ಭಗವದ್ಗೀತೆಯ ಸಾರವನ್ನು ಜಗಕ್ಕೆ ಸಾರಿದ ಶ್ರೀಕೃಷ್ಣನಿಗೆ ಜನ್ಮಾಷ್ಟಮಿ
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಶ್ರೀ ಕೃಷ್ಣಾಷ್ಟಮಿಯು ವೈಷ್ಣವರ ಪಾಲಿಗೆ ಅತ್ಯಂತ ದೊಡ್ಡ ಹಬ್ಬ. ಚಾಂದ್ರಮಾನ ಪಂಚಾಂಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ ಶ್ರೀಕೃಷ್ಣನು ಸೌರಮಾನ ಪಂಚಾಂಗ ರೀತ್ಯಾ ಸಿಂಹಮಾಸದಲ್ಲಿ ಹುಟ್ಟಿದನೆಂಬ ಪ್ರತೀತಿ ಇದೆ. ಇದಲ್ಲದೇ ವರಾಹ ಪುರಾಣದ ಪ್ರಕಾರ ಶ್ರೀ ಕೃಷ್ಣ ಜನ್ಮವು ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಯಿತು. ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ಇದೇ ದಿನವನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಜನ್ಮಾಷ್ಟಮಿಯೆಂದೂ ಕರೆಯುವರು. ಗೋಕುಲಾಷ್ಟಮಿಯನ್ನು ದೇಶದಾದ್ಯಂತ ಹಿಂದೂಗಳು ಸಂಭ್ರಮದಿಂದ ಆಚರಿಸುತ್ತಾರೆ. ಇಂದು ಎಲ್ಲೆಲ್ಲೂ ಗೋವಿಂದನ ನಾಮ ಸ್ಮರಣೆ ಮೊಳಗಿದೆ. . ದೇವಾಲಯಗಳು ಅಲಂಕಾರಗೊಳ್ಳುತ್ತವೆ. ಮುರಳಿ ಲೋಲನಿಗೆ ಬಗೆ ಬಗೆಯ ಆಭರಣಹಾಕಿ ಸಿಂಗಾರಗೊಳಿಸುತ್ತಾರೆ . ಜನಾರ್ದನನನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಾರೆ . ಮುಕುಂದನಿಗೆ ಇಷ್ಟವಾಗುವ ಬಗೆ ಬಗೆಯ ತಿಂಡಿಗಳನ್ನು ತಯಾರಿಸಿ, ಘನಶ್ಯಾಮನಿಗೆ ಅರ್ಪಿಸಲಾಗುತ್ತದೆ.
ಶ್ರೀಕೃಷ್ಣನ ಜನ್ಮ ಕಥೆ
ದೇವಕಿಯ ಗರ್ಭದಲ್ಲಿ ಹುಟ್ಟುವ ಎಂಟನೆಯ ಮಗುವಿನಿಂದಲೆ ನಿನ್ನ ಮರಣವಾಗುತ್ತದೆ ಎಂಬ ಅಶರೀರವಾಣಿಯೊಂದು ಕಿವಿಗೆ ಬಿದ್ದ ಕೂಡಲೆ ಕಂಸ ಕಂಗಾಲಗಿಬಿಡುತ್ತಾನೆ. ಸಹೋದರಿ ದೇವಕಿಯನ್ನು ಕೊಲ್ಲುವುದೊಂದೇ ಇದಕ್ಕೆ ಪರಿಹಾರ ಎಂದು ನಿರ್ಧರಿಸುವ ಕಂಸ ಆ ಕೆಲಸಕ್ಕೆ ಸಜ್ಜಾಗುತ್ತಾನೆ.ದೇವಕಿಯ ಗಂಡ ವಸುದೇವ ಇದನ್ನು ತಡೆಯಲು ಬಂದು ಕಂಸನ ಮಾತಿಗೆ ಒಪ್ಪಿಗೆ ನೀಡುತ್ತಾನೆ. ದೇವಕಿಗೆ ಹುಟ್ಟುವ ಪ್ರತಿ ಮಗುವನ್ನೂ ತನ್ನ ಕೈಗೆ ಒಪ್ಪಿಸಬೇಕೆನ್ನುವ ಕಂಸನ ಷರತ್ತನ್ನು ವಸುದೇವ ಒಪ್ಪುತ್ತಾನೆ ಆಗ ಕಂಸನಿಗೆ ಕನಿಕರ ಹುಟ್ಟಿಬಂತಾದರೂ ಇಬ್ಬರನ್ನೂ ತನ್ನ ಕಾರಾಗೃಹಕ್ಕೆ ತಳ್ಳಿ ಸರಪಳಿಯಲ್ಲಿ ಬಂಧಿಸುತ್ತಾನೆ.
ವಸುದೇವ ತಾನು ಕೊಟ್ಟ ಮಾತಿನಂತೆ ದೇವಕಿಯು ಹಡೆದ ಮಗುವನ್ನು ಕಂಸನ ಕೈಗೊಪ್ಪಿಸುತ್ತಾನೆ.ಪ್ರತಿ ಮಗುವೂ ಕಂಸನ ಕೈಯಲ್ಲಿ ಸಾಯುವುದನ್ನು ಕಾಣುವ ದುರಾದೃಷ್ಟಕ್ಕೆ ದಂಪತಿಗಳು ಆ ಮಹಾವಿಷ್ಣುವಿನ ಮೊರೆ ಹೊಗುತ್ತಾರೆ. ಪ್ರಾರ್ಥನೆಗೆ ಪ್ರತ್ಯಕ್ಷನಾದ ಭಗವಾನ್ ವಿಷ್ಣು ಮಕ್ಕಳನ್ನು ರಕ್ಷಿಸುವ ಭರವಸೆ ಧೈರ್ಯ ನೀಡಿ .ಹಲವು ಸಲಹೆ ನಿರ್ದೇಶನಗಳನ್ನೂ ಕೊಟ್ಟು ಮಾಯವಾಗುತ್ತಾನೆ. ಮುಂದೆ ಎಲ್ಲವೂ ಪರಮಾತ್ಮನ ದಯೆಯಂತೆಯೆ ನಡೆಯುತ್ತದೆ.
ಅಷ್ಟಮಿಯ ದಿನ ಮಧ್ಯರಾತ್ರಿ ಕೃಷ್ಣ ಜನಿಸುತ್ತಾನೆ.ಮಹಾ ವಿಷ್ಣುವಿನ ನಿರ್ದೇಶನದಂತೆ ಹಸುಗೂಸನ್ನು ಬುಟ್ಟಿಯಲ್ಲಿಟ್ಟು ಗೋಕುಲಕ್ಕೆ ಕೊಂಡೊಯ್ಯಲು ವಸುದೇವನು ತಯಾರಾಗುತ್ತಾನೆ. ಕಾಲನ್ನು ಎತ್ತಿದಾಕ್ಷಣವೆ ಕಟ್ಟಿದ ಸರಪಳಿ ಬಿಚ್ಚಿಗೊಂಡಿತು. ಭದ್ರವಾದ ಕಬ್ಬಿಣದ ಬಾಗಿಲು ತನ್ನಿಂತಾನೆ ತೆರೆದುಕೊಂಡಿತು. ಮೇಘವೇ ಸ್ಪೋಟಗೊಂಡು ಸುರಿಯುವಂತೆ ಮಳೆ ಸುರಿಯುತ್ತಿದ್ದರೆ ವಸುದೇವನು ತನ್ನ ತಲೆಯಲ್ಲಿ ಹೊತ್ತುಕೊಂಡ ಮಗುವಿಗೆ ಐದು ಹೆಡೆಗಳ ಕಾಳಿಂಗ ಸರ್ಪವು ಮಳೆಯಿಂದ ರಕ್ಷಣೆ ನೀಡುತ್ತದೆ.ಮುಂದೆ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು ಯಾರಿಂದಲೂ ದಾಟಲಾಗದಂತೆ ನೀರು ಉಕ್ಕಿ ಹರಿಯುತ್ತಿತ್ತು. ಆದರೆ ವಸುದೇವನಿಗೆ ಸಲೀಸಾಗಿ ದಾಟಲು ಮಾರ್ಗವೇ ನಿರ್ಮಾಣವಾಗುತ್ತದೆ ಆತ ಮಗುವನ್ನು ಹೊತ್ತುಕೊಂಡು ಗೋಕುಲಕ್ಕೆ ಬರುತ್ತಿದ್ದಂತೆ.ಬಾಗಿಲು ತೆರೆದಿರುತ್ತದೆ ಸೀದಾ ಒಳಗೆ ಹೊದವನು ಬುಟ್ಟಿಯಲ್ಲಿದ್ದ ತನ್ನ ಗಂಡು ಮಗುವನ್ನು ಯಶೋದೆಯ ಬಳಿಯಿಟ್ಟು ಅವಳ ಹೆಣ್ಣು ಮಗುವನ್ನು ಹೊತ್ತು ವಾಪಾಸು ಬರುತ್ತಾನೆ.ಜೈಲಿನ ಒಳ ಹೊಕ್ಕ ತಕ್ಷಣ ಬಾಗಿಲು ತಾನಾಗಿ ಮುಚ್ಚಿಕೊಳ್ಳುತ್ತದೆ.ಸರಪಳಿಯು ಕಾಲನ್ನು ಬಿಗಿಯುತ್ತದೆ.
ಕಂಸನ ಅಂತ್ಯ
ಮಗು ಹುಟ್ಟಿದ ಸುದ್ದಿ ತಿಳಿದು ಕಂಸನು ಜೈಲಿಗೆ ಬಂದು ಮಗುವನ್ನು ಕೈಗೆತ್ತಿಕೊಳ್ಳುವಾಗ ಆ ಹೆಣ್ಣು ಮಗು ದೇವತೆಯಾಗಿ ಆಕಾಶಕ್ಕೆ ಏರುತ್ತಾಳೆ, ಅಲ್ಲಿಂದ ಒಂದು ಅಶರೀರವಾಣಿ ಕೇಳಿಸುತ್ತದೆ “ನಿನ್ನನ್ನು ಕೊಲ್ಲುವ ಮಗು ಸುರಕ್ಶಿತವಾಗಿಯೇ ಉಂಟು”. ಕಂಸ ಅಧೀರನಾಗುತ್ತಾನೆ. ಮುಂದೆ ಶ್ರೀ ಕೃಷ್ಣ ದೊಡ್ಡವನಾಗುತ್ತಿದ್ದಂತೆ ಕೃಷ್ಣನಿಂದಲೇ ಕಂಸನ ಸಾವು ಸಂಭವಿಸುತ್ತದೆ.
ಜನ್ಮಾಷ್ಟಮಿ ಆಚರಣೆ:
ಭಾರತ ಹಾಗೂ ವಿದೇಶೀ ನೆಲದಲ್ಲಿಯೂ ಪ್ರಖ್ಯಾತವಾಗಿದೆ ಜನ್ಮಾಷ್ಟಮಿ ಆಚರಣೆ. ಕೃಷ್ಣನ ಭಕ್ತರುವಿಶ್ವದ ನಾನಾ ಮೂಲೆಗಳಲ್ಲಿರುವುದರಿಂದ ಇದು ಅಷ್ಟು ಪ್ರಖ್ಯಾತವಾಗಿದೆ. ಕೃಷ್ಣಾಷ್ಟಮಿಯನ್ನು ಎರಡು ದಿನಗಳಲ್ಲಿ ಆಚರಿಸಲಾಗುತ್ತದೆ. ಮೊದಲನೆ ದಿನ ಹುಟ್ಟಿದ ಸಂಭ್ರಮವಾದರೆ ಮಾರನೆಯ ದಿನ ಕಾರ್ಯಕ್ರಮಗಳು ವಿಜೃಂಭಿಸುತ್ತವೆ.ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ ಕೃಷ್ಣಾಷ್ಟಮಿ ಬಹಳ ವೈಭವೋಪೇತವಾಗಿ ನಡೆಯುತ್ತದೆ.ಉತ್ತರಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಮಥುರಾದಲ್ಲಿ ಜುಲನೋತ್ಸವ ಪ್ರಸಿದ್ಧಿ. ದೇವಸ್ಥಾನಗಳಲ್ಲಿ , ಮನೆಮನೆಗಳಲ್ಲಿ ಉಯ್ಯಾಲೆ ತೊಟ್ಟಿಲು ಕಟ್ಟುತ್ತಾರೆ. ಅಷ್ಟಮಿಗೆ ತಿಂಗಳ ಮುಂಚೆಯೇ ಈ ತಯಾರಿ, ಸಂಭ್ರಮ ನಡೆಯುತ್ತದೆ.
ಪ್ರತಿ ಮನೆ ಮನಗಳಲ್ಲೂ ಕೃಷ್ಣನ ನಾಮ ಸ್ಮರಣೆ. ಹೆಣ್ಣು ಮಕ್ಕಳು ಬಾಲಗೋಪಾಲನ ಹೆಜ್ಜೆಗಳನ್ನು ರಂಗೋಲಿ ಹುಡಿಯಲ್ಲಿ ಹಾಕಿ, ನಂದಗೋಪಾಲನಿಗೆ ಅಲಂಕಾರ ಮಾಡಿ, ಸಿಹಿ ತಿಂಡಿ ಮಾಡಿ, ಪಾಂಡುರಂಗನಿಗೆ ಅರ್ಪಿಸುತ್ತಾರೆ. ಉಡುಪಿಯ ಕೃಷ್ಣ ಮಠ, ಬೆಂಗಳೂರಿನ ಇಸ್ಕಾನ್ ಸೇರಿದಂತೆ ದೇಶದೆಲ್ಲೆಡೆಯ ಕೃಷ್ಣ ಮಂದಿರಗಳಲ್ಲಿ ಜನ್ಮಾಷ್ಟಮಿಯ ಸಂಭ್ರಮ ಅನನ್ಯ.
ಗಿರಿಧರ ತಡರಾತ್ರಿ ಜನಿಸಿದ್ದರಿಂದ ರಾತ್ರಿ ಪೂರ್ತಿ, ದ್ವಾರಕಾನಾಥನ ನಾಮ ಸ್ಮರಣೆಯಲ್ಲಿ ಭಕ್ತರು ನಿರತರಾಗುತ್ತಾರೆ. ಕೆಲವೆಡೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಉಪವಾಸವಿದ್ದು, ಚಕ್ರಧಾರಿಯನ್ನು ನೆನೆದು, ತಡರಾತ್ರಿ ಆಹಾರ ಸೇವಿಸುವವರೂ ಇದ್ದಾರೆ. ಕೃಷ್ಣಜನ್ಮಾಷ್ಟಮಿ ನಿಮಿತ್ತ ಅನೇಕ ಸ್ಪರ್ಧೆಗಳು ನಡೆಯುತ್ತವೆ. ಪುಟಾಣಿ ಮಕ್ಕಳು ರಾಧಾಮಾಧವನ ವೇಷ ಧರಿಸಿ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೆಡೆ ಮಡಿಕೆಯೊಡೆಯುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತದೆ.
ವ್ರತದ ಅನುಷ್ಠಾನ:
ಜಯಂತಿ ಯೋಗವು ಒಂದು ದಿವನ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು. ಆ ಯೋಗವು ಎರಡು ದಿವಸ ಇದ್ದರೆ, ಎರಡನೆಯ ದಿನದಲ್ಲಿ ವ್ರತದ ಆಚರಣೆ ಮಾಡಬೇಕು. ಜಯಂತಿ ಯೋಗವು ಇಲ್ಲದಿದ್ದರೆ ರೋಹಿಣಿ ನಕ್ಷತ್ರದಿಂದ ಕೂಡಿದ ಅಷ್ಟಮಿಯಂದು ವ್ರತವನ್ನಾಚರಿಸಬೇಕು. ಎರಡು ದಿನಗಳಲ್ಲೂ ರೋಹಿಣಿ ನಕ್ಷತ್ರಕ್ಕೆ ಸೇರಿದ ಅಷ್ಟಮಿಯಿದ್ದರೆ ಉಪವಾಸವನ್ನು ಎರಡನೆಯ ದಿನದಲ್ಲಿ ಆಚರಿಸಬೇಕು. ರೋಹಿಣಿ ನಕ್ಷತ್ರವು ಇಲ್ಲದಿದ್ದರೆ ಅರ್ಧರಾತ್ರಿಯಲ್ಲಿರುವ ಅಷ್ಟಮಿಯಲ್ಲಿ ಆಚರಿಸಬೇಕು. ಎರಡು ದಿನಗಳಲ್ಲಿಯೂ ಅಷ್ಟಮಿಯಿದ್ದರೆ ಅಥವಾ ಅಷ್ಟಮಿಯು ಎರಡು ದಿನಗಳಲ್ಲಿಯೂ ಅರ್ಧರಾತ್ರಿಯಲ್ಲಿ ಇಲ್ಲದಿದ್ದರೆ ಆಗ ಎರಡನೆಯ ದಿನದಲ್ಲಿ ವ್ರತವನ್ನಾಚರಿಸಬೇಕು. ತಿಥಿಯೋಗವಿಲ್ಲದಿದ್ದರೂ ಕೇವಲ ರೋಹಿಣೀ ನಕ್ಷತ್ರದಲ್ಲೇ ಪೂಜೆಯನ್ನು ಮಾಡಬೇಕು. ರೋಹಿಣೀ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಒಟ್ಟಿಗೇ ಕೂಡಿ ಬರದಿದ್ದರೆ ಎರಡರಲ್ಲಿ ಯಾವುದಾದರೂ ಒಂದಕ್ಕೆ ಪ್ರಾಧಾನ್ಯ ಕೊಟ್ಟು ವ್ರತವನ್ನಾಚರಿಸಬೇಕು.
ಪೂಜೆಯ ವಿಧಿವಿಧಾನ
ಭಗವಂತನ ಪೂಜಾಮಂಟಪವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಸಿಂಗರಿಸಬೇಕು. ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಹೊಸ್ತಿಲಿನಿಂದ ದೇವರ ಕೋಣೆಯವರೆಗೆ ಇರಿಸಲಾಗುವುದು. ಶ್ರೀ ಕೃಷ್ಣನು ಬಾಲಕನ ರೂಪದಲ್ಲಿ ಮನೆಯೊಳಗೆ ಬರುವುದರ ಸೂಚನೆಯಿದು. ಅಂದು ದೇವಕೀ ದೇವಿಗಾಗಿ ಪ್ರಸವಗೃಹವನ್ನು ನಿರ್ಮಿಸುತ್ತಾರೆ. ಅದರಲ್ಲಿ ಮಂಗಳಕರವಾದ ಪೂರ್ಣಕುಂಭ, ಮಾವಿನ ಎಲೆಗಳು, ಪುಷ್ಪಮಾಲಿಕೆಗಳು, ಅಗರು ಧೂಪದ ಸುವಾಸನೆಯನ್ನು ಇರಿಸಲಾಗುತ್ತದೆ. ಹೊರಗೆ ಗೋಡೆಗಳ ಮೇಲೆ ದೇವ ಗಂಧರ್ವರು, ವಸುದೇವ, ದೇವಕಿ, ನಂದ, ಯಶೋದೆ, ಗೋಪಿಯರು, ಕಂಸನ ಕಾವಲುಗಾರರು, ಯಮುನಾದೇವಿ, ಕಾಳಿಂಗ, ಮತ್ತು ಗೋಕುಲದ ಚಿತ್ರಗಳನ್ನು ಚಿತ್ರಿಸಿ ಪೂಜಿಸಲಾಗುವುದು.
ತಿಂಡಿಗಳೇ ಪ್ರಾಧಾನ್ಯ
ಈ ಸಂದರ್ಭದಲ್ಲಿ ತಯಾರಿಸುವ ತಿಂಡಿಗಳು ಹೆಚ್ಚಾಗಿ ಹಾಲಿನಿಂದಲೇ ಮಾಡಲಾಗುತ್ತದೆ. ಕೃಷ್ಣನಿಗೆ ಹಾಲಿನಿಂದಲೇ ಮಾಡಿದ ತಿಂಡಿಗಳು ತುಂಬಾ ಇಷ್ಟ.ಹಾಲಿನ ಖೀರ್, ಹಾಲಿನ ಪೇಡ, ಗುಲಾಬ್ ಜಾಮೂನ್ ಮುಂತಾದ ಸಿಹಿತಿಂಡಿಗಳನ್ನೆ ಮಾಡುತ್ತಾರೆ. ಇನ್ನು ಶ್ರೀಕಂಡ ಪೂರಿ ತಯಾರಿಸುತ್ತಾರೆ. ತಮಿಳುನಾಡಿನಲ್ಲಿ ಮುರುಕ್ಕ ಮತ್ತು ಸೀದೈ ಅಂದಿನ ಮುಖ್ಯ ತಿಂಡಿಗಳಲ್ಲಿ ಒಂದು.ಕರ್ನಾಟಕದ ಕೆಲವು ಕಡೆಗಳಲ್ಲಿ ಚಕ್ಕುಲಿ, ಅವಲಕ್ಕಿ, ಮತ್ತು ಬೆಲ್ಲದ ಪಾನಕ ಮಾಡುತ್ತಾರೆ. ಭಕ್ತ ಕುಚೇಲನ ನೆನಪಿಗಾಗಿ ಮನೆಯಲ್ಲಿ ತಯಾರಿಸಿದ ಅವಲಕ್ಕಿಯನ್ನೆ ಬಳಸುತ್ತಾರೆ.
ಮಥುರೆಯ ದೇಗುಲದಲ್ಲಿ ಅಂದು ಉತ್ಸವವನ್ನಾಚರಿಸುವರು. ಇಲ್ಲಿ ನೈವೇದ್ಯಕ್ಕಾಗಿ ೬೪ ಬಗೆಯ ತಿ£ಸುಗಳನ್ನು ಅರ್ಪಿಸುವರು. ಇದರಲ್ಲಿ ವಿಶೇಷವಾದ ಒಂದು ತಿ£ಸೆಂದರೆ ಖೋವಾಪೂರಿ. ಹಾಲು ಸಕ್ಕರೆ ಮಿಶ್ರಣ ಮಾಡಿ ಕುದಿಸಿ, ಅದರಲ್ಲಿ ಬರುವ ಕೆನೆಯನ್ನು ತೆಗೆದು ಅದನ್ನು ಪೂರಿಯಂತೆ ತುಪ್ಪದಲ್ಲಿ ಕರಿಯುವುದು. ಇದಲ್ಲದೇ ಒರಿಸ್ಸಾದಲ್ಲಿ ಜಗನ್ನಾಥನಿಗೂ ವಿಶೇಷ ಪೂಜೆ ಆಗುವುದು.
ಮೊಸರು ಕುಡಿಕೆ:
ರಾಸಲೀಲೆ ನೃತ್ಯ ಇಲ್ಲದಿದ್ದರೆ ಕೃಷ್ಣಾಷ್ಟಮಿ ಅಪೂರ್ಣವಂತೆ.!ಮೊಸರು ಕುಡಿಕೆ ಒಡೆಯುವುದು ಬಹಳ ಜನಪ್ರಿಯ ಕಾರ್ಯಕ್ರಮ. ಮಹಾರಾಷ್ಟ್ರದ ಮುಂಬೈನಲ್ಲಂತೂ ಮೊಸರು ಕುಡಿಕೆ ತುಂಬ ಪ್ರಸಿದ್ಧಿ.ಅಲ್ಲಿ ಮೊಸರು ಕುಡಿಕೆ ಒಡೆಯಲು ಮಾನವ ಗೋಪುರವನ್ನು ನಿರ್ಮಿಸುವುದೇ ಒಂದು ದೊಡ್ದ ಸಾಹಸ. ಅದಕ್ಕಾಗಿಯೆ ಹುಟ್ಟಿಕೊಂಡ ತಂಡಗಳಿವೆ,ಅದನ್ನು “ಗೋವಿಂದ ಪಥಕ’’ ಎಂದು ಕರೆಯುತ್ತಾರೆ.ಇವರು ಲಾರಿಗಳಲ್ಲಿ ಸಂಚರಿಸುತ್ತ ಇದ್ದು ಅಲ್ಲಲ್ಲಿ ಮಾನವ ಪಿರಮಿಡ್ಡು ರಚಿಸಿ ಮೊಸರು ಕುಡಿಕೆ ಒಡೆಯುತ್ತಾರೆ.ಇದರಲ್ಲಿ ಮಹಿಳೆಯರ ತಂಡಗಳೂ ಇವೆ.
ಒಂಭತ್ತನೇ ಅವತಾರ
ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೆ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ. ಗೋವುಗಳನ್ನೂ, ಗೋಪಾಲಕರನ್ನೂ, ಪಶು, ಪಕ್ಷಿ, ವೃಕ್ಷ, ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ. ಮಹಾಭಾರತದ ಸೂತ್ರಧಾರ, ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ.
-ಮ.ನ.ಲತಾಮೋಹನ್ ಎಂ.ಎ, ಮೈಸೂರು
ಶ್ರೀ ಕೃಷ್ಣ ನ ಜನ್ಮಾಷ್ಟಮಿಯ..ಸಂದರ್ಭದಲ್ಲಿ ಉಪಯುಕ್ತ ಲೇಖನ ಕೊಟ್ಟಿರುವ ಗೆಳತಿ ಲತಾಗೆ ಧನ್ಯವಾದಗಳು..
ತುಂಬಾ ಚೆನ್ನಾಗಿದೆ ಲೇಖನ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಮಹತ್ವ, ವಿಧಾನಗಳ ಜೊತೆಗೆ ದುಷ್ಟ ನಿಗ್ರಹಕ್ಕಾಗಿ ಜನ್ಮವೆತ್ತಿದ ಘನಶ್ಯಾಮನ ಹುಟ್ಟಿನ ರಹಸ್ಯವನ್ನು ಒಳಗೊಂಡ ಸಕಾಲಿಕ, ಸುಂದರ ಲೇಖನ