ಪೌರಾಣಿಕ ಕತೆ

ಭಗವದ್ಗೀತಾ ಸಂದೇಶ

Share Button

ಶ್ರೀ ಭಗವಾನುವಾಚ
ಊರ್ಧ್ವ ಮೂಲ ಮಧಃ ಶಾಖಮ್
ಅಶ್ವತ್ಥಂ ಪ್ರಾಹುರವ್ಯಯಮ್ I
ಛಂದಾಂಸಿ ಯಸ್ಯ ಪರ್ಣಾನಿ
ಯಸ್ತಂ ವೇದ ಸ ವೇದವಿತ್ II

ಸರ್ವೋನ್ನತ ಭಾಗದಲ್ಲಿ ಬೇರು, ಕೆಳಗೆ ಕೊಂಬೆಗಳು, ಇರುವ ಅಶ್ವತ್ಥ ವೃಕ್ಷವನ್ನು ”ಅವ್ಯಯವೃಕ್ಷ”ವೆನ್ನುವರು. ಇದರ ಎಲೆಗಳು ವೇದಗಳು. ಯಾರು ಈ ವೃಕ್ಷವನ್ನು ಮೂಲ ಸಹಿತ ಬಲ್ಲರೋ ಅವರು ವೇದವನ್ನು ಬಲ್ಲವರು ಎಂದು ಪರಮಾತ್ಮನು ಹೇಳಿದ್ದಾನೆ. ಜಗತ್ತಿನ ವರ್ಣನೆ ಮಾಡುವುದಕ್ಕಾಗಿ ಇಲ್ಲಿ ಅಶ್ವತ್ಥಮರದ ಉದಾಹರಣೆ ನೀಡಿ, ಜಗತ್ತನ್ನು ಈ ಮರಕ್ಕೆ ಹೋಲಿಸಲಾಗಿದೆ. “ಅಶ್ವತ್ಥ” ಎಂದು ಅರಳಿ ಮರಕ್ಕೆ ಹೇಳುತ್ತಾರೆ. ಸಮಸ್ತ ವೃಕ್ಷಗಳಲ್ಲಿ ಅರಳಿ ಮರವನ್ನು ಉತ್ತಮ ಮರವೆಂದು ತಿಳಿಯಲಾಗಿದೆ.

“ಅಶ್ವತ್ಥ” ಎಂದರೆ ಬದಲಾಗುತ್ತಿರುವುದು ಎಂದರ್ಥ. ಇಲ್ಲಿ ಅಶ್ವತ್ಥ ಮರದ ವಿಶೇಷತೆ ಎಂದರೆ ಇದರ ಮೂಲ ಬೇರು ಮೇಲ್ಗಡೆ ಎಲ್ಲೋ ಇದೆ. ನಮ್ಮ ಕೈಗೆ ಸಿಗದಂತೆ, ಕಣ್ಣಿಗೆ ಕಾಣದಂತಿದೆ. ಅಂದರೆ ಸಮಸ್ತ ಸೃಷ್ಟಿಯ ಒಡೆಯ ಜಗತ್ತನ್ನೇ ನಿಯಂತ್ರಿಸುವವನು “ಪರಬ್ರಹ್ಮ” ನಮ್ಮ ಕೈಗೆ ಸಿಗದಂತೆ, ಕಣ್ಣಿಗೆ ಕಾಣದಂತೆ ಅತೀ ಎತ್ತರದಲ್ಲಿ, ಎಲ್ಲೋ ಮೇಲೆ ಇದ್ದಾನೆ. ಅಶ್ವತ್ಥ ಮರದ ಕೊಂಬೆ – ರೆಂಬೆಗಳು ನಮಗೆ ಸಿಗುವಂತಿದೆ; ಎಂದರೆ ಜಗತ್ತಿನ ಸಮಸ್ತ ವಿಷಯ, ಭೋಗ ವಸ್ತುಗಳನ್ನು ಈ ವೃಕ್ಷದ ಕೊಂಬೆ – ರೆಂಬೆಗಳಿಗೆ ಹೋಲಿಸಲಾಗಿದೆ. “ಅವ್ಯಯಂ ಪ್ರಾಹುಃ” ಅಂದರೆ ಎಂದೆಂದಿಗೂ ನಾಶ ಹೊಂದದೆ, ವಿರೂಪಗೊಳ್ಳದೆ, ಏಕ ರೂಪದಲ್ಲಿರುತ್ತದೆ ಎಂದರ್ಥ. ಇದರ ಸೂಕ್ಷ್ಮವನ್ನು ತಿಳಿದವನೇ ಎಲ್ಲವನ್ನು ಅರಿತವನಾಗಿರುತ್ತಾನೆ.

ಸಂಸಾರವೆಂದರೆ ಜನನ – ಮರಣ ರೂಪವಾದ ಜೀವಿತದ ನದಿ ಪ್ರವಾಹವದಂತೆ . “ಅಶ್ವತ್ಥ” ಮರವನ್ನು ಸಂಸಾರಕ್ಕೆ ಹೋಲಿಸಲಾಗಿದೆ. ಈ ಮಹಾವೃಕ್ಷ ನಾಲ್ಕು ವಿಶೇಷ ಲಕ್ಷಣಗಳಿಂದ ಕೂಡಿದೆ.

ಬಹುಕಾಲಿತ್ವ : ಅಶ್ವತ್ಥ ವೃಕ್ಷವು ದೀರ್ಘ ಆಯುಷ್ಯವುಳ್ಳದ್ದಾಗಿದೆ. ಒಂದು ಪಕ್ಕ ಬಾಡಿ-ಬಾಡಿ ಒಣಗುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಹೊಸ- ಹೊಸ ಚಿಗುರುಗಳು ಹುಟ್ಟುತ್ತಿರುತ್ತವೆ. ಹಾಗೆಯೇ ಸಂಸಾರದಲ್ಲಿ ಒಂದು ಕಡೆಯಲ್ಲಿ ಸಾವು ಬಂದರೆ ಇನ್ನೊಂದೆಡೆ ಹೊಸ ಜೀವ ಹುಟ್ಟುತ್ತಿರುತ್ತದೆ.

ಬಹುವಿಸ್ತೃತತ್ವ್ತ: ಈ ಮರದ ರೆಂಬೆ, ಕೊಂಬೆಗಳು, ಕವಲುಗಳು ಬಹು ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಹಾಗೆಯೇ ಸಂಸಾರದ ಶಾಖೆಗಳು ಕೂಡ ವಿಸ್ತಾರವಾಗಿರುತ್ತದೆ.

ಬಹುಗ್ರಂಥಿಲತ್ವ: ಒಂದು ಸಂಸಾರದಲ್ಲಿರುವ ಸುಖ- ದುಃಖ, ಕಷ್ಟ, ಕಾರ್ಪಣ್ಯಗಳಂತೆ ಈ ವೃಕ್ಷದ ಕೊಂಬೆ ಬಿಳಲುಗಳು ಸೊಟ್ಟ-ಸೊಟ್ಟಾಗಿ, ಜಡೆ-ಜಡೆಯಾಗಿ, ಗಂಟು-ಗಂಟಾಗಿರುತ್ತದೆ.

ಬಹುಪೋಷಕತ್ವ : ವಿಶಾಲವಾದ ಅಶ್ವತ್ಥ ವೃಕ್ಷವು ಎಷ್ಟೆಷ್ಟೋ ಕ್ರಿಮಿ- ಕೀಟ, ಪಕ್ಷಿಗಳಿಗೆ ಆಶ್ರಯ ತಾಣವಾದಂತೆ ಸಂಸಾರ ಕೂಡ ಬಂಧು – ಮಿತ್ರ, ಅತಿಥಿ- ಅಭ್ಯಾಗತರಿಗೆ ಆಶ್ರಯ, ಪೋಷಕ ಸ್ಥಾನ ಆಗಿರುತ್ತದೆ.

ಭಗವಂತನ ಮಾತಿನ ಅಭಿಪ್ರಾಯವೇನೆಂದರೆ ಈ ಜಗತ್ತು “ಪರಬ್ರಹ್ಮ” ವಸ್ತುವಿನಿಂದ ಆದುದೆಂದು ತಿಳಿದಿರುವವನು ಮರಣಕ್ಕೆ ಭಯಪಡಬೇಕಾಗಿಲ್ಲ. ಕೊಂಬೆ ಬಾಡಿ ಉದುರಿದರೆ ಮರದ ಅಸ್ತಿತ್ವಕ್ಕೆ ಅಪಾಯವಿಲ್ಲ. ಹಾಗೆಯೇ ಮನುಷ್ಯನ ಮರಣದಿಂದ ಮೂಲ ಚೈತನ್ಯಕ್ಕೇನು ನಷ್ಟವಿಲ್ಲ. ಮರಣ ಕೇವಲ ಪಂಚ ಭೂತಗಳಿಂದ ಆದ ಈ ದೇಹಕ್ಕೆ ಮಾತ್ರ.

ಜ್ಞಾನಿಯಾದವನು ಇದರ ಮರ್ಮವನ್ನು ಅರಿತಿರುತ್ತಾನೆ. ಆತ್ಮದ ನಿರಂತರತೆಯನ್ನು ಅವನು ಮನದಟ್ಟು ಮಾಡಿಕೊಂಡಿದ್ದಾನೆ.

ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು

5 Comments on “ಭಗವದ್ಗೀತಾ ಸಂದೇಶ

  1. ತುಂಬಾ ಚೆನ್ನಾಗಿದೆ. ಚಿಂತನೆಗೆ ಹಚ್ಚುತ್ತದೆ ಬರಹ

  2. ನನ್ನ ಲೇಖನವನ್ನು ಮೆಚ್ಚಿ, ಪ್ರೋತ್ಸಾಹಿಸುತ್ತಿರುವ ನಾಗರತ್ನ ಮೇಡಂ ಮತ್ತು ನಯನ ಮೇಡಂ ಅವರಿಗೆ ಧನ್ಯವಾದಗಳು

  3. ಭಗವದ್ಗೀತೆಯ ಶ್ಲೋಕಗಳ ಭಾವಾರ್ಥ ಸಹಿತ ಮೂಡಿಬಂದ ಲೇಖನವು ಭಗವಂತನ ವಿರಾಟ್ ಸ್ವರೂಪವನ್ನು ಸ್ಪಷ್ಟವಾಗಿ ತೆರೆದಿಟ್ಟಿದೆ.

  4. ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು ಶಂಕರಿ ಅಕ್ಕ.

    ನನ್ನ ಲೇಖನಗಳನ್ನು ಪ್ರಕಟಿಸುತ್ತಿರುವ ಸುರಹೊನ್ನೆಯ ಸಂಪಾದಕರಾದ ಹೇಮಮಾಲಾ ಮೇಡಂ ಅವರಿಗೆ ತುಂಬಾ ತುಂಬಾ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *