ಶಿವ ಶಿವ ಎಂದರೆ ಭಯವಿಲ್ಲ ಎನ್ನುವ ಶಿವರಾತ್ರಿ
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವ ಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಪೂಜೆ ಮಾಡಿ ತಮ್ಮ ಪಾಪವನ್ನು ಪರಿಹರಿಸಿಕೊಂಡು ಮೋಕ್ಷ ದೊರಕುತ್ತದೆಂಬುದು ಬಲವಾದ ನಂಬಿಕೆ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದ್ದು.
ಶಿವರಾತ್ರಿ ಮಹಿಮೆ:
ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ಮೆಚ್ಚಿಸಿ ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರ ತಾಂಡವನಾಡಿದ ರಾತ್ರಿಯೂ ಇದೆ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮರಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.
ಜಾಗರಣೆ, ಹಬ್ಬದ ವಿಶೇಷ ಆಚರಣೆ:
ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ. ಶಿವರಾತ್ರಿಯಂದು ಬೆಳಗ್ಗೆ ಬೇಗನೆ ಏಳುವ ಭಕ್ತರು, ಸ್ವಾನ ಮಾಡಿ, ಶುಚಿರ್ಭೂತರಾಗಿ ಶಿವದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ, ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ.
ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸಿದರೆ, ಕೆಲವು ಭಕ್ತರು ದಿನವಿಡೀ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು, ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ಆಚರಣೆಯ ವಿಶೇಷ.
ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ “ಓಂ ನಮ: ಶಿವಾಯ”, ಹರ ಹರ ಮಹಾದೇವ, ಶಂಭೋ ಶಂಕರ…ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. ನಾಲ್ಕು ಆಯಾಮಗಳ ರುದ್ರಪಠಣ, ಶಿವರಾತ್ರಿ ಪೂಜೆಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು. ಸಂಜೆ 6 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಜಾಗರಣೆ, ಶಿವಸ್ತುತಿ ನಡೆಯುತ್ತದೆ.
ಶಿವಲಿಂಗವಾದ ಕಥೆ:
ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಇವರಿಬ್ಬರನ್ನು ಸಮಾಧಾನ ಮಾಡುವುದಕ್ಕೆ ದೇವತೆಗಳೆಲ್ಲ ಶಿವನನ್ನು ಬೇಡಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ ಅಗ್ನಿಕಂಭದ ರೂಪದಲ್ಲಿ ನಿಂತ ತನ್ಮ ಮೂಲವನ್ನು ಹುಡುಕಲು ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಕಂಭದ ಅಂತ್ಯವೇ ಇಬ್ಬರಿಗೂ ಕಾಣುವುದಿಲ್ಲ. ಆಗ ಅನಂತವಾಗಿರುವ ಶಿವನ ಶಕ್ತಿಯ ಅರಿವಾಗುತ್ತದೆ. ಅಷ್ಟರಲ್ಲಿ ಶಿವನ ಜಡೆಯಿಂದ ಬೀಳುತ್ತಿದ್ದ ಕೇತಕಿ ಪುಷ್ಪದ ಬಳಿ ಬ್ರಹ್ಮ “ನೀನು ಎಲ್ಲಿಂದ ಬೀಳುತ್ತಿದ್ದೀಯ?” ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು “ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ’ ಎನ್ನುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಷ್ಪವನ್ನು ಶಿವನಿಗೆ ತೋರಿಸಿ ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿ ನುಡಿಯುತ್ತಾನೆ. ಇವನ ಮೋಸವನ್ನು ಅರಿತ ಶಿವ ಇನ್ನುಮುಂದೆ ಯಾರೂ ಬ್ರಹ್ಮನನ್ನು ಪೂಜಿಸಬಾರದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ.
ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ. ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು ಹುಲಿಯ ಚರ್ಮವನ್ನು ಉಟ್ಟು ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ.
ಶಿವಲಿಂಗದ ಪೂಜೆ ಹೇಗೆ ಮಾಡಬೇಕು?
ಶಿವಲಿಂಗಕ್ಕೆ ತಣ್ಣೀರು, ಹಾಲು ಮತ್ತು ಪಂಚಾಮೃತಗಳಿಂದ ಅಭಿಷೇಕವನ್ನು ಮಾಡುತ್ತಾರೆ. ಲಿಂಗದ ಮುಂದಿನ ಭಾಗದ ಮೇಲೆ ಭಸ್ಮದ ಮೂರು ಅಡ್ಡ ಪಟ್ಟೆಗಳನ್ನು ಎಳೆಯುತ್ತಾರೆ. ಮಧ್ಯದಲ್ಲಿ ಒಂದು ವೃತವನ್ನು ಬಿಡಿಸುತ್ತಾರೆ. ಲಿಂಗಪೂಜೆಯಲ್ಲಿ ಅಕ್ಷತೆಯನ್ನು ಉಪಯೋಗಿಸು ವುದು ಯೋಗ್ಯವಾಗಿದೆ.
ಧೋತ್ರಾ, ಶ್ವೇತಕಮಲ, ಶ್ವೇತ ಕಣೇರ, ಮಂದಾರ, ನಾಗಸಂಪಿಗೆ, ಪುನ್ನಾಗ, ನಾಗಕೇಶರ, ರಾತ್ರಿರಾಣಿ, ಜೂಯಿ, ಜಾಜಿ ಹಾಗೂ ಬಿಳಿ ಹೂವುಗಳನ್ನು ಶಿವನಿಗೆ ಅರ್ಪಿಸುವುದು ವಾಡಿಕೆ. ಬಿಲ್ವಪತ್ರೆ ಅತೀ ಶ್ರೇಷ್ಠ.
ಲಯಕರ್ತ ಶಿವ ಜಟಾಜೂಟ ಮೃಗ ಚರ್ಮಾಂಬರ ವಿಭೂತಿಧಾರಿ .ಕೈಯಲ್ಲಿ ಡಮರುಗ ತ್ರಿಶೂಲ, ಜಟೆಯಲ್ಲಿ ಗಂಗೆ ಚಂದ್ರರನ್ನು ಧರಿಸಿದ ಕೈಲಾಸದ ಅಧಿಪತಿ ಸ್ಮಶಾನವಾಸಿ, ದಕ್ಷಬ್ರಹ್ಮನ ಮಗಳು ಗಿರಿಜೆಯನ್ನು ವರಿಸಿದಾತ. ಈತನಿಗೆ ಭಕ್ತಪ್ರಿಯನೆಂದು ಹೆಸರು. ಭಕ್ತರು ಕೇಳಿದ ವರಗಳನ್ನು ಹಿಂದೆ ಮುಂದೆ ನೋಡದೆ ದಯಪಾಲಿಸಿ ಅನೆಕ ಸಾರಿ ವಿಪತ್ತಿಗೆ ಸಿಲುಕಿ ಕೊಂಡವ. ಜಗದ ಒಳಿತಿಗಾಗಿ ಸಮುದ್ರ ಮಥನ ಕಾಲದಲ್ಲಿ ಹೊರ ಹೊಮ್ಮಿದ ಹಾಲಾಹಲವನ್ನು ಕುಡಿದ ನೀಲಕಂಠ . ದೇವ ಲೋಕದ ಗಂಗೆಯನ್ನು ಮಹರ್ಷಿ ದಧೀಚಿ ಭೂಮಿಗೆ ತರಲು ನಿಶ್ಚಯಿಸಿದಾಗ ಆಕೆಯನ್ನು ಜಟೆಯಲ್ಲಿರಿಸಿ ಕೊಂಡು ಭೂಮಿಗೆ ಹರಿಸಿ ಭೂಮಿಗೆ ಗಂಗಾವತರಣವಾಗಲು ಮಧ್ಯವರ್ತಿಯಾಗಿ ಗಂಗಾಧರನೆಂಬ ಅಭಿದಾನವನ್ನು ಪಡೆದವ. ರಾವಣನಿಗೆ ಆತ್ಮ ಲಿಂಗವನ್ನೆ ಕೊಟ್ಟವ, ಕಾಲ ಭೈರವನಾಗಿ ರುದ್ರ ನರ್ತನ ಗೈದವ, ಬೇಡರ ಕಣ್ಣಪ್ಪನಿಗೆ ಮೋಕ್ಷ ನೀಡಿದವ, ಕೂಳೂರು ಕೊಡಗೂಸನ್ನು ತನ್ನಲ್ಲಿ ಐಕ್ಯವಾಗಿಸಿಕೊಂಡವ, ಭಕ್ತ ಮಾರ್ಕಾಂಡೇಯನಿಗೆ ಆಯುಷ್ಯ ನೀಡಿದವ. ಮಹಾ ಭಾರತದ ಅರ್ಜುನನಿಗೆ ಪಾಶುಪತಾಸ್ತ್ರ ನೀಡಿದವ, ಅರ್ಧ ನಾರೀಶ್ವರ. ಈ ಎಲ್ಲ ಕಾರಣಗಳಿಂದ ಶಿವ ಭಾರತಿಯರ ಆರಾಧ್ಯ ದೈವ.
–ಮ.ನ. ಲತಾಮೋಹನ್ , ಮೈಸೂರು
ಶಿವರಾತ್ರಿ ಹಬ್ಬದ ಮಾಹಿತಿಪೂರ್ಣ ಲೇಖನ ಚೆನ್ನಾಗಿ ಬಂದಿದೆ ಗೆಳತಿ ಲತಾ ಮೋಹನ್..
ಶಿವರಾತ್ರಿಯ ಬಗ್ಗೆ ಅರಿವು ಮೂಡಿಸುವ ಲೇಖನ.
Nice
ಶಿವಮಹಿಮೆಯನ್ನು ಸರಳ ಸುಂದರವಾಗಿ ಎಲ್ಲರಿಗೂ ತಿಳಿಯುವಂತೆ ವ್ಯಕ್ತಪಡಿಸುವ ಸಕಾಲಿಕ ಲೇಖನಕ್ಕಾಗಿ ಅಭಿನಂದನೆಗಳು.
ಮಹಾಶಿವರಾತ್ರಿಯ ಮಹಿಮೆಯನ್ನು ವಿವರಿಸುವ ಸಕಾಲಿಕ ಲೇಖನವು ಕುತೂಹಲಕಾರಿ ಮಾಹಿತಿಗಳನ್ನು ಒಳಗೊಂಡು ಚೆನ್ನಾಗಿ ಮೂಡಿಬಂದಿದೆ.