ಪ್ರವಾಸ

ಅವಿಸ್ಮರಣೀಯ ಅಮೆರಿಕ : ಎಳೆ 85

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಲಾವಾ ಗುಹೆಯೊಳಗೆ…..

 ಗವಿಯು ಪೂರ್ತಿ ನಯವಾದ ಕರಿಶಿಲೆಯಿಂದ ಮಾಡಿದಂತೆ ಕಾಣುತ್ತಿತ್ತು. ಅಲ್ಲಲ್ಲಿ ನೀರಿನ ಒರತೆಯಿಂದ ಝರಿ ರೂಪದಲ್ಲಿ ನೀರು ಹರಿಯುತ್ತಿತ್ತು. ಇದರಿಂದಾಗಿ ಕಾಲು ಜಾರುವ ಸಂಭವ ಇರುವುದರಿಂದ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿತ್ತು. ಮುಂದಕ್ಕೆ ಗುಹೆಯು ಸಣ್ಣದಾಗುತ್ತಾ ಹೋಯಿತು. ಕೆಲವು ಕಡೆಗಳಲ್ಲಿ ನೆಲದ ಮೇಲೆ ತೆವಳುತ್ತಾ ಸಾಗಬೇಕಾಯಿತು. ಇನ್ನು ಕೆಲವೆಡೆ, ನೆಲದಲ್ಲಿ ಮತ್ತು ಮೇಲ್ಗಡೆಗೆ ಇರುವ ಚೂಪಾದ ರಚನೆಗಳು, ಎಲ್ಲಿ ಚುಚ್ಚಿ ಬಿಡುವವೋ ಎಂಬ ಆತಂಕವನ್ನು ಸೃಷ್ಟಿ ಮಾಡುವಂತಿದ್ದವು. ಭಯವಾದರೂ, ಮುಂದೇನಿದೆ ಎಂಬ ಕುತೂಹಲ ಮತ್ತು ಉತ್ಸಾಹ ಕಡಿಮೆಯಾಗಲಿಲ್ಲ. ಮಕ್ಕಳ ಕೇಕೇ, ದೊಡ್ಡವರ ಪಿಸುಮಾತು ಗವಿಯೊಳಗೆ ಪ್ರತಿಧ್ವನಿಸುತ್ತಿತ್ತು. ನಾನು ಗಮನಿಸಿದಂತೆ, ಅಲ್ಲಿ ಬಾವಲಿ ಅಥವಾ ಯಾವುದೇ ಪ್ರಾಣಿಗಳಿರುವುದು ಗೋಚರಿಸಲಿಲ್ಲ. ಎಲ್ಲೆಡೆಯೂ ಸ್ವಚ್ಛತೆ ಎದ್ದು ಕಾಣುತ್ತಿತ್ತು. ಸುಮಾರು ಇಪ್ಪತ್ತು ಮೀಟರ್ ದೂರ ನಡೆದಾಗ; ಗವಿಯೊಳಗೇ ಹಲವು ಕಡೆಗೆ ಟಿಸಿಲೊಡೆದ ಬೃಹದಾಕಾರದ ಗವಿಗಳು ಗೋಚರಿಸಿದವು. ಇಲ್ಲಿ ಮಾತ್ರ ದಾರಿ ತಪ್ಪುವ ಸಾಧ್ಯತೆ ಹೆಚ್ಚಿತ್ತು. ಆದ್ದರಿಂದ, ಜಾಗರೂಕತೆಯಿಂದ ಜತೆ ಪ್ರವಾಸಿಗರ ಜೊತೆ ಹೆಜ್ಜೆ ಹಾಕಬೇಕಾಯಿತು. ಒಂದು ಗವಿಯೊಳಗೆ ಸಣ್ಣ ಬಾವಿಯಂತಿರುವ ಕಂದಕದಲ್ಲಿ ನೀರು ತುಂಬಿತ್ತು. ತಪ್ಪಿ ಕಾಲು ಜಾರಿ ಅದರೊಳಗೆ ಬಿದ್ದರೆ ಎಂಬ ಭಯದ ನಡುವೆಯೇ ಅದನ್ನು ದಾಟಿ ಮುಂದೆ ಸಾಗಿದೆವು… ಎಷ್ಟು ನಡೆದರೂ ಮುಗಿಯದ ಗವಿಯ ಕಗ್ಗತ್ತಲೆಯಲ್ಲಿ ಕರಗಿ ಹೋದೆವು. ಕಳೆದು ಹೋದ ಕಾಲಗರ್ಭದಲ್ಲಿ ಹುದುಗಿದ ಬಿಸಿ ಲಾವಾದ ಪ್ರವಾಹವು ಅದರ ಕಥೆಯನ್ನು ಬಿತ್ತರಿಸುತ್ತಿತ್ತು..!! ಅತ್ಯಂತ ರಭಸದಿಂದ ಇಲ್ಲಿ ಹರಿದ ಲಾವಾದ ಪ್ರಮಾಣ ಎಷ್ಟಿರಬಹುದೆಂದು ಊಹಿಸಿಯೇ ಗಾಬರಿಯಾಯಿತು. ನಾವು ಅದರೊಳಗೆ ಇದ್ದೇವೆ ಎಂಬ ಭಾವವೇ ಎದೆ ಬಡಿತ ಹೆಚ್ಚಿಸುವಂತೆ ಮಾಡಿತು! ಮುಂದಕ್ಕೆ, ಗವಿಯು ಕಿರಿದಾಗುತ್ತಾ ಬಂತು. ಆದ್ದರಿಂದ ಮುಂದೆ ಹೋಗುವ ಧೈರ್ಯ ಸಾಲದೆ ಎಲ್ಲರೂ ಹಿಂತಿರುಗಿದೆವು. ಗವಿಯೊಳಗಿನ ಗವಿಗಳಲ್ಲಿ ಅಡ್ಡಾಡಿ ಬಂದವರಿಗೆ ಏನೋ ಸಾಧಿಸಿದ ಭಾವ.

ಆ ಬಳಿಕ ಹೋದಂತಹ ಗವಿಯ ರಚನೆ ಇದಕ್ಕಿಂತ ತೀರಾ ಭಿನ್ನವಾಗಿದೆ. ಇದು ಹೆಚ್ಚು ಆಳವಿಲ್ಲ. ಅಲ್ಲಿದ್ದ ದೊಡ್ಡ ಬಂಡೆಯ ಪಕ್ಕದಿಂದ ಕೆಳಗಿಳಿಯಲು ಸಾದಾ ದಾರಿಯಿದೆ. ರಭಸದಲ್ಲಿ ಹರಿದ ಅಗಾಧ ನೀರು ತನ್ನ ಪಾತಳಿಯನ್ನು ತಾನೇ ರಚಿಸಿಕೊಳ್ಳುವಂತೆ, ದೊಡ್ಡ ದೊಡ್ಡ ಕಲ್ಲು ಬಂಡೆಗಳ ರಾಶಿಯಿಂದ ಆವೃತವಾದ ತೊರೆಯಂತೆ ರಚನೆಗೊಂಡಿದೆ. ಅಲ್ಲೊಂದು ಪುಟ್ಟ ಗವಿ… ಮುಂಭಾಗದಲ್ಲಿ ಲಾವಾದ ರಭಸಕ್ಕೆ ಭೂಭಾಗ ಕೊರೆತದಿಂದ ಆದ ಕೊರಕಲು… ಬಂಡೆಯಿಂದ ಬಂಡೆಗೆ ನೆಗೆಯುತ್ತಾ ಸಾಗಬೇಕಾಗಿತ್ತು. ಒಂದಷ್ಟು ದೂರ ಸಾಗಿದ ಬಳಿಕ ಇನ್ನೊಂದು ಗವಿಯ ದ್ವಾರದ ಬಳಿ ತಲಪಿದೆವು. ಇದು ಮೊದಲಿನ ಗವಿಗಿಂತ ಚಿಕ್ಕದಾಗಿದ್ದು, ನೆಲ ತುಂಬಾ ಕೊರಕಲಿನಿಂದ ಕೂಡಿದೆ. ಪಕ್ಕದಲ್ಲಿ ಮತ್ತು ಮೇಲ್ಗಡೆಯಿಂದ ನೀರು ಜಿನುಗಿ ದಾರಿಗುಂಟ ಹರಿಯುತ್ತಿದ್ದುದರಿಂದ ಮಂದಬೆಳಕಿನ ವ್ಯವಸ್ಥೆ ಕಲ್ಪಿಸಿದ್ದರು. ಈ ಗವಿಯೊಳಗೆ, ಮೇಲ್ಭಾಗದಲ್ಲಿ, ಬಿಳಿ ಹಸಿರು ಬಣ್ಣಗಳಿಂದ ಕೂಡಿದ ವಿವಿಧ ವಿಚಿತ್ರ, ಆದರೆ ಸುಂದರವಾದ ರಚನೆಗಳು ಗಮನ ಸೆಳೆದವು. 


ಕೊನೆಯದಾಗಿ ನಾವು ನೋಡಿದ ಮೂರನೇ ಗವಿಯು ಇವೆರಡಕ್ಕಿಂತಲೂ ತೀರಾ ಭಿನ್ನವಾಗಿದೆ.  ಭೂಭಾಗದ ಸಮತಲ ಪ್ರದೇಶದಿಂದ ಅಗಲವಾದ ರಂಧ್ರದ ಮೂಲಕ ಆಳ ಪಾತಾಳಕ್ಕಿಳಿದ ಈ ಗವಿಯು ಬೃಹದಾಕಾರ ಹೊಂಡದ ರೂಪದಲ್ಲಿದೆ. ಹತ್ತಾರು ಮೀಟರ್ ಮೇಲ್ಗಡೆ ಕಮಾನು ರೂಪದ ಛಾವಣಿ ಏರ್ಪಟ್ಟಿದೆ. ಮೇಲಿನಿಂದ ಕೆಳಗಿನ ವರೆಗೆ ಬಲವಾದ ಹಿಡಿಕೆಯಿಂದ ಕೂಡಿದ ಉಕ್ಕಿನ ಮೆಟ್ಟಲುಗಳಿವೆ. ಇದರ ಮೂಲಕ ಕತ್ತಲೆಯ ಗವಿಯು,  ನೇರವಾಗಿ ಭೂಮಿಯ ಕೆಳಭಾಗದತ್ತ ಸಾಗಿದೆ. ಇದರ ಆಳವನ್ನು ಕಂಡೇ ಹಲವು ಮಂದಿ ಇದರೊಳಗೆ ಇಳಿಯಲು ಭಯಪಟ್ಟು ಹಿಂದೆ ಸರಿದರು. ಕಾಲು ನೋವಿನ ಸಮಸ್ಯೆ ಇರುವ ಮಂದಿ ಇಳಿಯಲು ಸಾಧ್ಯವೇ ಇಲ್ಲ.ಇಳಿದರೆ ಹತ್ತಲು ಕಷ್ಟ!

ನಾವು ಕೆಲವು ಮಂದಿ ಧೈರ್ಯ ಮಾಡಿ ಇಳಿಯುವ ಸಾಹಸಕ್ಕೆ ಕೈ ಹಾಕಿದೆವು. ಒಳಗಡೆ ಬಹಳ ತಂಪು ಅನುಭವವಾಯಿತು. ಬಹಳ ಜಾಗರೂಕತೆಯಿಂದ ಹತ್ತಿಪ್ಪತ್ತು ಮೆಟ್ಟಲುಗಳನ್ನು ಇಳಿದು, ಸಮತಟ್ಟಾದ ಉಕ್ಕಿನ ಹಲಗೆ ಮೇಲೆ  ನಡೆದಾದ ಬಳಿಕ ಸಿಗುವ ಅತ್ಯಂತ ಇಳಿಜಾರಿನಲ್ಲಿ ನೇರ ಮೆಟ್ಟಲುಗಳಲ್ಲಿ ಇಳಿಯುವಾಗ ಭಯಪಡದವರೇ ಇಲ್ಲ ಎನ್ನಬಹುದು! ಒಂದೆರಡು ಕಡೆಗಳಲ್ಲಿ ಇನ್ನೊಬ್ಬರ ನೆರವು ಬೇಕಾಗುತ್ತದೆ. ಕೊನೆಯಲ್ಲಿ ನೆಲ ತಲಪಿದಾಗ ಆಗುವ ವಿಪರೀತ ಶೀತದ ಅನುಭವವು, ನಮ್ಮನ್ನು ಅಲ್ಲಿಂದ ಆದಷ್ಟು ಬೇಗ ಮೇಲಕ್ಕೆ ಹೋಗಲು ಪ್ರೇರೇಪಿಸುತ್ತದೆ. ಕೆಳಗಡೆಗೆ ಸರೀಸೃಪಗಳು ಕಂಡುಬರುವುದುಂಟು ಎಂಬ ಮಾತು ಕೇಳಿ ಬಂದಾಗ; ನನಗಂತೂ ಎಲ್ಲಿಲ್ಲದ ಭಯ ಆರಂಭವಾಯಿತು. ಪೂರ್ತಿ ಕಗ್ಗತ್ತಲು ಬೇರೆ… ಕಾಲ ಕೆಳಗಡೆಗೆ ಏನು ಬಂದರೂ ತಿಳಿಯಲಾರದು! ತರಾತುರಿಯಲ್ಲಿ ಒಬ್ಬಳೇ ಹೊರಡಲೂ ಭಯ. ಅಂತೂ ಮೇಲೇರಲು ಪ್ರಾರಂಭಿಸಿದಾಗಲೇ ಅದರ ಕಷ್ಟ ಅರಿವಾಯಿತು…ಎಲ್ಲರಿಗೂ. ಒಬ್ಬರಿಗೊಬ್ಬರು ಬೆಳಕಿನ ಸಹಾಯವನ್ನು ನೀಡುತ್ತಾ ಮೇಲೆ ಬಂದವರಲ್ಲಿ ನಾವೇ ಕೊನೆಯವರಾಗಿದ್ದೆವು!.

ಹಿಂತಿರುಗುವ ಹಾದಿಯಲ್ಲಿ…

ಅದಾಗಲೇ ಸಂಜೆಯ ಹೊತ್ತು…ಹಿಂತಿರುಗುವ ಸಮಯ ಹತ್ತಿರವಾಗುತ್ತಿತ್ತು. ಇನ್ನೂ ಕೆಲವು ಗವಿಗಳಿದ್ದರೂ, ಅವುಗಳನ್ನು ವೀಕ್ಷಿಸಲು ಸಾಧ್ಯವಿಲ್ಲದೆ ಇರುವುದರಿಂದ ಹಿಂತಿರುಗಲೇ ಬೇಕಾಯಿತು. ಗವಿ ಪ್ರದೇಶದಿಂದ ಸುಮಾರು ಐದು ಕಿ.ಮೀ. ದೂರ ತಲಪಿದಾಗ ರಸ್ತೆಯ ಬಲ ಪಕ್ಕದಲ್ಲಿ, ಸುಮಾರು ಹತ್ತು ಅಡಿ ಆಳದಲ್ಲಿ ವಿಚಿತ್ರವಾದ ದೃಶ್ಯವು ಗೋಚರಿಸಿತು. ಎಕರೆಗಟ್ಟಲೆ ಪ್ರದೇಶವು ಸಮತಟ್ಟಾಗಿದ್ದು, ಅದರಲ್ಲಿ ಒಂದೇ ತೆರನಾದ ಕರಿ ಬಂಡೆಗಳು ಹರಡಿಕೊಂಡಿದ್ದವು. ಅಲ್ಲೇ ವಾಹನವನ್ನು ನಿಲ್ಲಿಸಿ ನೋಡಿದಾಗ ಅದು ಲಾವಾ ಪ್ರವಾಹವು ಹರಿದು ಹೆಪ್ಪುಗಟ್ಟಿದ ಕುರುಹು ಎಂದು ತಿಳಿಯಿತು. ಅಲ್ಲೇ  ಸ್ವಲ್ಪ ಅಡ್ಡಾಡಿ, ಫೋಟೋ ಕ್ಲಿಕ್ಕಿಸಿ ಹೊರಟಾಗ ಸಂಜೆಗತ್ತಲು ಆವರಿಸತೊಡಗಿತು…. ನಮ್ಮ ಗಮ್ಯದ ಕಡೆಗೆ ಗಮನ ಹರಿಯಿತು…ಅದೇ ನಮ್ಮ ಮನೆ… !!

ಮತ್ತೆರಡು ದಿನಗಳಲ್ಲಿ ನಮ್ಮೂರಿನ ಪಯಣಕ್ಕೆ ಸಿದ್ಧತೆ ನಡೆಯಿತು. ಈ ಸಲದ ಮೂರು ತಿಂಗಳುಗಳ ಅಮೆರಿಕ ವಾಸ್ತವ್ಯವು ಅತ್ಯಂತ ಉಪಯುಕ್ತವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.  ವಿಶೇಷವಾದ ಸ್ಥಳಗಳ ವೀಕ್ಷಣೆಯು ಎಂದೆಂದಿಗೂ ಮೆಲುಕು ಹಾಕುವಂತಹ ಸಿಹಿ ಅನುಭವಗಳನ್ನು ನೀಡಿ, ಜೀವನೋತ್ಸಾಹವನ್ನು ಇಮ್ಮಡಿಸಿದೆ ಎಂದುಕೊಳ್ಳುವೆ. ಪ್ರವಾಸವೆಂದರೆ ಇದೇ ತಾನೇ..?? ಮನೆ ಸೇರಿ ವರ್ಷಗಳೇ ಕಳೆದರೂ ಇಂದಿಗೂ ಹಸಿರಾದ ನೆನಪುಗಳು ಪ್ರೀತಿಯಿಂದ ಕಾಡುತ್ತವೆ….

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=40072

(ಮುಗಿಯಿತು)

ಪ್ರೀತಿಯ ಓದುಗರೆ, ಮೂರು ಬಾರಿ ಅಮೆರಿಕಕ್ಕೆ ಹೋಗಿ ಬಂದ ನನ್ನ ಅನುಭವಗಳನ್ನು ನನಗೆ ತಿಳಿದಂತೆ ತಮ್ಮೊಡನೆ ಹಂಚಿಕೊಂಡಿರುವೆ. ನಮ್ಮೆಲ್ಲರ ಪ್ರೀತಿಯ ಸುರಹೊನ್ನೆಯ ಮುಖ್ಯ ಸಂಪಾದಕಿ ಮೈಸೂರಿನ ಹೇಮಮಾಲಾ ಅವರು ಅತ್ಯಂತ ಶ್ರದ್ಧೆಯಿಂದ ಸೂಕ್ತ ಚಿತ್ರಗಳನ್ನು ಜೋಡಿಸುತ್ತಾ,  ಸುಂದರ ರೂಪನ್ನು ನೀಡಿ ಪ್ರಕಟಿಸುತ್ತಾ ಪ್ರೋತ್ಸಾಹಿಸಿದ ಪರಿ ಊಹೆಗೂ ನಿಲಕದ್ದು! ಜೊತೆಗೆ, ತಾವೆಲ್ಲರೂ ಪ್ರೀತಿಯಿಂದ ಓದಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಹುರಿದುಂಬಿಸುತ್ತಾ , ಈ ನನ್ನ ಅವಿಸ್ಮರಣೀಯ ಅನುಭವಗಳ ಸುದೀರ್ಘ ಲೇಖನಮಾಲೆಯು ಪೂರ್ತಿಯಾಗಲು ಸಹಕರಿಸಿರುವಿರಿ. ತಮಗೆಲ್ಲರಿಗೂ ಮಗದೊಮ್ಮೆ ನನ್ನ ಹೃತ್ಪೂರ್ವಕ ನಮನಗಳನ್ನು ಅರ್ಪಿಸುತ್ತಿದ್ದೇನೆ… 

ಶಂಕರಿ ಶರ್ಮ, ಪುತ್ತೂರು

12 Comments on “ಅವಿಸ್ಮರಣೀಯ ಅಮೆರಿಕ : ಎಳೆ 85

  1. ಪ್ರವಾಸ ಕಥನ ಸೊಗಸಾಗಿ ಮೂಡಿ ಬಂತು. ನಮಗೂ ಕುಳಿತಲ್ಲೇ ಅಮೇರಿಕಾ ದರ್ಶನವಾದುದು ಅವಿಸ್ಮರಣೀಯ! ಇದನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸಿ.

    1. ನಿಮ್ಮ ಪ್ರೀತಿಯ ಸಲಹೆಗಾಗಿ ಧನ್ಯವಾದಗಳು ಮಾಲಾ.

  2. ಬಹಳ ಕುತೂಹಲಕಾರಿ ಭಾಗ ಇವತ್ತು ಪ್ರಕಟ ಗೊಂಡ ಅಧ್ಯಾಯ. ಹೇಮಕ್ಕ ಹೇಳಿದ್ದು ಸರಿಯಾಗಿದೆ. ಪುಸ್ತಕ ರೂಪದಲ್ಲಿ ಪ್ರಕಟ ಗೊಂಡರೆ ಅದೊಂದು ದಾಖಲೆಯಂತೆಯೂ.

    1. ನಿಮ್ಮ ಆತ್ಮೀಯ ಸಲಹೆಗಾಗಿ ಧನ್ಯವಾದಗಳು ನಯನಾ ಮೇಡಂ.

  3. ಬಹಳ ಸೊಗಸಾಗಿ ಮೂಡಿ ಬಂತು ಪ್ರವಾಸ ಕಥನ

  4. ಅಂತೂ ನಿಮ್ಮೊಡನೆ ನಮ್ಮನ್ನೂ ಪ್ರವಾಸ ಕಥನದ ಮೂಲಕ ಅಮೆರಿಕಾ ಪ್ರವಾಸ ಮಾಡಿಸಿದ ನಿಮಗೆ..ಹೃತ್ಪೂರ್ವಕವಾದ ಧನ್ಯವಾದಗಳು ಶಂಕರಿ ಮೇಡಂ.. ಅದನ್ನು ಪುಸ್ತಕ ರೂಪದಲ್ಲಿ ತನ್ನಿ ದಾಖಲೆ ಯಾಗಿ ಇರುತ್ತದೆ…ಶುಭವಾಗಲಿ..

    1. ನನಗೂ ಅಮೇರಿಕಾ ಸುತ್ತಿದ ಅನುಭವ ಆಯಿತು ..ಗುಹೆಗಂತೂ ನಾನೂ ನಿಮ್ಮೊಂದಿಗೆ ಬಂದೆ ಎಂದು ಅನಿಸಿತು ಅಕ್ಕಾ

    2. ನಿಮ್ಮ ಸ್ನೇಹಪೂರ್ವಕ ಸಲಹೆಗಾಗಿ ಧನ್ಯವಾದಗಳು ನಾಗರತ್ನ ಮೇಡಂ.

  5. ಹೌದು……….ಎಷ್ಟು ಬರೆದರೂ ನಮಗೆ ಅಮೆರಿಕೆಯು ಬೆಡಗೇ! ಬೆರಗೇ!!

    ಕನ್ನಡದಲ್ಲಿ ಅಮೆರಿಕ ಕುರಿತ ಪ್ರವಾಸ ಕೃತಿಗಳೇ ಬಹಳ. ಅದರಲೂ ದಿಗ್ಗಜರದೇ ಹಲವು.

    ಮುಂದುವರೆಯಲಿ.

  6. ಅಮೆರಿಕಾ ಪ್ರವಾಸದಲ್ಲಿ ಭೇಟಿ ನೀಡಿದ ಎಲ್ಲ ಪ್ರೇಕ್ಚಣೀಯ ಸ್ಥಳಗಳ ವಿವರಗಳನ್ನು ಕಣ್ಷಿಗೆ ಕಟ್ಟುವಂತೆ ವರ್ಣಿಸಿದ ಪ್ರವಾಸ ಕಥನ ಸೊಗಸಾದ ನಿರೂಪಣೆಯೊಂದಿಗೆ ಮೂಡಿ ಬಂತು. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *