ಪ್ರವಾಸ

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 13

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹನೋಯ್ ನಲ್ಲಿ ಮೂರನೆಯ ದಿನ..17/09/2024

ಹಡಗಿನ ಒಳಗಡೆ  ವಿಶಾಲವಾದ ಕೊಠಡಿ ಹವಾನಿಯಂತ್ರಿತವಾಗಿತ್ತು.    ಕಪ್ಪು ಬಣ್ಣದ ಮರದ ಪೀಠೋಪಕರಣಗಳು , ಕುಸುರಿ ಕೆತ್ತನೆಯುಳ್ಳ  ಟೀಪಾಯಿ,  ದೊಡ್ಡದಾದ ಗಾಜಿನ  ಕಿಟಿಕಿಗಳು, ಚೆಂದದ ಪರದೆಗಳು, ಬಾತ್ ರೂಮ್ ನಲ್ಲಿ ಆಧುನಿಕ  ಸವಲತ್ತುಗಳು, ಬಾತ್ ಟಬ್ ಇತ್ಯಾದಿ   ಇದ್ದುವು.   ವಿಯೆಟ್ನಾಂನಲ್ಲಿ  ಕಳೆದೆರಡು ದಿನಗಳ ಕಾಲ  ನೆಲದ  ಮೇಲಿರುವ ಹೋಟೇಲ್ ಗಳಲ್ಲಿ   ಲಭಿಸಿದ್ದಕ್ಕಿಂತ  ಹೆಚ್ಚಿನ   ಐಷಾರಾಮಿ ವ್ಯವಸ್ಥೆ ಹಡಗಿನಲ್ಲಿತ್ತು.  ರೂಮ್ ಗೆ  ಹೊಂದಿಕೊಂಡಂತಿದ್ದ ಬಾಲ್ಕನಿಯ ಸಮುದ್ರದೆಡೆಗೆ  ಇತ್ತು. ಅಲ್ಲಿಯೂ ಖುರ್ಚಿ , ಟೀಪಾಯಿ ಇರಿಸಿದ್ದರು.  ಹಡಗು ನಿಧಾನವಾಗಿ ಚಲಿಸುತ್ತಿದ್ದ ಅನುಭವ ಆಗುತ್ತಿತ್ತು. ಕೆಲವೊಮ್ಮೆ  ನಿಶ್ಚಲವಾಗಿದೆ ಎಂಬಂತೆ ಅನಿಸುತ್ತಿತ್ತು.  ಹವಾನಿಯಂತ್ರಿತ ಕೊಠಡಿಗಿಂತ ಸಮುದ್ರದ ಮೇಲಿನ  ಮಂದಮಾರುತವೇ ಚೆನ್ನಾಗಿದೆ ಅನಿಸಿ, ಕೈಯಲ್ಲೊಂದು ಪುಸ್ತಕ ಹಿಡಿದು ನಾನೂ, ಹೈಮವತಿಯೂ ಕುಳಿತೆವು. ಪುಸ್ತಕ ನೆಪಮಾತ್ರಕ್ಕೆ ನಮ್ಮ  ಕೈಯಲ್ಲಿತ್ತು. ನೀಲಾಕಾಶವನ್ನೂ ನೀಲಿ ಸಮುದ್ರವನ್ನೂ ನೋಡುತ್ತಾ ಕುಳಿತ್ತಿದ್ದಾಗ  ಸಮಯ ಸರಿದಿದ್ದೇ ಗೊತ್ತಾಗಲಿಲ್ಲ.

ಮಧ್ಯಾಹ್ನ 1230 ಗಂಟೆಗೆ  ಹಡಗಿನ ಮೂರನೆಯ ಮಹಡಿಯಲ್ಲಿ  ಊಟದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದರು.  ಧ್ವನಿವರ್ಧಕದಲ್ಲಿ ಊಟ ಸಿದ್ಧವಾಗಿದೆ, ಮೂರನೆಯ ಮಹಡಿಗೆ ಬನ್ನಿ ಎಂಬ ಸಂದೇಶ ತೇಲಿ ಬಂತು.  ಲಿಫ್ಟ್ ಮೂಲಕ  ಹಡಗಿನ ಮೂರನೆಯ ಮಹಡಿಗೆ ಹೋದೆವು.  ವಿಶಾಲವಾದ  ಹಾಲ್ ನಲ್ಲಿ ನಾನಾ ವಿಧದ ಹಲವಾರು  ಭಕ್ಷ್ಯ-ಭೋಜ್ಯಗಳನ್ನು ಸೊಗಸಾಗಿ ಜೋಡಿಸಿಟ್ಟಿದ್ದರು.  ಎಲ್ಲಾ ಆಹಾರವನ್ನು ನಾವು ತಿನ್ನುವುದಿಲ್ಲವಾದರೂ ನೋಡಲೇನಡ್ಡಿಎಂದುಕೊಂಡು, ಸರದಿ ಸಾಲಿನಲ್ಲಿ  ಮುಂದುವರಿದೆವು.  ನೋಡಲು ಆಕರ್ಷಕವಾಗಿ    ಸಬ್ಬಕ್ಕಿ ಪಾಯಸದಂತೆ ಕಾಣಿಸುತ್ತಿದ್ದ ಆಹಾರವನ್ನು  ಇನ್ನೇನು  ಪುಟ್ಟ ಬೌಲ್  ಗೆ ಹಾಕಿಕೊಳ್ಳಬೇಕು  ಅಂದುಕೊಳ್ಳುವಷ್ಟರಲ್ಲಿ,  ಏನೋ ಅನುಮಾನ ಬಂದು, ಆಗ ತಾನೇ ತನ್ನ  ಬೌಲ್ ಗೆ  ಹಾಕಿಕೊಂಡ ಒಬ್ಬರನ್ನು ‘ ಈಸ್ ದಿಸ್ ವೆಜಿಟೇರಿಯನ್  ಸ್ವೀಟ್?’ ಎಂದು ಕೇಳಿದೆ.  ‘ಸೀ ಫುಡ್’ ಎಂಬ ಉತ್ತರ ಬಂತು.  ಘೀ ರೈಸ್ ನಂತೆ ಕಾಣುತ್ತಿದ್ದ  ಅನ್ನದಲ್ಲಿ  ಅಲ್ಲಲ್ಲಿ  ಕೆಂಪು ಬಣ್ಣದ ಕ್ಯಾರೆಟ್  ನ ಹೋಳುಗಳು ಇವೆ  ಅನಿಸಿ, ಅದನ್ನು ತಟ್ಟೆಗೆ ಹಾಕಿಕೊಳ್ಳುವ ಮೊದಲು ಅಲ್ಲಿದ್ದ  ಸಿಬ್ಬಂದಿಯನ್ನು  ಏನಿದು  ಎಂದು ಕೇಳಿದೆ.  ‘ ಸಾಲ್ಮನ್ ‘ ಎಂಬ ಉತ್ತರ ಬಂತು.  ಗರಿಗರಿಯಾಗಿ, ಎಸಳು ಎಸಳಾಗಿ  ಈರುಳ್ಳಿ ಪಕೋಡದಂತೆ  ಇದ್ದ  ಆಹಾರವನ್ನು ಕೂಡಾ  ತಟ್ಟೆಗೆ ಹಾಕುವ ಮೊದಲು ಸಿಬ್ಬಂದಿಗೆ ಕೇಳಿದರೆ ಉತ್ತಮ ಅನಿಸಿ ಅದೇನೆಂದು  ಕೇಳಿದಾಗ  ‘ಕಲಾಮಾರಿ’  ಎಂದರು. ಇನ್ಯಾವುದೋ  ಸಾಸ್ ಅನ್ನು ‘ ಶ್ರಿಂಪ್’ ನಿಂದ ತಯಾರಿಸಿದ್ದರು.  ಮತ್ತೊಂದು ‘ಪ್ರಾನ್ ಫ್ರೈ’ ಆಗಿತ್ತು.  ಒಟ್ಟಿನಲ್ಲಿ, ಸಮುದ್ರದ ಮೀನು, ಸಿಗಡಿ, ಕಪ್ಪೆಚಿಪ್ಪು, ಜೆಲ್ ಫಿಷ್ , ಅಕ್ಟೋಪಸ್………ಮೊದಲಾದ  ಜೀವವೈವಿಧ್ಯ  ರಸಪಾಕವಾಗಿ  ಕಂಗೊಳಿಸುತಿತ್ತು.  ಸಮುದ್ರಜೀವಿಗಳಿಂದ ತಯಾರಿಸಿದ  ಆಹಾರವು ಕೆಲವರಿಗೆ ಅಲರ್ಜಿಯಾಗುತ್ತದೆಯಂತೆ. ನಮ್ಮ ಮಾರ್ಗದರ್ಶಿ ಈ ಬಗ್ಗೆ ಮುಂಚಿತವಾಗಿ ವಿಚಾರಿಸಿದ  ಹಿನ್ನೆಲೆ ಅರ್ಥವಾಯಿತು.  ನಾವು ಯಥಾ ಪ್ರಕಾರ,  ಸಾಕಷ್ಟು ಹಣ್ಣು, ತರಕಾರಿಗಳನ್ನು ನಮ್ಮ ತಟ್ಟೆಗೆ ಹಾಕಿಕೊಂಡೆವು. ಖಾಲಿ ಅನ್ನಕ್ಕೆ  ನಾವು ತಂದಿದ್ದ  ಉಪ್ಪಿನಕಾಯಿ  ಮತ್ತು ಟಿನ್ ನಲ್ಲಿದ್ದ  ಯೋಗರ್ಟ್  ಎಂಬ ಮೊಸರು ಜೊತೆಯಾಯಿತು.

ಸಮುದ್ರ ಶಾಂತವಾಗಿ ತೆರೆಗಳು ಇಲ್ಲವೇ ಇಲ್ಲ ಎಂಬಂತೆ ಇತ್ತು.  ಸಮುದ್ರದ ಈ ಭಾಗವನ್ನು ‘ ಗಲ್ಫ್ ಆಫ್ ಟೊಂಕಿನ್’ ಎಂದು ಕರೆಯುತ್ತಾರೆ .ಕೇವಲ ಒಂದು ವಾರದ  ಮೊದಲು ಇಲ್ಲಿ   ಬಿರುಗಾಳಿ ಎದ್ದು ಹಡಗುಗಳು  ದೋಣಿಗಳು ದಿಕ್ಕಾಪಾಲಾದ ಬಗ್ಗೆ ಕೇಳಿದ್ದೆವು.   ಭಾರತದ ಮಾಧ್ಯಮಗಳಲ್ಲೂ ಈ ವಿಷಯ ಬಿತ್ತರವಾಗಿತ್ತಂತೆ. ನಿಮೆಗೇನೂ ತೊಂದರೆಯಾಗಿಲ್ಲ ತಾನೇ ಎಂಬ ಕಾಳಜಿಯ ಕರೆ ಮೈಸೂರಿನಿಂದ ಬಂದಿತ್ತು.  ನಮ್ಮ ಯಾನದ ಅವಧಿಯಲ್ಲಿ   ಅರ್ಧ ಮುಳುಗಿದ್ದ ಸ್ಥಿತಿಯಲ್ಲಿ  ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಹಡಗನ್ನು  ಕಂಡೆವು.

ಊಟದ ನಂತರ  ಸ್ವಲ್ಪ ವಿಶ್ರಾಂತಿ . ಆಮೇಲೆ ನಮ್ಮನ್ನು ಸುಮಾರು ಒಂದು ಗಂಟೆ ಕಾಲ  ದೋಣಿಯಾನದ ಮೂಲಕ ‘ ಹಾಲಾಂಗ್ ಬೇ’ ಯಲ್ಲಿ ಸುತ್ತಾಡಿಸಿದರು.    ಹಸಿರು ಎಮರಾಲ್ಡ್ ಬಣ್ಣದ ಸ್ವಚ್ಚ ನೀರಿನ ಮೇಲೆ ದೋಣಿಯಾನ. ಸಮುದ್ರದಲ್ಲಿ ಅಲ್ಲಲ್ಲಿ ಎದ್ದು ಕಾಣುವ  ನೂರಾರು ಶಿಲಾಪುಂಜಗಳು, ಸುಣ್ಣದ ಕಲ್ಲಿನ ಬೆಟ್ಟಗಳು, ಸುಣ್ಣದ ಕಲ್ಲಿನ ಗುಹೆಗಳು…….ಪ್ರಕೃತಿ ಸೌಂದರ್ಯದ ಪುನರಾವರ್ತನೆ.  ಇಲ್ಲಿಯೂ ದೋಣಿ ನಡೇಸುವವರು ಹಸಿರು ಸಮವಸ್ತ್ರ ಧರಿಸಿದ ಮಹಿಳೆಯರಾಗಿದ್ದರು.  ಸಂಜೆ ನಾಲ್ಕರ ಸಮಯ ಪುನ: ಹಡಗಿಗೆ  ಬಂದೆವು.  ಆ ಸಂಜೆ ನಮಗೆ  ಹಡಗಿನ  ಮೂರನೆಯ ಮಹಡಿಯಲ್ಲಿ  ಚಹಾ ಮತ್ತು ಅಡುಗೆಯ ಪ್ರಾತ್ಯಕ್ಷಿಕೆ ಇದೆ ಎಂದು ತಿಳಿಸಿದ್ದರು.  

ಸಂಜೆಯ ವೇಳೆ ಹಡಗಿನ  ಮೇಲಿನ ಮಹಡಿಗೆ ಹೋದೆವು . ಕತ್ತಲಿನಲ್ಲಿ ಸಮುದ್ರದಲ್ಲಿ ಅಲ್ಲಲ್ಲಿ   ಕಾಣಿಸುವ ಹಡಗುಗಳು ವಿದ್ಯುದ್ದೀಪಗಳಿಂದ  ಕಂಗೊಳಿಸುತ್ತಿದ್ದುವು.ದೂರದಲ್ಲಿ ಕಾಣಿಸುತ್ತಿದ್ದ ಇತರ  ಹಡಗುಗಳಲ್ಲಿಯೂ  ಜನರ ಚಟುವಟಿಕೆ ಕಾಣಿಸುತ್ತಿತ್ತು.   ಓರ್ವ ಚಿಕ್ಕ ವಯಸ್ಸಿನ , ಸಮವಸ್ತ್ರ  ಧರಿಸಿದ  ನಗುಮುಖದ    ಸಿಬ್ಬಂದಿ ನಮ್ಮನ್ನು ಮಾತನಾಡಿಸುತ್ತಾ ,  ಹಾಲು ಹಾಕದ ಚಹಾ,  ಹುರಿದ ಕಡ್ಲೆ ಬೀಜ, ಒಣಹಣ್ಣುಗಳ  ಸತ್ಕಾರ ಮಾಡಿದ.   ಆಮೇಲೆ ತಟ್ಟೆಗಳಲ್ಲಿ ನಾಜೂಕಾಗಿ ಕತ್ತರಿಸಿದ ವಿವಿಧ ತರಕಾರಿಗಳು,  ಬಹುಶ: ಮಾಂಸದ ತುಣುಕುಗಳು,  ಬಣ್ಣ  ಬಣ್ಣದ ಸಾಸ್  ಗಳು  ಇತ್ಯಾದಿ  ತಂದು ಒಂದು ಮೇಜಿನ ಮೇಲಿರಿಸಿದ.  ರೈಸ್ ಶೀಟ್ ಎಂದು ಕರೆಯಲ್ಪಡುವ ಟಿಶ್ಯೂ ಪೇಪರ್ ನಷ್ಟು  ತೆಳ್ಳಗಿರುವ ಅಕ್ಕಿಯ ಹಾಳೆಯನ್ನೂ  ತಂದ.  ‘ ನೌ ಈ ವಿಲ್  ಸ್ಟ್ರಾರ್ಟ್ ಕುಕಿಂಗ್ ಶೋ’ ಅಂದು ನಮ್ಮೆಲ್ಲರ ಕುತೂಹಲ   ಹೆಚ್ಚಿಸಿದ. ಅಡುಗೆ ಮಾಡಲು  ಆಸಕ್ತರು ಮುಂದೆ ಬನ್ನಿ ಎಂದು ಕರೆದ.  ‘ವಿಯೆಟ್ನಾಂ ಅಡುಗೆ’ಯನ್ನು ನೋಡಲು ನಮಗೂ ಆಸಕ್ತಿ ಇತ್ತು. ಹಲವಾರು ಮಂದಿ ಎದ್ದು ಬಂದರು. ಎಲ್ಲರಿಗೂ  ಕೈಗೆ ಹಾಕುವ ಗ್ಲೌಸ್ ಕೊಟ್ಟ. ತಾನೂ ಕೈಗೆ ಗ್ಲೌಸ್ ಹಾಕಿಕೊಂಡು ಒಂದು ಪ್ಲೇಟ್ ಮೇಲೆ  ಅಕ್ಕಿಯ ಹಾಳೆಯನ್ನು ಇರಿಸಿ,  ಅದರ ಬಗ್ಗೆ ಸ್ವಲ್ಪ ವಿವರಿಸಿ, ಅಕ್ಕಿಯ ಹಾಳೆಯ ಮೇಲೆ ಸ್ವಲ್ಪ ನೀರು ಚಿಮುಕಿಸಿ , ಮೆತ್ತಗಾಗಿಸಿ ಎಂದ.  ಆಮೇಲೆ ಅಲ್ಲಿ ಚೆಂದಕೆ ಹೆಚ್ಚಿಟ್ಟಿದ್ದ ಟೊಮ್ಯಾಟೋ,  ಸೌತೆಕಾಯಿ, ಈರುಳ್ಳಿ, ಯಾವುದೋ ಸೊಪ್ಪುಗಳು, ಮಾಂಸದ ತುಣುಕುಗಳು , ಚೀಸ್,  ಸಾಸ್ ಇತ್ಯಾದಿಗಳನ್ನು  ಅವರವರ ಆಯ್ಕೆಗೆ  ತಕ್ಕಂತೆ ಒಂದು ಪದರದ ಮೇಲೆ ಇನ್ನೊಂದು ಜೋಡಿಸಿ  ಅಕ್ಕಿಯ ಹಾಳೆಯನ್ನು ಚಾಪೆಯ ಸುರುಳಿಯಂತೆ ಮಡಿಸಿದ. ಆಮೇಲೆ  ನಾಜೂಕಿನ ಚಾಕುವಿನಲ್ಲಿ ಸುಮಾರು 3  ಇಂಚು ಉದ್ದಕ್ಕೆ ಕತ್ತರಿಸಿ, ಪ್ಲೇಟ್ ನಲ್ಲಿ ಕಲಾತ್ಮಕವಾಗಿ ಇರಿಸಿದ.  ಆಮೇಲೆ ಆ ಸುರುಳಿ ತಿನ್ನಲು ಸಿದ್ಧ.  ಅಲ್ಲಿಗೆ ಐದು ನಿಮಿಷದ ಕುಕಿಂಗ್ ಶೋ ಮುಗಿಯಿತು. ಇಂತಹ ಸರಳಾತಿಸರಳ  ಆಹಾರ ತಯಾರಿಸಲು ‘ ಕುಕಿಂಗ್ ಶೋ’ ಎಂಬ ಸಡಗರದ ಹೆಸರು.  ಕೈಗೆ ಏನೂ ಮೆತ್ತಿಕೊಳ್ಳದಿದ್ದರೂ ಕೈಗೆ ಗ್ಲೌಸ್ ಅಲಂಕಾರ ಬೇರೆ.  ಇವನೇನಾದರೂ ನಮ್ಮೂರಿಗೆ ಬಂದರೆ ಗ್ಲೌಸ್ ಇಲ್ಲದೆಯೇ  ಕೈಗೆ ಅಂಟುವ ಮೇಣವುಳ್ಳ ಹಲಸಿನಕಾಯಿಯನ್ನೋ,  ಕೈ ತುರಿಸುವ ಸುವರ್ಣಗಡ್ಡೆಯನ್ನೋ,  ಒಂದು ಬುಟ್ಟಿ  ಅವರೇಕಾಯಿಗಳನ್ನೋ  ಕೊಟ್ಟು ಅವುಗಳನ್ನು  ಶೋಧಿಸಿ, ಕತ್ತರಿಸಿ, ಬಿಡಿಸಿ, ರುಬ್ಬಿ,  ಹಬೆಯಲ್ಲಿ ಬೇಯಿಸಿ , ಬಿಸಿಲಿನಲ್ಲಿ ಒಣಗಿಸಿ, ಎಣ್ಣೆಯಲ್ಲಿ ಕಾಯಿಸಿ…….ಹೀಗೆ ವಿವಿಧ ಹಂತಗಳುಳ್ಳ ಅಡುಗೆಯ ಪ್ರಾತ್ಯಕ್ಷಿಕೆಗಳನ್ನು ನಾವೇ ಕಲಿಸಬಹುದು  ಅಂದುಕೊಂಡೆ!

ಇದಾದ ಮೇಲೆ ರಾತ್ರಿಯೂಟಕ್ಕೆ  ಆಹ್ವಾನ ಬಂತು . ಈಗ ಮಧ್ಯಾಹ್ನದಂತೆ ಬಫೆ ಇರಲಿಲ್ಲ.  ಮೇಜೊಂದರಲ್ಲಿ ನಮ್ಮ ಹೆಸರನ್ನು ಬರೆದಿದ್ದ ಫಲಕ ಇರಿಸಿದ್ದರು. ಅಲ್ಲಿಗೆ ಹೋದೆವು. ಅಲ್ಲಿ ಒಂದು  ಮುದ್ರಿತ ಮೆನು ಇತ್ತು. ಅಂದು ನಮ್ಮಿಬ್ಬರಿಗೆ  ಟೊಮೆಟೋ ಸೂಪ್,   ಹಸಿರು ತರ್ಕಾರಿಗಳ ಸಲಾಡ್, ಸಸ್ಯಾಹಾರಿ ಪಿಜ್ಜಾ, ಟೊಫು ಕರಿ, ಹಣ್ಣುಗಳು ಮತ್ತು ಕೇಕ್  ಕೊಟ್ಟಿದ್ದರು. ಊಟ ಮುಗಿಸಿ  ಸ್ವಲ್ಪ ಹೊತ್ತು ಸಮುದ್ರ ನೋಡುತ್ತಾ  ಇದ್ದೆವು. 

ಆಗ ರೆಸ್ಟಾರೆಂಟ್ ನ ಮಧ್ಯ ಭಾಗದ ಮೇಜಿನಲ್ಲಿ ಕಲಾತ್ಮಕವಾದ ಕೇಕ್  ಇರಿಸಿ,   ಮೇಣದ  ಬತ್ತಿ ಉರಿಸಿದರು.  ವಿದ್ಯುದ್ದೀಪಗಳನ್ನು ಆರಿಸಿದರು. ಹಡಗಿನ ಕೆಲವು ಸಿಬ್ಬಂದಿಗಳು  ಒಬ್ಬ ಎಳೆಯವಯಸ್ಸಿನ  ಭಾರತೀಯ ದಂಪತಿಯನ್ನು ಪರಿಚಯಿಸಿ, ಇಂದು ಆ ಯುವತಿಯ ಹುಟ್ಟುಹಬ್ಬ ಎಂದು ಘೋಷಿಸಿದರು.  ಆ ದಂಪತಿಯನ್ನೂ ಒಳಗೊಂಡು ಸುಮಾರು ಏಳೆಂಟು ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ನ ಟಾರ್ಚ್ ಅನ್ನು ಆನ್ ಮಾಡಿ  ಮೊಬೈಲ್ ಅನ್ನು  ಕೈಯಲ್ಲಿ ಎತ್ತಿ ಹಿಡಿದು ಅತ್ತಿತ್ತ ಕೈಯಾಡಿಸುತ್ತಾ   ಆ ಹಾಲ್ ನ ಒಳಗಡೆ  ಎರಡೋ ಮೂರೋ ಸುತ್ತು ಹಾಕಿದರು. ಕತ್ತಲಿನಲ್ಲಿ ನಕ್ಷತ್ರಗಳು ನಡೆದು ಬರುವಂತೆ ಕಾಣಿಸುತ್ತಿತ್ತು.   ಯಾವುದೋ ಸುಮಧುರ ಸಂಗೀತ ಕೇಳಿಬಂತು.   ಆಮೇಲೆ  ವಿದ್ಯುದ್ದೀಪ ಉರಿಸಿ, ಕೇಕ್ ಕತ್ತರಿಸಿ, ಪರಸ್ಪರ ತಿನ್ನಿಸಿ, ಎಲ್ಲರಿಗೂ ಹಂಚಿ, ‘ಹ್ಯಾಪಿ ಬರ್ತ್ ಡೇ’ ಹಾಡಿ ಹೇಳಿ ಸಂಭ್ರಮಿಸಿದ್ದಾಯಿತು. ಆ  ದಂಪತಿಯನ್ನು ಮಾತನಾಡಿಸಿದಾಗ,   ಅವರು ಭಾರತದ ಅಹ್ಮದಾಬಾದ್ ದಿಂದ  ಹನಿಮೂನ್  ಟ್ರಿಪ್ ಗಾಗಿ ವಿಯೆಟ್ನಾಂಗೆ ಬಂದಿದ್ದರೆಂದೂ, ಪತ್ನಿಯ ಹುಟ್ಟುಹಬ್ಬಕ್ಕೆ ಕೇಕ್ ವ್ಯವಸ್ಥೆ ಮಾಡಿ ಎಂದು  ಪತಿ ಹೇಳಿದ್ದನೆಂದೂ ಗೊತ್ತಾಯಿತು. ಆತನ ಕೋರಿಕೆಯನ್ನು ಹಡಗಿನ ಸಿಬ್ಬಂದಿ  ಬಹಳ ಸೊಗಸಾಗಿ ನೆರವೇರಿಸಿ ಕೊಟ್ಟರು. ಈ ರೀತಿ ಹುಟ್ಟುಹಬ್ಬ ಆಚರಿಸುವುದನ್ನು ನಾನು ಕಂಡಿದ್ದು ಇದೇ ಮೊದಲು. ನಾವು ಆಕೆಗೆ ಶುಭಾಶಯ ಹೇಳಿ  ನಮ್ಮ ಕೊಠಡಿಗೆ ಬಂದು ವಿಶ್ರಮಿಸಿದೆವು.

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : http://surahonne.com/?p=41742

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

7 Comments on “ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 13

  1. ಈ.ಸಾರಿಯ ಪ್ರವಾಸ ಕಥನದಲ್ಲಿ ಊಟ ಅಡಿಗೆ ಪ್ರಾತ್ಯಕ್ಷಿಕೆ..ಹುಟ್ಟು ಹಬ್ಬದ ಆಚರಣೆ..ವಿಶೇಷವಾಗಿ ಎಂದಿನಂತೆ ಪೂರಕ ಚಿತ್ರ.. ಮನಕ್ಕೆ ಮುದ ತಂದಿತು ಗೆಳತಿ ಹೇಮಾ..ನಿಮ್ಮ ಅನುಭವದ ಅಭಿವ್ಯಕ್ತಿ ಯ ಜೊತೆಗೆ ನಮ್ಮ ನ್ನೂ ಕರೆದೊಯ್ಯುವ ಬರೆಹದ ಶೈಲಿ..ನನಗೆ ಆಪ್ತವಾಗಿ ಕಂಡು ಬರುತ್ತದೆ..

  2. ಸಸ್ಯಾಹಾರಿಗಳಿಗೆ ಇಂತಹ ಪ್ರವಾಸಗಳಲ್ಲಿ ಆಯ್ಕೆಗಳೇ ಇರುವುದಿಲ್ಲ! ನನಗೂ ಈ ಅನುಭವ ಆಗಿದೆ…ಕೇರಳದ ಪ್ರವಾಸದಲ್ಲಿ. ಸರಿಯಾದ ಸಸ್ಯಾಹಾರಿ ಹೋಟೆಲ್ ಸಿಗದೆ ಚಪಾತಿ +ಸಕ್ಕರೆಯಲ್ಲಿ ನನ್ನ ಹೊಟ್ಟೆ ತುಂಬಿಸಿಕೊಂಡ ನೆನಪಾಗಿ ನಿಮ್ಮಿಬ್ಬರ ಬಗ್ಗೆ ಅಯ್ಯೋ ಅನಿಸಿತು ! ಇತ್ತೀಚೆಗೆ ನನ್ನ ಹುಟ್ಟು ಹಬ್ಬದ ಆಚರಣೆಯನ್ನು ಮಕ್ಕಳು ಸ್ವಲ್ಪ ಈ ರೀತಿಯಲ್ಲಿ ಬೇರೆ ಕಡೆಯಲ್ಲಿ ಆಚರಿಸಿದ್ದು ನೆನಪಾಗಿ ನಗುಬಂತು. ವಿಯೆಟ್ನಾಂ ದೋಣಿ ಪಯಣದ ಅನುಭವ ಲೇಖನ ನಮ್ಮನ್ನೂ ಅದರೆಡೆಗೆ ಸೆಳೆಯಿತು. …ಧನ್ಯವಾದಗಳು ಮಾಲಾ ಅವರಿಗೆ.

  3. ಮನಸ್ಸಿಗೆ ಮುದ ನೀಡುವ ಚಂದದ ಪ್ರವಾಸ ಕಥನ.

  4. ಪ್ರವಾಸಕಥನವನ್ನು ಓದಿ. ಮೆಚ್ಚಿ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *