ಜಗದ ಪುಣ್ಯ
ತಾಯಿ ಜಗದ ಇನ್ನಾರಿಗಿಲ್ಲದ
ಪುಣ್ಯ ವಿಶೇಷಗಳ ನಮಗೆ ಕೊಟ್ಟಿರುವೆ
ನಿನ್ನ ಎದೆಯ ಎರಡು ಕಳಶ ಕಾಂಚನಗಂಗ
ಕೈಲಾಸ ಶಿವನ ನೆಲೆ ಅಲ್ಲಿ
ಮಳೆ ಬಿಸಿಲು ಚಳಿಗಾಲಕ್ಕೆ
ಮೈಗೊಡದೆ ಸದಾ ಪ್ರವಹಿಸುವ
ಪುಣ್ಯನದಿ ಗಂಗೆ ಭಾರತದರ್ಧ
ನೆಲವನೆಲ್ಲ ಸಮೃದ್ಧಗೊಳಿಸಿದ
ಶಿಖರೋಪಮ ಪುಣ್ಯಧಾಮ ಪುಣ್ಯಜಲ
ಕಂದಹಾರದ ಸಿಂಧೂರ ನಿನ್ನ
ಹಣೆ ಶೃಂಗಾರ ಬೊಟ್ಟು ತಾಯಿ
ದಕ್ಷಿಣದಿ ದಕ್ಷಿಣೋತ್ತರದಿ
ನಿಂತ ಸಹ್ಯಾದ್ರಿ ಕಡಲ ಸಿಹಿ
ನೀರ ಮೊಗೆ ಮೊಗೆದು ಪಶ್ಚಿಮೋತ್ತರ
ಉಣಬಡಿಸುವ ಉನ್ನತ ಪರ್ವತಶ್ರೇಣಿ
ಗುಡ್ಡೆ ಗುಡ್ಡ ಒಣ ನೆಲದಿ
ಉತ್ತರೆಯ ನಾಲ್ಕು ತಂಪುಹನಿ
ಸಮೃದ್ಧ ಬಿಳಿಜೋಳ ಬೆಳೆವ
ಕಪ್ಪುನೆಲ ಇನ್ನೆಲ್ಲಿಹುದು ತೋರು
ಇದು ಅಲ್ಲೆಂಬ ಇಂಚು ನೆಲವನು
ಕಾಣೆ ತಾಯಿ
ನೀ ಜಲಸಮೃದ್ಧಿ
ಪವಮಾನ ಸಮೃದ್ಧಿ ಜನ ಸಮೃದ್ಧಿ
ಸಮೃದ್ಧಿಗಳೆ ಆಕಾರಗೊಂಡ
ಸರ್ವೇಶ್ವರಿ ತಾಯಿ ನೀನು
ಇಲ್ಲಿಲ್ಲದ ಜನ ಇಲ್ಲಿಲ್ಲದ ಧರ್ಮ
ಕೂಡಿ ಒಂದೆಡೆ ಇನ್ನೆಲ್ಲಿಹವು
ಇಲ್ಲಿಲ್ಲದ ಚಿಂತನೆಯ ಹರಹು
ಎಲ್ಲಿದೆ ತೋರು
ಹರಿದ ಬಟ್ಟೆಯ ಸೂಜಿಯಲಿ
ಹೊಲಿವ ಕೈಗೆ ಗುಂಡಿಕ್ಕಿ ಕೊಂದ ಪಠಾಣ
ನಾವೆಲ್ಲ ಒಂದೆಂದು ತೆರೆದ ಕೈಯಲಿ
ಅಪ್ಪಲು ಹೊರಟವನ ಹೂಹಾರ ಸಿಡಿಸಿ
ಕೊಂದ ದಕ್ಷಿಣದ ಕಲಿ
ನಿನ್ನ ಔರಸ ಪುತ್ರ
ನಿನ್ನತರಂಗದ ಕುಲಪುತ್ರ
ಎನಿಸಿ ಮೆರೆದ
ಎಲ್ಲರೂ ಎಲ್ಲವೂ ಸೇರಿ ನಾನಾದೆನೆಂಬ
ಎಚ್ಚರವೀವ ಹಬ್ಬಹರಿದಿನದಲು
ರಕ್ತಸಿಕ್ತ ಖಡ್ಗ ಝಳಪಿಸಿ
ಹೆಮ್ಮೆಯ ನಗು ಬೀರುವ
ಜನ ಮನದ
ಧೀಶಕ್ತಿಗೆ ವಿವೇಕದಾವರಣ
ತೊಡಿಸು ತಾಯಿ
ಎಚ್ಚರದ ಧೀಶಕ್ತಿ ಪ್ರಕಾಶಿತೆ ತಾಯಿ!
ನಮ್ಮ ಅಹಮಿಕೆಯ ಒಳಗೆ
ನಾನೂ ಅವನೂ ಇವನೂ
ಅದೂ ಇದೂ ಎಲ್ಲವೂ
ನಿನ್ನಲಿ ನೆಲೆಗೊಂಡ ಪ್ರಾಣ
ಎನುವ ವಿವೇಕೋನ್ನತಿ
ಕರುಣಿಸು ಸರ್ವೇಶ್ವರಿ
ಜೀವ ತಳೆಯಲಿಹ ಮೃದ್ವಂಗಿಯೂ
ವಿಕಸನ ಪಥದಿ ಮುಕ್ತ ಗಾಮಿನಿಯಾಗುವ ತೆ ರದಿ
ಬೆಟ್ಟದ ಒಡಲ ಜಗನ್ಮಾತೆ
ಅನುಗ್ರಹಿಸು ಅನುಗ್ರಹಿಸು
ವಂದೇ ಮಾತರಂ ಸುಜಲಾ ಸುಫಲಾಂ
ಮಲಯಜ ಶೀತಲಾಂ ಸಸ್ಯಶ್ಯಾಮಲಾಂ
ಮಾತರಂ ವಂದೇ ಮಾತರಂ
-ಗಜಾನನ ಈಶ್ವರ ಹೆಗಡೆ
ಹೃದಯಸ್ಪರ್ಶಿ ಯಾಗಿದೆ
ಸೊಗಸಾಗಿದೆ
ತುಂಬಾ ಅರ್ಥಪೂರ್ಣ ವಾದ ಕವನ…ಸಾರ್ ಚೆನ್ನಾಗಿದೆ
ಭಾರತ್ ಮಾತಾ ಕೀ ಜೈ, ವಂದನೆಗಳು ಗುರುವೇ.
ಭಾರತಾಂಬೆಯ ಉತ್ಕೃಷ್ಟತೆಯೊಂದಿಗೆ ಉತ್ತಮ ಆಶಯವನ್ನು ಹೊಂದಿದ ಕವನ ಚೆನ್ನಾಗಿದೆ.
ಭಾರತಮಾತೆಯ ಸೌಂದರ್ಯವನ್ನು ಕೊಂಡಾಡುತ್ತಲೇ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿರುವ ಚಂದದ ಕವಿತೆ.