ಗೋಪುರಗಳ ನಾಡಿನಲ್ಲಿ…ಹೆಜ್ಜೆ 16
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಪಳನಿ – ಸುಬ್ರಹ್ಮಣ್ಯ ಕ್ಷೇತ್ರ
ಜಂಬುಕೇಶ್ವರನ ದರ್ಶನ ಮಾಡಿ, ಮಧ್ಯಾಹ್ನದ ಊಟ ಪೂರೈಸಿ, ಅಂದಾಜು 170 ಕಿಮೀ ಪ್ರಯಾಣಿಸಿ ‘ಪಳನಿ’ ತಲಪಿದೆವು. ಮುರುಗನ್, ಕಾರ್ತಿಕೇಯ, ಷಣ್ಮುಖ ಮೊದಲಾದ ಹೆಸರುಗಳಿಂದ ಅರ್ಚಿಸಿಕೊಳ್ಳುವ ಸುಬ್ರಹ್ಮಣ್ಯ ಇಲ್ಲಿಯ ಮುಖ್ಯ ದೇವರು, ‘ಪಳನಿ’ ಎಂದರೆ ಫಲವನ್ನು ಕೊಡುವವನು ಅಂತ ಅರ್ಥ. ಕೈಲಾಸದಲ್ಲಿದ್ದ ಸುಬ್ರಹ್ಮಣ್ಯ , ದಕ್ಷಿಣಭಾರತದಲ್ಲಿರುವ ಪಳನಿಗೆ ಬಂದ ಕಾರಣ ಏನು ಎಂಬುದರ ಹಿಂದೆ ಸ್ವಾರಸ್ಯಕರವಾದ ಕತೆಯೊಂದಿದೆ.
ಒಮ್ಮೆ ನಾರದರು ಒಮ್ಮೆ ಕೈಲಾಸಕ್ಕೆ ಹೋಗಿ ಜ್ಞಾನಾಮೃತವನ್ನು ಹೊಂದಿರುವ ಫಲವನ್ನು ಶಿವನಿಗೆ ಅರ್ಪಿಸಿದರು. ಶಿವನು ತನ್ನ ಇಬ್ಬರು ಮಕ್ಕಳಾದ ಗಣೇಶ ಮತ್ತು ಸುಬ್ರಹ್ಮಣ್ಯ ಇಬ್ಬರಿಗೂ ಹಣ್ಣನ್ನು ಹಂಚಬೇಕೆನ್ನುವಷ್ಟರಲ್ಲಿ, ದೇವಲೋಕದ ಕಲಹಪ್ರಿಯ ಖ್ಯಾತಿಯ ನಾರದರು ಸುಮ್ಮನಿರಲಾರದೆ, ‘ನಿಮ್ಮ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ಹಣ್ಣು ಕೊಡಿ’ ಎಂದು ಶಿವನಿಗೆ ಸಲಹೆ ಕೊಟ್ಟನು. ಅಂತೆಯೇ ಶಿವನು, ”ಯಾರು ಮೊದಲು ಪ್ರಪಂಚವನ್ನು ಮೂರು ಬಾರಿ ಸುತ್ತುತ್ತಾರೆಯೋ ಅವರಿಗೆಈ ಫಲವನ್ನು ಕೊಡಲಾಗುವುದು’ ಎಂದು ಘೋಷಿಸಿದನು. ಕೊಂಚ ಆತುರಗಾರನಾದ ಸುಬ್ರಹ್ಮಣ್ಯ ಕೂಡಲೇ ತನ್ನ ವಾಹನವಾದ ಸವಿಲನ್ನೇರಿ ಭೂಮಿಗೆ ಪ್ರದಕ್ಷಿಣೆ ಹಾಕಲು ಹೊರಟ.
ಆದರೆ ಚತುರ ಗಣಪತಿಯು, ತನ್ನ ಮೂಷಿಕವನ್ನೇರಿ ಪ್ರಪಂಚ ಸುತ್ತಲಾಗುವುದೇ? ಏನು ಮಾಡಲಿ ಎಂದು ಆಲೋಚಿಸಿ, ತನ್ನ ತಂದೆ-ತಾಯಿಗಳಾದ ಶಿವ ಮತ್ತು ಪಾರ್ವತಿಯರಿಗಿಂತ ಮೀರಿದ ಜಗತ್ತೇನಿದೆ ಅಂದು ಅವರಿಗೆ ಪ್ರದಕ್ಷಿಣೆ ಹಾಕಿದರೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಫಲ ಪ್ರಾಪ್ತಿ ಎಂದು ವ್ಯಾಖ್ಯಾನಿಸಿ, ಶಿವನಿಗೂ ಮನವರಿಕೆ ಮಾಡಿದೆ, ಪಂದ್ಯದಲ್ಲಿ ತಾನೇ ಗೆದ್ದ. ಸುಬ್ರಹ್ಮಣ್ಯ ತನ್ನ ಶಕ್ತಿಯಿಂದ ಪ್ರಪಂಚ ಪ್ರದಕ್ಷಿಣೆ ಮುಗಿಸಿ ಬಂದನಾದರೂ, ಗಣಪತಿ ತನ್ನ ಯುಕ್ತಿಯಿಂದ ಶಿವನ ಮನಸ್ಸನ್ನು ಗೆದ್ದು, ಫಲವನ್ನು ತನ್ನದಾಗಿಸಿದ್ದ. ದು:ಖಿತನಾದ ಸುಬ್ರಹ್ಮಣ್ಯ ಕೈಲಾಸವನ್ನು ತೊರೆದು, ಸನ್ಯಾಸಿಯಂತೆ, ಪಳನಿ ಬೆಟ್ಟಗಳಲ್ಲಿ ವಾಸಮಾಡಲು ಬಂದನಂತೆ. ಆಮೇಲೆ ಇದು ‘ಮುರುಗನ್’ ಕ್ಷೇತ್ರವಾಗಿ ಪ್ರಖ್ಯಾತವಾಯಿತು.
ಪಳನಿಯಲ್ಲಿರುವ ಸುಬ್ರಹ್ಮಣ್ಯನ ವಿಗ್ರಹವನ್ನು ಸಿದ್ಧಋಷಿ ಭೋಗ ಮುನಿ ಅವರು ಒಂಬತ್ತು ಬಂಡೆಗಳ ಪಾಷಾಣ ಅಥವಾ ನವವಿಷಗಳ ಸಮ್ಮಿಲನದಿಂದ ರಚಿಸಿದರು. ಕಾಲಾನಂತರದಲ್ಲಿ ಇದು ನಿರ್ಲಕ್ಷ್ಯಕೊಳ್ಳಗಾಯಿತು. 7 ನೇ ಶತಮಾನದಲ್ಲಿ, ಚೇರ ರಾಜವಂಶದ ರಾಜ ಪೆರುಮಾಳ್ ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ, ಬೆಟ್ಟದಲ್ಲಿ ಆಶ್ರಯ ಪಡೆಯಬೇಕಾಯಿತು. ಆಗ ಸುಬ್ರಹ್ಮಣ್ಯನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು ದೇವಾಲಯವನ್ನು ನಿರ್ಮಿಸೆಂದು ತಿಳಿಸಿದನು. ಆ ಪ್ರಕಾರವಾಗಿ, ರಾಜನು ದೇವಾಲಯವನ್ನು ನಿರ್ಮಿಸಿ, ಪೂಜಾಕೈಂಕರ್ಯದ ವ್ಯವಸ್ಥೆ ಮಾಡಿದನು.
ಈಗ ನಾವು ಕಾಣುವ ದೇವಾಲಯದಲ್ಲಿ ಚೇರ ಹಾಗೂ ಪಾಂಡ್ಯ ರಾಜರುಗಳ ಕಾಲದ ವಾಸ್ತುಶಿಲ್ಪವಿದೆ. ಗರ್ಭಗುಡಿಯ ಮೇಲೆ ಚಿನ್ನದ ಗೋಪುರವಿದೆ. ಪಳನಿ ಬೆಟ್ಟದ ತುದಿ ತಲಪಲು ಸುಮಾರು 600 ಮೆಟ್ಟಿಲುಗಳನ್ನೇರಿ ಹೋಗಬಹುದು. ಯಾತ್ರಿಕರ ಅನುಕೂಲಕ್ಕಾಗಿ ಕೇಬಲ್ ಕಾರ್ ವ್ಯವಸ್ಥೆ ಇದೆ. ಬಂಡೆಯ ಮೇಲೆ ಹಾಕಲಾದ ಸಣ್ಣ ರೈಲುಹಳಿಗಳ ಮೇಲೆ ಅತಿ ನಿಧಾನವಾಗಿ ಚಲಿಸುವ, ರೋಪ್ ವೈರ್ ನಿಂದ ಎಳೆಯಲ್ಪಡುವ ‘ವಿಂಚ್’ ಎಂಬ ಪುಟಾಣಿ ರೈಲಿನಂತಹ ವ್ಯವಸ್ಥೆಯೂ ಇದೆ. ನಾವು ಹೋಗಿದ್ದ ದಿನ ಬಹಳಷ್ಟು ಜನಸಂದಣಿ ಇದ್ದ ಕಾರಣ, ಟ್ರಾವೆಲ್೪ಯುನವರು ”ವಿಂಚ್ ಗೆ ಟಿಕೆಟ್ ಸಿಗುವುದು ತಡವಾಗಬಹುದು, ಕೇಬಲ್ ಕಾರ್ ದುರಸ್ತಿಯಲ್ಲಿದೆ, ಹಾಗಾಗಿ, ಸಾಧ್ಯವಿದ್ದವರು ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯುವುದು ಉತ್ತಮ, ಆಗದೆ ಇರುವವರನ್ನು ವಿಂಚ್ ಮೂಲಕ ಕಳುಹಿಸುತ್ತೇವೆ” ಅಂದರು.
ನಾವು ಹೆಚ್ಚಿನವರು ಮೆಟ್ಟಿಲುಗಳನ್ನೇರಿ ಹೋಗಿ, ದೇವರ ದರ್ಶನ ಮಾಡಿ, ಸಿಹಿ ಪ್ರಸಾದ ಸ್ವೀಕರಿಸಿ ಬರುವಾಗ ‘ವಿಂಚ್’ ಎಂಬ ವ್ಯವಸ್ಥೆಯಲ್ಲಿ ಬಂದೆವು. ಎತ್ತರದ ಮಹಾಬಂಡೆಯಿಂದ ನಿಧಾನವಾಗಿ ಇಳಿಯುವ ‘ವಿಂಚ್’ ನ ಅಕ್ಕ-ಪಕ್ಕ ನೋಡುವಾಗ, ಅಕಸ್ಮಾತ್ ಇದನ್ನು ಎಳೆಯುವ ಕಬ್ಬಿಣದ ಹಗ್ಗ ತುಂಡಾದರೆ, ನಮ್ಮ ಕತೆ ಏನಪ್ಪಾ ಅಂತ ತುಸು ಭಯವಾಗುತ್ತಿತ್ತು. ತಂಡದಲ್ಲಿ ನಡೆಯಲು ಕಷ್ಟವಾದವರು ‘ವಿಂಚ್’ ಮೂಲಕ ಹೋಗಿ, ದರ್ಶನ ಮುಗಿಸಿ ಬರುವಾಗ ಸ್ವಲ್ಪ ಇನ್ನೆರಡು ಗಂಟೆ ತಡವಾಗಿತ್ತು.
ಎಲ್ಲರೂ ಬಂದ ಮೇಲೆ, ನಮ್ಮ ಪ್ರಯಾಣ ತಿರುಚಿನಾಪಳ್ಳಿ ಅಥವಾ ‘ತ್ರಿಚ್ಚಿ’ಯತ್ತ ಮುಂದುವರಿಯಿತು.
ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ: https://www.surahonne.com/?p=39770
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ ಓದಿಸಿಕೊಂಡು ಹೋಯಿತು ಹಾಗೂ ಅದರಲ್ಲಿ ನ ಕ್ಷೇತ್ರದ ಹಿನ್ನಲೆಯ ಕತೆ ನನಗೆ ಬಹಳ ಇಷ್ಟ ವಾಯಿತು ಗೆಳತಿ ..ಧನ್ಯವಾದಗಳು
ನಾನು ಹಲವು ವರ್ಷಗಳ ಹಿಂದೆ ಪೀಳಿಗೆ ಹೋಗಿದ್ದು ನೆನಪಾಯಿತು. ಸಂಪೂರ್ಣ ಮಾಹಿತಿ ನೀಡಿರುವಿರಿ
ಪ್ರಸಾದ್ ಶಾಲೆಯ ಸಹೋದ್ಯೋಗಿ ಗಳಿಗೆ ಹಂಚಲು ತೆಗೆದುಕೊಂಡು ಹೋದಾಗ ಸಕ್ಕರೆ ಖಾಯಿಲೆ ಇದ್ದ ಗೆಳತಿ ಎಲ್ಲರಿಗೂ ರುಚಿ ತೋರಿಸಿ ಡಬ್ಬಿ ಖಾಲಿ ಮಾಡಿದಾಗ ನಾನು
ರಾತ್ತಿ ನಿದ್ದೆ ಮಾಡದೆ ಕಳೆದಿದ್ದೆ. ಮರುದಿನ ಅವರು ಶಾಲೆಗೆಬಂದಾಗ ಸಮಾಧಾನ ದ ನಿಟ್ಟುಸಿರು
ಬಿಟ್ಟಿದ್ದೆ..
ಬಹಳ ಬಹಳ ಚಂದ. ಗಣಪತಿ ಯುಕ್ತಿಯಿಂದ ಶಿವನ ಮನಸ್ಸನ್ನು ಗೆದ್ದ ಕಥೆ ಗೊತ್ತಿದ್ದದ್ದೆ ಆದರೂ ನಿಮ್ಮ ಬರಹದ ಶೈಲಿಯಲ್ಲಿ ಓದುವ ಖುಷಿಯೇ ಬೇರೆ.
ಚಂದದ ಪ್ರವಾಸ ಕಥನ
ಪಳನಿ ಕ್ಷೇತ್ರದ ಚಂದದ ವಿವರಣೆಯೊಂದಿಗೆ ಈ ಕಂತೂ ಮುದ ನೀಡಿತು.
ಪಳನಿ ಕ್ಷೇತ್ರದ ಚಂದದ ವಿವರಣೆ! ಖುಷಿ ಕೊಡುತ್ತದೆ