ಕಾದಂಬರಿ

ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 6

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಆದಿತ್ಯ ರಮ್ಯಾಗೆ ತಾನು ಮೂರ್ತಿರಾಯರನ್ನು ಭೇಟಿ ಮಾಡಿದ ವಿಚಾರ ಹೇಳಲಿಲ್ಲ.
“ಅಮ್ಮ-ಅಪ್ಪ ತುಂಬಾ ಆರಾಮವಾಗಿರಬಹುದು. ನಾವ್ಯಾಕೆ ತೊಂದರೆಕೊಡುವುದು?” ಎಂದುಕೊಂಡ.

ಸುಬ್ರಹ್ಮಣ್ಯ ಆದಿತ್ಯ ದಂಪತಿಗಳನ್ನು ತಂದೆ-ತಾಯಿ ವಿವಾಹ ವಜ್ರಮಹೋತ್ಸವಕ್ಕೆ ಕರೆಯಲು ಬಂದವನು, ಆದಿ ತಂದೆ-ತಾಯಿಯರನ್ನೂ ಭೇಟಿ ಮಾಡಿ ಆಹ್ವಾನಿಸಿದ.

”ನಮ್ಮ ಪರವಾಗಿ ಮಗ-ಸೊಸೆ ಬರ್ತಾರೆ. ನಮಗೆ ವಯಸ್ಸಾಗಿದೆ. ಆದಷ್ಟು ಹೊರಗಿನ ಓಡಾಟ ಕಡಿಮೆ  ಮಾಡಿಕೊಳ್ಳೋಣಾಂತಿದ್ದೇನೆ.
”ಮನೆಯಿಂದ ಹೊರಗೆ ಹೋಗಲ್ವಾ?’

“ಹಾಗೇನಿಲ್ಲ. ನಾನು ಪ್ರತಿದಿನ ಬೆಳಗ್ಗೆ 6-30 ಗೆ ವಾಕಿಂಗ್ ಹೋಗ್ತಿನಿ, ಹತ್ತಿರದಲ್ಲೇ ಒಂದು ಪಾರ್ಕಿದೆ. ಅಲ್ಲಿಗೆ ಹೋಗಿ 4 ರೌಂಡ್ ವಾಕ್ ಮಾಡ್ತೀನಿ. ಸುಸ್ತಾದಾಗ ಅಲ್ಲೇ ಕುಳಿತುಕೊಳ್ತೀನಿ. 7-30ಗೆ ಮನೆಗೆ ಬರೀನಿ. ಬಿಸಿಬಿಸಿ ಕಾಫಿ ಕುಡಿದು ಪೇಪರ್ ಹಿಡಿದು ಕುಳಿತರೆ 8-30 ಗೆ ಏಳೋದು.

ಅಷ್ಟರಲ್ಲಿ ದಾಕ್ಷಾಯಿಣಿ ಚೂಡವಲಕ್ಕಿ, ಕಾಫಿ ತಂದರು.
“ಅಮ್ಮಾ, ನೀವು ವಾಕಿಂಗ್ ಹೋಗಲ್ವಾ?’

“ಇತ್ತೀಚೆಗೆ ಹೋಗ್ತಾ ಇದ್ದೀವಿ. ನನಗೆ ನಿದ್ರೆ ಕಡಿಮೆ. 5 ಗಂಟೆಗೆ ಎಚ್ಚರವಾಗತ್ತೆ. ಮುಖತೊಳೆದು ಡಿಕಾಕ್ಷನ್ ಹಾಕಿ, ಹಾಲು ಕಾಯಿಸಿ, ತಿಂಡಿಗೆ ಎಲ್ಲಾ ರೆಡಿ ಮಾಡಿಡ್ತೀನಿ. ಇವರು ಬೆಳಿಗ್ಗೆ ಎದ್ದು ಮುಖ ತೊಳೆದು ಬಿಸಿನೀರು ಕುಡಿದ ತಕ್ಷಣ ವಾಕಿಂಗ್ ಹೊರಡ್ತೀನಿ. ಇವರು ನಾಲ್ಕು ರೌಂಡ್ ಸುತ್ತಿದರೆ ನಾನು 2 ರೌಂಡ್ ಸುತ್ತಿ ಬಂದು ಕೂತ್ಕೊಳ್ತೀನಿ. ಮನೆಗೆ ಬಂದು ಕಾಫಿ ಕುಡಿದು ಪೇಪರ್ ಓದಿ ಸ್ನಾನಕ್ಕೆ ಹೋಗ್ತಿನಿ.”

‘ಅಪ್ಪ ಸ್ನಾನ ಮುಗಿಸುವಷ್ಟರಲ್ಲಿ ತಿಂಡಿ ರೆಡಿ.”
”ಹುಂ, ತಿಂಡಿಯಾದ ಮೇಲೆ ನ್ಯೂಸ್ ಕೇಳೂಂತ ಇವರು ಟಿ.ವಿ ಮುಂದೆ ಕೂಡಿಸ್ತಾರೆ”.
”ಚೆನ್ನಾಗಿದೆ. ಅಂಕಲ್‌ಗೋಸ್ಕರ ನ್ಯೂಸ್ ಕೇಳೀರಾ?”
“ಹಾಗೆ ಅಂದ್ಕೋ, ನಮ್ಮ ವಿಚಾರ ಬಿಡು. ನಿಮ್ಮ ತಂದೆ-ತಾಯಿ ಚೆನ್ನಾಗಿದ್ದಾರಾ?’
”ಚೆನ್ನಾಗಿದ್ದಾರೆ ಆಂಟಿ. ಅವರು ಈ ಸಂಭ್ರಮವೆಲ್ಲಾ ಬೇಡ ಅಂತಿದ್ದರು. ನಾವೇ ಒತ್ತಾಯ ಮಾಡಿದೆವು.’

‘ಒಳ್ಳೆಯದಾಯ್ತು. ಈ ನೆಪದಲ್ಲಿ ಅವರು ತಮ್ಮ ಬಂಧು ಬಳಗ ಸ್ನೇಹಿತರು ಎಲ್ಲರನ್ನೂ ನೋಡಬಹುದು” ಎಂದರು ದಾಕ್ಷಾಯಿಣಿ.

ಸುಬ್ಬಣ್ಣ ಬಂದು ಹೋದ ನಂತರ ರಮ್ಯಾಳ ವರಾತ ಜಾಸ್ತಿಯಾಯ್ತು. “ರೀ ನಾವೂ `ಅತ್ತೆ-ಮಾವನ್ನ ಕರೆದುಕೊಂಡು ಬರೋಣ.”

”ಬೇಡ ರಮ್ಯಾ, ಸುಬ್ಬು ಈಗ ತಾನೇ ಬಂದು ಹೋಗಿದ್ದಾನೆ. ನಾವು ಅವನ ಮಾತು ಕೇಳಿಕೊಂಡು ಕರೆದೆವೂಂತಾಗತ್ತೆ, ಕೊಂಚ ದಿನ ಕಾಯೋಣ” ಎಂದ ಆದಿತ್ಯ

***

ಭಾನುವಾರ ಸುಬ್ಬುಕೃಷ್ಣನ ಮನೆಯ ಕಾರ್ಯಕ್ರಮ ಆದಿತ್ಯ-ರಮ್ಯಾ ಶನಿವಾರವೇ ಹೋಗಿ ಹೋಟೆಲ್‌ನಲ್ಲಿ ಇಳಿದುಕೊಂಡು ಸುಬ್ಬುವನ್ನು ಭೇಟಿ ಮಾಡಲು ಹೋದರು. ಅವನು ಹೊಸಮನೆಯಲ್ಲಿದ್ದ. ಅಲ್ಲಿ ಅಡುಗೆ ಮನೆಯ ಉಸ್ತುವಾರಿ ವಹಿಸಿದ್ದ ದೊಡ್ಡಕ್ಕ -ಭಾವನನ್ನು ನೋಡಿ ಆದಿತ್ಯ ಆಶ್ಚರ್ಯದಿಂದ ಕಣ್ಣರಳಿಸಿದ.

“ಅಕ್ಕ-ಭಾವ ನೆನ್ನೆನೇ ಬಂದ್ರು. ಅವರು ಅಡಿಗೆ ಮನೆ ಉಸ್ತುವಾರಿ ವಹಿಸಿಕೊಂಡ ಮೇಲೆ ನಾವು ನಿರಾಳವಾಗಿ ಬೇರೆ ಕೆಲಸಗಳಿಗೆ ಗಮನಕೊಡಲು ಸಾಧ್ಯವಾಯ್ತು.
”ಅಕ್ಕ-ಭಾವ ನಿಮಗೆಲ್ಲಾ ಹೇಗೆ ಪರಿಚಯ?”

“ನಾನು ರಾಜೇಶ ಪಿ.ಯು.ಸಿಯಲ್ಲಿ ಕ್ಲಾಸ್‌ಮೇಟ್ಸ್, ನಾನಾಗ ಅನಾಥಾಲಯದಲ್ಲಿ ಇದ್ದುಕೊಂಡು ಓದುತ್ತಿದ್ದೆ. ಶನಿವಾರ, ಭಾನುವಾರ ಗಣೇಶನ ಜೊತೆ ಇರ್‍ತಿದ್ದೆ. ಹಬ್ಬ ಹರಿದಿನಗಳಲ್ಲಿ ಅಪ್ಪ ಅನಾಥಾಲಯದ ಹತ್ತಿರ ಬಂದು ಕರೆದು ಹೋಗೋರು, ಗಣೇಶ ಇಂಜಿನಿಯರಿಂಗ್‌ಗೆ ಸೇರಿಕೊಂಡ ಮೇಲೆ ನಾನು ಬಂದು ಇವರ ಮನೆಯಲ್ಲೇ ಇದ್ದೆ. ನನಗೆ ಓದಿ, ಕೆಲಸದಲ್ಲಿರುವ ಹುಡುಗೀನ್ನ ಮದುವೆಯಾಗಬೇಕೂಂತ ಆಸೆಯಿತ್ತು. ಆದರೆ ನಮ್ತಂದೆ ವಸು ಜೊತೆ ಮದುವೆ ಗೊತ್ತು ಮಾಡಿದ್ರು. ಅವಳು ಬಿ.ಎಸ್.ಸಿ. ಗ್ರಾಜುಯೇಟ್ ಅಂತ ತಿಳಿದು ಸಮಾಧಾನವಾಯ್ತು. ಮದುವೆಯಾದ ಒಂದು ತಿಂಗಳಿಗೆ ಮೈಸೂರಿಗೆ ಬಂದು ಶಾರದಾವಿಲಾಸ ಕಾಲೇಜ್‌ನಲ್ಲಿ ಬಿ.ಎಡ್‌ಗೆ ಸೇರಿಸಿದೆ. ಆಗ ಸುಬ್ಬು ತಂದೆ-ತಾಯಿ ಕೃಷ್ಣಮೂರ್ತಿಪುರಂನಲ್ಲಿ ಚಿಕ್ಕ ಮನೆ ಮಾಡಿಕೊಂಡಿದ್ರು”.

“ನಾನು ವಸೂನ್ನ ಕರೆದುಕೊಂಡು ಅವರ ಮನೆಗೆ ಹೋಗಿ, ವಸು ಬಿ.ಎಡ್‌ಗೆ ಸೇರಿರುವ ವಿಚಾರ ಹೇಳಿದೆ. ತಕ್ಷಣ ಸುಬ್ಬಣ್ಣನ ತಂದೆ ಏನಂದ್ರು ಗೊತ್ತಾ?” ಭಾವ ಕೇಳಿದರು.

“ನಾನು ಹೇಳ್ತಿನಿ. ವಸುಮತಿ ನೀನು ನಮ್ಮನೆಯಲ್ಲೇ ಇರು. ಕಾಲೇಜ್‌ಗೆ ನಡೆದುಕೊಂಡು ಹೋಗಿ ಬರಬಹುದು, ನೀನಿದ್ದರೆ ನಮ್ಮವಳಿಗೂ ಅನುಕೂಲ ಅಂದ್ರು. ನಾನು ಇವರ ಮನೆಯಲ್ಲೇ ಇದ್ದೆ. ಮನೆಮಗಳ ತರಹ ನೋಡಿಕೊಂಡು, ನನಗಿದು ಎರಡನೇ ತವರುಮನೆ” ಅಕ್ಕ ಹೇಳಿದಳು.

”ನನಗೆ ಈ ವಿಚಾರ ಗೊತ್ತೇ ಇರಲಿಲ್ಲ.”

“ನಮ್ಮ ಟೈಟೋರಿಯಲ್ಸ್ ಇವತ್ತು ಚೆನ್ನಾಗಿ ನಡೆಯುತ್ತಿದ್ದೇಂದ್ರೆ ಅದಕ್ಕೆ ಈ ಮನೆಯವರ ಆಶೀರ್ವಾದವೇ ಕಾರಣ” ಆದಿತ್ಯನ ಭಾವ ಮುರುಳಿ ಹೇಳಿದರು. ಅಷ್ಟರಲ್ಲಿ ಕಾಫಿ ಬಂತು.

ವಸು ಇಬ್ಬರಿಗೂ ಕಾಫಿ ತಂದುಕೊಟ್ಟು ಹೇಳಿದಳು. “ರಮ್ಯ ನಿನಗೋಸ್ಕರವೇ ಕಾಯ್ತಿದ್ದೆ.ಅಂಗಡಿಗೆ ಹೋಗಿ ಬರಬೇಕು. ಸೀರೆ ತೊಗೋಬೇಕಿತ್ತು ಬರೀಯಾ?”

”ಆಗಲಿ ಅತ್ತಿಗೆ ಹೋಗಿ ಬರೋಣ. ಆದಿ ನೀವು ಬರ್‍ತೀರ ಅಲ್ವಾ?”

“ಅವನ್ಯಾಕೆ ರಮ್ಯಾ? ಅವನು ಸುಬ್ಬಣ್ಣಗೆ ಸಹಾಯ ಮಾಡಿಕೊಂಡು ಇಲ್ಲೇ ಇರಲಿ, ನಾನು ನೀನು ಆಟೋಲಿ ಹೋಗಿ ಬರೋಣ.”
ರಮ್ಯಾ ಅವಳ ಜೊತೆ ಹೊರಟಳು.
“ಯಾವ ಅಂಗಡಿಗೆ ಹೋಗೋಣ?”

“ಕೆ.ಎಸ್.ಐ.ಸಿ. ಶೋರೂಂಗೆ, ಸುಬ್ಬು ತಾಯಿಗೆ ಮೈಸೂರು ಸಿಲ್ಕ್ ಸೀರೆ, ತಂದೆಗೆ ಮೈಸೂರು ಸಿಲ್ಕ್ ಪಂಚೆ ತೆಗೆಯಬೇಕು.
‘ಮೈಸೂರು ಸಿಲ್ಕ್ ಸೀರೇನಾ?”
“ಹೌದು ಅವರಿಗೆ ಮೈಸೂರು ಸಿಲ್ಕ್ ಸೀರೆ ತುಂಬಾ ಇಷ್ಟ. ಅದ್ರಲ್ಲೂ ಬಾಟಲ್ ಗ್ರೀನ್ ಅವರ ಇಷ್ಟವಾದ ಕಲರ್.”
“ಇನ್ನೇನು ತೆಗೆದುಕೊಳ್ಳಬೇಕು?
“ಅಮ್ಮ-ಅಪ್ಪ ಹದಿನೈದು ಸಾವಿರ ಕಳಿಸಿದ್ದಾರೆ. ಅದರಲ್ಲಿ ಅರಿಶಿನ-ಕುಂಕುಮದ ಬಟ್ಟಲು, ವಾಚ್ ತೆಗೆದುಕೊಳ್ಳಬೇಕು.”

“ಅವತ್ಯಾಕೆ ಸಪರೇಟಾಗಿ ಕೊಡಬೇಕು?”

“ನಾನು ಅದೇ ಹೇಳಿದೆ. ನಮ್ಮನೆ ಮಕ್ಕಳಿಗೆ ಅವರು ಅನ್ನ ಹಾಕಿದ್ದಾರೆ. ಒಳ್ಳೆಯ ಅವಕಾಶ ಸಿಕ್ಕಿರುವಾಗ ನಮ್ಮ ಕೃತಜ್ಞತೆ ತೋರಿಸುವುದಕ್ಕೆ ಅದನ್ನು ಉಪಯೋಗಿಸಿಕೊಳ್ಳುವುದು ಜಾಣತನ” ಎಂದರು.

“ನಿಮ್ಮ ಟ್ಯುಟೋರಿಲ್ಸ್ ಹೇಗೆ ನಡೆಯುತ್ತಿದೆ?”

‘ತುಂಬಾ ಚೆನ್ನಾಗಿ ನಡೆಯುತ್ತಿದೆ. ಬೆಳಗ್ಗೆ 8 ರಿಂದ 9-30ಯವರೆಗೆ ಒಂದು ಬ್ಯಾಚ್, 12 ರಿಂದ 2ರವರೆಗೆ ಸಪ್ಲಿಮೆಂಟರಿಯವರಿಗೆ ಪುನಃ 6 ರಿಂದ 8 ಒಂದು ಬ್ಯಾಚ್, ಬ್ಯಾಚ್‌ನಲ್ಲಿಯೂ 100 ಮಕ್ಕಳಿದ್ದಾರೆ. 50 ಮಕ್ಕಳ ತರಹ 2 ವಿಭಾಗ ಮಾಡಿಕೊಂಡು ಪಾಠ ಮಾಡ್ತೀವಿ.”

“ಒಬ್ಬ ಕ್ಯಾಂಡಿಡೇಟ್‌ಗೆ ಎಷ್ಟು ಫೀಸು ತೆಗೆದುಕೊಡ್ತೀರಾ?”
“ಕೇವಲ ಸೈನ್ಸ್, ಮ್ಯಾಥ್ಸ್  ಆದ್ರೆ 10,000 ರೂ. ಇಂಗ್ಲೀಷ್ ಬೇಕೂಂದ್ರೆ 12,000ರೂ. ನಾನು  ಮ್ಯಾಥ್ಸ್ ಕ್ಲಾಸ್ ತೆಗೆದುಕೊಳೀನಿ. ಸೈನ್ಸ್ ಗೆ  ಬೇರೆಯವರಿಬ್ಬರಿದ್ದಾರೆ. ಇಂಗ್ಲೀಷ್‌ಗೆ ಇಬ್ಬರಿದ್ದಾರೆ.”

‘ಮ್ಯಾಥ್ ನೀವೊಬ್ಬರೇ ಟೀಚ್ ಮಾಡ್ತೀರಾ?”
“ನಮ್ಮ ಮಾವಾನೂ ಟೀಚ್ ಮಾಡ್ತಾರೆ.”
“ಮುರುಳಿ?”
ಅವರೀಗ ಪಿ.ಯು.ಸಿ ಕಾಲೇಜಿನಲ್ಲಿದ್ದಾರೆ. ಅವರು ಟೀಚ್ ಮಾಡಲ್ಲ. ಟ್ಯುಟೋರಿಯಲ್ಸ್ ಇರುವುದೇ ಮಾವನ ಹೆಸರಿನಲ್ಲಿ.
“ನೀವು ತುಂಬಾ…….. ಲಕ್ಕಿ.
“ಹೌದು ರಮ್ಯಾ….” ಎಂದಳು ವಸು.
ಅತ್ತಿಗೆ ತಾನಾಗಿ ಏನಾದರೂ ಕೇಳಬಹುದು ಎಂದುಕೊಂಡಳು ರಮ್ಯಾ. ಆದರೆ ಅವಳು ಏನೂ ಕೇಳಲಿಲ್ಲ.

ಭಾನುವಾರ ಸಮಾರಂಭ ತುಂಬಾ ಚೆನ್ನಾಗಿ ನಡೆಯಿತು. ಆದಿತ್ಯ-ರಮ್ಯಾ ಸೋಮವಾರ ಹೊರಡುವುದೆಂದು ಕೊಂಡಿದ್ದರು. ವಸೂ ಮುರುಳಿ ಗುರುವಾರ ಹೊರಡುತ್ತೇವೆಂದು ಹೇಳಿದರು. ಬಂದ ನೆಂಟರೆಲ್ಲಾ ಹೊರಟು ಹೋಗಿದ್ದರು. ಅಪರೂಪಕ್ಕೆ ಒಟ್ಟಾಗಿ ಸೇರಿದ್ದ ಅಣ್ಣ-ತಮ್ಮಂದಿರು ಹಾಲ್‌ನಲ್ಲಿ ಹರಟುತ್ತಿದ್ದರು. ಮನೆಯ ಮುಂದಿನ ಪೋರ್ಟಿಕೋದಲ್ಲಿ ಆದಿ, ಮುರುಳಿ, ವಸು, ರಮ್ಯ ಕುಳಿತಿದ್ದರು. ಹಿಂದಿನ ದಿನವೇ ಆದಿ ಅಕ್ಕನಿಗೆ ಅಪ್ಪ-ಅಮ್ಮ ಬೇರೆ ಇರುವ ವಿಚಾರ ಹೇಳಿದ್ದ.

” ಅವರಿಗೆ ಬೇರೆ ಇರುವುದರಿಂದ ನೆಮ್ಮದಿ ಸಿಗುವುದಾದರೆ ಇರಲಿ ಬಿಡು” ಎಂದಿದ್ದಳು ವಸು.

“ನಮ್ಮಿಂದ ತಿಳಿದೋ, ತಿಳಿಯದೆಯೋ ತಪ್ಪಾಗಿದೆ ಅತ್ತಿಗೆ, ಅದನ್ನು ಸರಿಮಾಡಲು ನಮಗೆ ಒಂದು ಅವಕಾಶ ಬೇಕು ಅತ್ತಿಗೆ.”
“ಒಂದು ಸಲ ಮನೆ ಬಿಟ್ಟು ಹೋದವರು ನೀವು ಕರೆದ ತಕ್ಷಣ ವಾಪಸ್ಸು ಬರ್‍ತಾರಾ? “


‘ನಂಗೊಂದು ಐಡಿಯಾ ಹೊಳೆದಿದೆ.”
“ಏನದು?”
“ನಮ್ಮ ಮನೆ ಮೇಲೆ ಒಂದು ಮನೆ ಕಟ್ಟಿಸಿ” ಅತ್ತೆ- ಮಾವನ್ನ ಕೆಳಗಿನ ಮನೆಯಲ್ಲಿರಿ, ನಾವು ಮೇಲಿನ ಮನೆಯಲ್ಲಿದ್ದೀನೀಂತ ಹೇಳಬಹುದಲ್ಲವಾ?”

“ಹೌದು ಅಕ್ಕ. ಅಡಿಗೆಯವರು, ಕೆಲಸದವರು ಎಲ್ಲರನ್ನೂ ಗೊತ್ತು ಮಾಡಿಕೊಡ್ತೀವಿ. ನಮ್ಮಿಂದ ಅವರಿಗೆ ಏನೂ ತೊಂದರೆಯಾಗದ ಹಾಗೆ ನೋಡಿಕೊಳ್ತೀವಿ” ಆದಿತ್ಯ ಹೇಳಿದ.

‘ಆ ಮನೆ ಪಿತ್ರಾರ್ಜಿತ ಆಸ್ತಿ. ಮನೆ ಮಾವನ ಹೆಸರಲ್ಲಿರತ್ತೆ. ನೀನು ಲೋನ್ ತೆಗೆದುಕೊಳ್ಳಬೇಕಾದರೆ ಮನೆ ನಿನ್ನ ಹೆಸರಿಗೆ ಆಗಬೇಕು. ನಿಮ್ಮ ನಡುವೆ ಹೊಂದಾಣಿಕೆ ಇಲ್ಲದಿರುವಾಗ ನೀನು ಮನೆಯ ಬಗ್ಗೆ ಮಾತಾಡಿದರೆ ಮಾವನಿಗೆ ಬೇಜಾರಾಗಲ್ವಾ?” ಮುರುಳಿ ಕೇಳಿದರು.

”ಆದಿ ದುಡುಕಬೇಡ. ಅಪ್ಪ ಮನೆ ಪತ್ರ ನಿಮ್ಮನೆಯಲ್ಲೇ ಇಟ್ಟಿರುತ್ತಾರೆ. ಮನೆ ಯಾರ ಹೆಸರಿನಲ್ಲಿದೆ ನೋಡು. ಆ ಮೇಲೆ ನಿರ್ಧಾರಕ್ಕೆ ಬಾ. ಮೊದಲು ಅಪ್ಪ-ಅಮ್ಮನ ವಿಶ್ವಾಸ ಗಳಿಸಿ, ಅವರ ಮನೆಗೆ ಹೋಗಿ ಬಂದು ಮಾಡ್ತಿರಿ. ಅವರಿಗೆ ಈಗಿರುವಂತೆ ಆರಾಮವಾಗಿದ್ದೇವೆ ಅನ್ನಿಸಿದರೆ ಹಾಗೇ ಇರಲಿ ಬಿಡಿ” ವಸುಮತಿ ಹೇಳಿದಳು.

“ಯಾಕೋ ನನ್ನ ಮನಸ್ಸು ಒಪ್ತಿಲ್ಲ”.

“ಇದು ಒಂದು ದಿನದಲ್ಲಿ ತೀರ್ಮಾನವಾಗುವ ವಿಚಾರವಲ್ಲ. ನೀನು ದುಡುಕಿ ಯಾವ ನಿರ್ಧಾರಾನೂ ತೆಗೆದುಕೊಳ್ಳಬೇಡ.”

“ಅಕ್ಕ ಒಂದೆರಡು ದಿನದ ಮಟ್ಟಿಗಾದರೂ ನೀನು, ವಾರಿಣಿ ಅಕ್ಕ ಬೆಂಗಳೂರಿಗೆ ಬರಬಾರದಾ? ನೀವು ನಮಗೆ ಸಪೋರ್ಟ್ ಮಾಡಿದರೆ ಅಪ್ಪ ಖಂಡಿತಾ ಒಪ್ತಾರೆ.”

“ಆದಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಯುವವರೆಗೂ ನನಗೆ ಬಿಡುವಾಗಲ್ಲ. ವಾರಿಣಿ, ಅವಳ ಓರಗಿತ್ತಿ ಕೇಟರಿಂಗ್ ನಡೆಸ್ತಾರೆ. ಅವಳು ಯಾವಾಗಲೂ ಬ್ಯುಸಿ, ನಾವಿಬ್ಬರೂ ಮಾತಾಡಿಕೊಂಡು ಒಟ್ಟಿಗೆ ಬರೀವಿ.”

“ನೀವಂತೂ ನಿಮಗೊಬ್ಬ ತಮ್ಮ ಇದ್ದಾನೆ ಅನ್ನುವುದನ್ನೇ ಮರೆತಿದ್ದೀರಿ” ಆದಿತ್ಯ ಹೇಳಿದ.

ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ:  http://surahonne.com/?p=39968

(ಮುಂದುವರಿಯುವುದು)
ಸಿ.ಎನ್. ಮುಕ್ತಾ, ಮೈಸೂರು.

8 Comments on “ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 6

  1. ಸಂಬಂಧಗಳು ಚಿಕ್ಕ ಪುಟ್ಟ ಮನಸ್ತಾಪಗಳಿಗೆ ಒಡೆದು ಛಿದ್ರವಾಗುತ್ತಿದ್ದಾರೆ ಯಾರಿಗೆ ಯಾರೂ ಇರುತ್ತಿರಲಿಲ್ಲ. ಕೆಲವೊಂದು ಕೆಟ್ಟ ಗಳಿಗೆ ನಮ್ಮವರನ್ನು ನಮ್ಮಿಂದ ದೂರ ಮಾಡುತ್ತದೆ, ಹಾಗಂದ ಮಾತ್ರಕ್ಕೆ ಎಲ್ಲ ಮುಗಿಯಿತು ಅಂತ ಅರ್ಥವಲ್ಲ. ಸಮಯ ಸರಿದಂತೆ ಮಾಡಿದ ತಪ್ಪುಗಳು ನಿಧಾನವಾಗಿ ಅರ್ಥವಾಗಿ ಮತ್ತೆ ಮನಸುಗಳು ಬೆಸೆಯುತ್ತವೆ.

  2. ಕಾದಂಬರಿ ಕುತೂಹಲ ಮೂಡಿಸುತ್ತಾ ಸಾಗುತ್ತಿದೆ.

  3. ಅಭಿಪ್ರಾಯ ತಿಳಿಸಿರುವ ನಯನ, ಹೇಮಮಾಲಾ ಹಾಗೂ ನಾಗರತ್ನ ಇವರಿಗೆ ನಮನಗಳು

  4. ಗಾಯತ್ರಿ ಯವರಿಗೆಗೆ ಅಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು

  5. ಸರಳ ಕಥಾವಸ್ತುವನ್ನೊಳಗೊಂಡ ಸಾಮಾಜಿಕ ಕಾದಂಬರಿ ಕುತೂಹಲಕಾರಿಯಾಗಿದೆ… ಧನ್ಯವಾದಗಳು ಮುಕ್ತಾ ಮೇಡಂ.

  6. ಮಕ್ಕಳ ಮುಂದಿನ ನಡೆಯ ಬಗ್ಗೆ ಅತ್ಯಂತ ಕುತೂಹಲ ಉಂಟಾಗಿ ಮುಂದಿನ ಕಂತಿಗೆ ಕಾಯುವಂತೆ ಆಗಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *