ಪರಾಗ

ವಾಟ್ಸಾಪ್ ಕಥೆ 57 : ಸೂಕ್ತ ಸಲಹೆ.

Share Button

ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು


ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ತನ್ನ ಅಕ್ಕಪಕ್ಕದ ರಾಜ್ಯಗಳನ್ನೆಲ್ಲ ಗೆದ್ದು ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಆಸೆ. ಅದಕ್ಕಾಗಿ ಹಲವಾರು ಬಾರಿ ಪ್ರಯತ್ನಿಸಿದರೂ ಏಕೋ ಪ್ರತಿ ಬಾರಿಯೂ ಅವನಾಸೆ ಈಡೇರಲಿಲ್ಲ. ಅವನಿಗೆ ನಿರಾಸೆಯಾಯಿತು. ಹೀಗೇ ಏನು ಮಾಡಬೇಕೆಂಬುದು ತಿಳಿಯದೇ ಆಲೋಚನೆಯಲ್ಲಿ ಮುಳುಗಿದ್ದ.

ಒಮ್ಮೆ ಮನರಂಜನೆಗಾಗಿ ಬೇಟೆಯಾಡಲು ಹೋದ. ಕಾಡಿನಲ್ಲಿ ಮುಂದುವರೆಯುತ್ತ ಒಬ್ಬನೇ ಪರಿವಾರದಿಂದ ಬಹಳ ದೂರ ಹೋಗಿಬಿಟ್ಟನು. ಅಷ್ಟು ಹೊತ್ತಿಗೆ ಮಧ್ಯಾನ್ಹದ ವೇಳೆಯಾಗಿ ಹಸಿವು ಮತ್ತು ಬಾಯಾರಿಕೆ ಕಾಡತೊಡಗಿತು. ಹಾಗೆಯೇ ಇಲ್ಲಿ ಎಲ್ಲಿಯಾದರೂ ಜನವಸತಿ ಇದೆಯೇ? ಎಂದು ಪರಿಶೀಲಿಸತೊಡಗಿದ. ದೂರದಲ್ಲಿ ಒಂದು ಪುಟ್ಟ ಗುಡಿಸಲಿತ್ತು. ರಾಜನು ಅಲ್ಲಿಗೆ ಹೋದ. ಬಾಗಿಲ ಬಳಿ ಒಂದು ಹಣ್ಣಹಣ್ಣು ಮುದುಕಿ ಕುಳಿತಿದ್ದಳು. ಅವಳಿಗೆ ಈತನ್ಯಾರೆಂಬುದು ತಿಳಿಯಲಿಲ್ಲ. ರಾಜನು ತನಗೆ ಬಾಯಾರಿಕೆಯಾಗಿದೆ ನೀರು ಬೇಕೆಂದ. ಮುದುಕಿ ಆತನನ್ನು ಒಳಕ್ಕೆ ಕರೆದು ಚಾಪೆಯ ಮೇಲೆ ಕುಳ್ಳಿರಿಸಿ ತಣ್ಣನೆಯ ಮಡಕೆಯಲ್ಲಿದ್ದ ನೀರನ್ನು ಕುಡಿಯಲು ಕೊಟ್ಟಳು. ಮಧ್ಯಾನ್ಹದ ವೇಳೆಯಾಗಿದೆ. ಆದ್ದರಿಂದ ನನ್ನ ಮನೆಯಲ್ಲಿರುವ ಆತಿಥ್ಯವನ್ನು ಸ್ವೀಕರಿಸೆಂದು ಕೋರಿದಳು. ರಾಜನಿಗೂ ಹಸಿವಾಗಿದ್ದರಿಂದ ಹೂಂ ಎಂದ. ಮುದುಕಿ ಬಿಸಿಬಿಸಿಯಾದ ರಾಗಿ ಅಂಬಲಿಯನ್ನು ತಟ್ಟೆಯೊಂದರಲ್ಲಿ ಹಾಕಿ ಉಣಬಡಿಸಿದಳು. ರಾಜನು ಆತುರಾತುರಾತುರವಾಗಿ ಬಿಸಿಗಂಜಿಯ ಮಧ್ಯಭಾಗಕ್ಕೆ ಕೈ ಇಟ್ಟ ತಕ್ಷಣ “ಹಾ !” ಎಂದು ಮುಟ್ಟಿದ ಬಿಸಿಯಿಂದ ನರಳಿದ. ಇದನ್ನು ನೋಡುತ್ತಿದ್ದ ಮುದುಕಿ ಹೇಳಿದಳು. “ಅಯ್ಯಾ ಬಿಸಿ ಗಂಜಿಯನ್ನು ಹಾಗೆ ಊಟಮಾಡಬಾರದು. ಮೊದಲು ಅಂಚಿನಲ್ಲಿ ಸ್ವಲ್ಪ ಸ್ವಲ್ಪವೇ ತಿನ್ನುತ್ತಾ ನಂತರ ತಣ್ಣಗಾಗಿರುವ ಮಧ್ಯಭಾಗದಲ್ಲಿ ಕೈಹಾಕಬೇಕು” ಎಂದಳು. ಆಕೆಯ ಮಾತನ್ನು ಕೇಳಿದ ಕೂಡಲೇ ರಾಜನಿಗೆ ಏನೋ ಹೊಳೆದಂತಾಯ್ತು. ಗಂಜಿಯನ್ನು ತೃಪ್ತಿಯಿಂದ ಸೇವಿಸಿ ಅಜ್ಜಿಗೆ ಧನ್ಯವಾದಗಳನ್ನು ಹೇಳಿ ರಾಜಧಾನಿಗೆ ವಾಪಸ್ಸಾದನು.

ತನ್ನ ಮುಂದಿನ ಪ್ರಯತ್ನದಲ್ಲಿ ಮುದುಕಿ ಹೇಳಿದಂತೆ ರಾಜ್ಯದ ಅಂಚಿನಲ್ಲಿರುವ ಸಣ್ಣಪುಟ್ಟ ರಾಜ್ಯಗಳನ್ನು ಸೋಲಿಸುತ್ತಾ ಅವರೆಲ್ಲರನ್ನು ತನ್ನ ಸಾಮಂತರನ್ನಾಗಿ ಮಾಡಿಕೊಂಡ. ತನ್ನ ಮುಂದಿನ ಪ್ರಯತ್ನದಲ್ಲಿ ತನ್ನ ಸೈನ್ಯದೊಡನೆ ಸಾಮಂತರ ಸೇನೆಗಳನ್ನು ಒಟ್ಟುಗೂಡಿಸಿ ದೂರವಿದ್ದ ದೊಡ್ಡ ರಾಜ್ಯದ ಮೇಲೆ ಯುದ್ಧಕ್ಕೆ ಹೋದ. ಜಯಗಳಿಸಿದ. ತನ್ನ ರಾಜ್ಯವನ್ನು ಇಷ್ಟದಂತೆ ವಿಸ್ತರಿಸಿಕೊಂಡ. ತೃಪ್ತಿಯಿಂದ ರಾಜ್ಯವಾಳಿದ. ಕಾಡಿನಲ್ಲಿ ಭೇಟಿಯಾದ ಮುದುಕಿಯೊಬ್ಬಳು ರಾಜನಿಗೆ ವಿಜಯದ ಮಾರ್ಗತೋರಿದಳು. ಹೀಗೆ ಒಮ್ಮೊಮ್ಮೆ ಅನಿರೀಕ್ಷಿತವಾಗಿ ನಮಗೆ ಯಾರಿಂದಲೋ ಮಾರ್ಗದರ್ಶನ ಸಾಧ್ಯವಾಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದವರು ನಾವು.

ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು

10 Comments on “ವಾಟ್ಸಾಪ್ ಕಥೆ 57 : ಸೂಕ್ತ ಸಲಹೆ.

  1. ಒಳ್ಳೆಯ ಸಂದೇಶ ನೀಡಿದ ಕಥೆ. ಯಾವಾಗ ಎಲೆಲ್ಲಿ ಯಾರು ಯಾರಿಂದ ಜ್ಞಾನೋದಯ ವಾಗುವುದೋ ತಿಳಿದವರ್ಯಾರು?

  2. ರಾಜನಿಗೆ ಅಯಾಚಿತವಾಗಿ ಸಕಾಲದಲ್ಲಿ ವೃದ್ಧೆಯಿಂದ ದೊರೆತ ಪರೋಕ್ಷ ಮಾರ್ಗದರ್ಶನವು ಅವನ ಮುಂದಿನ ಏಳಿಗೆಯನ್ನು ರೂಪಿಸಿತು ಎಂಬ ಈ ಕಥೆಯು ಎಲ್ಲರಿಗೂ ಅನ್ವಯಿಸುವುದಾಗಿದೆ. ಉತ್ತಮ ಸಂದೇಶ ಹಾಗೂ ಚಂದದ ಚಿತ್ರ ನಿಮ್ಮ ಕಥೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ… ನಾಗರತ್ನ ಮೇಡಂ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *