ಕಾದಂಬರಿ

ಕಾದಂಬರಿ : ತಾಯಿ – ಪುಟ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)

ವೈಕುಂಠ ಸಮಾರಾಧನೆಯ ದಿನ ರಾಜಲಕ್ಷ್ಮಿ ಒಬ್ಬರೇ ಕಾರು ಮಾಡಿಕೊಂಡು ಹೊರಟರು. ಆಶ್ರಮಕ್ಕೆ ಪರಿಚಿತನಾಗಿದ್ದ ರೆಹಮಾನ್ ಸಾಮಾನ್ಯವಾಗಿ ಆಶ್ರಮದವರು ಹೊರಗೆ ಹೋಗಬೇಕೆಂದಾಗ ಕಾರು ತರುತ್ತಿದ್ದ ಅವನೇ ಈ ಸಲ ರಾಜಲಕ್ಷ್ಮಿಯನ್ನು ಕರೆದೊಯ್ದ.
“8-10 ದಿನದ ಹಿಂದೆ ಫೋನ್ ಮಾಡಿದ್ದೆವು. ನೀವು ಇರಲಿಲ್ಲ.”
“ನಮ್ಮ ತಂದೆಗೆ ತುಂಬಾ ಹುಷಾರಿಲ್ಲ. ಅವರು ಮಂಡ್ಯದ ಹತ್ತಿರ ಹಳ್ಳಿಯಲ್ಲಿದ್ದಾರೆ. ಅವರನ್ನು ಕರ‍್ಕೊಂಡು ಬರಕ್ಕೆ ಹೋಗಿದ್ದೆ.”
“ಈಗ ಹೇಗಿದ್ದಾರೆ?”
“ಪರವಾಗಿಲ್ಲ. ತಾಯಿ ಚೇತರಿಸಿಕೊಳ್ತಿದ್ದಾರೆ. ನಮ್ಮನೆಹತ್ರ ಒಂದು ಆಸ್ಪತ್ರೆಯಿದೆ. ಅಲ್ಲಿ ಡಾಕ್ಟ್ರು ಬಾಳಾ ಒಳ್ಳೆಯವರು. ಅವರೇ ಮನೆಗೆ ಬಂದು ಔಷಧಿ ಕೊಡ್ತಿದ್ದಾರೆ.”
“ಒಳ್ಳೆಯದು ಮಾಡಿದ್ರಿ. ತಂದೆ-ತಾಯಿಗೆ ಒಳ್ಳೆಯ ಗಂಡು ಮಕ್ಕಳಿದ್ದರೆ ಅದಕ್ಕಿಂತ ಪುಣ್ಯವೇನಿದೆ?”
“ನಮ್ತಂದೆ-ತಾಯಿ ಹಳ್ಳಿ ಬಿಟ್ಟು ಬರಲ್ಲಾಂತಿದ್ರು. ಈಗ ಬರಲೇಬೇಕಾಯ್ತು. ನಮ್ಮ ಬೀಬೀನೂ ಚಂದಾಗಿ ನೋಡ್ಕೋತಾರೆ.”
“ಸಂತೋಷ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ” ಎಂದರು ರಾಜಲಕ್ಷ್ಮಿ .

ಮುಕುಂದ ವೈಕುಂಠ ಸಮಾರಾಧನೆಗೆ ಸುಮಾರು 80 ಜನರನ್ನು ಕರೆದಿದ್ದ.
ಊಟದ ನಂತರ ರಾಜಲಕ್ಷ್ಮಿ ಮೋಹನನ ಮನೆಗೆ ಹೋದರು. ಅವನ ತಾಯಿ-ತಂದೆ ಸಂತೋಷದಿಂದ ಸ್ವಾಗತಿಸಿದರು.
“ಮೋಹನ ನಿನ್ನ ಹೆಂಡ್ತಿ ಎಲ್ಲಿ ಕಾಣಿಸ್ತಿಲ್ಲ?”
“ತವರು ಮನೆಗೆ ಹೋಗಿದ್ದಾಳೆ. ಮಕ್ಕಳೂ ಅಲ್ಲಿಂದಲೇ ಶಾಲೆಗೆ ಹೋಗ್ತಿದ್ದಾರೆ………”
“ನಿನ್ನ ತಮ್ಮ-ತಮ್ಮನ ಹೆಂಡತಿ?”
“ಅವರಿಂದಲೇ ಇಷ್ಟು ರಾಮಾಯಣ ಆಗಿರುವುದು ರಾಜಮ್ಮ. ನಮ್ಮ ಸುಧಾ ತುಂಬಾ ಒಳ್ಳೆಯ ಹುಡುಗಿ. ನಮ್ಮನ್ನು ತುಂಬಾ ಪ್ರೀತಿಯಿಂದ ಕಾಣ್ತಿದ್ದಳು. ಗಂಡ-ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ತಿದ್ದಳು. ನಮ್ಮ ಚೇತನ್ ಮದುವೆಯಾದ ನೋಡಿ ಅಂದಿನಿಂದ ನಮ್ಮನೆಯ ಶಾಂತಿ ಹಾಳಾಗಿಹೋಯ್ತು.”

“ಚೇತನ್ ಹೆಂಡ್ತಿ ಕೆಲಸಕ್ಕೆ ಹೋಗ್ತಾಳಲ್ವಾ?”
“ಮದುವೆಯ ನಂತರ ಈ ಊರಿಗೆ ವರ್ಗ ಮಾಡಿಸಿಕೊಂಡಳು. ಚೇತನ್‌ಗೆ ಗುಂಡ್ಲುಪೇಟೆ ಕಾಲೇಜಿನಲ್ಲಿ ಕೆಲಸ. ಅವನು ಬೇಗ ಎದ್ದು ರೆಡಿಯಾಗ್ತಿದ್ದ. ಸುಧಾ ಬೇಗ ಎದ್ದು ತಿಂಡಿ ಮಾಡಿ ಅವನ ಡಬ್ಬಿಗೆ ಹಾಕಿಕೊಟ್ಟು, ಮಧ್ಯಾಹ್ನಕ್ಕೆ ಏನಾದ್ರೂ ಅನ್ನ ಕಲಿಸಿ ಹಾಕಿಕೊಡ್ತಿದ್ದಳು. ಚೇತನ್ ಹೆಂಡ್ತಿ ರಶ್ಮಿ ಒಂದು ಕೆಲಸ ಮಾಡ್ತಿರಲಿಲ್ಲ. ಅವಳು ಬೇಗ ಕಾಲೇಜಿಗೆ ಹೋಗಬೇಕಲ್ಲಾಂತ ಸುಮ್ಮನಿದ್ದೆವು.”
“ಬೆಳಗ್ಗೆಯಿಂದ ಸಾಯಂಕಾಲದವರೆಗೂ ಕಾಲೇಜಿರತ್ತಾ?”
“ಇಲ್ಲ 12-30ಗೆ ಬಂದು ಊಟ ಮಾಡಿ ರೂಮು ಸೇರಿದರೆ ರೆಸ್ಟ್ ತೊಗೊಂಡು ಗಂಡ ಬಂದಮೇಲೆ 5 ಗಂಟೆಗೆ ರೂಮ್‌ನಿಂದ ಹೊರಗೆ ಬರ್ತಿದ್ಳು. ಆಮೇಲೂ ಮನೆಕೆಲಸಕ್ಕೆ ಕೈ ಹಾಕ್ತಿರಲಿಲ್ಲ. ಗಂಡ-ಹೆಂಡತಿ ರಾತ್ರಿ ಊಟ ರೂಮ್‌ಗೆ ತೆಗೆದುಕೊಂಡು ಹೋಗಿ ಮಾಡ್ತಿದ್ರು. ಆ ತಟ್ಟೆಗಳನ್ನು ಕೂಡ ತೊಳೆಯುತ್ತಿರಲಿಲ್ಲ. ನಾವು ಹೇಳುವಷ್ಟು ಹೇಳಿದೆವು. ಅವಳಿಗೆ ತಲೆಗೇ ಹೋಗಲಿಲ್ಲ. ಚೇತನ್ ಅವಳು ಹಾಕಿದ ಗೆರೆ ದಾಟಲಿಲ್ಲ. ಈಗ ಆಸ್ತಿ ಪಾಲು ಕೇಳ್ತಿದ್ದಾನೆ.”
“ಆಸ್ತಿಯಲ್ಲಿ ಪಾಲಾ?”
“ನಮ್ಮ ಭೂಮಿಯಲ್ಲಿ, ಮನೆಯಲ್ಲಿ, ಪಾತ್ರೆ, ಪಡಗ, ಒಡವೆ, ವಸ್ತುಗಳಲ್ಲಿ ಪಾಲು ಬೇಕಂತೆ.”
“ಛೆ ಛೆ ಹೀಗಾಗಬಾರದಿತ್ತು.”

“ನಮಗೆ ಇರಕ್ಕೆ ಮನೆಬೇಕು. ನಮಗೆ ನಂಜನಗೂಡು ಬಿಡಲು ಇಷ್ಟವಿಲ್ಲ. ಮೋಹನ ಇತ್ತೀಚೆಗಷ್ಟೆ ಈ ಮನೆಯನ್ನು ತನ್ನ ಅನುಕೂಲಕ್ಕೆ ತಕ್ಕ ಹಾಗೆ ಕಟ್ಟಿಸಿದ್ದ. ಈ ಮನೆ ಅವನಿಗೆ ಬೇಕಂತೆ. ನೀವು ನಿಮ್ಮ ಮನೆ ನಮಗೆ ಮಾರಿದರೆ ಅನುಕೂಲವಾಗತ್ತೆ.”
“ಆಗಲಿ ಸಧ್ಯಕ್ಕೆ ನೀವೇ ಉಪಯೋಗಿಸ್ತಿರಿ. ನಿಮ್ಮನೆ ಪಂಚಾಯಿತಿಯೆಲ್ಲಾ ಮುಗಿದ ಮೇಲೆ ಒಂದು ಬೆಲೆ ನಿಗಧಿ ಮಾಡಿಕೊಡಿ.”
“ಅಮ್ಮಾ, ನಿಮ್ಮದು ತುಂಬಾ ದೊಡ್ಡಗುಣ.”
“ಮೋಹನ ನೀನು ನನ್ನ ಮಗನಿಗಿಂತ ಹೆಚ್ಚಾಗಿ ನನ್ನ ವಿಚಾರದಲ್ಲಿ ಕಾಳಜಿ ತೋರಿಸ್ತಿದ್ದೀಯ. ನಿನ್ನಂತಹವನಿಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ?”
“ಸರಿ ಅಮ್ಮಾ. ಈಗ ನೆಮ್ಮದಿಯಾಯ್ತು.”

“ಮೋಹನ್, ನಿನ್ನಿಂದ ಇನ್ನೊಂದು ಸಹಾಯ ಆಗಬೇಕು. ಈ ವಾರದಲ್ಲಿ ಸರಸಮ್ಮನ್ನ ಕರ‍್ಕೊಂಡು ಬಂದು ನಮ್ಮ ಆಶ್ರಮಕ್ಕೆ ಬಿಡಕ್ಕಾಗತ್ತಾ?”
“ಮುಕುಂದಾನೆ ಕರ‍್ಕೊಂಡು ಬಂದು ಬಿಡ್ತಾನಂತೆ. ತಾಯೀನ್ನ ತುಂಬಾ ಚೆನ್ನಾಗಿ ನೋಡಿಕೊಳ್ತಿದ್ದಾನೆ.”
“ಒಳ್ಳೆಯದು. ಅವನೇ ಬರಲಿ ಬಿಡು. ನಾಳೆಯ ನಂತರ ಅವನು ತಾಯೀನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಬಹುದು. ನಮ್ಮನೆ ಕೀ ನೀನೇ ಇಟ್ಟುಕೊಂಡಿರಪ್ಪ.”
“ಆಗಲೀಮ್ಮ” ಎಂದ ಮೋಹನ್.

‘ಶುಭ’ ಮುಗಿಸಿಕೊಂಡು ಮುಕುಂದ ತಾಯಿಯನ್ನು ಮನೆಗೆ ಕರೆದೊಯ್ದ. ಗಂಡ-ಹೆಂಡತಿ ಅವರಿಗೆ ರಾಜೋಪಚಾರ ಮಾಡಿದರು.
ಒಂದು ವಾರದ ನಂತರ ಸರಸಮ್ಮ ಹೇಳಿದರು. ” ರಾಜಲಕ್ಷ್ಮಿ ಮೋಹನನ ಕೈಲಿ ಹೇಳಿಕಳಿಸಿದ್ದಾರೆ. ಈ ಭಾನುವಾರ ನಾನು ಅಲ್ಲಿರಬೇಕಂತೆ.”
“ಅವರು ನಿನ್ನನ್ನು ಎಲ್ಲಿಗೆ ಸೇರಿಸ್ತಾರಮ್ಮ?”
“ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ನೀವು ಇಲ್ಲಿಗೆ ಬನ್ನಿ.’ ನಾನು ನಿಮಗೆ ಒಂದು ಸರಿಯಾದ ವ್ಯವಸ್ಥೆ ಮಾಡಿಕೊಡ್ತೀನಿ’ ಅಂದಿದ್ದಾರೆ.”
“ಸರಿಯಮ್ಮ. ಭಾನುವಾರ ಬೆಳಿಗ್ಗೆ ತಿಂಡಿ ತಿಂದುಕೊಂಡು ಹೊರಡೋಣ” ಎಂದ ಮುಕುಂದ.
ಸರಸಮ್ಮನಿಗೆ ಬಹಳ ದುಃಖವಾಯಿತು. ಅವರಿಗೆ ನಂಜನಗೂಡು ಬಿಡಲು ಇಷ್ಟವಿರಲಿಲ್ಲ. ಆದರೆ ಮಗ ಇರು ಎಂದು ಹೇಳಲಿಲ್ಲ.

ಮರುದಿನ ಮುಕುಂದ ತಿಂಡಿ ತಿಂದ ನಂತರ ತಾಯಿಯನ್ನು ಬಸ್‌ನಲ್ಲಿ ಕರೆದುಕೊಂಡು ಹೊರಟ. ಅವನು ಗನ್‌ಹೌಸ್ ಹತ್ತಿರ ಇಳಿದು ಜೆ.ಪಿ.ನಗರಕ್ಕೆ ಆಟೋದಲ್ಲಿ ಕರೆದುಕೊಂಡು ಹೋದ. ರಾಜಲಕ್ಷ್ಮಿ ಅವರಿಗಾಗಿ ಕಾಯುತ್ತಿದ್ದರು.
“ಬನ್ನಿ ಸರಸಮ್ಮ. ನಿಮಗಾಗೇ ಕಾಯ್ತಿದ್ದೆ.”
ಮುಕುಂದ ಒಂದು ಸೂಟ್‌ಕೇಸ್ ಹಿಡಿದು ಅವರನ್ನು ಹಿಂಬಾಲಿಸಿದ.
ರಾಜಲಕ್ಷ್ಮಿ ಅವರಿಬ್ಬರನ್ನೂ ತಮ್ಮ ರೂಮ್‌ನಲ್ಲೇ ಕೂಡಿಸಿಕೊಂಡರು. ಹತ್ತು ನಿಮಿಷಗಳ ನಂತರ ಗೌರಮ್ಮ ಕಾಫಿ ತಂದುಕೊಟ್ಟರು.

“ಅಮ್ಮಾ, ನಮ್ಮ ತಾಯೀನ್ನ ಇಲ್ಲೇ ಇಟ್ಟುಕೊಳ್ತೀರಾ?”
“ಹೌದು ಮುಕುಂದ. ನನ್ನ ರೂಮ್‌ನಲ್ಲೇ ಇರ‍್ತಾರೆ. ನಮ್ಮ ಮ್ಯಾನೇಜರ್‌ಗೂ ಹೇಳಿದ್ದೇನೆ. ಅವರೂ ಒಪ್ಪಿದ್ದಾರೆ.”
“ತಿಂಗಳಿಗೆ ಎಷ್ಟು ಚಾರ್ಜ್ ಮಾಡ್ತಾರೆ?”
“ಮೂವತ್ತು ಸಾವಿರ……..”
“ಅಷ್ಟೊಂದಾ?”
“ಒಳ್ಳೆಯ ಜಾಗ ಬೇಕೂಂದ್ರೆ ಅಷ್ಟು ಕೊಡಲೇಬೇಕು. ರಾಜಮ್ಮ ಬೇರೆ ಕಡೆ ಬಿಡೋಣಾಂತ ನೋಡಿದರು. ಯಾಕೋ ಮನಸ್ಸು ಒಪ್ಪಲಿಲ್ಲ. ಇಲ್ಲೇ ನನ್ನ ಜೊತೆ ರ‍್ತಾರೆ ಬಿಡಿ ಅಂದುಬಿಟ್ರು” ಗೌರಮ್ಮ ಹೇಳಿದರು.
ಮುಕುಂದ ಏನೂ ಮಾತಾಡಲಿಲ್ಲ.

4-5 ದಿನಗಳು ಕಳೆದಿರಬಹುದು. ಸರಸಮ್ಮ ಏನೋ ಹೇಳಬೇಕೆಂದುಕೊಂಡು ಮಾತು ತೆಗೆದು ಹೇಳಲಾರದೆ ಒದ್ದಾಡುತ್ತಿರುವುದು ರಾಜಲಕ್ಷ್ಮಿಯ ಗಮನಕ್ಕೆ ಬಂತು. ಮುಕುಂದ ತಾಯಿಗೆ ಫೋನ್ ಮಾಡಿ, ಹತ್ತು-ಹದಿನೈದು ನಿಮಿಷ ಮಾತಾಡುವುದನ್ನು ಅವರೂ ಗಮನಿಸಿದ್ದರು. ಒಂದು ಮಧ್ಯಾಹ್ನ ಊಟದ ನಂತರ ಕೇಳಿದರು. “ಸರಸಮ್ಮ ಯಾಕೆ ಒಂದು ತರಹವಿದ್ದೀರಾ? ನಿಮಗೆ ಇಲ್ಲಿ ಯಾರಾದರೂ ಏನಾದರೂ ಅಂದ್ರಾ?”
“ಇಲ್ಲ ರಾಜಮ್ಮ. ಯಾರೂ ಏನೂ ಅಂದಿಲ್ಲ. ಎಲ್ಲರೂ ತುಂಬಾ ಚೆನ್ನಾಗಿ ಮಾತಾಡ್ಕೊಂಡಿದ್ದಾರೆ.”
“ಮುಕುಂದ ಏನಾದ್ರೂ ಅಂದ್ನಾ?”
“ಅವನೇ ಫೋನ್ ಮಾಡಿ ಪ್ರಾಣ ತಿನ್ನುತ್ತಾ ಇದ್ದಾನೆ.”

“ಏನಂತೆ ಅವನ ತಗಾದೆ?”
“ನೀನು ಬಂದು ನಮ್ಮ ಜೊತೇನೇ ಇರು. ರಾಜಮ್ಮನಿಗೆ ಹೇಳಿ ನಮ್ಮ ಕುಟುಂಬಕ್ಕೆ 30,000 ರೂ. ಕೊಡಿಸು” ಅಂತಿದ್ದಾನೆ.
“ನೀವು ಅಲ್ಲಿರುವುದಕ್ಕೆ 30,000 ರೂ. ಕೊಡಬೇಕಾ?”
“ಇಲ್ಲಾದ್ರೆ ಮೊಮ್ಮಕ್ಕಳ ಜೊತೆ ಇರಬಹುದಮ್ಮ. ಅಲ್ಲಿ ಯಾರಿದ್ದಾರೆ? ಮನೆಯವರಿಗೂ, ಹೊರಗಿನವರಿಗೂ ವ್ಯತ್ಯಾಸ ಇರಲ್ವಾ?” ಅಂತಿದ್ದಾನೆ.
“ಈ ದಿನ ಅವನು ಫೋನ್ ಮಾಡಿದ್ರೆ ನನ್ನ ಕೈಗೆ ಫೋನ್ ಕೊಡಿ. ನಾನು ಮಾತಾಡ್ತೇನೆ.”
ಸುಮಾರು 5 ಗಂಟೆಯ ಹೊತ್ತಿಗೆ ಮುಕುಂದ ಕಾಲ್ ಮಾಡಿದ. ಸರಸ್ವತಿ ಸ್ಪೀಕರ್ ಆನ್ ಮಾಡಿದರು.
“ಅಮ್ಮಾ ನಾನು ಹೇಳಿದ ವಿಚಾರ ಏನಾಯ್ತು?”
“ರಾಜಮ್ಮಂಗೆ ಹೇಳಿದ್ದೀನಿ…..”
“ಅವರು ಒಪ್ಪಿದ್ರಾ?”

ಈಗ ರಾಜಲಕ್ಷ್ಮಿ ಮಾತಾಡಿದರು. “ಮುಕುಂದ ನಿಮ್ಮ ಮನೆಯಲ್ಲಿ ನಿಮ್ಮ ತಾಯೀನ್ನ ನೀನು ಇಟ್ಟುಕೊಳ್ಳುವುದಕ್ಕೆ ನಾನ್ಯಾಕೆ 30,000 ರೂ. ಕೊಡಬೇಕು?”
“ಹಾಗಲ್ಲಮ್ಮ….”
“ನಿಮ್ಮನೆಗೆ ಅವರು ಬಂದ್ರೆ ನೀವು ಅವರನ್ನು ಹೇಗೆ ನೋಡಿಕೊಳ್ತೀರಾಂತ ನನಗೆ ಗೊತ್ತು. ಅವರು ತಮ್ಮ ಕೊನೆಯ ದಿನಗಳನ್ನು ನೆಮ್ಮೆದಿಯಿಂದ ಕಳೆಯುವುದಕ್ಕೆ ಬಿಡು. ಇದರಿಂದ ಅವರಿಗೂ ನೆಮ್ಮದಿ, ನಿನಗೂ ನೆಮ್ಮದಿ.”
ಮುಕುಂದ ಉತ್ತರಿಸದೆ ಕಾಲ್ ಕಟ್ ಮಾಡಿದ.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ :   http://surahonne.com/?p=41588

-ಸಿ.ಎನ್. ಮುಕ್ತಾ

7 Comments on “ಕಾದಂಬರಿ : ತಾಯಿ – ಪುಟ 7

  1. ಜೀವನದಲ್ಲಿ ರಾಜಲಕ್ಷ್ಮಿಯವರಂಥಹ ಸ್ಥಿತಪ್ರಜ್ಞತೆ ಸಾಧಿಸಿದವರ ಸಾಂಗತ್ಯಕ್ಕಾಗಿ ಬಯಸುವಂತಹ ವ್ಯಕ್ತಿತ್ವದ ಪಾತ್ರವನ್ನು ಕಟ್ಟಿಕೊಟ್ಟಿರುವ ಮುಕ್ತಾ ಮೇಡಂ, ತಮಗೆ ವಂದನೆಗಳು.

  2. ಸರಳ, ಸುಂದರ ಸಾಮಾಜಿಕ ಕಾದಂಬರಿ ಪ್ರತಿ ಪುಟದಲ್ಲೂ ಕುತೂಹಲವನ್ನು ಕಾಯ್ದುಕೊಂಡು ಸಾಗುತ್ತಿದೆ. ಧನ್ಯವಾದಗಳು ಮೇಡಂ.

  3. ಇತ್ತೀಚೆಗಂತೂ ಹಿರಿಯರ ಪಾಡು ಇನ್ನೂ ಶೋಚನೀಯ. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಕಾದಂಬರಿ.

  4. ಧನ್ಯವಾದಗಳು ಆತ್ಮೀಯ ಓದುಗರಿಗೆ. ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಇವರಿಗೂ ಧನ್ಯವಾದಗಳು

    1. ಧನ್ಯವಾದಗಳು.ಆಗಾಗ್ಗೆ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಿರುವ ಕಾದಂಬರಿ ಕುತೂಹಲ ಹುಟ್ಟಿಸುತ್ತಾ ಸಾಗುತ್ತಿದೆ.

  5. ರಕ್ತ ಸಂಬಂಧ ವಿರದಿದ್ದರೂ ಹಣ ಖರ್ಚು ಮಾಡಿ ತಮ್ಮ ಜೊತೆಗೆ ಗೆಳತಿ ಸರಸಮನನ್ನು ಇಟ್ಟುಕೊಳ್ಳುವ ರಾಜಲಕ್ಷ್ಮಿ ಅವರು ಒಂದು ಕಡೆ ತಾಯಿಯನ್ನು ನೋಡಿಕೊಳ್ಳಲು 30000 ಅಪೇಕ್ಷಿಸುವ ಮಗ ಒಂದು ಕಡೆ ಮನುಜ ಸ್ವಭಾವಗಳ ವಿವಿಧತೆಗಳನ್ನು ಅನಾವರಣ ಗೊಳಿಸುತ್ತಿರುವ ಕಥೆ ತುಂಬಾ ಖುಷಿ ಕೊಡುತ್ತಿದೆ ಹಾಗೂ ಚಿಂತನೆಗೂ ಹಚ್ಚುತ್ತಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *