಾಗಿದೆ’ ಆಗಲಾದರೂ ಅವಳು ಸರಿ ಹೋಗಬಹುದು ಅನ್ನುವ ನಂಬಿಕೆ.”
“ಆದರೆ ನಾನು ತಕ್ಷಣ ನಿರ್ಧಾರ ತೆಗೆದುಕೊಳ್ಳಕ್ಕೆ ಆಗಲ್ಲ. ನಮ್ಮಲ್ಲಿ ಕೊಠಡಿಗಳು ಖಾಲಿಯಿಲ್ಲ. ಪ್ರತ್ಯೇಕವಾಗಿ ಕೊಠಡಿ ಕೊಡಲು ಸಾಧ್ಯವೂ ಇಲ್ಲ….”
“ದಯವಿಟ್ಟು ಇಲ್ಲಾಂತ ಹೇಳಬೇಡಿ. ತಿಂಗಳಿಗೆ 50,000 ರೂ. ಆದರೂ ಕೊಡಲು ನಾವು ಸಿದ್ಧ.”

“ಅವರು ಈಗ ಇರುವವರ ಜೊತೆ ಹೊಂದಿಕೊಡು ಹೋಗಬೇಕಾಗುತ್ತದೆ. ನಿಮ್ಮನೆಯವರು ಮನೆಯವರ ಜೊತೇನೇ ಹೊಂದಿಕೊಳ್ತಿಲ್ಲ. ಇಲ್ಲಿ ಅಪರಿಚಿತರ ಜೊತೆ ಹೇಗೆ ಹೊಂದಿಕೊಳ್ತಾರೆ?”
“ಹೊರಗಿನವರ ಜೊತೆ ಚೆನ್ನಾಗಿರ‍್ತಾಳೆ ಮೇಡಂ. ದಯವಿಟ್ಟು ಆಗಲ್ಲ ಅನ್ನಬೇಡಿ.”
“ನನಗೆ ಎರಡು ದಿನ ಟೈಂ ಕೊಡಿ. ನಾನು ಯೋಚಿಸಿ ಉತ್ತರ ಹೇಳ್ತೀನಿ.
“ದಯವಿಟ್ಟು ನಮ್ಮನ್ನು ನಿರಾಶೆಗೊಳಿಸಬೇಡಿ” ಎಂದು ಹೇಳಿ ಕೈಮುಗಿದರು ಸದಾಶಿವರಾವ್.
“ರಾಜಮ್ಮ, ಏನ್ಮಾಡ್ತೀರಾ?”
“ನನಗೇನೂ ಗೊತ್ತಾಗ್ತಿಲ್ಲ. ಆಕೆ ಕೆಳಗಡೇನೇ ಇರಬೇಕು. ಈ ರೂಮ್‌ನವರು ಏನಂತಾರೋ ಏನೋ?”
“ಹೇಳುವುದನ್ನು ಹೇಳಿ ನೋಡೋಣ ಏನನ್ನುತ್ತಾರೋ?” ಎಂದರು ಗೌರಮ್ಮ.
ಮೊದಲು ಸರಸಮ್ಮನಿಗೆ ಈ ವಿಚಾರ ಹೇಳಿದರು.

“ರಾಜಮ್ಮ-ನಾನು ಭವಾನಿ ರೂಂನಲ್ಲರ‍್ತೇನೆ. ನಿಮ್ಮ ರೂಮ್‌ನಲ್ಲಿ ಹೊಸಬರನ್ನು ಇಟ್ಟುಕೊಳ್ಳಿ. ತಿಂಗಳಿಗೆ 30,000 ರೂ. ಆದಾಯ ಬಂದರೆ ನಿಮಗೇ ಒಳ್ಳೆಯದಲ್ವಾ?”
“ನೀವು ಹೇಳುವುದೂ ನಿಜ. ಭವಾನಿ ಇದಕ್ಕೆ ಒಪ್ತಾರಾ?”
“ಖಂಡಿತಾ ಒಪ್ತಾರೆ. ನಿಮಗೆ ಚಿಂತೆ ಬೇಡ.”
ಮರುದಿನವೇ ರಾಜಲಕ್ಷ್ಮಿ ಸದಾಶಿವರಾಯರಿಗೆ ಫೋನ್ ಮಾಡಿದರು.
“ನಾಳೆ ನಿಮ್ಮ ಹೆಂಡತಿಯನ್ನು ಕರೆದುಕೊಂಡು ಬನ್ನಿ. ಆದರೆ ಒಂದು ಕಂಡೀಷನ್…..”
“ಏನು ಮೇಡಂ?”
“ಅವರು ಇಲ್ಲಿರಲು ಒಪ್ಪಬೇಕು. ನೀವು ಬಲವಂತದಿಂದ ಅವರನ್ನು ಸೇರಿಸಬಾರದು.”
“ಅವಳು ಒಪ್ಪಿದ್ದಾಳೆ. ನಾವು ನಾಳೆ 11 ಗಂಟೆಗೆ ರ‍್ತೇವೆ.”
“ಹಾಗೇ ಮಾಡಿ” ಎಂದರು ರಾಜಲಕ್ಷ್ಮಿ.

ಮರುದಿನ 11 ಗಂಟೆಗೆ ಸರಿಯಾಗಿ ಸದಾಶಿವರಾವ್ ಹೆಂಡತಿಯ ಜೊತೆ ಆಗಮಿಸಿದರು.
ಕೃಷ್ಣವೇಣಿ ಲಕ್ಷಣವಾದ ಹೆಂಗಸು. ಒಂದು ಒಗೆದ ರೇಷ್ಮೆ ಸೀರೆಯುಟ್ಟು ತುರುಬು ಹಾಕಿಕೊಂಡಿದ್ದರು. ಮಾಂಗಲ್ಯ, ಬಿಳಿ ಹರಳಿನ ಓಲೆ, ಎರಡು ಕೈಗಳಲ್ಲಿದ್ದ ಒಂದೊಂದು ಜೊತೆ ಚಿನ್ನದ ಬಳೆಗಳು, ದುಂಡು ಕುಂಕುಮ, ಚಿಕ್ಕ ಬಿಳಿ ಹರಳಿನ ಮೂಗುಬಟ್ಟು ಆಕೆಗೆ ಸೊಬಗು ನೀಡಿತ್ತು.
“ಸದಾಶಿವರಾವ್ ಹೆಂಡತಿಯ ಪರಿಚಯ ಮಾಡಿಸಿದರು.”
“ನಮಸ್ಕಾರ.”
“ನಿಮಗೆ ಇಲ್ಲಿರಲು ಇಷ್ಟವಿದೆಯಾ?”
“ನಮ್ಮನೆ ಬಿಟ್ಟು ಬೇರೆ ಎಲ್ಲಾ ಸ್ಥಳಗಳೂ ನನಗಿಷ್ಟ. ನಾನು ಅಡ್ಜಸ್ಟ್ ಮಾಡಿಕೊಳ್ತೇನೆ. ಯೋಚಿಸಬೇಡಿ” ಎಂದರು ಕೃಷ್ಣವೇಣಿ.
ರಾಜಲಕ್ಷ್ಮಿಗೆ ಅವರ ಉತ್ತರದಿಂದ ಆಶ್ಚರ್ಯವಾಯಿತು.

“ನಿಮಗೆ ಪ್ರತ್ಯೇಕ ರೂಮ್ ಕೊಡಕ್ಕಾಗಲ್ಲ. ನೀವು ನನ್ನ ರೂಮ್‌ನಲ್ಲೇ ಇರಬೇಕಾಗತ್ತೆ.”
“ನನಗೆ ಒಪ್ಪಿಗೆಯಿದೆ.”
ಸದಾಶಿವರಾವ್ ಒಂದು ಲಕ್ಷ ಕೊಡಲು ಮುಂದಾದರು.
“ತಿಂಳಿಗೆ 30,000 ರೂ. ಕೊಡಿ ಸಾಕು. ಅವರಿಗೆ ಬೇಕಾದ ಸಾಮಾನುಗಳನ್ನು ತಂದುಕೊಡಿ. ಅವರ ಕೈಯಲ್ಲಿ ಕೊಂಚ ದುಡ್ಡು ಕೊಟ್ಟಿರಿ. ಇಂತಹ ಸ್ಥಳಗಳಲ್ಲಿ ತುಂಬಾ ದುಡ್ಡು ಇಟ್ಟುಕೊಳ್ಳುವುದು ಬೇಡ.”
ಸದಾಶಿವರಾವ್ ಹಣ ಕೊಟ್ಟು ರಸೀದಿ ಪಡೆದರು. ಸರಸಮ್ಮ ಅವರ ಜೊತೆ ಮಾತನಾಡುತ್ತಾ ಕುಳಿತರು. ಭವಾನಿ, ಭುವನೇಶ್ವರಿಗೂ ಅವರ ಪರಿಚಯವಾಯಿತು. ಒಂದೂವರೆ ಹೊತ್ತಿಗೆ ಡೈನಿಂಗ್ ಹಾಲ್‌ಗೆ ಸರಸಮ್ಮನ ಜೊತೆ ಬಂದರು.

“ಇವರು ಕೃಷ್ಣವೇಣಿ ನಮ್ಮ ಆಶ್ರಮದ ಹೊಸ ಸದಸ್ಯರು” ರಾಜಲಕ್ಷ್ಮಿ ಅಲ್ಲಿದ್ದವರಿಗೆ ಪರಿಚಯಿಸಿದರು.
“ಮೇಡಂ ನಾನೇ ನನ್ನ ಪರಿಚಯ ಹೇಳ್ತೀನಿ. ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಕೃಷ್ಣವೇಣಿ. ಜೂನಿಯರ್ ಕಾಲೇಜಿನಲ್ಲಿ ಇಂಗ್ಲೀಷ್ ಲೆಕ್ಚರರ್ ಆಗಿ 30 ವರ್ಷ ಕೆಲಸಮಾಡಿ ನಿವೃತ್ತಳಾಗಿದ್ದೇನೆ. ನನಗೆ ಗಂಡ ಇದ್ದಾರೆ. ಮಗ-ಸೊಸೆ ಇಬ್ಬರೂ ಇಂಜಿನಿಯರ್. ಮಗಳು ಮದುವೆಯಾಗಿ ಹೈದರಾಬಾದ್‌ನಲ್ಲಿದ್ದಾಳೆ. ಸ್ವಂತ ಮನೆ ಇದೆ. ಬೇಕಾದಷ್ಟು ಹಣ ಇದೆ. ಎಲ್ಲವೂ ಇದೆ. ಆದರೆ ನೆಮ್ಮದಿಯಿಲ್ಲ.”
“ಹಾಗೆ ಯಾಕೆ ಅಂದುಕೊಳ್ತೀರಾ? ನೊಂದುಕೊಳ್ಳಬೇಡಿ ಎಲ್ಲಾ ಸರಿಹೋಗತ್ತೆ” ಭವಾನಿ ಹೇಳಿದರು.
ಕೃಷ್ಣವೇಣಿ ಅವರ ಜೊತೆ ಮಾತನಾಡುತ್ತಾ ಊಟ ಮುಗಿಸಿದರು. ಅಡಿಗೆ ತುಂಬಾ…. ಚೆನ್ನಾಗಿದೆ ಎಂದು ಸರ್ಟಿಫಿಕೇಟ್ ಕೊಟ್ಟರು.
ಊಟದ ನಂತರ ವೃದ್ಧಾಶ್ರಮ ನೋಡಿ ಬಂದರು. ಲಿಫ್ಟ್ ಉಪಯೋಗಿಸದೆ ಮೆಟ್ಟಲುಗಳನ್ನೇರಿ ಇಳಿದರು. ನಂತರ ತಮ್ಮ ಬಟ್ಟೆಗಳನ್ನು ವಾರ್ಡ್ರೋಬ್‌ನಲ್ಲಿ ಜೋಡಿಸಿಟ್ಟರು.

“ಅರ್ಧ ಗಂಟೆ ಮಲಗಿ ಕೃಷ್ಣವೇಣಿ ಸಾಯಂಕಾಲ ವಾಕಿಂಗ್ ಹೋಗಿ ಬರೋಣ.”
“ಇವತ್ತು ನಾನು ವಾಕಿಂಗ್‌ಗೆ ಬರಲ್ಲ. ನಾಳೆಯಿಂದ ಬರ‍್ತೀನಿ.”
“ಹಾಗೆ ಮಾಡಿ. ಬೇಕಾದರೆ ಗೌರಮ್ಮನ ಜೊತೆ ಪಕ್ಕದಲ್ಲಿರುವ ಗಣೇಶನ ಗುಡಿಗೆ ಹೋಗಿಬನ್ನಿ.”
“ಆಗಲಿ” ಎಂದರು ಕೃಷ್ಣವೇಣಿ.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ
https://www.surahonne.com/?p=42131

-ಸಿ.ಎನ್. ಮುಕ್ತಾ

5 Responses

  1. ಕಾದಂಬರಿಯ ಧಾರಾವಾಹಿ ದಿನದಿನಕ್ಕೆ ಕುತೂಹಲ ಮೂಡಿಸಿಕೊಂಡು ಹೋಗುತ್ತಿದೆ ಎಲ್ಲಾ ಸವಲತ್ತುಗಳನ್ನು ಹೊಂದಿದ್ದರೂ ಅಂತರಂಗದ ತಳಮಳ..ಎಂತಹದು ಎಷ್ಟು ಸೂಕ್ಷ್ಮ ಈಗ ತಾನೇ ಆಗಮುಸಿರುವ ಮಹಿಳೆಯ..ಅಂತರಂಗ ಯಾವುದರಿಂದ ಘಾಸಿಯಾಗಿದೆ..ನೋಡಬೇಕು..

  2. ಪದ್ಮಾ ಆನಂದ್ says:

    ಹೊಸ ಹೊಸ ತಿರುವುಗಳೊಂದಿಗೆ ಅತ್ಯಂತ ಕುತೂಹಲಭರಿತವಾಗಿ ಸಾಗುತ್ತಿದೆ ಕಾದಂಬರಿ.

  3. ಶಂಕರಿ ಶರ್ಮ says:

    ಹೊಸ ತಿರುವು ಪಡೆದ ಕಥೆ ಕುತೂಹಲಕಾರಿಯಾಗಿದೆ. ಕೃಷ್ಣವೇಣಿಯವರ ಕ್ಷುದ್ರ ಮನಸ್ಥಿತಿ ಈ ವೃದ್ಧಾಶ್ರಮದಲ್ಲಿ ಸರಿಯಾಗಿವುದೋ ಕಾದು ನೋಡೋಣ….
    ಚಂದದ ಕಥಾಹಂದರಕ್ಕಾಗಿ ಮುಕ್ತಾ ಮೇಡಂ ಅವರಿಗೆ ಧನ್ಯವಾದಗಳು.

  4. ನಯನ ಬಜಕೂಡ್ಲು says:

    ಒಂದು ವಯಸ್ಸು ಕಳೆದ ಮೇಲೆ ಮನುಷ್ಯರ ಸ್ಥಿತಿ ಹೇಗೆಲ್ಲ ಆಗಬಹುದು ಅನ್ನುವುದನ್ನು ಹೇಳುತ್ತದೆ ಈ ವಾರದ ಕಂತು. ವಾಸ್ತವ. ಮನೆಯಿಂದ ಹೊರ ಬರುವ ಸಲುವಾಗಿ ಕೃಷ್ಣವೇಣಿಯವರು ನಾಟಕ ಮಾಡುತ್ತಿದ್ದಾರೇನೋ ಅನ್ನಿಸುತ್ತದೆ.

  5. ಮುಕ್ತ c. N says:

    ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಹಾಗೂ ಅಭಿಪ್ರಾಯ ತಿಳಿಸಿರುವ ಆತ್ಮೀಯ ಓದುಗರಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: