ನನ್ನ ಮೂಗಿನ ನೇರ
ಗೆಳೆಯರೊಬ್ಬರು ಫೋನ್ ಸಂಭಾಷಣೆಯಲ್ಲಿ ನಿರತರಾಗಿ ಜೋರಾಗಿ ಕೂಗುತ್ತಿದ್ದರು. ನಾ ಕಂಡಂತೆ ಸಾಮಾನ್ಯವಾಗಿ ಅವರು ಅಷ್ಟು ಕಿರುಚುವುದಿಲ್ಲ. ‘ಏನೋ ಎಡವಟ್ಟಾಗಿದೆ’ ಎಂದುಕೊಂಡೆ. ಈ ಸಮಯದಲ್ಲಿ ಅವರನ್ನು ಕಾಣಲು ಬರಬಾರದಿತ್ತು ಎಂದೆನಿಸಿತು. ‘ಬಂದಾಗಿದೆ; ಇನ್ನು ಆ ಭೂತಕಾಲ ಪ್ರಪಂಚದ ಗೊಡವೆ ಬೇಡ’ವೆಂದು ಮುಂದಾಗುವುದಕ್ಕೆ ಸಿದ್ಧನಾದೆ. ಒಂದಷ್ಟು ಹೊತ್ತು ಮಾತಾಡಿ, ಫೋನಿಟ್ಟರು. ಅವರಲ್ಲಿನ್ನೂ ಉದ್ವೇಗ ತಹಬಂದಿಗೆ ಬಂದಿರಲಿಲ್ಲ. ಏದುಸಿರು ಜೊತೆಗೆ ಕೆಂಪಾದ ಮುಖ. ಕೋಪ ಮತ್ತು ಅವಮಾನಗಳಿಂದಾಗಿ ಅವರು ನಡುಗುತ್ತಿದ್ದರು. ಅಂಥ ಸಂದರ್ಭದಲ್ಲಿ ಮನಸ್ಸು ಇನ್ನೊಬ್ಬರ ಸಖ್ಯ ಬಯಸುತ್ತದೆ, ತನ್ನ ಸಮರ್ಥನೆಗಾಗಿ ಮತ್ತು ಸಮಜಾಯಿಷಿಗಾಗಿ ಸಮಾನ ಸ್ನೇಹಿಗಳನ್ನು ಬಯಸುತ್ತದೆ. ಇಲ್ಲೂ ಅದೇ ಆಯಿತು. ನಾನು ಅವರ ಬಾಯಿಗೆ ಕಿವಿಯಾದೆ. ನಡೆದದ್ದು ಇಷ್ಟೇ:
ಅವರೊಂದು ಪತ್ರಿಕೆಗೆ ಚಂದಾದಾರರಾಗಿದ್ದರು. ಆ ಪತ್ರಿಕೆಯ ಸಂಪಾದಕರು ಅವರ ಸ್ನೇಹಿತರಿಗೆ ಶಿಷ್ಯೋತ್ತಮರು. ಆ ಸಂಪಾದಕರನ್ನು ಮುಖತಃ ನೋಡಿಲ್ಲವಾದರೂ ಎಷ್ಟೋ ವರುಷಗಳಿಂದ ಪರಿಚಿತರು, ಫೋನಿನ ಮೆಸೇಜು ಮತ್ತು ಮಾತುಕತೆಗಳ ಮೂಲಕ. ಈ ಸಲ ಅವರಿಗೆ ಕಳಿಸಿಕೊಟ್ಟ ಸಂಚಿಕೆಯು ತನ್ನ ಬೈಂಡಿಂಗಿನ ಗುಣಮಟ್ಟವನ್ನು ಕಳೆದುಕೊಂಡಿತ್ತು; ಪುಟಗಳು ಕಳಚಿ ಬೀಳುತ್ತಿದ್ದವು. (ಅದನ್ನು ನನಗೆ ತೋರಿಸಿ, ‘ನೀವೇ ನೋಡಿ’ ಎಂದು ಮುಖದ ಮುಂದೆ ಹಿಡಿದರು) ಹಾಗಾಗಿ, ಸಹಜವಾಗಿ ವಾಟ್ಸಾಪ್ ಮೆಸೇಜು ಮಾಡಿ, ‘ಯಾಕೋ ಈ ಬಾರಿ ಸಂಚಿಕೆಯ ಬೈಂಡಿಂಗು ಭದ್ರವಾಗಿಲ್ಲ. ಇನ್ನು ಮೇಲೆ ಅತ್ತ ಗಮನಿಸಿ, ಇದು ನನ್ನ ವಿನಂತಿ’ ಎಂದು ಟೈಪು ಮಾಡಿ ಕಳಿಸಿದ್ದರಂತೆ. ಆ ಸಂಪಾದಕ ಪುಣ್ಯಾತ್ಮರು ಯಾವ ಮೂಡಿನಲ್ಲಿದ್ದರೋ, ಆತನಿಗೆ ಏನೆಂಥ ಪರಿಸ್ಥಿತಿ ಮತ್ತು ಮನಸ್ಥಿತಿಗಳು ಕೆಟ್ಟಿದ್ದವೋ ವಿಚಿತ್ರವಾಗಿ ರಿಪ್ಲೆ ಮಾಡಿದರಂತೆ. (ಅದನ್ನೂ ನನಗೆ ತೋರಿದರು) ‘ಒಮ್ಮೊಮ್ಮೆ ಹೀಗಾಗುತ್ತದೆ, ಅಡ್ಜಸ್ಟ್ ಮಾಡಿಕೊಳ್ಳಬೇಕು, ಪ್ರತಿ ಪುಟವನ್ನೂ ಚೆಕ್ ಮಾಡಿ ಕಳಿಸಲು ಆಗುವುದಿಲ್ಲ’ ಎಂದೆಲ್ಲಾ ಮೆಸೇಜಿಸಿದರಂತೆ. ಇದನ್ನು ಓದಿ ನನ್ನ ಗೆಳೆಯರು ಡಿಸ್ಟರ್ಬಿತರಾದರು. ‘ನನ್ನ ಕಾಳಜಿಯನ್ನು ಈ ಮನುಷ್ಯ ಅರ್ಥ ಮಾಡಿಕೊಳ್ಳಲಿಲ್ಲವಲ್ಲ’ ಎಂಬ ಅಸಹಾಯಕತೆಯು ಅವರನ್ನು ಆವರಿಸಿತು. ‘ಪ್ರತಿ ಪುಟವನ್ನು ಚೆಕ್ ಮಾಡಿ ಕಳಿಸಿ ಎಂದೇನೂ ನಾನು ಮೆಸೇಜ್ ಮಾಡಿರಲಿಲ್ಲ, ಇರಲಿ. ಏನೋ ಕಮ್ಯುನಿಕೇಷನ್ ಪ್ರಾಬ್ಲಮ್ಮುʼ ಎಂದು ಸುಮ್ಮನಾದರಂತೆ. ಆದರೆ ಆ ಸಂಪಾದಕ ಮಹಾಶಯರು ಇವರ ಗೆಳೆಯರಿಗೆ ಫೋನು ಮಾಡಿ ಏನೇನು ಅಂದರೋ? ಗೊತ್ತಿಲ್ಲ ಅಂತೂ ಅದನ್ನು ಪರಿಚಯಿಸಿದ್ದ ಇವರ ಗೆಳೆಯರು ಇವರಿಗೆ ಫೋನ್ ಮಾಡಿ, ತರಾಟೆಗೆ ತೆಗೆದುಕೊಂಡರಂತೆ. ಆಗ ಇವರು ‘ಸುಮಾರು ನಲವತ್ತು ವರುಷಗಳಿಂದ ನನ್ನನ್ನು ನೀನು ಬಲ್ಲೆ; ನಾನು ಆ ರೀತಿಯೇನೂ ಬರೆದಿರಲಿಲ್ಲ. ಪ್ರತಿ ಪುಟ ಚೆಕ್ ಮಾಡಿ ಕಳಿಸಲು ಯಾರಿಗಾದರೂ ಸಾಧ್ಯವೆ? ಹೀಗೆ ಸಡಿಲವಾದ ಬೈಂಡಿಂಗು ಮುಂದುವರೆದರೆ ಸಂಚಿಕೆಯ ಗುಣಮಟ್ಟ ಕುಸಿಯುವುದು, ಇದನ್ನು ನಿಮ್ಮ ಗಮನಕ್ಕೆ ತಂದರೆ ನೀವು ಮುದ್ರಕರ ಮತ್ತು ಅಚ್ಚುಕೂಟದ ಮಂದಿಗೆ ಹೇಳಲು ಅನುಕೂಲವಾಗುತ್ತದೆ. ಈ ಲೋಪ ಸರಿಪಡಿಸಿಕೊಳ್ಳಲು ಸಹಾಯವಾಗುತ್ತದೆ ಎಂಬ ದೂರದೃಷ್ಟಿಯಿಂದ ಮೆಸೇಜಿಸಿದ್ದು ಅಷ್ಟೇ; ದೂರುವ ದೃಷ್ಟಿಯಿಂದ ಅಲ್ಲʼ ಎಂದು ಸಮಜಾಯಿಷಿ ಕೊಟ್ಟು, ಸಂಭಾಷಣೆಯ ಸ್ಕ್ರೀನು ಷಾಟ್‌ಗಳನ್ನು ಕಳಿಸಿಕೊಟ್ಟು ಸಮಾಧಾನಿಸಲು ಪ್ರಯತ್ನಿಸಿದರಂತೆ. ಆದರೂ ಏಕೋ ಅಷ್ಟು ವರ್ಷಗಳ ಸ್ನೇಹದಲೊಂದು ಬಿರುಕು. ಮೂರನೆಯ ವ್ಯಕ್ತಿಯಿಂದ ಗೆಳೆತನಕ್ಕೆ ಧಕ್ಕೆಯಾಯಿತಲ್ಲ ಎಂಬ ಕೊರಗು. ಒಟ್ಟಿನಲ್ಲಿ ಇವನ್ನೆಲ್ಲ ಅವರು ನನಗೆ ಹೇಳುವಾಗ ಪ್ರಾಮಾಣಿಕತೆಯ ದನಿಯಿತ್ತು. ಅದನ್ನು ನಾನು ಗುರುತಿಸಿದೆ. ಅವರು ಹೇಳುತ್ತಿದ್ದುದನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ.
ಆಮೇಲೇನೋ ಇವರ ಮನಸ್ಸು ತಡೆಯದೇ ಆ ಸಂಪಾದಕರಿಗೆ ಫೋನ್ ಮಾಡಿ, ‘ನೀವು ತಪ್ಪು ಗ್ರಹಿಸಿದ್ದೀರಿ. ನನ್ನ ಮಾತಿನ ಉದ್ದೇಶ ಅದಾಗಿರಲಿಲ್ಲ. ನೀವು ಯಾವ ಮೂಡಿನಲ್ಲಿದ್ದರೋ ನಾ ಕಾಣೆ. ಗಮನಿಸಿ, ನಿರ್ಲಕ್ಷಿಸಬಹುದಾದ ವಿಷಯವೊಂದನ್ನು ನಾನು ನಿಮಗೆ ಹೇಳಿದ್ದೇ ತಪ್ಪಾಯಿತು. ನೀವು ಸಹ ‘ಹೌದೇ, ಆಗಲಿ, ಗಮನಕ್ಕೆ ತಂದದ್ದು ಒಳಿತಾಯಿತು. ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ’ ಎಂಬ ವಿನೀತಭಾವದ ಉತ್ತರ ನೀಡಬಹುದಾಗಿತ್ತು. ಅಥವಾ ಅದನ್ನು ಮಾಡದೆಯೂ ನನ್ನ ಮೆಸೇಜನ್ನು ನಿರ್ಲಕ್ಷಿಸಬಹುದಿತ್ತು. ನನ್ನ ಮೆಸೇಜಿನಲ್ಲಿ ಇಲ್ಲದ ವಿಚಾರವೊಂದನ್ನು ನೀವೇ ಕಲ್ಪಿಸಿಕೊಂಡು, ಪ್ರತಿಯೊಂದು ಪುಟವನ್ನೂ ಪರೀಕ್ಷಿಸಿ, ಕಳಿಸಲು ಸಾಧ್ಯವಿಲ್ಲ ಎಂಬ ಉಡಾಫೆಯ ಮತ್ತು ಅಹಂಭಾವದ ಉತ್ತರ ಕಳಿಸಿದ ಮೇಲೂ ನಾನು ಸುಮ್ಮನಿದ್ದೆ. ಆದರೆ ನೀವು ನನ್ನ ಗೆಳೆಯರಿಗೆ ಫೋನು ಮಾಡಿ ‘ಇದ್ದದ್ದು, ಇಲ್ಲದ್ದು ಎಲ್ಲವನ್ನೂ ಉಪ್ಪು ಖಾರ ಸೇರಿಸಿ, ಹೇಳಿ, ನಮ್ಮಿಬ್ಬರ ಸ್ನೇಹ ಸಂಬಂಧದಲ್ಲಿ ಅಪಸ್ವರವೊಂದನ್ನು ಮೂಡಿಸಲು ಯತ್ನಿಸಿದ್ದು ಮಾತ್ರ ತಪ್ಪು. ಇದನ್ನು ನಾನು ಸಹಿಸಲಿಲ್ಲ’ ಎಂದೆಲ್ಲಾ ಮಾತಾಡಿ ಬಿಟ್ಟರಂತೆ. ಅತ್ತ ಕಡೆಯಿಂದ ಇನ್ನಾವ ರೀತಿಯ ಮಾತು ಕತೆಗಳು ಕಿವಿಗೆ ನುಗ್ಗಿದವೋ? ಅಂತೂ ಎದುರು ಕುಳಿತಿದ್ದ ನನ್ನ ಗೆಳೆಯರು ಉದ್ವಿಗ್ನಗೊಂಡಿದ್ದರು. ‘ಇರಲಾರದೆ ಇರುವೆ ಬಿಟ್ಟುಕೊಂಡ ಸ್ಥಿತಿ’ ನನ್ನದಾಯಿತೆಂದು ಅವರು ಅಳಲು ಪಟ್ಟರು. ‘ಸಾಯಲಿ ಎಂದು ನಾನು ಆ ಸಂಚಿಕೆಯನ್ನು ಎಸೆದು ಸುಮ್ಮನಾಗಬಹುದಿತ್ತು, ಅದು ಏತಕೋ ಮಾಹಿತಿ ಮುಟ್ಟಿಸೋಣವೆಂದು ಮೆಸೇಜು ಮಾಡಿದ್ದೇ ತಪ್ಪಾಯಿತೇ?’ ಎಂದು ತಮ್ಮೊಳಗೆ ರೋದಿಸಿದರು. ತುಂಬ ಸೂಕ್ಷ್ಮರೂ ಸಂವೇದನಾಶೀಲರೂ ಆದ ನನ್ನ ಗೆಳೆಯರು ನಿಜಕ್ಕೂ ಮನದಲ್ಲಿ ಕಹಿ ತುಂಬಿಕೊಂಡು ಇದನ್ನೆಲ್ಲಾ ನನಗೆ ಹೇಳುವಾಗ ಅವರಿಗೇ ಗೊತ್ತಿಲ್ಲದಂತೆ ವ್ಯಗ್ರರಾದರು. ಅವರ ಕೋಪವು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಮಾತಿನಲ್ಲಿ ಅದು ಈಚೆ ಬಂದಷ್ಟೂ ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದೇ ಎಂದು ನಾನು ತರ್ಕಿಸಿ, ಮೊದಲೇ ಅವರ ಮಾತುಗಳಿಗೆ ಕಿವಿಯಾಗಿದ್ದ ನಾನು ಮುಂದುವರೆದು, ಅವರ ಮಾತುಗಳಿಗೆ ಗೋಣಾಡಿಸಿದೆ. ನೀವು ಹೇಳುತ್ತಿರುವುದು ನನಗೆ ಅರ್ಥವಾಗುತ್ತಿದೆ ಎಂಬ ಭಾವ ಮಾತ್ರವಲ್ಲದೇ, ನಿಮ್ಮ ದುಗುಡ ಸಹ ನನಗೆ ರೀಚ್ ಆಗುತ್ತಿದೆ ಎಂಬರ್ಥದಲ್ಲಿ ವರ್ತಿಸಿದೆ. ಇದರಿಂದ ಅವರಿಗೆ ಅರ್ಧ ಸಮಾಧಾನವಾಯಿತು. ‘ಈಗ ಹೇಳಿ: ನನ್ನದೇನು ತಪ್ಪು?’ ಎಂದರು.
ಇಲ್ಲಿಯತನಕ ಸೇಫ್ ಜೋ಼ನಿನಲ್ಲಿ ಇದ್ದ ನಾನು ಏಕ್‌ದಂ ಅವರ ವರ್ತುಲದೊಳಗೆ ಬಂಧಿಯಾದೆ. ನನ್ನ ಎದುರಿರುವ ಈ ಗೆಳೆಯರು ಮತ್ತು ಅವರ ಗೆಳೆಯರು ಹಾಗೂ ಪತ್ರಿಕೆಯ ಸಂಪಾದಕರು- ಈ ಮೂವರೇ ಇದ್ದ ಸಿನಿಮಾ ಶೂಟಿಂಗಿನೊಳಗೆ ನಾನು ಪ್ರವೇಶ ಪಡೆಯುವಂತಾಯಿತು. ನಾನೀಗ ಸಮರ್ಥವಾಗಿ ನನ್ನ ಪಾತ್ರವನ್ನು ನಿಭಾಯಿಸಬೇಕಿತ್ತು. ಒಂದು ಕ್ಷಣ ಅರಿವನ್ನು ಬೆಳೆಸಿಕೊಳ್ಳಲು ಕಣ್ಣು ಮುಚ್ಚಿದೆ. ಸಾಮ್ಯವಿರುವ ಇಂಥ ಪರಿ ಪರಿ ಪ್ರಸಂಗಗಳನ್ನು ನೆನಪಿಸಿಕೊಂಡೆ, ಅವರು ಹೇಳಿದ್ದೆಲ್ಲವನ್ನೂ ವಸ್ತುನಿಷ್ಠವಾಗಿ ನೋಡಲು ಪ್ರಯತ್ನಿಸಿದೆ. ಎಲ್ಲವನ್ನೂ ಹೇಳಿದ್ದೇನೆಂಬ ಧಾಟಿಯಲ್ಲಿ ನನ್ನೆದುರು ಕುಳಿತ ಸ್ನೇಹಿತರು ರಿಲ್ಯಾಕ್ಸಾದರು. ಇಂಥ ಸಂದರ್ಭದಲ್ಲಿ ಇದು ಸಹಜ. ಚೆಂಡನ್ನು ಎದುರಾಳಿಯ ಅಂಗಳಕ್ಕೆ ಕಳಿಸಿದ ಮೇಲೆ ಸ್ವಲ್ಪ ನಿರಾಳವಾಗುವ ಗೋಲ್ ಕೀಪರಿನಂತೆ ಬೆನ್ನನ್ನು ಕುರ್ಚಿಗೆ ಒರಗಿಸಿ, ಆರಾಮಾಗಲು ಯತ್ನಿಸಿದರು.
‘ಪತ್ರಿಕೆಯ ಸಂಪಾದಕರಿಂದ ಪ್ರಾಮಾಣಿಕವಾದ ಮತ್ತು ನಮ್ರತೆಯ ಮಾತುಗಳನ್ನು ನಿರೀಕ್ಷಿಸಿದ್ದ ನಿಮಗೆ ನೋವಾಗಿದೆ. ಈ ನೋವನ್ನು ನೀವೇ ತಂದುಕೊಂಡದ್ದು. ಹಾಗಾಗಿ ಅದನ್ನು ನೋವು ಪಟ್ಟೇ ಶಮನಗೊಳಿಸಬೇಕುʼ ಎಂದೆ. ಹೀಗೆ ಮಾತು ಶುರು ಮಾಡುವ ಮೊದಲು ಅವರನ್ನೇ ದಿಟ್ಟಿಸಿ, ಕುರ್ಚಿಯನ್ನು ಸ್ವಲ್ಪ ಸಮೀಪ ಜರುಗಿಸಿಕೊಂಡು, ಆಪ್ತವಾಗಿ ಅವರ ಕೈಯನ್ನು ಹಿಡಿದುಕೊಂಡು, ಕಣ್ಣಲ್ಲಿ ಕಣ್ಣಿಟ್ಟು, ನೇರವಾಗಿ ಅಷ್ಟೇ ಖಡಕ್ಕಾಗಿ ಹೇಳಿದ್ದೆ. ಅವರು ಸ್ವಲ್ಪ ಅಪ್ರತಿಭರಾದರು ಮತ್ತು ಗುಂಡೇಟಿನಂಥ ನನ್ನ ಮಾತನ್ನು ಅವರು ಅರಗಿಸಿಕೊಳ್ಳಲು ಒದ್ದಾಡಿದರು. ಮರುಕ್ಷಣ ಮುಂದುವರಿಸಿದೆ: ‘ನಿಮ್ಮ ಕಾಳಜಿಯ ಪ್ರಾಮಾಣಿಕತೆ ನನಗೆ ಮನದಟ್ಟಾಯಿತು. ಆದರೆ ಅವರ ಮಾತುಗಳು ನಿಮ್ಮನ್ನು ಹರ್ಟ್ ಮಾಡಿವೆ. ಪತ್ರಿಕೆ ಮತ್ತು ಪುಸ್ತಕಗಳಿಗೆ ರಿಪ್ಲೆ ಬರುವುದೇ ಕಡಮೆ. ಅಂತಹುದರಲ್ಲಿ ನಿಮ್ಮ ಅಭಿಪ್ರಾಯವನ್ನು ಅವರು ಪ್ರೀತಿಯಿಂದ ಸ್ವೀಕರಿಸಿ, ಗೌರವದಿಂದ ಕಾಣಬೇಕಿತ್ತು. ‘ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು’ ಎಂಬಂತಾಯಿತು. ಅವರು ಎಂಥ ಪರಿಸ್ಥಿತಿ ಮತ್ತು ಮನಸ್ಥಿತಿಗಳಲ್ಲಿ ಇದ್ದರೋ? ನಮಗೆ ಗೊತ್ತಿರುವುದಿಲ್ಲ, ವಯಸ್ಸಿನಲ್ಲಿ ನಿಮಗಿಂತ ಅವರು ಚಿಕ್ಕವರು; ಅನುಭವ ಮತ್ತು ವಿದ್ಯೆ ಎರಡರಲ್ಲು ಕೂಡ. ಹಾಗಾಗಿ ಕ್ಷಮಿಸಿ ಬಿಡಿ. ಮರೆತು ದೊಡ್ಡವರಾಗಿ, ಸಾಧಿಸಬೇಡಿ. ಹಾಗಂತ ನಿಮ್ಮ ದುಗುಡವನ್ನು ನಾನು ನಿರಾಕರಿಸುತ್ತಿಲ್ಲ; ಅದಕ್ಕೆ ನಾನೂ ಜವಾಬುದಾರ ಎಂಬುದನ್ನು ನೀವು ಅರಿಯಬೇಕು’ ಎಂದೆ. ಶೂನ್ಯದತ್ತ ದೃಷ್ಟಿ ಹಾಯಿಸಿದ್ದರು. ನಾನು ಇನ್ನೊಂದು ಹೆಚ್ಚಿನ ಮಾತಾಡಿದೆ: ‘ಅರಿವು ಬೆಳೆಸಿಕೊಂಡು, ವಸ್ತುಸ್ಥಿತಿ ಅರಿತುಕೊಂಡು, ಮರೆತು ಮುಂದಿನ ಕೆಲಸ ನೋಡುತ್ತೀರೋ? ಅಥವಾ ಅದನ್ನೇ ತಲೆಯಲ್ಲಿ ತುಂಬಿಕೊಂಡು, ಅದರ ಕಹಿತನದಿಂದ ಮನದ ಆರೋಗ್ಯ ಕೆಡಿಸಿಕೊಂಡು ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತೀರೋ? ಯೋಚಿಸಿ. ಆಯ್ಕೆ ನಿಮ್ಮದು’ ಎಂದೆ! ಈ ಮಾತನ್ನು ಹೇಳುವಾಗ ‘ಮನಸ್ಸು ಇಲ್ಲದ ಮಾರ್ಗ’ ಕೃತಿಯಿಂದ ಖ್ಯಾತರಾದ ನಮ್ಮ ಮೈಸೂರಿನ ಸೈಕೋ ಥೆರಪಿಸ್ಟ್ ಡಾ. ಮೀನಗುಂಡಿ ಸುಬ್ರಮಣ್ಯರೇ ಕಣ್ಮುಂದೆ ಬಂದರು.
ಎದುರಿಗೆ ಇಲ್ಲದ ವ್ಯಕ್ತಿಯ ಚಹರೆಗಳನ್ನು ಕಲ್ಪಿಸಿಕೊಂಡು ಮಾತಾಡುವುದಕಿಂತ ಎದುರು ಇರುವ ವ್ಯಕ್ತಿಯ ಹೇಳಿಕೆ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತಾಡುವುದು ಸೂಕ್ತ. ಮನೋವಿಜ್ಞಾನದ ಪ್ರಕಾರ ಕಹಿ ಭಾವನೆ ಹುಟ್ಟಿಕೊಂಡಾಗ ಅದನ್ನು ಹೊರ ಹಾಕಿಯೇ ಸಮಾಧಾನವಾಗಬೇಕು; ಇಲ್ಲದಿದ್ದರೆ ಗೆಸ್ಟಾಲ್ಟ್ ಶುರುವಾಗುವುದು. ಸ್ವ ಕಪೋಲ ಕಲ್ಪಿತ ಭ್ರಮೆಗಳಲ್ಲಿ ನಡೆದು ಹೋದ ಘಟನೆಯನ್ನು ನಾವೇ ತಿರುಚಿಕೊಳ್ಳುತ್ತಾ, ನಮಗೆ ಬೇಕಾದ ವರ್ಶನ್ನುಗಳಲ್ಲಿ ವಿವರಿಸಿಕೊಂಡು, ವಾಸ್ತವದಿಂದ ದೂರ ಸಾಗುತ್ತೇವೆ. ಇಲ್ಲಿ ಕಾಣಿಸುತ್ತಿರುವುದು ಸಂವಹನ ಸಮಸ್ಯೆ ಮತ್ತು ಆ ಪತ್ರಿಕಾ ಸಂಪಾದಕರ ಈಗೋ ಪ್ರಾಬ್ಲಮ್ಮು. ಯಾರಾದರೂ ಅಷ್ಟೇ: ಬಹು ಬೇಗ ಒಂದೇ ಸಲಕ್ಕೆ ‘ತಮ್ಮದು ತಪ್ಪಾಗಿದೆ’ ಎಂದು ಒಪ್ಪಿಕೊಳ್ಳುವ ಜಾಯಮಾನದವರಾಗಿರುವುದಿಲ್ಲ. ಸ್ವ ಸಮರ್ಥನೆಯೇ ವ್ಯಕ್ತಿಯ ಮೊದಲ ಪ್ರತಿಕ್ರಿಯೆ. ಇದನ್ನು ಆಧುನಿಕ ಶಿಕ್ಷಣವು ಆತ್ಮವಿಶ್ವಾಸವೆಂದು ಕರೆದು ಗೌರವಿಸುತ್ತದೆ. ಅದರಲ್ಲೂ ಆತ್ಮವಿಮರ್ಶೆ ಮಾಡಿಕೊಳ್ಳಲು ಇಚ್ಛಿಸದ ಡಾಮಿನೇಟ್ ವ್ಯಕ್ತಿತ್ವಗಳಲ್ಲಿ ಇದು ಸಹಜ. ಎಲ್ಲ ಪುಟಗಳನ್ನೂ ಚೆಕ್ ಮಾಡಿ ಕಳಿಸಲು ಸಾಧ್ಯವಿಲ್ಲ ಎಂಬುದನ್ನು ಸಂಪಾದಕನೇ ಹೇಳಬೇಕಿಲ್ಲ. ಇದು ಕಾಮನ್‌ಸೆನ್ಸ್. ಹಾಗೆ ಚೆಕ್ ಮಾಡಿ ಕಳಿಸಲೂ ಆಗದು. ಇದು ಅವಾಸ್ತವ. ಪಾಪದ ಪ್ರಾಣಿ, ನನ್ನ ಎದುರು ಕುಳಿತ ಸ್ನೇಹಿತರು ಅಂದು, ಅನ್ನಿಸಿಕೊಂಡಿದ್ದಾರೆ. ಬಹಳಷ್ಟು ಸಲ ನಾವು ಇಂಥ ಸಂವಾದ ಸಮಸ್ಯೆಯನ್ನು ಎದುರಿಸುತ್ತೇವೆ. ‘ನಾನು ಹಾಗೆ ಅನ್ನಲಿಲ್ಲ; ಹೀಗೆ ಅಂದದ್ದು. ನೀವು ಹಾಗೆ ಅರ್ಥ ಮಾಡಿಕೊಂಡಿರಿ. ನನ್ನ ಮಾತಿನ ಅಂತರಾಳ ಅದು ಆಗಿರಲಿಲ್ಲ’ ಎಂಬಂಥ ಸಮಜಾಯಿಷಿಗಳು ಹುಟ್ಟಿಕೊಳ್ಳುತ್ತವೆ. ಅದಕ್ಕಾಗಿಯೇ ಓಶೋ ರಜನೀಶರು I am only responsible for what I say, not for what you understand ಎಂದದ್ದು. ಮಾತನಾಡುವುದಕಷ್ಟೇ ನಾನು ಜವಾಬುದಾರ; ಕೇಳಿಸಿಕೊಳ್ಳುವುದಕ್ಕಲ್ಲ. ನಿಮಗೆ ಬೇಕಾದಂತೆ, ಬೇಕಷ್ಟನ್ನು ಮಾತ್ರ, ಬೇಕಾದ ರೀತಿಯಲ್ಲಿ ಕೇಳಿಸಿಕೊಳ್ಳುತ್ತೀರಿ. ನಾನೇಕೆ ಅದರ ಹೊಣೆ ಹೊತ್ತುಕೊಳ್ಳಲಿ? ಎಂಬ ಭಾವ ಇಲ್ಲಿಯದು.
ಇಷ್ಟಕೂ ನಮ್ಮ ಮಾತುಗಳನ್ನು ‘ಇದೇ ಅರ್ಥದಲ್ಲಿ ತೆಗೆದುಕೊಳ್ಳಿ, ಹೀಗೇ ಅರ್ಥ ಮಾಡಿಕೊಳ್ಳಿ’ ಎಂದು ಬಲವಂತ ಪಡಿಸಲು ಸಾಧ್ಯವೆ? ಈ ಜಗತ್ತಿನ ತುಂಬ ಇರುವುದು ಪ್ರೀತಿಯೂ ಅಲ್ಲ, ಹಸಿವೆಯೂ ಅಲ್ಲ! ಕೇವಲ ಸಮರ್ಥ ಸಂವಹನದ ತೊಡಕು ಮತ್ತು ಅರ್ಥೈಸಿಕೊಳ್ಳುವಲ್ಲಿ ಆಗುವ ಬಿರುಕು!! ಹೆಚ್ಚು ಹೆಚ್ಚು ಕಲಿತ ಹಾಗೆ ಆವಶ್ಯಕತೆಗಿಂತಲೂ ಹೆಚ್ಚು ಸೂಕ್ಷ್ಮವಾಗುತ್ತಿದ್ದೇವೆ. ಇದು ಕಲಿಕೆಯ ತಪ್ಪಲ್ಲ; ಕಲಿತದ್ದನ್ನು ಬದುಕಿಗೆ ಅಳವಡಿಸಿಕೊಳ್ಳುವಲ್ಲಿ ಎಡವಿರುವುದು. ಕಾರಣವೆಂದರೆ ಆಧುನಿಕ ವಿದ್ಯೆಯು ಅಹಂ ಪೋಷಿಸುವುದನ್ನು ಹೇಳಿ ಕೊಡುತ್ತಿದೆ; ಅಹಮನ್ನು ನಿರಸನಗೊಳಿಸುವುದನ್ನಲ್ಲ.
ಜನರು ತಮಗೆ ಬೇಕಾದುದನ್ನು ಕೇಳಿಸಿಕೊಳ್ಳುತ್ತಾರೆ ಮತ್ತು ಬೇಕಂತಲೇ ತಮ್ಮ ವರ್ಶನ್ನಿನಲ್ಲಿ ಮಾತಾಡುತ್ತಾರೆ. ಎಲ್ಲರೂ ಅವರವರ ನೆಲೆಯಲ್ಲಿ ನಿಂತು ಮೊದಲು ಯೋಚಿಸುತ್ತಾರೆ. ಇದು ಸಹಜ ಕೂಡ. ಅದಕಾಗಿಯೇ ಮಾತಾಡುವ ಮುನ್ನ ಯೋಚಿಸು, ಪ್ರತಿಕ್ರಿಯಿಸುವ ಮುನ್ನ ಚಿಂತಿಸು, ಮೊದಲು ಅವರು ಹೇಳಿದ ಭಾವವನ್ನು ಗ್ರಹಿಸು ಎನ್ನುವುದು. ಅಂತಿಮವಾಗಿ ಇಂಥವು ನಂನಮ್ಮ ಸ್ವಭಾವ ಮತ್ತು ಸಾಮರ್ಥ್ಯಕ್ಕೆ ಬಿಟ್ಟ ಸಂಗತಿಗಳಾಗಿರುತ್ತವೆ. ವ್ಯಕ್ತಿ, ವಸ್ತು ಮತ್ತು ಪ್ರಪಂಚವನ್ನು ಅದು ಇರುವಂತೆ ನೋಡುವುದು ಬಹು ದೊಡ್ಡ ವಿದ್ಯಾರ್ಹತೆ. ಇದಕ್ಕಾಗಿ ಯಾವ ಯೂನಿವರ್ಸಿಟಿಗಳಲ್ಲೂ ಓದಿ, ಡಿಗ್ರಿ ಪಡೆಯಬೇಕಿಲ್ಲ. ವ್ಯಕ್ತಿಗಳನ್ನು ಅವರು ಇರುವಂತೆಯೇ ನೋಡಲು ಮತ್ತು ಸ್ವೀಕರಿಸಲು ನಮಗೆ ಯಾಕೆ ಸಾಧ್ಯವಿಲ್ಲವೆಂದರೆ ನನ್ನ ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳು. ನನ್ನ ಪ್ರಕಾರ ಅವರು ಹೇಗಿರಬೇಕೋ? ನನ್ನ ಪ್ರಕಾರ ಅವರು ಏನು ಮಾತಾಡಬೇಕೋ? ಅವನ್ನು ನಾನು ನಿರೀಕ್ಷಿಸುತ್ತಿರುತ್ತೇನೆ. ಆ ನಿರೀಕ್ಷೆ ಸುಳ್ಳಾದರೆ ನನಗೆ ನೋವಾಗುತ್ತದೆ. ಅವರು ನನ್ನ ಪ್ರಕಾರ ಸರಿ ಇಲ್ಲದವರಾಗಿ ಬಿಡುತ್ತಾರೆ. ಹಾಗೆಯೇ ಅವರೂ ನನ್ನನ್ನು ಹೀಗಿರಬೇಕೆಂದು ನಿರೀಕ್ಷಿಸಿರುತ್ತಾರೆ ತಾನೇ!? ನಾನದನ್ನು ಮರೆತಿರುತ್ತೇನೆ. ನನ್ನ ಮೂಗಿನ ನೇರಕ್ಕೆ ಅರ್ಥ ಮಾಡಿಕೊಳ್ಳುವುದೆಂದರೆ, ಮಾತಾಡುವುದೆಂದರೆ ಇದೇ!
ನಮ್ಮನ್ನಾಳುವುದು ಮತ್ತು ನಮ್ಮನ್ನಳಿಸುವುದು ಸಂಬಂಧಗಳಲ್ಲ; ಆ ಸಂಬಂಧಗಳನ್ನು ನಿರ್ವಹಿಸಲು ಎದುರಾಗುವ ಸಂದರ್ಭ ಮತ್ತು ಸನ್ನಿವೇಶಗಳ ಅಸಮರ್ಥ ನಿರ್ವಹಣೆ. ನಾವೆಲ್ಲಾ ಘಟನೆ ಮತ್ತು ಸಂಘಟನೆಯ ಕೂಸುಕುನ್ನಿಗಳು. ಪ್ರಸಂಗವಶಾತ್ ನಾನು ಪ್ರತಿಕ್ರಿಯಿಸುವಾಗ ಅದು ನನ್ನ ವ್ಯಕ್ತಿತ್ವದ ಮತ್ತು ಸಂಸ್ಕಾರದ ಭಾಗವಾಗಿರುತ್ತದೆಂಬುದನ್ನು ಮರೆತಿರುತ್ತೇವೆ. ಲೋಕಾಭಿರಾಮದ ಮಾತುಕತೆಗಳನ್ನು ಹೊರತುಪಡಿಸಿದಂತೆ ನಮ್ಮ ಸಂವಾದವು ಎಲ್ಲ ಪೂರ್ವಗ್ರಹಿಕೆಗಳಿಂದ ಮುಕ್ತವಾಗಿದ್ದರೆ ಅರಿವು ಮತ್ತು ಅನುಭವ ಧಾರಾಳ ದೊರಕುತ್ತದೆ. ಆದರೆ ಎಲ್ಲರೂ ಹೇಳುವವರೇ ಆದರೆ ಕೇಳುವವರು ಯಾರು? ಕೇವಲ ಲಿಜ಼ನಿಂಗ್ ಬಗ್ಗೆ ಮಾತಾಡಿದರೆ ಸಾಲದು, ಆಚರಿಸಬೇಕು. ಊಟ ಮಾಡುವಾಗ ಒಂದು ತುತ್ತು ಕಡಮೆ ತಿಂದರೆ ಹೇಗೆ ಆರೋಗ್ಯವೋ ಹಾಗೆಯೇ ಒಂದು ಮಾತು, ವಾಕ್ಯ ಕಡಮೆ ಆಡಿದರೆ ಮಂದಿಗೂ ಮನಸಿಗೂ ಆರೋಗ್ಯ. ಕೇಳಿಸಿಕೊಳ್ಳುತ್ತಿದ್ದಾರೆಂದು ಹೇಳುತ್ತಲೇ ಇರಬಾರದು. ಇಷ್ಟಪಟ್ಟು ಕೇಳುವವರು ಯಾವಾಗಲೂ ಕಡಮೆ. ಕಷ್ಟಪಟ್ಟು ಕೇಳುವವರೇ ಹೆಚ್ಚು. ಅದರಲ್ಲೂ ವಿದ್ಯಾಸಂಸ್ಥೆಯಂಥ ಕಡೆ ಇಂಥ ತಾಪತ್ರಯಗಳು ಹೆಚ್ಚು. ಕಾರ್ಯಕ್ರಮಗಳಾಗುವಾಗ ವೇದಿಕೆಯಲ್ಲಿರುವವರು ಕಡಮೆ ಮಾತಾಡಿದರೆ ಕಲಿಕಾರ್ಥಿಗಳು ಸಂತೋಷಪಟ್ಟು, ವಿಶಲ್ ಹೊಡೆದು, ಚಪ್ಪಾಳೆ ತಟ್ಟುತ್ತಾರೆ. ಆದರೆ ಕರೆಸಿದವರು, ಸಂಸ್ಥೆಯ ಆಡಳಿತದ ಹೊಣೆ ಹೊತ್ತವರು ನೊಂದುಕೊಳ್ಳುತ್ತಾರೆ. ಇಂಥ ಉಭಯಸಂಕಟಗಳಿಂದ ಪಾರಾಗುವ ಬಗೆ ಕರಕಷ್ಟ. ಆಸಕ್ತಿಯಿಂದ ಕೇಳುತ್ತಿರುವಾಗಲೇ ಭಾಷಣ ನಿಲ್ಲಿಸಿ ಬಿಡುವುದು ಸೂಕ್ತ. ಆಗ ಪ್ರೀತಿ ಮತ್ತು ಗೌರವಗಳು ಸ್ವಲ್ಪವಾದರೂ ಉಳಿಯುತ್ತವೆ.
ಅಂದರೆ ದೊಡ್ಡ ದೊಡ್ಡ ಸಂದರ್ಭ ಮತ್ತು ವಿಚಾರಗಳಲ್ಲಿ ನಾವು ಸಂವಾದದ ಸಮಸ್ಯೆಯಿಂದ ಬಳಲುತ್ತೇವೆ. ಏನೋ ಹೇಳಲು ಹೋಗಿ ಇನ್ನೇನನೋ ಹೇಳಿ ಪೇಚಿಗೆ ಸಿಕ್ಕಿಕೊಳ್ಳುತ್ತೇವೆ. ಅಗತ್ಯವಿಲ್ಲದಿದ್ದರೂ ಮಾತಾಡಿ ಸಮಸ್ಯೆಗಳನ್ನು ಸೃಷ್ಟಿಸಿ ಬಿಡುತ್ತೇವೆ. ಎಲ್ಲಕೂ ಪ್ರತಿಕ್ರಿಯಿಸಲೇಬೇಕೆಂಬ ಷರತ್ತನ್ನು ನಾವೇ ಹಾಕಿಕೊಂಡು, ಅದರಂತೆ ನಡೆದು, ನಮ್ಮ ವರ್ತನೆಯ ದೋಷವನ್ನು ಇನ್ನೊಬ್ಬರ ಹೆಗಲಿಗೆ ದಾಟಿಸುತ್ತೇವೆ. ತಪ್ಪೆಂದು ತಿಳಿದ ಮೇಲೂ ಅದರ ಸಮರ್ಥನೆಗಾಗಿ ಹತ್ತಾರು ಮಂದಿಯ ಬಳಿ ಎಡತಾಕಿ, ‘ಅವರು ಹಂಗೆ ಅಂದದ್ದಕ್ಕೆ ನಾನು ಹಿಂಗಂದೆ, ಇದು ತಪ್ಪಾ?’ ಎಂದು ಜಂಕಿಸಿ ಕೇಳುತ್ತೇವೆ; ನಮ್ಮನ್ನು ಇಷ್ಟಪಡುವವರ ಬಳಿ ಹೋಗಿ ಕಷ್ಟ ಕೊಡುತ್ತೇವೆ.
ನಾನು ಆಲೋಚನಾಮಗ್ನವಾಗಿದ್ದನ್ನು ಕಂಡು ಎದುರು ಕುಳಿತು ಅರಿವು ಬೆಳೆಸಿಕೊಳ್ಳಲು ಸಮಯ ತೆಗೆದುಕೊಂಡಿದ್ದ ಗೆಳೆಯರು ಮೌನ ಮುರಿದರು. ‘ನೀವು ಹೇಳುವುದು ಸರಿ. ಉದ್ದೇಶ ಒಳ್ಳೆಯದಿದ್ದರೂ ಅದು ಹಾಗೆಯೇ ತಲಪುವಾಗ ನಮ್ಮ ನಿಯಂತ್ರಣದಲಿ ಇರುವುದಿಲ್ಲ. ನನ್ನ ಪ್ರಾಮಾಣಿಕ ಸದಾಶಯವು ಅವರಿಗೆ ಅರ್ಥವೇ ಆಗಲಿಲ್ಲವಲ್ಲವೆಂಬ ಹತಾಶೆಯಿಂದ ನಾನು ಕೋಪೋದ್ರಿಕ್ತನಾದೆ. ಹತಾಶೆ ಮತ್ತು ನಿರಾಶೆಗಳೇ ಸಿಟ್ಟಿನ ತಾಯ್ತಂದೆಯರು ಎಂಬುದೀಗ ಗೊತ್ತಾಗುತ್ತಿದೆ. ಅದರಿಂದಾಗಿ ಎಲ್ಲವೂ ನನ್ನ ಮಾತುಗಳ ಸಮರ್ಥನೆಯೇ ಆಗಬಿಟ್ಟಿತು. ‘ಪ್ರತಿ ಪುಟವನ್ನೂ ಗಮನಿಸಿದ ಮೇಲೆ ಕಳಿಸಿ ಎಂದು ನಾನು ಮೆಸೇಜು ಮಾಡಿದ್ದೆನೆ? ಯಾಕೆ ಹೀಗೆ ಮನದಲ್ಲಿ ಕಹಿ ತುಂಬಿಕೊಂಡು ಕಾರುತ್ತೀರಿ?’ ಎಂದು ಫೋನು ಮಾಡಿಯೇ ಕೇಳಿಬಿಟ್ಟೆ ಸರ್. ಅದಕ್ಕವರು ಏನೋ ಒತ್ತಡದಲ್ಲಿದ್ದೆ. ಆ ವೇಳೆಯಲ್ಲಿ ನಿಮ್ಮ ಮೆಸೇಜು ನೋಡಿ ನನಗೆ ಉರಿಯಿತು. ಏನೋ ಲೋಪವಾಗಿದೆಯೆಂದು ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಬಿಟ್ಟು ಕ್ಯಾತೆ ತೆಗೆಯುತ್ತಾರಲ್ಲ ಎಂದು ಆಕ್ರೋಶಗೊಂಡೆ’ ಎಂದರು. ಆದರೆ ಆತ ಸಾರಿ ಕೇಳಲಿಲ್ಲ. ನಾನದನ್ನು ನಿರೀಕ್ಷಿಸುತ್ತಿದ್ದೆ. ನಾನು ಅದನ್ನು ಅಲ್ಲಿಗೇ ಬಿಡಬೇಕಿತ್ತು. ಮುಂದುವರೆದು, ‘ಹೌದು, ಒಂದು ವರ್ಷದ ಸಂಚಿಕೆಗೆ ಮೊದಲೇ ದುಡ್ಡು ಕೊಟ್ಟಿರುತ್ತೇವೆ. ಬೈಂಡಿಂಗ್ ಸರಿಯಾಗಿ ಆಗಿಲ್ಲ, ಸ್ವಲ್ಪ ಪ್ರಿಂಟರ್ ಗಮನಕ್ಕೆ ತನ್ನಿ ಎಂದು ಹೇಳುವುದು ನನ್ನ ಹಕ್ಕು. ಆದರೂ ನಾನು ಹಾಗೆ ಮಾತನಾಡಲಿಲ್ಲ. ಒಂದು ಪಕ್ಷ ಹಾಗೆ ಮಾತನಾಡಿದರೂ ನೀವು ಸಹಿಸಿಕೊಳ್ಳಬೇಕು. ಮಾತಿನ ಸತ್ಯಾಂಶವನ್ನು ಅರಿಯಬೇಕು. ಅದು ಬಿಟ್ಟು, ಉರೀತು, ಆಕ್ರೋಶಗೊಂಡೆ ಅಂತ ಅಂದರೆ ಅದು ಘಟನೆ ಮತ್ತು ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ನೀವು ಎಡವಿದ್ದೀರಿ ಎಂದರ್ಥ’ ಎಂದು ಕೂಗಾಡಿದೆ. ಅಷ್ಟರಲ್ಲಿ ನೀವು ಬಂದಿರಿ. ನನಗೆ ನಾಚಿಕೆಯಾದಂತಾಗಿ ಫೋನ್ ಕಟ್ ಮಾಡಿದೆ’ ಎಂದರು.
ನನಗೆ ಎಲ್ಲವೂ ಅರ್ಥವಾಯಿತು. ಇಬ್ಬರ ಟೆನ್ಷನು, ಕಾರ್ಯದೊತ್ತಡ, ಸಂವಹನ ಸಮಸ್ಯೆಗಳು ಮನದಟ್ಟಾದವು. ಇಬ್ಬರ ಕಡೆಯಿಂದಲೂ ಮಾತು ಅತಿಯಾಗಿ ಅದು ಮನಸ್ಸಿಗೆ ನೋವು ತಂದಿತ್ತು. ಯಾತಕ್ಕೂ ಇರಲೆಂದು ಅವರು ಕಳಿಸಿದ್ದ ವಾಟ್ಸಾಪ್ ಮೆಸೇಜ್ ಗಮನಿಸಿದೆ. ನನ್ನ ಎದುರುಗಡೆ ಕುಳಿತಿದ್ದ ಗೆಳೆಯರ ಲೇಖನವೊಂದು ಆ ಪತ್ರಿಕೆಯಲಿ ಅಚ್ಚಾಗಿತ್ತು. ದುರಂತವೆಂದರೆ ಅವರ ಲೇಖನವಿರುವ ಹಾಳೆಗಳ ಕಡೆಯಲ್ಲೇ ಬೈಂಡಿಂಗ್ ಕಿತ್ತು ಹೋಗಿ, ಉದುರಿ ಹೋಗುವಂತಿದ್ದವು. ಇವರು ಅದರ ಫೋಟೊ ತೆಗೆದು ಪುಸ್ತಕದ ಕಟ್ಟು ಸಡಿಲವಾಗಿರುವ ಕಡೆಗೆ ಮಾರ್ಕು ಮಾಡಿ ಕಳಿಸಿದ್ದರು. ಅಲ್ಲೇ ಅವರ ಟೇಬಲ್ಲಿನ ಮೇಲೆ ಆ ಸಂಚಿಕೆಯು ಅನಾಥವಾಗಿ ಬೋರಲಾಗಿತ್ತು. ಕೈಗೆ ತೆಗೆದುಕೊಂಡೆ. ನಿಧಾನವಾಗಿ ಗಮನಿಸಿದೆ. ಕಳಪೆ ಮುದ್ರಣ, ಫೋಟೊಗಳೆಲ್ಲ ಕಪ್ಪು ಮಸಿ, ಗುಣಮಟ್ಟದ ಕಾಗದ ಬಳಸಿದ್ದರೇನೋ ಸರಿ, ಆದರೆ ಬೈಂಡಿಂಗ್ ಅಂತೂ ಕೆಟ್ಟದ್ದಾಗಿತ್ತು. ‘ಏನೋ ಒಂದೆರಡು ಸಂಚಿಕೆಗಳು ಹಾಗಾಗಿರುತ್ತವೆ, ಎಲ್ಲವೂ ಅಲ್ಲ, ನಿಮಗೆ ಅಂಥದು ಪೋಸ್ಟಾಗಿದೆ’ ಎಂದರಂತೆ ಆ ಸಂಪಾದಕ ಮಹಾಶಯ. ಆತನ ಅಹಂಭಾವದ ಸ್ವರೂಪವು ನನಗೆ ಮನವರಿಕೆಯಾಯಿತು. ದುರಂತವೆಂದರೆ ಇವರೆಲ್ಲಾ ಸಾಹಿತ್ಯ ಪತ್ರಿಕೆ ನಡೆಸುತ್ತಿರುವವರು. ಸೋ ಕಾಲ್ಡ್ ಬುದ್ಧಿಜೀವಿ ಪ್ರಗತಿಪಂಥವೆಂದುಕೊಂಡವರ ಸಸ್ನೇಹ ಹೊಂದಿದವರು. ಚಿಕ್ಕಪುಟ್ಟ ವಯಸ್ಸು, ಹಿಂದೆ ಸುಟ್ಟಿಲ್ಲ; ಮುಂದೆ ಸುಟ್ಟಿಲ್ಲ. ಹಾಗಾಗಿ ಸಹಜವಾಗಿಯೇ ಏನೋ, ಯಾರೂ ಮಾಡದ ದೊಡ್ಡ ಸಾಧನೆ ಮಾಡುತ್ತಿದ್ದೇನೆಂಬ ಹುಂಬತನ. ಆತನ ಹೆಸರು, ಊರು, ವೃತ್ತಿ ಮತ್ತು ಧೋರಣೆಗಳನ್ನು ಅರಿತ ಮೇಲೆ ನಾನು ನಿರ್ಧಾರಕ್ಕೆ ಬಂದೆ. ಎದುರು ಇಲ್ಲದ ಮತ್ತು ನನಗೆ ನೇರ ಪರಿಚಯವಿಲ್ಲದ ವ್ಯಕ್ತಿ ಮತ್ತು ವ್ಯಕ್ತಿತ್ವಗಳನ್ನು ನನ್ನ ಲೆಕ್ಕಾಚಾರದ ತಕ್ಕಡಿಯಲ್ಲಿ ತೂಗುವುದು ಎಷ್ಟರಮಟ್ಟಿಗೆ ಸೂಕ್ತ? ಎಂದು ಮರುಕ್ಷಣವೇ ಆಲೋಚಿಸಿ, ಅದನ್ನು ನಿರಸನಗೊಳಿಸಿದೆ. ‘ಮನಸ್ಸಿಗೆ ಬಂದದ್ದನ್ನೆಲ್ಲಾ’ ಎದುರು ಇರುವ ಗೆಳೆಯರ ಮುಂದೆ ಮಾತಾಡಿ ಹಗುರವಾಗಬಾರದು. ಅವರ ವೇದನೆಗೆ ಅವುಷಧಿಯಾಗಬೇಕೇ ವಿನಾ, ಕಣ್ಣೀರಿಗೆ ಕರವಸ್ತ್ರವಾಗಬೇಕೇ ಹೊರತು, ನಾನೇ ಇನ್ನಷ್ಟು ಕೆರೆದು ಹುಣ್ಣು ಮಾಡಬಾರದು. ‘ಕೋತಿ ಹುಣ್ಣು; ಬ್ರಹ್ಮ ರಾಕ್ಷಸ’ ಎಂದು ನಮ್ಮಜ್ಜಿಯು ಗಾದೆ ಹೇಳುತ್ತಿದ್ದರು. ಗಾಯವೊಂದು ಪುಟ್ಟದಿದ್ದಾಗ ಅದು ವಾಸಿಯಾಗಲು ಬಿಡದೆ, ಕೆರೆದು ಕೆರೆದು ವ್ರಣ ಮಾಡಿಕೊಳ್ಳುವುದು ಕಪಿಬುದ್ಧಿ. ಇಂಥ ಎಚ್ಚರ ಮತ್ತು ಎಚ್ಚರಿಕೆಗಳನ್ನು ತೆಗೆದುಕೊಂಡು, ‘ಇವೆಲ್ಲ ಬದುಕಿನ ಪಾಠಗಳು. ಮನಸ್ಸು ನೊಂದಿದೆ ಎಂಬುದನ್ನು ಬಿಟ್ಟರೆ ಇನ್ನಾವ ಹಾನಿಯೂ ನಿಮಗಾಗಿಲ್ಲ. ಗೋಡೆಗೆ ಚೆಂಡು ಎಸೆದ ಮೇಲೆ ರಿಬೌಂಡ್ ಆಗುತ್ತದೆ. ಎಸೆಯುವಾಗಲೇ ರಿಬೌಂಡ್ ಆಗುವ ಎಲ್ಲಕೂ ನಾವು ಸಿದ್ಧವಾಗಬೇಕು. ಇಲ್ಲದಿರೆ, ಚೆಂಡು ಎಸೆಯಬಾರದುʼ ಎಂದೆ. ನನ್ನೊಂದಿಗೆ ಹಂಚಿಕೊಂಡ ಮೇಲೆ ಅವರು ಸಮಾಧಾನಿರಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬಂತು. ನೋಯುವ ಹಲ್ಲಿನ ಕಡೆಗೇ ನಾಲಗೆಯು ಮತ್ತೆ ಮತ್ತೆ ಹೊರಳುವಂತೆ, ಅದದೇ ಮೆಸೇಜು, ಮಾತು ಮತ್ತು ಮನಸ್ಥಿತಿಗಳು ಬೇಡವೆಂದರೂ ನೆನಪಾಗುತ್ತಿರುತ್ತವೆ. ಒಂದೆರಡು ದಿವಸ ಅಷ್ಟೇ. ನಿಂತ ನೀರಿಗೆ ಕಲ್ಲೆಸೆದಾಗ ಅಲೆಗಳೇಳುವಂತೆ ನಮ್ಮ ಮನಸು. ಒಂದು ಸದೂರ ಕಾಯ್ದುಕೊಂಡು ನೋಡುವುದಷ್ಟೇ ನಮ್ಮ ಕೆಲಸ. ಸಾಕ್ಷಿತ್ವವನ್ನು ಬೆಳೆಸಿಕೊಳ್ಳಿ. ಅಹಂಕಾರಕೆ ಉದಾಸೀನವೇ ಮದ್ದು ಎಂದು ಹಿರಿಯರು ಹೇಳಿಲ್ಲವೇ? ಹಾಗಾಗಿ ಇಂಥವನ್ನು ಇಗ್ನೋರ್ ಮಾಡಿ. ಅವರ ಮಾತು ಮತ್ತು ಮೆಸೇಜುಗಳನ್ನು ಡಿಲೀಟಿಸಿ, ‘ಹೋಗತ್ಲಾಗೆʼ ಎಂದು ಬಿಸುಸುಯ್ದು ಮುಂದಿನ ಕೆಲಸ ನೋಡಿ. ನಾವೆಲ್ಲಾ ಸಾಹಿತ್ಯದ ಸಹವಾಸದಿಂದ ಬಹು ಸೂಕ್ಷ್ಮರಾಗಿದ್ದೇವೆ. ಸಹಿಸಿಕೊಳ್ಳುವುದನ್ನು, ಧಾರಣೆ ಮಾಡುವುದನ್ನು, ನಿಂದನೆಗೆ ವಂದನೆ ಹೇಳುವುದನ್ನು ಕಲಿಯಬೇಕಿದೆ. ಬಸವಣ್ಣನವರು ‘ಕಲಬೇಡ, ಕೊಲಬೇಡʼಎಂಬ ತಮ್ಮ ವಚನದಲ್ಲಿ ಹೇಳುವಂತೆ ‘ಅಸಹ್ಯಿಸಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡʼ ಎಂಬ ಮೂರು ಮುತ್ತಿನಂಥ ಸಲಹೆಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದೆ.
ಅವರು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದುದರಿಂದ ಮುಂದುವರಿಸಿದೆ: ‘ಅಸಹ್ಯಿಸಬೇಡ ಎಂದರೆ ಏನೋ ದುರ್ವಾಸನೆ, ಮೂಗು ಮುಚ್ಚಿಕೋ ಎಂದಲ್ಲ; ಅಸಹಿಷ್ಣುತೆ ತೋರಬೇಡ ಎಂದರ್ಥ. ಕೆಲವೊಮ್ಮೆ ಸಹಿಸಿಕೊಳ್ಳಬೇಕು. ಸಹನೆ ವಜ್ರದ ಕವಚ ಎಂದಿಲ್ಲವೇ ಮಂಕುತಿಮ್ಮನ ಕಗ್ಗ ರಚಿಸಿದ ಡಿ ವಿ ಗುಂಡಪ್ಪನವರು. ಸಹಿಸಿಕೊಳ್ಳುವುದು ದೌರ್ಬಲ್ಯವಲ್ಲ; ಸಹಿಸಿಕೊಳ್ಳದೇ ಎಗರಾಡುವುದು ನಿಜವಾದ ದುರ್ಬಲತೆ. ಏಕೆಂದರೆ ವಿಧ ವಿಧವಾದ ಪ್ರಸಂಗ ಮತ್ತು ಸನ್ನಿವೇಶಗಳು ನಮ್ಮ ನಿಯಂತ್ರಣ ಮೀರಿ ಬೆಳೆದಾಗ ಅದರ ಪರಿಣಾಮ ಅನೂಹ್ಯ. ಎಲ್ಲ ವೇಳೆಯಲ್ಲೂ ಮುನ್ನುಗ್ಗುವುದು, ನ್ಯಾಯ ನೀತಿ ಕೇಳುವುದು, ನಾನು ಸರಿ; ನೀನು ತಪ್ಪು ಎಂಬುದು, ಮಾತಿಗೆ ಮಾತು ಬೆಳೆಸುವುದು, ವಾದ-ತರ್ಕ-ಜೋರುಮಾತು-ಬಯ್ಗುಳಗಳಿಂದ ಹೊಡೆದಾಟದ ವಾತಾವರಣ ಸೃಷ್ಟಿಸುವುದು ಇವೆಲ್ಲವೂ ಅಸಹಿಷ್ಣುತೆಯ ಲಕ್ಷಣಗಳೇ. ಪರಿಸ್ಥಿತಿ ಕೈ ಮೀರಿದ ಮೇಲೆ ಅಪರಾಧೀ ಭಾವದಿಂದ ನೊಂದರೆ ಅದಕ್ಕೂ ನಾವೇ ಹೊಣೆ ಅಲ್ಲವೇ? ಸುಮ್ಮನಿರುವುದನ್ನು ಬೇರೆಯವರು ಹೇಡಿತನ ಎನ್ನಬಹುದು. ಅನ್ನಲಿ ಬಿಡಿ, ನಮಗೆ ಬೇಕಾದದ್ದು ಸುಖ ಮತ್ತು ನೆಮ್ಮದಿ ತಾನೇ?’ ಎಂದು ಪ್ರಶ್ನೆಯೆಸೆದೆ. ಅವರನ್ನು ಸಾಂತ್ವನಿಸಲೆಂದು ನಾನು ಹೀಗೆ ಹೇಳಿದ್ದು. ನನಗೇನೂ ಮಾತು ಬೇಕಿರಲಿಲ್ಲ. ಈಗಂತೂ ಮಾತು ನನಗೆ ಸಾಕಾಗಿದೆ. ಏಕಾಂತದಲಿ ಲೋಕಾಂತವನು ಅರಿಯುವ ನಾನಾ ಬಗೆಗಳಲ್ಲಿ ನಾನು ತಲ್ಲೀನನಾಗಿರಲು ಇಷ್ಟಪಡುವವನು. ಅವರು ನನ್ನ ಮಾತುಗಳನ್ನು ತುಂಬ ಸೀರಿಯಸ್ಸಾಗಿ ತೆಗೆದುಕೊಂಡು ಭಾವಪರವಶರಾದರು. ತಮ್ಮೊಳಗೆ ನಡೆಯುತ್ತಿರುವ ಅಂತರ್ಯುದ್ಧಕ್ಕೆ ಮುಖಾಮುಖಿಯಾದರು. ಹೀಗಾದಾಗ ಮೌನವು ಅಲ್ಲಿ ರಾಜ್ಯಭಾರವನ್ನಾಳಬೇಕು; ಮತ್ತೆ ಮಾತಾಡಿ, ಮಲಿನ ಮಾಡಬಾರದು. ಹಾಗಾಗಿ ಅಲ್ಲಿ ಪಿನ್ ಡ್ರಾಪ್ ಸೈಲೆನ್ಸು ನಾಟ್ಯವಾಡಿತು.
ನಮ್ಮ ಆತ್ಮೀಯರು ತಮ್ಮ ಮನದಾಳದ ತಲ್ಲಣ ಮತ್ತು ತೊಡಕುಗಳನ್ನು ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದಾರೆಂದರೆ ಒಂದು ಒತ್ತಾಸೆ, ಸಂತೈಸುವಿಕೆ, ಸಹಾನುಭೂತಿ ಮತ್ತು ಸಲಹಾರೂಪದ ಹೊಸಬೆಳಕನ್ನು ನಿರೀಕ್ಷಿಸುತ್ತಿದ್ದಾರೆಂದರ್ಥ. ಮನುಷ್ಯ ಸಂಬಂಧದ ಮಮತೆ ಮತ್ತು ಘನತೆಗಳನ್ನು ಅರಿತವರು ‘ನಿಮ್ಮದೇ ತಪ್ಪು, ನೀವು ಬದಲಾಗಿʼ ಎಂಬ ಕಠಿಣ ತತ್ತ್ವಶಾಸ್ತ್ರವನ್ನು ಬೋಧನೆ ಮಾಡುವುದರ ಬದಲಾಗಿ ಆಪ್ತ ಸಲಹೆಯಂಥ ಅನುನಯ ಮಾರ್ಗವನ್ನು ಅನ್ವೇಷಿಸಿಕೊಂಡು, ಆಚರಿಸಬೇಕು. ವಸ್ತುನಿಷ್ಠ ಮತ್ತು ವ್ಯಕ್ತಿನಿಷ್ಠಗಳೆರಡರಾಚೆಗೆ ಕೈ ಚಾಚಿ, ಆರೋಗ್ಯಕರವೂ ಅನುಸರಣೀಯವೂ ಆದ ಅನಿಸಿಕೆಗಳ ವಿನಿಮಯವಾಗಬೇಕು. ಒಟ್ಟಿನಲ್ಲಿ ಇಂಥ ಎಂಡಿಂಗು ಹೃದಯವನರಳಿಸಬೇಕು, ಕರುಳನ್ನು ಮುಟ್ಟಬೇಕು, ದ್ವೇಷಾಸೂಯೆಗಳನ್ನು ಇಲ್ಲವಾಗಿಸಬೇಕು. ಹಾಗಂತ ಎದುರಿರುವವರನ್ನು ಇಂದ್ರ, ಚಂದ್ರರೆಂದು ಹೊಗಳುತ್ತಾ, ಎದುರು ಇಲ್ಲದವರನ್ನು ಅವರೊಂದಿಗೆ ನಾವೂ ಸೇರಿ ಬಯ್ಯುತ್ತಾ ನಮ್ಮ ಸ್ವಂತ ಕತೆ-ವ್ಯಥೆ ಮತ್ತು ಬದುಕಿನ ರೋತೆಗಳನ್ನು ಹಂಚಿ, ‘ನಿಮ್ಮ ದುಃಖಕ್ಕೆ ಆಳವಿಲ್ಲ; ನನ್ನದು ಕೇಳಬೇಕು ನೀವುʼ ಎಂದು ಅವರ ಮಹತ್ವವನ್ನು ಕಡೆಗಾಣಿಸಬಾರದು; ಅವರ ನೋವನ್ನು ಕ್ಷುಲ್ಲಕವೆಂದು ತಿರಸ್ಕರಿಸಬಾರದು. ಸಲಹೆಯನ್ನು ಯಾರು ಬೇಕಾದರೂ ಕೊಡುತ್ತಾರೆ; ಆಪ್ತಸಲಹೆ ಕೆಲವರಿಂದ ಮಾತ್ರ ಸಾಧ್ಯ. ಇದಕ್ಕಾಗಿ ಕ್ಲಿನಿಕಲ್ ಸೈಕಾಲಜಿ ಎಂದೇ ಇದೆ; ಸೈಕಿಯಾಟ್ರಿಸ್ಟ್‌ಗಳಿದ್ದಾರೆ. ಸೈಕೋ ಥೆರಪಿಸ್ಟ್‌ಗಳದು ಇದೇ ವೃತ್ತಿ. ನಾನೇ ಹಳ್ಳ ತೋಡಿಕೊಂಡು ಅದರಲ್ಲಿ ಬಿದ್ದು, ಬಸವಳಿಯುತ್ತಾ, ‘ಯಾರೋ ನೂಕಿದರು, ನನ್ನನ್ನು ಬೀಳಿಸಿ, ಮಜಾ ನೋಡಲೆಂದೇ ಗುಂಡಿ ತೆಗೆದಿದ್ದಾರೆಂದುʼ ಆರೋಪಿಸುವುದು ಅಸಹಾಯ ಶೂರರ ಕೆಲಸ. ಸುಮ್ಮನೆ ತನ್ನಷ್ಟಕೆ ತಾನು ಮಲಗಿದ್ದ ನಾಯಿಯ ಬಾಲ ಎಳೆದದ್ದನ್ನು ಯಾರಿಗೂ ಹೇಳದೇ, ಅದು ನನ್ನನ್ನು ಹುಡುಕಿಕೊಂಡು ಬಂದು ಕಚ್ಚಿತು ಎಂದಷ್ಟೇ ಹೇಳುವುದು ನಮ್ಮ ಅಪ್ರಾಮಾಣಿ-ಕತೆಯ ಲಕ್ಷಣ. ಎಲ್ಲ ಕ್ರಿಯೆಗೂ ಪ್ರತಿಕ್ರಿಯೆಯೇ ಉತ್ತರವಲ್ಲ; ಅಕ್ರಿಯೆಯೂ ಉತ್ತರ; ಹಲವೊಮ್ಮೆ ಅದೇ ಸರಿಯಾದ ಎದುರುತ್ತರ ಎಂಬುದನ್ನು ಮರೆತಾಗ ಇಂಥ ಅವಘಡಗಳಿಂದ ನೋವು ಪಡುತ್ತೇವೆ. ನೋವು ಕೊಟ್ಟರು ಎಂದು ದೂರುತ್ತೇವೆ. ಅವರೇನೋ ದುಃಖ ಕೊಟ್ಟರು; ಆದರೆ ನಾವು ಮಾಡಿದ್ದೇನು? ಅವರು ನೀಡಿದ ದುಃಖದ ಬೀಜವನ್ನು ಬೊಗಸೆಯೊಡ್ಡಿ, ಪಡೆದು, ಉತ್ತು-ಬಿತ್ತಿ, ಫಲವನ್ನು ಉಂಡು ರೋದಿಸುತ್ತೇವೆ. ನೋಡಿ, ಹಣ್ಣು ಬಿಡುವತನಕ ಗೊತ್ತಾಗಲಿಲ್ಲ; ಮಾವೆಂದು ಬೀಗಿದೆ – ಆದರೆ ಬೇವನಗಿದು ಮುಖ ಕಿವುಚಿಕೊಂಡೆ ಎಂದು ಅಳಲುಪಡುತ್ತೇವೆ, ಹುಡುಕಿಕೊಂಡು ಹೋಗಿ ಅತ್ತೂ ಕರೆದು, ಅವರಿಗೂ ವೇದನೆಯ ಔತಣ ಬಡಿಸುತ್ತೇವೆ. ನಾವು ಬದಲಾಗುವುದಿಲ್ಲ; ಮತ್ತೊಬ್ಬರು ಬದಲಾಗಲೆಂದು ಬಯಸುತ್ತೇವೆ. ನಾನು ಮಾಡಿದ್ದನ್ನೂ ಅಂದಿದ್ದನ್ನೂ ಹೇಳದೇ, ‘ಅವರು ಮಾಡಿದ್ದು ಸರಿಯಾ? ನೀವೇ ಹೇಳಿ!’ ಎಂದು ನಮ್ಮಿಷ್ಟದ ತೀರ್ಪಿಗಾಗಿ ಕಾಯುತ್ತೇವೆ. ಇಂಥ ಕಡೆ ಕವಿನುಡಿಯೊಂದೇ: ‘ಇದ್ದಂತೆ ಜಗವಿಹುದು; ನೀನು ಬದಲಾಗು!!’
ಇಬ್ಬರೂ ನಮ್ಮದೇ ಲಹರಿಯಲ್ಲಿ ಮಗ್ನರಾಗಿ ಪರದೆಯ ಮೇಲೆ ಚಲನಚಿತ್ರ ವೀಕ್ಷಿಸುವಂತೆ ತದೇಕವಾಗಿದ್ದೆವು. ಆಗ ನನ್ನ ಗೆಳೆಯರು ಸಡನ್ನಾಗಿ ಮೇಲೆದ್ದರು. ಏನನ್ನೋ ನಿಶ್ಚಯಿಸಿದಂತೆ, ಮೊಬೈಲು ಫೋನನ್ನು ಕೈಗೆ ತೆಗೆದುಕೊಂಡು, ಅವರಿಗೆ ಕಳಿಸಿದ್ದ ಮೆಸೇಜು, ಫೋಟೊ, ಕಾಲ್ ರೆಕಾರ್ಡು ಎಲ್ಲವನ್ನೂ ಡಿಲೀಟಿಸಿದರು. ‘ನನ್ನ ಕಡೆಯಿಂದ ಜೋರು ಮಾತುಗಳು ಬಂದವು. ಕ್ಷಮೆಯಿರಲಿ. ಮಾತಾಡುವ ಮತ್ತು ಕೇಳಿಸಿಕೊಳ್ಳುವ ಸಂವಹನವೇ ಸಮಸ್ಯೆಗಳಾಗಿ ನಮ್ಮನ್ನಾಳಿದವು. ಕನ್ನಡದ ಮತ್ತು ಸಾಹಿತ್ಯದ ಕೆಲಸ ಮಾಡುತ್ತಿದ್ದೀರಿ. ಒಂದು ಮಾತಿನಿಂದ, ಒಂದು ಪ್ರಸಂಗದಿಂದ ನಾವು ವ್ಯಕ್ತಿತ್ವವನ್ನು ಅಳೆಯಬಾರದು. ನಿಮಗೂ ಏನೋ ವಿಷಗಳಿಗೆ. ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಮೊದಲಿನಂತಿರೋಣʼ ಎಂದು ಮೆಸೇಜು ಹಾಕಿ ನಿರುಮ್ಮಳವಾದರು. ಶಾಪವಿಮೋಚಿತರಂತೆ ಹಗುರಾದರು. ಟೈಪಿಸಿದ್ದು ಹೀಗೆ ಎಂದು ನನಗೆ ತೋರುತ್ತಾ, ತ್ಯಾಂಕ್ಸ್ ಎಂದರು. ನಾನೂ ನಿರಾಳನಾದೆ. ಮನಪರಿವರ್ತನೆಯೊಂದು ಕಣ್ಣಾರೆ ನಡೆದ ಪವಾಡಕ್ಕೆ ಸಾಕ್ಷಿಯಾದೆ.
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
ಪ್ರಕಟಿಸಿದ ಸುರಹೊನ್ನೆಗೆ ನಾನು ಆಭಾರಿ,
ಪ್ರತಿ ಬಾರಿ…..〽️
ಓದಿ, ಅಭಿಪ್ರಾಯಿಸುವ ಎಲ್ಲ
ಸಹೃದಯ ಓದುಗರಿಗೆ ನನ್ನ ಧನ್ಯವಾದ
ಉತ್ತಮ ಮಾಹಿತಿಯನ್ನುಳ್ಳ…ಸೊಗಸಾದ ಲೇಖನ.. ಅಭಿಪ್ರಾಯ ಓದಿ..ಧನ್ಯವಾದಗಳನ್ನು..ಮೊದಲೇ ಹೇಳಿರುವುದು… ಇನ್ನೂ…ಯೋಚಿಸ ಬೇಕಾದ..ಮಾತು…ಅಲ್ಲವೇ..ಮಂಜು ಸಾರ್
ತುಂಬಾ ಚೆನ್ನಾಗಿದೆ ಸರ್ ಲೇಖನ. ಯಾವುದೇ ಒಂದು ವಿಚಾರಕ್ಕೆ ಪ್ರತಿಕ್ರಿಯಿಸುವ ಮೊದಲು ನಾವು ನಮ್ಮ ಮುಂದಿರುವವರ ಜಾಗ, ಪರಿಸ್ಥಿತಿಯನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು ಅಂತ ಬಹಳಷ್ಟು ಬಾರಿ ನಾನೂ ತಲೆಗೆ ತುಂಬಿಕೊಳ್ಳುತ್ತಿರುತ್ತೇನೆ. ಯಾಕೆಂದರೆ ಮೇಲ್ನೋಟಕ್ಕೆ ಕಂಡಷ್ಟು ಸಲೀಸಾಗಿ ಇರುವುದಿಲ್ಲ ಪರಿಸ್ಥಿತಿಗಳು. ಮುಖ್ಯ ವಿಚಾರ ಬೇರೆಯೇ ಇರುತ್ತದೆ.
ಆಪ್ತ ಸಲಹೆಯಂಥ ಅನುನಯ ಮಾರ್ಗವನ್ನು ಅನ್ವೇಷಿಸಿಕೊಂಡು, ಆರೋಗ್ಯಕರ ಅನಿಸಿಕೆಗಳ ವಿನಿಮಯವಾಗಬೇಕು ಎನ್ನುವ ಆಶಯದ ಲೇಖನ ಚೆನ್ನಾಗಿದೆ.
ಪಿ ಯು ಸಿ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯವಾಗಬಲ್ಲ ಮನೋವಿಶ್ಲೇಷಣಾತ್ಮಕ ಲೇಖನ.
ಮೀನಗುಂಡಿಯವರ ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ ನನ್ನ ಮನೋಚಕ್ಷುವಿಗೆ ಗೋಚರಿಸಿತು.
ಸೊಗಸಾದ ಎಷ್ಟೋ ಇಂಗ್ಲಿಷ್ ಪದಗಳನ್ನು ಕನ್ನಡೀಕರಿಸುತ್ತಿರುವ ನಿಮ್ಮ ಪ್ರಯತ್ನ ಚೇತೋಹಾರಿಯಾಗಿದೆ.
ಶುಭವಾಗಲಿ
ಹಲವರ ಮನಃಪರಿವರ್ತನೆಗೆ ಸಹಕಾರಿಯಾಗಲಿರುವ ಸಶಕ್ತ ಲೇಖನಕ್ಕಾಗಿ ಅಭಿನಂದನೆಗಳು ಮಂಜುರಾಜ್ ಸರ್.
ಮನಸ್ಸನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕಾದ ಅಗತ್ಯತೆಯನ್ನು ಒತ್ತಿ ಹೇಳುವ ಉತ್ತಮ ಲೇಖನ…ಧನ್ಯವಾದಗಳು.