ಒಗ್ಗರಣೆಯೆಂಬ ಓಂ ಪ್ರಥಮ!

Share Button

ಅಡುಗೆವಿದ್ಯೆಯ ಓಂ ಪ್ರಥಮಗಳಲ್ಲಿ ಮೊದಲನೆಯದು ಹಾಲು ಕಾಯಿಸುವುದು. ಉಕ್ಕದಂತೆ, ಚೆಲ್ಲದಂತೆ ನೋಡಿಕೊಂಡರೆ ಸಾಕು. ಈ ವಿದ್ಯೆ ಬಂದಂತೆಯೇ! ಒಂದ್ ಹಾಲ್ ಕಾಯ್ಸೋಕೂ ಬರಲ್ಲ ನಮ್ಮನೆ ಪ್ರಾಣಿಗೆ!’ ಅಂತ ಮನೆಯ ಹೆಂಗಸರು ಹೇಳಿದರೆಂದರೆ ಅದು ಗಂಡಸರಿಗೆ ಮಾಡುವ ಆತ್ಯಂತಿಕ ಅವಮಾನ; ಸಂಸಾರದ ಗುಟ್ಟು ರಟ್ಟಾದ ಮೂದಲಿಕೆ. ಇದನ್ನು ಅವಮಾನವೆಂದುಕೊಳ್ಳದೇ ಅಭಿಮಾನವೆಂದುಕೊಂಡು ಠೀವಿಯಿಂದ ನಾನ್ಯಾಕೆ ಅಡುಗೆಮನೆಯ ಕೆಲಸ ಮಾಡಲಿ; ಅದೇನಿದ್ದರೂ ಹೆಂಗಸರ ವ್ಯವಹಾರ ಅಂತ ಅಂದುಕೊಳ್ಳುವ ಗಂಡಸರನ್ನು ನಾನು ಲೆಕ್ಕಕ್ಕಿಟ್ಟಿಲ್ಲ. (ಇಂಥವರೇ ನಮ್ಮ ಸಮ ಸಮಾಜ ನಿರ್ಮಾಣದ ಕನಸಿಗೆ ಕಲ್ಲು ಹಾಕುವವರು!) ಇನ್ನು ಎರಡನೆಯ ಪಾಠವೆಂದರೆ ಅನ್ನಕ್ಕಿಡುವುದು. ಅಕ್ಕಿ ತೊಳೆದು, ಪ್ರಮಾಣಬದ್ಧವಾಗಿ ನೀರನಿಟ್ಟು (ಕುಕ್ಕರಿಗಾದರೆ ಬೇರೆ; ಗಂಜಿ ಬಸಿಯುವುದಾದರೆ ಬೇರೆ) ಅನ್ನ ಮಾಡುವ ವಿದ್ಯೆಯೇ ನಮ್ಮಂಥ ದಾಕ್ಷಿಣಾತ್ಯರಿಗೆ ಮನೆಯ ಎರಡನೆಯ ಪಾಠ. ಮೂರನೆಯ ಪಾಠಗಳಲ್ಲಿ ತಿಳಿಸಾರು ಮಾಡುವುದು, ಉಪ್ಪಿಟ್ಟು ಮಾಡುವುದು, ಚಟ್ನಿ ಮಾಡುವುದು ಇತ್ಯಾದಿ ಸೇರಿಕೊಳ್ಳುತ್ತದೆ. ಆದರೆ ನನ್ನ ಪ್ರಕಾರ ಅಡುಗೆಯ ಓಂ ಪ್ರಥಮಗಳಲ್ಲಿ ಪ್ರಥಮವೆಂದರೆ ಒಗ್ಗರಣೆ ಹಾಕುವುದು! ಮಾತಿನಲ್ಲಲ್ಲ; ಅಡುಗೆಮನೆಯಲ್ಲಿ!! (ಇದಾವುದೂ ಅಲ್ಲ. ಸ್ಟವ್ ಹಚ್ಚಲು ಬರುವುದೇ ಮುಮ್ಮೊದಲ ಪಾಠ! ಎಂದು ನೀವು ಪಿಸುಗುಟ್ಟಿದರೆ ‘ಅಂಥವರೂ ಇದ್ದಾರೆಯೇ?’ ಎಂದು ನಾನು ದಿಗ್ಭ್ರಮಿತನಾಗುತ್ತೇನೆ. ಏಕೆಂದರೆ ಮನಸ್ಸು ಮಾಡಿದರೆ, ಹೆಣ್ಣು ಗಂಡು ಎಂಬ ಯಾವ ಭೇದವಿಲ್ಲದೇ ಯಾವ ಸಾಧನವೂ ಇಲ್ಲದೇ ಬೆಂಕಿ ಹಚ್ಚಲು ಬರುತ್ತದೆಂದೇ ನನ್ನ ತೀವ್ರ ತಿಳಿವಳಿಕೆ. ಹಚ್ಚಿದ ಬೆಂಕಿಯನ್ನಾರಿಸುವುದು ಕಷ್ಟ; ಕಿಡಿ ಹೊತ್ತಿಸುವುದು ಸುಲಭ!)

ನಮ್ಮಜ್ಜಿ, ಅವರ ಬಂಧುಗಳು ಇದ್ದ ನಂಜನಗೂಡು, ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ ಚೋರಗ್ರಹಣತಂತ್ರದ ಕರ್ತೃ ಎಂ ವೆಂಕಟಕೃಷ್ಣಯ್ಯ, ಅವರ ಮಗಳು ತಿರುಮಲಾಂಬ, ಮಡಿ ಹೆಂಗಸರು, ಅವರು ತಿನ್ನದಿದ್ದರೂ ಬಲು ರುಚಿಕರವಾಗಿ ಮಾಡುತಿದ್ದ ಖಾದ್ಯಗಳು ಇವೆಲ್ಲ ನೆನಪುಗಳು ಪ್ರವಾಹದಂತೆ ನುಗ್ಗಿ ಬಂದಂಥ ಹೊತ್ತಿನಲ್ಲಿ ನನ್ನನ್ನು ಬಹುವಾಗಿ ಸೆಳೆದದ್ದು ಈ ಒಗ್ಗರಣೆ. ಆಡುಮಾತಿನಲ್ಲಿ ವಗ್ಗರಣೆ ಎಂತಲೂ (ಒ>ವ) ಗ್ರಾಮ್ಯದಲ್ಲಿ ಒಗ್ರಾಣೆ ಎಂತಲೂ ಕರೆಯುವುದು ರೂಢಿ. ಹಾಗಾಗಿ ಬರೆಹದ ಒಗ್ಗರಣೆ ; ಒಗ್ಗರಣೆ ಕುರಿತೇ!

ಒಗ್ಗರಣೆಯನ್ನು ಕುರಿತು ಬರೆಯಬೇಕೆನಿಸಿದ ಹೊತ್ತಲೇ ಕನ್ನಡದ ಚಲನಚಿತ್ರ ಒಗ್ಗರಣೆ ನೆನಪಾಗುತ್ತಿದೆ. ಪ್ರಕಾಶ್‌ರಾಜ್ ಉರುಫ್ ಪ್ರಕಾಶ್ ರೈ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ತೆರೆ ಕಂಡಿದ್ದ ರೊಮ್ಯಾಂಟಿಕ್ ಹಾಸ್ಯಚಿತ್ರ. ಬದುಕೆಂಬ ಮೇಲೋಗರಕ್ಕೆ ಒಗ್ಗರಣೆ ಬೇಕು. ಇಲ್ಲದಿದ್ದರೆ ಅದು ಸಪ್ಪೆ ಎಂಬ ಸಂದೇಶವನ್ನು ಸಾರುವ ಚಟುವಟಿಕೆಯ ಚಿತ್ರ. ಅದರಲ್ಲೂ ಈ ಮೂವಿಯ ಜನುಮವೇ ಆಹಾ! ರುಚಿ ಸವಿಯಲು……’ ಎಂಬ ಕೈಲಾಶ್ ಕೇರ್ ಹಾಡಂತೂ ರಸಿಕಫುಡ್ಡಿಗಳ ಫೇವರಿಟ್.

ಒಗ್ಗರಣೆ ಕಾಣದ ಅಡುಗೆಮನೆಯಿಲ್ಲ, ಬಾಣಲೆಯಿಲ್ಲ, ಖಾರದ ಖಾದ್ಯವಿಲ್ಲ! ಇದು ಅಡುಗೆಯ ಅಂತಿಮ ಹಂತ. ಎಣ್ಣೆಯಲಿ ಸಾಸುವೆ ಸಿಡಿದ ಘಮಲು ಅಡರಿದ ಜೊತೆಯಲ್ಲೇ ಚುಯ್, ಚೊರ್ ಎಂಬ ಸಶಬ್ದಸಂಗೀತ ಬಂತೆಂದರೆ ಅದರರ್ಥ: ಅಡುಗೆ ತಯಾರು ಎಂಬ ಸೂಚನೆ. ಇದರಿಂದ ಆವರೆಗೆ ಗಮನಕ್ಕೇ ಬಾರದಂತಿದ್ದ ಹಸಿವು ಧಿಗ್ಗನೆದ್ದು, ಬಾಯಲ್ಲಿ ತಂತಾನೇ ನೀರೂರುವುದು; ಅಡುಗೆಮನೆಯ ಕಡೆಗೆ ಮನಸೋಡುವುದು, ಮಾಡುತ್ತಿದ್ದ ಕೆಲಸಗಳೂ ಮಾತಾಡುತಿದ್ದ ಸಂಭಾಷಣೆಗಳೂ ಒಂದರೆಕ್ಷಣ ನಿಂತು ಹೋಗುವುದು, ಮಿದುಳಲ್ಲಿದ್ದ ರಕ್ತವೆಲ್ಲ ಆಯಾಚಿತವಾಗಿ ಜಠರದ ಕಡೆಗೆ ಚಲಿಸುವುದು, ಒಟ್ಟೂ ಜೀರ್ಣಾಂಗವ್ಯವಸ್ಥೆಯೇ ಸಮರೋಪಾದಿಯಲ್ಲಿ ಸಿದ್ಧವಾಗುವುದು! ಅಂದರೆ ಒಗ್ಗರಣೆಗೆ ಇಷ್ಟೆಲ್ಲವನೂ ಬಡಿದೆಬ್ಬಿಸುವ ಶಕ್ತಿಸಾಮರ್ಥ್ಯಗಳಿವೆ. ‘ನಿಂದೊಂದು ವಗ್ಗರಣೆ ಮಾತು’ ಎಂದು ನಿಡುಸುಯ್ಯದೇ ದಯಮಾಡಿ ಇದಕೊಂದು ರಾಜಮರ್ಯಾದೆಯನ್ನು ನೀಡಿ.

ನಮ್ಮ ದಕ್ಷಿಣ ಭಾರತದ ಅಡುಗೆಗಳಲ್ಲಿ ಸಿಹಿಖಾದ್ಯವನ್ನು ಹೊರತುಪಡಿಸಿದಂತೆ ಆಲ್‌ಮೋಸ್ಟ್ ಒಗ್ಗರಣೆಯನ್ನು ತೋರಿಸುವ ಪದಾರ್ಥಗಳೇ ಹೆಚ್ಚು. ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನಗಳ ಮಾತಂತಿರಲಿ, ಚಟ್ನಿ, ಗೊಜ್ಜು, ಪಲ್ಯಗಳಿಗೂ ಒಗ್ಗರಣೆಯೇ ರುಚಿಯನ್ನು ತಂದುಕೊಡುವ ದೇವಲೋಕದ ಸಡಗರ. ಸಾರು, ಹುಳಿ, ಪಳದ್ಯ, ರಾಯ್ತಗಳೂ ಒಗ್ಗರಣೆಯಿಂದಲೇ ಕಣ್ಮನ ಸೆಳೆವ ಸಂಭ್ರಮಿತ. ಆದರೆ ಒಗ್ಗರಣೆಯು ಸೀದು ಹೋಗದಂತೆ ನೋಡಿಕೊಳ್ಳುವುದೇ ದುಸ್ತರ! ಸ್ವಲ್ಪ ಯಾಮಾರಿದರೂ ಕೈ ಕೊಡುತ್ತದೆ. ಎಲ್ಲವೂ ಕರ್ರಗಾಗುತ್ತದೆ. ಬಳಸುವುದೋ? ಅಥವಾ ಬೇರೆಯೇ ಮಾಡುವುದೋ? ಗೊಂದಲವಾಗುತ್ತದೆ. ಅಡುಗೆ ತಯಾರಿಯ ಕೊನೆಯ ಹಂತದಲ್ಲಿ ಒಗ್ಗರಣೆಯ ಕಾರ್ಯಕ್ರಮವನ್ನು ಇಟ್ಟುಕೊಳ್ಳಬೇಕಾಗುವುದರಿಂದ ಪದಾರ್ಥ ನಷ್ಟವಾಗುತ್ತದೆಂಬ ಅಳಲಿಗಿಂತ ಹೆಚ್ಚಾಗಿ ಸಮಯದ ಅಭಾವವೇ ಕಾಡುತ್ತದೆ. ಅಡುಗೆಮನೆಯ ರಸಗಂಧಗಳಿಂದ ನಶೆಯೇರಿದ ಮನೆಮಂದಿಯಂತೂ ತಾವು ಮಾಡುತಿದ್ದ ಎಲ್ಲ ಕೆಲಸವನ್ನು ಪಕ್ಕಕಿಟ್ಟು, ಇನ್ನೇನು ಊಟತಿಂಡಿಗೆ ಸಜ್ಜಾಗಿರುವ ಹೊತ್ತಲೇ ಮಾಡಿದ ಒಗ್ಗರಣೆ ಕೈ ಕೊಟ್ಟರೆ ಹೇಗಾಗಬೇಡ? ಅಳುವುದೊಂದು ಬಾಕಿ. ಹಾಗಂತ ಒಗ್ಗರಣೆರಹಿತ ಅಡುಗೆಯನ್ನೇ ಬಡಿಸೋಣವೆಂದರೆ ಮನಸೊಪ್ಪದು. ಒಗ್ಗರಣೆ ಇಲ್ಲದ ಚಟ್ನಿಯೋ ಗೊಜ್ಜೋ ಪಲ್ಯವೋ ಎಂತು ಶೋಭಿಪುದು? ತಿನ್ನುವವರಿಗಿರಲಿ, ಬಡಿಸುವವರಿಗೇ ಇಷ್ಟವಾಗುವುದಿಲ್ಲ; ಅದೇನು ಬೋಳು ಬೋಳು ಅಡುಗೆ ಎಂದು ವ್ಯಥೆಯಾಗುವುದು.

PC: Internet


ಮಸಾಲೆ ಪದಾರ್ಥಗಳಲ್ಲಿ ಒಂದಾದ ಸಾಸುವೆಯೇ ಒಗ್ಗರಣೆಯ ಕಿಂಗ್‌ಮೇಕರು. ತೀರಾ ದಪ್ಪ ಸಾಸುವೆ ಅಥವಾ ತೀರಾ ಸಣ್ಣ ಸಾಸುವೆಗಿಂತ ಮೀಡಿಯಂ ಗಾತ್ರದ ಸಾಸುವೆಯೇ ಒಗ್ಗರಣೆಗೆ ಲಾಯಕ್ಕು. ಪೂರ್ಣಚಂದ್ರತೇಜಸ್ವಿಯವರ ‘ಪಾಕಕ್ರಾಂತಿ ಮತ್ತು ಇತರ ಕತೆಗಳು’ ಎಂಬ ಪ್ರಬಂಧರೂಪದ ಕಥಾಸಂಕಲನದ ಮೊದಲ ಬರೆವಣಿಗೆಯಲ್ಲೇ ಸಾಸುವೆಯ ಪ್ರಸ್ತಾಪವಿದೆ. ಮಡದಿ ಊರಿಗೆ ಹೋದ ಸಂದರ್ಭದಲ್ಲಿ ತೇಜಸ್ವಿಯವರೇ ಅಡುಗೆ ಮಾಡಿಕೊಳ್ಳುವಂತಾಗುತ್ತದೆ. ಆಗ ಎಂದೋ ಮಾಡಿಟ್ಟಿದ್ದ ತಮ್ಮ ಪುರಾತನ ಸಾರಿನ ವಿಚಾರ ಹೇಳುತ್ತಾ, ಮೊಂಬತ್ತಿ ಬೆಳಕಿನಲ್ಲಿ ಊಟ ಮಾಡುವಾಗ ಕರೆಂಟು ಬಂದಿದ್ದೇ ತಡ, ತಮ್ಮ ತಟ್ಟೆಯಲ್ಲಿದ್ದ ಸಾಸುವೆಗಳಿಗೆ ಕೈ ಕಾಲು ಮೂಡಿ ಚಲಿಸುತ್ತಿರುವುದನ್ನು ಕಂಡು ಗಾಬರಿಯಾಗುವರು. ಅಂದರೆ ಅಲ್ಲಿಯವರೆಗೆ ಎಷ್ಟೋ ಇರುವೆಗಳನ್ನು ಸಾಸುವೆಯೆಂದುಕೊಂಡು ಕಬಳಿಸಿಯೂ ಇದ್ದವರು! ಅಸ್ಪಷ್ಟವಾಗಿ ಕಂಡ ಕಪ್ಪುಚುಕ್ಕೆಗಳನ್ನು ಸಾಸುವೆ ಎಂದೇ ತಿಳಿದಿದ್ದವರು. ‘ನಾನು ಒಗ್ಗರಣೆಗೆ ಯಾಕಿಷ್ಟು ಸಾಸುವೆ ಹಾಕಿದೆ?’ ಎಂಬ ಆಲೋಚನೆಯೂ ಅವರಲ್ಲಿ ಹಾದು ಹೋಗಿರುತ್ತದೆ!

ಬೇಸಗೆಯ ವೇಳೆಯಲ್ಲಿ ಅಡುಗೆ ಪದಾರ್ಥಗಳಿಗೆ ಇರುವೆ ಮುತ್ತುವುದು ಸಾಮಾನ್ಯ. ಭೂಮಿಯ ಉಷ್ಣತೆ ತಡೆಯಲಾರದೇ ಎಲ್ಲೆಲ್ಲೋ ಇದ್ದ ಅವು ವಲಸೆ ಹೋಗಲಾರಂಭಿಸುವಾಗ ನಮಗೆ ಇದರ ತಾಪತ್ರಯ. ಹಿಂದಿನ ಕಾಲದಲ್ಲಿ ಲಕ್ಷಣರೇಖೆಯಂಥ ಇರುವೆ ನಿಷೇಧಕಗಳು ಇಲ್ಲದೇ ಇದ್ದುದರಿಂದ ಒಮ್ಮೊಮ್ಮೆ ಕುಡಿಯುವ ನೀರಿನ ಪಾತ್ರೆಗೂ ಮುತ್ತಿಗೆ ಹಾಕಿರುತ್ತಿದ್ದವು. ಅಡುಗೆಮನೆಯ ಮಂಕುದೀಪದಲ್ಲಿ ದೃಷ್ಟಿ ಕಡಮೆಯಾದ ವಯಸ್ಸಾದ ಹೆಂಗಸರು ಬೆಳಗ್ಗೆ ಮಾಡಿಟ್ಟಿದ್ದ ಅಡುಗೆಯನ್ನು ರಾತ್ರಿ ಬಡಿಸುವಾಗ ಗೊತ್ತಾಗದೇ ಇರುವೆಗಳನ್ನೇ ಸಾಸುವೆಯೆಂದುಕೊಂಡದ್ದೂ ಉಂಟು. ಬಹುಶಃ ಒಗ್ಗರಣೆಯಿಂದಾಗುವ ಸೈಡ್ ಎಫೆಕ್ಟು ಇದೊಂದೇ ಎಂದು ಕಾಣುತ್ತದೆ. ಅದರಲ್ಲೂ ಉಪ್ಪಿಟ್ಟು, ಅವಲಕ್ಕಿಗಳಿಗೆ ಕಪ್ಪಿರುವೆ ಹತ್ತಿದರೆ ಮುಗಿದೇ ಹೋಯಿತು. ಸಾಸುವೆ ಯಾವುದು? ಇರುವೆ ಯಾವುದು? ಎಂದು ಗೊಂದಲವೇ ಆಗಿಬಿಡುವುದು. ಇಂಥ ಸಂದರ್ಭದಲ್ಲಿ ನಮ್ಮ ತಂದೆಯವರು ಕನ್ನಡಕ ಹಾಕಿಕೊಂಡು, ‘ಇರುವೆ ಮುತ್ತಿದೆಯಲ್ಲೇ? ಸರಿಯಾಗಿ ಇಡಬಾರದೇ?’ ಎಂದು ರೇಗುತ್ತಿದ್ದರು. ಕನ್ನಡಕ ಹಾಕಿಕೊಳ್ಳುವುದೇನಿದ್ದರೂ ಸೀರಿಯಲ್‌ ನೋಡಲು ಮಾತ್ರ ಎಂಬ ನಿಯಮ ಪಾಲಿಸುತಿದ್ದ ನಮ್ಮಮ್ಮ ‘ಅದು ಒಗ್ಗರಣೆಯ ಸಾಸುವೆಯೇ’ ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ಶ್ರಾವಸ್ತಿ ನಗರದ ಸಿರಿವಂತನ ಮಗಳಾಗಿದ್ದ ಕಿಸಾಗೌತಮಿಯು ತನ್ನ ಕಂದನ ಸಾವಿನಿಂದ ಪರಿತಪಿಸುತಿದ್ದಾಗ, ಆ ಊರಿಗೆ ಬಂದಿದ್ದ ‘ಗೌತಮ ಬುದ್ಧನ ಬಳಿ ಹೋದರೆ ನಿನ್ನ ಮಗುವಿಗೆ ಜೀವ ತರಿಸುವರೆಂದು ಊರವರು ಹೇಳಿ’ ಕಳಿಸಿ ಕೊಡುತ್ತಾರೆ. ಆಗ ಬುದ್ಧರು ಸಾವಿಲ್ಲದ ಮನೆಯಿಂದ ಸಾಸುವೆಯನ್ನು ತರಲು ಹೇಳುವರು; ಆ ಮೂಲಕ ಆಕೆಗೆ ಹುಟ್ಟು ಸಾವಿನ ಭವಚಕ್ರವನ್ನು ಅರ್ಥ ಮಾಡಿಸುವರು. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ನನ್ನ ವಿಚಾರವಿಷ್ಟೆ! ಅಂದರೆ ಗೌತಮ ಬುದ್ಧರಿಗೂ ಗೊತ್ತಿತ್ತು: ಎಲ್ಲರ ಅಡುಗೆಮನೆಯಲ್ಲೂ ಸಾಸುವೆ ಇದ್ದೇ ಇರುತ್ತದೆಂದು!

ಇನ್ನು ವಗ್ಗರಣೆ ಸುಬ್ಬಮ್ಮನ ಬಗ್ಗೆ ನಾನು ಹೇಳಲೇಬೇಕು: ಈಕೆ ನಮ್ಮ ತಾಯಿಮನೆಯ ಕಡೆ ದೂರದ ಸಂಬಂಧಿ. ಒಗ್ಗರಣೆಪ್ರಿಯೆ. ಈಕೆಯು ವಗ್ಗರಣೆಗೆ ಬಳಸುತ್ತಿದ್ದ, ಹಿಡಿಕೆ ಮುರಿದು ಹೋಗಿದ್ದ ಸೌಟೊಂದು ನಮ್ಮ ಮನೆಯಲ್ಲಿ ಬಹು ಕಾಲ ಇತ್ತು. ನಮ್ಮಮ್ಮ ಆಕೆಯ ನೆನಪಿಗಾಗಿ ಇಟ್ಟುಕೊಂಡಿದ್ದರೆನಿಸುತ್ತದೆ. ಯಾವ ಅಡುಗೆ ಮಾಡಿದರೂ ಈಕೆ ವಗ್ಗರಣೆಯನ್ನು ತೋರಿಸಿಯೇ ಸಮಾಪ್ತಿಗೊಳಿಸುತ್ತಿದ್ದುದು ಎಂದು ನೆಂಟರಿಷ್ಟರು ಈ ಸುಬ್ಬಮ್ಮನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ನಂಜನಗೂಡು ತಿರುಮಲಾಂಬ ಅವರ ಮನೆಯ ಎದುರೇ ನಮ್ಮ ತಾಯಿಯ ತಾಯಿ ಅಂದರೆ ಅಜ್ಜಿಯ ಮನೆಯಿತ್ತು. ಈ ಸುಬ್ಬಮ್ಮಳು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಓಡಾಡಿಕೊಂಡಿರುತ್ತಿದ್ದರು. ಬಾಲ ವಿಧವೆಯಾದರೂ ಕೇಶಮುಂಡನ ಮಾಡಿಸಿಕೊಳ್ಳದೇ ಸಕೇಶಿಯಾಗಿದ್ದರು. ಒಮ್ಮೆಯಂತೂ ಹಬ್ಬದಡುಗೆ ಮಾಡಿ, ಕೊನೆಗೆ ಎಲ್ಲಕೂ ಒಗ್ಗರಣೆ ತೋರಿಸುವಾಗ ಗಸಗಸೆ ಪಾಯಸಕ್ಕೂ ಹಾಕಿ, ರಂಪ ಮಾಡಿದ್ದ ಘಟನೆಯನ್ನು ನಮ್ಮ ಬಂಧುಗಳು ಸ್ವಾರಸ್ಯವಾಗಿ ಹೇಳುತ್ತಾ ರೇಗಿಸುತ್ತಿದ್ದರು. ಅಷ್ಟರಮಟ್ಟಿಗೆ ಈಕೆಗೆ ಒಗ್ಗರಣೆಯೇ ಊಟವಾಗಿ ಬಿಟ್ಟಿತ್ತು. ಪ್ರತಿದಿವಸ ಬೆಳಗ್ಗೆಯೇ ಸೊಪ್ಪು ಮಾರಲು ಬರುತ್ತಿದ್ದ ಹೆಂಗಸು ಅದೇನ್ ವಗ್ರಾಣೆ ತಿಂದೀರಿ ನೀವು, ಒಂದ್ ಬೆಳ್ಳುಳ್ಳಿ ಇಲ್ಲ, ಈರುಳ್ಳಿ ಇಲ್ಲಎಂದು ಆಡಿಕೊಳ್ಳುತ್ತಿದ್ದಳು. ಏಕೆಂದರೆ ಬೆಳ್ಳುಳ್ಳಿ ಇಲ್ಲದೆ ಅಡುಗೆಯನ್ನೇ ಮಾಡಲಾಗದೆಂಬ ಬಹುತೇಕರಿಗೆ ಇದು ಅರ್ಥವಾಗದ ಆಯಾಮ. ಅದಕ್ಕೆ ಪ್ರತಿಯಾಗಿ, ನೋಡು, ನೀನು ನೆನ್ನೆ ರಾತ್ರಿ ಊಟ ಮಾಡಿದ್ದರ ಬೆಳ್ಳುಳ್ಳಿ ವಾಸನೆ ನಿನ್ನ ಕೈಗಂಟಿ, ಅದು ನೀ ಮಾರುವ ಸೊಪ್ಪಿಗೂ ಅಂಟಿ, ಈಗದನ್ನು ನಾನು ತೊಗೋಬೇಕೋ? ಬೇಡ್ವೋ? ಅಂತ ಯೋಚ್ನೆ ಶುರುವಾಗಿದೆ!’ ಎಂದು ಸುಬ್ಬಮ್ಮ ಪ್ರತಿವಾದಿಯಾಗಿ ಹಂಗಿಸುತ್ತಿದ್ದರು. ಇವರು ಮಾಡುವ ಮೇಲೋಗರಗಳು ನನಗೆ ಆ ಕಾಲಕ್ಕಾಗಲೇ ಬಲು ಇಷ್ಟವಾಗುತ್ತಿದ್ದವು. ತಪ್ಪದೇ ಆಕೆ ವಗ್ಗರಣೆಗೆ ಪ್ರಾಶಸ್ತ್ಯ ಕೊಡುತ್ತಿದ್ದರು.

ನಮ್ಮ ತಂದೆಯ ತಾಯಿ ಅಜ್ಜಿಮನೆಯಲ್ಲಿ ಭಯಂಕರ ಮಡಿ. ಅವರ ಪಾಲಿಗೆ ನಾವೇ ಇತರೆಯವರಾಗಿದ್ದೆವು. ಬೆಳ್ಳುಳ್ಳಿ ಬಳಸುವುದಿರಲಿ, ಈರುಳ್ಳಿಯನ್ನೇ ಮನೆಗೆ ತರುತ್ತಿರಲಿಲ್ಲ. ಇನ್ನು ಈರುಳ್ಳಿ ಪಕೋಡವಂತೂ ಕನಸು. ಮ್ಲೇಚ್ಛರ ತರಕಾರಿ ಎಂಬ ಕಾರಣಕ್ಕಾಗಿ ಬೀಟ್‌ರೂಟ್, ಕ್ಯಾರೆಟ್‌ಗಳನ್ನೂ ನಿಷೇಧಿಸಿದ್ದವರು. ಅವರ ಪಾಲಿಗೆ ಒಗ್ಗರಣೆ ಎಂದರೆ ಉದ್ದಿನಬೇಳೆ, ಕಡಲೇಬೇಳೆ ಮತ್ತು ಸಾಸುವೆ ಮಾತ್ರ. ನಾವು ಮಾತ್ರ ಮೈಸೂರಿನ ಕನ್ನೇಗೌಡನ ಕೊಪ್ಪಲಿನಲ್ಲಿ ವಾಸವಿದ್ದವರಾದ್ದರಿಂದ ಈರುಳ್ಳಿಯನ್ನು ತಿನ್ನುವಷ್ಟು ಪ್ರಗತಿಪರರಾಗಿದ್ದೆವು. ಉಪ್ಪಿಟ್ಟು, ಅವಲಕ್ಕಿಯನ್ನು ತಯಾರಿಸುವ ಮುಂಚೆ ಎಲ್ಲವನೂ ಹೆಚ್ಚಿ ಎಣ್ಣೆಯಲಿ ಬಾಡಿಸುವಾಗ ಉಂಟಾಗುವ ಸದ್ದು ಮತ್ತು ಅದರ ಘಮ ನನ್ನೊಳಗೆ ಒಂದು ರೀತಿಯ ನಶೆಯನ್ನು ತರಿಸುತ್ತಿತ್ತು; ಹೊಟ್ಟೆಯ ಹಸಿವು ನೆನಪಾಗುತ್ತಿತ್ತು. ಈರುಳ್ಳಿಯಲಿರುವ ನೀರಿನ ಅಂಶವು ಎಣ್ಣೆಯೊಂದಿಗೆ ಹೋರಾಡಿ, ವೀರಮರಣವನ್ನಪ್ಪಿ, ಆವಿಯಾಗುವ ಹೊತ್ತಲ್ಲಿ ಬರುವ ಪರಿಮಳಕ್ಕೆ ನಾನು ವಿಜಯಯಾತ್ರೆ ಎಂದು ಹೆಸರಿಟ್ಟಿದ್ದೆ. ಆಗ ಉಂಟಾಗುವ ಚುರ್ ಎಂಬ ಶಬ್ದಕ್ಕೆ ಗೆಲುವಿನ ಘೋಷಣೆ ಎಂದು ಕರೆಯುತ್ತಿದ್ದೆ. ಹೀಗೆ ಒಗ್ಗರಣೆಯಲಿ ಬೆಂದ ಈರುಳ್ಳಿಗೆ ವಿಶೇಷ ಶಕ್ತಿ ಬರುತ್ತದೆ. ಇದು ಎಲ್ಲದರ ರುಚಿಗೆ ಮೂಲವಾಗುತ್ತದೆ. ಈಗಂತೂ ಕುಕ್ಕರಿನ ಯುಗ. ತರಕಾರಿಗಳನ್ನು ಅದರಲ್ಲೇ ಬೇಯಿಸಿ, ಸಾಂಬಾರು (ಹುಳಿ) ಮಾಡುವುದು ಪದ್ಧತಿ. ಕೆಲವೊಂದು ತರಕಾರಿಗಳನ್ನು ಕುಕ್ಕರಿನಲಿ ಬೇಯಿಸಬಾರದು. ಅಂಥವುಗಳನ್ನು ವಗ್ಗರಣೆಯಲ್ಲಿ ಬಾಡಿಸಿದರೆ ಸಾಕು. ನನ್ನ ಗೆಳೆಯರೋರ್ವರಿಗೆ ಬೆಂಡೆಕಾಯಿ ಬಹಳ ಇಷ್ಟ. ಆದರೆ ‘ನಮ್ಮ ಮನೆಯವರು ಮಾಡಿದರೆ ಲೋಳೆಯಂತಾಗಿ ತಿನ್ನಲೇ ಅಸಹ್ಯವಾಗುತ್ತದೆ’ ಎಂದು ಅವರು ನನ್ನ ಬಳಿ ಅಲವತ್ತುಕೊಂಡಾಗ ಅವರಿಗೊಂದು ಟಿಪ್ಸು ಹೇಳಿದೆ: ಕುಕ್ಕರಿಗೆ ಹಾಕದೇ, ವಗ್ಗರಣೆಯಲ್ಲಿ ಬಾಡಿಸಿ ಆನಂತರ ಸಾಂಬಾರು ಮಾಡಿ ನೋಡಿ ಎಂದೆ. ಕೆಲವರಂತೂ ಬದನೆಕಾಯಿಯನ್ನೇ ಕುಕ್ಕರಿಗೆ ಹಾಕಿ ಮುಚ್ಚಿಟ್ಟು ಕೂಗಿಸುವಂಥ ಕಲಾವಿದರು! ಎಲ್ಲ ತರಕಾರಿಗಳೂ ಒಂದೇ ಎಂಬ ಸಮಾನತಾಪ್ರಿಯರು. ನಾನಂತೂ ಯಾವುದೇ ತರಕಾರಿಗಳನ್ನು ಕುಕ್ಕರಿನಲಿ ಬೇಯಿಸುವಾಗ ಒಂದು ವಿಶಲಾದ ಮೇಲೆ ತೆಗೆದು, ವಗ್ಗರಣೆಯಲ್ಲಿ ಬಾಡಿಸುತ್ತೇನೆ. ಇದರಿಂದ ಸಾಂಬಾರಿನ ರುಚಿಯೇ ಬದಲಾಗುತ್ತದೆ. ಸಾರು, ಹುಳಿ ತಯಾರಾದ ಮೇಲೂ ಸಾಸುವೆಯೊಂದಿಗೆ ಇಂಗನ್ನು ಬೆರೆಸಿದ ಒಗ್ಗರಣೆ ಕೊಡಲೇಬೇಕು. ನಿಷ್ಠೆಯಿಂದ ಅಡುಗೆ ಮಾಡಿದವರು ಈ ವಿಚಾರದಲ್ಲಿ ಸ್ವಲ್ಪ ಸೋಮಾರಿತನ ತೋರಿ, ಒಗ್ಗರಣೆ ಹಾಕದೇ ಹಾಗೆಯೇ ಬಡಿಸುತ್ತಾರೆ. ಇದು ಅವರು ಮಾಡುವ ಘೋರ ಅನ್ಯಾಯ.

ಇನ್ನು ಚಟ್ನಿ, ಗೊಜ್ಜು, ಪಲ್ಯಗಳಿಗೆ ಹಾಕುವ ಒಗ್ಗರಣೆಯದೇ ಬೇರೆ ಕತೆ. ಒಗ್ಗರಣೆ ಬೆರೆಸಿದ ಕೂಡಲೇ ತಿನ್ನಬೇಕು; ಇಲ್ಲದಿದ್ದರೆ ಅದರ ಕಟುಂ ಕುಟುಂ ಅನುಭವವವು ದಕ್ಕದೇ ಕಡಲೇಬೇಳೆ, ಉದ್ದಿನಬೇಳೆಗಳೆಲ್ಲಾ ಮೆತ್ತಗಾಗಿ ಬಿಟ್ಟಿರುತ್ತವೆ. ಹೆಸರಿಗೆ ವಗ್ಗರಣೆ; ಆದರೆ ಬಾಯಿಗೆ ರುಚಿಯಿಲ್ಲ. ಇದಕ್ಕೊಂದು ಉಪಾಯವಿದೆ. ಎಲ್ಲದಕ್ಕೂ ಒಗ್ಗರಣೆ ಬೆರೆಸದೇ ಪ್ರತ್ಯೇಕವಾಗಿಟ್ಟುಕೊಂಡಿರಬೇಕು. ಬಳಸುವಾಗ ಬೆರೆಸಬೇಕು. ನನ್ನದೇ ಪ್ರಸಕ್ತಿಗೆ ಬಂದರೆ, ಮಧ್ಯಾಹ್ನದ ಹೊತ್ತು ನನ್ನದು ಡಬ್ಬಿಯೂಟ. ಎಲ್ಲ ಬಗೆಯ ಚಿತ್ರಾನ್ನಗಳೂ ಗೊಜ್ಜೂ ಚಟ್ನಿ ಮೊದಲಾದವನ್ನೂ ಮನೆಯಿಂದಲೇ ತೆಗೆದುಕೊಂಡು ಹೋಗುವವನು. ಮಡದಿಯು ಕೊಡುವಾಗಲೇ ಅನ್ನ ಬೇರೆ; ಚಟ್ನಿ ಬೇರೆ; ಜೊತೆಗೆ ಒಗ್ಗರಣೆ ಬೇರೆ. ಊಟ ಮಾಡುವಾಗ ಅನ್ನಕ್ಕೆ ಚಟ್ನಿ ಕಲೆಸಿಕೊಂಡು, ಒಗ್ಗರಣೆ ಬೆರೆಸಿಕೊಂಡು ತಿಂದರೆ ಈ ಕಟುಂ ಕುಟುಂ ಅನುಭವ ಮಿಸ್ಸಾಗುವುದಿಲ್ಲ! ಮಿಸೆಸ್ಸು ಮಾಡುವ ಮೆಸ್ಸಿನ ತಂತ್ರಗಾರಿಕೆಯಿದು. ವಯಸಾದ ಮೇಲೆ ಹಲ್ಲಿನ ಆರೋಗ್ಯ ಅಷ್ಟಕಷ್ಟೇ. ಅಂಥವರು ಈ ಕಟುಂಕುಟುಂ ಸವಿಯಲು ಹಿಂಜರಿಯುವರು. ಇಂಥವರಿಗೆ ಬರೀ ಸಾಸುವೆಯೊಗ್ಗರಣೆಯೇ ಸೂಕ್ತ.

ಹಿಂದಿನ ದಿನ ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಹಾಕಿ, ಕಾಯಿ ತುರಿದು ಹಸನುಗೊಳಿಸಿ ಕೊಡುವ ಒಗ್ಗರಣೆಯನ್ನವೇ ಮುಂದೆ ಚಿತ್ರಾನ್ನವಾದದ್ದು. ಆದರೆ ಒಗ್ಗರಣೆಯನ್ನು ಸಿದ್ಧಪಡಿಸುವುದು ಮೇಲ್ನೋಟಕೆ ಸುಲಭವೆಂದು ಕಂಡರೂ ಆಂತರ್ಯದಲ್ಲಿ ಇದು ಕಷ್ಟಕರ. ಒಂದರೆಕ್ಷಣ ನಿಧಾನಿಸಿದರೂ ಸೀದು ಹೋಗುತ್ತದೆ. ಮುಂಚೆಯೇ ಬಾಣಲೆ ಇಳಿಸಿದರೂ ಹದ ಸಿಕ್ಕದೇ ಹಸಿಹಸಿಯಾಗೇ ಇರುತ್ತದೆ. ಎಣ್ಣೆಯನು ಕಾಯಿಸಬೇಕು. ಆಮೇಲೆ ಸಾಸುವೆ ಹಾಕಬೇಕು. ಅದು ಸಿಡಿಯುವುದರೊಳಗೆ ಕಡಲೇಬೇಳೆ, ಉದ್ದಿನಬೇಳೆಯು ಡಬ್ಬಿಯಿಂದ ಚಮಚೆಗೆ ಹಸ್ತಾಂತರವಾಗಿರಬೇಕು. ಜೊತೆಗೆ ಅಡುಗೆ ಅರಿಷಿಣ, ಫಸ್ಟ್ ಕ್ವಾಲಿಟಿ (ಹೊಟೆಲ್‌ ಸ್ಪೆಷಲ್‌) ಹಿಂಗು (ಇಂಗು), ಒಣ ಮೆಣಸಿನಕಾಯಿಯ ಚೂರುಗಳು. ನನ್ನ ಪ್ರಕಾರ, ನಾನು ಮರೆಯದೇ ಬಳಸುವ ಇನ್ನೆರಡು ಮಸಾಲೆ ಪದಾರ್ಥಗಳೆಂದರೆ ಜೀರಿಗೆ ಮತ್ತು ಮೆಣಸು. ಅಪರೂಪಕ್ಕೆ ಮೆಂತ್ಯದ ಕಾಳುಗಳನ್ನೂ ಸೇರಿಸಿ ಬಿಡುವೆ. ಒಗ್ಗರಣೆ ಸೀದು ಹೋಗಬಾರದೆಂಬ ಕಾರಣಕೆ ನಮ್ಮಮ್ಮನ ಕಾಲದಿಂದಲೂ ಕಡಲೇಬೇಳೆ, ಉದ್ದಿನ ಬೇಳೆ ಬೆರೆಸಿ ಇಡುತ್ತಿದ್ದುದು ಹಾಗೆಯೇ ಮುಂದುವರೆದುಕೊಂಡು ಬಂದಿದೆ. ಆನಂತರ ಯಾರೋ ಪುಣ್ಯಾತ್ಮರು ಒಗ್ಗರಣೆ ಡಬ್ಬಿಯನ್ನೇ ತಯಾರಿಸಿ ಕೊಟ್ಟರು.  ಎಲ್ಲವೂ ಒಂದೇ ಕಡೆ ಸಿಗಲೆಂದು ಇದರ ವಿನ್ಯಾಸ. ಹೀಗೆ ಅಡುಗೆಮನೆಗೂ ಅಡುಗೆಗೂ ಅನುಕೂಲವಾಗುವಂಥ ಯಾವುದೇ ಡಿಸ್ಕವರಿಗಳೂ ನಮಗೆ ಬಹು ಮುಖ್ಯ. ಉದ್ಯೋಗಸ್ಥ ಹೆಣ್ಣುಮಕ್ಕಳು ಮನೆಯ ಒಳಗೂ ಹೊರಗೂ ದುಡಿಯಬೇಕಾದ ಅನಿವಾರ್ಯ. ಹಾಗಾಗಿ, ಗ್ಯಾಸ್ ಸ್ಟವ್ವು, ಕುಕ್ಕರು, ಮಿಕ್ಸಿ, ಗ್ರೈಂಡರು, ಫ್ರಿಜ್ಜು, ವಾಷಿಂಗ್ ಮಿಷನ್ನು, ಸಿಂಕು, ಮಾಪೂ ಎಂಬಂಥ ಆಧುನಿಕ ಗೃಹಬಳಕೆಯ ಪದಾರ್ಥಗಳು ವರವಾಗಿ ಕಾಣಿಸಿಕೊಂಡವು. ಇದರದೇನೇ ಸೈಡ್ ಎಫೆಕ್ಟು ಇರಲಿ, ಡೈರೆಕ್ಟ್ ಎಫೆಕ್ಟು ನಮಗೆ ಗೊತ್ತೇ ಇದೆಯಲ್ಲಾ! ಜನಜೀವನ ಹಸನಾಗಿದೆಯಲ್ಲ!! ‘ಇದೆಲ್ಲಾ ಬಂದು ನಮ್ಮ ಹೆಂಗಸರು ಸುಖಜೀವಿಗಳಾಗಿ, ಮೂವತ್ತಕ್ಕೇ ಮುಲುಗುತ್ತಾ, ನಲವತ್ತಕ್ಕೆ ನರಳುತ್ತಾ, ಐವತ್ತಕ್ಕೆ ಅಯ್ಯೋ ಎನ್ನುವಂತಾಗಿದೆ’ ಎನ್ನುವ ಸುಖಪುರುಷರು ಆಲೋಚಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕು: ಹೆಣ್ಣು ಕಷ್ಟಪಡುತ್ತಲೇ ಇರಬೇಕೇ? ಗಂಡು ಪುರುಷಾಹಂಕಾರದಿಂದ ಮೆರೆಯುತ್ತಲೇ ಇರಬೇಕೆ? ಕುಡಿದೂ ತಿಂದೂ ತೇಗಿ, ಹತ್ತಾರು ದುರಭ್ಯಾಸಗಳಿಂದ ನರಳುತ್ತಾ, ಮನೆಗೂ ಆಸ್ಪತ್ರೆಗೂ ಅಲೆದಾಡುತ್ತಾ, ಗಂಡಸ್ತನವನ್ನೇ ಕಳೆದುಕೊಳ್ಳುತ್ತಿರುವ ಸೋ ಕಾಲ್ಡ್ ಪುಲ್ಲಿಂಗವೂ ತಮ್ಮ ಭೀಮಬಲದಿಂದ ವಂಚಿತವಾಗಿಲ್ಲವೇ? ಇರಲಿ.

ಒಗ್ಗರಣೆಯನ್ನು ಕುರಿತು ಹರಟುತ್ತಾ ಇದೇನು ಈತನ ಒಗ್ಗರಣೆ? ಎಂದು ಸಿಟ್ಟಾಗದಿರಿ. ಒಗ್ಗರಣೆ ಎಂಬ ಪದಕ್ಕೆ ಇಂಥ ಅರ್ಥವೂ ಇದೆಯಲ್ಲವೆ? ಮಾತಿನ ಅಲಂಕಾರ, ಸೊಗಸನ್ನು ಹೆಚ್ಚಿಸಲು ತರುವ ಉತ್ಪ್ರೇಕ್ಷೆ, ಒಂದನಾಡಲು ಹೋಗಿ ಒಂಬತ್ತನಾಡುವುದು, ಇಲ್ಲದ್ದನ್ನು ಇದೆಯೆಂದು ಕಲ್ಪಿಸಿ ಹೇಳುವುದು ಎಂಬೆಲ್ಲಾ ಅರ್ಥದ ಆಯಾಮಗಳಿವೆ. ಒಗ್ಗರಣೆ ಎಂಬ ಪದದ ಒಳ ಹೊಕ್ಕು ಹೇಳುವುದಾದರೆ, ಆಹಾರಕ್ಕೆ ರುಚಿ ತರಲೋಸುಗ ಮಸಾಲೆ ಪದಾರ್ಥಗಳನ್ನು ಎಣ್ಣೆ ಅಥವಾ ತುಪ್ಪದಲ್ಲಿ ಕರಿದು ಕೂಡಿಸುವುದು ಎಂಬುದಾಗಿ ಒಗ್ಗರಣೆಗೆ ನಿಘಂಟಿನ ಅರ್ಥ. ಜೊತೆಗೆ ಮಾತಿನಲ್ಲಿ ಮೆರುಗು ತರುವುದಕ್ಕಾಗಿ ವಿನೋದಕರ ವಿಷಯಗಳನ್ನು ಕೂಡಿಸುವುದು ಎಂಬುದು ಸಾಮಾಜಿಕ ಅರ್ಥ. ಇದರ ನಿಷ್ಪತ್ತಿ ಈ ರೀತಿ: ಒಗ್ಗು ಎಂಬ ಧಾತುವಿನಿಂದ ಒಗ್ಗಿಸು, ಒಗ್ಗರಿಸು ಎಂಬ ಕ್ರಿಯಾಪದಗಳನ್ನು ಮಾಡಿಕೊಂಡಿದ್ದೇವೆ. ನಾಮಪದವಾಗಿ ಒಗ್ಗರಣೆ ಎಂದು ಬಳಸುತ್ತೇವೆ. ಇದು ದ್ರಾವಿಡ ಮೂಲದ ಅಚ್ಚಗನ್ನಡ ಪದವೇ. ಒಗ್ಗು + ಆರಣೆ = ಒಗ್ಗರಣೆ. ಆರಣೆ ಎಂದರೆ ಹೊಂದಿಸುವುದು, ಸೇರಿಸುವುದು ಎಂದರ್ಥ. ಇನ್ನು ಕೆಲವರು ಇದರ ನಿಷ್ಪತ್ತಿಯನ್ನು ಓಗರಣೆ>ಒಗರಣೆ>ಒಗ್ಗರಣೆ ಎಂದೂ ಹೇಳುವುದುಂಟು. ಇದೇಕೋ ಒಪ್ಪಿತವಲ್ಲ. ಒಗ್ಗರಿಸು > ಒಗ್ಗರಣೆ ಎಂಬುದೇ ಸರಿ ನಿಷ್ಪತ್ತಿ ಎನಿಸುವುದು. ರುಚಿ ಹೆಚ್ಚಿಸಲು ಇನ್ನೇನಾದರೂ ಸೇರ್ಪಡೆ ಮಾಡುವುದು ಎಂದಿದರ ಆಶಯ. ಒಗ್ಗರಿಸು ಎಂಬುದಕ್ಕೆ ಒಟ್ಟುಗೂಡಿಸು ಎಂದರ್ಥವಿದೆ. ಭಾರತದ ಉತ್ತರ ಭಾಗದಲ್ಲಿ ಇದನ್ನು ತಡಕಾ ಎನ್ನುತ್ತಾರಂತೆ. ಇಂಗ್ಲಿಷಿನಲ್ಲಿ ಇದನ್ನು Seasoning / Relish ಎನ್ನುವರಂತೆ. ಅತಿಶಯವಾಗಿ ಹೇಳುವುದು ಎಂಬುದಿದರ ಆಲಂಕಾರಿಕ ಅರ್ಥ. ಸಾದಾ ಸುದ್ದಿಗೆ ಒಗ್ಗರಣೆ ಸೇರಿಸಿ, ಅತಿಶಯಗೊಳಿಸುವುದು, ಉತ್ಪ್ರೇಕ್ಷಿಸುವುದು ಎಂದೂ ಅರ್ಥ ಮಾಡಬಹುದು. ಎಲ್ಲ ಬಗೆಯ ಓಗರಗಳಿಗೆ ಒಗ್ಗರಣೆ ಇರಬೇಕು. ಜೀರಿಗೆ, ಮೆಣಸು, ಅರಿಶಿನದ ಪುಡಿ, ಸಾಸುವೆ, ಕಡಲೇಬೇಳೆ, ಉದ್ದಿನಬೇಳೆ, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು, ಕಡಲೇಬೀಜ, ಮೆಣಸಿನಕಾಯಿ ಇವೆಲ್ಲವೂ ಕಾದ ಎಣ್ಣೆಯಲಿ ತಮ್ಮನ್ನು ಕರಿದುಕೊಳ್ಳಬೇಕು. ಓಗರ ಎಂದರೆ ಅನ್ನ ಎಂದರ್ಥ. ಅಂದರೆ ಅನ್ನಕ್ಕೆ ಬಡಿಸಿಕೊಳ್ಳುವುದು ಮೇಲೋಗರ. ಪುಳಿಯೋಗರ ಎಂಬ ಪದದಲ್ಲಿ ಓಗರದ ಬಳಕೆಯಿದೆ. ಅನ್ನಕ್ಕೆ ಬಡಿಸಬಹುದಾದದ್ದು ಸಾರು, ಹುಳಿ, ಪಲ್ಯ, ಚಟ್ನಿ, ಗೊಜ್ಜು, ಪಳದ್ಯ ಹೀಗೆ. ಇವೆಲ್ಲವೂ ಮೇಲೋಗರಗಳೇ. ಕೆಲವರ ವಾದದ ಪ್ರಕಾರ ಈ ಓಗರ ಎಂಬುದೇ ಒಗ್ಗರಣೆಗೆ ಮೂಲ. ಇದನ್ನು ಒಪ್ಪಲಾಗದು. ಏಕೆಂದರೆ ಓಗರ ಬೇರೆ; ಒಗ್ಗರಿಸು ಬೇರೆ.

ಅಡುಗೆಯನ್ನು ಸಿಂಗಾರಗೊಳಿಸುವುದೇ ಒಗ್ಗರಣೆ. ನಿರಾಭರಣ ಸುಂದರಿ ಎಂಬೊಂದು ನುಡಿಗಟ್ಟಿದೆ. ಅಂದರೆ ಯಾವುದೇ ಆಭರಣಗಳಿಲ್ಲದಿದ್ದರೂ ಸ್ತ್ರೀಯು ಸಹಜ ಸುಂದರಿ ಎಂದು. ಆದರೆ ಇನ್ನೊಂದು ಮಾತೂ ಇದೆ: ಕಾಂತಮಪಿ ನಿರ್ಭೂಷಂ ವಿಭಾತಿ ವನಿತಾಮುಖಂ ಎಂದು ಸಂಸ್ಕೃತದ ಕಾವ್ಯ ಮೀಮಾಂಸಕನಾದ ಭಾಮಹನ ಉಕ್ತಿ. ಅಂದರೆ ವನಿತೆಯ ಮುಖವು ಸುಂದರವಾಗಿದ್ದರೂ ಆಭರಣಗಳಿಲ್ಲದೇ ಶೋಭಿಸದು! ಹಾಗಾಗಿ ಕಾವ್ಯಕ್ಕೆ ಅಲಂಕಾರಗಳು ಬೇಕು ಎಂಬುದವನ ಪ್ರತಿಪಾದನೆ. ಹಾಗೆ, ಅಡುಗೆಯನ್ನು ಎಷ್ಟೇ ಚೆನ್ನಾಗಿ ಮಾಡಿರಲಿ, ಒಗ್ಗರಣೆಯನ್ನು ಹಾಕಿದಾಗಲೇ ಅದಕ್ಕೆ ಅಂದ ಚೆಂದ, ರುಚಿಯ ಸ್ವಾದ! ಇದು ಫ್ರೆಶ್ ಇದ್ದರೆ ಇನ್ನೂ ಸೂಪರು. ಒಗ್ಗರಣೆಗೆ ಬಳಸುವ ಪದಾರ್ಥಗಳಲ್ಲಿ ಕರಿಬೇವು, ಕೊತ್ತಂಬರಿಗಳು ತಮ್ಮ ತಾಜಾತನಗಳಿಂದ ಕಂಗೊಳಿಸುತ್ತಿರಬೇಕು. ಆಗಲೇ ಎಲ್ಲಕೂ ಅರ್ಥ. ಉಪ್ಪಿನಕಾಯಿಗೆ ಒಗ್ಗರಣೆ, ಎಣ್ಣೆ ಮತ್ತು ಸಾಸುವೆಗಳು ಪ್ರಿಸರ್ವೇಟೀವ್ ನಂತೆ ಕೆಲಸ ಮಾಡುವ ಗುಣ. ಹಿಂದಿನವರು ಕಬ್ಬಿಣದ ಸೌಟಿನಲ್ಲಿಯೇ ಒಗ್ಗರಣೆ ಹಾಕುತ್ತಿದ್ದರು. ಐರನ್ ಕಂಟೆಂಟ್ ಬೇಕೆಂದು! ಸೀಯುವುದಿಲ್ಲ ಎಂಬುದೂ ಇದರ ಹಿಂದಿನ ತಂತ್ರ. ಎಲ್ಲಕೂ ಒಂದೇ ರೀತಿಯ ಒಗ್ಗರಣೆ ಸರಿ ಹೊಂದುವುದಿಲ್ಲ. ಸಾರಿಗೆ ತುಪ್ಪದ ಒಗ್ಗರಣೆ, ಚಿತ್ರಾನ್ನಗಳಿಗೆ ಕಡಲೇಬೀಜ, ಕೊತ್ತಂಬರಿ ಮತ್ತು ಕರಿಬೇವು ಸೊಪ್ಪು ಸೇರಿಸಿದ ಒಗ್ಗರಣೆ, ಚಟ್ನಿಗೆ ಕೇವಲ ಸಾಸುವೆಯೊಗ್ಗರಣೆ, ಹೀಗೆ.

ನಮ್ಮ ಮನೆಯಲ್ಲಿ ಅನೇಕ ವಿಧದ ಚಿತ್ರಾನ್ನಗಳೂ ಚಟ್ನಿಗಳೂ ಅವತರಿಸುತ್ತಿರುತ್ತವೆ. ಹಲವು ಬಗೆಯ ಚಿತ್ರಾನ್ನಗಳಲ್ಲಿ ಭೈರಪ್ಪನವರ ಚಿತ್ರಾನ್ನ ಅಂತಲೇ ಒಂದನ್ನು ಮಾಡುವುದು ನಮ್ಮ ತಂದೆಯವರ ಕಾಲದಿಂದಲೂ ರೂಢಿ. ಭೈರಪ್ಪನವರ ಯಾವುದೋ ಕಾದಂಬರಿಯಲ್ಲಿ ಇದರ ವಿವರಣೆ ಬರುತ್ತದೆ. ಜೀರಿಗೆ, ಮೆಣಸಿನ ತುಪ್ಪದ ವಗ್ಗರಣೆ, ಅದಕ್ಕೆ ಕೊಬ್ಬರಿ ತುರಿ (ಒಣಕೊಬ್ಬರಿಯಾದರೆ ಬೇರೆಯದೇ ರುಚಿ) ಬಿಸಿಬಿಸಿ ಅನ್ನಕ್ಕೆ ಕಲೆಸಿಕೊಂಡರೆ ಭೈರಪ್ಪನವರ ಚಿತ್ರಾನ್ನ ರೆಡಿ. ತುಂಬಾ ಸಿಂಪಲು. ಇದು ನನಗೆ ಬಲು ಇಷ್ಟ. ಇಲ್ಲಿ ತುಪ್ಪದ ಒಗ್ಗರಣೆಯೇ ಕಿಂಗು. ಗೋಡಂಬಿಯನ್ನು ಕರಿದು ಹಾಕಿದರಂತೂ ಇನ್ನೂ ಡೆಲೀಷಿಯಸ್ಸು. ಇದನ್ನು ನಮ್ಮಜ್ಜಿಯು ಮೆಣಸೋಗರೆ ಎಂದು ಕರೆಯುತ್ತಿದ್ದರು. ಅದು ಯಾವುದೇ ಕಲಸನ್ನವಿರಲಿ, ಅದಕ್ಕೆ ಒಗ್ಗರಣೆಯೇ ಭೂಷಣ; ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಒಡವೆಗಳಿದ್ದಂತೆ!  ಪುಳಿಯೋಗರೆ, ಉಳಂದೋಗರೆ, ಕಾಯೋಗರೆ, ಎಳ್ಳುಪುಡಿ ಚಿತ್ರಾನ್ನ, ಹುಳಿ ಅವಲಕ್ಕಿ, ಕಾಯಿ ಸಾಸುವೆ ಚಿತ್ರಾನ್ನ, ಮಾವಿನಕಾಯಿ ಚಿತ್ರಾನ್ನ, ನಿಂಬೆಹಣ್ಣಿನ ಚಿತ್ರಾನ್ನಗಳೇ ಮುಂತಾದ ವಿಶೇಷ ಕಲಸನ್ನಗಳಿಗೆ ಒಗ್ಗರಣೆ ಇರಬೇಕು. ಯಾವಾಗಲೋ ಕಲೆಸಿ ಇಟ್ಟದ್ದನ್ನು ತಿಂದರೆ ಒಗ್ಗರಣೆಯ ಘಮವು ನಮ್ಮರಿವಿಗೇ ಬರುವುದಿಲ್ಲ; ಆ ಮಟ್ಟಿಗೆ ಕಲಸನ್ನಗಳು ಖುಷಿ ಕೊಡುವುದಿಲ್ಲ!

PC: Internet

ಇನ್ನು ಕಡಲೇಬೇಳೆ ಚಟ್ನಿ, ಗೋರೀಕಾಯಿ ಚಟ್ನಿ, ಹೀರೇಕಾಯಿ ಚಟ್ನಿ, ದಂಟಿನ ಸೊಪ್ಪಿನ ಚಟ್ನಿ, ಮೆಂತ್ಯ ಮೆಣಸಿನಕಾಯಿ ಚಟ್ನಿ, ಈರುಳ್ಳಿ ಚಟ್ನಿ ಮೊದಲಾದವುಗಳಿಗೆ ಅಂತಿಮವಾಗಿ ಸಿಂಗರಿಸುವ ಮೇಕಪ್ಪೇ ಈ ಒಗ್ಗರಣೆ. ಕೆಲವೊಮ್ಮೆ ಈರುಳ್ಳಿ ರೇಟು ಹೆಚ್ಚಾದಾಗಲೋ ಮನೆಯಲ್ಲಿ ಈರುಳ್ಳಿ ಇಲ್ಲದಿದ್ದಾಗಲೋ ಮಸಾಲೆ ರೊಟ್ಟಿ ಮಾಡುವಾಗ ಒಣಮೆಣಸಿನಕಾಯಿ ಒಗ್ಗರಣೆ ಮಾಡಿ, ಹಿಟ್ಟಿಗೆ ಕಲೆಸಿ, ನಮ್ಮಮ್ಮ ತಟ್ಟಿ ಕೊಡುತ್ತಿದ್ದರು. ಇನ್ನು ಜೀರಿಗೆ ರೊಟ್ಟಿಯ ರುಚಿಯನ್ನು ಹೆಚ್ಚಿಸುವ ಜವಾಬ್ದಾರಿ ಒಗ್ಗರಣೆಗೇ ಇರುವುದು. ಗಂಜಿಯೂಟವೇ ಇರಲಿ, ಅದರ ಬಡತನವನ್ನು ಕ್ಷಣವೊಂದರಲಿ ಬದಲಿಸಿ, ಶ್ರೀಮಂತಗೊಳಿಸುವ ಅರ್ಹತೆ ಇರುವುದು ಒಗ್ಗರಣೆಗೇನೇ!

ನನ್ನದು ಸಂಜೆಯ ಊಟ; ರಾತ್ರಿಯದಲ್ಲ! ಊಟವೋ ತಿಂಡಿಯೋ ಮಡದಿಯ ಮೂಲಕ ಭಗವಂತ ಕೊಟ್ಟಿದ್ದು. ಆನಂತರ ಒಂದು ಪುಟ್ಟ ವಾಯುವಿಹಾರ. ಅಂಥ ಹೊಟ್ಟೆ ತುಂಬಿದ ವೇಳೆಯಲ್ಲೂ ಯಾರದೋ ಮನೆಯ ಅಡುಗೆಮನೆಯಲ್ಲಿ ಒಗ್ಗರಣೆ ತಯಾರಾಗುತ್ತಿರುವ ಸ್ಮೆಲ್ಲು ಸಾಕು, ನನ್ನ ಘ್ರಾಣೇಂದ್ರಿಯವು ಜಾಗೃತವಾಗಿ, ನಖಶಿಖಾಂತ ಸಂಚರಿಸಿ, ಗಮನವೆಲ್ಲಾ ಅತ್ತ ಹೋಗುತ್ತದೆ. ನನ್ನದು ನಾಯಿಮೂಗು ಎಂದು ಎಂದೋ ಪತ್ನಿಗೆ ತಿಳಿದಿರುವುದರಿಂದ ನಡೆಯುತ್ತಿದ್ದವನು ನಿಂತು ಹಾಗೇ ಯೋಚಿಸುತ್ತೇನೆ. ಉಪ್ಪಿಟ್ಟಿಗೆ ವಗ್ಗರಣೆಯು ತಯಾರಾಗುತ್ತಿದೆಯೋ? ಅಡುಗೆಯ ಬೆಳ್ಳುಳ್ಳಿ ವಗ್ಗರಣೆ ಸಿದ್ಧವಾಗಿದೆಯೋ? ಎಂದುಸುರಿ ಅವಳ ಕಡೆ ನೋಡುತ್ತೇನೆ. ಅಂದರೆ ಒಗ್ಗರಣೆಯ ಮೂಲಕವೇ ಮನೆಯೊಳಗಿನ ಅಡುಗೆಯ ತಯಾರಿ ಮತ್ತು ತಯಾರಾಗುತ್ತಿರುವ ಖಾದ್ಯಗಳನ್ನು ಅಂದಾಜಿಸಬಹುದೆಂದು ಹೇಳಲು ಸ್ವಕಥನ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಸೊಸೆಪರೀಕ್ಷೆಯೊಂದನ್ನು ಇಲ್ಲಿ ಹೇಳಬೇಕು: ಹೊಸದಾಗಿ ಮದುವೆಯಾದ ತನ್ನ ಸೊಸೆಮುದ್ದಿನ ಅಡುಗೆ ಜ್ಞಾನವನ್ನು ಪರೀಕ್ಷಿಸಲೆಂದು ಪಾಯಸ ಮಾಡಿಟ್ಟೀದೀನಿ, ಅದಕ್ಕೊಂಚೂರು ವಗ್ಗರಣೆ ಹಾಕಮ್ಮ ಎಂದಾಗ ಆಗಲಿ ಅತ್ತೆ ಎಂದು ಆಕೆ ಸ್ಟವ್ ಹಚ್ಚಿ, ಬಾಣಲೆಯಿಟ್ಟಳೋ, ಅಲ್ಲಿಗೆ ಮುಗಿಯಿತು: ಈಕೆ ಅರಸು ರೋಡಿನ ಸೀರೆಯಂಗಡಿ ಗೊಂಬೆ; ಉಪರಂಭೆ ಅಷ್ಟೇ! ಸಂಸಾರಕ್ಕಲ್ಲ!! ಎಂದು.

ಕೊನೆಯಲ್ಲೊಂದು ಕತೆ: ಶಿವ ಪಾರ್ವತಿಯರು ವೇಷ ಬದಲಿಸಿ, ಒಮ್ಮೆ ಲೋಕ ಸಂಚಾರ ನಡೆಸುತ್ತಿದ್ದಾಗ ಶಿವದೇವನಿಗೆ ಹಸಿವೆಯಾಯಿತು. ಲೋಕವೇ ಅವನದ್ದಾದ ಮೇಲೆ ಯಾರ ಬಳಿ ಊಟ ಕೇಳಬೇಕು? ಎಂಬುದು ವಿಚಾರವಂತರ ಅಡ್ಡಮಾತು. ಇದು ಹಾಗಲ್ಲ. ಕತೆಯ ಸ್ವಾರಸ್ಯವನ್ನು ಅರಿಯಬೇಕಷ್ಟೆ. ಸರಿ, ಪಾರ್ವತಿಯು ಶಿವನ ಕಪಾಲ ಹಿಡಿದು ಒಬ್ಬರ ಮನೆಯ ಮುಂದೆ ನಿಂತು ಅಮ್ಮಾ ಎಂದಳು. ಒಳಗಿನಿಂದಲೇ ಕೂಗೊಂದು ಬಂತು: ಇನ್ನೂ ಅಡುಗೆಯಾಗಿಲ್ಲ, ಆಮೇಲೆ ಬಾ ಎಂಬುದಾಗಿ. ಸರಿ, ಶಿವೆ ಮುಂದಿನ ಮನೆಯ ಬಳಿ ಹೋಗಲು ಅಣಿಯಾಗುತ್ತಿದ್ದಂತೆಯೇ, ಪತಿದೇವ ಶಿವ ಅವಳ ಕೈ ಹಿಡಿದು ಜಗ್ಗಿದ. ಬೇರೆ ಮನೆ ಬೇಡ; ಈ ಮನೆಯ ಮುಂದೆಯೇ ನಿಲ್ಲೋಣ! ಎಂದು. ಪಾರ್ವತಿಗೆ ಅಚ್ಚರಿಯಾಯಿತು. ಅದೇಕೆಂದು ಹುಬ್ಬು ಗಂಟಿಕ್ಕಿ ಪ್ರಶ್ನಾರ್ಥಕವಾಗಿ ನೋಡಿದಾಗ ಈಶ್ವರನೆಂದ: ಅಡುಗೆಯಾಗಿದೆ, ಆದರೆ ಇನ್ನೂ ಒಗ್ಗರಣೆ ತೋರಿಸಿಲ್ಲ, ಆದರೆ ಎಣ್ಣೆ ಕಾದು ಇದೀಗ ತಾನೇ ಸಾಸುವೆ ಅದರೊಳಗೆ ಬಿದ್ದು ಚಟಪಟ ಎನ್ನುತ್ತಾ ಸದ್ದು ಮಾಡುತ್ತಿದೆ. ಅದರ ಘಮಲು ನನ್ನ ನೆತ್ತಿಯನಾವರಿಸಿದೆ, ನೋಡು, ಈಗಲೀಗ ಒಣಮೆಣಸಿನಕಾಯಿ ಮುರಿದು ಹಾಕುತ್ತಿದ್ದಾರೆ. ಅದರ ಘಾಟು ನನ್ನ ಗಂಟಲೊಳ ಹೊಕ್ಕು ಸೀನು ಬರುತ್ತಿದೆ. ಆಹಾ! ಈಗ ತಾನೇ ಬೆಣ್ಣೆ ಕಾಯಿಸಿ, ಮಾಡಿದ ತುಪ್ಪದಿಂದ ಜೀರಿಗೆ ಕರಿದ ಪರಿಮಳವು ನನ್ನನ್ನು ಬೇರೊಂದು ಲೋಕಕೇ ಒಯ್ಯುತ್ತಿದೆ. ಒಗ್ಗರಣೆಯ ಈ ಪರಿಯನ್ನು ನನ್ನಾತ್ಮ ಅನುಭವಿಸುತ್ತಿದೆಯೆಂದ ಮೇಲೆ ಅಡುಗೆಯೂ ರುಚಿಕರವಾಗಿರುತ್ತದೆಂದಾಯಿತು. ಹಾಗಾಗಿ ಇಲ್ಲೇ ಇದ್ದು ಕಾಯೋಣ ಎಂದನಂತೆ. ಸರಿ, ಇಬ್ಬರೂ ನಿಂತರು. ಸ್ವಲ್ಪ ಹೊತ್ತಾದ ಮೇಲೆ ಆ ಮನೆಯ ಹೆಂಗಸು ಈಚೆ ಬರುತ್ತಾಳೆ, ‘ಅಮ್ಮಾ, ತಾಯೀ’ ಎಂದ ಉಜ್ವಲವಾಗಿ ಬೆಳಗುತ್ತಿರುವ ಇಬ್ಬರು ನಿಂತೇ ಇದ್ದಾರೆ! ಆಕೆಗೆ ಇವರು ಯಾರೋ ದಿವ್ಯಾತ್ಮರೇ ಇರಬೇಕು, ಎಂಥ ತೇಜಸ್ಸು! ನನಗೇನೋ ಶುಭಕಾಲ ಬಂದಿದೆ ಎಂಬ ಭಾವವು ಅಂತರಾತ್ಮಕೆ ಹೊಳೆದು ಒಳಗೆ ಹೋಗಿ ಹಬೆಯಾಡುತ್ತಿರುವ ಅನ್ನ, ತಿಳಿಸಾರು, ಪಲ್ಯಗಳನ್ನು ತಂದು ಪಾತ್ರೆಗೆ ಹಾಕಿದಳಂತೆ. ಅಲ್ಲೇ ಜಗುಲಿಯ ಮೇಲೆ ಕುಳಿತ ಪರಮಾತ್ಮನು ಮನಸಾರೆ ಹೊಟ್ಟೆ ತುಂಬ ಉಂಡು ಸಂತೃಪ್ತಿಯಿಂದ ತೇಗಿದನಂತೆ. ಇದೆಲ್ಲವನೂ ನೋಡುತಿದ್ದ ಪಾರ್ವತಿಯು ಮುಂದೆ ನಡೆಯಲಿರುವ ವಿಸ್ಮಯವನ್ನು ಊಹಿಸಿ ನಕ್ಕಳಂತೆ. ತನ್ನ ಹಸಿವನ್ನು ತಣಿಸಿದ ಅದರಲ್ಲೂ ತಿಳಿಸಾರಿನ ಜೀರಿಗೆ ಘಮವಿರುವ ಒಗ್ಗರಣೆಯ ದಿವ್ಯಾಮೃತಕ್ಕೆ ಒಲಿದ ಶಿವನು ಆ ಗೃಹಿಣಿಯ ದಾನಗುಣ ಮತ್ತು ಔದಾರ್ಯಕ್ಕೆ ಮೆಚ್ಚಿ ತನ್ನ ನಿಜರೂಪ ತೋರಿ, ಸಕಲೈಶ್ವರ್ಯವನ್ನು ಕರುಣಿಸಿದನಂತೆ. ಆಮೇಲೆ ಆಕೆಗೆ ಹೇಳಿದನಂತೆ: ಅಡುಗೆಗೆ ನೀನು ತೋರಿಸಿದ ಒಗ್ಗರಣೆಯೇ ನನ್ನನ್ನು ಕಟ್ಟಿ ಹಾಕಿತು. ಅದರಿಂದಲೇ ನೀನೂ ಸಿರಿವಂತಳಾದೆ. ಇನ್ನು ಮೇಲೆ ಸುತ್ತಮುತ್ತಲ ಈ ಪ್ರಾಂತ್ಯವೆಲ್ಲಾ ಒಗ್ಗರಣೆಯಿಂದ ಶೋಭಿಸುವ ಓಗರಗಳಿಂದ ತುಂಬಿ ತುಳುಕಲಿ, ನನ್ನ ಭಕ್ತರು ನೈವೇದ್ಯಕಿಡುವ ಎಲ್ಲ ಖಾರದ ಖಾದ್ಯಗಳಿಗೂ ಒಗ್ಗರಣೆ ಇರಲಿ. ಆಗ ನಾನು ಅದರ ಸುವಾಸನೆಯ ಮೂಲಕವೇ ಸ್ವಾದವನ್ನು ಅನುಭವಿಸುವೆ. ಒಗ್ಗರಣೆಯೇ ನನ್ನನ್ನೂ ನಿಮ್ಮನ್ನೂ ಬೆಸೆಯುವ ತಂತು! ಹೀಗೆ ಸಾಕ್ಷಾತ್ ಜಗದೀಶ್ವರನೂ ಈ ಒಗ್ಗರಣೆಯ ಮೋಹದಿಂದ ಮತ್ತನಾದನು; ತನ್ನ ಸದ್ಭಕ್ತ ಮಹಾಜನಗಳು ಅರ್ಪಿಸುವ ನೈವೇದ್ಯವನು ಸ್ವೀಕರಿಸಿ ಸಂತಸಪಡುವನು ಎಂಬಲ್ಲಿ ಈ ಒಗ್ಗರಣೆಯ ಮಹಿಮೆ ಎಂಬ ಶಿವಕತೆ ಮುಕ್ತಾಯಗೊಂಡಿತು!

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ                                           

22 Responses

  1. Hema Mala says:

    ಬರಹದ ಒಗ್ಗರಣೆಯ ಘಮಲಿಗೆ ನಾಸಿಕವೂ ಮನವೂ ಅರಳಿದುವು. ತಾವು ಡಾಕ್ಟರೇಟ್ ಪ್ರಬಂಧ ಮಂಡಿಸಿರುವುದು ಪಾಕಶಾಸ್ತ್ರದ ಬಗ್ಗೆಯಾ ಅಂತ ನನಗೆ ಗುಮಾನಿ!

    • MANJURAJ H N says:

      ನಿಮ್ಮ ಗುಮಾನಿಯು ಹಾಗೇ ಇರಲಿ…….!

      ಈ ರೀತಿಯೂ ಮೆಚ್ಚುಗೆಯನು ವ್ಯಕ್ತಪಡಿಸಬಹುದೆಂಬುದನು ತೋರಿಸಿ ಕೊಟ್ಟಿರಿ ನೀವು!!

      ಅನು-ಭವಿಸಿ ಬರೆದದ್ದು ಸಾಹಿತ್ಯ; ಉಳಿದುದೆಲ್ಲ ಕೇವಲ ವರದಿ ಎಂದಿದ್ದರು ಕಾರಂತರು.
      ನಿಮ್ಮ ಶ್ಲಾಘನೆಯ ಮಾತು ಮತ್ತು ಪ್ರಕಟಿಸಿ ತೋರಿದ ಪ್ರೀತಿ – ಇವೆರಡಕೂ ನಾನು ಆಭಾರಿ, ಪ್ರತೀ ಭಾರಿ!

      ಒಗ್ಗರಣೆಯ ಘಮಲು ಮನವನೂ ಅರಳಿಸಿತೆಂದು ತಿಳಿದ ಮೇಲೆ ನಾನೇ ಸುರಹೊನ್ನೆಯಲಿ
      ಇನ್ನೊಮ್ಮೆ ಓದಿದೆ. ನಿಜ. ಆಯ್ದು ಹಾಕಿದ ಚಿತ್ರಗಳೂ ಬರೆಹದ ಬೆಲೆಯನ್ನು ಹೆಚ್ಚಿಸಿವೆ. ಇದಕಾಗಿ ಕೃತಜ್ಞತೆ.

      ಧನ್ಯವಾದ ಮೇಡಂ ನಿಮಗೆ ಮತ್ತು ಸುರಲೋಕದ ಹೊನ್ನೆಗೆ.

      -ಮಂಜುರಾಜ್

  2. ವಾವ್..ಈ..ಸರ್..ಯಾವುದೇ ವಿಷಯವನ್ನಾರಿಸಿಕೊಳ್ಳಲಿ ತಲಸ್ಪರ್ಷಿಯಾಗಿ..ಬರೆಯುತ್ತಾರೆ..ನನಗೆ ನಾವು ಓದುತ್ತಿರುವ ಕಾಲದಲ್ಲಿ..ಸಿಕ್ಕಿದ್ದ..ಗುರುಗಳ…ನೆನಪಾಗುತ್ತದೆ……ಒಗ್ಗರಣೆ..ಲೇಖನಕ್ಕೆ..ನನ್ನಕಡೆಯಿಂದ ತಳಹಿಡಿಯದ..ಸೀಯದ..ಒಗ್ಗರಣೆ..

    • MANJURAJ H N says:

      ನೀವೆಲ್ಲ ಅರಿಯದ, ಮಾಡದ ಅಡುಗೆಯ ಒಗ್ಗರಣೆಯೇ! ಎಷ್ಟು ಪಳಗಿದ ಕೈಗಳು ನಿಮ್ಮವು.
      ನಾನೇನೋ ಬರೆದುಬಿಟ್ಟೆ; ಆದರೆ ಆಮೇಲೆ ಸುರಹೊನ್ನೆಗೆ ಕಳಿಸುವಾಗ ಸಂಕೋಚಗೊಂಡೆ.

      ಮಡದಿಯಿದ್ದಾಗ ಅಡುಗೆಯ ಮನೆಗೇ ಹೋಗದ ನಾನು ಹೀಗೆ ಬರೆದು, ಹೆಡ್ಡತನದಿಂದ
      ಏನೋ ತಪ್ಪಾಗಿ, ಬರೆಹದಲ್ಲಿ ಬತ್ತಲಾದರೆ? ಎಂದು ಆತಂಕ ಕಾಡಿತು.

      ನನಗೇ ಗೊತ್ತಿಲ್ಲದೇ ಬರೆಸಿಕೊಳ್ಳುವಂಥ ವಸ್ತುಗಳಿವು. ಇಷ್ಟವಾಗಿದ್ದಕ್ಕೆ ತ್ಯಾಂಕ್ಸ್‌ ಮೇಡಂ.

      ಈ ಮೂಲಕ ನಿಮ್ಮ ಗುರುಗಳು ನೆನಪಾಗಿದ್ದಕ್ಕೆ ನಾ ಧನ್ಯ. ಹಿಂದಿನ ಕಾಲದ ಗುರುಗಳೆಂದರೆ ದೇವರು ಅಷ್ಟೇ.

      -ಮಂಜುರಾಜ್

      • Padma Anand says:

        ಮಾಡ್ರನ್ ಸೊಸೆಯೊಬ್ಬಳು ಪಾಯಸಕ್ಕೆ ದ್ರಾಕ್ಷಿ ಗೋಡಂಬಿ ಒಗ್ಗರಣೆ ಕೊಡುತ್ತೇನೆ ಅತ್ತೇ ಎಂದಳಂತೆ.
        ಅಡುಗೆಯ ಕಿಂಗ್ ಮೇಕರ್ ಒಗ್ಗರಣೆ ಕುರಿತಾದ ಸೊಗಸಾದ ಲೇಖನ.
        ಅಡುಗೆ ಮಾಡಲು ಬರದಿದ್ದರೂ ಲಿಂಗಭೇದವಿಲ್ಲದರ ಬೆಂಕಿ ಹಚ್ಚಲು ಕಲಿತವರಿದ್ದಾರೆ ಎಂಬುದು ಒಪ್ಪಿಕೊಳ್ಳಬಹುದಾದ ಸತ್ಯ.

  3. ಮಹೇಶ್ವರಿ ಯು says:

    ನಿಮ್ಮ ಒಗ್ಗರಣೆ ಪುರಾಣದಲ್ಲಿ ಏನುಂಟು ಏನಿಲ್ಲ. ಪಾಕಶಾಸ್ತ್ರ, ವ್ಯಾಕರಣ, ಭಾಷಾವಿಜ್ಞಾನ, ಸಾಹಿತ್ಯ, ಪುರಾಣ ಕತೆ! ಅಬ್ಬಬ್ಬಾ. ಸವ೯ಂ ಒಗ್ಗರಣೆ ಮಯಂ.

    • MANJURAJ H N says:

      ಒಗ್ಗರಣೆ ಪುರಾಣ! ಓಹ್!!‌ ಬರೆಹಕೆ ನಿಜವಾದ ಸೂಕ್ತ ಶೀರ್ಷಿಕೆ. ಧನ್ಯವಾದ ಮೇಡಂ.

      ಸದ್ಯ, ಇವನದೇನು, ಇವನದೊಂದು ವಗ್ಗರಣೆ ಅಂತ ಮುಖ ಸಿಂಡರಿಸದೇ ಪೂರ್ತ
      ಓದಿದ್ದೀರಿ. ಮೆಚ್ಚಿದ್ದೀರಿ. ತುಂಬ ಸಂತೋಷವಾಯಿತು. ಓದಿದ ಮೇಲೆ ಒಂದು ಮಂದಹಾಸ
      ಮೂಡಿದರೆ ಅಲ್ಲಿಗೆ ಸಾರ್ಥಕ, ಬರೆದದ್ದು. ಇಷ್ಟೇ ಜೀವ ಮತ್ತು ಜೀವನ.

      ಧನ್ಯವಾದ ಮೇಡಂ ಪ್ರತಿಕ್ರಿಯಿಸಿದ್ದಕ್ಕೆ.

  4. ನಯನ ಬಜಕೂಡ್ಲು says:

    ಸರಳ ವಿಚಾರದಲ್ಲಿ ಆದರೆ ಘಮ ಅನುಪಮಾ. Nice

    • MANJURAJ H N says:

      ಧನ್ಯವಾದ ಮೇಡಂ. ನಿಮ್ಮ ಒಂದೇ ಸಾಲಿನ ಪ್ರತಿಕ್ರಿಯೆಯಲಿ ಎಲ್ಲವನೂ
      ಹುದುಗಿಸಿಟ್ಟಿದ್ದೀರಿ. ಅನುಪಮ ಘಮವ ಅನುಭವಿಸಿದ ನಿಮಗೆ ನಾನು ಆಭಾರಿ.

      ಪ್ರತಿಕ್ರಿಯೆಗೆ ತ್ಯಾಂಕ್ಸು.

  5. ಜಯಪ್ರಕಾಶ್ says:

    ಇರುವೆ ನಾನು ಎಲ್ಲ ಕಡೆ ಇರುವೆ

  6. ಎನ್ ನಾಗರಾಜು says:

    ಬಹಳ ಪಸಂದಾಗೈತೆ. ಸುಧೀರ್ಘವಾಯಿತು ಅನ್ಸುತ್ತೆ. ಈ ದಿನಗಳಲ್ಲಿ ಅಡುಗೆ ಬಾರದ ಗಂಡುಗಳಿಲ್ಲ ಆದರೆ ಹೆಣ್ಣು ಗಳಿರಬಹುದು. ಸೌದೆ ಒಲೆ ಹೋದ ಮೇಲೆ ಅಡುಗೆ
    ಈಝಿಯಾಗಿದೆ.

  7. Roopa manjunath says:

    ಅಂತೂ ಇಂತೂ ನಿಮ್ಮ ಸಾಹಿತ್ಯದಲ್ಲಿ ಇತ್ತೀಚೆಗೆ ಅಡುಗೆಯ ಮನೆಯ ಘಮಲು ಹೆಚ್ಚು ಕಾಣುತ್ತಿದೆ ಸರ್. ನಿಮ್ಮ ಲೇಖನಗಳನ್ನ ಓದಿದಾಗ ನೀವೆಷ್ಟು ಪಾಕಪ್ರವೀಣರು ಎಂದು ಸಾಬೀತಾಗುತ್ತದೆ. ನಿಮ್ಮ ಲೇಖನಗಳಿಂದ ಹೆಂಗಸರೂ ಅಡಿಗೆ ಬಗ್ಗೆ ಟಿಪ್ಸ್ ತೆಗೆದುಕೊಳ್ಳಬಹುದಾದ ಲಾಭ ಇದೆ. ಸೋ…… ಹೀಗೆ ಬರೀತಾ ಇರಿ ಸರ್.

  8. ಗೌತಮಿ says:

    ನಿಮ್ಮ ಪ್ರತಿ ಬರಹಗಳೂ ಒಗ್ಗರಣೆಯಂತೆ ಅದ್ಭುತ ಸರ್ ನಿಮ್ಮನ್ನು ಗುರುಗಳಾಗಿ ಪಡೆದ ನಾವೇ ಧನ್ಯರು.

  9. Sandhya Dwarakanath says:

    Sir oggaraneyendu shurumaadi oggaraneyinda baduku sampannagolisikonda katheya Tanaka adbhutavaagittu.

  10. Padmini Hegde says:

    ಒಗ್ಗರಣೆಯ ಘಮಲು ಜೋರಾಗಿದೆ!

  11. ಶಂಕರಿ ಶರ್ಮ says:

    ಅಡುಗೆಯ ಸುಸಂಪನ್ನತೆಯಾಗಿ ಮೂಡಿಬರುವ ಒಗ್ಗರಣೆಯ ವೈವಿಧ್ಯತೆಗೆ ಮನ ಸೋತುಹೋಯಿತು. ಅದರ ನವಿರಾದ ಹಾಸ್ಯ ಬೆರೆತ ಪರಿಮಳದಲ್ಲಿ ಸುರಹೊನ್ನೆಯು ತೇಲಿತು! ಶಿವ ಜೀರಿಗೆ ಒಗ್ಗರಣೆಯ ಊಟ ಉಂಡಷ್ಟೇ ತೃಪ್ತಿಯಾಯಿತು.. ಜೊತೆಗೆ ನಮ್ಮ ಮನೆಗೆ ಬಂದಿದ್ದ ಅಡುಗೆ ಭಟ್ಟರು ಸಾಸಿವೆ ಡಬ್ಬದ ಪಕ್ಕದಲ್ಲಿದ್ದ ಚಾ ಪುಡಿಯನ್ನು ಒಗ್ಗರಣೆಗೆ ಹಾಕಿ; ನಮ್ಮ ಮನೆಯಲ್ಲಿದ್ದ ಸಾಸಿವೆ ಶಬ್ದ ಮಾಡುವುದಿಲ್ಲವೆಂದು ದೂರಿದ ಘಟನೆ ನೆನಪಾಗಿ ನಗು ಉಕ್ಕಿಬಂತು. ಸೊಗಸಾದ ಒಗ್ಗರಣೆಗೆ ವಂದನೆಗಳು.

    • MANJURAJ says:

      ಓಹ್ ! ಹೊಸ ವಿಚಾರ…..

      ಏನೆಲ್ಲ ಅವಾಂತರಗಳು ಈ ಒಗ್ಗರಣೆಯಿಂದ !!

      ನಿಮ್ಮ ಪ್ರತಿಕ್ರಿಯೆಯಲೇ ಕಾವ್ಯಮಯತೆ ಇದೆ,
      ಒಗ್ಗರಣೆಯ ಘಮದಂತೆ.

      ಧನ್ಯವಾದ ಮೇಡಂ

  12. Manju S says:

    Nice sir, Voggarane is value addition in the art of cooking,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: