ಬಜಾಜ್ ಸ್ಕೂಟರ್ ಯುಗಾಂತ್ಯ !

Share Button

ಹಮಾರಾ ಬಜಾಜ್ !

ಈ ಹೆಸರು ಕೇಳಿದೊಡನೆ 1960,70 ಮತ್ತು ಎಂಬತ್ತರ ದಶಕದ ಜನರ ಕಿವಿ ನಿಮಿರುತ್ತದೆ. ಭಾರತ ಉದಾರೀಕರಣ ನೀತಿಯನ್ನು ಅಪ್ಪಿಕೊಳ್ಳುವ ಮುನ್ನ ದೇಶಾದ್ಯಂತ ಮಧ್ಯಮವರ್ಗದ ಪ್ರತಿಷ್ಠೆಯ ಸಂಕೇತವೇ ಆಗಿತ್ತು ಬಜಾಜ್ ಸ್ಕೂಟರ್ ! ವರದಕ್ಷಿಣೆಯಾಗಿ ಸ್ಕೂಟರ್ ಕೊಟ್ಟರೆ ಅದರ ಗಮ್ಮತ್ತೇ ಬೇರೆ. ಇಡೀ ಸಂಸಾರ ಸ್ಕೂಟರ್ ಮೇಲೆ ತವರಿಗೆ ಜುಮ್ಮಂತ ಸವಾರಿ ಮಾಡುತ್ತಿದ್ದ ಕಾಲವದು. ಅಂತಹ ಸಂಚಲನ ಸೃಷ್ಟಿಸಿದ್ದ ಬಜಾಜ್ ಸ್ಕೂಟರ್‌ನ ಗತ ವೈಭವದತ್ತ ಒಂದು ನೋಟ..
ಪುಣೆಯಲ್ಲಿ 1945 ರ ನವೆಂಬರ್ 29 ರಂದು ಅಸ್ತಿತ್ವಕ್ಕೆ ಬಂದ ಬಚಾರ್ಜ್‌ಟ್ರೇಡಿಂಗ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಮುಂದೆ ಬಜಾಜ್ ಆಟೊ ಎಂದು ಹೆಸರಾಯಿತು. ಆರಂಭದಲ್ಲಿ ಕಂಪನಿ ದ್ವಿಚಕ್ರ ವಾಹನಗಳನ್ನು ಆಮದು ಮಾಡಿ ದೇಶದಲ್ಲಿ ಮಾರಾಟ ಮಾಡುತ್ತಿತ್ತು. 1959 ರಲ್ಲಿ ದ್ವಿ ಚಕ್ರ ಹಾಗೂ ತ್ರಿ ಚಕ್ರ ವಾಹನಗಳ ಉತ್ಪಾದನೆಗೆ ಭಾರತ ಸರಕಾರದಿಂದ ಕಂಪನಿ ಪರವಾನಗಿ ಪಡೆಯಿತು.

Bajaj chetakಆರಂಭದಲ್ಲಿ ಬಜಾಜ್ ಕಂಪನಿಯು ಇಟಲಿ ಮೂಲದ ಪ್ಯಾಶಿಯೋ ಕಂಪನಿಯ ವೆಸ್ಪಾ ಸ್ಕೂಟರ್‌ನ್ನು ಆಮದು ಮಾಡಿಕೊಳ್ಳುತ್ತಿತ್ತು. 1960ರಲ್ಲಿ ಈ ಕಂಪನಿಯ ಸಹಭಾಗಿತ್ವದಲ್ಲಿ ಬಜಾಜ್ ಅದೇ ಗುಣಮಟ್ಟ ಮತ್ತು ತಾಂತ್ರಿಕತೆಯೊಂದಿಗೆ ಸ್ಕೂಟರನ್ನು ಉತ್ಪಾದಿಸಲಾರಂಭಿಸಿತು. ಆದರೆ ಇಂದಿರಾ ಗಾಂಧಿಯವರ ಖಾಸಗೀಕರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ಯಾಶಿಯೊ ಜತೆಗಿನ ಒಪ್ಪಂದ ನವೀಕರಣವಾಗಲಿಲ್ಲ. ಸಹಭಾಗಿತ್ವ ಮುಗಿದ ನಂತರ ಬಜಾಜ್ ತನ್ನದೇ ಬ್ರ್ಯಾಂಡ್, ವಿನ್ಯಾಸದಲ್ಲಿ 1972 ರಲ್ಲಿ ಸ್ಕೂಟರ್ ಉತ್ಪಾದನೆ ಆರಂಭಿಸಿತು. ಅದರ ಹೆಸರೇ ಚೇತಕ್ !

ಬಜಾಜ್‌ನ ಸ್ವದೇಶಿ ನಿರ್ಮಿತ ಸ್ಕೂಟರ್‌ಗೆ ಆ ಚೇತಕ್ ಹೆಸರು ಬರಲು ಕಾರಣ ಮೇವಾಡದ ರಜಪೂತ ದೊರೆ, ಕದನಕಲಿ ರಾಣಾ ಪ್ರತಾಪ್ ಸಿಂಗ್‌ನ ನೆಚ್ಚಿನ ಕುದುರೆ!  ಸಮರಭೂಮಿಯಲ್ಲಿ ಒಡೆಯನಿಗೆ ಸದಾ ನೆರವಾಗುತ್ತಿದ್ದ ಕುದುರೆ ಅತ್ಯಂತ ಚುರುಕು ಮತ್ತು ಬಲಶಾಲಿಯಾಗಿತ್ತು. ಆರಂಭದಲ್ಲಿ 2 ಸ್ಟ್ರೋಕ್, ನಂತರ 4 ಸ್ಟ್ರೋಕ್ ಅಂತ ಸ್ಕೂಟರ್‌ನ ಸಾಮರ್ಥ್ಯ, ವಿನ್ಯಾಸ ಬದಲಾಯಿತು. 1980ರಲ್ಲಿ ಅಮೆರಿಕದಲ್ಲಿ 4 ಸ್ಟ್ರೋಕ್ ಸ್ಕೂಟರನ್ನು ಮಾರಲು ಕಂಪನಿ ಯತ್ನಿಸಿದರೂ ಯಶ ಕಾಣಲಿಲ್ಲ.

60ರ ದಶಕದಿಂದ ತೀರಾ 2000ರ ತನಕ ಕೂಡ ಬಜಾಜ್ ಸ್ಕೂಟರ್‌ನಲ್ಲಿ ನಾನಾ ವಿಧಗಳು ಮಾರುಕಟ್ಟೆಗೆ ಬಂದಿವೆ. ಬಜಾಜ್ ಚೇತಕ್‌ನಿಂದ (1972) ಮೊದಲ್ಗೊಂಡು ಬಜಾಜ್ ಸೂಪರ್ (1976), ಬಜಾಜ್ ಸನ್ನಿ (1990), 2000ದಲ್ಲಿ ಬಜಾಜ್ ಸಫಾರಿ ಎಂಬ ಗೇರ್ ರಹಿತ ಸ್ಕೂಟರ್ ಸೇರಿದಂತೆ ನಾನಾ ಬಗೆಯ, ಬಣ್ಣ ಹಾಗೂ ಸಾಮರ್ಥ್ಯದ ಸ್ಕೂಟರ್ ಮಾರುಕಟ್ಟೆಗೆ ಬಂದಿತ್ತು.

1970ರಲ್ಲಿ ಬಜಾಜ್ ಕಂಪನಿ 1 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. 1986ರಲ್ಲಿ 5 ಲಕ್ಷ ವಾಹನಗಳನ್ನು ಮಾರಾಟ ಮಾಡುವಷ್ಟರ ಮಟ್ಟಿಗೆ ಬೆಳೆದಿತ್ತು. 1995ರಲ್ಲಿ 10 ಲಕ್ಷ ವಾಹನಗಳನ್ನು ಮಾರಾಟ ಮಾಡಿತು. ಸ್ಕೂಟರ್‌ನ ಮಾರಾಟಕ್ಕೆ ‘ ಹಮಾರಾ ಬಜಾಜ್ ’ ಎಂಬ ಪ್ರಚಾರಾಂದೋಲನವನ್ನು ಕಂಪನಿ ನಡೆಸಿತ್ತು.

Bajaj super‘ನಾನು 15 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಜಾಜ್ ಚೇತಕ್ ಸ್ಕೂಟರ್ ಖರೀದಿಸಿದೆ. ಅಂದಿನಿಂದ ಇವತ್ತಿನ ತನಕ ಅದು ನನ್ನ ಸಂಗಾತಿಯಾಗಿದೆ. ಇದುವರೆಗೆ ನಾನೇ ಅದಕ್ಕೆ ಸಣ್ಣ ಪುಟ್ಟ ತೊಂದರೆ ಕೊಟ್ಟಿರಬಹುದೇ ವಿನಾ, ಅದರಿಂದ ನನಗೇ ಏನೂ ತೊಂದರೆಯಾಗಿಲ್ಲ..’ ಹಮಾರಾ ಬಜಾಜ್ ಸ್ಕೂಟರ್‌ನ ಮಹಿಮೆ ಬಗ್ಗೆ ಹೀಗೆನ್ನುತ್ತಾರೆ ನಾಗಲಿಂಗ ಬಡಿಗೇರ್. ಅವರು 1994ರಲ್ಲಿ ಸ್ಕೂಟರ್‌ನ್ನು 22,500 ರೂ.ಗೆ ಖರೀದಿಸಿದ್ದರು. ಆವತ್ತಿನ ದಿನಗಳಲ್ಲಿ 53 ಕಿ.ಮೀ ಮೈಲೇಜ್ ಕೊಡುತ್ತಿತ್ತು. ಈಗಲೂ 40ಕ್ಕೆ ಕೊರತೆ ಇಲ್ಲ ಎನ್ನುತ್ತಾರೆ ಬಡಿಗೇರ್. ನಾನು, ಪತ್ನಿ ಮತ್ತು ಇಬ್ಬರು ಮಕ್ಕಳು ಬಜಾಜ್ ಸ್ಕೂಟರ್‌ನಲ್ಲಿ ಓಡಾಡಿರುವುದಕ್ಕೆ ಲೆಕ್ಕ ಸಿಗುವುದಿಲ್ಲ. ಈಗಲೂ ಯಾರಿಗೂ ಸ್ಕೂಟರನ್ನು ಮಾರಲು ನಾನು ಸಿದ್ಧನಿಲ್ಲ. ಅಷ್ಟೊಂದು ಭಾವನಾತ್ಮಕ ಸಂಬಂಧ ಅದರ ಮೇಲಿದೆ. ಇನ್ನು ಮುಂದೆ ಸ್ಕೂಟರ್ ಉತ್ಪಾದನೆ ನಿಂತು ಹೋದರೆ ಬಿಡಿ ಭಾಗವಾದರೂ ಸಿಗುತ್ತಾ ? ಎನ್ನುತ್ತಾರೆ ಬಡಿಗೇರ್.

Baja sunnyಆದರೆ 90ರ ದಶಕದ ನಂತರ ಉದಾರೀಕರಣ ನೀತಿಯಿಂದ ಆರ್ಥಿಕತೆ ಸುಧಾರಣೆಯತ್ತ ತಿರುಗಿತು. ಹೀಗಾಗಿ ಗ್ರಾಹಕರ ಆಯ್ಕೆಯಲ್ಲಿ ಮಹತ್ತರ ಬದಲಾವಣೆಯಾಯಿತು. ಸಾಲದ್ದಕ್ಕೆ ಬೈಕ್‌ಗಳು ಜನಪ್ರಿಯವಾಗತೊಡಗಿತು. ಸ್ಕೂಟರ್‌ನತ್ತ ಜನರ ಆಸಕ್ತಿ ಕಡಿಮೆಯಾಯಿತು. ಹೀರೊ ಹೊಂಡಾ, ಟಿವಿಎಸ್, ಯಮಾಹಾ ಮುಂತಾದ ಕಂಪನಿಗಳು ಮಾರುಕಟ್ಟೆಗೆ ದಾಂಗುಡಿಯಿಟ್ಟವು. ಕೊನೆಯ ದಿನಗಳಲ್ಲಿ ಬಜಾಜ್ ಕಂಪನಿ ತಿಂಗಳಿಗೆ ಅಂದಾಜು 1 ಸಾವಿರ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿತ್ತು. ಅದೂ ಬಹುತೇಕ ರಫ್ತಿಗೆ ಸೀಮಿತವಾಗಿತ್ತು. ಹೀಗಾಗಿ ಇನ್ನು ಸ್ಕೂಟರ್ ಉತ್ಪಾದನೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಕಂಪನಿ ಭಾವಿಸಿತು. ಮುಂಬರುವ ಮಾರ್ಚ್‌ನಿಂದ ಸ್ಕೂಟರ್ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಬಜಾಜ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ. 2006ರಲ್ಲಿ ಬಜಾಜ್ ಚೇತಕ್ ಸ್ಕೂಟರ್ ಉತ್ಪಾದನೆ ನಿಂತು ಹೋಗಿತ್ತು.

 

 

– ಕೇಶವ ಪ್ರಸಾದ ಬಿ. ಕಿದೂರು

2 Responses

  1. Karunakara Kanchukar says:

    ನನ್ನ ನೆಚ್ಚಿನ ಬಜಾಜ್ ಚೇತಕ್…

  2. Krishnaveni Kidoor says:

    ಉತ್ತಮ ಮಾಹಿತಿ ಕೊಟ್ಟಿದ್ದೀರಿ .ಬೆಲೆಬಾಳುವ ಬರಹ .

Leave a Reply to Krishnaveni Kidoor Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: