ಕಾದಂಬರಿ : ತಾಯಿ – ಪುಟ 16
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕೆಲಸದ ಚಿಕ್ಕಮ್ಮ ತನ್ನ ಓರಗಿತ್ತಿ ಪುಟ್ಟಮ್ಮನನ್ನೇ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿದಳು.
“ಅವಳ ಗಂಡ ಕುಡುಕ. ಎರಡು ಮಕ್ಕಳು ಚಿಕ್ಕವು. ಇವಳು ದುಡಿಯಲೇ ಬೇಕು. ಸಹಾಯ ಮಾಡ್ರವ್ವ” ಎಂದಳು.
“ಕೈ, ಬಾಯಿ ಶುದ್ಧವಾಗಿರಬೇಕು. ಯಾರ ಹತ್ತಿರಾನೂ ಜಗಳವಾಡಬಾರದು” ರಾಜಲಕ್ಷ್ಮಿ ಎಚ್ಚರಿಸಿದರು.
ಗೌರಮ್ಮ ಚಿಕ್ಕಮ್ಮನ ಸಹಾಯದಿಂದ ತನಗೊಬ್ಬ ಅಸಿಸ್ಟೆಂಟನ್ನು ಹುಡುಕಿಕೊಂಡರು. ಪದ್ಮಾವತಿ ಕೇಟರಿಂಗ್ ನಡೆಸುತ್ತಿದ್ದರು. ಗಂಡ ಹೋದ ಮೇಲೆ ಆ ಕೆಲಸ ನಿಲ್ಲಿಸಿದ್ದರು. ಮಗ ಓದುತ್ತಿದ್ದ.
“ನನ್ನ ಮಗ ಓದಿ ಒಂದು ಒಳ್ಳೆಯ ಕೆಲಸಕ್ಕೆ ಸೇರಬೇಕು. ಅಡಿಗೆ ಕೆಲಸ ಮಾಡಬಾರದು. ಅವನನ್ನು ಓದಿಕೋದೇ ನನ್ನ ಗುರಿ” ಎಂದಿದ್ದರು.
ಪದ್ಮಾವತಿ ಒಳ್ಳೆಯ ಕೆಲಸವಂತೆ ನಿಧಾನಿ. ಗೌರಮ್ಮ ಹೇಳಿದಂತೆ ಕೇಳುತ್ತಿದ್ದರು. ಆದ್ದರಿಂದ ರಾಜಲಕ್ಷ್ಮಿಗೆ ಸಮಾಧಾನವಾಯಿತು.
“ಚಿನ್ಮಯಿ ನೀನು ಇನ್ಮೇಲೆ ಯಾವ ಕೆಲಸಕ್ಕೂ ಕೈ ಹಾಕಬೇಡ. ಓದಿನಕಡೆ ಗಮನಹರಿಸು” ಗೌರಮ್ಮ ಮಗಳಿಗೆ ಕಟ್ಟುನಿಟ್ಟಾಗಿ ಹೇಳಿದರು.
“ಸರೀಮ್ಮ. ನನಗೂ ಲೈಬ್ರರಿಗೆ ಹೋಗುವುದಿರತ್ತೆ. ಬೆಳಿಗ್ಗೆ ತಿಂಡಿ ತಿಂದು ಅದನ್ನೇ ತೊಗೊಂಡು ಹೋಗ್ತೀನಿ.”
“ಹಾಗೇ ಮಾಡು.”
ಭಾಸ್ಕರ ಕೂಡ ಬ್ಯುಸಿಯಾಗಿದ್ದ. “ಅಮ್ಮಾ ನಾನು ಇನ್ನು ಮೇಲೆ ವಾರಕ್ಕೆ ಒಂದು ಅಥವಾ ಎರಡು ಸಲ ರ‍್ತೀನಿ. ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೂ ಬೇರೆ ಕೆಲಸ ಸಿಕ್ಕಿದೆ.”
“ಒಬ್ಬರು ಸಾಹಿತಿ ಇದ್ದಾರೆ. ಅವರು ಬರೆಯುವ ಕಥೆ, ಕಾದಂಬರಿ, ಲೇಖನ ಅವರ ಮನೆಯಲ್ಲೇ ಟೈಪ್ ಮಾಡಿಕೊಡಬೇಕು. ತಿಂಗಳಿಗೆ 15,000ರೂ. ಕೊಡ್ತಾರಂತೆ. ನೀವು ಸಂಬಳ ಕೊಡೋದು ಬೇಡ.”
“ಪ್ರತಿ ತಿಂಗಳೂ 5,000ರೂ. ಪೋಸ್ಟ್ ಆಫೀಸ್‌ನಲ್ಲಿ ಇಡ್ತೀನಿ. ನಿನ್ನ ಕೈಲಿ ಕೊಡಲ್ಲ. ಬೇಡ ಅನ್ನಬೇಡ.”
“ಆಗಲೀಮ್ಮ. ನೀವು ಯಾವಾಗ ಫೋನ್ ಮಾಡಿದರೂ ನಾನು ರ‍್ತೀನಿ. ಪ್ರತಿವಾರ ಬಂದು ಅಕೌಂಟ್ಸ್ ನೋಡ್ತೀನಿ. ನೀವು ಪ್ರತಿದಿನ ಏನು ಖರ್ಚು ಮಾಡಿದ್ದೀರಾಂತ ಒಂದು ಬುಕ್‌ನಲ್ಲಿ ಬರೆದಿಡಬೇಕು.”
“ಆಗಲಿ ಬರೆದಿಡ್ತೀನಿ.”
“ಅಮ್ಮಾ ಒಂದು ರೀತಿಯಲ್ಲಿ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿದೆ. ನೀವು ಕೊಂಚ ಜೋರಾಗಬೇಕು. ಕೆಳಗಿನವರದು ಸಮಸ್ಯೆಯಿಲ್ಲ. ಮೇಲುಗಡೆ ಇರುವವರದೇ ಸಮಸ್ಯೆ.”
“ಅವರು ಏನು ಮಾಡಿದ್ರು?”
“ಎರಡು ದಿನಗಳ ಹಿಂದೆ ಪೌಡರ್, ಶಾಂಪೂ, ಬಿಂದಿ ಇಲ್ಲಾಂತ ಗೊಣಗಾಡಿದರಂತೆ. ಚಿನ್ಮಯಿ ತಂದ್ರೂಂತ ಕಾಣತ್ತೆ.”
“ಚಿನ್ಮಯಿ ಯಾಕೆ ಹಣ ಖರ್ಚು ಮಾಡಿದಳು?”
“ಅವರು ಖರ್ಚು ಮಾಡಲಿಲ್ಲ. ಅದ್ಯಾರೋ ಜೆ.ಪಿ.ನಗರದಲ್ಲಿ ಸೋಪು-ಗೀಪು ಕೊಡ್ತಿದ್ರಲ್ಲಾ…. ಅವರನ್ನು ಕೇಳಿ ತೆಗೆಸಿಕೊಂಡು ಬಂದರಂತೆ.”
“ಸರಿಬಿಡು” ಎಂದರು ರಾಜಲಕ್ಷ್ಮಿ.
ಅಂದು ರಾತ್ರಿ ಅವರಿಗೆ ಪುನಃ ನಿದ್ರೆ ಬರಲಿಲ್ಲ. ತಾನು ಜೋರಾಗದಿದ್ದರೆ ವೃದ್ಧಾಶ್ರಮ ನಡೆಸುವುದು ಸಾಧ್ಯವಿಲ್ಲ ಎನ್ನಿಸಿತು. “ಕೆಲವರು ಒಳ್ಳೆಯ ಮಾತಿಗೆ ಬಗ್ಗುತ್ತಾರೆ. ಕೆಲವರಿಗೆ ಕಟುಮಾತುಗಳೇ ಆಯುಧ. ಮೊದಲು ನಾನು ಬದಲಾಗಬೇಕು. ನನ್ನ ಒಳ್ಳೆಯತನದಿಂದ ಕೆಲವು ಕೆಲಸಗಳು ನಡೆಯುವುದಿಲ್ಲ” ಎಂದುಕೊಂಡರು.
ನಾಲ್ಕು ದಿನಗಳ ನಂತರ ಅವರು ಜೋರು ಮಾಡುವ ಸಂದರ್ಭ ಒದಗಿತು. ಭಾನುವಾರ ಡಾ|| ಜಯಲಕ್ಷ್ಮಿ ದಂಪತಿಗಳು ಬಂದು ಆರೋಗ್ಯ ತಪಾಸಣೆ ಮಾಡಿ ಹೋಗಿದ್ದರು. ಕೊಂಚವೂ ತೊಂದರೆಯಿಲ್ಲದಂತೆ ಆ ಕೆಲಸ ಅಚ್ಚುಗಟ್ಟಾಗಿ ನಡೆದಿತ್ತು. ರಾಜಲಕ್ಷ್ಮಿಗೆ ತುಂಬಾ ಖುಷಿಯಾಗಿತ್ತು.
ಅದರ ಮರುದಿನ ಬೆಳಿಗ್ಗೆ ತಿಂಡಿಯ ಕಾರ್ಯಕ್ರಮದ ನಂತರ ಮಹಡಿಮೇಲೆ ಚಿಕ್ಕಮ್ಮ ಕೂಗಾಡುತ್ತಿರುವುದು ಕೇಳಿಸಿತು. ತಕ್ಷಣ ರಾಜಲಕ್ಷ್ಮಿ ಅಲ್ಲಿಗೆ ಧಾವಿಸಿದರು.
“ಏನು ಚಿಕ್ಕಮ್ಮ ಸಮಾಚಾರ?”
“ಅಮ್ಮಾ ನಾನು ಕೂಗಾಡಿದ್ದು ನೀವು ನೋಡಿದ್ದೀರಾ? ಇವತ್ತು ಇವರು ಕೂಗಾಡುವ ಹಾಗೆ ಮಾಡಿದ್ದಾರೆ.”
“ಏನು ಮಾಡಿದರು?”
“ಅಮ್ಮ ಸಿಂಕ್ ನೊಡಿ ನಿಮಗೆ ಗೊತ್ತಾಗತ್ತೆ.”
ಸಿಂಕ್‌ನಲ್ಲಿ ತಿಂಡಿ ತಿಂದಿದ್ದ ತಟ್ಟೆಗಳು ಬಿದ್ದಿದ್ದವು.
“ಅಮ್ಮಾ ಇದನ್ನೆಲ್ಲಾ ನಾನೇ ತೊಳೆಯಬೇಕಂತೆ.”
“ಯಾರು ಹೇಳಿದ್ರು?”
“ನಾನೇ ಹೇಳಿದ್ದು “ಸೌಭಾಗ್ಯ ಹೇಳಿದರು. ಅವರ ಜೊತೆ 15 ಮಂದಿ ಇದ್ದರು.”
“ಚಿಕ್ಕಮ್ಮ ಯಾಕೆ ತೊಳೆಯಬೇಕು?”
“ಕೆಳಗಿನವರ ತಟ್ಟೆಗಳನ್ನು ತೊಳೆಯುತ್ತಾಳೆ. ನಮ್ಮ ತಟ್ಟೆ ಯಾಕೆ ತೊಳೆಯಬಾರದು?”
“ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತೀನಿ. ಗೌರಮ್ಮ ಪ್ರೇಮಮ್ಮನ್ನ ಕರೆಯಿರಿ.
ಪ್ರೇಮಮ್ಮ ಬಂದು “ಏನಮ್ಮಾ?” ಎಂದು ಕೇಳಿದರು.
“ಸೌಭಾಗ್ಯ ಹೇಳಿದ್ದು ಕೇಳಿದ್ರಾ?”
“ಅವರ ಹೇಳಿಕೆಯನ್ನೆಲ್ಲಾ ಬರೆದು, ಅವರುಗಳ ಕೈಲಿ ಸಹಿ ಮಾಡಿಸಿಕೊಡಿ.”
“ಯಾಕಮ್ಮಾ?”
“ಅವರ ಸಮಸ್ಯೆಗೆ ಪರಿಹಾರ ಹುಡುಕಬೇಕಲ್ಲಾ ಅದಕ್ಕೆ……….”
ರಾಜಲಕ್ಷ್ಮಿ ಅಷ್ಟು ಮಾತ್ರ ಹೇಳಿ ತಮ್ಮ ಕೋಣೆಗೆ ತೆರಳಿದರು.
ಸೌಭಾಗ್ಯ ತಾನೇ ಗೆದ್ದವಳಂತೆ ದೂರುಗಳನ್ನು ಹೇಳಿದರು. ಅವಳ ಜತೆ 10 ಜನ ಸಹಿ ಹಾಕಿದರು.
ರಾಜಲಕ್ಷ್ಮಿ ಕೆಳಗಡೆ ಬೇಜಾರು ಮಾಡಿಕೊಂಡು ಕುಳಿತಿದ್ದರು. ಗೌರಮ್ಮ ಅವರಿಗೆ ಕಾಫಿ ತಂದುಕೊಟ್ಟು ಕೇಳಿದರು. “ಅಮ್ಮಾ ಏನು ಯೋಚನೆ ಮಾಡ್ತಿದ್ದೀರಾ?”
“ಏನೂ ತೋಚುತ್ತಾ ಇಲ್ಲ ಗೌರಮ್ಮ. ನಾನು ಏನೇ ಒಳ್ಳೆಯದು ಮಾಡಲು ಹೋದರೂ ಹೀಗಾಗತ್ತಲ್ಲಾ ಏನ್ಮಾಡೋದು?”
“ಚಂದ್ರಪ್ಪಂಗೆ ಫೋನ್ ಮಾಡಿ.”
“ಬೇಡ. ಅವರಿಗೆ ಈ ವಿಷಯ ತಿಳಿಸೋದು ಬೇಡ. ಅವರು ಅಗತ್ಯಕ್ಕಿಂತ ಹೆಚ್ಚು ಸಹಾಯ ಮಾಡಿದ್ದಾರೆ. ಅವರಿಗೆ ಪುನಃ ತೊಂದರೆ ಕೊಡೋದು ಬೇಡ. ನಾನೇ ಸಾಯಂಕಾಲದ ಹೊತ್ತಿಗೆ ಏನಾದರೂ ಪರಿಹಾರ ಸಿಗಬಹುದಾ ನೋಡ್ತೀನಿ.”
ಗೌರಮ್ಮ ಮರು ಮಾತಾಡದೆ ಅಡಿಗೆ ಮನೆ ಹೊಕ್ಕರು. ಆದಿನ ಸೊಪ್ಪಿನ ಹುಳಿ, ತಿಳಿಸಾರು, ಅನ್ನ ಬೇಕಾದವರಿಗೆ ರಾಗಿಮುದ್ದೆ ಮಾಡಬೇಕಿತ್ತು.
ಮಧ್ಯಾಹ್ನ 11/2ಯ ಹೊತ್ತಿಗೆ ಅನಿರೀಕ್ಷಿತವಾಗಿ ಚಂದ್ರಮೋಹನದಾಸ್ ದಂಪತಿಗಳು ಬಂದಿಳಿದರು.
“ಮೈಸೂರಿಗೆ ಬಂದ ನಂತರ ನಿಮ್ಮನ್ನು ನೋಡದೆ ಹೋಗಲು ಮನಸ್ಸಾಗಲಿಲ್ಲ.”
“ಮೊದಲು ಊಟ ಮಾಡಿ. ನಂತರ ಮಾತಾಡೋಣ.”
ಎಲ್ಲರ ಊಟ ಮುಗಿಯಿತು. ಗೌರಮ್ಮ ಮೇಲ್ಗಡೆ ಇದ್ದವರಿಗೆ ಹೇಳಿದರು. “ತಟ್ಟೆ ತಂದರೆ ಊಟ ಇಲ್ಲದಿದ್ದರೆ ಇಲ್ಲ.”
ಊಟದ ನಂತರ ಚಂದ್ರಮೋಹನ್‌ದಾಸ್ ಹೇಳಿದರು. “ಬಹುಶಃ ನಾವು ಇನ್ನುಮುಂದೆ ಮೈಸೂರಿಗೆ ಬರುವುದು ಕಡಿಮೆಯಾಗಬಹುದು.”
“ಯಾಕೆ?”
“ನಮ್ಮ ಮನೆ ಮಾರಾಟವಾಯ್ತು. ಕೋದಂಡರಾಮ ಶೆಟ್ಟರು ಅನ್ನುವವರು ಕೊಂಡುಕೊಂಡರು. ಇವತ್ತು ರಿಜಿಸ್ಟ್ರೇಷನ್ ಆಯಿತು. ಅಲ್ಲಿ ನೀಲಕಂಠ ಸಿಕ್ಕಿದ್ದ.”
“ನೀಲಕಂಠಾನಾ?”
“ಹುಂ. ಅವನು ನಮ್ಮ ಮನೆಯಲ್ಲಿ ವೃದ್ಧಾಶ್ರಮ ಶುರುಮಾಡ್ತಿದ್ದಾನಂತೆ. ಸುಮಾರು 15 ಜನರಿಗೆ ಊಟ, ತಿಂಡಿ, 10 ಜನರಿಗೆ ಪೇಯಿಂಗ್ ಗೆಸ್ಟ್ ಅಕಾಮಿಡೇಷನ್ ದುಡ್ಡು ಕೊಟ್ಟು ಇರುವವರ ಹತ್ತಿರ 2 ಲಕ್ಷ ಅಡ್ವಾನ್ಸ್ ತೆಗೆದುಕೊಂಡಿದ್ದಾನಂತೆ.”
“ಬುದ್ಧಿವಂತ ಬಿಡಿ.”
“ನಿಮ್ಮ ಕೆಲಸ ಹೇಗಿದೆ?”
“ಯಾಕೆ ಈ ಕೆಲಸಕ್ಕೆ ಕೈಹಾಕಿದೇಂತ ಪಶ್ಚಾತ್ತಾಪ ಪಡುವಂತೆ ಆಗಿದೆ.”
“ಯಾಕೆ ಹಾಗಂತಿದ್ದೀರಾ?”
“ದಿನಕ್ಕೊಂದು ಸಮಸ್ಯೆ. ಅದು ಪರಿಹಾರವಾಯ್ತು ಅಂದುಕೊಳ್ಳುವ ವೇಳೆಗೆ ಮತ್ತೊಂದು ಸಮಸ್ಯೆ.”
“ಚಂದ್ರಪ್ಪ ನೀವಿಬ್ಬರೂ ನನ್ನ ಜೊತೆ ಮೇಲುಗಡೆಗೆ ಬನ್ನಿ. ನಾನು ಸಮಸ್ಯೆ ಏನೂಂತ ಹೇಳ್ತೀನಿ.”
“ಗೌರಮ್ಮಾ….”
“ನೀವು ಸುಮ್ಮನಿರಿ” ಎಂದರು ಗೌರಮ್ಮ.
ಚಂದ್ರಮೋಹನ್‌ದಾಸ್ ದಂಪತಿಗಳನ್ನು ನೋಡಿ ಎಲ್ಲರೂ ಬಂದು ನಮಸ್ಕಾರ ಹೇಳಿ ಮಾತನಾಡಿಸಿದರು.
“ಎಲ್ಲರೂ ಹೇಗಿದ್ದೀರಾ?”
“10-12 ಜನರು ಕಂಪ್ಲೇಂಟ್ ಮಾಡಿದ್ದಾರೆ ಸರ್. ನಾವೆಲ್ಲಾ ತುಂಬಾ ಆರಾಮವಾಗಿದ್ದೇವೆ.”
“ಅವರ ಕಂಪ್ಲೇಂಟ್ ಏನು?”
ಗೌರಮ್ಮ ವಿವರಿಸಿದರು.
“ಕೆಳಗಡೆ ಇರುವವರು ತಿಂಗಳಿಗೆ 30,000 ರೂ. ಕೊಡ್ತಾರೆ. ಇಬ್ಬರು ಕೆಲಸದವರಿಗೂ ಬಟ್ಟೆ ವಾಷಿಂಗ್ ಮಿಷನ್‌ಗೆ ಹಾಕಿ ಒಣಗಿಹಾಕಕ್ಕೆ, ತಟ್ಟೆ ತೊಳೆಯಕ್ಕೆ, ಐದೈದು ಸಾವಿರ ಕೊಡ್ತಾರೆ. ಮಧುಮತಿ ಮೇಡಂ, ಗೋದಾಮಣಿ ಮೇಡಂ, ನಾಗಮಣಿ ಮೇಡಂ ಇನ್ನೂ ಒಂದಿಬ್ಬರು ವೃದ್ಧಾಶ್ರಮದ ಲೈಟ್‌ಚಾರ್ಜ್, ವಾಟರ್ ಚಾರ್ಜ್ ತಾವೇ ಕಟ್ರಾ ಇದ್ದಾರೆ. ಇವರೇನು ಸಹಾಯ ಮಾಡ್ತಿದ್ದಾರೆ ಕೇಳಿ.”
“ನಾವೇನು ಮಾಡಲು ಸಾಧ್ಯ?” ಸೌಭಾಗ್ಯ ಕೇಳಿದರು.
“ಹಿಂದೆ ಇದ್ದ ವೃದ್ಧಾಶ್ರಮದಲ್ಲಿ ಬಚ್ಚಲು ಉಜ್ಜಿತ್ತಿದ್ರಿ. ಟಾಯ್ಲೆಟ್ ತೊಳೆಯುತ್ತಿದ್ರಿ. ಮನೆ ಕಸಗುಡಿಸಿ, ಸಾರಿಸ್ತಿದ್ರಿ. ಬಿಸಿನೀರು ಸಿಗ್ತಿರಲಿಲ್ಲ. ಹೊಟ್ಟೆ ತುಂಬಾ ಊಟ ಕೂಡ ಸಿಗ್ತಿರಲಿಲ್ಲಾ…. ಆ ದಿನಗಳು ಮರೆತು ಹೋದವಾ ನಿಮಗೆ?” ಗೌರಮ್ಮ ಕೇಳಿದರು.
ಯಾರೂ ಮಾತಾಡಲಿಲ್ಲ.
“ತರಕಾರಿ ನಾನು ಒಬ್ಬಳೇ ಬಿಡಿಸ್ತಿದ್ರೂ ಕೈ ಹಾಕಲ್ಲ ಸರ್. ಹರಟ್ತಾ ಮಲಗಿರ್ತಾರೆ. ಹತ್ತಿರ ಒಂದು ಅಂಗಡಿಯ ಗೋಡೌನ್ ಇದೆ. ಅಲ್ಲಿ ಮಾಲೀಕರು “ಪ್ಯಾಕಿಂಗ್ ಕೆಲಸಕ್ಕೆ ಬರಲಿ ತಿಂಗಳಿಗೆ 5,000 ರೂ. ಕೊಡ್ತೀನಿ ಅಂದ್ರು. ಇವರಲ್ಲಿ ಒಬ್ಬರೂ ಕೆಲಸ ಒಪ್ಪಿಕೊಳ್ಳಲಿಲ್ಲ.”
“ಯಾಕೆ?”
“ಸುಖ ಜಾಸ್ತಿಯಾಗಿದೆ. ನನಗೆ 60 ವರ್ಷ. ನನ್ನ ಕೈಲಿ ಮೊದಲಿನ ಹಾಗೆ ಕೆಲಸ ಮಾಡಕ್ಕಾಗಲ್ಲ. ಉಳಿದವರಿಗೆ ಎಲ್ಲಾ ಬಿಟ್ಟಿಬೇಕು. ರಾಜಮ್ಮ ಇವರಿಗೆ ಆಶ್ರಯಕೊಟ್ಟು ಬಾಳಾ ತಪ್ಪು ಮಾಡಿದ್ರು.”
“ಗೌರಮ್ಮ, ರಾಜಲಕ್ಷ್ಮಿಯವರು ಇವರು ಅಪ್ಲಿಕೇಷನ್ ಕೊಟ್ಟಿದ್ದಕ್ಕೆ ಏನು ಹೇಳಿದರು?” ಮಾಧುರಿ ಕೇಳಿದರು.
“ಏನೂ ಹೇಳಲಿಲ್ಲ. ಆದರೆ ಬಹಳ ಬೇಜಾರು ಮಾಡಿಕೊಂಡಿದ್ದಾರೆ.”
“ಅವರು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನಾನೇ ಇದಕ್ಕೆ ಪರಿಹಾರ ಹೇಳ್ತೀನಿ” ಎಂದರು ಚಂದ್ರಮೋಹನದಾಸ್.
“ನಮ್ಮ ವೃದ್ಧಾಶ್ರಮದಲ್ಲಿದ್ದವರು ಬನ್ನಿ” ಎಂದು ಕರೆದರು ಮಾಧುರಿ.
ಎಲ್ಲರೂ ಬಂದು ಕುಳಿತರು.
“ನಿಮ್ಮಲ್ಲಿ ಎಷ್ಟು ಜನರಿಗೆ ಈ ವೃದ್ಧಾಶ್ರಮದಲ್ಲೇ ಇರಲು ಇಷ್ಟ?”
ಸೌಭಾಗ್ಯಳ ಗುಂಪು ಬಿಟ್ಟು ಉಳಿದವರು ಕೈಯೆತ್ತಿದರು.
“ಸೌಭಾಗ್ಯ ನಿಮಗೆಲ್ಲಾ ಒಂದು ಗುಡ್‌ನ್ಯೂಸ್.”
“ಹೇಳಿ ಸರ್….”
“ನೀಲಕಂಠ ನೀವುಗಳಿದ್ದ ಹಳೆ ಮನೆಯಲ್ಲೇ ವೃದ್ಧಾಶ್ರಮ ಆರಂಭಿಸಿದ್ದಾನೆ. ನೀವು ಅಲ್ಲಿಗೆ ಹೋಗಬಹುದು.”
“ಸರ್, ಅಲ್ಲಿಗಾ?”
“ಅಲ್ಲಿಗೆ ಹೋದರೆ ನೀವು ಚುರುಕಾಗ್ತೀರ. ಒಗ್ಗಿರುವ ಜಾಗ ನೀಲಕಂಠ ಚೆನ್ನಾಗಿ ಕೆಲಸ ತೆಗೆದುಕೊಳ್ತಾನೆ…..”
“ಬೇಡಿ ಸರ್. ನಮಗೆ ಜಾಗ ಇಷ್ಟವಿಲ್ಲ.”
“ಹಾಗಾದ್ರೆ ನೀವು ನಿಮಗಿಷ್ಟ ಬಂದ ಕಡೆಗೆ ಹೋಗಬಹುದು. ನಿಮಗೆ ಇಲ್ಲಿರಕ್ಕೆ ಇಷ್ಟವಿಲ್ಲ. ನೀವು ಕೇಳಿದ ಸೌಲಭ್ಯಗಳನ್ನು ಒದಗಿಸಲು ರಾಜಲಕ್ಷ್ಮಿ ಮೇಡಂಗೆ ಸಾಧ್ಯವಿಲ್ಲ. ನಮ್ಮ ಆಶ್ರಯದಲ್ಲಿದ್ದವರು, ಅವರು ಸುಖವಾಗಿರಬೇಕು’ ಎನ್ನುವ ಉದ್ದೇಶದಿಂದ ನಿಮ್ಮನ್ನು ಇಲ್ಲಿಗೆ ಕರೆತಂದೆ. ನಿಮಗೆ ಇಂತಹ ಜಾಗವೇ ಇಷ್ಟವಾಗಲಿಲ್ಲಾಂದರೆ ನಾನೇನೂ ಮಾಡಲು ಸಾಧ್ಯವಿಲ್ಲ.”
“ಹಾಗಲ್ಲ ಸರ್…”
“ನಾಳೆಯ ಒಳಗೆ ಜಾಗ ಖಾಲಿಮಾಡಿ. ರಾಜಲಕ್ಷ್ಮಿ ಮೇಡಂಗೆ ನೀವು ಇಲ್ಲಿರೋದು ಇಷ್ಟವಿಲ್ಲ.”
ಮಾತು ಮುಕ್ತಾಯ ಮಾಡಿ ದಂಪತಿಗಳು ಎದ್ದರು. ಅವರು ಕೆಳಗೆ ಬಂದಾಗ ರಾಜಲಕ್ಷ್ಮಿ ಆಫೀಸ್‌ನಲ್ಲಿದ್ದರು.
“ಮೇಡಂ ನೀವು ಯೋಚಿಸುವ ಅಗತ್ಯವಿಲ್ಲ. ನಮ್ಮ ಮನೆ ಮಾರಾಟವಾಗಿರೋದು ನಿಜ. ಬೆಳಿಗ್ಗೆ ಚಿನ್ಮಯಿ ಆ ಮನೆ ಹತ್ತಿರ ಬಂದಿದ್ದಳು. ಗೌರಮ್ಮ ಅವಳ ಬಳಿ ಇಲ್ಲಿಯ ವಿಚಾರ ಹೇಳಿದ್ರಂತೆ. ಅವಳು ರಾತ್ರಿ ನನಗೆ ಫೋನ್ ಮಾಡಿದ್ದಳು. ಆದ್ದರಿಂದ ನಮ್ಮ ಮನೆ ಮಾರಾಟದ ವಿಚಾರಕ್ಕೆ ಬಂದವರು ಇಲ್ಲಿಗೂ ಬಂದ್ವಿ. ಇನ್ನು ಮೇಲೆ ಇವರೆಲ್ಲಾ ಬಾಯಿ ಮುಚ್ಚಿಕೊಂಡು ಇರ್ತಾರೆ, ನೀವು ಧೈರ್ಯವಾಗಿರಿ.”
“ಇವರೆಲ್ಲಾ ಪುನಃ ಬಾಲ ಬಿಚ್ಚಲ್ಲಾಂತ ಏನು ಗ್ಯಾರಂಟಿ?”
“ಗೌರಮ್ಮನವರೇ ಮಹಡಿಮೇಲೆ ಏನು ನಡೆಯಿತೂಂತ ಹೇಳಿ.”
ಅಷ್ಟರಲ್ಲಿ ಚಿನ್ಮಯಿ ಟೀ ತಂದಳು.
“ನೀನು ಯಾವಾಗ ಬಂದಿ ಚಿನ್ಮಯಿ?” ರಾಜಲಕ್ಷ್ಮಿ ಕೇಳಿದರು.
“ಅರ್ಧಗಂಟೆಯಾಯ್ತು ಅಮ್ಮಾ. ಅಪ್ಪನಿಗೆ ಔಷಧಿ ತೆಗೆದುಕೊಂಡು ಹೋಗಬೇಕು. ಅಮ್ಮನ್ನ ರ‍್ಕೊಂಡು ಹೋಗೋಣಾಂತ ಬಂದೆ. ಅಪ್ಪ ಅಮ್ಮನಿಗೋಸ್ಕರ ಹಂಬಲಿಸ್ತಿದ್ದಾರೆ. ನಾಳೆ ಬಂದು ಬಿಡ್ತಾರೆ.”
“ರಾಜಮ್ಮ ನಾನು, ಭವಾನಿ ಅಡಿಗೆ ಕೆಲಸ ನೋಡಿಕೊಳ್ತೇವೆ ಯೋಚಿಸಬೇಡಿ” ಎಂದರು ಸರಸಮ್ಮ.
ಗೌರಮ್ಮ ಮಗಳ ಜೊತೆ ಹೊರಟರು. ಸುಮಾರು ಎಂಟುಗಂಟೆಯ ಹೊತ್ತಿಗೆ ಸೌಭಾಗ್ಯ ತನ್ನ ಗುಂಪಿನೊಡನೆ ಕೆಳಗೆ ಬಂದರು. ರಾಜಲಕ್ಷ್ಮಿ ಆ ದಿನದ ಲೆಕ್ಕ ಬರೆಯುತ್ತಾ ಕುಳಿತಿದ್ದರು.
ಸೌಭಾಗ್ಯನಾದಿಯಾಗಿ ಎಲ್ಲರೂ ಅವರ ಕಾಲಿಗೆ ಬಿದ್ದು ಕೇಳಿದರು. “ನಮ್ಮನ್ನು ದಯವಿಟ್ಟು ಕ್ಷಮಿಸಿಬಿಡಿ ಮೇಡಂ. ನಮ್ಮಿಂದ ದೊಡ್ಡ ತಪ್ಪಾಗಿ ಹೋಗಿದೆ. ಇನ್ನು ಮುಂದೆ ಸರಿಯಾಗಿರ್ತೇವೆ”
“ನಿಮ್ಮ ಮಾತುಗಳನ್ನು ಹೇಗೆ ನಂಬುವುದು?”
“ನಮ್ಮ ಸ್ಥಾನ ನಾವು ತಿಳಿದುಕೊಳ್ಳಬೇಕಿತ್ತು. ನಾವು ಕೆಳಗಿನವರ ಜೊತೆ ಪೈಪೋಟಿ ಮಾಡಿದ್ದು ತಪ್ಪು. ಪುನಃ ನಮ್ಮಿಂದ ಇಂತಹ ತಪ್ಪಾದರೆ ನಮ್ಮನ್ನು ಕಳುಹಿಸಿಬಿಡಿ.”
“ನಿಮ್ಮ ಚಂದ್ರಮೋಹನ್ ಸಾಹೇಬರಿಗೋಸ್ಕರ ಈ ಸಲ ನಿಮ್ಮನ್ನು ಕ್ಷಮಿಸಿದ್ದೇನೆ. ಇದು ಪುನರಾವರ್ತನೆ ಆಗಬಾರದು ಅಷ್ಟೆ.”
“ಖಂಡಿತಾ ಇಲ್ಲ ಮೇಡಂ” ಎಂದರು ಒಕ್ಕೊರಲಿನಿಂದ. ರಾಜಲಕ್ಷ್ಮಿ ಸಮಾಧಾನದ ನಿಟ್ಟುಸಿರು ಬಿಟ್ಟರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=42054
-ಸಿ.ಎನ್. ಮುಕ್ತಾ
ಮೆತ್ತಗಿದ್ದರೆ ಮೈಮೇಲೆ ಏರುತ್ತಾರೆ ಜೋರಾದರೆ ಕಾಲಿಗೆ ಬೀಳುತ್ತಾರೆಂಬ ಗಾದೆಯ ಸತ್ಯದ ಅನಾವರಣ…ಇವತ್ತಿನ ಧಾರಾವಾಹಿಯಲ್ಲಿ…ಬಂದಿದೆ..ಸಂಘಟನೆ ಎಷ್ಟು ಕಷ್ಟ ಎಂಬುದರ..ಸೂಕ್ಷ್ಮ ನೋಟ..ಮೇಡಂ
ಹೊಸ ಬಗೆಯ ವ್ಯವಹಾರವನ್ನು ನಡೆಸಲು ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುತ್ತಾ ಮುನ್ನಡೆಯುವ ತಂತ್ರವನ್ನು ಸಿದ್ಧಿಸಿಕೊಳ್ಳುವ ಅನಿವಾರ್ಯತೆಯನ್ನು ಒತ್ತಿ ಹೇಳುವ ಈ ಸಲದ ಪುಟವು ಸೊಗಸಾಗಿ ಮೂಡಿಬಂದಿದೆ ಮೇಡಂ.
ಏನೇ ಮಾಡಲು ಹೊರಟರು ಒಂದಲ್ಲ ಒಂದು ತೊಡುಕು ಇದ್ದೇ ಇರುತ್ತದೆ. ಚೆನ್ನಾಗಿ ಸಾಗುತ್ತಿದೆ ಕಥೆ
ಒಂದೊಳ್ಳೆಯ ಕೆಲಸ ಮಾಡಹೊರಟ ರಾಜಲಕ್ಷ್ಮಿಯವರಿಗೆ ಬಂದೊರಗಿದ ಕಷ್ಟ ಪರಿಹಾರವಾದದ್ದು, ನಿರಾಳವಾದಂತೆನಿತು.
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಹಾಗೂ ಅಭಿಪ್ರಾಯ ತಿಳಿಸಿರುವ ಆತ್ಮೀಯ ಓದುಗರಿಗೆ ಧನ್ಯವಾದಗಳು.