ಥೀಮ್-ಬರಹ

ಕಾಡಿದ ಕೆಪ್ಪಟ್ರಾಯ

Share Button

ಏಪ್ರಿಲ್ ತಿಂಗಳ ಮೊದಲ ವಾರವದು.  ನಮ್ಮ ಮನೆಯಲ್ಲಿ ಹಾಗೆಯೇ ತೀರಾ ಹತ್ತಿರದ ಬಂಧುಗಳ ಶುಭಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಗೆ ಕಾಲೇಜಿನ ಪಾಠಪ್ರವಚನಗಳಿಗೆ ಕೊಂಚವೂ ವ್ಯತ್ಯಯವಾಗದಂತೆ ವ್ಯಸ್ತಳಾಗಿದ್ದೆ. ಹೇಳಿಕೊಳ್ಳಲಾಗದಂತಹ ಸುಸ್ತು ದೇಹವನ್ನು ಕಾಡುತ್ತಿತ್ತು. ಜೊತೆಯಲ್ಲಿ   ಮೈ ಕೈ ನೋವು, ಸ್ನಾಯು ಸೆಳೆತ,  ಜ್ವರ. ದಿನಕ್ಕೆರಡು ಪ್ಯಾರಸೆಟಾಮಲ್ ಮಾತ್ರೆ ನುಂಗುತ್ತಾ ದೈನಂದಿನ ಕೆಲಸಗಳು ಯಥಾಪ್ರಕಾರ ಸಾಗುತ್ತಿದ್ದವು. ಅದೊಂದು ದಿನ ರಾತ್ರೆ, ಕಿವಿಯ ಬಳಿ ಕೆನ್ನೆ ಬೀಗಿದಂತಹ ಅನುಭವ.ಇರಲಿ  ನಾಳೆ ನೋಡೋಣವೆಂದು ಹಾಗೇ ಮಲಗಿದೆ. ಆದರೂ  ನನಗೆ ಏನಾಗಿರಬಹುದು ಎಂಬ ಯೋಚನೆ ಕಾಡುತ್ತಲೇ ಇತ್ತು.ಬೆಳಗಿನ ಜಾವ ನಾಲ್ಕು ಘಂಟೆಗೆ ನಿದ್ರೆಯಿಂದೆದ್ದು ಕನ್ನಡಿಯ ಎದುರು ನಿಂತಾಗ ನನ್ನ ವಿಕಾರಗೊಂಡ ಕೆನ್ನೆ ನೋಡಿ ನನಗೇ ಗಾಬರಿಯಾಗಿತ್ತು. ಅಯ್ಯೋ, ಈ ಮುಖ ಹೊತ್ತುಕೊಂಡು ನಾನು ಕಾಲೇಜಿಗೆ ಹೇಗೆ ಹೋಗುವುದು ಎಂಬುದೇ ಮೊದಲಿಗೆ ಬಂದ ಯೋಚನೆ. ವೈದ್ಯೆಯಾಗಿರುವ  ಮಗಳನ್ನು ಎಬ್ಬಿಸಿದೆ. “ನೋಡು, ನನಗೇನೋ ಆಗಿದೆ” ಅಂದೆ ಗಾಬರಿಯಿಂದ. “ಕಾಣುವಾಗ ಮಂಪ್ಸ್ ಹಾಗೇ ಕಾಣುತ್ತದೆ. ಇವತ್ತು ನಿನ್ನ ಮಾಮೂಲಿ ಹೋಮಿಯೋ ವೈದ್ಯರ ಬಳಿ ಹೋಗು” ಎಂದಳು. ಆ ಬಳಿಕ ಕೆನ್ನೆ ಊದಿದ ಜಾಗಕ್ಕೆ ಸ್ವಲ್ಪ ಬಿಸಿನೀರಿನ ಶಾಖ, ತುಸು ಸಮಯದ ಬಳಿಕ ಮಂಜುಗಡ್ಡೆಯನ್ನಿರಿಸಿದಳು. ನನಗಂತೂ ಹಾಯೆನಿಸಿತು. ಬೆಳಿಗ್ಗೆ ಎದ್ದಾಗ ಇದ್ದುದಕ್ಕಿಂತ ಕೆನ್ನೆ ಊದಿಕೊಂಡದ್ದು ಕಡಿಮೆ ಆದಂತೆ ಅನ್ನಿಸಿತು. ಬೆಂಗಳೂರಿನಿಂದ ತನ್ನ ಮಕ್ಕಳ ಜೊತೆ ಬಂದಿದ್ದ ಸಣ್ಣ ತಂಗಿಯೂ ನನ್ನ ಮನೆಯಲ್ಲಿದ್ದಳು. ಈ ಸಲ ಬೆಂಗಳೂರಿನಲ್ಲಿ ತುಂಬಾ ಮಕ್ಕಳಿಗೆ ಕೆಪ್ಪಟ್ರಾಯ ಬಂದಿದೆ ಅಂದಾಗ ಮಗಳು ಹೇಳಿದಂತೇ ನನಗೂ ಅದೇ ಬಂದಿರಬೇಕೆಂದುಕೊಂಡೆ. ಆದರೂ, ನನ್ನ ಮಾಮೂಲಿ ಹೋಮಿಯೋಪತಿ ವೈದ್ಯರ ಭೇಟಿ ಮಾಡಲೇಬೇಕಿತ್ತು. ಎಂದಿನಂತೆ ಕಾಲೇಜಿಗೆ ಹೋದೆ. “ನಾನಿದ್ದೇನೆ. ಪ್ರಾಕ್ಟಿಕಲ್ ನಾನು ಸುಧಾರಿಸುತ್ತೇನೆಂದು ಹೇಳಿದ್ದರಿಂದ” ನನ್ನೋರ್ವ  ಸಹೋದ್ಯೋಗಿ ರಜೆಯ ಮೇಲಿದ್ದರು. ನಾನೂ ರಜೆ ಹಾಕಿದರೆ ವಿದ್ಯಾರ್ಥಿಗಳಿಗೆ ಪ್ರಯೋಗಶಾಲೆಯಲ್ಲಿ ಕಷ್ಟವಾಗುವುದಲ್ವಾ ಅನ್ನುವ ಆಲೋಚನೆ ಮನದೊಳಗೆ. 

ಎರಡು ಘಂಟೆ ತರಗತಿ ಹಾಗೂ ನಾಲ್ಕು ಘಂಟೆಯ ಪ್ರಯೋಗಶಾಲೆಯ ಕರ್ತವ್ಯ ನಿರ್ವಹಿಸಿದ ಬಳಿಕ ನಾನು ಯಾವಾಗಲೂ ಭೇಟಿ ನೀಡುವ ಹೋಮಿಯೋ ವೈದ್ಯರ ಚಿಕಿತ್ಸಾಲಯಕ್ಕೆ ಹೋದೆ. ಬೆಳಿಗ್ಗೆ ಭೇಟಿಯ ಸಮಯ ನಿಗದಿಪಡಿಸಲು ಚಿಕಿತ್ಸಾಲಯದ ಸ್ವಾಗತಕಾರಿಣಿಗೆ ಕರೆ ಮಾಡಿದಾಗ ಆ ದಿನದ ಎಲ್ಲಾ ಭೇಟಿಯ ಅವಧಿಯೂ ಬುಕ್ ಆಗಿದೆ ಅಂದಿದ್ದರು. ಆದರೆ ನನಗೆ ವೈದ್ಯರನ್ನು ಕಾಣಲೇಬೇಕಿರುವ ಅನಿವಾರ್ಯತೆ ಇದೆ ಅಂದಿದ್ದಕ್ಕೆ ಆಯ್ತು ಬನ್ನಿ ಅಂದಿದ್ದರು. ವೈದ್ಯರ ಬಳಿ ಹೋದಾಗ “ಓ, ಇದು ಕೆಪ್ಪಟ್ರಾಯವೇ. ಸಂಶಯವೇ ಇಲ್ಲ. ನಿಮ್ಮ ಮಗಳು ಸರಿಯಾಗಿಯೇ ಹೇಳಿದ್ದಾಳೆ.ಪಾರೋಟೈಟಿಸ್ ಅಂತ ಅವಳಿಗೆ ಹೇಳಿ. ಈ ಸಲ ಕೆಲವು ಕೇಸ್ ಬಂದಿವೆ. ನಾನೇ ಮದ್ದು ಕೊಡುತ್ತೇನೆ” ಅಂದರು. ಮುಂದುವರಿದು “ಇದು ಪ್ಯಾರೋಟಿಡ್ ಗ್ಲಾಂಡ್ ಅಂದರೆ ಲಾಲಾರಸ ಉತ್ಪಾದನೆ ಮಾಡುವ ಗ್ರಂಥಿ ಊದಿಕೊಂಡಿದೆ. ನೀವು ಹುಳಿ ಪದಾರ್ಥ ಸೇವನೆ ಮಾಡುವಾಗ ಸಿಕ್ಕಾಪಟ್ಟೆ ನೋವು ಬಂದರೆ ಹಂಡ್ರೆಡ್ ಪರ್ಸೆಂಟ್ ಕೆಪ್ಪಟ್ರಾಯನೇ ಅಂದರು. ನಾನು “ಕಾಲೇಜಿನ ದೈನಂದಿನ ಕರ್ತವ್ಯಗಳಿಗೆ ಹಾಜರಾಗಬಹುದೇ” ಎಂದು ಪ್ರಶ್ನಿಸಿದೆ. ಹೋಗಬಹುದೆಂದರು. ಕೆಪ್ಪಟ್ರಾಯ ಒಬ್ಬರಿಂದೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆಂದು ಕೇಳಿ ಗೊತ್ತಿತ್ತು. ಆಗ ವೈದ್ಯರು ಹೇಳಿದ ಮಾತಿದು ” ಕೆನ್ನೆ ಊದಿಕೊಳ್ಳುವುದು ಕೆಪ್ಪಟ್ರಾಯದ ಕಡೆಯ ಹಂತ. ಹರಡುವುದಿದ್ದರೆ ಈ ಮೊದಲೇ ಹರಡಿ ಆಗಿರುತ್ತಿತ್ತು”. ಹಾಗಾಗಿ ಕಾಲೇಜಿಗೆ ರಜೆ ಹಾಕಲಿಲ್ಲ. ಆದರೆ ಎದುರು ಸಿಕ್ಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಹೋದ್ಯೋಗಿಗಳೆಲ್ಲರೂ ನನ್ನ ಮುಖ ನೋಡಿ ಬೇಸರಪಟ್ಟುಕೊಳ್ಳುತ್ತಿದ್ದರು. ತರಗತಿ ತೆಗೆದುಕೊಳ್ಳುವಾಗ ಮಾತನಾಡಲು ಸ್ವಲ್ಪ ಪ್ರಯಾಸ ಪಡಬೇಕಿತ್ತು.  ದವಡೆಗಳು ಜೊತೆಗೆ ಹಲ್ಲುಗಳು ಸಿಕ್ಕಾಪಟ್ಟೆ ನೋಯುತ್ತಿದ್ದವು. ಆಹಾರ ಜಗಿಯಲಾಗುತ್ತಿರಲಿಲ್ಲ. ಕೆಪ್ಪಟ್ರಾಯಕ್ಕೆ ಹಳ್ಳಿ ಮದ್ದು ಯಾವುದೆಂದು ಅಮ್ಮ ಇದ್ದಿದ್ದರೆ ಹೇಳುತ್ತಿದ್ದರು ಅನ್ನಿಸದೆ ಇರಲಿಲ್ಲ. ಹತ್ತು ತಿಂಗಳ ಮೊದಲಷ್ಟೇ ನಮ್ಮನ್ನಗಲಿದ  ಅಮ್ಮನ ನೆನಪು ತೀವ್ರವಾಗಿ ಕಾಡಿದ್ದು ಸುಳ್ಳಲ್ಲ.

ಎರಡು ದಿನದ ಬಳಿಕ  ನಮ್ಮ ಸಹೋದ್ಯೋಗಿ ಓರ್ವರು ಅವರ ಮಗಳಿಗೆ ಕೆಪ್ಪಟ್ರಾಯ ಬಂದಿತ್ತೆಂದು ಹಾಗೂ ಅದಕ್ಕೆ ತುಳುವಿನಲ್ಲಿ ಪೆತ್ತತಜಂಕ್ ಎಂದು ಕರೆಯಲ್ಪಡುವ ಸೊಪ್ಪನ್ನು, ತುಂಬೆ ಗಿಡದ ಹೂವಿನ ಜೊತೆ ಅರೆದು ಲೇಪಿಸಿದರೆ ಬೇಗನೇ ಗುಣವಾಗುವುದೆಂದುದು ಮಾತ್ರವಲ್ಲ, ತಮ್ಮ ಮನೆಯ ಸಮೀಪದಿಂದ ಆ ಎಲೆಗಳನ್ನು ತಂದುಕೊಟ್ಟರು ಸಹಾ. ಹೋಮಿಯೋಪತಿಯ ಮದ್ದು, ಮಂಜುಗಡ್ಡೆಯ ಶೈತ್ಯದ ಹಾಗೆಯೇ ಬಿಸಿನೀರಿನ ಶಾಖ ಜೊತೆಗೆ ಪೆತ್ತತಜಂಕ್ ಗಿಡದೆಲೆಯ ಲೇಪ ಇವುಗಳೆಲ್ಲವೂ ಸೇರಿ ಕೆಪ್ಪಟ್ರಾಯ ಬಾಧೆಯಿಂದ ಹೊರಬರಲು ಬರೋಬ್ಬರಿ ಹತ್ತು- ಹದಿನೈದು ದಿನಗಳೇ ಬೇಕಾಯಿತು.ನನ್ನ ಬಳಿ  “ಅಲ್ಲಾ ಮಾರಾಯರೇ, ಕೆಪ್ಪಟ್ರಾಯ ಮಕ್ಕಳಿಗೆ ಬರುವುದಲ್ವಾ?ನಿಮಗೆ ಹೇಗೆ ಬಂತು?” ಅಂತ ಪ್ರಶ್ನಿಸಿದವರೇ ಜಾಸ್ತಿ.

ಲಾಲಾರಸ ಉತ್ಪಾದನೆ ಮಾಡುವ ಪೆರೊಟಿಡ್ ಗ್ರಂಥಿಗಳ ಊತ ಅಥವಾ ಸೋಂಕು- ಹಳ್ಳಿ ಭಾಷೆಯಲ್ಲಿ  ಕೆಪ್ಪಟ್ರಾಯ ಎಂದೇ ಕರೆಯಲ್ಪಡುವ ಈ ಸಮಸ್ಯೆಗೆ ಮಂಗನ ಬಾವು-ಮಂಪ್ಸ್ ಅಂತ ಕರೆಯುತ್ತಾರೆ. ಗದ್ದಕಟ್ಟು ರೋಗವೆಂದೂ ಹೇಳುತ್ತಾರೆ. ಈ ಕೆಪ್ಪಟ್ರಾಯ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವೈರಸ್ ಮೂಲಕ  ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ವಯಸ್ಕರಿಗೆ ಬರುವುದು ಕಡಿಮೆ ಅನ್ನುತ್ತಾರೆ ಹಾಗೆಯೇ ವಯಸ್ಕರಲ್ಲಿ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಅನ್ನುತ್ತಾರೆ.ಮೇಲ್ನೋಟಕ್ಕೆ ಈ ಕೆಪ್ಪಟ್ರಾಯ ಅಪಾಯಕಾರಿ ಅಲ್ಲವೆಂದರೂ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಜೀವಕ್ಕೆ ತೊಂದರೆ ಆಗಬಹುದು. ಮೆದುಳಿನ ಉರಿಯೂತ, ಮೇದೋಜೀರಕ ಗ್ರಂಥಿಯ ಉರಿಯೂತ, ಕಿವುಡುತನ ಹಾಗೆಯೇ ಪುರುಷರಲ್ಲಿ ಸಂತಾನಹೀನತೆಗೂ ಕಾರಣವಾಗಬಹುದು.  ಕೆಪ್ಪಟ್ರಾಯ ಅಥವಾ ಮಂಗನ ಬಾವು ರೋಗದ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತಾರೆಂದು ಗೊತ್ತಿದ್ದರೂ ಈ ಲೇಖನ ಬರೆಯಲು ಕೆಲವು ಕಾರಣಗಳು ಒಟ್ಟಾದವು.

ನಾವೆಲ್ಲಾ ಸಣ್ಣವರಿರುವಾಗ ಕೆಪ್ಪಟ್ರಾಯ ಎಲ್ಲಾ ಮಕ್ಕಳನ್ನು ಬಾಧಿಸುತ್ತಿತ್ತು.ನನ್ನ ದೊಡ್ಡ ತಂಗಿಗೂ ಬಂದಿತ್ತು. ಮಕ್ಕಳು ಹೈರಾಣಾಗುತ್ತಿದ್ದರು. ಕೆಲವು ವರ್ಷಗಳ ಹಿಂದಿನವರೆಗೂ  MMR ಲಸಿಕೆಯುಳ್ಳ ಚುಚ್ಚುಮದ್ದನ್ನು ಮೀಸಲ್ಸ್, ಮಂಪ್ಸ್, ರುಬೆಲ್ಲಾ ಬರಬಾರದೆಂದು ಮಕ್ಕಳಿಗೆ ಒಂಬತ್ತನೆಯ ತಿಂಗಳಿನಲ್ಲಿ ಕಡ್ಡಾಯವಾಗಿ ನೀಡಲಾಗುತ್ತಿತ್ತು. ಹಾಗಾಗಿ ಕೆಪ್ಪಟ್ರಾಯದ ಕಾಟ ಕಡಿಮೆಯಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ  ಈ ಚುಚ್ಚುಮದ್ದನ್ನು ಕಡ್ಡಾಯವಾಗಿ ನೀಡುತ್ತಿರಲಿಲ್ಲ ಎನ್ನುವ ವಿಷಯ ಗೊತ್ತಾಯಿತು. ಹಾಗಾಗಿ ಇತ್ತೀಚೆಗೆ ಮೂರ್ನಾಲ್ಕು ವರ್ಷಗಳಿಂದ ನಮ್ಮ ರಾಜ್ಯದ ವಿವಿಧ ಕಡೆಗಳಲ್ಲಿ, ನೆರೆ ರಾಜ್ಯಗಳಲ್ಲಿ, ದೇಶದ ಕೆಲವೆಡೆಗಳಲ್ಲಿ ಕೆಪ್ಪಟ್ರಾಯ ಬರುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಅನ್ನುವ ವಿಷಯ ಮನದಟ್ಟಾಯಿತು. ಕೆಪ್ಪಟ್ರಾಯ ರೋಗದ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕೆಂಬ ಗೂಗಲ್ ಜಾಲಾಡಿದಾಗ, ಕರ್ನಾಟಕದ ವಿವಿಧ ಸ್ಠಳಗಳಲ್ಲಿ ಕೆಪ್ಪಟ್ರಾಯ ಸಾಂಕ್ರಾಮಿಕ ಉಪಟಳ ಕಳೆದ ದಶಂಬರ್ ತಿಂಗಳಿನಿಂದಲೇ ಶುರುವಾಗಿದ್ದು ಇನ್ನೂ ಮುಂದುವರಿಯುತ್ತಲಿದೆ ಅನ್ನುವ ವಿಷಯ ಓದಿ ಆಶ್ಚರ್ಯವಾಯಿತು. ನಮಗೇ ಸಮಸ್ಯೆ ಬಂದಾಗ ಮಾತ್ರ ಆ ಸಮಸ್ಯೆ ಯಾಕೆ ಬಂತು, ಹೇಗೆ ಬಂತು, ಆ ಸಮಸ್ಯೆಗೆ ಪರಿಹಾರವೇನು ಎಂದು ಆಲೋಚಿಸುತ್ತೇವೆ. ಇಲ್ಲದಿದ್ದಲ್ಲಿ ಆ ಸಮಸ್ಯೆ ಬೇರೆಯವರನ್ನು ಕಾಡುತ್ತಿದೆ ಅನ್ನುವುದೇ ಗೊತ್ತಾಗುವುದಿಲ್ಲ ಅನ್ನಿಸಿತು.

ನನ್ನನ್ನು ನೋಡಿದವರು ನನಗೆ ಸಲಹೆ ನೀಡಿದ  ತರಹೇವಾರಿ ಮನೆಮದ್ದುಗಳನ್ನು ಪಟ್ಟಿ ಮಾಡಬೇಕೆಂದೆನಿಸಿತು. ಕೆಲವು ಗಿಡಗಳ ಪರಿಚಯವೂ ನನಗಿಲ್ಲ. ಅಲ್ಲದೆ ಆಡುಭಾಷೆಯ ಹೆಸರಷ್ಟೇ ಕೇಳಿ ಗೊತ್ತು. ನೋವಿರುವ ಕಡೆ ನಮ್ಮದೇ ಎಂಜಲು ಹಚ್ಚಬೇಕೆಂದು ಒಬ್ಬರು ಹೇಳಿದರೆ ಇನ್ನೊಬ್ಬರು ಚಂದನ ಲೇಪನ ಮಾಡಿದರೆ ಒಳ್ಳೆಯದೆಂದರು. ಅರಿಶಿನ ಹಚ್ಚಿದರೆ ಬಹಳ ಒಳ್ಳೆಯದು ಅಂದರು ಇನ್ನೊಬ್ಬರು. ತುಳುವಿನಲ್ಲಿ ಪೆತ್ತತಜಂಕ್ ಅಥವಾ ಎರ್ಮೆತಜಂಕ್ ಎಂದು ಕರೆಯುವ ಗಿಡದ ಹಸಿರೆಲೆಗಳ ಲೇಪದಿಂದ ಕೆಪ್ಪಟ್ರಾಯ ಬೇಗನೇ ವಾಸಿಯಾಗುವುದೆಂದು ಹಲವರು ಹೇಳಿದರು.ಅಂತರ್ಜಾಲದಲ್ಲಿ ಲಭ್ಯವಿರುವ ಮಕ್ಕಳ ಜಗಲಿ-ಎಳೆಯರ ಪ್ರತಿಭೆಯ ಪತ್ರಿಕೆಯಲ್ಲಿ, ಪೆತ್ತತಜಂಕ್ ಬಳ್ಳಿಯ ಬಗ್ಗೆ ನಿಷ್ಪಾಪಿ ಸಸ್ಯಗಳು-ಅನ್ನುವ ಶೀರ್ಷಿಕೆಯಸಂಚಿಕೆ 43ರಲ್ಲಿ  ಶಿಕ್ಷಕಿ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಅವರು ಬರೆದ ಲೇಖನವೊಂದನ್ನು ಓದಿದೆ.ಪೆತ್ತತಜಂಕ್ ಗಿಡಕ್ಕೆ  ಕನ್ನಡದಲ್ಲಿ ಹತ್ತಿ ಹಾಲಿನ ಸಸ್ಯ, ಕಾಡು ಹಾಲೆ ಬಳ್ಳಿ, ಸೀನುವ ರೇಷ್ಮೆ ಅನ್ನುವರಂತೆ.ಕವಟೆಕಾಯಿ ಮರದ (ಕುಂದಾಪುರದ ಕಡೆ ಜುಮ್ಮನ ಮರವೆನ್ನುವರು) ಹಾಗೂ ಹೆಂಟರೆ ಮರದ (ಯಾವುದೆಂದು ನನಗಂತೂ ಗೊತ್ತಿಲ್ಲ- ಕನ್ನಡ ಪದವೂ ಗೊತ್ತಿಲ್ಲ) ತೊಗಟೆಯ ಲೇಪ ಕೆಪ್ಪಟ್ರಾಯಕ್ಕೆ ರಾಮಬಾಣವೆಂದರು ಮಗದೊಬ್ಬರು.ತುಳುವಿನಲ್ಲಿ ಉಂಬುಗ ಎಂದು ಕರೆಯುವ ಸಸ್ಯದ ಎಲೆಯನ್ನು ಸುಣ್ಣದೊಂದಿಗೆ ಅರೆದು ಕೆಪ್ಪಟರಾಯ ಇರುವಲ್ಲಿಗೆ ಹಚ್ಚಿದರೆ ಅತಿ ಶೀಘ್ರದಲ್ಲಿ ಕಡಿಮೆಯಾಗುವುದೆಂದರು ನನ್ನಕ್ಕ (ಅಮ್ಮನ ಅಕ್ಕನ ಮಗಳು). ಉಂಬುಗ ಎಂದರೇನೆಂದು ಹುಡುಕಿದಾಗ ಬಿಳಿ ಉಮ್ಮತ್ತಿ ಅನ್ನುವುದು ಗೊತ್ತಾಯಿತು. ನೆಲದ ಸ್ಪರ್ಶವೇ ಇಲ್ಲದೆ ಉಳಿದ ಸಸ್ಯ ಯಾ ಗಿಡಗಳ ಸಹಾಯದಿಂದ ಬೆಳೆಯುವ ಬೆಳೆಯುವ  ಅಂತರಗಂಗೆ, ಮಂಗನಬಳ್ಳಿ ಎಂದು ಕರೆಯಲ್ಪಡುವ ಬಳ್ಳಿಯನ್ನು ಜಜ್ಜಿ, ಆ ರಸವನ್ನು ಕೆಪ್ಪಟ್ರಾಯ ಬಾವು ಇರುವ ಜಾಗಕ್ಕೆ ಲೇಪನ ಮಾಡಿದರೆ ಈ ಕಾಯಿಲೆ ಕಡಿಮೆ ಆಗುತ್ತದೆ ಅನ್ನುವ ವರದಿಯೊಂದನ್ನು ಓದಿದೆ.

ಲೇಖನವೊಂದನ್ನು ಬರೆಯಬೇಕು ಅಂತ ಕೆಪ್ಪಟ್ರಾಯ ಇದ್ದಾಗಲೇ  ಅನ್ನಿಸಿತ್ತು. ಈ ಲೇಖನ ಬರೆಯಲು ಆರಂಭ ಮಾಡುವಾಗ ನನ್ನ ವಿಭಾಗದ ಮುಖ್ಯಸ್ಥರಿಗೆ ಕೆಪ್ಪಟ್ರಾಯ ಕಾಣಿಸಿಕೊಂಡಿದೆ. ಕಣ್ಣಿಗೆ ಕಾಣದ ವೈರಸ್ ಎಲ್ಲಿಂದ ಬಂದಿದೆ ಅನ್ನುವುದು ಕಣ್ಣಿಗೆ ಕಾಣದ ಸತ್ಯ. ಆದರೆ ಕೆನ್ನೆಯೆರಡೂ ಊದಿರುವುದು ಕಾಣುವ ಸತ್ಯ.

ಲೇಖನದ ಕೊನೆಗೊಂದು ಕಿವಿಮಾತು- ಮಗುವಿನ ಪೋಷಕರು MMR ಲಸಿಕೆ ಕೊಡಿಸಿ. ಯಾರಿಗಾದರೂ ಕೆಪ್ಪಟ್ರಾಯದ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯವಂತೂ ಬೇಡವೇ ಬೇಡ.ಕೆಪ್ಪಟ್ರಾಯಕ್ಕೆ ಮನೆಮದ್ದಾಗಿ ಬಳಸುವ ಈ ಹಳ್ಳಿಮದ್ದುಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ ಅನ್ನುವ ಹಾರೈಕೆ ನನ್ನದು.

ಡಾ. ಕೃಷ್ಣಪ್ರಭ ಎಂ, ಮಂಗಳೂರು

23 Comments on “ಕಾಡಿದ ಕೆಪ್ಪಟ್ರಾಯ

  1. ಕೆಪ್ಪಟ್ರಾಯನೆಂಬ ವ್ಯಾದಿ..ಆಗಮನ…ಅನುಭವಿಸಿದ…
    ಯಾತನೆ ಸಲಹೆ..ಸೂಚನೆ..
    ನಂತರ ಸಂದೇಶ ಹೊತ್ತು ತಂದಿರುವ…ಲೇಖನ ಚೆನ್ನಾಗಿದೆ ಮೇಡಂ..

    1. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ

  2. ಯಾಕೋ ಈ ನಡುವೆ ನಿಮ್ಮ ಬರಹ ಕಾಣಿಸುತ್ತಿಲ್ಲ ಅಂದುಕೊಳ್ಳುತ್ತಿದ್ದೆ..ಈಗ ಕಾರಣ ಗೊತ್ತಾಯಿತು. ಹುಷಾರಾಗಿ ಬಂದಿರಲ್ಲ, ಒಳ್ಳೇದಾಯಿತು. ಸಂಬಂಧಿತ ಮನೆಮದ್ದು ತಿಳಿಸಿದುದು ಸಹಕಾರಿ.

    ಚಿಕ್ಕ ವಯಸ್ಸಿನಲ್ಲಿ ಸಹಜವಾಗಿ ಬರುವ ಕಾಯಿಲೆಗಳು ವಯಸ್ಕರಿಗೆ ಬಂದರೆ ಬಹಳ ಕಷ್ಟವಾಗುತ್ತದೆ ಎಂಬುದು ನನ್ನ ಅನುಭವ ಕೂಡ. ಕೆಲವು ವರ್ಷಗಳ ಮೊದಲು ನನ್ನ ಮಗನಿಗೆ ಚಿಕನ್ ಫಾಕ್ಸ್ ಆಗಿತ್ತು. ಆಮೇಲೆ ನನಗೂ ಚಿಕನ್ ಫಾಕ್ಸ್ ಆಯಿತು. ಅವನು ಬೇಗನೆ ಹುಷಾರಾದ. ನಾನು ವಾರಗಟ್ಟಲೇ ಒದ್ದಾಡಬೇಕಾಯಿತು.

    1. ಸಿಕ್ಕಾಪಟ್ಟೆ ಕಾರ್ಯಕ್ರಮಗಳು, ಕಾಲೇಜು, ಚುನಾವಣಾ ಕರ್ತವ್ಯ ಹಾಗೆಯೇ ಈ ಕೆಪ್ಪಟರಾಯದ ಕಾರಣದಿಂದ ಬರೆಯಬೇಕೆಂದಿದ್ದರೂ ಬರೆಯಲಾಗಲಿಲ್ಲ. ನಿಮ್ಮ ಮಾತು ನಿಜ. ಮಕ್ಕಳಾದರೆ ಮಲಗಬಹುದು. ನಮಗೆ ನಮ್ಮ ಕರ್ತವ್ಯ ನಿರ್ವಹಿಸಲೇಬೇಕಲ್ವಾ?

  3. ಅನುಭವಿಸಿದ ನೋವು ಕಷ್ಟಕ್ಕೆ ಅಕ್ಷರ ರೂಪ ನೀಡಿದ್ದೀರಿ, ಜೊತೆಗೆ ಉತ್ತಮ ಪರಿಹಾರ, ಸಲಹೆಗಳನ್ನೂ.

    1. ಕಾಡಿದುದೇ ಕಾರಣವಾಗಿ ಲೇಖನ ಹುಟ್ಟಿಕೊಂಡಿತು. ಮೆಚ್ಚುಗೆಗೆ ಧನ್ಯವಾದಗಳು ನಯನಾ

  4. ನನ್ನ ಮಗನಿಗೂ ಕಳೆದ 3 ತಿಂಗಳ ಹಿಂದೆ ಬಂದಿತ್ತು.15 ದಿನ ರಜೆ ಹಾಕಿದ್ದ.ತಿನ್ನಲು ಆಗುತ್ತಿರಲಿಲ್ಲ.

    1. ನಾನು ರಜೆ ಹಾಕದೇ ಕಷ್ಟಪಟ್ಟು ಸುಧಾರಿಸಿದೆ.

  5. ಅನುಭವಜನ್ಯ ಲೇಖನ. ಮಾಹಿತಿ ಸಾರ್ವಕಾಲಿಕವಿದೆ. ನಿಮ್ಮೊಳಗಿನ ಸಾಹಿತಿಯ ಛಾಯೆ ಆಸ್ವಾದಿಸಿದೆ. ಶ್ರಮ ಸಾರ್ಥಕವಾಯಿತು.

    1. ನಾನು ಬರೆದುದಕ್ಕೂ ಸಾರ್ಥಕವಾಯಿತೆಂದು ಅನ್ನಿಸಿತು. ಮೆಚ್ಚುಗೆಗೆ ಧನ್ಯವಾದಗಳು ಸರ್

  6. ಈ ತೊಂದರೆಗೆ ಎರಡೂ ಕೆನ್ನೆಯಿಂದ ಗಂಟಲುವರೆಗೆ ಗಂಧದ ಪಟ್ಟು ಹಾಕಿ, ಜೊತೆಗೆ ಚಿನ್ನದ ಸರವನ್ನೂ ಕೊರಳಿಗೆ ಹಾಕುವುದನ್ನು ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನೋಡಿದ್ದೆ. ಅದರಿಂದ ಒಂದು ವಾರದೊಳಗೆ ತೊಂದರೆ ನಿವಾರಣೆ ಆಗಿದ್ದನ್ನೂ ನೋಡಿದ್ದೆ. ಅದು ಪ್ರಾಣಾಂತಿಕ ಆಗಬಹುದು ಎನ್ನುವುದು ಗೊತ್ತಿರಲಿಲ್ಲ. ಲೇಖನ ಚೆನ್ನಾಗಿದೆ

    1. ನನ್ನ ಲೇಖನಕ್ಕೆ ಸೇರಿಸಿಕೊಳ್ಳಲು ಇನ್ನೊಂದು ಮಾಹಿತಿ ನೀಡಿದ್ದೀರಿ. ಮೆಚ್ಚುಗೆಗೆ ಧನ್ಯವಾದಗಳು ಮೇಡಂ

    1. ಯಾರಿಗೆ ಬೇಕು ಈ ನೋವು ಅಂತನ್ನಿಸ್ತು!!

  7. ಕೆಪ್ಪಟೆರಾಯದಿಂದ ಅನುಭವಿಸಿದ ನೋವು, ಕಾಡಿದ ಚಿಂತೆ, ಪರಿಹಾರಕ್ಕಾಗಿ ಪಡೆದ ಸಲಹೆ ಸೂಚನೆಗಳು… ಅಂತೂ ಈಗ ಗುಣವಾಗಿ ಬಂದು ಬರೆದ ನಿಮ್ಮ ಲೇಖನದಿಂದ ನಮಗಂತೂ ಹಲವು ಬಗೆಯ ಔಷಧೀಯ ಸಲಹೆಗಳು ಲಭ್ಯವಾದವು ನೋಡಿ!

    1. ನಿಜ. ಹಿರಿಯರಿಂದ ಬಳುವಳಿಯಾಗಿ ಬಂದ ಮದ್ದುಗಳು ಇನ್ನು ಮುಂದಿನ ಜನಾಂಗಕ್ಕೂ ತಿಳಿದಿರಬೇಕು. ಎಲ್ಲಾ ಮಾಹಿತಿಯನ್ನು ಒಂದೆಡೆ ಕಲೆಹಾಕಿ ಈ ಲೇಖನ ಬರೆದೆ. ಮೆಚ್ಚುಗೆಗೆ ಧನ್ಯವಾದಗಳು ಮೇಡಂ

  8. ಆಸಕ್ತಿದಾಯಕ, ಮಾಹಿತಿಪೂರ್ಣವಾದ ಲೇಖನ.

  9. ನಿನಗೆ ಕೆಪಟರಾಯ ಬಂದ ವಿಷಯ ತಿಳಿದು ಮನಸಿಗೆ ಖೇದವಾಯಿತು, ಜೊತೆಗೆ ಇದರ ಬಗ್ಗೆ ಸಾವ೯ಜನಿಕರಿಗೆ ಅರಿವು ಮೂಡಿಸುವ ಕಾಳಜಿಯುಕ್ತ ಲೇಖನವೂ ಉಪಯುಕ್ತ.
    ನನ್ನ ಅಮ್ಮನಿಗೂ ೬೬ನೇ ಹರಯ ದಲೂ ಬಂದಿತ್ತು. ನಮ ನೆರೆಯ ಗ್ರಾಮದ ಒಬ್ಬರು ನೀಡಿದ ಮೂಲಿಕೆ ಯು ಲೇಪನದಿಂದ ಮೂರು ದಿವಸದಲ್ಲಿ ಉಪ ಶಮನವಾಗಿತ್ತು. ಉಮ್ಮತ್ತ ನ ಉತ್ತಮ ಔಷಧಿಯ ಸಸ್ಯ ಎಂದು ಆಮ್ಮ ಹೇಳುತಿದ್ದುದು ನೆನಪಿಗೆ ಬಂತು

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *