ಭಗವದ್ಗೀತಾ ಸಂದೇಶ
ಬ್ರಹ್ಮ ಸಂಹಿತೆಯಲ್ಲಿ “ಈಶ್ವರಃ ಪರಮಃ ಕೃಷ್ಣಃ” ಎಂದು ಹೇಳಿದೆ. ಈಶ್ವರ ಎಂದರೆ ಪರಂಬ್ರಹ್ಮ. ಎಲ್ಲಾ ದೇವರುಗಳಿಗೂ ದೇವರಾದ ಘನಸಚ್ಚಿದಾನಂದ, ಜ್ಞಾನಾನಂದ ಸ್ವರೂಪಿ, ಅವನು. ಹುಟ್ಟು- ಸಾವು, ಆದಿ- ಅಂತ್ಯ ಇಲ್ಲದವನು. ಎಲ್ಲರಿಗೂ ಆದಿಯಾದ ಅವನೇ ಜಗತ್ತಿನ ಸಕಲ ಚರಾಚರಗಳ ಸೃಷ್ಟಿಕರ್ತ.
ಬ್ರಹ್ಮವು ಈಶ್ವರ ಭಾವವನ್ನು ತಾಳಿ ತನ್ನದೇ ಶಕ್ತಿಯಾದ ಪ್ರಕೃತಿಯಿಂದ ಜಗತ್ತನ್ನು ಪುನಃ ಪುನಃ ಸೃಷ್ಟಿಮಾಡುತ್ತದೆ. ಪ್ರಕೃತಿಯು ಬ್ರಹ್ಮನ ಅಧ್ಯಕ್ಷತೆಯಲ್ಲಿ ಸಕಲ ಚರಾಚರಗಳಿಗೆ ಜನ್ಮ ನೀಡುತ್ತಾಳೆ. ಒಂದು ಸಭೆಯಲ್ಲಿ ಅಧ್ಯಕ್ಷನು ಹೇಗೆ ಮೇಲ್ವಿಚಾರಣೆ ಮಾಡುತ್ತಾ ಕ್ರಮ ತಪ್ಪದಂತೆ ನಡೆಸುತ್ತಿರುತ್ತಾನೋ ಹಾಗೆ ಪರಂಬ್ರಹ್ಮನು ಮೇಲ್ವಿಚಾರಕನಂತೆ ಇರುತ್ತಾನೆ. ಬ್ರಹ್ಮ ಚೈತನ್ಯದ ಅಪಾರ ಶಕ್ತಿಯ ಒಂದಂಶದ ವಿಭೂತಿಯೇ ಪ್ರಕೃತಿ.
ಅಧ್ಯಾಯ 9ರ 10ನೇ ಶ್ಲೋಕದಲ್ಲಿ ಪರಮಾತ್ಮ ಹೀಗೆ ಹೇಳುತ್ತಾನೆ—–
ಮಯಾಧ್ಯಕ್ಷೇಣ ಪ್ರಕೃತಿಃ
ಸೂಯತೇ ಸಚರಾಚರಮ್I
ಹೇತುನಾನೇನ ಕೌಂತೇಯ
ಜಗದ್ವಿಪರಿವರ್ತತೇ II (9,10)
ಹೇ ಅರ್ಜುನಾ! ಜಗತ್ತಿನ ಸೃಷ್ಟಿ, ಸ್ಥಿತಿ, ಲಯ ನನ್ನ ಅಧ್ಯಕ್ಷತೆಯಲ್ಲಿಯೇ ನಡೆಯುತ್ತದೆ. ಪ್ರಕೃತಿಗೆ ಅಸ್ಥಿತ್ವವನ್ನೂ, ಸ್ಫೂರ್ತಿಯನ್ನೂ ಕೊಡುವವನು ನಾನೇ. ಸರ್ವಶಕ್ತನೂ, ಸರ್ವಜ್ಞನೂ, ಸರ್ವವ್ಯಾಪಿಯೂ, ದಿವ್ಯಚೈತನ್ಯನೂ ಆದ ನನ್ನಿ0ದಲೇ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆದು ಪ್ರಕೃತಿಯು ಸಂಪೂರ್ಣ ಜಗತ್ತನ್ನು ಸೃಷ್ಟಿಸುತ್ತಾಳೆ. ಭಗವಂತನಾದ ನಾನು ಏನೂ ಮಾಡುವುದಿಲ್ಲ. ಸ್ವತಃ ಜಡವಾಗಿದ್ದ ಪ್ರಕೃತಿಗೆ ನನ್ನ ಆಸರೆ, ಸ್ಫೂರ್ತಿ, ಚೈತನ್ಯವು ದೊರೆತಾಗ ಪ್ರಕೃತಿಯು ಜಗತ್ತಿನ ರಚನೆಯನ್ನು ಮಾಡುತ್ತಾಳೆ. ನಾನು ನನ್ನದೇ ಒಂದಂಶದ ಶಕ್ತಿಯಾದ ಪ್ರಕೃತಿಯು ಮಾಡುವ ಕೆಲಸವನ್ನು ವೀಕ್ಷಿಸುತ್ತಿರುತ್ತೇನೆ. ಇದೇ ಕಾರಣದಿಂದ ಜಗತ್ತಿನ ಸಂಸಾರವೆಂಬ ಚಕ್ರವು ಸುತ್ತುತ್ತಾ ಇರುತ್ತದೆ.
ಜಗತ್ತೆಂಬ ಭಗವಂತನ ರಂಗ ಭೂಮಿಯಲ್ಲಿ ಪಾತ್ರಧಾರಿಗಳಾದ ನಮ್ಮನ್ನೆಲ್ಲಾ ನಿರ್ದೇಶಿಸುವವಳೇ ಪ್ರಕೃತಿ ಅಥವಾ ಮಾಯೆ. ಬ್ರಹ್ಮಾಂಡದ ಸೃಷ್ಟಿ ಮತ್ತು ಸಂಹಾರ ಎರಡನ್ನೂ ಭಗವಂತನೇ ಮಾಡುತ್ತಾನೆ.
ಹೊಸದಾಗಿ ಕರ್ಮ ಮಾಡಿ ಪೂರ್ವ ಜನ್ಮದ ಕರ್ಮ ಶೇಷವನ್ನು ಕಳೆದು, ಭಗವಂತನನ್ನು ಸೇರಲು ಮರುಜನ್ಮದ ಅಗತ್ಯವಿದೆ. ಕರ್ಮಭೂಮಿಯಲ್ಲಿ ತಮ್ಮ ಕರ್ಮ ಮಾಡಿ ಜನ್ಮ ಸವೆಸುವ ತನಕ ಈ ಸಂಸಾರ ಚಕ್ರದಲ್ಲಿ ಮತ್ತೆ – ಮತ್ತೆ ಸುತ್ತುತ್ತಾ, ಇರಬೇಕಾಗುತ್ತದೆ. ಸಂಸಾರ ಚಕ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಸಕಲ ಚರಾಚರಗಳನ್ನು ನಿರಂತರ ಕರ್ಮ ಮಾಡುವಂತೆ ಪ್ರೇರೇಪಿಸುವವಳೇ ಆ ಪ್ರಕೃತಿ ಎಂಬ ಮಾಯೆ.
ಹರಿಃಓಂ
-ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು
ಭಗವದ್ಗೀತಾ ಸಂದೇಶವನ್ನು ತಿಳಿಸುತ್ತಾ ಬರುತ್ತಿರುವ ನಿಮಗೆ ನಮನಗಳು ಮೇಡಂ
Nice
ಧನ್ಯವಾದಗಳು ನಾಗರತ್ನ ಮೇಡಂ ಹಾಗೂ ನಯನ ಮೇಡಮ್ ಅವರಿಗೆ
ಭಗವದ್ಗೀತೆಯ ಶ್ಲೋಕಗಳ ಅರ್ಥವನ್ನು ವಿವರವಾಗಿ ತಿಳಿಸುವ ಲೇಖನಮಾಲೆ ಉಪಯುಕ್ತವಾಗಿದೆ…ಧನ್ಯವಾದಗಳು.
ಕರ್ಮವನ್ನು ಕುರಿತಾಗಿ ಭಗವದ್ಗೀತೆಯಲ್ಲಿ ಉಲ್ಲೇಖವಾಗಿರುವ ವಿಷಯಗಳ ಸರಳ ರೂಪ ಅದರ ಮಹತ್ವವನ್ನು ಎತ್ತಿ ಹಿಡಿದಿದೆ. ಅಭಿನಂದನೆಗಳು.