ಕಾವ್ಯ ಭಾಗವತ 32: ಪ್ರಿಯವ್ರತ

32.ಪಂಚಮ ಸ್ಕಂದ
ಅಧ್ಯಾಯ – 1
ಪ್ರಿಯವ್ರತ
ಮಹರ್ಷಿ ನಾರದರಿಂದ
ತತ್ಪೋಪದೇಶ ಪಡೆದ
ರಾಜೋತ್ತಮ, ಭಾಗವತೋತ್ತಮನಾಗಿ
ಸದಾ ಆತ್ಮಾನಂದನುಭವಿಯಾಗಿಯೂ
ಪುನಃ ರಾಜ್ಯಭಾರದ
ಸೋಲೆ ಸಂಕೋಲೆಯಲಿ
ಪ್ರಿಯವ್ರತ ಬಂದಿಯಾದ ಪರಿ,
ಶ್ರೀಹರಿ ಚಿತ್ತದ ಪರಿ
ಭಕ್ತಿಯೋಗವ ಸಾಧಿಸಿದ
ಮಹನೀಯ
ಕುಟುಂಬದಲ್ಲಿದ್ದೂ
ಪರಮಾತ್ಮನ ಪಾದಾರವಿಂದಗಳ
ಮಕರಂದ ರಸಪಾನ
ವನ್ನನನುಭವಿಸಿದ
ವಿರಕ್ತಿ ಭಾವಿ ಪ್ರಿಯವ್ರತನ
ಅವಶ್ಯ ಸೇವೆ
ಈ ಜಗದ ಭೂಮಂಡಲಕೆ
ಅದರ ಒಳಿತು ಅಭಿವೃದ್ಧಿಗೆ ಬೇಕೆಂಬ
ಬ್ರಹ್ಮದೇವನಾಣತಿಯಂತೆ
ಮುಕ್ತಿಪಥಕೆ
ಸ್ವಲ್ಪ ವಿರಾಮವಿತ್ತು
ರಾಜಪಥವ ಹಿಡಿದ ಪ್ರಿಯವ್ರತ
ರಾಜಪಥ, ಕರ್ತವ್ಯಪಥ,
ಸಕಲ ಮನುಜ ಪಥ,
ಭಗವಂತನಿಚ್ಚೆಯ ಪಥ
ನಮ್ಮೆಲ್ಲ ಸುಖ ದುಃಖ,
ಭಯ, ಮೋಹಗಳೆಲ್ಲ
ಅವನ ಸಂಕಲ್ಪ
ಈ ಜಗದ ಪಶುಪಾಲಕ ಭಗವಂತ
ಅವನು ಹಾಕಿದ ಮೂಗುದಾರಕೆ,
ನಿಯಂತ್ರಣಕೆ ತಲೆಯಾಡಿಸುವ
ಪಶುಗಳು ನಾವು
ಅವನಿಚ್ಚೆಯಂತೆ
ಪ್ರಿಯವ್ರತ
ನೂರಾರು ಸಂವತ್ಸಗಳಲಿ
ಈ ಜಗವನಾಳಿ
ತನ್ನೆಲ್ಲ ಕರ್ಮವ ಸವೆಸಿ
ಭಕ್ತಿಮಾರ್ಗದಿಂ
ಮೋಕ್ಷ ಪಡೆದ
ಪ್ರಿಯವ್ರತ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41907
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ ಸೊಗಸಾಗಿ ಸಾಗುತ್ತಿದೆ..ಸಾರ್
ಚೆನ್ನಾಗಿದೆ
ಮೋಕ್ಷಪಡೆದ ಪ್ರಿಯವ್ರತನ ಜೀವನಗಾಥೆ ಹಲವು ಸಂದರ್ಭಗಳಲ್ಲಿ ನಮಗೂ ಸೂಕ್ತ ಮಾರ್ಗದರ್ಶನ ನೀಡುವಂತೆ ಸರಳವಾಗಿ ಹೆಣೆಯಲ್ಪಟ್ಟ ಕಾವ್ಯ ಭಾಗವತ ಸಾರಕ್ಕಾಗಿ ಅಭಿನಂದನೆಗಳು.
ಬ್ರಹ್ಮದೇವನ ಅಣತಿಯಂತೆ ಮೋಕ್ಷದ ಹಾದಿಯನ್ನು ಬಿಟ್ಟು ರಾಜ್ಯವನ್ನಾಳಿ ತನ್ನ ಕರ್ತವ್ಯವನ್ನು ಮೆರೆದ ರಾಜ ಪ್ರಿಯವ್ರತನ ಕಥೆಯು ಸೊಗಸಾಗಿದೆ.
ಪ್ರಕಟಿಸಿದ “ಸುರಹೊನ್ನೆ” ಗೂ, ಓದಿ ಪ್ರತಿಕ್ರಿಯಿಸಿದ ಸಹೃದಯ ವಾಚಕರಿಗೂ ಹೃನ್ಮನಪೂರ್ವಕ ಧನ್ಯವಾದಗಳು.
ಪೌರಾಣಿಕ ಕಥೆಗಳನ್ನು ಸರಳೀಕರಿಸಿ ಸುಲಭದಲ್ಲಿ ಅರ್ಥವಾಗುವಂತೆ ಬರೆಯುವ ತಮಗೆ ಧನ್ಯವಾದಗಳು.