ಬರಿ ನಿಮಿತ್ತವೋ ನೀನು
ನನ್ನದಿದು ನಾ ಬರೆದೆ ಎನುವ ಅಮಲೇರಿದರೆ
ಪಾತಾಳದೊಳು ಬಿದ್ದೆ ನೀ ಮೇರುವಿನಿಂದ
ನಿನದಲ್ಲ ಪದಪುಂಜ ಯಾರದೋ ಕರುಣೆ ಅದು
ಬರಿ ನಿಮಿತ್ತವೋ ನೀನು – ಮುದ್ದುರಾಮ
ಕವಿ ಕೆ ಸಿ ಶಿವಪ್ಪನವರು ಈ ನಾಲ್ಕು ಸಾಲುಗಳಲ್ಲಿ ಬರೆಹಗಾರರ ಅಹಮಿಗೆ ಕನ್ನಡಿ ಹಿಡಿದಿದ್ದಾರೆ. ಬರೆಯುವವರಿಗೆ ಅದೇನೋ ಗರ್ವ. ಇದು ನಾನು ಬರೆದದ್ದು, ನನ್ನದು ಎಂಬ ಆತ್ಮಪ್ರತ್ಯಯ. ‘ವಾಗ್ದೇವಿಯ ಭಂಡಾರದ ಮುದ್ರೆಯನ್ನೇ ಒಡೆದೆ’ ಎಂದನು ಶಕ್ತಿಕವಿ ರನ್ನ. ಇನ್ನು ಭಂಡಾರದ ಪದನಿಧಿಯೆಲ್ಲ ನನ್ನದೇ ಎಂದವನ ಜಂಭ. ಎಷ್ಟಾದರೂ ರನ್ನಕವಿ ಪಂಪನ ಸಮಕ್ಕೆ ಬರಲಾರದಾದನು. ಪಂಪನು ಬರೆದ ವಿಕ್ರಮಾರ್ಜುನ ವಿಜಯದ ಆಶ್ವಾಸವೊಂದನ್ನು ಕಣ್ಮುಂದಿಟ್ಟುಕೊಂಡು ರನ್ನನು ಸಾಹಸಭೀಮವಿಜಯ ಬರೆದವನು. ಸ್ವಪ್ರಶಂಸೆಯಿಂದ ಆತನ ಗೌರವ ತಗ್ಗಿತು ಅಷ್ಟೇ. ಪಂಪನಾದರೋ ತನ್ನನ್ನು ಬೇರೊಂದು ರೀತಿಯಲ್ಲಿ ಕಂಡರಿಸಿದನು. ‘ವ್ಯಾಸರ ವಚನ ವಾರಿಧಿಯನ್ನೇ ಈಜುವೆನಾದರು ನಾನೇ ವ್ಯಾಸ ಎಂಬ ಗರ್ವಮೆನಗಿಲ್ಲ’ ಎಂದನು. ಅರ್ಹತೆಯಿದ್ದರೂ ಅಹಂಕಾರ ಸಲ್ಲದು ಎಂಬುದೇ ಇದರ ತಾತ್ಪರ್ಯ. ಬರೆಯುವವರಲ್ಲಿ ಇರಬಹುದಾದ ಅಹಮಿನ ಸ್ವರೂಪವೇ ಹೀಗೆ! ಶಿಕ್ಷಣ ಒಂದು ಬಗೆಯ ಆತ್ಮವಿಶ್ವಾಸವನ್ನು ತಂದುಕೊಟ್ಟರೆ, ಜ್ಞಾನವು ಸ್ವಾಭಿಮಾನವನ್ನು ಮೂಡಿಸುತ್ತದೆ. ಆದರೆ ಕಾಲ ಕಳೆದಂತೆ ಅಂಥ ಸ್ವಾಭಿಮಾನವು ಅಹಂಕಾರವಾಗದಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಬಹಳಷ್ಟು ಕವಿ, ಕಲಾವಿದರು ಎಡವಿದ್ದಾರೆ. ‘ತಾನು ಬರೆದದ್ದೇ ಗ್ರೇಟ್’ ಎಂದು ಹೋದಲ್ಲಿ ಬಂದಲ್ಲಿ ಬಡಬಡಿಸುತ್ತಾರೆ. ಆಗೆಲ್ಲ ಸುಮ್ಮನೆ ಹರಿವ ಕಾಲವೆಂಬ ನದಿ ಮಾತ್ರ ಇಂಥವರನ್ನು ಅಣಕಿಸುತ್ತಿರುತ್ತದೆ; ಹೊಸ ನೀರು ನುಗ್ಗುತ್ತಿರುತ್ತದೆ.
ಕಲೆ ಮತ್ತು ಸಾಹಿತ್ಯವು ಅಹಮನ್ನು ವಿಜೃಂಭಿಸಬಾರದು; ಅಹಮನ್ನು ಶೋಧಿಸಬೇಕು. ಅಂದರೆ ವ್ಯಕ್ತಿ ತನ್ನನ್ನು ಪ್ರೊಜೆಕ್ಟ್ ಮಾಡಿಕೊಳ್ಳುವ ಆಯಾಮಗಳನ್ನು ಕಂಡರಿಸಬೇಕು; ಏರುವಿಕೆ, ಬೀಳುವಿಕೆಗಳನ್ನು ಚಿತ್ರಿಸಬೇಕು. ಅಂತರಂಗದ ತವಕ ತಲ್ಲಣಗಳನ್ನು ಅಭಿವ್ಯಕ್ತಿಸಬೇಕು. ಪಾತ್ರಗಳ ತುಮುಲ, ತಾಕಲಾಟಗಳು ಧ್ವನಿಸಬೇಕು. ಜನಪ್ರಿಯ ಸಿನಿಮಾಗಳು ಯಾಕೆ ನಮ್ಮನ್ನು ಆಳವಾಗಿ ಕಾಡುವುದಿಲ್ಲ ಎಂಬುದಕ್ಕೆ ಇಲ್ಲಿ ಉತ್ತರವಿದೆ. ನಟ, ನಟಿಯರು ತಮ್ಮ ಇಮೇಜಿಗೆ ತಕ್ಕುದಲ್ಲದ ಪಾತ್ರಗಳನ್ನು ಒಲ್ಲೆ ಎನ್ನುವರು. ಅವರ ಅಭಿಮಾನಿಗಳೇ ಇದನ್ನು ಒಪ್ಪದೇ ಹೋಗುವರು. ಡಾ. ರಾಜಕುಮಾರ್ ಅವರು ಹಿರಣ್ಯಕಶಿಪು ಪಾತ್ರವನ್ನು ಮಾಡಿದ್ದರಿಂದಲೇ ಅವರ ಸ್ಟ್ರೆಂಥ್ ಜಗದ್ವಿಖ್ಯಾತವಾಗಿದ್ದು! ಇಮೇಜಿಗೆ ಧಕ್ಕೆ ಬರುತ್ತದೆಂದು ಅಂಥ ಪಾತ್ರವನ್ನು ಅವರು ತಿರಸ್ಕರಿಸಿದ್ದರೆ ಬಹು ದೊಡ್ಡ ನಷ್ಟವಾಗುತ್ತಿದ್ದುದು ನಮಗೆ, ಅವರಿಗಲ್ಲ! ನಟರಿಗೂ ಕಲಾವಿದರಿಗೂ ಇರುವ ವ್ಯತ್ಯಾಸ ಇಲ್ಲೇ! ಎಂಥ ಪಾತ್ರಗಳನ್ನೂ ಲೀಲಾಜಾಲವಾಗಿ ಮಾಡುವವರೇ ನಿಜ ಕಲಾವಿದರು. ಅಂದರೆ ಸಾಹಿತ್ಯಾದಿ ಲಲಿತಕಲೆಗಳಲ್ಲಿ ಅಹಮೆಂಬುದು ಅಸ್ತ್ರವಾಗಿ ಬರುತ್ತದೆ; ವ್ಯಕ್ತಿಯಾಗಿ ಬರುವುದಿಲ್ಲ. ‘ನೆನೆಯದಿರಣ್ಣ ಇನ್ ಪೆರಾರುಮನ್, ಒಂದೆ ಚಿತ್ತದಿ ನೆನೆವೊಡೆ ಕರ್ಣನಂ ನೆನೆಯ’ ಎಂದ ಪಂಪಮಹಾಕವಿಯೇ ಕರ್ಣನಂಥವನೂ ಭೀಷ್ಮಾದಿಗಳನ್ನು ಹಂಗಿಸುವಾಗ ಅವನ ಸದ್ಗುಣಗಳೆಲ್ಲ ಸೋರಿ ಹೋದವು ಎಂದೇ ಸೂಚ್ಯವಾಗಿ ತಿಳಿಸುತ್ತಾನೆ. ವ್ಯಕ್ತಿತ್ವದ ಸಂಕೀರ್ಣತೆಗಳನ್ನು ಛಾಪಿಸುವುದೇ ಸಾಹಿತ್ಯದ ಕೆಲಸ. ‘ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ’ ಎನ್ನುತ್ತಾರೆ ಕವಿ ಕುವೆಂಪು ಅವರು ತಮ್ಮ ಶ್ರೀ ರಾಮಾಯಣ ದರ್ಶನಂನಲ್ಲಿ. ಆ ಮಟ್ಟಿಗೆ ತಾನಲ್ಲ ಇದನ್ನು ಬರೆದದ್ದು; ತನ್ನೊಳಗಿನ ಕವಿತ್ವ ಎಂಬ ವಿನಮ್ರತೆ ಇರಬೇಕು. ಇದನ್ನೇ ಮುದ್ದುರಾಮನ ಮೂಲಕ ಕವಿ ಕೆ ಸಿ ಶಿವಪ್ಪನವರು ಮನವರಿಕೆ ಮಾಡಿರುವುದು. ನವೋದಯದವರು ಯಾಕೆ ಕಾವ್ಯನಾಮಗಳನ್ನಿಟ್ಟುಕೊಂಡು ಬರೆದರು ಎಂಬುದೀಗ ಅರ್ಥವಾಗುತ್ತಿದೆ.
‘ನನ್ನದಿದು, ನಾನೇ ಬರೆದದ್ದು ಎಂಬುದು ಅಮಲು.’ ಮಾದಕವಸ್ತು ಮತ್ತು ಮಾದಕ ಪಾನೀಯಗಳನ್ನು ಸೇವಿಸಿದವರಿಗಿರುವ ಭ್ರಮೆ! ಇದು ತಲೆಗೇರಿದರೆ ವಿನಾಶ ಕಟ್ಟಿಟ್ಟ ಬುತ್ತಿ. ಜಗತ್ತಿನಲ್ಲಿ ಎಲ್ಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ತಿಂದು ತೇಗುವ ಏಕೈಕ ದೋಷವೆಂದರೆ ಅದು ಅಹಂಕಾರ. ವೈಚಿತ್ರ್ಯವೆಂದರೆ ಇಂಥ ಅಹಮಿನ ಪರಿ ಪರಿಯಾದ ಶೋಧನೆಯೇ ಎಲ್ಲ ಕಲೆ ಮತ್ತು ಸಾಹಿತ್ಯಗಳ ಕೇಂದ್ರ. ವಾಸ್ತವವನ್ನು ದೂರ ತಳ್ಳಲು ಮತ್ತು ಅದರಿಂದ ಪಲಾಯನಗೈಯಲು ‘ಮಂದಿ ಮಾಗಧರು’ ಮಾದಕ ಪಾನೀಯ ಮತ್ತು ದ್ರವ್ಯಗಳ ದಾಸರಾಗುವಂತೆ ಸಾಹಿತಿಗಳೂ ಬರೆಯುತ್ತಾ ಬರೆಯುತ್ತಾ ಅಹಂಕಾರಿಗಳಾಗಿ ಬಿಡುವರು. ಅಧಃಪತನದ ಆರಂಭವಿದು. ‘ಮೇರುವಿನಿಂದ ಪಾತಾಳಕ್ಕೆ ಬಿದ್ದ’ ಲೆಕ್ಕವೇ! (ನಡೆನುಡಿಯಲ್ಲಿ ಶುಚಿ ರುಚಿಯಿಲ್ಲದ ಬಹುತೇಕ ಆಧುನಿಕ ಬರೆಹಗಾರರು ಇಂಥ ‘ಮಾದ-ಕತೆ’ ಗೆ ವಶವರ್ತಿಯಾದವರು ಎಂಬುದು ಬೇರೆ ಮಾತು!)
ಅಹಮನ್ನೇ ತಿಂದು, ಕುಡಿದು ತೂರಾಡುವ ಇಂಥ ಮಂದಿಯು ವಿಮರ್ಶೆಯನ್ನು ಒಲ್ಲರು. ತನ್ನ ಬರೆಹವನ್ನು ಪ್ರೀತಿಸುವ ಮತ್ತು ಕೀರ್ತಿಸುವ ಅಂಧಭಕ್ತರು ಮಾತ್ರ ಅವರಿಗೆ ಪ್ರಿಯರು. ತಮ್ಮ ಸುತ್ತ ಹಬ್ಬಿಕೊಂಡು ಹಬ್ಬ ಮಾಡುವ ಭಜನಾ ಮಂಡಳಿ ಸದಸ್ಯರು ಅವರನ್ನು ಇನ್ನಷ್ಟು ದಿಕ್ಕು ತಪ್ಪಿಸುವರು. ಜೊತೆಗೆ ಎಡಪಂಥ, ಬಲಪಂಥಗಳೆಂಬ ಹಗ್ಗಗಳಿಗೆ ನೇಣು ಬಿಗಿದುಕೊಂಡು ಚೀರುತ್ತ ಅರಚಾಡುವರು. ಪರಸ್ಪರ ಕೆಸರೆರಚಿ ಓದುಗರನ್ನು ತಬ್ಬಿಬ್ಬುಗೊಳಿಸುವರು. ಸಾಹಿತ್ಯವೆಂಬುದು ಪಥ; ಪಂಥವಲ್ಲ ಎಂಬ ಅರಿವಿಲ್ಲದ ಅವಿವೇಕಿಗಳಿವರು.
ಕವಿ ಹೇಳುತ್ತಾರೆ: ‘ನಿನದಲ್ಲ ಪದಪುಂಜ, ಯಾರದೋ ಕರುಣೆ!’ ಹೌದಲ್ಲವೇ? ವರ್ಣಮಾಲೆ ನನ್ನದಲ್ಲ, ಶಬ್ದಕೋಶ ನನ್ನದಲ್ಲ. ನಮ್ಮ ಪೂರ್ವಿಕರ ಕೊಡುಗೆಯದು! ಅವರು ನಡೆದ ಹಾದಿಯಲ್ಲಿ ನಾನು ನಡೆಯುತ್ತಿರುವವನು. ಅವರ ಬೆಳಕಿನ ದಾರಿಯಲ್ಲಿ ನಾನು ಹೊಸತನ್ನು ಕಂಡು ಕಾಣಿಸಿ ಕೊಡಲು ಉದ್ಯುಕ್ತನಾದವನು. ವರ್ಣಮಾಲೆಗೆ ನಾನು ಪೇಟೆಂಟ್ ಪಡೆಯಲು ಸಾಧ್ಯವೆ? ಅಥವಾ ಪೇಟೆಂಟ್ ಕೊಡಲು ಬರುತ್ತದೆಯೇ? ಅದಲ್ಲದೇ ನನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಹೊಸ ಪದವನ್ನು ಟಂಕಿಸಿ ಪ್ರಚುರತೆಗೆ ತರಲಿಲ್ಲ! ಆದರೆ ‘ನನ್ನದು ಎನ್ನುತ್ತೇನೆ!’ ಇದೇ ಜ್ಞಾನ ವಿವೇಕಗಳನ್ನು ಮುಸುಕಿರುವ ಅಜ್ಞಾನದ ಅಹಂ. ‘ಬರಿ ನಿಮಿತ್ತ ನೀನು’ ಎನ್ನುತ್ತದೆ ಕೊನೆಯ ಸಾಲು. ‘ವೀರನಾರಾಯಣನೇ ಕವಿ; ಲಿಪಿಕಾರ ಕುವರವ್ಯಾಸ’ ಎಂದಂತೆ! ನನ್ನಿಂದ ಬರೆಸುವ ಶಕ್ತಿಯನ್ನು ಕಂಡು ಅಚ್ಚರಿಪಡಬೇಕೇ ವಿನಾ ಅಹಂಕರಿಸಬಾರದು; ಹೂಂಕರಿಸಬಾರದು! ಅದಕ್ಕೇ ಸತ್ಯಕಾಮರು ‘ಬರೆಯುವುದೇ ಅಹಂಕಾರ’ ಎಂದು ತೀರ್ಮಾನಿಸಿಬಿಟ್ಟರು! ಅಂದರೆ ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ; ಹಾಡುವುದು ಅನಿವಾರ್ಯ ಕರ್ಮ ನನಗೆ’ ಎನ್ನುತ್ತಾರೆ ಕವಿ ಜಿ ಎಸ್ ಶಿವರುದ್ರಪ್ಪನವರು. ಯಾರೂ ಕೇಳಲಿ, ಬಿಡಲಿ ಹಾಡುವುದು ನನ್ನ ಸ್ವಭಾವ ಎಂದು. ಇಂಥಲ್ಲಿ ಅಹಮು ಸುಳಿಯುವುದಿಲ್ಲ. ಏಕೆಂದರೆ ಬರೆಯುವುದು ನನ್ನ ಬದುಕಿನ ಬದ್ಧತೆ, ಕಾಯಕ ಎಂದುಕೊಂಡಾಗ ಅದರಲ್ಲಿ ಆತ್ಮಸಂತೋಷ ಇರುತ್ತದೆ; ಬೇರೆಯವರಿಗೆ ಅರ್ಥ ಮಾಡಿಸುವ ವ್ಯರ್ಥ ಪ್ರದರ್ಶನವಿರುವುದಿಲ್ಲ! ‘ಹೇಳದಿರೆ ತಾಳಲಾರನು ಕವಿಯು; ಹೇಳಿದರೆ ಹಾಳಾಗುವುದು ಅನುಭವದ ಸವಿಯು!’ ಎಂದು ಬರೆಯುತ್ತಾರೆ ಕುವೆಂಪು.
ಅಹಮನ್ನು ಕುರಿತು ಬರೆಯಬೇಕು; ಅದನ್ನು ಧರಿಸಬಾರದು. ಎಲ್ಲವನೂ ಆವರಿಸುವ ಅಹಮನ್ನು ಶೋಧಿಸಬೇಕು; ಅಹಮಿಗೆ ಶರಣಾಗಬಾರದು. ಹೀಗಾದಾಗ ನನ್ನದಿದು ನಾ ಬರೆದದ್ದು ಎಂಬ ಅಹಂಭಾವ ತಲೆಗೇರುವುದು; ನಾನು ಶಿಷ್ಟ, ವಿಶಿಷ್ಟ, ವಿಭಿನ್ನ ಎಂಬ ಧೋರಣೆ. ತಾವೇ ಬುದ್ಧಿಜೀವಿ, ವಿಚಾರವಾದಿ, ಅಜೆಂಡಾಗಳ ಥಿಂಕ್ ಟ್ಯಾಂಕ್ ಎಂಬ ಅಭಿಧಾನಗಳನ್ನು ಹೊತ್ತು ಮೆರೆಯುವುದು! ಇದರಿಂದಾಗಿಯೇ ಸಾಹಿತ್ಯ ಮತ್ತು ಸಾಹಿತಿಗಳನ್ನು ಕಂಡರೆ ಜನಸಾಮಾನ್ಯರು ‘ಜನಾಂಗದ ಕಣ್ಣು ಮುಚ್ಚಿಸಿದವರು’ ಎಂದು ಅಸಹ್ಯಿಸಿಕೊಳ್ಳುವಂತಾಗಿರುವುದು.
ಬರೆಯುವ ಮುನ್ನ ಎಚ್ಚರಿಕೆ ಮತ್ತು ಬರೆಯುವಾಗ ಎಚ್ಚರ ಅಗತ್ಯ. ಬರೆದ ಮೇಲೆ ‘ಸ್ತುತಿ ನಿಂದೆಗಳು ಬಂದಡೆ ಮನದಲಿ ಕೋಪವ ತಾಳದೆ ಸಮಾಧಾನಿಯಾಗಿರು’ ಎಂದ ಅಕ್ಕ ಆದರ್ಶವಾಗಬೇಕು. ನನ್ನನೇ ನಾ ಸಾಕ್ಷೀಪ್ರಜ್ಞೆಯಲಿ ಅವಲೋಕನಗೈದಾಗ ಅಹಮನ್ನು ದೂರವಿಡಬಹುದು. ಎಲ್ಲವನೂ ಈಗಾಗಲೇ ಬರೆಯಲಾಗಿದೆ; ಇನ್ನೇನಿದ್ದರೂ ಓದುವುದು ಬಾಕಿಯಿದೆಯೆಂಬ ಪರಿಜ್ಞಾನವಿದ್ದಾಗ ನಮ್ಮಲ್ಲೊಂದು ವಿನೀತ ಸೌಜನ್ಯ ಉದಿಸಿ, ನಮ್ಮ ಸ್ವಭಾವವಾಗುತ್ತದೆ. ಬರೆಯುವುದೊಂದು ದೃಷ್ಟಿಕೋನ, ಅದೇ ಅಂತಿಮವಲ್ಲ ಮತ್ತು ಸಮಗ್ರವೂ ಅಲ್ಲ! ಎಂಬ ವಿವೇಚನೆ ಇರಬೇಕು.
ಸಾಹಿತಿಗಳು ಸರ್ವಜ್ಞರಲ್ಲ. ಅವರ ಮಾತೆಲ್ಲ ವೇದವಾಕ್ಯವಲ್ಲ ಎಂಬ ವಿವೇಕ ಹೊಂದಬೇಕು. ಲಲಿತಕಲೆಗಳೆಂಬವು ಸೃಷ್ಟಿಶೀಲ ಅನಿಸಿಕೆಗಳ ಒಟ್ಟು ಮೊತ್ತ ಎಂದರಿವಾಗಬೇಕು. ಅಹಮನ್ನು ವಿಜೃಂಭಿಸುವುದು ಸಾಹಿತ್ಯದ ಕೆಲಸವಲ್ಲ; ಹಾಗಾದಾಗ ಅದು ಸಾಹಿತ್ಯವೇ ಅಲ್ಲ ಎಂಬ ತಿಳಿವು ನಮ್ಮಲ್ಲಿ ಮೂಡಬೇಕು. ವೃಷಭಾಚಲ ಪರ್ವತದಲ್ಲಿ ತನ್ನ ಮೂರಕ್ಷರದ ಹೆಸರನ್ನು ಬರೆಸಲು ಭರತ ಚಕ್ರವರ್ತಿಯು ಒದ್ದಾಡಿ ಹೋಗುತ್ತಾನೆ. ಮೊದಲ ಬಾರಿಗೆ ತಾನೇ ಜಗತ್ತನ್ನು ಗೆದ್ದವನು ಎಂಬ ಅವನ ಅಹಂಕಾರ ಸೋರಿ ಹೋಗುತ್ತದೆ. ಆ ಮಟ್ಟಿಗೆ ಅದಾಗಲೇ ಹಲವಾರು ರಾಜರು ತಂತಮ್ಮ ಹೆಸರುಗಳನ್ನು ಕೆತ್ತಿಸಿ ಬಿಟ್ಟಿದ್ದಾರೆ! ಅಷ್ಟು ಸುಲಭಕ್ಕೆ ಅವನ ಅಹಮ್ಮು ಶರಣಾಗುವಂಥದ್ದಲ್ಲ! ಯಾರದೋ ಹೆಸರನ್ನು ಅಳಿಸಿಸಿ ತನ್ನ ಹೆಸರನ್ನು ಕಲ್ಲಿನ ಮೇಲೆ ಬರೆಸಿಯೇ ಸಮಾಧಾನ ಪಟ್ಟುಕೊಳ್ಳುತ್ತಾನೆ. ಮುಂದೆ ಬಂದವರು ತನ್ನಂತೆಯೇ ತನ್ನ ಹೆಸರನ್ನೂ ಅಳಿಸಿ, ಬರೆಯಬಹುದೆಂಬ ವಿವೇಕೋದಯ ಅವನಲ್ಲಿಲ್ಲ. ಆ ಮಟ್ಟಿಗೆ ಅವನು ಮೂಢ ಮತ್ತು ಮೂರ್ಖ. ಬದುಕಿನ ಇಂಥ ಭ್ರಮೆಗಳನ್ನು ಚಿತ್ರಿಸಿ, ಮನುಷ್ಯರ ಲೋಕವ್ಯಾಪಾರದಲ್ಲಿ ಅಡಗಿದ ಕ್ಷುದ್ರತೆ, ಸಣ್ಣತನಗಳನ್ನು ಬಯಲಿಗೆಳೆಯಬೇಕು. ಬಹಳ ಮುಖ್ಯವಾಗಿ ಬರೆಯುವವರು ಮೊದಲಿಗೆ ಇವುಗಳನ್ನು ದಾಟಿರಬೇಕು!
ಅಹಂಕಾರಿಯಾದ ಸಾಹಿತಿಗಿಂತ ನಿರಹಂಕಾರಿಯಾದ ಓದುಗ ನಿಜವಾಗಿಯೂ ಗ್ರೇಟ್. ಅದಕ್ಕೇ ನಮ್ಮ ಕಾವ್ಯ ಮೀಮಾಂಸೆಯಲ್ಲಿ ಸಹೃದಯನಿಗೆ ಪರಮ ಪದವಿ. ಈಗೀಗ ಇಂಥ ಮೆಚೂರ್ಡ್ ಓದುಗರು ಹೆಚ್ಚಾಗುತ್ತಿದ್ದಾರೆಂಬುದೇ ಸಂತೋಷ, ಸಮಾಧಾನ ತಂದಿರುವ ಸಂಗತಿ. ಹಾಗಾಗಿಯೇ ಇಂದು ಅಪಾರ ಪ್ರಮಾಣದಲ್ಲಿ ವಿಭಿನ್ನ ರಂಗಗಳಲ್ಲಿ ಕೆಲಸ ಮಾಡುತ್ತಿರುವ ಯುವಜನತೆ ಸಾಹಿತ್ಯಸೃಷ್ಟಿಯಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ ನೂರು, ಸಾವಿರ ವೆಬ್ಲಾಗುಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ, ಪ್ರಕಟವಾದ ಬರೆಹಗಳಿಗೆ ಕೊಡುವ ಪ್ರತಿಸ್ಪಂದನಗಳಲ್ಲಿ ಆಕ್ಟೀವ್ ಆಗಿದ್ದಾರೆ. ಓದುಗ ದೊರೆಯೇ ಬರೆಹಗಾರರಾಗಿರುವುದೇ ಈ ಕಾಲಮಾನದ ಮಹಿಮೆ! ವಿಶೇಷವೆಂದರೆ ಹೊರದೇಶಗಳಲ್ಲಿರುವ ಕನ್ನಡಿಗರಲ್ಲಿ ಬಹುಪಾಲು ಮಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಇಲ್ಲಿಗಿಂತ ಅಲ್ಲಿಯೇ ನಮ್ಮ ಕನ್ನಡಕ್ಕೆ ಹೊಸತನ ಮೈದಾಳುತಿದೆ. ಇದರ ಅರಿವಿಲ್ಲದವರು ಕೂಪಮಂಡೂಕಗಳಾಗಿ ಅಕಡೆಮಿಕ್ ಶಿಸ್ತಿನ ಸಾಹಿತ್ಯವನ್ನೇ ಅದರ ಶ್ರೇಷ್ಠತೆಯ ವ್ಯಸನವನ್ನೇ ಹೊತ್ತು ಮೆರೆಸುತ್ತಿದ್ದಾರೆ. ಅಂಥವರನ್ನು ಕನಿಕರಿಸೋಣ, ನಕ್ಕು ಮುಂದೆ ಸಾಗೋಣ. ಇಲ್ಲದಿದ್ದರೆ ಇದೂ ಇನ್ನೊಂದು ಬಗೆಯಲ್ಲಿ ಅಹಂಕಾರಜನ್ಯವಾದೀತು!
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಬರಹಗಾರರ..ಗುಣಾವಗುಣಗಳ ಬಗ್ಗೆ.. ಉದಾಹರಣೆ ಗಳ ಮೂಲಕ ..ವಿಶ್ಲೇಷಣೆ ಮಾಡಿರುವ ರೀತಿ ಚೆನ್ನಾಗಿ ಮೂಡಿಬಂದಿದೆ….ಹಾಗೇ ಓದುಗರ ಮನೋಚಿಂತನೆಯ ಕಡೆಗೂ..ನೋಟ ಹರಿಸಿರುವ ನಿಮಗೆ ಧನ್ಯವಾದಗಳು ಸಾರ್
ಚೆನ್ನಾಗಿದೆ ಬರಹ
ಬರೆಯುವವರಿಗೊಂದು ಕೈಪಿಡಿಯಂತಿರುವಿದ್ವತ್ಪೂರ್ಣ ಲೇಖನ ಸಾಕಷ್ಟು ಎಚ್ಚರಿಕೆಯನ್ನೂ ನೀಡಿದೆ.
ಬರಹಗಾರರು ಹೇಗಿರಬೇಕೆಂಬುದನ್ನು ಮನಮುಟ್ಟುವಂತೆ ವಿವರಿಸಿದ ಪ್ರೌಢ ಲೇಖನದಲ್ಲಿ, ಸಹೃದಯಿ ಓದುಗಾರನ ಕುರಿತು ನೀಡಿದ ವಿಶ್ಲೇಷಣೆಯು ಚಿಂತನೆಗೆ ಹಚ್ಚುವಂತಿದೆ… ಧನ್ಯವಾದಗಳು ಸರ್.