ವ್ಯಾಘ್ರ……. ವ್ಯಥೆ…..ಕಥೆ

ನೋಡುಗರ ಎದೆ ನಡುಗಿಸುವ ಪಟ್ಟೆ ಹುಲಿಯೇ ನಾನು
ಕಾಡೇ ಮಾರ್ಧ್ವನಿಸುವಂತೆ ಘರ್ಜಿಸುವ ಹೆಬ್ಬುಲಿಯೇ ತಾನು
ಎನ್ನ ಹೆಜ್ಜೆ ಸಪ್ಪಳ ಕೇಳಿ ಹರಿಣಗಳು ಪೇರಿ ಕೀಳುತ್ತಿದ್ದವು
ನನ್ನ ಆಗಮನದ ಸುದ್ದಿಯ ಕಪಿಗಳು ಕಿರಿಚಾಡಿ ಸಾರುತ್ತಿದ್ದವು
ಬಾಯಿಯ ತೆರೆದು ಅಲ್ಲಾಡದೆ ಕುಳಿತ ಮೊಸಳೆ ಮೆಲ್ಲನೆ ನೀರೊಳಗೆ ಜಾರುತ್ತಿತ್ತು
ಕಾಳಗಕ್ಕೆ ನಿಲ್ಲದೆ ಒಂಟಿ ಸಲಗ ದಾರಿ ಬಿಟ್ಟು ತೆರಳುತ್ತಿತ್ತು
ನಡೆಯುವ ಗತ್ತನ್ನು ಕಂಡ ಪ್ರಾಣಿಗಳು ದೂರವೇ ನಿಲ್ಲುತ್ತಿದ್ದವು
ಬೆಂಕಿ ಉಗುಳುವ ಕೆಂಡದುಂಡೆಯಂತಾ ಕಣ್ಣುಗಳು ಭಯ ಹುಟ್ಟಿಸುತ್ತಿದ್ದವು
ಕಾಲ ಸವೆದಂತೆಲ್ಲಾ ದೇಹದ ಬಲವೆಲ್ಲಾ ಬತ್ತಿ ಹೋಯಿತು
ಪಟ್ಟೆ ಪಟ್ಟೆಯ ಚರ್ಮವೆಲ್ಲಾ ಜೋತು ಬಿದ್ದು ಕಳೆಗುಂದಿತು
ಎನ್ನ ಕೋರೆ ಹಲ್ಲು ಕಂಡು ಹೆದರಿ ನಡುಗುವರಿಲ್ಲ
ಘರ್ಜನೆಗೆ ಬೆಚ್ಚಿ ಬೀಳುವವರಿಲ್ಲ ನೋಡಿ ಓಡುವರಿಲ್ಲ
ಮೈಯಲ್ಲಿ ಕಸುವು ಇದ್ದಾಗ ಮಾತ್ರ ಈ ಜೀವನವೆಲ್ಲಾ
ಶಕ್ತಿಗುಂದಿದ ಮರುಕ್ಷಣವೇ ಕೊಡುವ ಬೆಲೆ ಈಗಿಲ್ಲ
ಗಟ್ಟಿಯಿದ್ದಾಗ ಮೆರೆಯದೆ ಸರಳತನವ ಮರೆಯದೆ
ಒಂದಲ್ಲ ಒಂದು ದಿನ ಕೃಶವಾಗಿ ಬಾಗಲೇಬೇಕೆಂದು ಅರಿಯಬೇಕಿದೆ
– ಶರಣಬಸವೇಶ ಕೆ. ಎಂ
ಚೆನ್ನಾಗಿದೆ ಸಾರ್
ಅರ್ಥಪೂರ್ಣ ಕವಿತೆ ಮನಸ್ಸನ್ನು ಎಚ್ಚರಿಸುತ್ತಿದೆ.
ವ್ಯಾಘ್ರತನವನು ಚೆನ್ನಾಗಿ ಸೆರೆ – ಹಿಡಿದಿದ್ದೀರಿ.
ಮುಂದುವರಿಸಿ. ಶುಭಗಳು.
ಅರ್ಥವತ್ತಾದ ಸೊಗಸಾದ ಕವನ.
Nice