ಕವಿಚಕ್ರವರ್ತಿಗಳ ಪ್ರತಿಭಾ ದಿಗ್ವಿಜಯ

Share Button


(ಪ್ರಾಚೀನ ಕನ್ನಡ ಸಾಹಿತ್ಯ ಸಾಮ್ರಾಜ್ಯದ ಮೂವರು ಪ್ರತಿಭಾವಂತರನ್ನು ಕುರಿತ ರೂಪಕ)

ಗುರು ಮತ್ತು ಶಿಷ್ಯರ ಸಂಭಾಷಣೆ ನಡೆಯುತ್ತಿದೆ………….
ಶಿಷ್ಯ: ಗುರುವೇ ನಮಸ್ಕಾರ. ನನಗೊಂದು ಸಂಶಯ. ಕನ್ನಡದ ಸಾಹಿತ್ಯ ಚರಿತ್ರೆಯನ್ನು ಓದುವಾಗ ರತ್ನತ್ರಯರು ಮತ್ತು ಕವಿಚಕ್ರವರ್ತಿಗಳು ಅಂತ ಗಮನಿಸಿದೆ. ರತ್ನತ್ರಯರು ಯಾರು? ಕವಿ ಚಕ್ರವರ್ತಿಗಳು ಯಾರು? ಸ್ವಲ್ಪ ವಿಶದವಾಗಿ ತಿಳಿಸಿ ಕೊಡುವಿರಾ?
ಗುರು: ನಿಜ, ಎಂಥವರಿಗೂ ಪ್ರಾರಂಭದಲ್ಲಿ ಇದು ಗೊಂದಲವೇ. ಕವಿಗಳು ತಾವೇ ಹೆಮ್ಮೆಯಿಂದ ಇಟ್ಟುಕೊಂಡ ಮತ್ತು ಉಳಿದವರು ಅಭಿಮಾನದಿಂದ ಕೊಟ್ಟುಕೊಂಡ ಬಿರುದುಗಳು. ಇಂಥ ಹಲವು ಮಾತುಗಳು ಕವಿಗಳ ಅಧ್ಯಯನದಲ್ಲಿ ಕಾಣಿಸುತ್ತವೆ.

ಶಿಷ್ಯ: ನಿಜ ಗುರುವೇ, ಈ ಬಿರುದು ಬಾವಲಿಗಳಾದರೂ ಏತಕ್ಕೆ? ಸಾಹಿತ್ಯವಿರುವುದೇ ಅಹಂಕಾರವನ್ನು ಶೋಧಿಸಿ ಕೈ ಬಿಡುವುದಕ್ಕೆ ತಾನೇ?
ಗುರು: ನಿನ್ನ ಮಾತು ಸರಿ. ಆದರೆ ನಾವೆಲ್ಲರೂ ಮನುಷ್ಯರು. ನಂನಮ್ಮ ಪ್ರತಿಭೆ ಮತ್ತು ಅದರ ನಾನಾ ನಮೂನೆಯ ಅಭಿವ್ಯಕ್ತಿಗಳಿಗೆ ಜನಮನ್ನಣೆ ಬಯಸುವುದು ಸಹಜ. ‘ಕಟ್ಟಿಯುಮೇನೋ ಮಾಲೆಗಾರನ ಪೊಸ ಬಾಸಿಗಂ, ಮುಡಿವ ಭೋಗಿಗಳಿಲ್ಲದೆ ಬಾಡಿಪೋಕುಮೆ?’ ಎಂದು ಕವಿ ಜನ್ನ ಉದ್ಗರಿಸಿಲ್ಲವೆ?

ಶಿಷ್ಯ: ಹೌದು ಗುರುವೇ, ನೀವು ಹೇಳಿದ್ದು ಲೋಕಧರ್ಮ. ನಾನು ಕೇಳಿದ್ದು ಕಾವ್ಯಧರ್ಮ. ಅಹಮನ್ನು ವಿಜೃಂಭಿಸಲು ಮತ್ತು ವೈಭವೀಕರಿಸಲು ಸಾಹಿತ್ಯ ಬಳಕೆಯಾಗುವುದು ದುರಂತ ಎಂಬುದು ನನ್ನ ಇಂಗಿತ.
ಗುರು: ನಿನ್ನ ಆಲೋಚನೆ ತಪ್ಪಲ್ಲ; ಆದರೆ ಸಾಹಿತ್ಯಾದಿ ಲಲಿತಕಲೆಗಳು ರಾಜಾಶ್ರಯದಲ್ಲಿ ಬೆಳೆದು ಬಂದವು. ಧರ್ಮಪ್ರಚಾರಕ್ಕೆ ಮತ್ತು ಉನ್ನತೋನ್ನತ ವ್ಯಕ್ತಿತ್ವ ಚಿತ್ರಣಕ್ಕೆ ಬಳಕೆಯಾದವು. ಹಾಗಿರುವಾಗ ಕಲಾಪೋಷಕರಾದ ರಾಜ ಮಹಾರಾಜರು ತಮ್ಮ ಆಸ್ಥಾನದ ಕವಿಗಳ ಪ್ರತಿಭಾ ವಿಲಾಸಕ್ಕೆ ಮಾರು ಹೋಗಿ, ದಾನದತ್ತಿಗಳನ್ನು ನೀಡುತ್ತಿದ್ದರು. ಮನಸ್ಸು ಸಂತಸಪಟ್ಟಾಗ ಹೃದಯ ಅರಳಿದಾಗ ಮೆಚ್ಚುಗೆಯ ಮಾತುಗಳು ಬರುವುದು ಸಹಜ. ಇಂಥ ಬಿರುದುಗಳು ಹೊರ ಸೂಸುತ್ತಿದ್ದವು. ಇದೊಂದು ಬಗೆಯ ಮೆಚ್ಚುಮಾತು. ಕೆಲವೊಮ್ಮೆ ಈ ಬಿರುದುಗಳು ಆ ಕವಿಯ ವ್ಯಕ್ತಿತ್ವವನ್ನೂ ಆತನ ಕವಿತಾ ಪ್ರೌಢಿಮೆಯನ್ನೂ ಸ್ಥಿರೀಕರಿಸುತ್ತಿದ್ದವು.

ಶಿಷ್ಯ: ಅಂದರೆ ಗುರುವೇ………
ಗುರು: ಇಲ್ಲೊಂದು ವಿಶೇಷವೂ ಇದೆ. ಕವಿಗಳು ಸಹ ತಮ್ಮ ಆಶ್ರಯದಾತರನ್ನು ಹೊಗಳಿ ಕಾವ್ಯ ಬರೆದರು. ಪುರಾಣ ಮತ್ತು ಚರಿತ್ರೆಯ ಪಾತ್ರಗಳಿಗೆ ಅಭೇದ ಕಲ್ಪಿಸಿ ಮಹಾಕಾವ್ಯ ರಚಿಸಿದರು. ಬಹುಶಃ ಈ ಹೊಗಳುವ ಪ್ರಶಂಸನೀಯ ಮಾತುಗಳು ಕವಿಗಳಿಂದಲೇ ಪ್ರಾರಂಭವಾಗಿರಬೆಕು. ಅವರೇ ಅಲ್ಲವೆ? ಶಬ್ದ ಚಮತ್ಕಾರ ಪ್ರವೀಣರು!

ಶಿಷ್ಯ: ಈಗ ವಿಷಯಕ್ಕೆ ಬರೋಣ ಗುರುಗಳೇ, ರತ್ನತ್ರಯರು ಮತ್ತು ಕವಿಚಕ್ರವರ್ತಿಗಳು……
ಗುರು: ಪಂಪ, ಪೊನ್ನ ಮತ್ತು ರನ್ನರನ್ನು ರತ್ನತ್ರಯರೆಂದು ಗುರುತಿಸುತ್ತಾರೆ. ಪೊನ್ನ, ರನ್ನ ಮತ್ತು ಜನ್ನರನ್ನು ಕವಿಚಕ್ರವರ್ತಿಗಳೆಂದು ಹೇಳುತ್ತಾರೆ. ಆಯಾ ಕವಿಗಳು ಸ್ವತಃ ತಮ್ಮನ್ನು ಹೀಗೆ ಕರೆದುಕೊಂಡಿದ್ದಾರೆ. ಈ ಬಿರುದುಗಳು ಅವರ ಪೂರ್ವೋತ್ತರಗಳನ್ನು ತಿಳಿಸುವ ಕುರುಹೂ ಹೌದು.

ಶಿಷ್ಯ: ಹೌದೇ! ಹಾಗಾದರೆ ಇಲ್ಲಿ ಪೊನ್ನ ಮತ್ತು ರನ್ನರು ಎರಡೂ ಕಡೆಯಲ್ಲೂ ಬರುತ್ತಾರಲ್ಲ?
ಗುರು: ಅವರಿಬ್ಬರು ರತ್ನತ್ರಯರೂ ಹೌದು; ಕವಿಚಕ್ರವರ್ತಿಗಳೂ ಹೌದು! ರನ್ನನ ನಿಜ ನಾಮಧೇಯವೇ ರತ್ನ ಎಂದು! ವಾಗ್ದೇವಿಯ ಭಂಡಾರದ ಮುದ್ರೆಯನ್ನೇ ಒಡೆದವನು ಎಂಬ ವಿಪರೀತ ಆತ್ಮಪ್ರತ್ಯಯ ಅವನದು. ಜೊತೆಗೆ ತೈಲಪನಂಥ ಚಕ್ರವರ್ತಿಯ ಆಸ್ಥಾನಕವಿ ಆಗಿದ್ದವನು. ವಿಚಿತ್ರವೆಂದರೆ ಆದಿಮಹಾಕವಿ ಪಂಪನು ಚಾಲುಕ್ಯರ ಸಾಮಂತ ದೊರೆ ಅರಿಕೇಸರಿಯ ಆಸ್ಥಾನದಲ್ಲಿದ್ದವನು. ರನ್ನನಾದರೋ ರಾಷ್ಟ್ರಕೂಟ ಚಕ್ರವರ್ತಿಗಳ ಆಸ್ಥಾನದಲ್ಲಿದ್ದವನು. ರನ್ನನು ಪ್ರತಿಭಾವಂತನೂ ಹೌದು ಮತ್ತು ಅದೃಷ್ಟವಂತನೂ ಹೌದು.

ಶಿಷ್ಯ: ಹೌದಲ್ಲವೇ ಗುರುವೇ, ರತ್ನತ್ರಯರಿಗಿಂತ ಕವಿಚಕ್ರವರ್ತಿಗಳನ್ನು ಕುರಿತು ಸ್ವಲ್ಪ ತಿಳಿಸಿ.
ಗುರು: ಆಗಲಿ. ಕವಿಚಕ್ರವರ್ತಿಗಳಲ್ಲಿ ಪೊನ್ನ ಮೊದಲನೆಯವನು. ಇವನ ಪೂರ್ಣ ಹೆಸರು ಪೊನ್ನಮಯ್ಯ. ರಾಷ್ಟ್ರಕೂಟರ ಆಸ್ಥಾನಕವಿಯಾಗಿದ್ದವನು. ಇವನ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಪ್ರೌಢಿಮೆಯನ್ನು ಗಮನಿಸಿ, ಉಭಯಭಾಷಾ ಪಾಂಡಿತ್ಯಕಾಗಿ ಉಭಯಕವಿಚಕ್ರವರ್ತಿ ಎಂಬ ಬಿರುದನ್ನು ಕೃಷ್ಣನರೇಂದ್ರನು ಕೊಟ್ಟನೆಂದು ಕೆಲವು ಕಾವ್ಯಗಳಿಂದ ಶ್ರುತಪಡುವ ಸಂಗತಿ. ಈ ಬಗ್ಗೆ ಶಾಂತಿಪುರಾಣದಲ್ಲೂ ಅಜಿತಪುರಾಣದಲ್ಲೂ ಪಂಚತಂತ್ರ ಮತ್ತು ಯಶೋಧರ ಚರಿತೆಗಳಲ್ಲೂ ಉಲ್ಲೇಖವಿದೆ. ವಿದ್ವಾಂಸರ ಪ್ರಕಾರ ಈ ಕೃಷ್ಣನರೇಂದ್ರನು ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನೇ ಆಗಿರಬೇಕು. ಪೊನ್ನನ ಕಾಲ ಕ್ರಿ. ಶ. 950. ಹಾಗಾಗಿ, ಪೊನ್ನಕವಿಯು ಪಂಪನ ನಂತರ ಮತ್ತು ರನ್ನನಿಗಿಂತ ಮೊದಲಿಗೆ ಇದ್ದವನು. ಇದರಿಂದಾಗಿ ಪೊನ್ನನು ರಾಷ್ಟ್ರಕೂಟರ ಕಾಲದವನು. ಇವನ ಮೊದಲ ಕಾವ್ಯ ಭುವನೈಕ ರಾಮಾಭ್ಯುದಯ. ಆದರೆ ಇದು ಉಪಲಬ್ಧವಿಲ್ಲ. ಪೊನ್ನನು ಮತದಿಂದ ಜೈನ. ಪಂಪನಂತೆಯೇ ಲೌಕಿಕ ಮತ್ತು ಆಗಮಿಕ ಎರಡೂ ಕಾವ್ಯಗಳಲ್ಲಿ ತನ್ನ ಪ್ರತಿಭೆಯನ್ನು ಕಾಣಿಸಲು ಹೊರಟವನು. ಬಹುಶಃ ತನ್ನ ಆಶ್ರಯದಾತನನ್ನು ರಾಮನಿಗೆ ಹೋಲಿಸಿ ಈ ಕಾವ್ಯವನ್ನು ಬರೆದಿರಬಹುದೆಂದು ಊಹಿಸಲಾಗಿದೆ. ಇವನು ಜೈನಮತವನ್ನು ಪ್ರಸಾರಿಸಲು ಶಾಂತಿಪುರಾಣವನ್ನು ಬರೆದನು. ಈ ಪುರಾಣಕಾವ್ಯದ ರಚನೆಗೆ ಪ್ರೇರಣೆ ಕೊಟ್ಟವರು ಇವನ ಸೋದರರಾದ ಮಲ್ಲಪಾರ್ಯ ಮತ್ತು ಪುನ್ನಮಾರ್ಯರು. ಇವರು ವೆಂಗಿನಾಡಿನ ಕಮ್ಮೆಕುಲಕ್ಕೆ ಸೇರಿದ ಜೈನಬ್ರಾಹ್ಮಣನ ಮಕ್ಕಳು. ಇವರು ತಮಗೆ ಗುರುವಾಗಿದ್ದ ಜಿನಚಂದ್ರರ ಗೌರವಾರ್ಥ ಪೊನ್ನನಿಂದ ಶಾಂತಿಪುರಾಣ ಬರೆಸಿದರು. ಇದನ್ನು ಪುರಾಣಚೂಡಾಮಣಿ ಎಂದು ಕರೆದು ಗೌರವಿಸಲಾಗಿದೆ.

. ಕವಿಚಕ್ರವರ್ತಿ ಪೊನ್ನ

ಮುಂದೆ ಬಂದ ರನ್ನಕವಿಯು ಪೊನ್ನನ ಶಾಂತಿಪುರಾಣವನ್ನು ಉಲ್ಲೇಖಿಸಿರುವನು. ನಯಸೇನನು ಪೊನ್ನನನ್ನು ಪ್ರಶಂಸಿಸುತ್ತಾ ‘ಪೊನ್ನನ ಮಹೋನ್ನತಿಯೆತ್ತ ಬೆಡಂಗು’ ಎಂದಿದ್ದಾನೆ. ಕೇಶಿರಾಜನು ಪೊನ್ನನ ಸುಮಾರ್ಗ ತನ್ನ ವ್ಯಾಕರಣಕ್ಕೆ ಲಕ್ಷ್ಯ ಎಂದಿದ್ದಾನೆ. ನಾಗರಾಜ ಕವಿಯು ಪೊನ್ನಿನೋಜೆ ಎಂದೂ ಜನ್ನಕವಿಯು ಪೊನ್ನನ ಬಗೆ ಎಂದೂ ಕೊಂಡಾಡಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಲಭ್ಯವಿರುವ ಪೊನ್ನನ ಎರಡು ಕೃತಿಗಳೆಂದರೆ ಶಾಂತಿಪುರಾಣ ಮತ್ತು ಜಿನಾಕ್ಷರಮಾಲೆ. ಇವೆರಡಲ್ಲದೆ, ಗತಪ್ರತ್ಯಾಗತ ಮತ್ತು ಭುವನೈಕರಾಮಾಭ್ಯುದಯಗಳೆಂಬ ಇನ್ನೆರಡು ಕೃತಿಗಳ ರಚನಾಕಾರ. ಆದರೆ ಇವೆರಡೂ ಉಪಲಬ್ಧವಿಲ್ಲ. ಭುವನೈಕರಾಮ ಎಂಬ ಬಿರುದು ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನಿಗೆ ಇತ್ತು. ಇವನನ್ನೇ ಶ್ರೀ ರಾಮಚಂದ್ರನಿಗೆ ಸಮೀಕರಿಸಿ ಕಾವ್ಯ ಬರೆದಿರಬಹುದು ಎಂದು ಡಿ ಎಲ್ ನರಸಿಂಹಾಚಾರ್ ಮತ್ತು ಬೇಂದ್ರೆಯವರು ಊಹಿಸಿದ್ದಾರೆ.

ಒಂದಂತೂ ಸ್ಪಷ್ಟ: ತನಗೆ ಕವಿಚಕ್ರವರ್ತಿ ಬಿರುದನ್ನು ಮುಮ್ಮಡಿ ಕೃಷ್ಣನೇ ಕೊಟ್ಟನೆಂದು ಪೊನ್ನನು ತನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಆದಿಮಹಾಕವಿ ಪಂಪನಿಗೆ ಈ ಅದೃಷ್ಟ ಲಭಿಸದೇ ಹೋಯಿತು. ಏಕೆಂದರೆ ಪಂಪನ ಆಶ್ರಯದಾತನಾದ ಅರಿಕೇಸರಿಯು ಸಾಮಂತ ದೊರೆ; ಚಕ್ರವರ್ತಿಯಾಗಿರಲಿಲ್ಲ!

ಪೊನ್ನನ ಜಿನಾಕ್ಷರಮಾಲೆಯು ಮೂವತ್ತೊಂಬತ್ತು ಪದ್ಯಗಳಿಂದ ಕೂಡಿದ ಚಿಕ್ಕದಾದ ಸ್ತುತಿಮಾಲಿಕೆ. ಜಿನಸ್ತುತಿಯೇ ಇದರ ವಸ್ತುವಿಚಾರ. ಪ್ರಾರ್ಥನೆ ಮತ್ತು ಮಂಗಳಪದ್ಯಗಳನ್ನು ಬಿಟ್ಟರೆ ಉಳಿದ ಎಲ್ಲ ಸ್ತುತಿಪದ್ಯಗಳು ಕಕಾರದಿಂದ ಳಕಾರದವರೆಗಿನ ವ್ಯಂಜನಾಕ್ಷರಗಳನ್ನು ಆದಿಯಾಗುಳ್ಳವು. ಇದರ ಮೂಲಕ ಪೊನ್ನಕವಿಯ ಧರ್ಮ ಮತ್ತು ಭಕ್ತಿಯ ಸ್ವರೂಪವನ್ನು ಅರಿಯಬಹುದು.

ಇನ್ನು ಶಾಂತಿಪುರಾಣದಲ್ಲಿ ಶಾಸ್ತ್ರ ಮತ್ತು ಪುರಾಣ ಎರಡರ ವಿಚಾರಗಳೂ ಬಂದಿವೆ. ಹನ್ನೆರಡು ಆಶ್ವಾಸಗಳಿಂದ ಕೂಡಿದ ದೊಡ್ಡಕಾವ್ಯವಿದು. ಶಾಂತಿನಾಥನು ಇಪ್ಪತತ್ತೈದು ಸಾವಿರ ವರುಷಗಳ ಕಾಲ ಸುಖ ಸಂತೋಷಗಳಿಂದಿದ್ದನು. ಆಯುಧಾಗಾರದಲ್ಲಿ ಚಕ್ರರತ್ನ ಕಾಣಿಸಿಕೊಂಡು ದಿಗ್ವಿಜಯಕ್ಕೆ ಹೊರಟು ಲೋಕವನ್ನು ಗೆಲ್ಲುತ್ತಾನೆ. ಲೋಕಾಂತಿಕದೇವರ ಉಪದೇಶದಿಂದಾಗಿ ವೈರಾಗ್ಯ ತಲೆದೋರುತ್ತದೆ. ಹಾಗಾಗಿ ಪರಿನಿಷ್ಕ್ರಮಣಗೊಂಡು ತಪಸ್ಸಿಗೆ ತೆರಳುವನು. ಹದಿನಾರು ವರುಷಗಳ ಕಾಲ ತಪಸ್ಸು ಮಾಡಿ ಕರ್ಮ ಸವೆಸಿದ ನಂತರ ಕೇವಲಜ್ಞಾನ ಹೊಂದುವನು. ಶಾಂತಿಪುರಾಣದಲ್ಲಿ ಕಥಾಭಾಗ ಕಡಮೆ, ಭವಾವಳಿ ಕಥನಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಪೊನ್ನನು ಜೈನಶಾಸ್ತ್ರವನ್ನು ಬಲ್ಲ ನಿಪುಣ. ಪಂಪನಲ್ಲಿ ಧರ್ಮ ಮತ್ತು ಕಾವ್ಯಧರ್ಮ ಎರಡೂ ಹದವಾಗಿ ಬೆರೆತಿದೆ. ಆದರೆ ಪೊನ್ನನ ಶಾಂತಿಪುರಾಣದಲ್ಲಿ ಹೀಗಾಗಿಲ್ಲ. ಶಾಸ್ತ್ರಭಾಗಗಳು ತೀರ್ಥಂಕರನ ಜೀವನದ ಘಟನೆ-ಸಂಘಟನೆಗಳೊಂದಿಗೆ ಹದವಾಗಿ ಬೆರೆಯುವುದಿಲ್ಲ. ಮತಧರ್ಮವೇ ಮೇಲುಗೈ ಸಾಧಿಸಿ ಬಿಟ್ಟಿದೆ. ಕಾವ್ಯಧರ್ಮವು ಸೊರಗಿದೆ ಎಂದೇ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಅವನಿಗೆ ಭಾಷಾಸಂಪತ್ತಿದೆ; ಹಿಡಿತವಿದೆ. ನಡು ನಡುವೆ ಸಂಸ್ಕೃತದ ಸೂಕ್ತಿ ಮತ್ತು ಕನ್ನಡದ ಗಾದೆಗಳನ್ನು ಔಚಿತ್ಯಪೂರ್ಣವಾಗಿ ಬಳಸುತ್ತಾನೆ.

ಈಗಾಗಲೇ ವಿದ್ವಜ್ಜನರು ಗುರುತಿಸಿರುವಂತೆ ಪಂಪಪೂರ್ವ ಕಾಲಘಟ್ಟದಲ್ಲಿ ಕೃತಿರಚನೆ ಮಾಡಿದ ಅಸಗನ ಶಾಂತಿಪುರಾಣವನ್ನು ಪೊನ್ನಕವಿಯು ಅನುಸರಿಸಿರಬಹುದು. ಇದು ಗೊತ್ತಾಗಲು ಅಸಗನ ಆ ಕೃತಿಯು ನಮಗೆ ದೊರೆಯಬೇಕು. ಜೊತೆಗೆ ಕಾಳಿದಾಸ ವಿರಚಿತ ರಘುವಂಶದ ಒಂದೆರಡು ಸಂದರ್ಭ ಸನ್ನಿವೇಶಗಳನ್ನು ಈತ ತನ್ನದಾಗಿಸಿಕೊಂಡು ಕಲಾತ್ಮಕ ಕಳ್ಳನಾಗಿದ್ದಾನೆ ಕೂಡ. ಅಷ್ಟರಮಟ್ಟಿಗೆ ಪೊನ್ನನು ಕಾಳಿದಾಸನ ಪದ್ಯಗಳನ್ನು ಭಾಷಾಂತರಿಸಿರುವನು. ಕೆಲವೊಂದು ಕಡೆ ಆತನ ಪದ್ಯಗಳನ್ನು ಗದ್ಯವಾಗಿಸಿದ್ದಾನೆ. ಹಾಗಾಗಿಯೇ ವಿಮರ್ಶಕರು ಪೊನ್ನನನ್ನು ಪ್ರಾಚೀನ ಗಣ್ಯಭಾಷಾಂತರಕಾರ ಎಂದು ಹೆಸರಿಸಿ ವಿನೀತ ಗೌರವ ಕಾಣ್ಕೆ ಸಲ್ಲಿಸಿದ್ದಾರೆ.

ಪೊನ್ನನಲ್ಲಿ ಪಂಪನ ತೇಜಸ್ಸಾಗಲೀ ರನ್ನನ ಓಜಸ್ಸಾಗಲೀ ಎರಡೂ ಇಲ್ಲವಾದರೂ ಅವರಿಬ್ಬರ ಸಮಕ್ಕೆ ತೂಗಲು ಪ್ರಯತ್ನ ಹಾಕಿದವನು ಎಂದು ಧಾರಾಳ ಹೇಳಬಹುದು. ಒಂದು ವಿಷಾದನೀಯವೆಂದರೆ ಈತನ ಭುವನೈಕ ರಾಮಾಭ್ಯುದಯ ಲಭಿಸಿದ್ದರೆ ಚೆನ್ನಾಗಿತ್ತು.

ಶಿಷ್ಯ: ಕವಿಚಕ್ರವರ್ತಿಗಳಲ್ಲಿ ಮೊದಲಿಗನಾದ ಪೊನ್ನನನ್ನು ಕುರಿತು ದೀರ್ಘವಾಗಿ ತಿಳಿದುಕೊಳ್ಳುವ ಸದವಕಾಶ ಸಿಕ್ಕಿತು ಗುರುಗಳೇ. ರನ್ನನ ಸಾಹಿತ್ಯಕ ದಿಗ್ವಿಜಯವನ್ನು ಸ್ವಲ್ಪ ತಿಳಿಸಿ.

ಗುರು: ರನ್ನನ ಸಂಕಲ್ಪಬಲಕ್ಕೆ ದೈವಬಲ ಜೊತೆಯಾಗಿ ಸಾರ್ಥಕ ಕವಿರತ್ನವಾದನು. ‘ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ? ಸಿಡಿಲ ಚಕ್ಕೆ!’ ಎಂದು ಕವಿ ಕುವೆಂಪು ಅವರು ಉದ್ಗರಿಸಿರುವುದನ್ನು ನೀನು ಕೇಳಿಯೇ ಇರುವೆ. ಅವನನ್ನು ಅವರು ಶಕ್ತಿಕವಿ ರನ್ನ ಎಂದು ಕರೆದು ಗೌರವಿಸಿದ್ದಾರೆ. ಈತನ ಕಾಲ ಕ್ರಿ ಶ 990 ರ ಆಸುಪಾಸು. ಪಂಪನಿಂದ ಧೀಶಕ್ತಿಯನ್ನೂ ತನ್ನ ಗೆಳೆಯನಾದ ಚಾವುಂಡರಾಯನಿಂದ ಸ್ಥಾನಮಾನದ ಯುಕ್ತಿಯನ್ನೂ ಪಡೆದು ಧೀಮಂತವಾಗಿ ಬಾಳಿ ಬದುಕಿದನು ಮತ್ತು ಬರೆದನು.

ಈತನ ಎರಡು ಕಾವ್ಯಗಳು ಸಿಕ್ಕಿವೆ: ಅಜಿತತೀರ್ಥಕರ ಪುರಾಣ ತಿಲಕ ಮತ್ತು ಸಾಹಸಭೀಮ ವಿಜಯ. ಇನ್ನೆರಡು ಕೃತಿಗಳು ಉಪಲಬ್ಧವಿಲ್ಲ. ಒಂದು ಚಕ್ರೇಶ್ವರ ಚರಿತ ಮತ್ತೊಂದು ಪರಶುರಾಮ ಚರಿತ. ಇನ್ನುಳಿದಂತೆ ರನ್ನಕಂದ ಎಂಬುದು ಪೂರ್ಣವಾಗಿ ದೊರೆತಿಲ್ಲದ ಕನ್ನಡ ನಿಘಂಟು. ರನ್ನನ ಇತಿವೃತ್ತ ವಿಚಾರದಲ್ಲಿ ವಿದ್ವಾಂಸರ ನಡುವೆ ಸಾಕಷ್ಟು ಚರ್ಚೆಗಳಾಗಿವೆ. ಜೈನಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಘಟ್ಟದಲ್ಲಿ ರನ್ನನಿದ್ದ ಎಂಬುದು ಮುಖ್ಯ. ದಾನಚಿಂತಾಮಣಿ ಅತ್ತಿಮಬ್ಬೆಯ ಪ್ರೇರಣೆ ಮತ್ತು ಆಕೆಯ ಮಹಿಮೆಗಳನ್ನು ರನ್ನನು ಇನ್ನಿಲ್ಲದಂತೆ ಬಣ್ಣಿಸಿರುವನು. ತನ್ನ ಮಗಳಿಗೆ ಅತ್ತಿಮಬ್ಬೆ ಎಂದೇ ಹೆಸರಿಟ್ಟನು. ಪೊನ್ನನ ಶಾಂತಿಪುರಾಣವನ್ನು ಒಂದು ಸಾವಿರ ಪ್ರತಿ ಮಾಡಿಸಿ ಹಂಚಿದ ಕೀರ್ತಿ ದಾನಚಿಂತಾಮಣಿ ಅತ್ತಿಮಬ್ಬೆಯದು. ರನ್ನನು ಕೃತಿಗಳನ್ನು ರಚಿಸುವಾಗ ಚಕ್ರವರ್ತಿಯಾದ ತೈಲಪನು ಆಡಳಿತ ಮಾಡುತ್ತಿದ್ದನು. ಹಾಗಾಗಿ ರನ್ನನ ಕಾಲವನ್ನು ಕ್ರಿ ಶ ೯೭೩ ರಿಂದ ೯೯೭ ರ ವರೆಗೆ ಇದೆಯೆಂದು ನಿಗದಿಗೊಳಿಸಿದ್ದಾರೆ.

ಕವಿಚಕ್ರವರ್ತಿ ರನ್ನ

ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಪ್ರತಿಷ್ಠಾಪನಾ ಕಾಲ ಕ್ರಿ ಶ ೯೮೪. ಅತ್ತಿಮಬ್ಬೆಯು ಬೆಟ್ಟವನ್ನು ಹತ್ತಿ, ‘ಉನ್ನತ ಕುಕ್ಕುಟೇಶ್ವರ ಜಿನೇಶ್ವರ’ ನನ್ನು ಕಂಡಿದ್ದಳು ಎಂದು ರನ್ನ ತಿಳಿಸಿರುವುದರಿಂದ ಕಾಲನಿರ್ಣಯಕ್ಕೊಂದು ಸಾಕ್ಷ್ಯ ಲಭಿಸಿದಂತಾಗಿದೆ.

ಇನ್ನು ಗದಾಯುದ್ಧ ರಚನಾಕಾಲವನ್ನು ಕುರಿತು ವಿದ್ವಾಂಸರು ಸಾಕಷ್ಟು ಕಾಲ ಚರ್ಚೆ ನಡೆಸಿದರು. ಇಲ್ಲೆಲ್ಲ ಹಸ್ತಪ್ರತಿಶಾಸ್ತ್ರ ಮತ್ತು ಗ್ರಂಥಸಂಪಾದನಾಶಾಸ್ತ್ರಗಳ ತಿಳಿವಳಿಕೆ ಬೇಕು. ಶಾಸನತಜ್ಞರು ಮತ್ತು ಚರಿತ್ರಕಾರರ ನೆರವು ಸಹ ಬೇಕು. ಒಟ್ಟಿನಲ್ಲಿ ರನ್ನಕವಿಯು ರಾಷ್ಟ್ರಕೂಟರ ದೊರೆಗಳಲ್ಲಿ ಒಬ್ಬನಾದ ಇರಿವಬೆಡಂಗ ಸತ್ಯಾಶ್ರಯನ ಆಸ್ಥಾನದಲ್ಲಿದ್ದವನು. ಈತನು ತೈಲಪನ ಮಗ. ಈ ಕಾಲಘಟ್ಟದಲ್ಲಿ ಗದಾಯುದ್ಧ ರಚನೆಯಾಗಿರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ರನ್ನನು ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿ ಮೆರೆದವನು. ಘಟಪ್ರಭಾ ಮತ್ತು ಕೃಷ್ಣಾನದಿಗಳು ಹರಿಯುವ ನಡುವಿನ ಪ್ರದೇಶವೇ ಬೆಳುಗಲಿ. ಇಂಥ ನಾಡಿನಲ್ಲಿ ಇದ್ದುದು ಜಂಬುಖಂಡಿ. ಇಲ್ಲಿರುವುದೇ ಮುದುವೊಳಲು (ಈಗಿನ ಮುಧೋಳ) ರನ್ನ ಹುಟ್ಟಿದ ಸ್ಥಳ. ಬಳೆಗಾರರ ಕುಟುಂಬ. ತಾಯಿ ಅಬ್ಬಲಬ್ಬೆ, ತಂದೆ ಜಿನವಲ್ಲಭೇಂದ್ರ. ರೇಚಣ ಮತ್ತು ಮಾರಮಯ್ಯರಿಬ್ಬರು ಇವನ ಅಣ್ಣಂದಿರು. ಜಕ್ಕಿ ಮತ್ತು ಶಾಂತಿ ಎಂಬಿಬ್ಬರು ಇವನ ಪತ್ನಿಯರು. ಈತನ ಇಬ್ಬರು ಮಕ್ಕಳು ರಾಯ ಮತ್ತು ಅತ್ತಿಮಬ್ಬೆ. ಚಾವುಂಡರಾಯನಿಗೂ ಗುರುಗಳಾಗಿದ್ದ ಅಜಿತಸೇನಾಚಾರ್ಯರೇ ರನ್ನನಿಗೂ ಗುರು.

ಶಿಷ್ಯ: ಗೊತ್ತಾಯಿತು ಗುರುಗಳೇ, ನಾನು ತ ರಾ ಸುಬ್ಬರಾಯರು ಬರೆದಿರುವ ‘ಶಿಲ್ಪಶ್ರೀ’ ಎಂಬ ಕಾದಂಬರಿಯನ್ನು ಓದಿರುವೆ. ಅದರಲ್ಲಿ ರನ್ನ ಮತ್ತು ಚಾವುಂಡರಾಯರ ಅಪ್ರತಿಮ ಸ್ನೇಹೌದಾರ್ಯವನ್ನು ಕಾದಂಬರಿಕಾರರು ಅಮೋಘವಾಗಿ ಕಟ್ಟಿ ಕೊಟ್ಟಿದ್ದಾರೆ.
ಗುರು: ಹೌದು, ‘ಕೊಂಡು ತಂದು ಹೊತ್ತು ಮಾರಿ ಲಾಭ ಗಳಿಸಲು ವಿದ್ಯೆಯೇನು ಬಳೆಯ ಮಲಾರವೇ?’ ಎಂದು ಗುರುಗಳು ಕೇಳಿದಾಗ ವಿದ್ಯಾಕಾಂಕ್ಷಿಯಾಗಿ ಬಂದಿದ್ದ ರನ್ನನು ದಿಗ್ಭ್ರಾಂತನಾಗುವನು. ಅವನ ಅಚಲನಿಷ್ಠೆಯನ್ನು ಪರೀಕ್ಷಿಸಿದ ನಂತರವೇ ಗುರುವು ರನ್ನನಿಗೆ ವಿದ್ಯೆ ಹೇಳಿ ಕೊಡಲು ತಯಾರಾಗುವರು.

ಪಂಪ ಮತ್ತು ಪೊನ್ನರ ಕಾವ್ಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದವನು ರನ್ನ. ಸಂಸ್ಕೃತ ಮತ್ತು ಪ್ರಾಕೃತಗಳನ್ನು ಜೀರ್ಣಿಸಿಕೊಂಡನು. ತನ್ನ ವಿದ್ಯಾಭ್ಯಾಸದ ಕಾರಣಕ್ಕಾಗಿಯೇ ಗಂಗರಾಜ್ಯಕ್ಕೆ ಪ್ರಯಾಣ ಮಾಡಿದನು ಎಂದೇ ತಿಳಿಯಲಾಗಿದೆ. ಆಗಲೇ ರನ್ನನಿಗೆ ಚಾವುಂಡರಾಯನ ಸಖ್ಯ ದೊರೆತದ್ದು. ಶ್ರವಣ ಬೆಳಗೊಳದಲ್ಲಿ ಶ್ರೀ ಚಾವುಣ್ಡಯ್ಯ, ಶ್ರೀ ಕವಿರತ್ನ ಎಂದು ಅಕ್ಕಪಕ್ಕದಲ್ಲೇ ಕೆತ್ತಿರುವುದು ಇದಕ್ಕೆ ಸಾಕ್ಷಿ.

ರನ್ನನೆಂದರೆ ಅದೇನೋ ಒಂದು ಬಗೆಯ ಉದ್ವಿಗ್ನತೆಯ ಕೆಚ್ಚು ಮತ್ತು ತಣ್ಣನೆಯ ಕಿಚ್ಚು. ಆತನ ಆತ್ಮವಿಶ್ವಾಸದ ಪ್ರಶಂಸೆ ಒಮ್ಮೊಮ್ಮೆ ಅಹಂಭಾವವಾಗಿ ಕಾಣಿಸಿದರೂ ಆತನು ಕಷ್ಟಪಟ್ಟು ಜ್ಞಾನಾರ್ಜನೆ ಮಾಡಿದ್ದು ಮತ್ತು ಕೃತಿರತ್ನಗಳನ್ನು ರಚಿಸಿ ಸಾಧನೆ ಮಾಡಿದ್ದನ್ನು ನೆನೆದರೆ ಇದೇನೂ ಅತಿಶಯೋಕ್ತಿ ಎಂದೆನಿಸದು.

‘ರನ್ನನ ಕೃತಿರತ್ನಮುವಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ?’ ಎಂದು ಸವಾಲು ಹಾಕುತ್ತಾನೆ. ‘ಮೆಚ್ಚಿ ಬಣ್ಣಿಸದರಾರ್ ಕವಿರತ್ನನ ಕಾವ್ಯರತ್ನಮಂ’ ಎಂದು ಬೀಗುತ್ತಾನೆ. ‘ಏಂ ಮಸುಲಿಸಿದನೋ ಬಹುರತ್ನಾವಸುಂಧರಾಯೆಂಬ ವಾಕ್ಯಮಂ’ ಎಂದು ಉದ್ಘೋಷಿಸುತ್ತಾನೆ. ತಾನು ಬರೆದ ಗದಾಯುದ್ಧದಲ್ಲಿ ಕಲ್ಯಾಣ ಚಾಲುಕ್ಯ ವಂಶದ ವಿವರಗಳನ್ನು ಕೊಟ್ಟಿದ್ದಾನೆ.
ಪಡೆಯೆಡೆಯ ಕಡೆಯ ಬಡವ
ರ್ಕುಡೆ ಪಡೆದನೊ ಚಕ್ರವರ್ತಿಯೊಳ್ತೈಲಪನೊಳ್
ಪಡೆದಂ ಮಹಿಮೋನ್ನತಿಯಂ
ಪಡೆದಂ ಕವಿಚಕ್ರವರ್ತಿವೆಸರಂ ರನ್ನಂ (ಗದಾಯುದ್ಧ ೧-೩೭) ಜೊತೆಗೆ ತನ್ನ ಅಜಿತಪುರಾಣದಲ್ಲಿಯೂ ಅಭಿನವ ಕವಿಚಕ್ರವರ್ತಿ ಎಂದು ಕರೆದುಕೊಂಡಿದ್ದಾನೆ.

‘ಪೊನ್ನ, ಜನ್ನರಿಗೂ ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟಿದ್ದು ಚಕ್ರವರ್ತಿಗಳೇ. ಆದ್ದರಿಂದ ಚಕ್ರವರ್ತಿಗಳನ್ನು ಬಿಟ್ಟು ಉಳಿದವರು ಈ ಬಿರುದನ್ನು ಕೊಡುತ್ತಿರಲಿಲ್ಲವೆಂದು ಊಹಿಸಬಹುದು’ ಎಂದು ಡಾ. ಎನ್ ಎಸ್ ತಾರಾನಾಥ್ ಅವರು ಸರಿಯಾಗಿಯೇ ಗುರುತಿಸಿದ್ದಾರೆ.

ಅಜಿತಪುರಾಣವು ಎರಡನೆಯ ತೀರ್ಥಂಕರನ ಚರಿತೆ. ಜೈನಧಾರ್ಮಿಕ ಕಾವ್ಯ. ಹನ್ನೆರಡು ಆಶ್ವಾಸಗಳುಳ್ಳ ಚಂಪೂಕೃತಿ. ಮೊದಲನೆಯ ಮತ್ತು ಕೊನೆಯ ಆಶ್ವಾಸಗಳಲ್ಲಿ ತನಗೆ ಪ್ರೇರಣೆಯನ್ನಿತ್ತು ಬೆಳೆಸಿದ ದಾನಚಿಂತಾಮಣಿ ಅತ್ತಿಮಬ್ಬೆಯ ಮತ್ತು ಆಕೆಯ ಪೂರ್ವಜರ ಚರಿತ್ರೆಯನ್ನು ಉಜ್ವಲವಾಗಿ ಕಟ್ಟಿಕೊಟ್ಟಿದ್ದಾರೆ.

ಅತ್ತಿಮಬ್ಬೆಯನ್ನು ಕಂಡರೆ ರನ್ನನಿಗೆ ಅಪಾರ ಗೌರವ ಮತ್ತು ಕೃತಜ್ಞತೆ. ಜೊತೆಗೆ ಶ್ರದ್ಧಾಭಕ್ತಿ. ಈತನ ಈ ಮೊದಲ ಮತ್ತು ಕೊನೆಯ ಅಧ್ಯಾಯಗಳ ವಿವರಗಳು ದೇವರಿಗೆ ಹಚ್ಚಿಟ್ಟ ನಂದಾದೀಪ ಎಂದು ವಿದ್ವಾಂಸರು ಹೆಮ್ಮೆಯಿಂದ ತಿಳಿಸಿದ್ದಾರೆ. ಪುರಾಣದ ಕತೆಯೊಂದಿಗೆ ಸಮಕಾಲೀನ ಚರಿತ್ರೆಯನ್ನು ಬೆಸೆದು ಹೇಳಿದುದು ಹೊಸ ರೀತಿಯದು. ಅಜಿತನ ಕತೆಗಿಂತಲೂ ಅತ್ತಿಮಬ್ಬೆಯ ವಿಚಾರಗಳೇ ಓದುಗರಿಗೆ ಆಪ್ಯಾಯಮಾನವಾಗಿವೆ.

ಬುಧಜನವಂದಿತೆ, ದಾನಗುಣೈಕಾಂಬುಧಿ, ಚಕ್ರವರ್ತಿಪೂಜಿತೆ, ಜಿನಧರ್ಮಪತಾಕೆ ಆದ ಅತ್ತಿಮಬ್ಬೆಯು ಕವಿರತ್ನನಿಂದ ಈ ಪುರಾಣವನ್ನು ಬರೆಸಿದಳು ಎನ್ನುತ್ತಾನೆ.
ಬಿಳಿಯರಳೆಯಂತೆ ಗಂಗಾ
ಜಳದಂತೆಸೆವಜಿತಸೇನಾಮುನಿಪತಿಯ ಗುಣಾ
ವಳಿಯಂತೆ ನೆಗಳ್ದ ಕೊಪಣಾ
ಚಳದಂತೆ ಪವಿತ್ರಮತ್ತಿಮಬ್ಬೆಯ ಚರಿತಂ (೧೨-೬)

ಬೆಳದಿಂಗಳ ಚೆಲುವನ್ನು ಸವಿಯುತ್ತಾ ನಿಂತಿದ್ದ ರಾಜ ಅಜಿತನಿಗೆ ಆಕಾಶದಲ್ಲಿ ಉಲ್ಕಾಪಾತವಾದದ್ದು ಕಾಣುವುದು. ಕೂಡಲೇ ಅವನು ತನ್ನ ಪೂರ್ವಜನ್ಮ ಸ್ಮರಣೆಯಿಂದ ಪ್ರಕ್ಷುಬ್ಧಗೊಂಡು ವೈರಾಗ್ಯಪರನಾಗುವನು. ಹೀಗೆ ಆಗಸದ ಅದ್ಭುತ ಕೂಡ ವೈರಾಗ್ಯಕ್ಕೆ ಕಾರಣವಾಗುವುದು ಇಲ್ಲಿನ ವಿಶೇಷ. ಅಜಿತಪುರಾಣದ ಎಲ್ಲ ಪದ್ಯಗಳಲ್ಲೂ ರನ್ನನ ಪಾಂಡಿತ್ಯವು ನಿಗಿನಿಗಿ ಕೆಂಡದಂತೆ ಉರಿಯುತ್ತದೆ.

ಈ ಪುರಾಣಕೃತಿಯ ಮೊದಲಿಗೆ ಅತ್ತಿಮಬ್ಬೆಯ ವಿವರಗಳು ಬರುತ್ತವೆ. ಈಕೆಯು ಮಲ್ಲಪ ಮತ್ತು ಅಪ್ಪಕಬ್ಬೆಯೆಂಬ ದಂಪತಿಗಳ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬಳು. ಈಕೆಯ ತಂಗಿ ಗುಂಡಮಬ್ಬೆ. ಇಬ್ಬರೂ ಚಾಲುಕ್ಯ ಚಕ್ರವರ್ತಿ ಮಹಾಮಂತ್ರಿ ದಲ್ಲಪನ ಮಗ ನಾಗದೇವನ ಹೆಂಡತಿಯರು. ನಾಗದೇವನು ತನ್ನ ರಾಜನ ಪರವಾಗಿ ಹತ್ತು ಹಲವು ಯುದ್ಧಗಳನ್ನು ಮಾಡಿದ ಸಂದರ್ಭದಲ್ಲಿ ವೀರಮರಣ ಹೊಂದಿದನು. ಆಗ ಗುಂಡಮಬ್ಬೆಯು ಸತಿ ಸಹಗಮನವಾದಳು. ಅತ್ತಿಮಬ್ಬೆ ಮಾತ್ರ ಸಹಗಮನವಾಗದೆ ವ್ರತನಿಷ್ಠೆ ಮತ್ತು ಸತ್ಕಾರ್ಯಗಳಿಂದ ಬದುಕಿದಳು. ಇದೆಲ್ಲವೂ ನಮಗೆ ಆ ಕಾಲಮಾನದ ಸಾಂಸ್ಕೃತಿಕ ವಿದ್ಯಮಾನಗಳನ್ನು ಚರಿತ್ರೆಯ ಜೊತೆಗೇ ಕಟ್ಟಿ ಕೊಡುತ್ತವೆ. ಒಟ್ಟಿನಲ್ಲಿ ಇದು ಭಕ್ತಿ ಮತ್ತು ವೈರಾಗ್ಯಗಳ ಕಥನ.

ಇನ್ನು ರನ್ನನ ಸಾಹಸಭೀಮವಿಜಯವನ್ನು ಗಮನಿಸಬಹುದು. ಹತ್ತು ಆಶ್ವಾಸಗಳುಳ್ಳ ಚಂಪೂಕಾವ್ಯವಿದು. ಪಂಪ ವಿರಚಿತ ವಿಕ್ರಮಾರ್ಜುನವಿಜಯದ ಹದಿಮೂರು ಮತ್ತು ಹದಿನಾಲ್ಕನೆಯ ಆಶ್ವಾಸಗಳಿಂದ ರನ್ನನು ಪ್ರೇರಿತನಾಗಿ ಇದನ್ನು ರಚಿಸಿರುವುದು ಸ್ಪಷ್ಟ. ವಿಚಿತ್ರವೆಂದರೆ ವಾಲ್ಮೀಕಿ, ವ್ಯಾಸ, ಬಾಣ ಮತ್ತು ಕಾಳಿದಾಸರನ್ನು ನೆನೆಯುವ ರನ್ನನು ಪಂಪ, ಭಾಸ, ಭಟ್ಟನಾರಾಯಣರನ್ನು ಸ್ಮರಿಸದೇ ಕೈ ಬಿಟ್ಟಿದ್ದಾನೆ. ಹಾಗೆ ನೋಡಿದರೆ ಆತ ತಾನು ನೆನೆಯದ ಈ ಮೂವರಿಂದಲೇ ಪ್ರಭಾವಕ್ಕೆ ಒಳಗಾಗಿರುವುದು ಸುಸ್ಪಷ್ಟ.

ಪಂಪನು ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ವಿಕ್ರಮಾರ್ಜುನವಿಜಯ ಮಹಾಕಾವ್ಯವನ್ನು ಬರೆದಂತೆ, ರನ್ನನು ಸತ್ಯಾಶ್ರಯನನ್ನು ಭೀಮನಿಗೆ ಹೋಲಿಸಿ ಸಾಹಸಭೀಮವಿಜಯ ಬರೆದನು. ಭೀಮನ ಸಾಹಸಗಾಥೆಯಿದು. ದ್ರೌಪದಿಗೆ ನೀಡಿದ್ದ ಪ್ರತಿಜ್ಞೆಯನ್ನು ಪೂರೈಸುವುದೇ ಭೀಮನ ಕೆಲಸ. ದುರ್ಯೋಧನನ ಊರುಭಂಗ ಮತ್ತು ಕಿರೀಟಭಂಗಗಳಾಗುತ್ತವೆ. ಭೀಮನ ವಿಜಯದ ಸಂಭ್ರಮ ಮತ್ತು ಭೀಮ ಪಟ್ಟಾಭಿಷೇಕದ ಮೂಲಕ ಕಾವ್ಯ ಕೊನೆಗೊಳ್ಳುವುದು.

ದ್ರೌಪದಿಯ ಕಳವಳವೇ ಬೇರೆ. ಧರ್ಮರಾಯನು ಸಂಧಿಗೆ ಒಪ್ಪಿದರೆ ತನ್ನ ಗತಿಯೇನು? ಎಂದು ಈಕೆ ಕುದಿಯುವಳು. ಅವಳಿಗೆ ಸಂಧಾನ ಇಷ್ಟವಿಲ್ಲ. ಅದಕ್ಕಾಗಿ ಕುರುಕ್ಷೇತ್ರದಲ್ಲಿ ಭೀಮನನ್ನು ಸಂಧಿಸಿ, ಅವನಿಂದ ಪ್ರತಿಜ್ಞೆ ಮಾಡಿಸುವಳು. ಸಂಧಿಯಾಗಬಾರದು, ಯುದ್ಧ ಏರ್ಪಟ್ಟು, ಶತ್ರುನಾಶವಾಗಬೇಕು ಎಂಬುದು ಅವಳ ಮನದಿಂಗಿತ.

ಎಲ್ಲರನ್ನೂ ಕಳೆದುಕೊಂಡ ದುರ್ಯೋಧನನಿಗೆ ಈಗ ದೈವಾನುಗ್ರಹವಿಲ್ಲ. ಅದಕ್ಕಾಗಿ ಕಾಲಯಾಪನೆ ಮಾಡಲು ಸಂಜಯನ ಸಲಹೆಯಂತೆ, ಭೀಷ್ಮರನ್ನು ಕಾಣುವನು. ಭೀಷ್ಮರಿಂದ ಜಲಸ್ತಂಭನ ವಿದ್ಯೆಯನ್ನು ಪಡೆದು ಬಲರಾಮಾದಿಗಳು ಬರುವವರೆಗೂ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳುವನು. ಈತನ ಇರವನ್ನು ಪತ್ತೆ ಹಚ್ಚಿದ ಪಾಂಡವರು ಅವನನ್ನು ಕೊಳದಿಂದ ಎಬ್ಬಿಸಲು ಪ್ರಯತ್ನಿಸುವರು. ಆ ನುಡಿಗಳಿಂದ ಕೋಪೋದ್ರಿಕ್ತನಾದ ಕೌರವನು ‘ನೀರೊಳಗಿರ್ದುಂ ಬೆಮರಿ’ ಈಚೆ ಬಂದು ಭೀಮನೊಂದಿಗೆ ಸೆಣಸುವನು. ಒಮ್ಮೆ ಮೂರ್ಛೆ ತಪ್ಪಿ ಕೆಳಗೆ ಬಿದ್ದ ಭೀಮನನ್ನು ಕೌರವನು ಹೊಡೆಯದೇ ಧರ್ಮಯುದ್ಧವನ್ನು ಅನುಸರಿಸುವನು. ಆದರೆ ಕೃಷ್ಣನ ಸೂಚನೆಯಂತೆ ಭೀಮನು ಕೌರವನ ತೊಡೆ ಮುರಿಯುವನು. ಬಲರಾಮನು ವಿರೋಧ ಮಾಡಿದರೂ ಲೆಕ್ಕಿಸದೇ ಆತನ ಮುಕುಟಭಂಗ ಮಾಡಿ ಪ್ರತಿಜ್ಞೆ ಪೂರೈಸುವನು. ರಣರಂಗಕ್ಕೆ ದ್ರೌಪದಿಯನ್ನು ಕರೆಸಿ, ಭೀಮನು ಆಕೆಯ ಕೇಶ ಕಟ್ಟುವನು.

ಈ ಕಾವ್ಯದ ಬಹು ದೊಡ್ಡ ಚರ್ಚೆಯೆಂದರೆ ಇದರ ಕಥಾನಾಯಕನನ್ನು ಕುರಿತದ್ದು. ದುರ್ಯೋಧನನ ಪಾತ್ರಚಿತ್ರಣದಲ್ಲಿ ರನ್ನಕವಿಯು ಅಪಾರ ಪ್ರಮಾಣದ ಔದಾರ್ಯವನ್ನೂ ಅಭಿಮಾನವನ್ನೂ ವ್ಯಕ್ತಪಡಿಸಿ, ಅವನ ಮಾನವೀಯ ಗುಣಗಳನ್ನು ಹೊಗಳುತ್ತಾನೆ. ಬಹುಶಃ ಈ ಸೂಚನೆಯನ್ನು ‘ಏಂ ಅಭಿಮಾನಧನಂ ಸುಯೋಧನಂ’ ಎಂದ ಪಂಪನಿಂದ ಗ್ರಹಿಸಿರಬೇಕು. ಅದಕ್ಕೆ ಪ್ರತಿಯಾಗಿ ಭೀಮನ ವರ್ತನೆಯಲ್ಲಿ ಉದ್ಧಟತನ ಚಿತ್ರಿತವಾಗಿದೆ. ಹಾಗಾಗಿ ಗದಾಯುದ್ಧದ ಕಥಾನಾಯಕ ದುರ್ಯೋಧನನೇ ಹೊರತು ಭೀಮನಲ್ಲ ಎಂಬ ಜಿಜ್ಞಾಸೆ ನಡೆದಿದೆ. ಧರ್ಮಯುದ್ಧ ಆಚರಿಸಿದ ದುರ್ಯೋಧನ ತನ್ನ ನತದೃಷ್ಟತೆ ಮತ್ತು ವಿಲಾಪಗಳಿಂದಾಗಿ ಕವಿಯ ಕಾರುಣ್ಯವನ್ನೂ ಪಡೆಯುತ್ತಾನೆ. ಇದಕ್ಕೆ ಧರ್ಮ ವಿರುದ್ಧವಾಗಿ ಭೀಮನು ಅವನ ತೊಡೆ ಮುರಿದು, ಕಿರೀಟವನ್ನು ಕಾಲಿನಿಂದ ಒದೆಯುತ್ತಾನೆ. ಇವೆಲ್ಲ ಅಂಶಗಳಿಂದಾಗಿ ದುರ್ಯೋಧನನು ನೆಲಕ್ಕೆ ಆಸೆ ಪಡುವ ಲೋಭಿಯಾಗದೇ, ಬೇರೊಂದು ರೀತಿಯಲ್ಲಿ ಚಿತ್ರಿತಗೊಂಡಿದ್ದಾನೆ. ‘ನೆಲ ಕಿರಿವೆನೆಂದು ಬಗೆದಿರೆ ಚಲ ಕಿರಿವೆಂ, ಪಾಂಡುಸುತರೊಳೀ ನೆಲನಿದು ಪಾಳ್ನೆಲನೆನಗೆ, ದಿನಪಸುತನಂ ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೆ?’ ಎಂದು ಅಲವತ್ತುಕೊಂಡು ಧೀರೋದಾತ್ತತೆಯಿಂದ ಯುದ್ಧ ಮಾಡಿದ ಕೌರವನು ಸಹಜವಾಗಿಯೇ ಕಥಾನಾಯಕನ ಗುಣಗಳನ್ನು ವ್ಯಕ್ತಪಡಿಸುವನು. ಆದರೆ ಗದಾಯುದ್ಧದ ಕಥಾನಾಯಕ ಭೀಮನೇ ಹೊರತು ದುರ್ಯೋಧನನಲ್ಲ. ಆ ಸಂದೇಹ ಬರುವಷ್ಟರಮಟ್ಟಿಗೆ ಕೌರವನ ಪಾತ್ರಚಿತ್ರಣವು ಕವಿಯಿಂದ ಕಟ್ಟಲ್ಪಟ್ಟಿದೆ. ರನ್ನನಿರುವ ಕನ್ನಡ ಎಂಬುದೇ ನಮ್ಮ ಹೆಮ್ಮೆ. ಆತನ ಬದುಕು, ಸಾಧನೆ ಮತ್ತು ಆತ್ಮಾಭಿಮಾನಗಳು ನಿಜಕ್ಕೂ ಬಂಡಾಯದ ನೆಲೆಯದು. ಎಲ್ಲೋ ಬಳೆ ಮಾರಿಕೊಂಡು ಜೀವನ ಸಾಗಿಸಬೇಕಾದ ದುರ್ದೆಸೆಯಿಂದ ಪಾರಾಗಿ, ರಾಜಾಶ್ರಯ ಪಡೆದು ಕವಿಚಕ್ರವರ್ತಿಯಾದದ್ದು ಈ ನೆಲದ ಪುಣ್ಯ ಮತ್ತು ಕನ್ನಡಾಂಬೆಯ ಹೆಮ್ಮೆ.

ಶಿಷ್ಯ: ನಿಜ ಗುರುಗಳೇ, ರನ್ನನು ನಾವೆಲ್ಲರೂ ಎದೆಗೂಡೊಳಗೆ ಕಾಪಿಟ್ಟುಕೊಂಡಿರುವ ನಾಡು ಮತ್ತು ನುಡಿಯ ಸಂಪತ್ತಿನ ಪ್ರತೀಕ. ಪಂಪನು ಶಾಂತಸಾಗರ, ರನ್ನನಾದರೋ ಮೊರೆವ ಕಡಲು. ಜನ್ನ ಹೇಗೆ? ತಿಳಿಸಿ.
ಗುರು: ಜನ್ನನ ಪೂರ್ತ ಹೆಸರು ಜನಾರ್ಧನ. ಕ್ರಿ ಶ ಸುಮಾರು ೧೧೯೦ ಈತನ ಕಾಲ. ಜನ್ನಿಗ, ಜನ್ನಮರಸ, ಜನ್ನಯ್ಯ ಎಂದೆಲ್ಲಾ ಈತನನ್ನು ಕರೆದದ್ದುಂಟು. ಈತ ಕೇವಲ ಕವಿಯಲ್ಲ; ಶಾಸನಕಾರ ಕೂಡ. ಚನ್ನರಾಯಪಟ್ಟಣ ಮತ್ತು ತರೀಕೆರೆಯ ಶಾಸನಗಳನ್ನು ಈತನೇ ಬರೆದದ್ದು ಎಂದು ಆರ್ ನರಸಿಂಹಾಚಾರ್ಯರು ತಿಳಿಸಿರುವರು.

ಕವಿಚಕ್ರವರ್ತಿ ಜನ್ನ

ಈತನ ಕೃತಿಗಳು ಮೂರು: ಯಶೋಧರ ಚರಿತೆ, ಅನಂತನಾಥಪುರಾಣ ಮತ್ತು ಅನುಭವ ಮುಕುರ. ಈತನ ಕಾಲನಿರ್ಣಯ ಸಲೀಸು. ತನ್ನೆರಡೂ ಕೃತಿಗಳಲ್ಲಿ ಕೃತಿರಚನಾಕಾಲವನ್ನು ಸೂಚಿಸಿರುವನು. ಈತನ ಮಡದಿ ಲಕುಮಾದೇವಿ. ನಾಗವರ್ಮ ಮತ್ತು ಜನ್ನ ಇಬ್ಬರೂ ಸಮಕಾಲೀನರೆಂದು ಗೋವಿಂದಪೈ ತಿಳಿಸಿರುವರು. ಜೊತೆಗೆ ನಾಗವರ್ಮನಲ್ಲಿ ಜನ್ನನು ಶಿಷ್ಯವೃತ್ತಿ ಮಾಡುತ್ತಿದ್ದನೆಂದೂ ಊಹಿಸಿರುವರು.

ಚನ್ನರಾಯಪಟ್ಟಣದ ಆನೆಕೆರೆ ಗ್ರಾಮದಲ್ಲಿ ಸಿಕ್ಕಿದ ಶಾಸನವನ್ನು ಈತನೇ ಬರೆದದ್ದು ಎಂದು ತಿಳಿಯಲಾಗಿದೆ. ತರೀಕೆರೆಯ ಅಮೃತಾಪುರದ ಅಮೃತೇಶ್ವರ ದೇವಾಲಯದಲ್ಲಿರುವ ಶಾಸನದ ಕರ್ತೃ ಸಹ ಈತನೇ. ಇವೆರಡೂ ವೀರಬಲ್ಲಾಳನ ಕಾಲದ್ದು. ಇಮ್ಮಡಿ ವೀರಬಲ್ಲಾಳನ ಕಾಲ ೧೧೯೭ ಎಂದಿದೆ. ಹೀಗಾಗಿ ಜನ್ನನ ಕೃತಿರಚನೆಯು ೧೧೯೦ ರಿಂದ ೧೨೩೦ ರೊಳಗಿನ ಅವಧಿಯಲ್ಲಿ ನಡೆದಿರಬಹುದೆಂದು ವಿದ್ವಾಂಸರು ನಿರ್ಣಯಕ್ಕೆ ಬಂದಿರುವರು.

ಒಟ್ಟಾರೆ ಜನ್ನಕವಿಯು ವೀರಬಲ್ಲಾಳನಿಂದ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದನು. ಬಲ್ಲಾಳನ ಮಗ ನರಸಿಂಹನ ಕಾಲದಲ್ಲೂ ಇದ್ದು ಕವಿ, ದಂಡನಾಯಕ ಹಾಗೂ ಮಂತ್ರಿ ಆಗಿದ್ದವನು. ಹೀಗಾಗಿ ಈತನ ಸ್ಥಳ ದ್ವಾರಸಮುದ್ರ ಅಥವಾ ಹಳೆಯಬೀಡು ಎಂದು ಕ ವೆಂ ರಾಘವಾಚಾರ್ಯರು ನಿರ್ಧರಿಸಿರುವರು.

ಯಶೋಧರ ಚರಿತೆ ಬರೆಯುವ ಹೊತ್ತಿಗೆ ಜನ್ನನು ಚತುರ್ವಿಧ ಪಂಡಿತನಾಗಿದ್ದನು. ‘ಮನ್ನಿಸಿ ಬಲ್ಲಾಳಂ ಕುಡೆ ಜನ್ನಂ ಕವಿಚಕ್ರವರ್ತಿವೆಸರಂ’ ಎಂದು ಜನ್ನನೇ ಹೇಳಿಕೊಂಡಿದ್ದಾನೆ. ಉಭಯಕವಿ ಚಕ್ರವರ್ತಿ ಎಂಬ ಬಿರುದೂ ಈತನಿಗಿದೆ. ಇದಿಷ್ಟೇ ಅಲ್ಲದೆ, ಕವಿಭಾಳಲೋಚನ, ಭಾಳನೇತ್ರ, ಸುಕವಿಜನಮಿತ್ರ ಎಂಬ ಬಿರುದುಗಳೂ ಇವೆ ಎಂದು ತನ್ನ ಅನಂತನಾಥಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಬಹುಮುಖ ಶಾಸ್ತ್ರನಿಪುಣನಾಗಿದ್ದ ಈತನು ವೈಯಾಕರಣಿ ಕೂಡ. ‘ರನ್ನನ್ ವೈಯಾಕರಣನ್ ಜನ್ನನ್ ಮೇಣ್ ಕವಿಗಳೊಳ್ ವೈಯಾಕರಣನ್’ ಎಂದು ಹೇಳಿದ್ದಾನೆ. ಗುಣವರ್ಮ, ಆಂಡಯ್ಯ, ಮಲ್ಲಿಕಾರ್ಜುನ, ಕುಮುದೇಂದು, ನಾಗರಾಜ ಮೊದಲಾದವರು ಜನ್ನನನ್ನು ಪ್ರಶಂಸಿಸಿದ್ದಾರೆ. ಯಶೋಧರ ಚರಿತವು ಜನ್ನನಿಗೆ ಲೋಕಪ್ರಖ್ಯಾತಿ ತಂದುಕೊಟ್ಟ ಕಾವ್ಯ. ಇದರ ಕತೆಯಂತೂ ಜನಜನಿತ. ಜಾನಪದವೋ ಎಂಬಂತೆ ಮನೆ ಮಾತಾಗಿದೆ. ಕಾವ್ಯದ ಹಿಂದು ಮುಂದು ಏನೂ ಗೊತ್ತಿಲ್ಲದಿದ್ದರೂ ಅಷ್ಟಾವಂಕ ಮತ್ತು ಅಮೃತಮತಿಯರ ಪ್ರಸಂಗ ಬಹುಜನಸಂಪ್ರೀತ!

ಹಿಂಸೆಯನ್ನು ವಿರೋಧಿಸಿ ಅಹಿಂಸೆಯನ್ನು ಪ್ರತಿಷ್ಠಾಪಿಸುವ ಆಶಯದಿಂದ ಜನ್ನ ಈ ಕಾವ್ಯ ರಚಿಸಿದನಾದರೂ ಅದು ನೇಪಥ್ಯಕ್ಕೆ ಸರಿದು ಬದಗ ಮತ್ತು ರಾಣಿಯ ಅನೈತಿಕ ಕೂಟಚಿತ್ರಣವೇ ಜನಕ್ಕೆ ಪ್ರಿಯವಾಯಿತು. ಜೈನಪುರಾಣದ ಯಾಂತ್ರಿಕತೆಯಿಂದ ಬೇಸತ್ತ ಕವಿಗಳು ಇಂಥದೊಂದು ರೋಚಕ ವಿಧಾನವನ್ನು ಆರಂಭಿಸಿದ್ದು ಸಮಾಧಾನ ತರುವ ವಿಷಯ. ಆದರೆ ಇದರ ಮೊದಲಿಗನೂ ಜನ್ನನೇ; ಕೊನೆಯವನೂ ಅವನೇ!

ವಸಂತಮಾಸದಲ್ಲಿ ನಡೆಯುವ ಜಾತ್ರೆ ಮಾರಿದೇವಿಗೆ ನರಬಲಿ ಕೊಡಲು ಇಬ್ಬರು ಮಕ್ಕಳನ್ನು ಹಿಡಿದು ತಂದರು. ಅವರೋ ಮಹಾ ಧೈರ್ಯವಂತರು. ಜನ್ಮಾಂತರ ಕಷ್ಟನಷ್ಟಗಳನ್ನು ಅನುಭವಿಸಿ ಬಂದಿದ್ದವರು. ಸಾವು ಸನ್ನಿಹಿತವಾದರೂ ಕೊಂಚವೂ ಎದೆಗೆಡದ ಆ ಮಕ್ಕಳನ್ನು ಮಾರಿದತ್ತ ಮಾತನಾಡಿಸಿ, ಅವರ ವೃತ್ತಾಂತ ತಿಳಿದು ಗರಬಡಿದವನಾದ.

ಯಶೋಧರ ಮತ್ತು ಅಮೃತಮತಿಯರ ಸಫಲ ದಾಂಪತ್ಯ. ಒಮ್ಮೆ ಅರಮನೆಯ ಆನೆಯ ಲಾಯದಲ್ಲಿದ್ದ ಮಾವಟಿಗನ ಹಾಡು ಕೇಳಿ ರಾಣಿ ಅಮೃತಮತಿಯು ಮಾರು ಹೋಗುತ್ತಾಳೆ. ಅವನ ಅಷ್ಟಾವಂಕ ಕುರೂಪಕ್ಕೆ ಹೇಸದೆ, ಸಖಿಯ ನೆರವಿನಿಂದ ಗುಟ್ಟಾಗಿ ಅವನನ್ನು ಸಂಧಿಸಿ, ಅಕ್ರಮ ಸಂಬಂಧ ಬೆಳೆಸುತ್ತಾಳೆ. ರಾಜ ಯಶೋಧರನಿಗೆ ಅನುಮಾನ ಬಂದು ಪರೀಕ್ಷಿಸಿಯೇ ಬಿಡುತ್ತಾನೆ. ತಡವಾಗಿ ಬಂದ ರಾಣಿಯನ್ನು ಮಾವುತನು ಹೊಡೆದು ಪ್ರಶ್ನಿಸುವಾಗ, ‘ಮುಳಿಸೇತಕೆ ನಲ್ಲನೆ, ಮಿಕ್ಕ ಗಂಡರ್ ಸವಸೋದರರ್’ ಎನ್ನುತ್ತಾಳೆ. ಇದನ್ನು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿದ ಯಶೋಧರನು ಇಬ್ಬರನ್ನೂ ಎರಡು ಭಾಗ ಮಾಡಲು ಕತ್ತಿ ಹಿರಿದವನೇ ಮಾಣೆಂಬ ತೆರದಿ ಹೇಸಿಗೆ ಪಟ್ಟುಕೊಂಡು ಮರಳುತ್ತಾನೆ. ಮಗನ ವ್ಯಥೆಗೆ ತಾಯಿ ಚಂದ್ರಮತಿ ಕಾರಣ ಕೇಳಿದಾಗ ದುಃಸ್ವಪ್ನ ಎಂದು ಸುಳ್ಳು ಹೇಳುವನು. ಕನಸಿನ ದೋಷ ನಿವಾರಣೆಗೆ ಪ್ರಾಣಿಬಲಿ ಕೊಡಲು ಆಕೆ ಉತ್ಸುಕಳಾದಾಗ, ಯಶೋಧರ ಅದಕ್ಕೆ ಒಪ್ಪದೆ ಹಿಟ್ಟಿನ ಕೋಳಿಯನ್ನು ಬಲಿ ಕೊಡುತ್ತಾರೆ. ಆಗ ಅದರೊಳಗೆ ಅಡಗಿ ಕುಳಿತಿದ್ದ ಪಿಶಾಚಿಯೊಂದು ಕೂಗಿ ಹೊರನೆಗೆಯುತ್ತದೆ. ಈ ಸಂಕಲ್ಪ ಹಿಂಸೆಗೆ ಪಶ್ಚಾತ್ತಾಪಪಟ್ಟು ಮಗನಿಗೆ ರಾಜ್ಯವನ್ನಿತ್ತು ಹೊರಡಲು ತಯಾರಾಗುವನು. ಗಂಡನಿಗೆ ತನ್ನ ಅನೈತಿಕ ಸಂಬಂಧ ಗೊತ್ತಾಗಿದೆಯೆಂಬುದನ್ನು ಅರಿತ ಅಮೃತಮತಿಯು ತನ್ನ ಗಂಡ ಮತ್ತು ಅತ್ತೆ- ಇಬ್ಬರಿಗೂ ವಿಷದ ಲಡ್ಡುಗೆಗಳನ್ನು ಉಣಬಡಿಸಿ ಕೊಂದು ಬಿಡುವಳು. ಸತ್ತ ತಾಯಿ ಮತ್ತು ಮಗ ಹಲವು ಜನ್ಮಗಳನ್ನು ದಾಟಿ ಕೊನೆಗೆ ಜೈನಮುನಿಯ ಉಪದೇಶವನ್ನು ಕೇಳಿ ಅಭಯರುಚಿ ಮತ್ತು ಅಭಯಮತಿ ಎಂಬ ಮಕ್ಕಳಾದರು. ಈ ಮಕ್ಕಳೇ ಮಾರಿದತ್ತನಿಗೆ ಈ ವೃತ್ತಾಂತವನ್ನು ಅರುಹುವರು. ಇದಾದ ಮೇಲೆ ಮಾರಿಕಾಂಬೆ ದೇವತೆ ಪ್ರತ್ಯಕ್ಷಳಾಗಿ ನನಗೆ ಇನ್ನು ಮುಂದೆ ನರಬಲಿ ಬೇಡವೆಂದು ಆಜ್ಞಾಪಿಸುವಳು. ಈ ವಿಚಿತ್ರ ಕತೆ ಕೇಳಿದ ಮಾರಿದತ್ತನು ಪ್ರಾಣಿಬಲಿಯನ್ನು ತ್ಯಜಿಸಿ, ದೀಕ್ಷೆ ಕೈಗೊಂಡು ತಪಸ್ಸಿಗೆ ತೆರಳುವನು. ಪಾತಕಿಯಾದ ಅಮೃತಮತಿಯು ನರಕಕ್ಕೆ ಹೋದಳು.

ಈ ಯಶೋಧರ ಕತೆ ಸಂಸ್ಕೃತ, ಪ್ರಾಕೃತ ಮತ್ತು ಅಪಭ್ರಂಶಗಳಲ್ಲಿ ಕಂಡು ಬರುತ್ತದೆ. ಕ್ರಿ ಶ ೧೦೫೦ ರಲ್ಲಿದ್ದ ವಾದಿರಾಜನ ಸಂಸ್ಕೃತದ ಯಶೋಧರ ಚರಿತವೇ ಜನ್ನನ ಕೃತಿಗೆ ಮೂಲ. ಆದರೆ ಜನ್ನನು ಅದನ್ನು ವಿಸ್ತರಿಸಿ, ತನ್ನ ಸ್ವೋಪಜ್ಞತೆಯನ್ನು ಮೆರೆದಿದ್ದಾನೆ.

ಕೆಲವೊಂದು ಕಡೆ ತನ್ನ ದಾರ್ಶನಿಕ ಹೇಳಿಕೆಯನ್ನು ಕಾವ್ಯದಲ್ಲಿ ದಾಖಲಿಸುತ್ತಾನೆ. ‘ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ’, ‘ಮನಸಿಜನ ಮಾಯೆ ವಿಧಿವಿಲಸನದ ನೆರಂಬಡೆಯೆ ಕೊಂದು ಕೂಗದೆ ನರರಂ’ ಎಂದೆಲ್ಲಾ ಜನ್ನನು ವಿಧಿಯ ವಿಪರೀತವನ್ನು ಗಮನಕ್ಕೆ ತರುವನು.

ಕರ್ಮತತ್ತ್ವದ ಹಿನ್ನೆಲೆಯಲ್ಲಿ ಹಿಂಸೆಯ ದುರಂತ ಘೋರ ಪರಿಣಾಮಗಳನ್ನು ಬಿತ್ತರಿಸಿ, ತನ್ಮೂಲಕ ಅಹಿಂಸೆಯ ಮಹತ್ವವನ್ನು ಮನಗಾಣಿಸುವುದು ಈ ಕಾವ್ಯದ ಉದ್ದೇಶ ಎಂದು ಸಿಪಿಕೆಯವರು ಸಮರ್ಪಕವಾಗಿ ವ್ಯಾಖ್ಯಾನಿಸಿರುವರು. ವಾದಿರಾಜನು ಬರೆದಿರುವುದಕ್ಕಿಂತಲೂ ಜನ್ನನ ಕವಿತಾಪ್ರಜ್ಞೆ ಎಷ್ಟೋ ಮೇಲಾದುದು ಎಂದು ಡಿ ಎಲ್ ನರಸಿಂಹಾಚಾರ್ ನಿರ್ಣಯಿಸಿರುವರು.

ಹಾಗೆ ನೋಡಿದರೆ ಯಶೋಧರ ಚರಿತೆಯೊಂದು ಜೈನಧರ್ಮ ಪ್ರಸಾರವುಳ್ಳ ಕಾವ್ಯ. ಲೌಕಿಕದ ಘಟನೆ ಮತ್ತು ಸನ್ನಿವೇಶಗಳಿದ್ದರೂ ಅದು ತನ್ನಂತರಂಗದಲ್ಲಿ ಧರ್ಮಪ್ರಸಾರವನ್ನೇ ಉದ್ದೇಶವನ್ನಾಗಿಟ್ಟುಕೊಂಡಿದೆ. ಪ್ರತಿಯೊಂದು ಅಧ್ಯಾಯದ ಕೊನೆಯಲ್ಲೂ ಈ ಮಾತು ಬರುತ್ತದೆ. ಯಶೋಧರನ ಕತೆಯನ್ನು ಕೇಳಿದವರ ಪಾಪ ನಾಶವಾಗುವುದೆಂದು ಕವಿ ಹೇಳುವನು. ‘ಧರ್ಮದಿಂದಾಗದುದೇಂ?’ ಎಂದು ಸಹ ಪ್ರಶ್ನಿಸುವನು.

ಆದರೆ ಅಷ್ಟಾವಂಕ ಅಮೃತಮತಿಯರ ಪ್ರಣಯ ನಿರೂಪಣೆಯು ಆಕರ್ಷಕವಾಗಿರುವುದರಿಂದ ಧರ್ಮ ಬೋಧನೆಯು ನೇಪಥ್ಯಕ್ಕೆ ಸಲ್ಲುವ ಭೀತಿಯಂಟೇ ಉಂಟು. ಜೀವದಯೆಯನ್ನು ಘೋಷಿಸಲು ಹೊರಟ ಕೃತಿಯು ವಿಕೃತ ಮನೋವ್ಯಾಪಾರವನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡಿದೆ. ಕೃತಿಯ ಆಶಯವು ಇದಕ್ಕೆ ಪೂರಕವಾಗಿದೆ. ಆದರೆ ಓದುಗ ಇಲ್ಲಿಗೇ ನಿಲ್ಲಬಾರದು. ಕೇವಲ ಪ್ರಣಯ ಪ್ರಸಂಗದ ರಸಾಸ್ವಾದದಲ್ಲೇ ಮೈ ಮರೆತು ತೂಕಡಿಸಬಾರದು; ಮುಂದಕ್ಕೆ ಚಲಿಸಬೇಕು. ಪ್ರಣಯವೊಂದೇ ಜನ್ನನ ಕಾವ್ಯದ ವಸ್ತುವಲ್ಲ! ‘ರತಿರಹಸ್ಯವನ್ನು ಬಣ್ಣಿಸುವುದಾಗಲೀ ಪ್ರಣಯ ಸಮಸ್ಯೆಯನ್ನು ಬಿಡಿಸುವುದಾಗಲೀ ಜನ್ನನ ಆಸಕ್ತಿ ಕ್ಷೇತ್ರವಲ್ಲ’ ಎಂದು ತೀನಂಶ್ರೀಯವರು ಮನವರಿಕೆ ಮಾಡಿರುವರು. ಅದರ ತೀವ್ರತೆಯನ್ನು ಮನಗಾಣಿಸಿ, ಅದರಿಂದಾದ ಘೋರ ಪರಿಣಾಮದತ್ತ ನಮ್ಮ ಗಮನ ಸೆಳೆಯುವುದಷ್ಟೇ ಕವಿಯ ಇಂಗಿತ. ಶಾಂತರಸವೇ ಅಂತಿಮ. ಅದಕ್ಕೆ ಭೀಭತ್ಸವು ಪೂರಕವಾಗಿ ದುಡಿದಿದೆ ಅಷ್ಟೇ. ಆದರೆ ಬಹಳಷ್ಟು ವಿಮರ್ಶಕ-ವಿದ್ವಾಂಸರುಗಳಿಗೆ ಇದು ಕೇವಲ ಪ್ರಣಯ ಕತೆಯಾಗಿ, ಮನ್ಮಥನ ವಿಚಿತ್ರ ವ್ಯಥೆಯಾಗಿ ಕಂಡಿದೆ. ಅದು ಅವರ ದೃಷ್ಟಿ ಎಂದಷ್ಟೇ ಇಂಥಲ್ಲಿ ಹೇಳಿ ಸುಮ್ಮನಾಗಬೇಕು.

ಯಾವ ಕೊರತೆಯೂ ಇಲ್ಲದಿದ್ದ ರಾಣಿಯೊಬ್ಬಳು ಯಃಕಶ್ಚಿತ್ ಒಬ್ಬ ವಿಕೃತಾಂಗನೂ ಅನಾಮಧೇಯನೂ ಹುಲುಮಾವುತನೂ ಆದವನಿಗೆ ಮರುಳಾಗಿ ರತಳಾಗುವುದನ್ನು ನಂಬಲಾದೀತೆ? ಇದನ್ನು ಪ್ರಣಯಕತೆ ಎಂದು ಹೇಗೆ ಕರೆಯುವುದು? ಇಂಥ ಹೆಣ್ಣುಗಳೂ ಇರುವರೇ? ಎಂಬಂಥ ವಿಚಾರಮಂಥನವನ್ನು ನಡೆಸಿದ್ದಾರೆ. ಸಂಗೀತಕ್ಕೆ ಮತ್ತು ಹಾಡುಗಾರಿಕೆಗೆ ಕಾಮಪ್ರಚೋದನಶಕ್ತಿ ಉಂಟೆಂಬುದು ನಿಜವಾದರೂ ಈ ಮಟ್ಟಿಗೆ ವಶವರ್ತಿಯಾಗುವ ಪವಾಡ ಸಂಭವಿಸಲು ಸಾಧ್ಯವೆ? ಎಂಬ ದಿಕ್ಕಿನಿಂದಲೂ ಆಲೋಚಿಸಿದ್ದಾರೆ. ಎಲ್ ಆರ್ ಹೆಗಡೆಯವರು ಒಂದು ಹೆಜ್ಜೆ ಮುಂದೆ ಹೋಗಿ, ‘ಸ್ತ್ರೀವ್ಯಾಮೋಹದ ಚಂಚಲತೆಯನ್ನು ತೋರಿಸಿ ಯಶೋಧರನು ಸಂಸಾರ ವಿಮುಖನಾಗುವುದನ್ನು ಚಿತ್ರಿಸಲು ಇದು ಜನ್ನನಿಗೆ ಅನುಕೂಲವಾಗಿರುವುದಾದರೂ ಅಮೃತಮತಿಯ ಪಾತ್ರವು ‘ವೈಪರೀತ್ಯ ಮನಃಶಾಸ್ತ್ರ’ದ ದೃಷ್ಟಿಯಿಂದಲೂ ಅಭ್ಯಾಸಯೋಗ್ಯ’ ಎಂದಿದ್ದಾರೆ. ‘ಲೈಂಗಿಕ ಮನಃಶಾಸ್ತ್ರದ ವಿಕೃತ ಪಾತ್ರ ನಿರೂಪಣೆಯ ಅತ್ಯುತ್ತಮ ಉದಾಹರಣೆ ಅಮೃತಮತಿ’ ಅಂತಲೂ ಕನ್ನಡ ಸಾಹಿತ್ಯದಲ್ಲೇ ಇಂಥ ಪಾತ್ರ ಮತ್ತೊಂದಿಲ್ಲ ಅಂತಲೂ ಅವಳನ್ನು ಮನೋರೋಗಿ ಎಂದು ಗ್ರಹಿಸಲು ಕವಿಯು ಎಡೆಗೊಡದಿರುವುದು ಜನ್ನನ ಜಾಣ್ಮೆಗೆ ಸಾಕ್ಷಿ ಅಂತಲೂ ವ್ಯಾಖ್ಯಾನಿಸಿರುವರು.

ಶಿಷ್ಯ: ಹಾಗಾದರೆ ಗುರುಗಳೇ, ಕವಿಯ ಕಾಣ್ಕೆಯಾಚೆಗೆ ಸಹೃದಯ ತನ್ನದೇ ಆದ ಅರ್ಥಪರಂಪರೆಗಳನ್ನು ಕಟ್ಟಿಕೊಳ್ಳಬಾರದೆ? ಇದೊಂದು ಕಾವ್ಯನ್ಯಾಯದ ಪ್ರಶ್ನೆ!
ಗುರು: ಖಂಡಿತ ಕಟ್ಟಿಕೊಳ್ಳಬಹುದು. ಆದರೆ ಅದು ಕಾವ್ಯದ ಚೌಕಟ್ಟಿನೊಳಗಿರಬೇಕು. ನಮ್ಮ ವಿಮರ್ಶೆಯಾಗಲೀ ಅಭಿಪ್ರಾಯವಾಗಲೀ ಕವಿಕಾವ್ಯನ್ಯಾಯಕ್ಕೆ ಪೂರಕವಾಗಿರಬೇಕು ಮತ್ತು ಕವಿಯು ಹೇಳದೇ ಬಿಟ್ಟ ಖಾಲಿ ಜಾಗಗಳನ್ನು ಮೂಲಕ್ಕೆ ಲೋಪವಾಗದ ರೀತಿಯಲ್ಲಿ ಜೊತೆಗೆ ಕೃತಿಯ ಉದ್ದೇಶಕ್ಕೆ ಚ್ಯುತಿ ಬರದ ಹಾಗೆ ಅರ್ಥೈಸಿಕೊಳ್ಳಬೇಕು. ಬಹಳಷ್ಟು ಬುದ್ಧಿವಂತರು ಎಡಹುವುದೇ ಇಲ್ಲಿ!
ತನ್ನಲ್ಲಿ ಮೋಹವುಂಟಾಗಿ ಶೀಲವಳಿಯುವ, ರೂಪವಳಿಯುವ, ನರಕ್ಕಿಳಿಯುವ ಮುಂಚೆ ಅಮೃತಮತಿಯಲ್ಲಿ ನಡೆದಿರಬಹುದಾದ ಅಲ್ಲೋಲ ಕಲ್ಲೋಲ ಕೋಲಾಹಲಗಳನ್ನು ಕವಿ ಚಿತ್ರಿಸಬೇಕಾಗಿತ್ತು ಎಂದು ನಾವು ಟೀಕಿಸಬಹುದು. ಆದರೆ ಕವಿಯು ಆ ಕೆಲಸ ಮಾಡಿಲ್ಲ. ಅದು ಅವನ ಮುಖ್ಯ ಉದ್ದೇಶಕ್ಕಾಗಲೀ ಕಾವ್ಯದ ಒಟ್ಟೂ ಆಶಯಕ್ಕಾಗಲೀ ಸಂಬಂಧಿಸಿದ್ದಲ್ಲ. ಏಕೆಂದರೆ ಒಂದು ಸಾಹಿತ್ಯಪಠ್ಯವನ್ನು ಹೇಗೆ ಓದಬೇಕು? ಗ್ರಹಿಸಬೇಕು? ಎಂಬುದೂ ಒಂದು ಕಲೆ. ಅತಿವ್ಯಾಪ್ತಿ, ಅವ್ಯಾಪ್ತಿಗಳಿಲ್ಲದ ಒಂದು ಸದೂರವನ್ನು ಸಹೃದಯ ಪಾಲಿಸಬೇಕು. ವಿಮರ್ಶೆಯು ಕೃತಿಕಾರನ ಮತ್ತು ಓದುಗನ ನಡುವೆ ಸೇತುವೆಯಾಗಬೇಕು; ಕಂದಕವಾಗಬಾರದು.

ಶಿಷ್ಯ: ಗೊತ್ತಾಯಿತು ಗುರುವೇ, ಮುಂದೆ ಹೇಳಿ.
ಗುರು: ಆಗಲಿ, ಒಟ್ಟಿನಲ್ಲಿ ಇಂಥ ಪಾತ್ರಚಿತ್ರಣವುಳ್ಳ ಕಾವ್ಯ ರಚಿಸಿದ ಜನ್ನನಂತೂ ಲೋಕದಲ್ಲಿ ಅವಿಸ್ಮರಣೀಯನಾದ. ಅವನ ಈ ಕಾವ್ಯವು ಅಪಾರ ಚರ್ಚೆಗೊಳಗಾಗಿದೆ. ಇದೇ ಅಲ್ಲವೆ? ಕೃತಿಯ ಮತ್ತು ಕೃತಿಕಾರನ ಯಶಸ್ಸು! ಧರ್ಮ ಮತ್ತು ಕಾವ್ಯಧರ್ಮಗಳೆರಡನ್ನೂ ಅಪೂರ್ವವಾಗಿ ಸಂಯೋಜಿಸಿ, ಸಮನ್ವಯವನ್ನು ಸಾಧಿಸಿರುವುದೇ ಜನ್ನನ ಸಾಧನೆ. ಜೊತೆಗೆ ಕಂದಪದ್ಯದಲ್ಲೇ ಪೂರ್ತ ರಚನೆಯಾದ ಏಕೈಕ ಚಂಪೂಕೃತಿಯಿದು. ‘ಇದರಲ್ಲಿ ಮಹತ್ತಿದ್ದರೂ ಬೃಹತ್ತಿಲ್ಲದಿರುವುದರಿಂದ ಮಹಾಕಾವ್ಯವಲ್ಲ; ಅಸಾಧಾರಣ ಕಾವ್ಯ’ ಎಂದು ಸಿಪಿಕೆಯವರು ತಮ್ಮ ಕೊನೆ ಮಾತು ಹೇಳಿದ್ದಾರೆ.

ಇನ್ನು ಈತನ ಇನ್ನೊಂದು ಕೃತಿ ಅನಂತನಾಥಪುರಾಣ. ಹದಿನಾಲ್ಕು ಆಶ್ವಾಸಗಳುಳ್ಳ ಪ್ರೌಢಕೃತಿ. ಹದಿನಾಲ್ಕನೆಯ ತೀರ್ಥಂಕರನ ಕತೆ. ಇವನು ಸಹ ಉಲ್ಕಾಪಾತವನ್ನು ಕಂಡು ವೈರಾಗ್ಯಪರನಾದ. ಈ ಕಾವ್ಯದಲ್ಲಿ ಕಾವ್ಯಧರ್ಮಕ್ಕಿಂತ ಧರ್ಮದ ನಿರೂಪಣೆಯೇ ಹೆಚ್ಚಾಗಿ ಬಂದಿದೆ. ಏಕೆಂದರೆ ಇದು ಧಾರ್ಮಿಕ ಕಾವ್ಯ ಮತ್ತು ಜೈನಪುರಾಣ. ಈ ಕೃತಿಯಲ್ಲೂ ಒಂದು ವಿಚಿತ್ರ ಪ್ರೇಮ ಪ್ರಕರಣ ವಿವರಿತವಾಗಿದೆ. ಈ ವಿಚಾರದಲ್ಲಿ ಜನ್ನನು ವಿಶೇಷ ಮತ್ತು ವಿಭಿನ್ನ.

ಪೌದನಪುರದ ದೊರೆ ವಸುಷೇಣ. ರಾಣಿ ಸುನಂದೆ. ದೊರೆಯ ಸ್ನೇಹಿತ ಪಕ್ಕದ ರಾಜ್ಯದ ಚಂಡಶಾಸನ. ವಸುಷೇಣನ ಅರಮನೆಗೆ ಅತಿಥಿಯಾಗಿ ಬಂದಿದ್ದವನು ರಾಣಿ ಸುನಂದೆಯ ರೂಪಲಾವಣ್ಯಗಳನ್ನು ನೋಡಿ ಮೋಹಿತನಾಗುತ್ತಾನೆ. ಕತೆಯಲ್ಲಿ ಏನೇನೋ ಘಟನೆಗಳು ಸಂಭವಿಸಿ, ಚಂಡಶಾಸನನು ಸುನಂದೆಯನ್ನು ಅಪಹರಿಸಿ, ಸೆರೆಯಲ್ಲಿಡುತ್ತಾನೆ. ತನ್ನನ್ನು ಪ್ರೇಮಿಸು ಎಂದು ಅಂಗಲಾಚುತ್ತಾನೆ. ಅಂತಿಮವಾಗಿ ಇಂದ್ರಜಾಲಿಗನಿಂದ ವಸುಷೇಣನ ಶಿರವನ್ನು ನಿರ್ಮಿಸಿ, ಅವನು ಮಡಿದನೆಂದು ಆ ಮಾಯಾಶಿರವನ್ನು ಸುನಂದೆಗೆ ತೋರಿಸಿದಾಗ ಆಘಾತಗೊಂಡ ಆಕೆ ಪ್ರಾಣ ಬಿಡುತ್ತಾಳೆ. ಇದರಿಂದ ಖಿನ್ನನಾದ ಚಂಡಶಾಸನನು ಮುಂದಿನ ಜನ್ಮದಲ್ಲಾದರೂ ನಿನ್ನನ್ನು ಕೂಡುತ್ತೇನೆಂದು ನಿರ್ಧರಿಸಿ, ಅವಳ ಚಿತಾಗ್ನಿಯಲ್ಲಿ ಬಿದ್ದು ಜೀವ ಕಳೆದುಕೊಳ್ಳುತ್ತಾನೆ. ಅಂತಃಪುರ ಸ್ತ್ರೀಯರು ಪತಿಯೊಡನೆ ತಾವೂ ಸಹಗಮನ ಮಾಡುತ್ತಾರೆ. ಈ ಕತೆಯು ಅನಂತನಾಥಪುರಾಣದ ಪ್ರಮುಖ ಕಥಾಭಾಗಕ್ಕೆ ಜೋಡಣೆಯಾಗಿದೆ. ವಸುಷೇಣನು ಸತ್ತು ಮತ್ತೆ ಹುಟ್ಟಿ ಮರುಜನ್ಮ ಪಡೆದು ಆರ್ಭಟಿಸುತಿದ್ದ ಚಂಡಶಾಸನನನ್ನು ಸಂಹರಿಸುತ್ತಾನೆ. ಭವಾವಳಿ ಮತ್ತು ಜನ್ಮಾಂತರ ಕತೆಗಳಾಗಿ ಇವು ಪುರಾಣದಲ್ಲಿ ಸ್ಥಾನ ಪಡೆದಿವೆ.

ಯಶೋಧರ ಚರಿತೆಯನ್ನು ಬರೆದು ‘ಕವಿಚಕ್ರವರ್ತಿ’ ಬಿರುದಾಂಕಿತನಾದ ಜನ್ನನು ಅನಂತನಾಥಪುರಾಣವನ್ನು ರಚಿಸಿದನು. ತೀರ್ಥಂಕರ ಪುರಾಣವನ್ನು ಚಂಪೂ ಛಂದಸ್ಸಿನಲ್ಲಿ ರಚಿಸಿ, ತನ್ನ ಕೊಡುಗೆಯನ್ನಿತ್ತನು ಎಂದೇ ತಿಳಿಯಬೇಕು. ಈ ಅನಂತನಾಥಪುರಾಣಕ್ಕೆ ಮುಖ್ಯ ಆಕರ ಗುಣಭದ್ರಾಚಾರ್ಯರ ಉತ್ತರಪುರಾಣ. ಅಲ್ಲಿ ಅನಂತನ ಕತೆಯು ಕೇವಲ ಎಂಬತ್ತೆöÊದು ಶ್ಲೋಕಗಳಲ್ಲಿ ವರ್ಣಿತವಾಗಿದೆ. ಜನ್ನನು ಇದನ್ನು ವಿಸ್ತರಿಸಿ ಭವಾವಳಿಗಳನ್ನು ತಂದು ಜೋಡಿಸಿ ವರ್ಣನೆಗಳಲ್ಲಿ ತನ್ನ ಪ್ರತಿಭೆ ಮೆರೆದಿದ್ದಾನೆ. ಶಾಂತರಸದ ಅಭಿವ್ಯಕ್ತಿಗೆ ಶೃಂಗಾರವು ಪೂರಕವಾಗಿ ದುಡಿದಿದೆ. ಅವನ ಜಿನಭಕ್ತಿ ಮತ್ತು ಶೃಂಗಾರಾಸಕ್ತ ಎರಡೂ ಮಿಗಿಲೆಣೆಯಾಗಿ ಪ್ರಕಟವಾಗಿವೆ. ಅತಿಯಾದ ಶಬ್ದಾಲಂಕಾರಗಳು, ಚಮತ್ಕಾರ, ಕವಿಸಮಯದಿಂದೊಡಗೂಡಿದ ವರ್ಣನೆಗಳು ಬೇಕಾದಷ್ಟು ಬಂದಿವೆ. ಪುರಾಣವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಇದು ಅನಿವಾರ್ಯವೆಂದು ಜನ್ನ ಅಂದುಕೊಂಡಿರಬೇಕು. ಶೃಂಗಾರದ ಅತಿರೇಕತೆಯು ಜಿನಕತೆಗೆ ತಕ್ಕುದಲ್ಲ ಎಂದು ವಿದ್ವಾಂಸರು ಟೀಕಿಸಿದ್ದಾರೆ. ಅಷ್ಟಾದಶವರ್ಣನೆಗಳನ್ನು ತರುವ ಭರದಲ್ಲಿ ವೇಶ್ಯಾವಾಟಿಕೆಯನ್ನು ವರ್ಣಿಸಿ ಬಿಡುವನು. ಮಾತ್ರವಲ್ಲದೇ ಜಿನನಾಗುವ ವ್ಯಕ್ತಿಯನ್ನು ಅಲ್ಲಿನ ವಿಹಾರಕ್ಕೆ ಕರೆದೊಯ್ದಿರುವುದಂತೂ ಅನೌಚಿತ್ಯದ ಪರಮಾವಧಿ ಎಂದು ಬಯ್ದಿದ್ದಾರೆ. ಯಶೋಧರ ಚರಿತವನ್ನು ಬರೆದ ಮನಸ್ಸು ಸಹಜವಾಗಿಯೇ ಅನಂತನಾಥ ಪುರಾಣವನ್ನು ಬರೆಯುವಾಗ ಸಡಿಲಾಯಿತು ಎಂದು ಹೇಳುವಂತಿದೆ. ಒಟ್ಟಿನಲ್ಲಿ ಪಂಪನ ಆದಿಪುರಾಣ ಮತ್ತು ರನ್ನನ ಅಜಿತಪುರಾಣಗಳಿಗೆ ಹೋಲಿಸಿದರೆ ಅನಂತನಾಥಪುರಾಣವು ಸಪ್ಪೆಯೆನಿಸುವುದು ಎಂಬ ಸಿಪಿಕೆ ಹೇಳಿಕೆಯು ತೌಲನಿಕ ನೋಟವಾಗಿದೆ.

ಶಿಷ್ಯ: ಆದರೂ ಗುರುಗಳೇ, ನನಗೆ ಯಶೋಧರಚರಿತದ ಅಮೃತಮತಿಯು ಕಾಡುವ ಹಾಗೆ, ಅನಂತನಾಥಪುರಾಣದಲ್ಲಿ ಚಂಡಶಾಸನನು ಕಾಡುವನು. ಅಲ್ಲಾದರೋ ಅವರಿಬ್ಬರದು ಧರ್ಮಬಾಹಿರವಾದ ಲಾಲಸೆ. ಇಲ್ಲಿ ಚಂಡಶಾಸನನ ಅಂತ್ಯ ನನ್ನನ್ನು ದಂಗುಬಡಿಸಿದೆ. ತನ್ನನ್ನು ಒಲ್ಲದ ಹೆಣ್ಣಿನೊಡನೆ ಸಹಗಮನ ಹೋದ ವ್ಯಕ್ತಿ ಬಹುಶಃ ಇತಿಹಾಸ ಪುರಾಣಗಳಲ್ಲಿ ಇವನೊಬ್ಬನೇ ಇರಬೇಕು.

ಗುರು: ಹೌದೌದು. ಗಂಡಿನ ಈ ಸಹಗಮನದ ಚಿತ್ರಣವಂತೂ ಇನ್ನೆಲ್ಲೂ ಬಂದಿಲ್ಲ. ಇದೇ ಸಖೇದಾಶ್ಚರ್ಯ. ತನ್ನನ್ನು ಪ್ರೀತಿಸದಿದ್ದರೂ ಚಿಂತೆಯಿಲ್ಲ. ಅವಳು ತನ್ನ ಕಣ್ಣ ಮುಂದಿದ್ದರೆ ಸಾಕು ಎಂಬ ಆತನ ಕಾಮವ್ಯಾಮೋಹ ಆ ಮಟ್ಟಿನ ಒಲವಿನ ಪ್ರಖರತೆ ದೊಡ್ಡದು. ಇನ್ನು ಇವನ ‘ಅನುಭವ ಮುಕುರ’ ಕೃತಿಯನ್ನು ಗಮನಿಸಿದರೆ, ಇದೊಂದು ಕಾಮಶಾಸ್ತ್ರ ಗ್ರಂಥ. ಕನ್ನಡದಲ್ಲಿ ಇದು ಎರಡನೆಯದು. ಮೊದಲನೆಯದು ಚಂದ್ರರಾಜನ ಮದನ ತಿಲಕ. ಅನುಭವ ಮುಕುರಕ್ಕೆ ಮೋಹಾನುಭವ ಮುಕುರ ಅಂತಲೂ ಸ್ಮರತಂತ್ರ ಅಂತಲೂ ಹೆಸರುಗಳುಂಟು. ಇದು ಕಾಮಶಾಸ್ತ್ರವಾಗುವುದಕಿಂತಲೂ ಸ್ತ್ರೀಪುರುಷ ಪ್ರೇಮದರ್ಪಣವಾಗಿದೆ ಎಂದರೆ ತಪ್ಪಲ್ಲ. ಬದುಕಿನಲ್ಲಿ ಹೆಣ್ಣಿನ ಅಗತ್ಯ ಮತ್ತು ಮಹತ್ವ, ದಾಂಪತ್ಯದಲ್ಲಿ ಅವಳ ಸ್ಥಾನಮಾನಗಳು, ಅವಳ ಒಲವು, ಚೆಲುವು ಮತ್ತು ಅನುರಾಗಗಳಿಂದ ಲಭಿಸುವ ಆನಂದ- ಇವನ್ನೆಲ್ಲ ಜನ್ನ ಒಂದುನೂರ ಹತ್ತು ಪದ್ಯಗಳಲ್ಲಿ ಕಟ್ಟಿ ಕೊಟ್ಟಿದ್ದಾನೆ.

ಹೀಗೆ ಕವಿ ಚಕ್ರವರ್ತಿಗಳಾದ ಪೊನ್ನಮಯ್ಯ, ರನ್ನಮಯ್ಯ ಮತ್ತು ಜನ್ನಮಯ್ಯ- ಈ ಮೂವರು ಒಂದು ಲೌಕಿಕ ಮತ್ತು ಒಂದು ಧಾರ್ಮಿಕ ಕಾವ್ಯಗಳನ್ನು ರಚಿಸಿ ಸಮನ್ವಯ ಸಾಧಿಸಿದ್ದಾರೆ. ಆದರೆ ಲೌಕಿಕದಲ್ಲಿ ಆಗಮಿಕವನ್ನೂ ಆಗಮಿಕದಲ್ಲಿ ಲೌಕಿಕವನ್ನೂ ತಂದಿರುವ ಪರಿಯನ್ನು ಗಮನಿಸಬೇಕು. ಏಕೆಂದರೆ ಧಾರ್ಮಿಕ ಎಂಬುದು ಈ ಲೋಕವನ್ನು ಬಿಟ್ಟಂತೆ ಇರಲು ಸಾಧ್ಯವಿಲ್ಲ; ಹಾಗೆಯೇ ಲೌಕಿಕ ಎಂಬುದು ಧಾರ್ಮಿಕವಾಗಿ ಪರಿವರ್ತನೆ ಹೊಂದದೆ ಬೇರೆ ಗತ್ಯಂತರವಿಲ್ಲ. ಈ ಮೂವರೂ ಜೈನಮತಾವಲಂಬಿಗಳು. ಕತೆಯ ಅಭಿವ್ಯಕ್ತಿಗೆ ಆಗ ಪ್ರಚಲಿತವಿದ್ದ ಸಂಸ್ಕೃತದ ಚಂಪೂ ಛಂದಸ್ಸನ್ನು ಆಯ್ದುಕೊಂಡದ್ದು ಸಹಜವೇ. ಆ ಕಾಲಮಾನವೇ ಹಾಗೆ. ವೀರತ್ವವು ಮೌಲ್ಯವಾಗಿದ್ದ ಕಾಲ. ಸಂಸ್ಕೃತ ಭೂಯಿಷ್ಠ ಭಾಷಾಶೈಲಿಯು ಪ್ರಶಂಸೆಗೆ ಪಾತ್ರವಾಗಿದ್ದ ಯುಗ. ಪಂಡಿತರು ಮೆಚ್ಚಿದರೆ ಸಾಕೆಂಬ ಭಾವ. ಹಾಗಾಗಿ ಕವಿಚಕ್ರವರ್ತಿಗಳು ತಮಗೆ ಆಶ್ರಯ ನೀಡಿದ ಚಕ್ರವರ್ತಿಗಳ ಕವಿಗಳಾದರು.

ಶಿಷ್ಯ: ಗುರುಗಳೇ, ತುಂಬ ದಿನಗಳಾಗಿದ್ದವು ನಿಮ್ಮ ಮಾತುಗಳನ್ನು ಕೇಳಿ. ಇಂದು ನಿಮ್ಮಿಂದ ನಾನು ಧನ್ಯನಾದೆ. ನಿಮ್ಮ ತರಗತಿಯಲ್ಲಿ ಕುಳಿತು ಮತ್ತೊಮ್ಮೆ ಪಾಠ ಕೇಳಿದ ಅನುಭವವಾಯಿತು. ತುಂಬ ಧನ್ಯವಾದಗಳು ಗುರುವೇ.
ಗುರು: ಆಗಲಿ. ಮನಸ್ಸಿಗೆ ಮತ್ತು ಬುದ್ಧಿಗೆ ವಿಚಾರವೂ ಶಿಕ್ಷಣವೂ ತಲಪಿದ್ದರೆ ಅಷ್ಟೇ ಸಾಕು. ನನ್ನ ಅಮೂಲ್ಯ ಸಮಯ ಸಾರ್ಥಕವಾದಂತೆ. ಹೋಗಿ ಬಾ. ಒಳಿತಾಗಲಿ.

-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

8 Responses

  1. MANJURAJ H N says:

    ನವೆಂಬರೊಂದು ಕನ್ನಡ ರಾಜ್ಯೋತ್ಸವ ನಿಮಿತ್ತ
    ಬರೆದ ಈ ರೂಪಕವನು ಇಂದೇ ಪ್ರಕಟಿಸಿದ ಸುರಹೊನ್ನೆಗೆ
    ಶಿರಬಾಗಿ ವಂದನೆ ! ಸಿರಿಗನ್ನಡಂ ಗೆಲ್ಗೆ

  2. ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ.. ಆದರೆ ಎರಡು ಕಂತಿನಲ್ಲಿ ಹಾಕಿದ್ದರೆ….ಮುದ ತರುತಿತ್ತು ದೀರ್ಘವಾಯಿತು ಎನಿಸಿತು..ಸಾರ್.. ನನ್ನ ಅನಿಸಿಕೆ.. ಸಾಮಾನ್ಯ ಓದುಗರ ದೃಷ್ಟಿಯಿಂದ..

  3. ವೆಂಕಟಾಚಲ says:

    ಒಳ್ಳೆಯ ಲೇಖನ ಸರ್

    ಸೊಗಸಾಗಿ ಮೂಡಿ ಬಂದಿದೆ

  4. Nagaraj Ningegowda says:

    ಸ್ವತಃ ಗುರುವಾಗಿದ್ದು ತನ್ನ ಗುರುಗಳ ಮೂಲಕ ಕವಿರತ್ನ ತ್ರಯರು ಹಾಗೂ ಕವಿ ಚಕ್ರವರ್ತಿ ತ್ರಯರ ಕಾವ್ಯಗಳನ್ನು ತುಲನಾತ್ಮಕವಾಗಿ ವಿವರಿಸಿ ತಿಳಿಸಿರುವ ರೀತಿ ಬಹಳ ಸೊಗಸಾಗಿದೆ.
    ಅದರಲ್ಲೂ ಜನ್ನನ ಮನೋವೈಜ್ಞಾನಿಕ, sexual aberration relationship, ಅಡ್ಡ ದಾರಿ ಹಿಡಿದ ಲೈಂಗಿಕ ವರ್ತನೆ, ಸೊಗಸಾಗಿ ವಿವರಿಸಲ್ಪಟ್ಟಿದೆ ಎಂಬುದು ನನ್ನ ಭಾವನೆ.
    ಬಹು ದೊಡ್ಡ ಸಾಮ್ರಾಜ್ಯ ನಿರ್ಮಿಸಿದ್ದ ರಾಷ್ಟ್ರಕೂಟ ಸಾಮ್ರಾಜ್ಯ ಹಾಗೂ ಅದರ ರಾಜಧಾನಿ, ಮಾನ್ಯಖೇಟ, ಇಂದು ಒಂದು ಸಣ್ಣ ಹಳ್ಳಿಯಾಗಿ ಮಾರ್ಪಟ್ಟಿರುವುದು ವಿಧಿ ವಿಲಸನದ ವಿಪರ್ಯಾಸ.
    ಕನ್ನಡ ಸಾಹಿತ್ಯದ ಓದುಗರಿಗೆ ಸೊಗಸಾದ ವಿಮರ್ಶಾತ್ಮಕ ಲೇಖನವನ್ನು ಒದಗಿಸಿದ್ದೀರಿ.
    ಶುಭವಾಗಲಿ.

  5. Hema Mala says:

    ಪಾಂಡಿತ್ಯಪೂರ್ಣ ಬರಹ…..ವಂದನೆಗಳು.

  6. ಶಂಕರಿ ಶರ್ಮ says:

    ಬಹಳ ಪ್ರಬುದ್ಧ, ಸಕಾಲಿಕ, ಸುದೀರ್ಘ ಲೇಖನವು ಸಂಗ್ರಹಯೋಗ್ಯವೆನಿಸಿತು. ನಾಗರತ್ನ ಮೇಡಂ ಅವರ ಅಭಿಪ್ರಾಯದಂತೆ, ಭಾಗಗಳಲ್ಲಿ ಪ್ರಕಟಿಸಿದರೆ ಚೆನ್ನಾಗಿತ್ತೆನೋ ಎಂದು ನನಗೂ ಅನ್ನಿಸಿತು.

  7. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ, ಚೆನ್ನಾಗಿದೆ

  8. Padma Anand says:

    ಮಾಹಿತಿಪೂರ್ಣ, ಪ್ರಬುದ್ಧ ಲೇಖನ. “ಸುರಹೊನ್ನೆ”ಯಿಂದ ರಾಜ್ಯೋತ್ಸವದ ಉಡುಗೊರೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: