ಒಮ್ಮೊಮ್ಮೆ ಹಾಗೆ…..

ಸಾಲುಗಳ ಹಕ್ಕಿಯೊಂದು
ಬಾನಿಗೆ ಹಾರಿ
ಅದೆಲ್ಲಿಗೋ ಹೋಗಿ
ಮತ್ತೆ ಬರುತ್ತದೆ ಹಾಗೆ ಹೀಗೆ…..
ಕಡಲ ತೆರೆಗಳ
ಆ ಅಲೆಗಳೂ ತಿರು
ತಿರುಗಿ ಮರಳಿ ದಡಕ್ಕೆ
ಬರುತ್ತದೆ ಸುಮ್ಮನೆ…….
ಹಾರಿ ಹೋದ
ಮೋಡಗಳ ರಾಶಿ
ಚದುರಿ ಹೋದರೂ
ಮತ್ತೆ ಹನಿಯಾಗಿ ಬೀಳುತ್ತದೆ……
ಮರವೊಂದರ ಮರೆಗೆ
ಅರಳಿದ ಹೂಗಳು
ಸುವಾಸನೆಯ ಚೆಲ್ಲಿ
ಹರಡುವುದು ಊರಗಲಕೆ…..
ಚಿತ್ತ ಭಿತ್ತಿಯ ಒಳಗೆ
ನೂರೆಂಟು ರೇಖೆಗಳು
ಬೆಳಕಿನ ಚಿತ್ರ ಬರೆದು
ನಸು ನಗುತ್ತವೆ ಹಾಗೆ…….
ಒಮ್ಮೊಮ್ಮೆ ಹಾಗೆ ಆಡಿದ
ಮಾತು ಮನದಿ ಕುಣಿದು
ಒಳಿತು ಹಂಚಿರೆ ನೆಲಕೆ
ಮತ್ತೆ ಚಿಗುರುವ ಜೀವ ಬಳ್ಳಿ
–ನಾಗರಾಜ ಬಿ.ನಾಯ್ಕ,ಹುಬ್ಬಣಗೇರಿ.
ಕುಮಟಾ.
ಸಕಾರಾತ್ಮಕ ಚಿಂತನೆಯುಳ್ಳ ಕವನ ಚೆನ್ನಾಗಿದೆ ಸಾರ್
ಧನ್ಯವಾದಗಳು……ಓದು ಒಂದು ವಿಶೇಷ ಅನುಭವ. ಅದು ಭಾವಗಳನ್ನು ಕಟ್ಟಿಕೊಡುತ್ತದೆ. ಆಪ್ತ ಓದಿಗೆ ಆಧಾರವಾಗುತ್ತದೆ. ಧನ್ಯವಾದಗಳು ತಮ್ಮ ಓದಿಗೆ…….
ಚಂದದ ಅರ್ಥಪೂರ್ಣ, ಭಾವಪೂರ್ಣ ಕವನ
ಓದುವ ಧನ್ಯತೆಗೆ ಧನ್ಯವಾದಗಳು……
ಉತ್ತಮ ಆಶಯದೊಂದಿಗೆ ಮೂಡಿ ಬಂದ ಸುಂದರ ಕವನ
ಪ್ರತಿ ಓದು ವಿಶೇಷ ಅನುಭವ. ಅದು ಒಂದು ಹರಿವಿನ ಉಳಿವು. ತಮ್ಮ ಓದಿಗೆ ಧನ್ಯವಾದಗಳು………
ಚೆನ್ನಾಗಿದೆ ಕವನ
ಓದಿನ ಸುತ್ತ ಒಳಿತಿನ ಭಾವ ತುಂಬಿರುತ್ತದೆ. ಪ್ರತಿ ಓದು ವಿಚಾರಗಳ ಅನುಭವ. ತಮ್ಮ ಆಪ್ತ ಓದಿಗೆ ಧನ್ಯವಾದಗಳು….
ನಯವಾದ ಹದವಾದ ಅವಲೋಕನ
ಅದನು ಹಾಗೇ ಬರೆಹವಾಗಿಸುವ ಪ್ರತಿಭಾನ !
ನಿಮ್ಮ ಸಾಲುಗಳು ಸೋತ ಬದುಕಿನ ಸಾಂತ್ವನ !!
ಧನ್ಯವಾದ ಓದುವಂತಾದುದಕೆ; ವಂದನೆ ಸುರಹೊನ್ನೆಗೆ
ಓದಿನ ಧನ್ಯತೆಯ ಸುತ್ತ ಭಾವಗಳ ಹರಿವು ಇರುತ್ತದೆ. ವಿಶೇಷತೆಗಳು ಜೊತೆಯಾದರೆ ಓದು ಪರಿಪೂರ್ಣವಾಗುತ್ತದೆ. ತಮ್ಮ ಆಪ್ತ ಓದು ಹಾಗೂ ಪ್ರತಿಕ್ರಿಯೆ ಎರಡೂ ಇಷ್ಟವಾಯಿತು ಸರ್. ಕವಿತೆಯ ಸಾಲುಗಳು ನಿಲುವುಗಳಲ್ಲಿ ಸಾಗಿದರೆ ಉಳಿಯುತ್ತದೆ. ತಮ್ಮ ಆಪ್ತ ಪ್ರತಿಕ್ರಿಯೆ ಆ ನಿಲುವುಗಳನ್ನು ವಿಶೇಷವಾಗಿ ನೋಡುತ್ತದೆ. ತುಂಬಾ ತುಂಬಾ ಧನ್ಯವಾದಗಳು…. ತಮ್ಮ ಅಮೂಲ್ಯ ಓದಿಗೆ……..
ಪ್ರಕೃತಿಯೊದಿಗಿನ ಒಡನಾಟ ಸಾಲುಗಳಾಗಿ ಹೊರಹೋಮ್ಮಿದಾಗ ಚಂದದ ಕವಿತೆಯಾದದ್ದು ನಿಜಕ್ಕೂ ಮನಸ್ಸಿಗೆ ಮುದ ನೀಡಿತು.ನಿಮ್ಮ ಪಯಣ ಹೀಗೆಯೇ ಸಾಗಲಿ ಸರ್
ಧನ್ಯವಾದಗಳು ತಮ್ಮ ಸೂಕ್ಷ್ಮ ಸಂವೇದನೆಯ ಓದಿಗೆ… ಹಾಗೂ ಪ್ರತಿಕ್ರಿಯೆಗೆ……..