ಏಳಿ ! ಎದ್ದೇಳಿ ! ಮತದಾನ ಬಂತು – ಜಾಗೃತರಾಗೋಣ!
‘ಏಳಿ ! ಎದ್ದೇಳಿ ! ಗುರಿ ಮುಟ್ಟುವ ತನಕ ನಿಲ್ಲದಿರಿ ‘ ಸ್ವಾಮಿ ವಿವೇಕಾನಂದರು ಭಾರತದ ಯುವಜನತೆಯನ್ನು ಕುರಿತು ಹೇಳಿರುವ ಮಾತು ಸದಾ ನಮ್ಮನ್ನು ಎಚ್ಚರಿಸುತ್ತದೆ. ಯುವಕರು ದೇಶದ ಭವಿಷ್ಯ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವದ್ದಾಗಿದ್ದು, ದೇಶಕ್ಕೆ ಸಮಾಜಕ್ಕೆ ಯುವಜನತೆಯಾಗಿ ನಮ್ಮ ಕೊಡುಗೆ ಏನು ಎಂದು ಚಿಂತಿಸುತ್ತಿರುವಿರಾ? ಇಲ್ಲಿದೆ ನಿಮಗೊಂದು ಅವಕಾಶ. ಯುವಜನತೆಗೆ ತಮ್ಮ ಗ್ರಾಮ , ತಾಲೂಕು ,ಜಿಲ್ಲೆ, ರಾಜ್ಯ -ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಜಾಗೃತವಾಗುವ ಸಮಯ ಮತ್ತು ಅವಕಾಶ ಮತ್ತೊಮ್ಮೆ ಬಂದೊದಗಿದೆ.
ಪರಕೀಯರ ದಾಸ್ಯದಿಂದ ಮುಕ್ತವಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದು, ಅಖಂಡ ಸಂವಿಧಾನ ರಚನೆಯಾಗಿ ವಿವಿಧ ಸಂಸ್ಥಾನಗಳನ್ನು ಒಟ್ಟುಗೂಡಿಸಿ ರಾಜ್ಯ ಮತ್ತು ರಾಷ್ಟ್ರ ಎಂಬ ಕಲ್ಪನೆಯೊಂದಿಗೆ ದೇಶದ ಅಭಿವೃದ್ಧಿಗಾಗಿ ಚುನಾವಣೆಯ ಮೂಲಕ ನಾಯಕರನ್ನು ಆಯ್ಕೆ ಮಾಡಿ ಅವರ ನಾಯಕತ್ವದಲ್ಲಿ ಸರ್ಕಾರವನ್ನು ರಚಿಸುವ ವ್ಯವಸ್ಥೆಯನ್ನು ನಮ್ಮ ಸಂವಿಧಾನ ತಿಳಿಸುತ್ತದೆ. ಭಾರತದ ಸಂವಿಧಾನವು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸೂಕ್ತ ನಾಯಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಯುವ ಜನತೆಗೆ ನೀಡಿದೆ.
ಮತದಾನದ ಹಕ್ಕು : 1889ರ ಪೂರ್ವದಲ್ಲಿ 21 ವರ್ಷಕ್ಕೆ ನಿಗದಿಯಾಗಿದ್ದ ಮತದಾನದ ವಯಸ್ಸನ್ನುಸಂವಿಧಾನದ 61ನೇ ಅಮೆಂಡಮೆಂಟ್ ಆಕ್ಟ್ 1988 ಪ್ರಕಾರ ಭಾರತದ ಚುನಾವಣಾ ಆಯೋಗವು 18 ವರ್ಷಕ್ಕೆ ಇಳಿಸಿ ಎಲ್ಲರಿಗೂ ಮಾಡುವ ಹಕ್ಕನ್ನು ನೀಡಿದೆ. ಸಂವಿಧಾನವು ನಮಗೆ ನೀಡಿರುವಆರು ಮೂಲಭೂತ ಹಕ್ಕುಗಳಿಗಿಂತ ಶ್ರೇಷ್ಠವಾದದ್ದು ” ಮತದಾನದ ಹಕ್ಕು”.
ಮತದಾನದ ಮಹತ್ವ ಅರಿಯಿರಿ :
ಮತದಾನದ ಹಕ್ಕು ಐದು ವರ್ಷಗಳಿಗೊಮ್ಮೆ ಲಭಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಇಷ್ಟಾರ್ಥ ಸಿದ್ಧಿಗಾಗಿ ದೀರ್ಘವಾದ ತಪಸ್ಸು ಆಚರಿಸಿ ಕೊನಗೆ ದೇವರು ಪ್ರತ್ಯೇಕನಾಗಿ ಒಂದು ವರ ನೀಡಿದಂತೆ , ಆದರೆಆತನ ಯಶಸ್ಸು ಆ ವರವನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದರ ಮೇಲೆ ನಿಂತಿದೆ. ಹಾಗೆಯೇ ಇಲ್ಲಿ ಯುವಜನತೆಗೆ ಐದು ವರ್ಷಕ್ಕೆ ಒಂದು ಬಾರಿ ಮತದಾನದ ಹಕ್ಕು. ಅದನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಕೊಳ್ಳಬೇಕೆಂದು ಯುವಜನತೆಗೆ ಅರಿವಿರಬೇಕು. ಯುವಜನತೆ ಒಮ್ಮೆ ಮತದಾನದ ಮಹತ್ವದ ಬಗ್ಗೆ ಚಿಂತಿಸುವುದು ಒಳಿತು:
1. ಯುವಕರಾಗಿ ನಿಮಗೆ ಸಮಾಜದ ಉಜ್ವಲ ಭವಿಷ್ಯದ ಕುರಿತಾಗಿ ಹಲವಾರು ಕನಸುಗಳಿರುತ್ತವೆ ಅವುಗಳನ್ನು ನನಸಾಗಿಸಿಕೊಳ್ಳಬೇಕಾದರೆ ಒಬ್ಬ ಜವಾಬ್ದಾರಿಯುತ ನಾಯಕರ ಅಗತ್ಯವಿದೆ ಎಂಬುದನ್ನು ಮರೆಯದಿರಿ.
2. ನಿಮ್ಮ ಒಂದು ಮತ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಸಹಾಯವಾಗಲಿದೆ ಎಂಬುದನ್ನು ಅರಿಯಿರಿ.
3. ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ನಿಮ್ಮ ಮತ ಎಷ್ಟು ಸಹಾಯಬಹುದೆಂದು ಯೋಚಿಸಿರಿ.
4. ರಾಷ್ಟ್ರದ ಪ್ರಗತಿಗೆ ನಿಮ್ಮ ಮತ ಉಪಯುಕ್ತ.
5. ಮೂಲಭೂತ ಸಮಸ್ಯೆಗಳನ್ನು ನಿವಾರಿಸಿ ಎಲ್ಲರೂ ನೆಮ್ಮದಿಯ ಜೀವನ ನಡೆಸಲು ನಿಮ್ಮ ಮತ ಅತ್ಯಮೂಲ್ಯ.
6. ನಿರುದ್ಯೋಗ, ಭ್ರಷ್ಟಾಚಾರ ಮುಂತಾದವುಗಳನ್ನು ತೊಡಗಿಸಲು ನಿಮ್ಮ ಮತದಾನದ ಹಕ್ಕು ದಿವ್ಯ ಸಂಜೀವಿನಿಯಂತೆ ಕೆಲಸ ಮಾಡಲಿದೆ ಎಂಬುದನ್ನು ನೆನಪಿಡಿ.
ಮತ ನೀಡುವಾಗ ಇವುಗಳನ್ನು ಗಮನದಲ್ಲಿರಿಸಿ :
1. ಅಭ್ಯರ್ಥಿಗಳ ಮಾತಿಗೆ ಮರುಳಾಗದಿರಿ.
ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷದ ಅಭ್ಯರ್ಥಿಗಳು ಪ್ರಚಾರ ಮಾಡುತ್ತಾ, ಮತದಾರ ಪ್ರಭುವನ್ನು ಒಲೈಸುವ ಕಾರ್ಯದಲ್ಲಿ ತೊಡಗುತ್ತಾರೆ. ಹಲವಾರು ಆಸೆ, ಆಮಿಷಗಳನ್ನು ಒಡ್ಡಿ, ಸುಳ್ಳು ಆಶ್ವಾಸನೆ ನೀಡಿ ಭವಿಷ್ಯದಲ್ಲಿ ಗೆದ್ದು ಬಂದರೆ ಭೂಮಿಯನ್ನು ಸ್ವರ್ಗ ಮಾಡಿ ಬಿಡುವ ಹಾಗೇ ಒಂದಿಷ್ಟು ಭರವಸೆಗಳ ಸುರಿಮಳೆಯನ್ನು ನೀಡುತ್ತಾರೆ. ಮನೆ ಮನೆಗೂ ವಿವಿಧ ಉಡುಗೊರೆ, ಬಹುಮಾನ, ಸಾವಿರಾರು ರೂಪಾಯಿಗಳ ಮೊತ್ತ ನೀಡಿ ನಿಮ್ಮ ಮತವನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಅವರು ರಾಜಕಾರಣಿಗಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರ ಮಾತಿಗೆ ಮರುಳಾಗದೆ ಎಚ್ಚರಿಕೆಯಿಂದ ಮತ ಚಲಾಯಿಸಿ.
2. ಚುನಾವಣಾ ಸಮಯದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯದ ಬಗ್ಗೆ ಎಚ್ಚರವಿರಲಿ.
2024 ನೇ ಏಪ್ರಿಲ್-ಮೇ ನಲ್ಲಿ ಬರಲಿರುವ ಲೋಕಸಭಾ ಚುನಾವಣೆಗಾಗಿ ಬರದ ಸಿದ್ಧತೆಗಳ ನಡೆಯುತ್ತಿವೆ. ರಸ್ತೆಗಳಿಗೆ ಡಾಂಬರ್ ಭಾಗ್ಯ, ಬೀದಿ ದೀಪಗಳಿಗೆ ಬೆಳಕಿನ ಭಾಗ್ಯ, ಕುಡಿಯುವ ನೀರಿನ ಭಾಗ್ಯ, ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆಯ ಭಾಗ್ಯ, ವಿವಿಧ ಯೋಜನೆಗಳ ಘೋಷಣೆ ಮುಂತಾದ ಕೆಲಸಗಳು ಚುನಾವಣೆಯ ೩-೪ ತಿಂಗಳ ನಡುವೆ ನಡೆಯುತ್ತಿರುವುದು ನೀವೆಲ್ಲಾ ಗಮನಿಸಿರುವ ಸಾಮಾನ್ಯ ಸಂಗತಿ. ಐದು ವರ್ಷದಲ್ಲಾಗದ ಚಮತ್ಕಾರದ ಕೆಲಸ ಈ ೩ ತಿಂಗಳಲ್ಲಿ ಆಗುತ್ತಿವೆ ಎಂದರೆ ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಚೆನ್ನಾಗಿ ಅರಿಯಿರಿ.
3. ಪಕ್ಷ ಮತ್ತು ವ್ಯಕ್ತಿಯ ಆಯ್ಕೆಯಲ್ಲಿ ಎಚ್ಚರವಿರಲಿ.
ನೀವು ಮತ ಹಾಕುವ ಮುನ್ನ ಅಭ್ಯರ್ಥಿಯ ಪಕ್ಷ ಹಾಗೂ ಸ್ಫರ್ಧಿಸುವ ಅಭ್ಯರ್ಥಿ ಈ ಎರಡರಲ್ಲಿ ಯಾವುದು ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬುದನ್ನು ಕೂಲಂಕಷವಾಗಿ ಆಲೋಚಿಸಿರಿ. ಕೆಲವೊಮ್ಮೆ ಪಕ್ಷದ ಮುಖ ನೋಡಿ ಅನರ್ಹ ಅಭ್ಯರ್ಥಿಯನ್ನು ಗೆಲ್ಲಿಸಿ ಮೋಸ ಹೋಗುವುದು ಇದೆ, ಇನ್ನೂ ಕೆಲವೊಮ್ಮೆ ನಮ್ಮ ನಡುವಿನ ಸಮರ್ಥ ವ್ಯಕ್ತಿಯನ್ನು ಗೆಲ್ಲಿಸಿ ಕ್ಷೇತ್ರ ಅಭಿವೃದ್ಧಿಯಾದ ಉದಾಹರಣೆಗಳು ಇವೆ. ಆದರಿಂದ ಇದರ ಬಗ್ಗೆ ಕೊನೆಯ ಕ್ಷಣದಲ್ಲಿ ಯೋಚಿಸುವುದರ ಬದಲು ಈಗಲೇ ಯೋಚಿಸುವುದು ಸೂಕ್ತ.
4. ಅಭ್ಯರ್ಥಿಗಳ ಪೂರ್ವಾಪರ ಚೆನ್ನಾಗಿ ತಿಳಿದುಕೊಳ್ಳಿ.
ನಿಮ್ಮ ಲೋಕಸಭಾ ಕ್ಷೇತ್ರದಲ್ಲಿ ನಿಮಗೆ ಚಿರಪರಿಚಿತವಿರುವ ನಿಮ್ಮದೇ ಕ್ಷೇತ್ರದ ಅಭ್ಯರ್ಥಿಗಳು ಚುನಾವಣೆಗೆ ನಿಂತರೆ ಅವರ ಬಗ್ಗೆ , ಅವರು ಮಾಡಿರುವ ಸಂಪೂರ್ಣ ಅಭಿವೃದ್ಧಿ ಕಾರ್ಯದ ಕುರಿತಾದ ಮಾಹಿತಿ ನಿಮಗೆ ತಿಳಿದಿರುತ್ತದೆ. ಇನ್ನೂ ಕೆಲವೊಮ್ಮೆ ಬೇರೆ ಕ್ಷೇತ್ರದ ಅಭ್ಯರ್ಥಿಯನ್ನು ಪಕ್ಷದ ನಾಯಕರ ನಿರ್ಣಯದಂತೆ ನಿಮ್ಮ ಕ್ಷೇತ್ರಕ್ಕೆ ನಿಲ್ಲಿಸುವ ಸಾಧ್ಯತೆಗಳಿವೆ. ಅಂತಹ ಸಮಯದಲ್ಲಿ ಅವರ ಪೂರ್ವಾಪರ ತಿಳಿಯಬೇಕಾದದ್ದು ಯುವಜನತೆಯ ಕರ್ತವ್ಯ. ನಿಮ್ಮ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುವ ಸಾಮಥ್ರ್ಯವಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
5. ನಿಮ್ಮ ಒಂದು ಮತದ ಮಹತ್ವದ ಬಗ್ಗೆ ಜ್ಞಾನವಿರಲಿ.
ಹಲವರಿಗೆನನ್ನ ಒಂದು ಮತದಿಂದ ಯಾರಿಗೂ ಎನೂ ಆಗುವುದಿಲ್ಲ, ಒಂದು ಮತ ಹಾಕದಿದ್ದರೆ ಯಾರು ಸೋಲುವುದಿಲ್ಲ, ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಇದು ತಪ್ಪುಯೋಚನೆ. ಒಂದು ಮತದ ಕೊರತೆಯಿಂದ ಅದೇಷ್ಟೋ ಬಾರಿ ಉತ್ತಮ ಅಭ್ಯರ್ಥಿಗಳು ಸೋಲು ಕಂಡದಿದೆ. ನಿಮ್ಮ ಒಂದೊಂದು ಮತದ ಬೆಲೆಯನ್ನು ಚೆನ್ನಾಗಿ ಅರಿಯಬೇಕು. ವಿದ್ಯಾವಂತರಾದ ಯುವಜನತೆ ಈ ವಿಷಯದಲ್ಲಿ ತಾಸ್ಸಾರ ತೋರುವುದು ಸರಿಯಲ್ಲ.
6.ನಿಮ್ಮ ಮತಕ್ಷೇತ್ರ ಹಾಗೂ ಮತದಾನ ಬೂತ್ (ಕೇಂದ್ರ)ದ ಬಗ್ಗೆ ತಿಳಿದುಕೊಳ್ಳಿ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಮೊದಲು ಖಚಿತ ಪಡಿಸಿಕೊಳ್ಳಿ, ನಂತರ ಮತದಾನದ ದಿನ, ನಿಮ್ಮ ಬೂತ್ ಬಗ್ಗೆ ತಿಳಿದಿಕೊಳ್ಳಿ.
ನಮ್ಮ ಸಂವಿಧಾನ ಯುವಜನತೆಗೆ ನೀಡಿರುವ ಅಮೂಲ್ಯವಾದ ವರ ” ಮತದಾನ ಹಕ್ಕು”. ಕೆಟ್ಟ ವ್ಯವಸ್ಥೆ ಬದಲಾವಣೆಗಾಗಿ ದೊರೆತಿರುವ ನಿಮ್ಮ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಮುಂದೊಂದು ದಿನ ನೀವು ಮಾಡಿರುವ ತಪ್ಪಿಗಾಗಿ ದೇಶವನ್ನು, ವ್ಯವಸ್ಥೆಯನ್ನು, ಅಧಿಕಾರಿ ವರ್ಗದವರನ್ನೋ ಶಪಿಸುತ್ತಾ ಕೂರಬೇಡಿ. ನಾವೊಬ್ಬರು ಮತ ಹಾಕದಿದ್ದರೆ ಏನು ಆಗುವುದಿಲ್ಲ, ಮತ ಚಲಾಯಿಸದಿದ್ದರೆ ನಮಗೇನು ನಷ್ಟವಿಲ್ಲ, ಎಂಬ ಮನೋಭಾವನೆಯಿಂದ ನೀವು ಅವ್ಯವಸ್ಥೆಯ ಭಾಗವಾಗಬೇಡಿ.ಜಾತಿ, ಮತ, ಪಂಥ ಬೇದಗಳನ್ನು ಪರಿಗಣಿಸದೇ, ಜಾತ್ಯಾತೀತ ಮನೋಭಾವನೆಯಿಂದ ಅಭಿವೃದ್ಧಿಯನ್ನು ಮಾತ್ರ ಪರಿಗಣಿಸಿರಿ.
18 ವರ್ಷ ತುಂಬಿದ ತಕ್ಷಣ ನಿಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಿ. ಇತ್ತೀಚೆಗೆ ಭಾರತೀಯ ಚುನಾವಣಾ ಆಯೋಗವು ಆನ್ಲೈನ್ ವ್ಯವಸ್ಥೆಯ (Voter Helpline App) ಮೂಲಕವೂ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶಮಾಡಿ ಕೊಟ್ಟಿದೆ.
ನಿಮ್ಮ ಮತ ನಿಮ್ಮ ಹಕ್ಕು , ಬನ್ನಿಏಳಿ !ಏದ್ದೇಳಿ ! ನಿಮ್ಮ ಜವಾಬ್ದಾರಿಯನ್ನು ಅರಿಯಿರಿ ಮತ ಚಲಾಯಿಸಿ.
-ಸುರೇಂದ್ರ ಪೈ, ಹೊಸದುರ್ಗ
ಪ್ರಸ್ತುತ ಪರಿಸ್ಥಿತಿಯಲ್ಲಿ ಜಾಗೃತಿ ಮೂಡಿಸುವಂತಹ ಬರಹ.
ಧನ್ಯವಾದಗಳು
ಪ್ರಸ್ತುತ ವಿಷಯಕ್ಕೆ ಜಾಗೃತಿ ಮೂಡಿಸುವಂತಹ ಲೇಖನ.. ಚೆನ್ನಾಗಿದೆ…ಸಾರ್.. ಧನ್ಯವಾದಗಳು
ಧನ್ಯವಾದಗಳು
ಸೊಗಸಾದ ಸಕಾಲಿಕ ಬರಹ.
ಧನ್ಯವಾದಗಳು ಮೇಡಂ.
ಎಲ್ಲೆಡೆ ಮತದಾನದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವಾಗ, ಈ ಲೇಖನವು ಅತ್ಯಂತ ಪ್ರಸ್ತುತವೆನಿಸಿದೆ. ಅಗತ್ಯವಾದ ಮಾಹಿತಿಗಳನ್ನು ಒಳಗೊಂಡ ಸಕಾಲಿಕ ಬರಹವು ಚೆನ್ನಾಗಿದೆ.
ಸಮಯೋಚಿತ………….ಚೆನ್ನಾಗಿದೆ. ಔಚಿತ್ಯಪೂರ್ಣ
ಮತದಾನದ ಮಹತ್ವವನ್ನು ಸವಿಸ್ತಾರವಾಗಿ ತಿಳಿಸಿಕೊಡುವ ಒಂದೊಳ್ಳೆಯ ಲೇಖನ.