ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ: “ಕುವೆಂಪು”

Share Button

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ – ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?

ಕುವೆಂಪು ರವರ ಬಗ್ಗೆ ತಮ್ಮದೇ ಆದ ಸಾಲುಗಳನ್ನು ಬರೆದವರು ವರ ಕವಿ ದ ರಾಬೇಂದ್ರೆ. ನಿಜಕ್ಕೂ ಈ ಮಾತು ಕುವೆಂಪು ರವರಿಗೆ ಸಲ್ಲುತ್ತದೆ. ಜಗದ ಕವಿಯಾಗಿ, ಯುಗದ ಕವಿಯಾಗಿ, ಬಹುಮುಖಿಯಾಗಿ, ಬಾನೆತ್ತರಕ್ಕೆ ಬೆಳೆದು ಉತ್ಕೃಷ್ಟ ಸಾಹಿತ್ಯ ಸುಧೆ ನೀಡಿದ ಕನ್ನಡ ಸಾರಸ್ವತ ಲೋಕದ ಮೇರು ವ್ಯಕ್ತಿತ್ವದ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ರಸ ಋಷಿಯಾಗಿ ಕುವೆಂಪುರವರು ಬೆಳೆದ ಪರಿ ವರ್ಣಿಸಲದಳ ಅನುಭವ ನೀಡುತ್ತದೆ. ಎಂದೂ ಮರೆಯದ ನಂದಾದೀಪ. ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ ಇವರು. ವಿಶ್ವಮಾನವ ಸಂದೇಶವನ್ನು ಜಗಕ್ಕೆ ಸಾರಿದ ಅಪ್ರತಿಮರು. 20ನೇ ಶತಮಾನ ಕಂಡ, ನವೋದಯ ಸಾಹಿತ್ಯ ಕಾಲದ ಮಹಾನ್ ಕವಿ, ದೈತ್ಯ ಪ್ರತಿಭೆ ಇವರು.

ಕವಿಯಾಗಿ, ಲೇಖಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಕುಲಪತಿಯಾಗಿ ತಾವು ಓದಿದ ವಿಶ್ವವಿದ್ಯಾಲಯವನ್ನು ಮುಂದೊಂದು ದಿನ ಮತ್ತಷ್ಟು ಎತ್ತರಕ್ಕೆ ಏರಿಸಿದ ಸಾಧಕರು. ತಮ್ಮ ಕನಸಿನ ಕೂಸಾದ ಮಾನಸಗಂಗೋತ್ರಿಯನ್ನು ಹೆಚ್ಚಾಗಿ ಪ್ರೀತಿಸಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾದ ನಂತರ ಅಧ್ಯಯನಾಂಗ, ಸಂಶೋಧನಾಂಗ, ಪ್ರಸಾರಾಂಗ ಹೀಗೆ ವಿವಿಧ ಆಯಾಮಗಳ ಜ್ಞಾನ ಕೇಂದ್ರವಾಗಿ ಮಾಡಿದವರು.

ಸಾಹಿತ್ಯದ ವಿವಿಧ ಪ್ರಕಾರಗಳಾದ ಸಣ್ಣ ಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕತೆ, ಜೀವನ ಚರಿತ್ರೆ, ಮಹಾ ಕಾವ್ಯಗಳ ರಸಪಾಕಗಳನ್ನು ನೀಡಿದ ಸಾಹಿತ್ಯ ಸಂತ. ವಿಶ್ವಮಾನವ ಸಂದೇಶ, ಜಾತ್ಯಾತೀತ ಮನೋಭಾವ ವಿಚಾರ ಮಂತನ, ‘ಓ ನನ್ನ ಚೇತನ ಆಗೂ ನೀ ಅನಿಕೇತನ’ ಎಂದವರು. ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ ಈ ಪಂಚಮಂತ್ರಗಳ ರೂವಾರಿ. ಇವು ಎಲ್ಲಾ ಕಾಲಕ್ಕೂ ಸಲ್ಲುತ್ತವೆ. ಕುವೆಂಪು ಸಾಹಿತ್ಯ ಕ್ಷೇತ್ರದಲ್ಲಿ ಕೈ ಆಡಿಸದೇ ಇರುವ ವಿಷಯವಿಲ್ಲ.

ಮುಂದುವರೆದು ವೈಚಾರಿಕ ಸಾಹಿತ್ಯ, ಪ್ರಗತಿಪರ ನಿಲುವುಗಳು, ಇವರು ಬರೆದ ಬಗೆ ಬಗೆಯ ಸಾಹಿತ್ಯ ವಿಮರ್ಶೆ, ನಂತರ ಎದುರಿಸಿದ ಸಮಸ್ಯೆ, ಅಲ್ಲೇ ಕಂಡುಕೊಂಡ ಪರಿಹಾರ. ನೀಡಿದ ಉತ್ತರ. ಮಲೆನಾಡಿನ ಚಿತ್ರಣಗಳನ್ನೆಲ್ಲ ತಮ್ಮ ಲೇಖನಿಯಲ್ಲಿ ತುಂಬಿದ ಪರಿ. ಆಬಾಲರುದ್ದರಾದಿಯಾಗಿ ಸೃಷ್ಟಿಸಿದ ಸಾಹಿತ್ಯದ ಸುಧೆ, ಜೈ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆಯ ನೀಡಿದ ಕವಿ. ಇದು ಈಗಲೂ ಕನ್ನಡನಾಡಿನಾದ್ಯಂತ ರಾಜ್ಯ ಗೀತೆಯಾಗಿದೆ. ಯಾವುದೇ ಸಭೆ ಸಮಾರಂಭಗಳಲ್ಲಿ ಮುಂಚಿತವಾಗಿ ಈ ಹಾಡನ್ನು ಹಾಡಿ, ಕಾರ್ಯಕ್ರಮ ಪ್ರಾರಂಭ ಮಾಡುತ್ತಾರೆ. ನಿಜಕ್ಕೂ ಇಲ್ಲಿ ಬರುವ ಪ್ರತಿಯೊಂದು ಸಾಲುಗಳು ಕೂಡ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತವೆ. ಜೊತೆಗೆ ಪ್ರತಿ ಸಾಲುಗಳು ದಿವ್ಯ ಮಂತ್ರವನ್ನು ಸಾರುತ್ತವೆ. ಅರ್ಥಪೂರ್ಣ, ಮೌಲಿಕ, ವಿಷಯಗಳನ್ನು ಒಳಗೊಂಡಿದೆ.

ಇಂತಹ ಧೀಮಂತ ಕವಿಯ ಬಗ್ಗೆ ಎಷ್ಟು ಬರೆದರು ಸಾಲದು. ಅವರು ಸೃಷ್ಟಿಸಿರುವಸಾಹಿತ್ಯ ಬಗ್ಗೆ ವಿಮರ್ಶೆ ಮಾಡುತ್ತಾ ಹೋದರೆ ಪುಟಗಳು ಸಾಲದು. ಜೊತೆಗೆ ಮಾತನಾಡುತ್ತಾ ಹೋದರೆ ದಿನಗಳು ಸಾಲದು. ತಂದೆ ವೆಂಕಟಪ್ಪ, ತಾಯಿ ಸೀತಮ್ಮ, ಚಿಕ್ಕಮಗಳೂರು ಜಿಲ್ಲೆಯ ಹಿರಿಕೂಡಿಗೆಯಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು. ಪತ್ನಿ ಹೇಮಾವತಿ, ಪುತ್ರರಾದ ಕೆ ಪಿ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಪುತ್ರಿಯರಾದ ಇಂದುಕಲಾ, ಮತ್ತು ತಾರಿಣಿ. ಕುಪ್ಪಳ್ಳಿ, ತೀರ್ಥಹಳ್ಳಿ, ಮೈಸೂರಿನಲ್ಲಿ ವಿದ್ಯಾಭ್ಯಾಸ. ತಾವು ಓದಿದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದದ್ದು ಇತಿಹಾಸ. ಮಲೆನಾಡಿನ ಸೊಬಗನ್ನು ಪ್ರೀತಿಸುವಂತೆ ಅವರು ಮೈಸೂರನ್ನು ಕೂಡ ತುಂಬಾ ಪ್ರೀತಿಸುತ್ತಿದ್ದರು.

ಪ್ರಾರಂಭದಲ್ಲಿ ಇಂಗ್ಲಿಷ್ ಕವಿತೆಗಳಲ್ಲಿ ತುಂಬಾ ಆಸಕ್ತಿ. ಐರಿಸ್ ಕವಿ ಜೇಮ್ಸ್ ಕಸಿನ್ಸ್ ಅವರ ಮಾರ್ಗದರ್ಶನದಲ್ಲಿ ನೀವು ಮಾತೃಭಾಷೆಯಲ್ಲಿ ಬರೆಯಿರಿ ಎಂಬ ಸಲಹೆಯಂತೆ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಅವತ್ತಿನಿಂದ ತಾವು ಬದುಕಿರುವವರೆಗೂ ಕೂಡ ಕನ್ನಡ ಸಾರಸ್ವತ ಲೋಕದಲ್ಲಿ ಸೃಷ್ಟಿಸಿದ ಸಾಹಿತ್ಯ ಎಂಬ ಮೃಷ್ಟಾನ್ನ ಭೋಜನ ಇವತ್ತಿಗೂ ಕೂಡ ಪ್ರತಿಯೊಬ್ಬರಿಗೂ ಕೂಡ ರುಚಿಸುತ್ತಿದೆ.

ಬಾಲ್ಯದಲ್ಲಿಯೇ ಸಾಹಿತ್ಯ ಸಂಸ್ಕಾರ ಪಡೆದುಕೊಂಡಿದ್ದ ಕುವೆಂಪುರವರು ತೀರ್ಥಹಳ್ಳಿ, ಮೈಸೂರಿನಲ್ಲಿ ಓದುತ್ತಿರುವಾಗಲೇ ಆಂಗ್ಲ ಕವಿಗಳ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದರು. ಆ ಓದು ಇವತ್ತಿನ ಕನ್ನಡದ ಮೌಲಿಕ ಕೃತಿಗಳಿಗೆ ನಾಂದಿಯಾಯಿತು. “ಕುವೆಂಪು” ಕಾವ್ಯನಾಮದಿಂದ ಪ್ರಸಿದ್ಧರಾದ ಡಾ. ಕೆ ವಿ ಪುಟ್ಟಪ್ಪನವರು ಕನ್ನಡ ಮಾತೆಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ನಂತರದಲ್ಲಿ ಆದದ್ದು ಇತಿಹಾಸ ಇವರು ಮುನ್ನುಡಿ ಬರೆದಂತೆ ಇವತ್ತಿಗೂ ಕೂಡ ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಇವರು ಒಬ್ಬರು.

ಇವರು ರಚಿಸಿರುವ ಕೃತಿಗಳ ಬಗ್ಗೆ ಚಿಕ್ಕದಾಗಿ ಅವಲೋಕನ ಮಾಡೋಣ……
ಮೊದಲಿಗೆ “ಶ್ರೀ ರಾಮಾಯಣ ದರ್ಶನಂ”- ಎಂಬ ಮಹಾಕಾವ್ಯದ ಬಗ್ಗೆ ಹೇಳಲೇಬೇಕು. ಇದು ಕನ್ನಡದಲ್ಲಿ ಅಲ್ಲದೆ ಸಂಸ್ಕೃತ, ಹಿಂದಿ ಭಾಷೆಗೆ ಅನುವಾದ ಗೊಂಡಿದೆ. ಕಾನೂನು ಹೆಗ್ಗಡತಿ, ಹಾಗೂ ಮಲೆಗಳಲ್ಲಿ ಮದುಮಗಳು ಎಂಬ ಬೃಹತ್ ಕಾದಂಬರಿಗಳನ್ನು ಬರೆಯುತ್ತಾರೆ. ಕೊಳಲು, ಪಾಂಚಜನ್ಯ, ನವಿಲು ಮುಂತಾದ ಕವನ ಸಂಕಲನಗಳು, ಯಮನ ಸೋಲು, ಜಲಗಾರ, ಬಿರುಗಾಳಿ ಮುಂತಾದ ನಾಟಕಗಳನ್ನು, ಬೊಮ್ಮನಹಳ್ಳಿಯ ಕಿಂದರಜೋಗಿ, ನನ್ನ ಗೋಪಾಲ ಮುಂತಾದ ಶಿಶು ಸಾಹಿತ್ಯವನ್ನು, “ನೆನಪಿನ ದೋಣಿಯಲ್ಲಿ”- ಎಂಬ ಹೃದಯಸ್ಪರ್ಶಿ ಆತ್ಮಕಥೆಯನ್ನು ಕೂಡ ಬರೆದಿದ್ದಾರೆ. “ಆಡು ಮುಟ್ಟದ ಸೊಪ್ಪಿಲ್ಲ”- ಎನ್ನುವ ಮಾತಿನಂತೆ ಕುವೆಂಪುರವರು ಸೃಷ್ಟಿಸಿರುವ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕನ್ನಡನಾಡಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇವುಗಳಲ್ಲಿ ಅನುವಾದಿತ ಕೃತಿಗಳು ಸೇರಿವೆ. “ಕರ್ನಾಟಕ ಭಾರತ ಕಥಾಮಂಜರಿ” ಯಂಥ ಅಗ್ರಮಾನ್ಯ ಸಂಪಾದಿತ ಗ್ರಂಥವು ಇದೆ.

ಉತ್ಕೃಷ್ಟವಾದ ಮಲೆನಾಡಿನ ಬದುಕನ್ನೇ ಅಲ್ಲಿರುವ ಹಸಿರನ್ನು ಉಸಿರನ್ನಾಗಿಸಿಕೊಂಡು ಸಾಹಿತ್ಯ ಕೃಷಿ ಮಾಡಿದ ಧೀಮಂತರು. ಕುಪ್ಪಳ್ಳಿಯಲ್ಲಿರುವ ಕುವೆಂಪುರವರ ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ. ಅಲ್ಲೇ ಇರುವ “ಕವಿಶೈಲ” ಒಂದು ವಿಶಿಷ್ಟ ಸ್ಮಾರಕ ಕೂಡ ಆಗಿದೆ. ಶಿವಮೊಗ್ಗ ಬಳಿಯಲ್ಲಿ ಇರುವ ವಿಶ್ವವಿದ್ಯಾನಿಲಯಕ್ಕೆ ಕುವೆಂಪುರವರ ಹೆಸರಿಡಲಾಗಿದೆ. ಅದೇ ರೀತಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಹೆಸರು, ಬೆಂಗಳೂರಿನ ಭಾಷಾ ಭಾರತಿ ಸಂಸ್ಥೆಗೆ ಕುವೆಂಪುರವರ ಹೆಸರು ಇಟ್ಟಿರುವುದು ಅವರಿಗೆ ಸಂದಿರುವ ಶ್ರೇಷ್ಠ ಗೌರವ. ಅಲ್ಲದೆ ಮೈಸೂರಿನ ಕುವೆಂಪು ನಗರದ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಯ ಪಾತ್ರಗಳ ಹೆಸರು ಇಟ್ಟಿರುವುದು ಮತ್ತೊಂದು ಗಮನಿಸಬೇಕಾದ ಅಂಶ. ಇವರ ‘ಕಾನೂನು ಹೆಗ್ಗಡತಿ’ ಕಾದಂಬರಿ ಚಲನಚಿತ್ರವಾಗಿದೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಧಾರಾವಾಹಿಯಾಗಿದೆ. ಕುವೆಂಪುರವರು “ಮಂತ್ರ ಮಾಂಗಲ್ಯ”- ಎಂಬ ಸರಳ ವಿವಾಹ ಪದ್ದತಿಯನ್ನು ರೂಢಿಗೆ ತಂದ ಶ್ರೇಷ್ಠರು. ಈ ಹಾದಿಯಲ್ಲಿ ಅನೇಕ ಜೋಡಿಗಳು ಸಾಗಿದ್ದಾರೆ, ಅಳವಡಿಸಿಕೊಂಡಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೂಡ ಪಡೆದ ಕನ್ನಡಿಗರಲ್ಲಿ ಮೊದಲಿಗರಾಗಿದ್ದಾರೆ. ಕರ್ನಾಟಕ ಸರ್ಕಾರ ಕೊಡ ಮಾಡುವ ಕರ್ನಾಟಕ ರತ್ನ ಪಂಪ ಪ್ರಶಸ್ತಿಗಳನ್ನು ಕೂಡ ಮೊದಲ ಬಾರಿಗೆ ಪಡೆದವರು ಕುವೆಂಪು. ಅಲ್ಲದೆ ಇವರಿಗೆ ಪದ್ಮಭೂಷಣ ಪದ್ಮವಿಭೂಷಣ ಮುಂತಾದ ಪ್ರಮುಖ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಪುರಸ್ಕಾರಗಳಿಗೆ ಎಂದು ಆಸೆ ಪಟ್ಟವರಲ್ಲ. 1957ರಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನವನ್ನ ಉದ್ಘಾಟಿಸಿದರು. ಕರ್ನಾಟಕ ಸರ್ಕಾರ ಡಿಸೆಂಬರ್ 29ನೇ ದಿನವನ್ನು “ವಿಶ್ವಮಾನವ ದಿನವನ್ನಾಗಿ” ಆಚರಿಸುತ್ತಾ ಬಂದಿದೆ. ಪಂಪನಿಂದ ಕುವೆಂಪುವಿನ ತನಕ ಎಂಬ ನಾಣ್ಣುಡಿ ಕೂಡ ಇದೆ.

ಹತ್ತನೇ ಶತಮಾನದಲ್ಲಿ ಪಂಪ ಹೇಗೆ ಅದೇ ರೀತಿ 20ನೇ ಶತಮಾನದಲ್ಲಿ ನಮ್ಮ ಕುವೆಂಪು ರವರು. 1924ರಲ್ಲಿ ಅಮಲನ ಕಥೆ ಕೃತಿಯನ್ನು ಪ್ರಕಟಿಸಿದರು. ಇದು ಕುವೆಂಪುರವರ ಪ್ರಪ್ರಥಮ ಕನ್ನಡ ಪುಸ್ತಕವಾಗಿದೆ. ಅವತ್ತಿನಿಂದ ಕೊನೆಯವರೆಗೂ ಕೂಡ ಕನ್ನಡ ನಾಡು ನುಡಿ ಸಂಸ್ಕೃತಿಗೆ ಶ್ರೇಷ್ಠ
ಕೊಡುಗೆ ನೀಡಿದರು.

ನಮಗೆ ಕುವೆಂಪು ಎಂಬ ಮಹಾನ್ ಕವಿ ಬಾಲ್ಯದಿಂದಲೂ ಕೂಡ ನಮಗೆಲ್ಲ ಚಿರಪರಿಚಿತರು .ಪ್ರಾಥಮಿಕ ಮಾಧ್ಯಮಿಕ ನಂತರದ ತರಗತಿಗಳಿಗೆ ಇವರ ಕವನ ನಾಟಕ ವಿಚಾರ ಲೇಖನ ಮುಂತಾದ ಸಾಹಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿಷಯವಾಗಿ ನಮ್ಮೆಲ್ಲರ ಮನೆ ಮನ ವನ್ನ ತಲುಪಿದ್ದಾರೆ. ಕುವೆಂಪುರವರ ಸಾಹಿತ್ಯದ ಪ್ರಕಾರಗಳನ್ನು ನಾವೆಲ್ಲ ಓದಿ ಆ ವಿಷಯಗಳ ಚರ್ಚೆಯಾಗಬೇಕು ಅವರ ಸಂದೇಶಗಳು ಮತ್ತಷ್ಟು ಜನರನ್ನು ತಲುಪುವಂತಾಗಬೇಕು. ಅದರಲ್ಲೂ ನಮ್ಮ ಯುವ ಜನತೆ ಈ ನಿಟ್ಟಿನಲ್ಲಿ ಗಮನ ಹರಿಸಿ ಕರ್ನಾಟಕ ರತ್ನ ಕುವೆಂಪುರವರ ಜನ್ಮದಿನದಂದು ಅವರ ಸಾಹಿತ್ಯ ಕೃತಿಗಳನ್ನು ಓದಲು ಪಣ ತೊಡೋಣ.

-ಕಾಳಿಹುಂಡಿ ಶಿವಕುಮಾರ್.

6 Responses

  1. MANJURAJ says:

    ಈ ತಿಂಗಳ 29 ಕವಿಕುವೆಂಪು ಜನುಮದಿನ

    ಸಮಯೋಚಿತ ಬರೆಹ, ಧನ್ಯವಾದಗಳು

  2. ಸಾಂದರ್ಭಿಕ ಲೇಖನ ಚೆನ್ನಾಗಿ ಮೂಡಿಬಂದಿದೆ ಸಾರ್

  3. ನಯನ ಬಜಕೂಡ್ಲು says:

    ಉತ್ತಮ ಬರಹ.

  4. ಪದ್ಮಾ ಆನಂದ್ says:

    ಲೇಖಕರಂದಂತೆ ಕುವೆಂಪುರವರ ಕುರಿತಾಗಿ ಎಷ್ಟು ಬರೆದರೂ ಕಮ್ಮಿ, ಎಷ್ಟು ಓದಿದರೂ ಕಮ್ಮಿಯೇ. ಜ್ಞಾನಭಂಡಾರದ ಕುರಿತಾಗಿ ಅವರ ಜನ್ಮದಿನಕ್ಕಾಗಿ ಓದುಗರಿಗೆ ನೀಡಿದ ನೆನಪಿನ ಕಾಣಿಕೆ ಈ ಲೇಖನ. ಅಭಿನಂದನೆಗಳು.

  5. ಶಂಕರಿ ಶರ್ಮ says:

    ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ ಕುವೆಂಪು ಅವರ ಜನಮದಿನದ ಸವಿ ನೆನಪಿಗೆ ಸಲ್ಲಿಸಿದ ಸಕಾಲಿಕ ಲೇಖನ ನುಡಿನಮನವು, ಅವರ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡಿದೆ…ಧನ್ಯವಾದಗಳು.

  6. ಬಾನೆತ್ಬೆತರಕ್ಕೆ ಬೆಳೆದ ಅನರ್ಘ್ಯ ರತ್ನ ಕುವೆಂಪು ಅವರ ಬಗ್ಗೆ ಉತ್ತಮವಾದ ಲೇಖನ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: