‘ಸಂಗೀತ’….’ಯೋಗ’
21.06.2024 ರಂದು “ವಿಶ್ವ ಸಂಗೀತ ದಿನ” ಹಾಗೂ “ವಿಶ್ವ ಯೋಗ ದಿನ”– ಎರಡು ದಿನ ಒಂದೇ ದಿನ ಬಂದಿರುವುದು ನಮ್ಮ ಸುಯೋಗ ಎಂದೇ ಭಾವಿಸಬೇಕು. ಇಂದಿನ ಯಾಂತ್ರಿಕ ಪ್ರಪಂಚದಲ್ಲಿ ದಿನನಿತ್ಯದ ಜಂಜಾಟದಲ್ಲಿ ಸದಾ ಏನಾದರೊಂದು ಒತ್ತಡದಲ್ಲಿ ಸಿಲುಕಿರುವ ನಾವುಗಳು ಅದರಿಂದ ಹೊರಬರಬೇಕಾದರೆ ಮುಖ್ಯವಾಗಿ ಸಂಗೀತ ಮತ್ತು ಯೋಗವನ್ನು ಮೈಗೂಡಿಸಿಕೊಂಡರೆ ಮಾತ್ರ ಸಾಧ್ಯ!.
”ಯೋಗದಿನ” ಮತ್ತು “ಸಂಗೀತ” ಕ್ಕೆ ಮನಸೋತವರು ಲೆಕ್ಕವಿಲ್ಲದಷ್ಟು ಮಂದಿ. ಅದರಿಂದ ಹಾಗುವ ಪ್ರಯೋಜನದ ಸವಲತ್ತುಗಳನ್ನು ಪಡೆಯಲು ಅನೇಕರು ತಮ್ಮ ದಿನನಿತ್ಯದ ಕಾರ್ಯಕ್ರಮ ಪಟ್ಟಿಯಲ್ಲಿ ಇವೆರಡಕ್ಕೆ ಪ್ರಧಾನ ಆದ್ಯತೆ ಕೊಡುತ್ತಿದ್ದಾರೆ. ಮೊದಲು ನಾವು ಆರೋಗ್ಯವಾಗಿದ್ದರೆ ತಾನೆ ನಾವು ಏನೆಲ್ಲಾ ಸಾಧನೆ ಮಾಡಬಹುದು. ತಜ್ಞರು ಕೂಡ ಯೋಗ ಮತ್ತು ಸಂಗೀತ ಆರೋಗ್ಯ ಸುಧಾರಿಸಲು ಅತ್ಯುತ್ತಮ ಚಿಕಿತ್ಸೆ ಎಂದು ತಿಳಿಸಿರುವುದರಿಂದ ಕೆಲವೊಂದು ನಿಯಮ ಗಳೊಂದಿಗೆ ಏಕಾಗ್ರತೆಯಿಂದ ನಾವು ಕಲಿತುಕೊಂಡಿದ್ದೆ ಆದರೆ ಅನೇಕ ರೋಗಗಳಿಂದ ನಾವು ಹೊರಬರಬಹುದು. ನಮ್ಮ ಮನಸ್ಸು ಪ್ರಫುಲ್ಲಗೊಂಡು ಮತ್ತಷ್ಟು ಕೆಲಸಗಳನ್ನು ಸಾಧಿಸಲು ಅವಕಾಶ ಕಲ್ಪಿಸಲು ಒಂದು ವೇದಿಕೆ ಆಗಬಲ್ಲದು. ಯೋಗ ಮತ್ತು ಸಂಗೀತದ ಬಗ್ಗೆ ಇವತ್ತು ಇವೆರಡರ ದಿನಾಚರಣೆ ಇರುವುದರಿಂದ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ ಜೊತೆಗೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.
ಸಂಗೀತ*:- ಈ “ಸಂಗೀತ”- ಎಂಬ ಮೂರಕ್ಷರ ಕೇಳಿದೊಡನೆ ಮೈ-ಮನಗಳು ರೋಮಾಂಚನಗೊಳ್ಳುತ್ತವೆ!. ಸಂಗೀತದ ಸ್ಪರ್ಶಕ್ಕೆ ಮನಸೋಲದವರೇ ಇಲ್ಲ. ಸಂಗೀತ ಪ್ರಪಂಚದಲ್ಲಿ ಎಲ್ಲವನ್ನೂ ಕಲಿಸಿದೆ. ಎಲ್ಲರನ್ನೂ ಬೆಳೆಸಿದೆ. ಒಬ್ಬ ಗಾಯಕ ತನ್ನ ಸಂಗೀತ ಸುಧೆಯ ಮೂಲಕ ಲಕ್ಷಾಂತರ ಮಂದಿಗಳ ಹೃದಯಕ್ಕೆ ನೇರವಾಗಿ ತಲುಪುವ ಏಕಮಾತ್ರ ಸಾಧನವಾಗಿದೆ. ಸಂಗೀತಕ್ಕೆ ಆ ರೀತಿಯ ಮಾಂತ್ರಿಕ ಶಕ್ತಿ ಇದೆ. ಒಂದುರೀತಿಯಲ್ಲಿ ಸೆಳೆತ. ಸಂಗೀತವನ್ನು ನಾವು ಕೇಳಿದರೆ ನಮ್ಮ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಆದರೆ ಸಂಗೀತವನ್ನೇ ನಾವು ಅಧ್ಯಯನದ ಮೂಲಕ ಹಲವು ಗುರುಗಳ ಮೂಲಕ ಕಲಿತುಕೊಂಡರೆ ಅದರಿಂದ ಸಿಗುವ ಸ್ವಾದ ವರ್ಣಿಸಲಸದಳ ಅನುಭವ ನೀಡುತ್ತದೆ.
ಕೆಲವರು ಕೇವಲ ಚಿತ್ರಗೀತೆಗಳನ್ನು, ಭಕ್ತಿಗೀತೆಗಳನ್ನು, ಭಾವಗೀತೆಗಳನ್ನು ಕೇಳಿ ಸಂಗೀತಕ್ಕೆ ಮನಸೋಲುತ್ತಾರೆ. ಇದರ ಜೊತೆಗೆ ಮತ್ತು ಕೆಲವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಹೀಗೆ ಸಂಗೀತದ ನಾದದಲ್ಲಿ ತಮ್ಮನ್ನು ತಾವು ಕೇಳಲು ಮನ ಪೂರ್ವಕವಾಗಿ ಅವಲಂಬಿತರಾಗಿದ್ದಾರೆ. ಸಂಗೀತ ಒಂದು ಸಮುದ್ರದ ರೀತಿ. ಸಂಗೀತವು ಇಂದು ಒಂದು ಶಿಕ್ಷಣವಾಗಿದೆ. ಅನೇಕ ವಿಶ್ವವಿದ್ಯಾಲಯಗಳು ಜನಸಾಮಾನ್ಯರ ಸಂಗೀತ ಕಲಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿವೆ. ಜೊತೆಗೆ ಸಂಗೀತವು ಅಂತರ್ಮುಖಿಯಾಗಿ ಲಯಬದ್ಧವಾಗಿ ಶಿಕ್ಷಣದ ಮೂಲಕ ಕಲಿಯಬಹುದು. ಸಂಗೀತ ಚಿಕಿತ್ಸೆ ಅದು ಒಂದು ಯೋಗವು ಆಗಿದೆ!. ವೈಜ್ಞಾನಿಕ ಹಿನ್ನೆಲೆಯಲ್ಲಿ ಸಂಗೀತ ಇಂದು ವಿಶೇಷ ಪ್ರಾಧಾನ್ಯ ಪಡೆದಿದೆ. ಸಂಗೀತದಲ್ಲಿ ಉಸಿರಾಟದಿಂದ, ಉಪಕರಣಗಳಿಂದ ಬರುವಂತಹ ಸಂಗೀತವನ್ನು ಕೇಳಬಹುದು, ಗಮನಿಸಬಹುದು.
ಕವಿಗಳ ಕವಿತೆಗಳು ಸುಗಮ ಸಂಗೀತದ ಮೂಲಕ ಮತ್ತಷ್ಟು ಜನರನ್ನು ತಲುಪಿದವು. ಸಂಗೀತ ಕಲಿತವರು ಮತ್ತಷ್ಟು ಶಿಷ್ಯರನ್ನು ಗುರುತಿಸಿ ಅವರಿಗೆ ಸಂಗೀತ ಶಿಕ್ಷಣ ನೀಡಿದರು. ಮೈಸೂರಿನಲ್ಲಿ ಸಂಗೀತ ಕಳಸ ದಂತಿರುವ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇದೆ. ಇಲ್ಲಿ ಎಲ್ಲರೂ ಕೂಡ ಸಂಗೀತವನ್ನು ತಮ್ಮ ಪ್ರತಿಭೆಗೆ ತಕ್ಕಂತೆ ಕಲಿಯಬಹುದು.ಇನ್ನು ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಪ್ರತಿ ಸರ್ಕಾರಿ ಶಾಲೆಗಳಲ್ಲೂ ಕೂಡ ಸಂಗೀತ ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ. ಇದು ಶಿಕ್ಷಣದ ಜೊತೆ ಜೊತೆಗೆ ಸಂಗೀತವನ್ನು ಕಲಿಸುವ ಪ್ರಯತ್ನ ಅತ್ಯಂತ ಸಫಲವಾಗಿದೆ. ಮಕ್ಕಳಿಗೆ ನಾವು ಬಾಲ್ಯದಿಂದಲೇ ಸಂಗೀತವನ್ನು ಕಲಿಸಿದರೆ ಅವರು ಶಿಕ್ಷಣದ ಜೊತೆಯಲ್ಲಿ ಓದು ಮತ್ತು ಸಂಗೀತವನ್ನು ಅಂತರ್ಮುಖಿಯಾಗಿ ಕಲಿಯಲು ಅವಕಾಶ ಸಿಗುತ್ತದೆ. ಸುಗಮ ಸಂಗೀತ ಈಗ ಜನಸಾಮಾನ್ಯರಿಂದ ಹಿಡಿದು ಪ್ರಸಿದ್ಧ ರವರೆಗೂ ಕೂಡ ಆಕರ್ಷಿಸುತ್ತಿದೆ. ಸಂಗೀತಕ್ಕೆ ಇವರೇ ಕೇಳಬೇಕು ಅವರೇ ಹಾಡಬೇಕು ಎನ್ನುವ ಮಾತಿನಿಂದ ಈಗ ಹೊರಬಂದು ಸಾಮಾನ್ಯ ಗ್ರಾಮಾಂತರ ಮಕ್ಕಳು ಕೂಡ ಸರಳ ರೀತಿಯಲ್ಲಿ ಸಂಗೀತದ ಸಾಗರಕ್ಕೆ ಧುಮುಕಿದ್ದಾರೆ.
ಅದರಲ್ಲೂ ಆಕಾಶವಾಣಿಗಳು ಸಂಗೀತದ ಕಾರ್ಯಕ್ರಮಗಳನ್ನು ಪ್ರಾರಂಭದ ಕಾಲದಿಂದಲೂ ಸಹ ಹೆಚ್ಚೆಚ್ಚು ಪ್ರಸಾರ ಮಾಡುತ್ತಾ ಬಂದಿವೆ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಸಂಗೀತ ಬೇರೆಲ್ಲೂ ಕೂಡ ಇಷ್ಟು ಪರಿಣಾಮಕಾರಿ ಬೀರುವುದಿಲ್ಲ. ಅನೇಕ ಪ್ರಸಿದ್ಧ ಸಂಗೀತ ಕಾರ್ಯಕ್ರಮಗಳ ಕಚೇರಿ ಈಗಲೂ ಕೂಡ ಪ್ರತಿದಿನ ಪ್ರಸಾರವಾಗುತ್ತಲೇ ಇದೆ. ರಾಜ್ಯದ 13 ಆಕಾಶವಾಣಿ ನಿಲಯಗಳಿಂದ ವಿವಿಧ ಭಾರತಿ ನಿಲಯಗಳಿಂದ ಅದರಲ್ಲೂ ವಿಶೇಷ ಎಂದರೆ ಬೆಂಗಳೂರು ಆಕಾಶವಾಣಿಯು ಸಂಗೀತಕ್ಕಾಗಿಯೇ ಅಮೃತವರ್ಷಿಣಿ ಎಂಬ ವಿಶೇಷ ಚಾನಲನ್ನು ಸೃಷ್ಟಿಸಿದೆ. ಜೊತೆಗೆ ಆಕಾಶವಾಣಿಯಲ್ಲಿ ಪ್ರಸಿದ್ಧರ ಸಂಗೀತಗಾರರ ಕಚೇರಿಯಿಂದ ಹಿಡಿದು ಪ್ರಸ್ತುತ ಯುವಪ್ರತಿಭೆಗಳ ಸಂಗೀತ ಕಾರ್ಯಕ್ರಮಗಳ ಜೊತೆಗೆ ಒಂದು ರೀತಿಯಲ್ಲಿ ಜುಗಲ್ಬಂದಿ ಆಗಿ ಸಂಗೀತ ಕಾರ್ಯಕ್ರಮಗಳು ದಿನಂಪ್ರತಿ ಪ್ರಸಾರವಾಗುತ್ತಿವೆ.
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಕಾಶವಾಣಿಗಳು ಪ್ರಮುಖವಾಗಿ ಪ್ರಸಾರ ಮಾಡುತ್ತಿವೆ. ಇದರಿಂದಾಗಿ ಅನೇಕ ಸಂಗೀತ ಸಂಗೀತ ಮನಸೂರೆಗೊಂಡಿದೆ. ಆಕಾಶವಾಣಿಯಲ್ಲಿ ಸಂಗೀತವನ್ನು ಕೇಳುವುದೇ ಒಂದು ರೀತಿಯಲ್ಲಿ ವಿಶಿಷ್ಟ ಅನುಭವ ನೀಡುತ್ತದೆ. ಇದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಕೂಡ ಸಂಗೀತ ಕಛೇರಿಗಳು ನಡೆದೇ ನಡೆಯುತ್ತವೆ. ಇನ್ನೂ ದೂರದರ್ಶನಗಳಲ್ಲೂ ಕೂಡ ಇದೇ ರೀತಿಯ ಸದಾಭಿರುಚಿಯ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅಲ್ಲದೇ ಖಾಸಗಿ ವಾಹಿನಿಗಳು ಸಹ ಎದೆ ತುಂಬಿ ಹಾಡುವೆನು, ಸರಿಗಮಪ, ಗಾನಕೋಗಿಲೆ ಮುಂತಾದ ಕಾರ್ಯಕ್ರಮಗಳ ಮೂಲಕ ಯುವ ಸಂಗೀತ ಪ್ರತಿಭೆಗಳನ್ನು ಹೊರತರುತ್ತಿದೆ. ಅದರಲ್ಲೂ ಎಸ್ ಪಿ ಬಾಲಸುಬ್ರಮಣ್ಯಂ ರವರು ಈ ಟಿವಿ ಮೂಲಕ ಪ್ರಸಾರ ಮಾಡಿದ “ಎದೆತುಂಬಿ ಹಾಡುವೆನು”- ಕಾರ್ಯಕ್ರಮ ನಾಡಿನಾದ್ಯಂತ ಹೊಸ ಸಂಚಲನ ಮೂಡಿಸಿತು. ಈಗ ಕರೋಕೆ ಮೂಲಕ ಹಳೆಯ ಹಾಗೂ ಹೊಸ ಚಿತ್ರಗೀತೆಗಳನ್ನು ಹಾಡ ಬಹುದು ಇದರಿಂದಾಗಿ ಸಂಗೀತ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮನೆ- ಮನ ತಲುಪಿದೆ.
ಯೋಗ:-ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಒಂದು ಮೆರಗು ಬಂದಿದೆ. ಏಕೆಂದರೆ ಈ ರೀತಿ ಘೋಷಣೆ ಮಾಡಿ ಹತ್ತು ವರ್ಷ ಆಗಿದೆ!. ಇನ್ನು ಯೋಗದ ಬಗ್ಗೆ ಹೇಳುವುದಾದರೆ ಮೈಸೂರು ಮಹಾರಾಜರ ಕಾಲದಿಂದಲೂ ಸಹ ಯೋಗಕ್ಕೆ ತನ್ನದೇ ಆದ ಪ್ರಾಧಾನ್ಯತೆ ದೊರಕಿದೆ. ಜಗತ್ತಿನ ಯೋಗ ರಾಜಧಾನಿ ಮೈಸೂರು ಎನ್ನುವಷ್ಟರಮಟ್ಟಿಗೆ ಮೈಸೂರಿನಲ್ಲಿ ಹಲವು ಯೋಗಾಚಾರ್ಯರು ರೂಪುಗೊಳ್ಳಲು ಯೋಗ ತರಗತಿಗಳು ಆರಂಭವಾಗಲು ಪ್ರಮುಖ ಕಾರಣವಾಗಿದೆ. ತಿರುಮಲ ಕೃಷ್ಣ ಚಾರ್ಯರು ನಂತರದ ದಿನಗಳಲ್ಲಿ ಮೈಸೂರಿನ ಆಸ್ಥಾನ ವಿದ್ವಾನ್ ಆಗಿದ್ದ ಮೈಸೂರಿನಲ್ಲಿ ಯೋಗ ವಿಶ್ವವಿದ್ಯಾಲಯ ಆರಂಭಿಸಿದ್ದು ರಾಜ ಪರಿವಾರದವರಿಗೆ ಯೋಗ ಚಿಕಿತ್ಸೆ ನೀಡಿದ್ದು ಎಲ್ಲವೂ ಒಂದು ಯೋಗಾಯೋಗ ಎನ್ನಬಹುದಾಗಿದೆ. ಯೋಗ ಜನಸಾಮಾನ್ಯರಿಗೆ, ಸೆಲೆಬ್ರಿಟಿಗಳಿಗೆ, ಉದ್ಯೋಗಗಳಿಗೆ ಯೋಗಾಭ್ಯಾಸ ಎಂದು ಪರಿಚಿತ ಗೊಂಡಿದೆ. ಯೋಗವನ್ನು ಬೆಳಕಿಗೆ ತಂದವರು ಪ್ರಮುಖರು ಎಂದರೆ ತಿರುಮಲಾಚಾರ್ಯ ಎಂದರೆ ಅತಿಶಯೋಕ್ತಿಯಲ್ಲ. ಈ ರೀತಿ ಯೋಗಕ್ಕೂ ಮೈಸೂರಿಗೂ ಬಹಳ ಹಿಂದಿನ ನಂಟು ಇದೆ.
ದಿನನಿತ್ಯ ನಮ್ಮ ಜೀವನದಲ್ಲಿ ಯೋಗ ಮಾಡುವುದನ್ನು ನಾವು ಅಳವಡಿಸಿಕೊಂಡರೆ ನಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಕರೋನಾ ದಂತಹ ಇಂತಹ ಸಂದರ್ಭಗಳಲ್ಲಿ ನಾವು ಮನೆಯಲ್ಲಿ ಕುಳಿತು ಎಚ್ಚರಿಕೆಯಿಂದ ಯೋಗಾಭ್ಯಾಸವನ್ನು ಕುಟುಂಬ ಸಮೇತ ಅಭ್ಯಸಿಸಬಹುದು. ಜೊತೆಗೆ ಅನೇಕ ಸಂಪರ್ಕ ಮಾಧ್ಯಮಗಳು ಕೂಡ ನೆರವನ್ನು ಪಡೆಯಬಹುದು ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾವು ಯೋಗ ಮಾಡಬೇಕಾದರೆ ಗುರುಗಳ ಮುಖಾಂತರ ಮಾಡಬೇಕು ಅವರ ಮಾರ್ಗದರ್ಶನದಲ್ಲಿ ಮಾಡುವುದನ್ನು ಅಳವಡಿಸಿಕೊಂಡರೆ ಆರೋಗ್ಯದ ದೃಷ್ಟಿಯಿಂದ ತಪ್ಪು ಎನಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಉಚಿತ ಸಲಹೆಗಳಿಗೆ ಕಿವಿ ಕೊಡಬಾರದು. ಯೋಗ, ಧ್ಯಾನ, ಸಂಗೀತದ ಮೂಲಕ ಮೈಸೂರಿನಲ್ಲಿ ಮನಸೂರೆಗೊಂ ಡಿರುವ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಶ್ರೀಗಳು ಕೂಡ ಇಲ್ಲಿ ನೆನಪಿಗೆ ಬರುತ್ತದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರತೀಯ ಸಂಸ್ಕೃತಿ ಕೇಂದ್ರ ಮೈದಾಳಿದೆ. ಭಾರತಿ ಯೋಗ ಧಾಮವು ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸುಮಾರು 25 ಎಕರೆ ವಿಶಾಲ ಪ್ರದೇಶದಲ್ಲಿ ವಿಜಯನಗರ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.
ಜೊತೆಗೆ ಇಲ್ಲಿ ಮುಖ್ಯವಾಗಿ ನಾವು “ಪತಂಜಲಿ ಯೋಗದ” ಬಗ್ಗೆ ಹೇಳಲೇಬೇಕು ಪತಂಜಲಿ ಯೋಗ ಶಿಕ್ಷಣ ನಾಡಿನಾದ್ಯಂತ, ವಿಶ್ವಾದ್ಯಂತ ಉಚಿತವಾಗಿ ನಡೆಯುತ್ತಿವೆ. ತಂತ್ರಜ್ಞಾನ ಬೆಳೆದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯೋಗ ಮತ್ತಷ್ಟು ಹೆಚ್ಚಿನ ಪ್ರಚಾರದೊಂದಿಗೆ ವಿಶ್ವದ ಮೂಲೆ ಮೂಲೆಗೂ ತಲುಪಿದೆ. ಅದರಲ್ಲೂ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಯೋಗದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿ ಎಲ್ಲೆಡೆ ತಲುಪಲು ನೆರವಾದರು. ನಮ್ಮ ಕರುನಾಡು ಕೂಡ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಯೋಗದಲ್ಲಿ ಬರುವ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಹಂತಗಳಲ್ಲಿ ನಾವು ನಿಯಮಬದ್ಧವಾಗಿ ಸಾಧಿಸುತ್ತಾ ಹೋಗಬಹುದು.
10 ನೇ ಅಂತರಾಷ್ಟ್ರೀಯ ಯೋಗ ದಿನ ಇಂದು ಮನೆ-ಮನಗಳಿಗೆ ತಲುಪುತ್ತಿದೆ. ವಿವಿಧ ಸಂಘ ಸಂಸ್ಥೆಗಳು ಮೂಲಕವೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಂಘಸಂಸ್ಥೆಗಳು ತಮ್ಮ ಸಂಸ್ಥೆಗಳ ಮೂಲಕ ಸಾಂಕೇತಿಕವಾಗಿ ಅರಿವು ಮೂಡಿಸಿದವು. ದೇಹಕ್ಕೆ ಯೋಗ ಸಂಜೀವಿನಿಯಂತೆ ಯೋಗದ ಬಗ್ಗೆ ವ್ಯಾಖ್ಯಾನವನ್ನು ಅನೇಕ ವಿದ್ವಾಂಸರು ನೀಡಿದ್ದಾರೆ. ಕರುನಾಡ ಕರಿನೆರಳಿನಲ್ಲಿ ಯೋಗ ತನ್ನತನ ಕಳೆದುಕೊಳ್ಳದೇ ಮತ್ತೊಂದು ರೀತಿಯಲ್ಲಿ ಮನೆ-ಮನ ತಲುಪುತ್ತಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸ್ವಾಮಿ ವಿವೇಕಾನಂದರ ಯೋಗದ ಭಂಗಿಯಲ್ಲಿರುವ ಚಿತ್ರ ಹಾಗೂ ಕಣ್ಮುಚ್ಚಿ ಧ್ಯಾನ ಮಾಡುವ ಸ್ಥಿತಿ ಚಿತ್ರಗಳು ಯೋಗ ಉನ್ನತಮಟ್ಟಕ್ಕೆ ಹೋಗಲು ಸಹಕಾರಿಯಾಗಿದೆ. ಪತಂಜಲಿ ಯೋಗ ಶಿಕ್ಷಣ ಇಂದು ಪ್ರತಿಯೊಂದು ಬಡಾವಣೆಗಳಲ್ಲೂ ಉಚಿತವಾಗಿ ಎಲ್ಲರನ್ನು ತಲುಪುತ್ತಿದೆ. ಯೋಗ ಮಕ್ಕಳಿಂದ ಹಿಡಿದು ಮಹಿಳೆ, ವಯಸ್ಸಾದವರಿಗೆ ಹಲವು ಸಮಸ್ಯೆಗಳ ಪರಿಹಾರ ಕೇಂದ್ರವಾಗಿದೆ. ಯೋಗದಲ್ಲಿ ನೂರಾರು ಆಸನಗಳು ಇವೆ ಒಂದೊಂದು ಭಂಗಿಗಳು ಕೂಡ ನಮ್ಮ ಆರೋಗ್ಯಕ್ಕೆ ಪೂರಕವಾಗಿವೆ.
ಒಟ್ಟಿನಲ್ಲಿ ಯೋಗ ಮತ್ತು ಸಂಗೀತ ಎರಡೂ ಕೂಡ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳೆರಡನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ನಾವು ಹಲವು ರೋಗಗಳಿಂದ ದೂರವಿರಬಹುದು. ಎಲ್ಲೆಡೆ ಪತಂಜಲಿ ಯೋಗ ಸಮಿತಿಯವರು ಉಚಿತವಾಗಿ ಯೋಗ ಹೇಳಿಕೊಡುತ್ತಾರೆ ಬನ್ನಿ ಇವತ್ತಿನಿಂದಾದರೂ ದಿನಾಲು ನಿಯಮಿತ ಸಮಯದಲ್ಲಿ ಯೋಗಾಭ್ಯಾಸವನ್ನು ಕೈಗೊಂಡು ಮಾನಸಿಕವಾಗಿ ಸದೃಢ ರಾಗೋಣ. ಜೊತೆಗೆ ಸಂಗೀತವನ್ನು ಕೇಳುತ್ತಾ ಅದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳೋಣ.
ಈ ನಿಟ್ಟಿನಲ್ಲಿ ಯೋಗವನ್ನು ಎಲ್ಲೆಡೆ ಪಸರಿಸುತ್ತಿರುವ ಗುರುಗಳಿಗೆ ಸೇವೆ ಮಾಡುತ್ತಿರುವ ಎಲ್ಲಾ ಅಕ್ಕ ಅಣ್ಣಂದಿರಿಗೆ ಹಲವು ಸಂಘ-ಸಂಸ್ಥೆಗಳಿಗೆ, ಸಂಪರ್ಕ ಮಾಧ್ಯಮಗಳಿಗೆ ಅಭಿನಂದನೆಗಳು. ಜೊತೆಗೆ ಮುಖ್ಯವಾಗಿ ನಾವು ನಮ್ಮ ಮಕ್ಕಳಿಗೆ ಯೋಗ ಮತ್ತು ಸಂಗೀತವನ್ನು ಬಾಲ್ಯದಿಂದಲೇ ಕಲಿಯಲು ನೆರವಾಗೋಣ, ಸಹಕರಿಸೋಣ.
ಸರ್ವೇ ಜನ ಸುಖಿನೋ ಭವಂತು.
ಎಲ್ಲರಿಗೂ ಒಳಿತಾಗಲಿ.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಚೆನ್ನಾಗಿದೆ ಸರ್, ಧನ್ಯವಾದಗಳು
ಚಂದದ ಲೇಖನ ಸಾರ್
ಉತ್ತಮ ಲೇಖನ
ಸೊಗಸಾದ ಲೇಖನ
ಉತ್ತಮ ಮಾಹಿತಿಗಳನ್ನು ಒಳಗೊಂಡ ಸಕಾಲಿಕ ಲೇಖನ.
ಸಂಗೀತ ಮತ್ತು ಯೀಗ ಎರಡನ್ನೂ ಕುರಿತಾದ ಉತ್ತಮ ಮಾಹಿತಿಯನ್ನು ನೀಡುವ ಲೇಖನ.
ನನ್ನ ಲೇಖನ ಮೆಚ್ಚಿದ ಪ್ರತಿಯೊಬ್ಬರಿಗೂ ಕೂಡ ವಿಶೇಷ ಧನ್ಯವಾದಗಳು.