ಬಸವಣ್ಣ – ಶರಣಸತಿ ಲಿಂಗಪತಿ ತತ್ತ್ವ

Share Button

1 ಪುರುಷಾರ್ಥಗಳ ಸ್ಥಾನಮಾನ

ನಮ್ಮ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಪುರುಷಾರ್ಥಗಳ ಪರಿಕಲ್ಪನೆ ಇದೆ. ಇವುಗಳನ್ನು ಪ್ರತಿಯೊಬ್ಬರೂ ಅತ್ಯಾವಶ್ಯಕವಾಗಿ ಭಾವಿಸಲೇ ಬೇಕಾದ ಜೀವನ ಮೌಲ್ಯಗಳೆಂದು ನಮ್ಮ ಸಂಸ್ಕೃತಿಯು ಹೇಳುತ್ತದೆ. ಬಸವಣ್ಣನವರ ಕಾಲದಲ್ಲಿ ಈ ಮೌಲ್ಯಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿರುವಂತಹವು ಎಂಬ ತಿಳುವಳಿಕೆ ಜನರಲ್ಲಿ ಇರಲಿಲ್ಲ. ಬದಲಿಗೆ ಅವುಗಳಿಗೆ ಬಿಡಿಬಿಡಿಯಾಗಿ ಮರ್ಯಾದೆ ಇತ್ತು. ಇದರಿಂದಾಗಿ ಅವು ವಿಕೃತ ರೂಪದಲ್ಲಿ ಮೆರೆದಾಡುತ್ತಿದ್ದವು.

ಧರ್ಮದ ಸಾರ ಲಕ್ಷಣವು ದೈವಭಕ್ತಿ ಎಂದು ತಿಳಿದ ಜನರು ದೇವಾಲಯಕ್ಕೆ ಹೋಗುತ್ತಿದ್ದರು. ದೇವಸ್ಥಾನಗಳನ್ನು ಕಟ್ಟುತ್ತಿದ್ದರು. ಅದರ ಜೊತೆಗೆ ದೇವರ ಸೇವೆಗಾಗಿ ಎಂದು ಸೂಳೆಗೇರಿಗಳನ್ನು ದೇವಸ್ಥಾನಕ್ಕೆ ಹೊಂದಿಕೊಂಡಂತೆ ರೂಪಿಸುತ್ತಿದ್ದರು. ಎಷ್ಟೋ ಜನ ತಮ್ಮ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿಸುತ್ತಿದ್ದರು; ದೇವರ ಸೇವೆ ಮಾಡಿದೆವು ಎಂದೋ, ದೇವರಿಗೆ ಹರಕೆಯನ್ನು ಸಲ್ಲಿಸಿದೆವು ಎಂದೋ ಸಮಾಧಾನ, ತೃಪ್ತಿ ಪಟ್ಟುಕೊಳ್ಳುತ್ತಿದ್ದರು. ಈ ದಾಸಿಯರು ದೇವರ ಭಕ್ತರ ಶಯನಸೇವೆಯನ್ನೂ ಮಾಡುತ್ತಿದ್ದರು. ಅದೂ ದೈವಭಕ್ತಿಯ ಒಂದು ರೂಪ ಎಂದೇ ತಿಳಿಯುತ್ತಿದ್ದರು.

ಆಗಿನ ಕಾಲದ ಸಮಾಜವು ಪುರುಷನನ್ನು ಮಾತ್ರ ಆರ್ಥಿಕ ಮಾನ ಎಂದು ಮರ್ಯಾದಿಸುತ್ತಿತ್ತು. ಅರ್ಥ ಪುರುಷಾರ್ಥವನ್ನು ಸಮಾಜ ಸಹಜವಾಗಿಯೇ ಮರ್ಯಾದಿಸುತ್ತಿತ್ತು. ಅರ್ಥ ಪುರುಷಾರ್ಥವನ್ನು ಮರ್ಯಾದಿಸುವುದು ಎಂದರೆ ಆರ್ಥಿಕ-ಮಾನ ಆಗಿರುವ ಪುರುಷನಿಗೆ ಬೆಲೆಯನ್ನು ಕೊಡುವುದು ಎಂದು ಅರ್ಥ-ಪುರುಷಾರ್ಥವನ್ನು ವ್ಯಾಖ್ಯಾನಿಸಿತ್ತು. ಜೊತೆಗೆ `ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗುವಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ` ಎಂದು ಸ್ತ್ರೀಯನ್ನು ನಿಂದಿಸುತ್ತಿತ್ತು, ತಿರಸ್ಕರಿಸುತ್ತಿತ್ತು.

ಆದರೂ ಕಾಮ ಪುರುಷಾರ್ಥದ ಮಹತ್ವವು ಅಂಗಭೋಗದಲ್ಲಿದೆ ಎಂದು ಅರ್ಥೈಸಿದ ಜನರು ಲೈಂಗಿಕ ತೃಪ್ತಿಗಾಗಿ ಗೃಹಸ್ಥರಾಗಿದ್ದರು. ಬಹು ಸಂಖ್ಯಾತರಾಗಿದ್ದ ಗೃಹಸ್ಥರಲ್ಲಿ ಕೆಲವರು ಮಾತ್ರ ಗಂಡು ಹೆಣ್ಣು ಇಬ್ಬರೂ ಮಾನಸಿಕವಾಗಿ ಪರಸ್ಪರ ನಿಷ್ಠೆಯುಳ್ಳವರಾಗಿದ್ದರೆ ಮಾತ್ರ ಅವರ ಲೈಂಗಿಕ ಸಂಬಂಧವು ಅರ್ಥಪೂರ್ಣವಾಗಿರುತ್ತದೆ ಎಂದು ಭಾವಿಸಿದ್ದರು. ಹೀಗಾಗಿ ದೈಹಿಕ ಕಾಮನೆಗಳನ್ನು ಈಡೇರಿಸಿಕೊಳ್ಳಲು ಬಯಸುವವರನ್ನು ಮಾತ್ರವಲ್ಲದೆ ಮಾನಸಿಕ ನಿಷ್ಠೆಗಾಗಿ ಹಂಬಲಿಸಿ, ಅದು ದೊರೆಯದೆ ನಿರಾಶರಾಗಿ ಲೈಂಗಿಕ ತೃಪ್ತಿ ಹೇಗೋ ಸಿಕ್ಕಿದರಾಯಿತು ಎಂದುಕೊಂಡವರನ್ನೂ ವೇಷ್ಯಾವಾಟಿಕೆಗಳು ಕೈಬೀಸಿ ಕರೆಯುತ್ತಿದ್ದವು. ರಾಜಕೀಯ ಕಾರಣಗಳಿಗಾಗಿ ವೇಷ್ಯೆಯರಿಗೆ ಮೊದಲಿನಿಂದಲೂ ಮಹತ್ವ ಇದ್ದೇ ಇತ್ತು. ತೆರಿಗೆಯ ಮೂಲಕ ದೊರೆಯುವ ರಾಜ್ಯಾದಾಯದಲ್ಲಿ ವೇಷ್ಯೆಯರದು ಸಿಂಹಪಾಲು ಆಗಿತ್ತು.

ಮೋಕ್ಷಕ್ಕೂ ಸನ್ಯಾಸ ಸ್ವೀಕರಿಸುವುದಕ್ಕೂ ಅಭೇಧತೆಯನ್ನು ಕಲ್ಪಿಸಿದ್ದ ಸಮಾಜವು ಸನ್ಯಾಸಿಗಳಿಗೆ ವಿಶೇಷವಾದ ಸ್ಥಾನವನ್ನು ಕೊಟ್ಟಿತ್ತು. ಸನ್ಯಾಸಿಗಳಿಗಾಗಿ ಮಠಗಳಿದ್ದವು. ಇವರಿಗೆ ವಿಶೇ಼ಷ ಸವಲತ್ತುಗಳಿದ್ದವು. ಇವರಲ್ಲಿ ಕೆಲವರು ಮಾತ್ರ ನಿಷ್ಠೆಯಿಂದ ಬ್ರಹ್ಮಚರ್ಯ ವ್ರತವನ್ನು ಪಾಲಿಸುತ್ತಿದ್ದರು. ಈ ವ್ರತಕ್ಕೆ ಭಂಗ ಬಾರದಂತೆ ಎಚ್ಚರಿಕೆಯನ್ನು ವಹಿಸುತ್ತಿದ್ದರು. ಸ್ತ್ರೀಯರೊಂದಿಗೆ ಮಾತ್ರವಲ್ಲದೆ ಜನಸಾಮಾನ್ಯ ಪುರುಷರ ಒಡನಾಟದಿಂದಲೂ ಇವರು ದೂರವಿರುತ್ತಿದ್ದರು. ಇವರ ಜೊತೆಗೆ ತಾವು ವಿರಕ್ತರು ಎಂದು ಸೋಗು ಹಾಕುವ ಸನ್ಯಾಸಿಗಳೂ ಸಮಾಜದಲ್ಲಿದ್ದರು. ಇವರು ತಮ್ಮನ್ನೂ ವಂಚಿಸಿಕೊಳ್ಳುತ್ತಿದ್ದರು, ಇತರರನ್ನೂ ವಂಚಿಸುತ್ತಿದ್ದರು.

ಮೋಕ್ಷಕ್ಕೂ ಸಿಧ್ಧಿಸಾಧನೆಗೂ ತಾಂತ್ರಿಕ ಆರಾಧನೆಗೂ ಅಭೇದವನ್ನು ಕಲ್ಪಿಸಿದ ತಾಂತ್ರಿಕರು ಆ ಕಾಲದ ಸಮಾಜದಲ್ಲಿ ಗಮನಾರ್ಹ ಸಂಖ್ಯೆಯಲ್ಲಿದ್ದರು. ಇವರು ಪಂಚ `ಮ`ಗಳನ್ನು ತಮ್ಮ ಆರಾಧನೆಗೆ, ಸಿಧ್ಧಿಸಾಧನೆಗೆ ಅತ್ಯಾವಶ್ಯಕ ಎಂದು ನಂಬಿದ್ದರು. ಲೈಂಗಿಕ ಸಂಭೋಗವು ಮೂಲಾಧಾರ ಚಕ್ರದಲ್ಲಿ ಸುಪ್ತವಾಗಿರುವ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ; ಈ ಶಕ್ತಿಯು ಸ್ವಾಧಿಷ್ಠಾನ, ಮಣಿಪೂರ ಮುಂತಾದ ಚಕ್ರದಲ್ಲಿ ಹಾದುಹೋಗಿ ವಿಕಾಸಗೊಳ್ಳುತ್ತದೆ; ಕೊನೆಗೆ ಸಹಸ್ರಾರದಲ್ಲಿ ಅರಳುತ್ತದೆ; ಆಗ ಸಾಧಕನು ಸಿಧ್ಧನಾಗುತ್ತಾನೆ ಮತ್ತು ಮೋಕ್ಷಗಾಮಿಯಾಗಿರುತ್ತಾನೆ ಎಂದು ಭಾವಿಸಿದ್ದರು.

ತಾಂತ್ರಿಕರು ತಮ್ಮ ಆರಾಧನೆಯ ಅತ್ಯಾವಶ್ಯಕ ಅಂಗವಾದ ಷೋಡಶಿ ಪೂಜೆಗಾಗಿ ಷೋಡಶಿಯರನ್ನು ಅಪಹರಿಸುತ್ತಿದ್ದರು; ಸ್ತ್ರೀಪುರುಷರನ್ನು ಒಂದು ರೀತಿಯ ಸಮ್ಮೋಹನಕ್ಕೆ ಒಳಪಡಿಸಿ ಭ್ಯರವಿ-ಭೈರವ ದೀಕ್ಷೆಯನ್ನು ಕೊಡುತ್ತಿದ್ದರು. ಇವರೂ, ಇವರಿಂದ ದೀಕ್ಷೆ ಪಡೆದವರೂ ಇಬ್ಬರೂ ಕುಟುಂಬಕ್ಕಾಗಿ ಮತ್ತು ಸಮಾಜಕ್ಕಾಗಿ ಮಾಡಬೇಕಾಗಿದ್ದ ಕರ್ತವ್ಯಗಳಿಗೆ ಬೆನ್ನು ತೋರಿಸುತ್ತಿದ್ದರು; ಕಾಡು ಮೇಡು ತಿರುಗುತ್ತಿದ್ದರು. ಮಠಗಳಲ್ಲಿದ್ದ ಸನ್ಯಾಸಿಗಳಂತೆ ಇವರೂ ಪರಾವಲಂಬಿಗಳಾಗಿ ಬದುಕುತ್ತಿದ್ದರು.

ವಿಕಾರಕ್ಕೆ ಒಳಪಟ್ಟ ಈ ಮೌಲ್ಯಗಳಿಗೆ ಕಾಯಕಲ್ಪ ಚಿಕಿತ್ಸೆಯಾಗಿ ಬಸವಣ್ಣನವರು `ಶರಣಸತಿ ಲಿಂಗಪತಿ` ನಿಲುವನ್ನು ಪ್ರತಿಪಾದಿಸಿದುದು ಆಗಿನ ಕಾಲಕ್ಕೆ ಮಾತ್ರವಲ್ಲದೆ ಇಂದಿಗೂ ಪ್ರಸ್ತುತವೇ ಆಗಿದೆ. ಸ್ತ್ರೀಪುರುಷರ ನಡುವಿನ ಸಂಬಂಧಕ್ಕೆ ಲೌಕಿಕ ಮತ್ತು ದೈವಿಕ ಆಯಾಮಗಳೆರಡನ್ನೂ ಕೊಡುವುದು ಈ ನಿಲುವಿನ ಮುಖ್ಯಾಂಶ.

2

ಸ್ತ್ರೀಪುರುಷ ಸಂಬಂಧ

ಸ್ತ್ರೀಪುರುಷರ ನಡುವಿನ ಸಂಬಂಧವು ಮೂಲಭೂತವಾಗಿ ಲೈಂಗಿಕ ಸಂಬಂಧವೇ ಆಗಿದೆ ಎನ್ನುವುದರಲ್ಲಿ ಬಸವಣ್ಣನವರಿಗೆ ಸಂದೇಹವಿರಲಿಲ್ಲ. ಕಾಲಾನುಕಾಲದಲ್ಲಿ ದೊರೆತ ಅಪಾರ ಅನುಭವಗಳು ಲೈಂಗಿಕ ಸಂಬಂಧಕ್ಕೆ ವೈಯಕ್ತಿಕ ಮತ್ತು ಸಾಮಾಜಿಕ ಹಾಗೂ ಸಾಮುದಾಯಿಕ ಆರೋಗ್ಯದ ದೃಷ್ಟಿಯಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಇತಿಮಿತಿಗಳನ್ನು ರೂಪಿಸಿಕೊಳ್ಳಲು ಪ್ರೇರೇಪಿಸಿವೆ ಎಂಬುದರಲ್ಲಿಯೂ ಬಸವಣ್ಣನವರಿಗೆ ಅನುಮಾನ ಇರಲಿಲ್ಲ. ಇದರಿಂದಾಗಿ ಬಹು ಪತ್ನಿತ್ವ, ವೈವಾಹಿಕ ವಿಧಿಗಳ ಅಗತ್ಯವಿಲ್ಲದ ಕೂಡಾವಳಿ, ಪರಸ್ತ್ರೀ-ಪರಪುರುಷಗಮನ, ಮನೆಯಲ್ಲಿಯ ದಾಸ ದಾಸಿಯರೊಂದಿಗೆ, ಹೆಂಡತಿಯ ಸಖಿಯರೊಂದಿಗಿನ ಲೈಂಗಿಕ ಸಂಬಂಧವನ್ನೂ, ವೇಷ್ಯಾವಾಟಿಕೆಗಳನ್ನೂ ಸಮಾಜವು ಮೌನವಾಗಿ ಸಹಿಸಿಕೊಂಡಿರುವುದು ಬಸವಣ್ಣನವರಿಗೆ ಹಿತ ಎನ್ನಿಸಲಿಲ್ಲ. ಹಾಗೆಯೇ ಲೈಂಗಿಕ ಸಂಬಂಧದ ಇತಿಮಿತಿಗಳನ್ನು ಮೀರಿದುದರಿಂದ ಮಹಾಪರಾಧವಾಗಿದೆ ಎಂದು ಯಾರಾದರೂ ದೂರಿದರೆ ಮಾತ್ರ ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸುವ ಸಾಧ್ಯತೆಯನ್ನು ಮತ್ತು ಅಧಿಕಾರವನ್ನು ಮಾತ್ರ ಸಮಾಜವು ಹೊಂದಿರುವುದನ್ನೂ ಒಪ್ಪಲು ಬಸವಣ್ಣನವರಿಗೆ ಇಷ್ಟವಿರಲಿಲ್ಲ.

ಬಸವಣ್ಣನವರ ಕಾಲದಲ್ಲಿದ್ದ ಇಂಥ ಸಾಮಾಜಿಕ ಹಿನ್ನೆಲೆಯಲ್ಲಿ ಶುಧ್ಧ ವೈರಾಗ್ಯವಾಗಲೀ, ಶುಧ್ಧ ಸಾಂಸಾರಿಕ ಜೀವನವಾಗಲೀ ಒಂದು ಮೌಲ್ಯವಾಗಲು ಸಾಧ್ಯವೇ ಇಲ್ಲವೆಂದು ಬಸವಣ್ಣನವರು ಅರ್ಥ ಮಾಡಿಕೊಂಡಿದ್ದರು. ಆದರೆ ವೈರಾಗ್ಯಕ್ಕೆ ಮತ್ತು ಸಾಂಸಾರಿಕ ಜೀವನಕ್ಕೆ ತನ್ನದೇ ಆದ ಮೌಲ್ಯವಿದೆ ಎಂಬುದು ಅವರಿಗೆ ತಿಳಿದಿತ್ತು. ತಮ್ಮ ಕಾಲದ ಸಮಾಜದಲ್ಲಿ ಯಾವ ಜೀವನರೀತಿ ಇದೆಯೋ ಅದು ಸಂಪೂರ್ಣವಾಗಿ ಎಂದೂ ತನ್ನ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ ಎಂಬುದೂ ಅವರಿಗೆ ತಿಳಿದಿತ್ತು. ಹೀಗಾಗಿ ಇವೆಲ್ಲವನ್ನೂ ಹೊಂದಿಸುವ ಮತ್ತು ಇರುವ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಹೆಚ್ಚಿನ ಜೀವನ-ಸಾಧ್ಯತೆಯನ್ನು ಕಂಡುಕೊಳ್ಳುವ ನಿಲುವನ್ನಾಗಿ ಬಸವಣ್ಣನವರು ತಮ್ಮ `ಶರಣಸತಿ ಲಿಂಗಪತಿ` ನಿಲುವನ್ನು ಪ್ರತಿಪಾದಿಸಿರುವುದು ಮುಖ್ಯ ಸಂಗತಿ.

`ಸತಿ ಪತಿ ರತಿ ಸುಖವನ್ನು ಬಿಟ್ಟರೇ ಸಿರಿಯಾಳ ಚೆಂಗಳೆಯರು; ಸತಿ ಪತಿ ರತಿ ಭೋಗೋಪಭೋಗ ವಿಲಾಸವ ಬಿಟ್ಟರೇ ಸಿಂಧು ಬಲ್ಲಾಳನವರು` (ವ.೬೪೦, ಪು.೨೨೪) ಎಂದು ಯೋಚಿಸುವ ಬಸವಣ್ಣನವರು ಶುಧ್ಧ ವಿರಕ್ತಿಯ ಅಗತ್ಯವನ್ನು ನಿರಾಕರಿಸಿದರೂ ಶುಧ್ಧ ವಿರಕ್ತಿಗೆ ಬರಿಯ ಸಾಂಸಾರಿಕ ಜೀವನವು ಧೃವ ವಿರೋಧಿ ಪರ್ಯಾಯವೆಂದೇನೂ ತಿಳಿಯುವುದಿಲ್ಲ. ಅರ್ಥ ಪ್ರಧಾನವಾದ ಸಾಂಸಾರಿಕ ಜೀವನದಲ್ಲಿ ಒಬ್ಬನ ಲಾಭ ಇನ್ನೊಬ್ಬನ ನಷ್ಟ ಎಂಬ ಸೂತ್ರವನ್ನು ಆಧರಿಸಿರುತ್ತದೆ ಎಂಬುದು ಬಸವಣ್ಣನವರಿಗೆ ಗೊತ್ತಿತ್ತು. ಸಾಂಸಾರಿಕ ಜೀವನವು ಪುರುಷನನ್ನು ಪ್ರಧಾನನನ್ನಾಗಿಸಿ ಸ್ತ್ರೀಯ ಬದುಕು ಸ್ವತಂತ್ರವಾಗಿ ಅರ್ಥಪೂರ್ಣ ಆಗುವ ಸಾಧ್ಯತೆಯ ಬಾಗಿಲನ್ನು ಮುಚ್ಚಿದೆ ಎಂಬುದನ್ನು ಅವರು ಗ್ರಹಿಸಿದ್ದರು. ಸಾಂಸಾರಿಕ ಜೀವನವು ಬಿಗಿಯಾದ, ಅರ್ಥವಿಹೀನವಾದ ಆದರೆ ಸಾಮಾಜಿಕ ವ್ಯವಸ್ಥೆಯನ್ನು ಉಳಿಸುವ ಕಟ್ಟುಪಾಡುಗಳನ್ನು ಆಧರಿಸಿದೆ ಎಂಬುದನ್ನೂ ಗ್ರಹಿಸಿದ್ದರು.

ಒಟ್ಟಾರೆ ಸಾಂಸಾರಿಕ ಜೀವನವು ಬಗೆ ಬಗೆಯ ಅಸಮಾನತೆಗಳ ನೆಲೆ ಆಗಿರುವುದನ್ನು ಬಸವಣ್ಣನವರು ಗುರುತಿಸಿದ್ದರು. ಆದ್ದರಿಂದಲೇ `ಹೆಂಗೂಸು ಗಂಡುಕೂಸು ನೀನೇ ದೇವ…..ಭ್ರಾಂತವಳಿದು ಭಾವ ನಿಂದುದಾಗಿ` ಎಂದು ಪುರುಷ-ಸ್ತ್ರೀಎಂಬ ಮೂಲಭೂತ ಪ್ರತ್ಯೇಕತೆಗೇ ಅವಕಾಶ ಇಲ್ಲ ಎನ್ನುತ್ತಾರೆ. `ನರ ವಿಂಧ್ಯದೊಳಗೆನ್ನ ಹುಲು ಗಿಳಿಯ ಮಾಡಿ, ಸಲಹುತ್ತ ಶಿವ ಶಿವಾ ಎಂದೋದಿಸಯ್ಯ, ಭಕ್ತಿಯಂಬ ಪಂಜರದೊಳಿಕ್ಕಿ ಸಲಹು ಕೂಡಲ ಸಂಗಮ ದೇವ` (ವ.೫೮, ಪು.೧೮) `ಭಕ್ತಿರಸವ ದಾಣಿಯ ಮೇಯಿಸಿ…… ನೋಡಿ ಸಲಹಯ್ಯ ಕೂಡಲ ಸಂಗಮ ದೇವ` (ವ.೫೧, ಪು.೧೮) ಎಂದು ಪ್ರಾರ್ಥಿಸುತ್ತಾರೆ. ಮತ್ತು ಧರ್ಮದ ಹೆಸರಿನಲ್ಲಿ ವಿಜೃಂಭಿಸುತ್ತಿದ್ದ, ಅಟ್ಟಹಾಸದಿಂದ ನಗುತ್ತಿದ್ದ ಆಚರಣೆಗಳನ್ನು ಹಾಗೂ ಕಟ್ಟುಪಾಡುಗಳ ಮೌಲ್ಯವನ್ನು ನಿರಾಕರಿಸುತ್ತಾರೆ. ಶುಧ್ಧ ಆಂತರಂಗಿಕ ದೈವಭಕ್ತಿಯನ್ನು ಎತ್ತಿಹಿಡಿದು `ಲಿಂಗವ ಗೆಲುವೊಡೆ ಶರಣಸತಿ ಲಿಂಗಪತಿ ಎಂಬುದೊಂದಲಗು ಸಾಲದೆ` (ವ.೭೩೭, ಪು.೨೬೪) ಎಂದು ಬಸವಣ್ಣನವರು ಘೋಷಿಸುತ್ತಾರೆ.

ಜಗತ್ತಿನಲ್ಲಿರುವ ಸ್ತ್ರೀಪುರುಷರೆಲ್ಲರೂ ಲಿಂಗಪತಿಗೆ ಶರಣ ಸತಿಯರು ಎಂದು ಭಾವಿಸುವುದರ ಮೂಲಕ ಕಾಮಕ್ಕಾಗಿ ಕಾಮ ಎಂಬ ಜೀವನ ರೀತಿಯನ್ನು ಅಪಮೌಲ್ಯಗೊಳಿಸಿದರು. ಲಿಂಗವನ್ನು, ದೈವವನ್ನು ಆತ್ಯಂತಿಕ ಮೌಲ್ಯ ಎಂದು ಅರ್ಥ ಮಾಡಿಕೊಳ್ಳಲು ವಿವಿಧ ತಾಕಲಾಟಗಳಿರುವ ಜಗತ್ತಿನಲ್ಲಿ ನಡೆಸುವ ಸಾಂಸಾರಿಕ ಜೀವನವು ಒಂದು ಮಾಧ್ಯಮ ಎಂದರು. ಶಿವನಿಗೆ ಶರಣ ಸತಿಯರು ಆಗುವುದಕ್ಕಾಗಿ ಸಾಧನ ಸಂಪತ್ತು ಗೃಹಸ್ಥಾಶ್ರಮ ಎಂದು ಭಕ್ತಿಭಾವದ ಹಿನ್ನೆಲೆಯಲ್ಲಿ ಗೃಹಸ್ಥಾಶ್ರಮವನ್ನು ವ್ಯಾಖ್ಯಾನಿಸಿದರು.

ಈ ವ್ಯಾಖ್ಯೆಯ ಮೂಲಕ ಅರ್ಥ ಸಂಪಾದನೆಗೂ ಭಕ್ತಿಭಾವ ಪೋ಼ಷಣೆಗೂ ಸಂಬಂಧವನ್ನು ಕಲ್ಪಿಸಿ ಅರ್ಥದ ಮೌಲ್ಯವನ್ನೂ ಪುನರ್ ವ್ಯಾಖ್ಯಾನಿಸಿದರು. ಆ ಮೂಲಕ ಶರಣ ಸತಿ ಲಿಂಗಪತಿ ನಿಲುವು ಸಾಂಸಾರಿಕ ಜೀವನದ ಇತಿಮಿತಿಗಳನ್ನು ಮೀರುವ ನಿಲುವು ಆಗಿದೆ; ವೈರಾಗ್ಯ ಜೀವನದ ನೀರಸತೆಯನ್ನು ನಿವಾರಿಸುವಂತಹುದು ಆಗಿದೆ; ಸ್ತ್ರೀಪುರುಷ ಎಂಬ ಭೇಧಭಾವದಿಂದಾಗಿ ರೂಪುಗೊಳ್ಳುವ ಎಲ್ಲ ರೀತಿಯ ಭೇಧ ಭಾವಗಳನ್ನು ಮೀರುವಂತಹುದು ಆಗಿದೆ ಎಂಬುದರ ಕಡೆಗೆ ಗಮನ ಸೆಳೆದರು.

3

ಭಕ್ತಿ: ಭಾಂಡ – ಭಾಜನ

ಬಸವಣ್ಣನವರಿಗೆ ಭಕ್ತಿಭಾವವು ಒಂದು ರೀತಿಯ ರತಿ ಆಗಿತ್ತು. `ಭಕ್ತಿ ರತಿಯ ವಿಕಳತೆಯ ಯುಕ್ತಿಯನೇನ ಬೆಸಗೊಂಬಿರಯ್ಯ` (ವ.೫೧೬, ಪು.೧೭೩) ಎನ್ನುವ ಬಸವಣ್ಣನವರಿಗೆ ರತಿಯಲ್ಲಿ ಮಾತ್ರ ಸಂಪೂರ್ಣ ಅನನ್ಯತೆ, ಸಮರಸ ಭಾವ, ಅಭಿನ್ನತೆಯ ತಾದಾತ್ಮ್ಯತೆ, ಅರಕೆ ಇಲ್ಲದ ಸಂತೃಪ್ತಿಯ ಅನುಭವ ಉಂಟಾಗುವುದು ಎಂಬ ಅರಿವು ಇತ್ತು. `ಆಲಿಕಲ್ಲ ಹರಳಿನಂತೆ ಅರಗಿನ ಪುತ್ತಳಿಯಂತೆ ತನು ಕರಗಿ ನೆರೆವ ಸುಖದಿಂದ ಕಡೆಗೋಡಿವರಿದವೆನಗಯ್ಯ ನಯನ ಸುಖ ಜಲಂಗಳು’; `ನಮ್ಮ ಕೂಡಲ ಸಂಗಮ ದೇವರ ಮುಟ್ಟಿ ನೆರೆವ ಸುಖವ ನಾನಾರಿಗೇನೆಂಬೆ’ ಎಂಬ ಅನುಭಾವಿಯಾಗಿದ್ದ ಬಸವಣ್ಣನವರು `ಎಲ್ಲ ಗಂಡರ ಪರಿಯಂತಲ್ಲ ನೋಡವ್ವ ನಮ್ಮ ನಲ್ಲ, ಸುಳಿಯಲಿಲ್ಲ ಸುಳಿದು ಸಿಂಗಾರವ ಮಾಡಲಿಲ್ಲ, ಕೂಡಲ ಸಂಗಮ ದೇವರು ತನ್ನೊಳಗೆ ಬೈಚಿಟ್ಟನಾಗಿ’ (ವ.೮೫, ಪು.೩೧೨) ಎಂದು ಶರಣ ಸತಿ ಲಿಂಗಪತಿ ಅನುಭಾವವನ್ನು ನಿರೂಪಿಸಿದರು. ಸನ್ಯಾಸಿಯಾಗಿ ಮೋಕ್ಷ ಪಡೆಯಬೇಕು ಎಂದುಕೊಳ್ಳುವವರಾಗಲೀ, ತಾಂತ್ರಿಕ ಆರಾಧನೆಯ ಮೂಲಕ ಸಿಧ್ಧಿ ಬಯಸುವವರ ದಾರಿಯಾಗಲೀ ಸರಿಯಾದದ್ದು ಅಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದರು.

ಜಗವೆಲ್ಲರಿಯಲು ಎನಗೊಬ್ಬ ಗಂಡನುಂಟು, ಆನು ಮುತ್ತೈದೆ, ಆನು ನಿಟ್ಟೈದೆ, ಕೂಡಲ ಸಂಗಮ ದೇವನಂತಪ್ಪ ಎನಗೊಬ್ಬ ಗಂಡನುಂಟು` (ವ.೫೦೫, ಪು.೧೭೦) ಎಂದು ಪ್ರತಿಯೊಬ್ಬ ಸ್ತ್ರೀಪುರುಷನೂ ತಿಳಿಯಬೇಕು; `ಮನಕ್ಕೆ ಮನೋಹರನಲ್ಲದ ಗಂಡನು ಮನಕ್ಕೆ ಬಾರನು, ಕೇಳವ್ವ ಕೆಳದಿ ಪನ್ನಗಭೂಷಣನಲ್ಲದ ಗಂಡನು, ಇನ್ನೆನಗಾಗದ ಮೊರೆ ನೋಡವ್ವ ` (ವ.೫೦೪, ಪು.೧೭೦) ಎಂಬುದೇ ಎಲ್ಲರ ಆಶಯವಾಗಬೇಕು; `ಸತಿಯಾನು ಪತಿ ನೀನಯ್ಯ ಮನೆಯೊಡೆಯ ಮನೆಯ ಕಾದಿಪ್ಪಂತೆ, ನೀನೆನ್ನ ಮನವ ಕಾದಿಪ್ಪ ಗಂಡನು, ನಿನಗೋತ ಮನವನನ್ಯಕ್ಕೆ ಹರಿಸಿದರೆ ನಿಮ್ಮಭಿಮಾನಕ್ಕೆ ಹಾನಿʼ ಎಂಬ ಭಾವ ಎಲ್ಲರದಾಗಬೇಕು ಎಂದು ಬಸವಣ್ಣ ಬಯಸಿದರು.

`ಗಂಡನ ಮೇಲೆ ನಿಷ್ಠೆ ಇಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆ ಇಲ್ಲದ ಭಕ್ತಿ ಎರಡೂ ಒಂದೇ` ಎನ್ನುವ ಬಸವಣ್ಣನವರು `ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ` (ವ.೧೧೦, ಪು.೪೧); ʼಉಂಡ ಬಟ್ಟಲು ಬೇರೆ ಕಂಚಲ್ಲ, ಭಾಂಡ ಒಂದೆ ಭಾಜನ ಒಂದೆ, ಬೆಳಗಿ ಕನ್ನಡಿ ಎನ್ನಿಸಿತಯ್ಯ` (ವ.೮೬೨, ಪು.೩೧೫) ಎಂದು ಭಾಂಡ ಭಾಜನಗಳ ಅಭೇದತೆಯ ಉದಾಹರಣೆಯ ಮೂಲಕ ಶರಣ ಸತಿ ಲಿಂಗಪತಿ ನಿಲುವು ಎಲ್ಲರೂ ಒಪ್ಪಬೇಕಾದ ಸತ್ಯ ಎಂದು ಬಸವಣ್ಣ ಮನಗಾಣಿಸ ಬಯಸಿದರು. ಸಮಾಜದ ಕಾಯಕಲ್ಪ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಶರಣ ಸತಿ ಲಿಂಗಪತಿ ನಿಲವು ಸಮಾಜಕ್ಕೆ ದೊರೆತದ್ದು ೧೨ನೇ ಶತಮಾನದ ಚಿಂತನೆಯ ವಿಶೇಷತೆ.

ಶರಣ ಸತಿ ಲಿಂಗಪತಿ ಭಾವವನ್ನು ಸಿಧ್ಧಿಸಿಕೊಳ್ಳಲು ಇದ್ದ ಎರಡು ತೊಡಕುಗಳಲ್ಲಿ ಒಂದನೆಯದು ಸ್ತ್ರೀಪುರುಷರ= ಭಾಂಡ ಭಾಜನಗಳ ಅಶುಧ್ಧತೆ, ಎರಡನೆಯದು ಸತೀತ್ವದ ಮಹತ್ವವನ್ನು ಗುರುತಿಸದ ಸಾಮಾಜಿಕತೆ. `ಗಂಡ ಶಿವಲಿಂಗ ದೇವರ ಭಕ್ತ, ಹೆಂಡತಿ ಮಾರಿ ಮಸಣಿಯ ಭಕ್ತೆ, ಗಂಡ ಕೊಂಬುದು ಪಾದೋದಕ ಹೆಂಡತಿ ಕೊಂಬುದು ಸುರೆ ಮಾಂಸ, ಭಾಂಡ ಭಾಜನ ಶುಧ್ಧವಿಲ್ಲದನಕ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ` (ವ.೧೦೫, ಪು.೩೮) ಎಂದು ಭಾಂಡದ ಅಶುದ್ಧತೆಯನ್ನು ಬಸವಣ್ಣ ಗ್ರಹಿಸುತ್ತಾರೆ.

`ಸ್ವಾಮಿ ನೀನು ಶಾಶ್ವತ ನೀನು, ಎತ್ತಿದೆ ಬಿರುದ ಜಗವೆಲ್ಲರಿಯಲು, ಮಹಾದೇವ ಮಹಾದೇವ, ಇಲ್ಲಿಂದ ಮೇಲೆ ಶಬ್ದವಿಲ್ಲ, ಪಶುಪತಿ ಜಗಕ್ಕೆ ಏಕೋ ದೇವ, ಸ್ವರ್ಗ ಮರ್ತ್ಯ ಪಾತಾಳದೊಳಕ್ಕೆ ಒಬ್ಬನೇ ದೇವ` (ವ. ೫೨೮, ಪು.೧೭೯) ಎನ್ನುವ ಈ ವಚನಗಳು ಗಂಡ ಹೆಂಡತಿಯರಲ್ಲಿ ಮಾನಸಿಕವಾದ ಭಾವದಲ್ಲಿ ಮತ್ತು ಊಟೋಪಚಾರಗಳಂತಹ ನಡಾವಳಿಗಳಲ್ಲಿಯೂ ತಾದಾತ್ಮ್ಯತೆ ಇರಬೇಕು; ಇದು ಏಕ ಪತಿತ್ವವನ್ನು ಹೃದ್ಗತಗೊಳಿಸಿಕೊಳ್ಳುವುದಕ್ಕೆ ಸಂಬಂಧಿಸಿದುದು ಎಂಬುದನ್ನು ಸೂಚಿಸುತ್ತವೆ. ಏಕ ಪತಿತ್ವದ ಅನುಭಾವದ ಹಿನ್ನೆಲೆಯಲ್ಲಿ ಭಾಂಡ ಭಾಜನಗಳನ್ನು ಶುಧ್ಧೀಕರಿಸುವ ಆಶಯವನ್ನೂ ಸೂಚಿಸುತ್ತಾರೆ. ಈ ಶುಧ್ಧೀಕರಣದ ಅಂಗವಾದ ಸತಿಯ ಮಹತ್ವವನ್ನು ಸತಿಯರೂ ತಿಳಿಯಬೇಕಾದ ಅವಶ್ಯಕತೆ ಇರುವುದರ ಹಿನ್ನೆಲೆಯಲ್ಲಿ ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಸ್ತ್ರೀಯರ ತುಣುಕು ಚಿತ್ರಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ.

4

ದೈವಿಕ ದಾಂಪತ್ಯ

ಬಸವಣ್ಣನವರು ಸ್ತ್ರೀಯರನ್ನು ಸೂಳೆಯರು, ಗೃಹಿಣಿಯರು, ದಾಸಿಯರು, ಪತಿವ್ರತೆಯರು ಎಂದು 4 ಗುಂಪುಗಳಲ್ಲಿ ಗಮನಿಸಿದ್ದಾರೆ. ಬಸವಣ್ಣನವರ ಅಭಿಪ್ರಾಯದಲ್ಲಿ ಸೂಳೆಯರು ಧನದಾಹಿಗಳು. ಅವರು ಒಮ್ಮನದಿಂದ ತಮ್ಮ ಸ್ವಂತ ಮಕ್ಕಳನ್ನೂ ಸಂತೈಸಲಾರರು, ದುಡ್ಡುಕೊಟ್ಟು ಸುಖ ಬಯಸಿ ಬಂದ ಬೊಜಗನನ್ನೂ ನೆರೆಯಲಾರರು. ಅವರಿಗೆ ಧನವೇ ಪ್ರಧಾನ. ಧನವನ್ನೂ, ಧನಿಕರನ್ನೂ ಹುಡುಕಿಕೊಂಡು ಹೋಗುವುದರ ಹೊರತಾಗಿ ಮತ್ತಾವ ಆಸೆಯೂ ಅವರಿಗಿಲ್ಲ. ರಾತ್ರಿಯ ಲೊತ್ತೆಯ ಕೊಳ್ಳುವುದರ ಹೊರತಾಗಿ ಇನ್ನಾವ ಯೋಚನೆಯೂ ಇಲ್ಲ. ಪರಿಸ್ಥಿತಿ ಹೀಗೆ ಇದ್ದರೂ “ಸೂಳೆಯ ಮೆಚ್ಚಿ ಸೂಳೆಯ ಬಂಟರೆಂಜಲ ತಿಂಬುದೀ ಲೋಕ” ಎಂದು ಬಸವಣ್ಣ ಒದ್ದಾಡುತ್ತಾರೆ.

ಬಸವಣ್ಣ ಗಮನಿಸುವ ಗೃಹಿಣಿಯರದು ಎರಡು ಗುಂಪು: ಒಂದು ಸಾಧಾರಣ ಗೃಹಿಣಿಯರದು, ಬಸವಣ್ಣನ ಪ್ರಕಾರ ಸಾಧಾರಣ ಗೃಹಿಣಿಯರು ಸೂಳೆಯರಿಗಿಂತ ತುಂಬಾ ಭಿನ್ನ ಅಲ್ಲ. ಈ ಗೃಹಿಣಿಯರಿಗೆ ಅವರದೇ ಆದ ಮನೆ ಇದೆ, ಗಂಡ ಇದ್ದಾನೆ, ಮನೆತನದ ನಿರ್ವಹಣೆಯ ಜವಾಬ್ದಾರಿಯೂ ಇದೆ. ಸತ್ಪ್ರಜೆಗಳನ್ನಾಗಿ ರೂಪಿಸಬೇಕಾದ ಮಕ್ಕಳೂ ಇದ್ದಾರೆ. ಆದರೂ ಅವರು ತಮ್ಮ ಮನೆಯಲ್ಲಿಯೇ ಕಳ್ಳತನ ಮಾಡಿಯಾರು. ತಾಯಿಯಾಗಿ, ಹೆಂಡತಿಯಾಗಿ ವ್ಯಾಮೋಹದ ಮಾಯಾಪಾಶವನ್ನು ಬೀಸಿಯಾರು.

ಗಂಡನಿಗೆ ಯಾವ ಉಪಚಾರವನ್ನೂ ಮಾಡದೆ ಗಂಡನು ಬಡವಾದನೆಂದು ಮರುಗಿಯಾರು, ಇವರ ನಿಲುವುಗಳಿಗೂ ಗಂಡನ ನಿಲುವುಗಳಿಗೂ ಯಾವ ಹೊಂದಾಣಿಕೆಯೂ ಇರುವುದಿಲ್ಲ. ಇವರ ಮಾತು ಬೆಲ್ಲದಂತೆ ಸಿಹಿ. ಇವರ ಕಂಗಳ ಮಾತೇ ಬೇರೆ, ಮನಸ್ಸಿನ ಮಾತೇ ಬೇರೆ. ಗಂಡನೊಂದಿಗೆ ಸ್ನೇಹವಿಲ್ಲದ ಇವರು ಗಂಡನ ಆಯುಷ್ಯ, ಅರ್ಥ ಇರುವವರೆಗೆ ಮಾತ್ರ ಗಂಡನನ್ನು ಭಾವಿಸಬಲ್ಲರು. ಗಂಡನಿಗೆ ತಿಳಿಯದಂತೆ ಪರ ಪರುಷರ ಸಂಗ ಮಾಡಲೂ ಪ್ರಯತ್ನಿಸುತ್ತಾರೆ, ಸಿಕ್ಕಿ ಬಿದ್ದಾಗ ಗಂಡನಿಂದ ಹೊಡೆತ ತಿನ್ನುತ್ತಾರೆ, ಅಷ್ಟೇ. ಅರಸನನ್ನು ಕಂಡು ಗಂಡನನ್ನೇ ಮರೆತು ಅರಸನಿಗಾಗಿ ಹಂಬಲಿಸುತ್ತಾರೆ. “ಅರಸು ಮಂಚಕ್ಕೆ ಬರಿಸಿ ಎನ್ನ ಬೆರಸಿದ ಬಳಿಕ ಆನಂಜುವೆನೆ” ಎನ್ನುತ್ತಾರೆ. 

ಎರಡನೆಯದು ಗಂಡನಿಗೆ ನಿಷ್ಠರಾಗಿ ಉಳಿಯುವವರದು. ಗಂಡನಿಗೆ ನಿಷ್ಠರಾದ ಗೃಹಿಣಿಯರಿಗಾದರೋ ತಾವು ಮುತ್ತೈದೆ, ನಿಟ್ಟೈದೆ ಎಂಬುದೇ ಮುಖ್ಯ ವಿಷಯ. ಒಲಿದ ಗಂಡ ಒಲಿಯದೇ ಹೋದರೆ ತಮ್ಮದೇ ತಪ್ಪು ಎಂದು ತಮ್ಮನ್ನು ನಿಂದಿಸಿಕೊಳ್ಳುತ್ತಾರೆ, ಗಂಡನನ್ನು ಸಮರ್ಥಿಸಿಕೊಳ್ಳುತ್ತಾರೆ. ಕೆಟ್ಟು ಬಾಳುವವರಿಲ್ಲ ಎಮ್ಮ ಕುಲದಲ್ಲಿ ಎಂದು ನಿರ್ಣಯಿಸುತ್ತಾರೆ. ಕಣ್ಣ ಕೋಪಕ್ಕೆ ಮುಂದರಿಯದೆ ಗಂಡನಿಗೆ ಏನೇನೋ ಮಾತನಾಡಿ ಆಮೇಲೆ ಒದ್ದಾಡುತ್ತಾರೆ. ಹೀಗೆ ತಮ್ಮ ನಿಷ್ಠೆಗೆ ಲೌಕಿಕ ಮೌಲ್ಯದ ಹೊರತಾಗಿ ಮತ್ತಾವ ಮೌಲ್ಯವನ್ನೂ ಕೊಡಲಾರರು.  ಇಂತಹವರು ಸರ್ವ ಜೀವ ದಯಾಪಾರಿ ಎಂದು ಮನೆಯ ಮುಂದೆ ಎತ್ತರವಾಗಿ ಚಪ್ಪರವನ್ನು ಹಾಕಿ ಬಂದವರಿಗೆಲ್ಲ ಊಟೋಪಚಾರ ನಡೆಸುವ ಲಂದಣಗಿತ್ತಿಯರಂತೆ. ಇವರ ನಡೆವಳಿಕೆಯು ತನ್ನ ತಂದೆ ಯಾರೆಂಬುದನ್ನು ತಿಳಿಯದ ಸೂಳೆಯ ಮಗ ಮಹಾಳ ಮಾಡಿದಂತೆ (ಪಿತೃ ಕಾರ್ಯ) ಎಂದು ಬಸವಣ್ಣ ಭಾವಿಸುತ್ತಾರೆ.

ಬಸವಣ್ಣನವರ ಅಭಿಪ್ರಾಯದಲ್ಲಿ ಎರಡನೆಯ ಗುಂಪಿನ ಗೃಹಿಣಿಯರಿಗಿಂತಲೂ ದಾಸಿಯರೇ ಮೇಲು. ಬಸವಣ್ಣನವರ ಕಾಲದಲ್ಲಿ ಈ ದಾಸಿಯರು ತಮ್ಮ ಯಜಮಾನರ ಮನೆಯ ಕೆಲಸವನ್ನು ಎಷ್ಟು ಶ್ರದ್ಧೆ ಪ್ರೀತಿಗಳಿಂದ ಮಾಡುತ್ತಿದ್ದರು ಎಂದರೆ ಅವರು ಸೇವಾಕಾರ್ಯವನ್ನು ಬಿಟ್ಟಿದ್ದರೂ, ಅವರ ಮಕ್ಕಳೋ, ಅಣ್ಣ ತಮ್ಮಂದಿರೋ ಆ ಯಜಮಾನರ ಮನೆಗೆ ಹೋಗಿ ತಮ್ಮವರು ಆ ಮನೆಯಲ್ಲಿ ಸೇವೆ ಮಾಡುತ್ತಿದ್ದರು ಎಂದು ನೆನಪಿಸಿದರೆ ಸಾಕು ಆ ಮನೆಯವರು ಹಾಗೆ ನೆನಪಿಸಿದವರನ್ನೂ ಪ್ರೀತಿಯಿಂದ ಸತ್ಕರಿಸುತ್ತಿದ್ದರು. ಇವರಿಗಿಂತಲೂ ಮಿಗಿಲಾದವರು ಭಕ್ತರ ಮನೆಯಲ್ಲಿಯ ದಾಸಿಯರು. ಇವರು ದೇವರ ಪೂಜೆಗೆ ಅಘ್ಘವಣಿ ಪತ್ರೆ ತರುತ್ತಾರೆ, ನೈವೇದ್ಯಕ್ಕೆ ಅಣಿ ಮಾಡಿಕೊಡುತ್ತಾರೆ. ಆ ಮೂಲಕ ಅರಸನ ಮನೆಯ ಅರಸಿಯಾಗಿರುವುದಕ್ಕಿಂತ ಹೆಚ್ಚಿನ ಸೌಭಾಗ್ಯವತಿಯರು ಆಗಿರುತ್ತಾರೆ ಎಂದು ಈ ದಾಸಿಯರನ್ನು ಬಸವಣ್ಣನವರು ಕೊಂಡಾಡುತ್ತಾರೆ. 

ಈ ಎಲ್ಲ ವರ್ಗದ ಸ್ತ್ರೀಯರಿಗೆ ಇರುವ ಮಿತಿಗಳನ್ನು ಗುರುತಿಸುವ ಬಸವಣ್ಣನವರು – ಜಗವೆಲ್ಲ ಅರಿವಂತೆ ಎನಗೊಬ್ಬ ಗಂಡ; ಪರಮ ಪತಿವ್ರತೆಗೆ ಗಂಡನೊಬ್ಬ; ಸತಿ ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ – ಎಂಬುದನ್ನು ಮನಗಂಡು

ಬಿಳಿಯ ಕರಿಕೆ ಕಣಿಗಿಲೆಯ
ತೊರೆಯ ತಡಿಯ ಮಳಲ ತಂದು
ಗೌರಿಯ ನೋನುವ ಬನ್ನಿರೆ
ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು
ಅನುಪಮ ದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದು

– ಎಂದು ಲೌಕಿಕ ದಾಂಪತ್ಯದಲ್ಲಿ ದೈವಿಕ ದಾಂಪತ್ಯವನ್ನು ಭಾವಿಸಲು ಬಸವಣ್ಣ ಕರೆ ಕೊಡುತ್ತಾರೆ.

ಮನಕ್ಕೆ ಮನೋಹರವಲ್ಲದ ಗಂಡ ಮನಕ್ಕೆ ಬಾರರು – ಎಂದು ಭಾವಿಸಿ ನಿಷ್ಠಾವಂತ ಸತಿಯಂತೆ ಶಿವನಿಗೆ ತನ್ನದೆಲ್ಲವನ್ನೂ ಅರ್ಪಿಸಿದ ಸಿರಿಯಾಳನ ಹೆಂಡತಿ ಚೆಂಗಳೆಯೇ ಬಸವಣ್ಣನವರಿಗೆ ಆದರ್ಶ ಸ್ತ್ರೀತ್ವದ \ ಪತಿವ್ರತೆಯ ಪ್ರತೀಕ. ಅವರಿಗೆ ಸಿರಿಯಾಳ ಚೆಂಗಳೆಯರು ಸತಿ ಪತಿ ರತಿ ಸುಖವನ್ನು ಬಿಡದೆಯೇ ದೈವಸಾಕ್ಷಾತ್ಕಾರವನ್ನು ಪಡೆದ ಶರಣಸತಿಯರ ಪ್ರತೀಕ. ತರುಣಿ, ಹರಿಣಿ, ರಂಭೆಯರೂ ಗುರುವಾಗಬಲ್ಲರು ಎನ್ನುವ ಬಸವಣ್ಣನವರಿಗೆ ಅಂತಹವರಿಗೆ ಉದಾಹರಣೆಯು ಚೆಂಗಳೆಯೇ. ಆಕೆ ಕಬ್ಬಿಣವನ್ನು ಹೊನ್ನಾಗಿ ಮಾಡುವ ಪರುಷಮಣಿ. ತಾನು ಶರಣ ಸತಿಯಾದುದಲ್ಲದೆ ತಾನಿದ್ದ ಊರಿನ ಏಳು ಕೇರಿಯವರೂ ಲಿಂಗ ನೋಂಪಿಯನ್ನು ಕೈಗೊಳ್ಳುವಂತೆ ಮಾಡಿದವಳು. ಗುರುತ್ವವನ್ನು ಒಂದು ತತ್ತ್ವವನ್ನಾಗಿಸಿದವಳು ಚೆಂಗಳೆ ಎಂದು ಅವಳನ್ನು ಬಸವಣ್ಣ ಮನವಾರೆ ಕೊಂಡಾಡುತ್ತಾರೆ.

ಲಿಂಗಪತಿಗೆ ಶರಣಸತಿಯಾಗುವುದು ಜ್ಞಾನದ ನೆಲೆಯಲ್ಲಿ ಎಂಬುದನ್ನು ಅರಿತಿದ್ದ ಬಸವಣ್ಣನವರು ಎಲ್ಲರ ಪರವಾಗಿ –

ಕಳಾಬಿಂದುವಳಾಮುಖಿಯೆಂಬ ಹೆಂಗೂಸಿನ ಕೈಯಲು
ಜಲಾಕಾರವೆಂಬ ಗಡಿಗೆ ಇದ್ದಿತ್ತು
ಆ ಗಡಿಗೆಯಲ್ಲಿ ಚೆನ್ನಬಸವಣ್ಣನು ನೀರು ತಂದ
ಮಡಿವಾಳ ಮಾಚಯ್ಯ ಸಯಿದಾನವ ತಂದ
ಇದನ್ನು ಪಾಕ ಮಾಡಿ ಬಡಿಸಲು
ಜ್ಞಾನಾಗ್ನಿಯನ್ನು ಕೊಡು ಕೂಡಲಸಂಗಮದೇವ

– ಎಂದು ಸತಿಯರನ್ನೂ, ಪತಿಗಳನ್ನೂ ಶರಣಸತಿಯನ್ನಾಗಿಸುವ ಜ್ಞಾನಾಗ್ನಿಗಾಗಿ ಪ್ರಾರ್ಥಿಸುವುದು ಅರ್ಥಪೂರ್ಣ.

ಪದ್ಮಿನಿ ಹೆಗಡೆ

6 Responses

  1. ಶರಣಪತಿ ಲಿಂಗ ಸತಿ..ವಿಷಯದ ಮೇಲೆ ಬೆಳಕಚೆಲ್ಲುವಂತಹ ಲೇಖನ…ಸೊಗಸಾಗಿ ಮೂಡಿಬಂದಿದೆ ಮೇಡಂ ವಂದನೆಗಳು..

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. Padmini Hegde says:

    ಲೇಖನ ಪ್ರಕಟಿಸಿದ ಸೂಕ್ಷ್ಮಗ್ರಾಹಿ ಸದಭಿರುಚಿಯ ಹೇಮಮಾಲಾ ಮೇಡಂಗೆ, ಚೆಂದಾಗಿ ವಿಷಯಗ್ರಹಣಮಾಡಿ ಸ್ಪಂದಿಸುವ ಬಿ.ಆರ್.‌ ನಾಗರತ್ನ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ, ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು!

  4. ಪದ್ಮಾ ಆನಂದ್ says:

    ಓದುಗರ ಜ್ಞಾನವೃದ್ಧಿಗೆ ದಾರಿದೀಪವಾಗುವ ಪ್ರೌಢ ಲೇಖನ.ಅಭಿನಂದನೆಗಳು ಪದ್ಮಿನಿ ಮೇಡಂ.

  5. ಶಂಕರಿ ಶರ್ಮ says:

    ಬಸವಣ್ಣನವರ ಶರಣಪತಿ ಲಿಂಗಸತಿ ತತ್ವದ ಮೇಲೆ ಬೆಳಕು ಚೆಲ್ಲುವ, ಸಂಗ್ರಹ ಯೋಗ್ಯ ಪ್ರಬುದ್ಧ ಲೇಖನ… ಧನ್ಯವಾದಗಳು ಮೇಡಂ.

  6. SHARANABASAVEHA K M says:

    ಸಂಶೋಧನಾ ಪ್ರಬಂಧ ತರಾ ಇದೆ. ಬಹಳ ಮೌಲ್ಯವುಳ್ಳ ಲೇಖನ. ಧನ್ಯವಾದಗಳು ಪದ್ಮಿನಿ ಹೆಗ್ಗಡೆ ಮೇಡಂ ಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: