ವಾಟ್ಸಾಪ್ ಕಥೆ 55: ಜೀವವೆಷ್ಟು ಅಮೂಲ್ಯವಾದುದು.
ಒಂದು ಚಿಕ್ಕ ಹಡಗಿನಲ್ಲಿ ಹಲವಾರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಒಬ್ಬ ತನ್ನೊಡನೆ ತನ್ನ ನಾಯಿಯನ್ನು ಕರೆತಂದಿದ್ದ. ನಾಯಿಯು ಎಂದೂ ನಾವೆಯಲ್ಲಿ ಕುಳಿತು ಪ್ರಯಾಣ ಮಾಡಿರಲಿಲ್ಲ. ಅದಕ್ಕೆ ಒಂದೇ ಕಡೆ ತೆಪ್ಪಗೆ ಕುಳಿತಿರಲು ಆಗುತ್ತಿರಲಿಲ್ಲ. ಅದರಿಂದ ಅತ್ತಿಂದ ಇತ್ತ, ಇತ್ತಿಂದ ಅತ್ತ ನೆಗೆದಾಡುತ್ತಿತ್ತು. ಪ್ರಯಾಣಿಕರಿಗೆ ನಾಯಿ ಕಚ್ಚುತ್ತಾನೋ ಎಂಬ ಭಯದಿಂದ ಅತ್ತಿತ್ತ ದೂರ ಸರಿಯುತ್ತಿದ್ದರು. ಪ್ರಯಾಣಿಕರ ಸರಿದಾಟದಿಂದಾಗಿ ಹಡಗು ಜೋರಾಗಿ ಅಲುಗಾಡತೊಡಗಿತು. ಪ್ರಯಾಣಿಕರಿಗೆ ಇದರಿಂದಾಗಿ ಏನಾದರೂ ಅಪಾಯವುಂಟಾಗಬಹುದೆಂಬ ಭಯ ಕಾಡಿತ್ತು. ಪ್ರಯಾಣಿಕರಲ್ಲಿ ಒಬ್ಬ ಸಾಧು ಕೂಡ ಇದ್ದನು. ಅವನು ಇದನ್ನೆಲ್ಲ ಗಮನಿಸಿ ನಾಯಿಯ ಒಡೆಯನಿಗೆ “ನೀವು ಏನೂ ತಿಳಿಯದಿದ್ದರೆ ಸ್ವಲ್ಪ ಹೊತ್ತು ನಿಮ್ಮ ನಾಯಿಯನ್ನು ನನ್ನ ವಶಕ್ಕೆ ಕೊಡಿ. ನಾನು ಅದಕ್ಕೆ ಬುದ್ಧಿ ಕಲಿಸಿ ಒಂದೇ ಕಡೆ ಕೂಡುವಂತೆ ಮಾಡುತ್ತೇನೆ” ಎಂದ. ನಾಯಿಯ ಮಾಲೀಕ “ನನ್ನ ನಾಯಿಗೆ ಏನೂ ಅಪಾಯವಾಗದಂತೆ ಮಾಡುವುದಾದರೆ ಅಡ್ಡಿಯಿಲ್ಲ”ಎಂದು ಒಪ್ಪಿ ನಾಯಿಯನ್ನು ಸಾಧುವಿಗೆ ನೀಡಿದ. ಸಾಧುವು ನಾಯಿಯನ್ನು ಕೆಲವರ ಸಹಾಯದಿಂದ ಎತ್ತಿ ಹಡಗಿನಿಂದ ಹೊರಗೆ ನೀರಿನೊಳಕ್ಕೆ ಎಸೆದುಬಿಟ್ಟ. ಆ ನಾಯಿ ತನ್ನ ಪ್ರಾಣ ಉಳಿಸಿಕೊಳ್ಳಲು ಕಾಲುಗಳನ್ನು ಬಡಿಯುತ್ತಾ ಹಡಗಿನ ಹಿಂದೆಯೇ ಈಜುತ್ತಾ ಬರುತ್ತಿತ್ತು. ಸ್ವಲ್ಪ ಹೊತ್ತು ಈ ಆಟ ಮುಂದುವರೆಯಿತು. ನಂತರ ಸಾಧುವು ಹಡಗಿನ ವೇಗವನ್ನು ಕಡಿಮೆ ಮಾಡಿಸಿ ಸಹಪ್ರಯಾಣಿಕರ ಸಹಾಯದಿಂದ ನಾಯಿಯನ್ನು ಹಡಗಿನೊಳಕ್ಕೆ ಎಳೆದುಕೊಂಡ. ನಾಯಿಗೆ ಗಾಭರಿಯಿಂದ ಮುಕ್ತಿ ಸಿಕ್ಕಿತು. ಅದು ಒಂದೆಡೆ ತೆಪ್ಪಗೆ ಬಾಲಮುದುರಿಕೊಂಡು ಕುಳಿತುಕೊಂಡಿತು.
ಎಲ್ಲರೂ ಆಶ್ಚರ್ಯದಿಂದ ಇದು ಹೇಗಾಯಿತೆಂದು ಸಾಧುವನ್ನು ಕೇಳಿದರು. ಜೀವದ ಪ್ರಾಮುಖ್ಯತೆ ನಾಯಿಗೆ ನೀರಿಗೆ ಬಿದ್ದಾಗ ಅರಿವಾಯಿತು. ಅದು ಹೇಗಾದರೂ ರಕ್ಷಣೆ ಬಯಸಿತು. ನಾನು ಮತ್ತೆ ಅದನ್ನು ಹಡಗಿನೊಳಗೆ ಎಳೆದುಕೊಂಡಾಗ ಇಲ್ಲಿ ತನಗೆ ಭದ್ರತೆಯಿದೆ ಎಂದು ನೆಮ್ಮದಿಯಾಗಿ ಸುಮ್ಮನೆ ಕುಳಿತಿತು ಎಂದ. ಅದನ್ನು ಕೇಳಿದ ಇತರರು ಸಾಧುವಿನ ಮಾತಿನಲ್ಲಿದ್ದ ಅಂತರಾರ್ಥವನ್ನು ಗ್ರಹಿಸಿ ಅವರಿಗೆ ವಂದಿಸಿದರು. ನೆಮ್ಮದಿಯಿಂದ ಯಾವುದೇ ಅಪಾಯವಿಲ್ಲದೆ ತಮ್ಮ ಊರನ್ನು ತಲುಪಿದರು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಒಳ್ಳೆಯ ಸಂದೇಶವನ್ನು ನೀಡುವ ಚಿಕ್ಕ, ಚೊಕ್ಕ ಕಥೆ ಸೊಗಸಾಗಿದೆ.
ಓದಿನ ಪ್ರತಿ ಕ್ರಿಯೆಗೆ ಧನ್ಯವಾದಗಳು ಪದ್ಮಾ ಮೇಡಂ
ಕಥೆಯಷ್ಷೇ ಚಿತ್ರ ಸೊಗಸಾಗಿದೆ.
ಧನ್ಯವಾದಗಳು ಮೇಡಂ
ಅರ್ಥ ಪೂರ್ಣವಾಗಿದೆ ಮೇಡಂ,
ಏಕಕಾಲಕೆ ಹಲವು ಬೋಧೆಗಳು.
ಅಭಿನಂದನೆ ನಿಮಗೆ.
ಧನ್ಯವಾದಗಳು ಮಂಜುಸಾರ್
ಸ್ವಂತ ಜೀವದ ಮೇಲಿನ ಪ್ರೀತಿ ಪ್ರಾಣಿಗಳನ್ನೂ ಬಿಟ್ಟಿಲ್ಲ. ಉತ್ತಮ ಸಂದೇಶಯುಕ್ತ ಕಥೆಯು ಸೂಕ್ತ ರೇಖಾಚಿತ್ರದೊಂದಿಗೆ ಸೊಗಸಾಗಿ ಮೂಡಿಬಂದಿದೆ ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಉತ್ತಮ ಸಂದೇಶವನ್ನು ಒಳಗೊಂಡ ಕಥೆ
ಧನ್ಯವಾದಗಳು ನಯನಮೇಡಂ