ಅಳತೆಗಳ ಕಥೆ
ಮಾನವ ಮೊದಲು ವಸ್ತುಗಳ ವಿನಿಮಯ ಮಾಡಿಕೊಳ್ಳುತ್ತಿದ್ದ. ನಂತರ ಹಣದ ಉಪಯೋಗ ಬಂದಿತು. ಅಳತೆ ಮಾಡಿ ವಸ್ತುಗಳನ್ನು ಕೊಂಡುಕೊಳ್ಳುವುದು ಪ್ರಾರಂಭವಾಯಿತು. ಅಳತೆಯ ಮಾಪನಗಳ ಬಗ್ಗೆ ಯೋಚಿಸಿದರೆ ಅದರದ್ದೇ ಆದ ಇತಿಹಾಸ, ಬೆಳವಣಿಗೆ ಮತ್ತು ಸಂಸ್ಕೃತಿಯ ಜೊತೆ ಹಾಸುಹೊಕ್ಕಾಗಿರುವುದು ಕಂಡುಬರುತ್ತದೆ.
ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಳತೆಯ ಮಾಪನಗಳ ಅನೇಕ ಪದಗಳು ನೆನಪಿಗೆ ಬಂದವು. ಈ ಪದಗಳು ಬಳಕೆಯಿಂದಲೇ ಕಾಣೆಯಾಗುತ್ತಿವೆ ಎನ್ನುವುದು ದುಃಖದ ಸಂಗತಿ ಶಬ್ದಕೋಶದಲ್ಲಿ ಉಳಿಯುತ್ತವೆಯೇ? ಗೊತ್ತಿಲ್ಲ! ಸಂಸ್ಕೃತಿಯ ಪ್ರದರ್ಶನಗಳಲ್ಲಿಯಾದರೂ ಇವುಗಳನ್ನು ಮತ್ತೆ ನೆನಪು ಮಾಡಿಕೊಳ್ಳುವುದು ಬಹಳ ಅಗತ್ಯ.
ನಾವು ಚಿಕ್ಕವರಿದ್ದಾಗ ಅಂದರೆ 60 ವರ್ಷಗಳಿಗೂ ಹಿಂದೆ ಮೆಟ್ರಿಕ್ ಪದ್ಧತಿ ನಮ್ಮ ದೇಶದಲ್ಲಿನ್ನೂ ಪೂರ್ತಿ ಜಾರಿಗೆ ಬಂದಿರಲಿಲ್ಲ. ಜಾರಿಗೆ ಬಂದಿದ್ದು ಡಿಸೆಂಬರ್ 1956 ರಲ್ಲಿ. ಅಕ್ಕಿ ಮುಂತಾದ ಪದಾರ್ಥಗಳನ್ನು ಸೇರಿನಲ್ಲಿ ಅಳೆಯುತ್ತಿದ್ದರು. ಸೇರಿಗಿಂತ ಚಿಕ್ಕದು ಪಾವು. ನಾಲ್ಕು ಪಾವು ಸೇರಿದರೆ ಒಂದು ಸೇರು. ಅರ್ಧ ಸೇರಿನ ಮಾಪನ ಅಚ್ಚೇರು, ನಾಲ್ಕು ಚಟಾಕುಗಳು ಸೇರಿದರೆ ಒಂದು ಪಾವು. ಚಟಾಕಿಗಿಂತ ಚಿಕ್ಕದು ಸೊಲಗ, ಐದು ಸೇರು ಸೇರಿದರೆ ಒಂದು ಕೊಳಗ ಅಥವಾ 4 ಅಥವಾ 5 ಬಳ್ಳ. ಕೊಳಗಕ್ಕೆ 4 ಸೇರು ಎನ್ನುವುದೂ ಕೆಲವೆಡೆ ಇದೆ. ಸುಂದರ ಗಾದೆಯೇ ಇದೆಯಲ್ಲ ‘ಹನಿಗೂಡಿದರೆ ಹಳ್ಳಿ, ತೆನೆಗೂಡಿದರೆ ಬಳ್ಳ‘. ನಾನು ಸುಮಾರು 10 ವರ್ಷದವಳಿದ್ದಾಗ ಮಾಲ ಎನ್ನುವ ರೈತ ಎತ್ತಿನ ಗಾಡಿಯಲ್ಲಿ ವರ್ಷಕ್ಕೊಮ್ಮೆ ನಮ್ಮ ಮನೆಗೆ ಭತ್ತ ತಂದು ಹಾಕುತ್ತಿದ್ದ. ಭತ್ತಕ್ಕೆ ಮೊದಲು ಕೈ ಮುಗಿದು ನಂತರ ಕೊಳಗದಲ್ಲಿ ಅಳೆಯಲು ಶುರು ಮಾಡುತ್ತಿದ್ದ. ಮೊದಲು ಅಳೆದು ಹಾಕಿದ ಕೂಡಲೆ ‘ಹೆಚ್ಚಾಲಿ’ ಎನ್ನುತ್ತಿದ್ದ. ನಂತರ ಎರಡು…… ಮೂರು ಎಂದು ಲೆಕ್ಕ ಹಾಕುತ್ತಿದ್ದ. ಈಗ ಇವೆಲ್ಲಾ ಗತಕಾಲದ ನೆನಪುಗಳು ಆದರೆ ಹಳ್ಳಿಗಳ ಕಡೆ ಇನ್ನೂ ಚಾಲ್ತಿಯಲ್ಲಿವೆ. ಅವಿಭಜಿತ ದಕ್ಷಿಣ ಕನ್ನಡದ ‘ಮುಡಿ’ ಧಾನ್ಯಗಳನ್ನು ವಿಶೇಷವಾಗಿ ಅಕ್ಕಿಯನ್ನಿಡಲು ಮಾಡುವ ಒಂದು ಮೂಟೆಯಂತಹ ಸಾಧನ. ಇದನ್ನು ಹುಲ್ಲಿನಿಂದ ತಯಾರಿಸುತ್ತಾರೆ. ಕಟ್ಟುವುದೂ ಒಂದು ಕಲೆ. ಅಕ್ಕಿ ಹಾಳಾಗದೆ ಇದರಲ್ಲಿ ಮಳೆಗಾಲದಲ್ಲೂ ಉಳಿಯುತ್ತದೆ. ಇದರಲ್ಲಿ 42 ಸೇರು ಹಿಡಿಸುತ್ತದೆ. ಈಗೆಲ್ಲಾ ಅಕ್ಕಿ ಮುಡಿ ಕಟ್ಟುವುದೇ ಅಪರೂಪ.
ಮಲ್ಲಿಗೆ ಹೂವನ್ನು ಮಾರುವುದೂ ದಕ್ಷಿಣ ಕನ್ನಡದಲ್ಲಿ ಬೇರೆ ರೀತಿ ಮಾರುಗಟ್ಟಲೆ ಹೂ ಕಟ್ಟುವುದಿಲ್ಲ. ಕಟ್ಟಿದ್ದು ಸಣ್ಣದಾಗಿರುತ್ತದೆ. ಇವುಗಳನ್ನು ನಾಲ್ಕರಂತೆ ಒಟ್ಟು ಮಾಡಿ ಅಟ್ಟಿ ಎದು ಕಟ್ಟುತ್ತಾರೆ. ಅಟ್ಟಿಗಳನ್ನು ಸೇರಿಸಿದರೆ ಒಂದು ಚೆಂಡಾಗುತ್ತದೆ. ಒಂದು ಚೆಂಡಿನಲ್ಲಿ 600 ಮೊಗ್ಗುಗಳಿರುತ್ತವೆ. ಮೀಟರ್ ಬರುವುದಕ್ಕೆ ಮೊದಲು ಹೂವನ್ನು ಮೊಳ ಮಾರು ಎಂದು ಅಳತೆ ಮಾಡಿ ಮಾರುತ್ತಿದ್ದರು. ಅದರಲ್ಲಿ ಕಡಿಮೆ ಅಳತೆ ಮಾಡುವುದೂ ಅವರಿಗೆ ಗೊತ್ತಿತ್ತು.
ದೂರದ ಮಾಪಕ ಅಥವಾ ಅಳತೆಯನ್ನು ಅಂಗುಲದಿಂದ ನಮ್ಮ ಹಿರಿಯರು ಪ್ರಾರಂಭಿಸಿದ್ದಾರೆ. ಒಂದು ಇಂಚು (ಬ್ರಿಟಿಷ್) ಎಂದರೆ ಕೈ ಬೆರಳುಗಳ ಒಂದು ಗಂಟು (ಸಂಧಿ)ನಿಂದ ಇನ್ನೊಂದಕ್ಕೆ ಎನ್ನಿಸುತ್ತದೆ. ಇದು ನನ್ನ ಅಭಿಪ್ರಾಯ. ಆದರೆ ಸಂಸ್ಕೃತದಲ್ಲಿ ಒಂದು ಅಂಗುಲ ಎಂದರೆ ಸುಮಾರು ಒಂದೂ ಮುಕ್ಕಾಲು ಸೆಂಟಿಮೀಟರ್ ಮಧ್ಯ ಬೆರಳಿನ ಅಗನ (ಯಜಮಾನನದು). ಇದು ಇಂಚಲ್ಲ ನೆನಪಿರಲಿ. ‘ಚತುರ್ವಿಂಶಾಂಗುಲೋ ಹಸ್ತಃ, ಚರ್ತುಹಸ್ತಂ, ಧನುಃ ಸ್ಮೃತಮ್’ ಅಂದರೆ 24 ಅಂಗುಲಗಳಿಗೆ ಒಂದು ಹಸ್ತ ಎಂದೂ ಅಂತಹ 4 ಹಸ್ತಗಳಿಗೆ ಧನುಃ ಎಂದೂ ಅರ್ಥ. ಹಾಗಾದರೆ 24 x 4 = 96 ಅಂಗುಲಗಳು. ಇಂದಿನ ಅಡಿಯ ಲೆಕ್ಕದಲ್ಲಿ 8 ಅಡಿಗಳಿಗೆ ಒಂದು ಧನು. ಧನು ಎಂದರೆ ಬಿಲ್ಲು ಎನ್ನುವ ಅರ್ಥವೂ ಇದೆ. ಆಡು ಮಾತಿನಲ್ಲಿ ಧನು ಎಂದರೆ ಬಿಲ್ಲಳತೆ ಅಥವಾ ಒಂದು ಮಾರು. ಹಸ್ತ ಎಂದರೆ ಒಂದು ಮೊಳ. ಎರಡು ಗೇಣು. ಇದು 24 ಬೆರಳಗಲ. ಮತ್ತೆ ನೆನಪಿಡಿ, ಇಂಚಲ್ಲ ನಾಲ್ಕು ಮೊಳ ಅಥವಾ ಹಸ್ತ ಎಂದರೆ ಎಂಟು ಗೇಣು = ಮಾರು. ಮಾರು ಹಾಕುವುದು ಎರಡು ತೋಳುಗಳನ್ನು ಎರಡೂ ಕಡೆ ಅಗಲ ಮಾಡಿ ಉದ್ದಕ್ಕೆ ಚಾಚಿ, 2 ಮಧ್ಯ ಬೆರಳುಗಳ ತುದಿಗಳ ಮಧ್ಯದ ಅಂತರವಾಗಿರುತ್ತದೆ. ಕನಕದಾಸರು ‘ಎಂಟು ಗೇಣಿನ ದೇಹ…..’ ಎಂದು ಹರಿಭಕ್ತಿಸಾರದಲ್ಲಿ ಹೇಳಿದ್ದಾರೆ. ಇದು ಒಂದು ಧನು. ಹಳ್ಳಿಗಳಲ್ಲಿ ಈ ಅಳತೆಗಳು ಇನ್ನೂ ಇವೆ. ಹಳ್ಳಿಗಳಲ್ಲಿ ಒಂದು ಬಿಲ್ಲೆಂದರೆ ಒಂದು ಆಳೆತ್ತರ ಎನ್ನುವ ವಾಡಿಕೆ ಇದೆ. ಮಹಾಭಾರತದಲ್ಲಿ (ವಚನ ಭಾರತ, ಎ.ಆರ್.ಕೃಷ್ಣಶಾಸ್ತ್ರಿ) ‘ಭೀಮಸೇನನು ಬಿಡಿಸಲಾರದೆ ಒದ್ದಾಡುತ್ತಿದ್ದ ಹಿಡಿಂಬನನ್ನು ಬೀಸಿ ಎಸೆದನು. ಅವನು ಎಂಟು ಬಿಲ್ಲಿನ ದೂರ ಹೋಗಿ ಬಿದ್ದನು’ ಎಂದಿದೆ. ಇದು ಮೂಲದಲ್ಲಿ ಧನುಃ ಎಂದಿದೆ (ಎಸ್.ಎನ್. ಸಿಂಹ) ಇವರ ಪ್ರಕಾರ ಧನುವಿನ ಅನುವಾದ ಬಿಲ್ಲು ಎಂದರೆ ಸರಿಯಲ್ಲ. ಅದು ಒಂದು ಅಳತೆ. ಇರಲಿ, ಎಷ್ಟು ವಿಷಯಗಳು ತಿಳಿದವು! ಕವಣೆ ಎಸೆದರೆ ಅದು ಕ್ರಮಿಸುವ ದೂರವನ್ನು ಕವಣೆ ದೂರ ಎನ್ನುತ್ತಾರೆ (ವನಂ ಶಿವರಾಮು).
‘ಕೂಗಳತೆ’ ಎಂದರೆ ಕೂಗು ಹಾಕಿದರೆ ಕೇಳುವಷ್ಟು ಅಂತರ ಅಥವಾ ದೂರ. ಇದಲ್ಲದೆ ಗಾವುದ, ಯೋಜನ ಎನ್ನುವ ದೂರ ತಿಳಿಸುವ ಪದಗಳು ಇವೆ. ಗಾವುದ ಎಂದರೆ 10-12 ಮೈಲು ದೂರದ ಒಂದು ಅಳತೆ. ಇದು ನಾಲ್ಕು ಹರದಾರಿಗಳಿಗೆ ಸಮವಾಗುತ್ತದೆ. ಯೋಜನ ಎನ್ನುವ ಪದ ಗಾವುದದಷ್ಟೇ ಇದ್ದು ನಾಲ್ಕು ಹರದಾರಿಯಾಗುತ್ತದೆ. ಹಾಗಾದರೆ ಒಂದು ಹರದಾರಿ 2-3 ಮೈಲುಗಳಾಷ್ಟಾಗುತ್ತದೆ. ಯೋಜನ ಎಂದ ಕೂಡಲೆ ಯೋಜನ ಗಂಧಿಯ ನೆನಪಾಗುತ್ತದೆ. ಇವಳು ಸತ್ಯವತಿ. ಶಂತನು ಮಹಾರಾಜನ ಹೆಂಡತಿ. ಅವಳ ಮೈಗಂಧ ಒಂದು ಯೋಜನದಿಂದಲೇ ಬರುತ್ತಿತ್ತು ಎನ್ನುತ್ತಾರೆ. ಇದಲ್ಲದೆ ಧಾನ್ಯಗಳ ಅಳತೆಗಳು ಇನ್ನೂ ಇವೆ. ಮಣ ಎಂದರೆ 48 ಸೇರು ಮತ್ತು ತೂಕದಲ್ಲಿ 28 ರಾತ್ಲು. ಯಾವುದಾದರೂ ಬಹಳ ತೂಕ ಇದ್ದರೆ ‘ಮಣಭಾರ’ ಎನ್ನುತ್ತಾರೆ. ವೀಸೆ ಎಂದರೆ ಮಣದ ಎಂಟನೇ ಒಂದು ಭಾಗ. ಒಂದು ಪಲ್ಲ ಎಂದರೆ ನೂರು ಸೇರು. ನಾವು ಚಿಕ್ಕವರಿದ್ದಾಗ ಪಲ್ಲ ಮೂಟೆ ಎಂದೇ ಗೋಣಿಚೀಲ ಇರುತ್ತಿತ್ತು. ಈಗ ಪಲ್ಲವೂ ಇಲ್ಲ, ಪರಿಸರ ಸ್ನೇಹಿ ಗೋಣೀಚೀಲವೂ ಇಲ್ಲ. ಕಂಡುಗ ಎಂದರೆ 20 ಕೊಳಗಗಳು. ಅಂದರೆ ಇದೂ ನೂರು ಸೇರಾಗುತ್ತದೆ. ಅತಿ ಚಿಕ್ಕ ತೂಕಗಳೂ ಇವೆ. ತೊಲ ಅಥವಾ ತೊಲೆ ಎಂದರೆ ಒಂದು ರೂಪಾಯಿ ನಾಣ್ಯದ ತೂಕ. ಪವನು ಎಂದರೆ ಸವರನ್ನು. ಇದು ಚಿನ್ನದ ತೂಕ ಮಾಪನ. ಜೊತೆಗೆ ಗುಲಗಂಜಿಯನ್ನೂ ಉಪಯೋಗಿಸುತ್ತಿದ್ದರು. ಗುಲಗಂಜಿ ತೂಕ’ ಎನ್ನುವ ಮಾತಿದೆ. ಗುಲಗಂಜಿಗೆ ಸಸ್ಯ ವಿಜ್ಞಾನದಲ್ಲಿ ಇದರ ಹೆಸರು (Abrus precatorius) ಏಬ್ರಸ್ ಪ್ರೆಕಟೋರಿಯಸ್. ಹುರುಳಿಕಾಯಿ ಕುಟುಂಬಕ್ಕೆ (ಫೇಬೇಸಿ) ಸೇರಿದ್ದು. ಆಶ್ಚರ್ಯವೆಂದರೆ ಎಲ್ಲಾ ಗುಲಗಂಜಿಗಳೂ ಒಂದೇ ತೂಕ ಇರುತ್ತವಂತೆ. ಇದಕ್ಕೆ ಕೆಲವು ಔಷಧೀಯ ಗುಣಗಳಿವೆ. ಈ ಬೀಜಗಳು ಬಹಳ ವಿಷಕಾರಿ. ಸಿದ್ಧೌಷಧಿಯಲ್ಲಿ ಉಪಯೋಗ ಮಾಡುತ್ತಾರೆ.
ಇನ್ನು ಬಟ್ಟೆಯ ಅಳತೆಯನ್ನು ಗಜದಲ್ಲಿ ಮಾಡುತ್ತಿದ್ದರು. ಮೊಳದಲ್ಲೂ ಅಳತೆ ಮಾಡುತ್ತಿದ್ದರು. ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು’ ಎನ್ನುವ ಗಾದೆ ಮಾತು ನೆನಪಾಗುತ್ತದೆ. ಒಂದು ಗಜಕ್ಕೆ ಮೂರು ಅಡಿ. ಭೂಮಿಯನ್ನು ವಿಶೇಷವಾಗಿ ಮನೆಯ ನಿವೇಶನವನ್ನು ಅಡಿಗಳಲ್ಲಿ ಲೆಕ್ಕ ಹಾಕುತ್ತಾರೆ. ಕೃಷಿ ಭೂಮಿಯನ್ನು ಎಕರೆ, ಗುಂಟೆ ಎಂದು ಅಳತೆ ಮಾಡಲಾಗುತ್ತದೆ. ಒಂದು ಗುಂಟೆ 1/40 ಎಕರೆ.
ಇನ್ನೊಂದು ನೆನಪಾದದ್ದು ನನಗೆ ಒಣಗಿದ ಬೆರಣಿ. ಇದನ್ನು ಜೋಡಿ ಎಂದು ಎರಡೆರಡನ್ನು ಲೆಕ್ಕ ಮಾಡಿ ಕೊಡುತ್ತಿದ್ದರು. ವಿಳ್ಳೇದೆಲೆಯನ್ನು ‘ಕವಳಿಗೆ’ ಅಥವಾ ‘ಕವಳಿ’ ಎಂದು ಜೋಡಿಸಿ ಮಾರುತ್ತಾರೆ. ಒಂದು ಕವಳಿಗೆಯಲ್ಲಿ 20 ಎಲೆಗಳಿರುತ್ತವೆ. ಇನ್ನು ಬೆಲ್ಲವನ್ನು ‘ಪಿಂಡಿ’ ಎಂದು ಜೋಡಿಸಿಡುತ್ತಾರೆ. ಇದರಲ್ಲಿ 50 ಅಚ್ಚುಗಳಿರುತ್ತವೆ.
ಸಮಯದ ಅಳತೆಯೂ ನಮ್ಮಲ್ಲಿ ಪುರಾತನ ಕಾಲದಿಂದಲೇ ಇದೆ. ಯಾವುದಾದರೂ ಪಂಚಾಂಗ ತೆಗೆದು ನೋಡಿದರೆ ಅರಿವಾದೀತು. ಜಾವ ಅಥವಾ ಯಾಮ ಎನ್ನುತ್ತೇವೆ. ಪ್ರಹರ ಎಂದೂ ಕರೆಯುತ್ತಾರೆ. ಏಳು ಗಳಿಗೆ ಸೇರಿದರೆ ಒಂದು ಜಾವ. 24 ನಿಮಿಷಗಳಿಗೆ ಒಂದು ಗಳಿಗೆ. ಸಂಸ್ಕೃತದಲ್ಲಿ ಘಟಿಕಾ ಎನ್ನುತ್ತಾರೆ. ಒಂದು ನಿಮಿಷ ಎಂದರೆ ಕಣ್ಣು ಮುಚ್ಚಿ ರೆಪ್ಪೆ ಬಡಿದು ಮತ್ತೆ ತೆರೆಯಲು ತಗಲುವ ಕಾಲ!
ಆಯುರ್ವೇದದಲ್ಲಿ ‘ಚಿಟಿಕೆ’ ಎನ್ನುವ ಅಳತೆ ಎರಡು ಬೆರಳುಗಳ ಅಂದರೆ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಹಿಡಿಸುವಷ್ಟು ಭಸ್ಮ, ಚೂರ್ಣ ಇತ್ಯಾದಿ. ‘ಸುತ್ತು’ ಎಂದರೆ ಬೇರು ಅಥವಾ ಔಷಧಿಯ ಉಂಡೆಯನ್ನು ತೇಯುವ ಕಲ್ಲಿನ ಮೇಲೆ ವೃತ್ತಾಕಾರದಲ್ಲಿ ತೇಯ್ದು ಬಂದದ್ದನ್ನು ಔಷಧಿಯಾಗಿ ಉಪಯೋಗಿಸುವುದು. ಇದು ಎಷ್ಟು ಸುತ್ತು ಎಂದು ವೈದ್ಯರು ನಿರ್ಧರಿಸುತ್ತಾರೆ.
ಇದೇ ರೀತಿ ಇನ್ನೂ ಹತ್ತು ಹಲವಾರು ರೀತಿಯ ಅಳತೆಯ ಮಾಪನಗಳು ಉಪಯೋಗದಲ್ಲಿದ್ದವು.. ಇಲ್ಲಿ ಎಲ್ಲವನ್ನೂ ವಿವರಿಸಲಾಗಿಲ್ಲ. ಇವು ಒಂದು ಸ್ಥಳದಿಂದ ಇನ್ನೊಂದಕ್ಕೆ ವ್ಯತ್ಯಾಸವೂ ಆಗುತ್ತದೆ. ಇಂತಹ ಶಬ್ದ ಭಂಡಾರ ಮರೆಯಾಗುತ್ತಿದೆ. ಅಂತೆಯೇ ನಮ್ಮ ಭಾಷೆ ಮತ್ತು ಆಚಾರ, ಕುಶಲತೆಯೂ ಕಣ್ಮರೆಯಾಗುತ್ತಿದೆ ಎನ್ನುವುದೇ ಖೇದದ ವಿಷಯ.
ಬ್ರಿಟಿಷರು ಬಂದು ಅವರ ಅಳತೆ ಮಾಪನಗಳನ್ನು ನಮ್ಮ ಮೇಲೆ ಹೇರಿದ್ದರು. ಪೌಂಡ್, ಮೈಲಿ, ಫರ್ಲಾಂಗು… ಹೀಗೆ. ಈಗ ನಾವು ಮೆಟ್ರಿಕ್ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಇದು ಲೆಕ್ಕಾಚಾರಕ್ಕೆ ಮತ್ತು ವ್ಯವಹಾರಕ್ಕೆ ಸುಲಭ ಎಂದು ಮತ್ತು ಅನೇಕ ದೇಶಗಳಲ್ಲಿ ಇದನ್ನೇ ಉಪಯೋಗಿಸುತ್ತಾರೆ. ಆದರೆ ಇಂದಿಗೂ ಬ್ರಿಟನ್ ಮತ್ತು ಅಮೆರಿಕದಲ್ಲಿ ಮೈಲು ಫರ್ಲಾಂಗು ಉಪಯೋಗದಲ್ಲಿದೆ.
ಇಷ್ಟೆಲ್ಲಾ ಬರೆಯಲು ನನಗೆ ಸ್ಫೂರ್ತಿ ನೀಡಿದ್ದು ಎರಡು ವಿಷಯಗಳು. ಹಿರಿಯ ಲೇಖಕಿ ಶ್ರೀಮತಿ ಕೆರೋಡಿ ಲೋಲಾಕ್ಷಿಯವರೊಡನೆ ಧಾನ್ಯಗಳನ್ನು ಅಳೆಯುವ ಬಗ್ಗೆ ಒಂದು ತಿಂಗಳ ಹಿಂದೆ ದೂರವಾಣಿಯಲ್ಲಿ ಮಾತನಾಡಿದ್ದು, ಎರಡನೆಯದು ದಿನಾಂಕ : 30-05-2024 ರಂದು ವಿಶ್ವವಾಣಿ ಪತ್ರಿಕೆಯ ಸಂಪಾದಕರ ಸದಸ್ಯ ಶೋಧನೆಯಲ್ಲಿ ವಿಶ್ವೇಶ್ವರ ಭಟ್ಟರ “ಎಂಟು ಬಿಲ್ಲಿನ ದೂರ ಅಂದ್ರೆ” ಎನ್ನುವ ಲೇಖನ. ಇಬ್ಬರಿಗೂ ಅನೇಕ ಧನ್ಯವಾದಗಳು.
–ಡಾ. ಎಸ್. ಸುಧಾ, ಮೈಸೂರು
ಅಳತೆಗಳ ನಡುವೆ ಓಡಾಡುತ್ತಾ..ಅನೇಕ ಸಂಗತಿಗಳನ್ನು ತಿಳಿಸಿದ ನಿಮಗೆ ವಂದನೆಗಳು ಸುಧಾ ಮೇಡಂ
ಧನ್ಯವಾದ ಗಳು
ನಿನ್ನ ಅಳತೆಗಳ ಮಾಹಿತಿ ಅದ್ಭುತ ಸುಧಾ.ಹಳೆಯದೆಲ್ಲಾ ನೆನಪಿಗೆ ತಂದುಕೊಟ್ಟೆ.ಖುಷಿಯಾಯ್ತು ಪುಟ್ಟಾ
ವಂದನೆ ಗಳು ಮೇಡಂ.
ಬಹಳ ಸುಂದರ ಬರಹ. ಇಲ್ಲಿರುವ ಹಲವು ವಿಚಾರಗಳು ಇಂದಿನ ಪೀಳಿಗೆಗೆ ಖಂಡಿತ ಅಪರಿಚಿತ.
ಧನ್ಯವಾದ ಗಳು.
ವಿವಿಧ ಅಳತೆಗಳ ಆಳ, ಅಗಲ, ಎತ್ತರಗಳನ್ನು ತಿಳಿಸುತ್ತಾ, ಅಳತೆಗೆ ಸಿಗಲಾರದಷ್ಟು ವಿಷಯಗಳನ್ನು ಹಂಚಿಕೊಂಡಿರುವಿರಿ….ಧನ್ಯವಾದಗಳು ಮೇಡಂ.
ಧನ್ಯವಾದ ಗಳ
ಳು
ಅಳತೆಯನು ಜನರೊಳಗೆ ಅಳೆದಿಹಿರಿ ಸುರಿದಿಹಿರಿ
ಅಳವಿನಲಿ ವಿವರಿಸುವ ಸಾಹಸದ ಕಾರ್ಯ
ಅಳೆದಳೆದು ನೀಡಿರುವ ತಿಳಿವಿದುವ ತಿಳಿಸಿರುವ
ಕಳೆದು ಹೋಗುವ ಮುನ್ನ – ಮಾಯಗಾರ
ಚೆನ್ನಾಗಿ ಅಳೆದಿದ್ದೀರಿ. ಧನ್ಯವಾದ