ಪುಟ್ಟ ಗುಬ್ಬಿಯ ನೆನೆಯುತ್ತಾ….
ಪ್ರಕೃತಿಯಲ್ಲಿ ಪಕ್ಷಿಗಳಿಗೂ ಪಾಲಿದೆ. ಗುಬ್ಬಿಗಳು ನಮ್ಮೊಟ್ಟಿಗೆ ಬದುಕುತ್ತಾ, ತಮ್ಮ ಜೀವನವನ್ನು ಸಾಗಿಸುತ್ತಾ ಬಂದಿವೆ. ನಾವು ಸ್ನೇಹಿತರಂತೆ ಗುಬ್ಬಿಗಳ ಜೊತೆಯಲ್ಲೇ ಬದುಕಿದ್ದೇವೆ. ಅದು ನಮ್ಮ ಬಾಲ್ಯದ ಕಾಲದಲ್ಲಿ ಮಾತ್ರ!. ಆದರೆ ಈಗ ನಮ್ಮ ಮಕ್ಕಳ ಬಾಲ್ಯದಲ್ಲಿ ಗುಬ್ಬಿ ಮಾಯವಾಗುತ್ತಾ ಬರುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಗುಬ್ಬಿಗಳನ್ನು ಹುಡುಕುವಂತಾಗಿದೆ.ಒಂದಲ್ಲ ಒಂದು ರೀತಿಯ ಕಾರಣದಿಂದಾಗಿ ಗುಬ್ಬಿಗಳ ಸಂತತಿಯು ಕೂಡ ಈಗ ಕಡಿಮೆಯಾಗುತ್ತಾ ಬಂದಿದೆ. ಇದು ಬೇಜಾರಿನ ವಿಷಯ. ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಂಡು ಬರುತ್ತಿದ್ದ ಗುಬ್ಬಿಗಳು ಈಗ ನಮ್ಮ ಕಣ್ಣೆದುರು ಕಾಣಿಸುತ್ತಿಲ್ಲ.
ದೇಶದಾದ್ಯಂತ ಗುಬ್ಬಿಗಳ ಅಸ್ತಿತ್ವಕ್ಕೆ ಕುತ್ತು ಬಂದಿರುವ ಪ್ರಸ್ತುತ ಸಂದರ್ಭದಲ್ಲಿ ಅವುಗಳ ಉಳಿವಿಗಾಗಿ ಕರೆ ನೀಡುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್-20 ಅನ್ನು “ವಿಶ್ವ ಗುಬ್ಬಿಗಳ ದಿನವನ್ನಾಗಿ” ಆಚರಿಸುತ್ತಾ ಬರಲಾಗಿದೆ. ಭಾರತದ ನೇಚರ್ ಫಾರೆವರ್ ಸೊಸೈಟಿ ಎಕೋ-ಸಿಸ್ ಆಕ್ಷನ್ ಫೌಂಡೇಶನ್ ಸೇರಿದಂತೆ ಜಗತ್ತಿನ ಹಲವು ಪರಿಸರ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ದಿನವನ್ನು ಘೋಷಣೆ ಮಾಡಲಾಯಿತು. ಮೊದಲ ವಿಶ್ವ ಗುಬ್ಬಿಗಳ ದಿನವನ್ನಾಗಿ 2010ರಲ್ಲಿ ಆಯೋಜನೆ ಮಾಡಲಾಯಿತು.ಅಲ್ಲಿನಿಂದ ಇಂದಿನವರೆಗೂ ಕೂಡ “ವಿಶ್ವಗುಬ್ಬಿಗಳ ದಿನ”ವನ್ನು ಆಚರಿಸುತ್ತಾ ಬರಲಾಗಿದೆ. ವಿಶ್ವಗುಬ್ಬಿಗಳ ಈ ದಿನದಂದು ನಾವು ಸಂತಸ ಪಡುವುದರ ಬದಲು ಅವುಗಳ ಅವನತಿಯ ವಿಷಯವನ್ನು ಗಮನಿಸಿದರೆ ದುಃಖವಾಗುತ್ತದೆ. ಆದರೆ ಈ ದಿನ ಒಂದು ರೀತಿಯಲ್ಲಿ ಜಾಗೃತ ದಿನವನ್ನಾಗಿ ಆಚರಿಸಲಾಗುತ್ತದೆ.ಏಕೆಂದರೆ ಪಕ್ಷಿ-ಪ್ರಿಯರು ಈ ಸಂತತಿ ನಾಶವಾಗುತ್ತಿರುವುದರ ಬಗ್ಗೆ ಹಲವು ಚರ್ಚೆಗಳನ್ನು ಮಾಡಲಾಗುತ್ತದೆ.
ಗುಬ್ಬಚ್ಚಿಯ ಬಗ್ಗೆ ಎಷ್ಟು ಹೇಳಿದರೂ ಕೂಡ ಸಾಲದು. ಅದು ನಮ್ಮೊಟ್ಟಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿತ್ತು. ಈಗಲೂ ಕೂಡ ಅಲ್ಲೊಂದು ಇಲ್ಲೊಂದು ಗುಬ್ಬಚ್ಚಿಗಳು ನಮಗೆ ದರ್ಶನ ನೀಡುತ್ತವೆ. ಚಿಂವ್ ಚಿಂವ್ ಎನ್ನುತ್ತಾ ನಮ್ಮ ಮನೆಯ ಸುತ್ತಮುತ್ತ ಯಾವುದೇ ರೀತಿಯ ಎದರಿಕೆಯಿಲ್ಲದೆ ಸರಾಗವಾಗಿ ಹಾರುತ್ತ ಬರುತ್ತಿತ್ತು.ತನ್ನ ಕೊಕ್ಕನ್ನು ಆಡಿಸಿಕೊಂಡು ಎಲ್ಲಿ ತನಗೆ ಅಹಾರ ಸಿಗುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ನಾವು ಪಕ್ಕದಲ್ಲಿ ಕುಳಿತಿದ್ದರು ಕೂಡ ಬಂದು ಕಾಳ ಕಡ್ಡಿ ತಿಂದು ಹೋಗುತ್ತಿತ್ತು. ಅದರಲ್ಲೂ ಒಕ್ಕಣೆಯ ಸಂದರ್ಭದಲ್ಲಿ ಇದಕ್ಕೆ ಹಬ್ಬದ ವಾತಾವರಣ ಉಂಟಾಗುತ್ತಿತ್ತು. ಸ-ಕುಟುಂಬ ಸಮೇತ ಬಂದು ತೃಪ್ತಿಯಾಗಿ ಕಾಳುಗಳನ್ನು ತಿಂದು ಬರ್ ಎಂದು ಹಾರಿ ಹೋಗುತ್ತಿತ್ತು.ಮನೆಯ ಹೊರಗಡೆ ತಂತಿಯ ಮೇಲೆ ಸಾಲಾಗಿ ಕುಳಿತುಕೊಳ್ಳುತ್ತಿದ್ದವು. ಜೊತೆಗೆ ಹೆಂಚಿನ ಮನೆಯಾಗಿದ್ದರಿಂದ ಅಲ್ಲಿ ಪಕ್ಕದಲ್ಲಿಯೇ ಭತ್ತದ ಹುಲ್ಲು ಸಿಗುತ್ತಿತ್ತು, ಅದರಿಂದಾಗಿ ಚಿಕ್ಕದಾಗಿ ಮನೆ ಕಟ್ಟುತ್ತಿತ್ತು. ಅಲ್ಲಿ ಮೊಟ್ಟೆ ಮಾಡಿ ಜೋಡಿ ಗುಬ್ಬಚ್ಚಿಗಳು ಸಂಭ್ರಮ ಪಡುತ್ತಿದ್ದವು.
ಈಗ ಗ್ರಾಮೀಣ ಪ್ರದೇಶದಲ್ಲೂ ಕೂಡ ಹಂಚಿನ ಮನೆಗಳು ತಕ್ಕಮಟ್ಟಿಗೆ ಇವೆ. ಆದರೆ ನಗರ ಪ್ರದೇಶಗಳಲ್ಲಿ ಹೆಂಚಿನ ಮನೆಗಳು ಇಲ್ಲವೇ ಇಲ್ಲ. ಎಲ್ಲವೂ ಕಾಂಕ್ರೀಟ್ ಮಾಯವಾಗಿದೆ. ಈ ಒಂದು ಅಂಶವು ಕೂಡ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗುವುದಕ್ಕೆ ಕಾರಣವಾಗಿದೆ. ಅಲ್ಲದೆ ಮೊಬೈಲ್ ಟವರ್ ಗಳಿಂದಲೂ ಕೂಡ ಗುಬ್ಬಚ್ಚಿ ಸಂತತಿ ನಾಶವಾಗಿದೆ. ಗುಬ್ಬಚ್ಚಿ ಮನೆಯ ಹೊರಗಡೆ ಅಲ್ಲದೆ, ಮನೆಯ ಒಳಗಡೆಗೂ ಕೂಡ ರಾಜ ರೋಷವಾಗಿ ಬರುತ್ತಿತ್ತು. ಮನೆಯ ಒಳಗಡೆ ಊಟ ಮಾಡುತ್ತಿದ್ದಾಗ ನಮ್ಮ ಪಕ್ಕದಲ್ಲಿ ಬಂದು ಅನ್ನವನ್ನು ತಿಂದು ಹೋಗುತ್ತಿತ್ತು. ಮಕ್ಕಳಿಗೆ ಸಂಭ್ರಮ. ಅದರ ಜೊತೆ ಆಟವಾಡುತ್ತಾ ಅದನ್ನು ಓಡಿಸುತ್ತಿದ್ದರು.
ಗುಬ್ಬಚ್ಚಿ ಗೂಡಿನಲ್ಲಿ ಚಿಕ್ಕ ಚಿಕ್ಕ ಮರಿಗಳು ಇರುತ್ತಿದ್ದವು. ಅನೇಕ ಬಾರಿ ಅವುಗಳ ಮೊಟ್ಟೆಗಳನ್ನು ಕೂಡ ನಾವು ನೋಡುತ್ತಿದ್ದೆವು.ನಮಗೆ ಗುಬ್ಬಚ್ಚಿಯ ಹೆಸರು ಬಂದಾಗ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಗುಬ್ಬಚ್ಚಿಗಳ ಸೂರ್ಯೋದಯವಾಗುವಾಗ ನಂತರ ಸಂಜೆ ಗೋಧೂಳಿ ಸಮಯದಲ್ಲಿ ಗುಂಪು ಗುಂಪಾಗಿ ಬರುತ್ತಿದ್ದವು. ಸಾಮಾನ್ಯವಾಗಿ ಗುಬ್ಬಚ್ಚಿ ಮಾಂಸಾಹಾರಿ ಪ್ರಾಣಿ. ಆದರೆ ಅದು ನಮ್ಮ ಮಾನವನ ಜೊತೆಯಲ್ಲಿ ಬದುಕುವುದನ್ನು ಕಲಿತುಕೊಂಡಾಗ ಜೊತೆಗೆ ತನ್ನ ಆಹಾರ ಪದ್ಧತಿಯನ್ನೇ ಬದಲಿಸಿಕೊಂಡಿತು. ಇದರಿಂದಾಗಿ ಹೆಚ್ಚಾಗಿ ರೈತರು ಬೆಳೆಯುವ ವಿಧವಿಧದ ಕಾಳು ಕಡ್ಡಿಗಳನ್ನು ಹೆಚ್ಚಾಗಿ ತಿನ್ನುತ್ತಾ ಬಂದಿತು. ಇದರಿಂದಾಗಿ ಒಂದು ರೀತಿಯಲ್ಲಿ ಸರ್ವಭಕ್ಷಕ ಪಕ್ಷಿ ಎಂದು ಕೂಡ ಹೆಸರು ಪಡೆದಿದೆ. 800ಕ್ಕೂ ಹೆಚ್ಚಿನ ಆಹಾರ ಪದಾರ್ಥಗಳನ್ನು ಇದು ತಿನ್ನುತ್ತದೆ ಎಂಬುದು ಅಚ್ಚರಿಯ ವಿಷಯ. ಮಾನವನಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡುವುದಿಲ್ಲ ಇದು ಮಾನವನಿಗೆ ಮಿತ್ರನಾಗಿದೆ. ಜನವಸತಿ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿದೆ. ಒಕ್ಕಲುತನಕ್ಕೆ ಹೆಸರಾದ ರೈತನ ಮಿತ್ರ ಎಂದು ಕೂಡ ಹಲವು ಇದನ್ನು ಕರೆಯುತ್ತಾರೆ. ಹಲವು ಬಾರಿ ಹಸಿರು ಆಹಾರ ಪದಾರ್ಥಗಳಲ್ಲಿ ಬರುವ ಹುಳ ಹುಪ್ಪಡಿಗಳನ್ನು ಕೂಡ ತಿನ್ನುತ್ತದೆ.
ಗುಬ್ಬಚ್ಚಿಯು ಪ್ರಪಂಚದ ಎಲ್ಲಾ ಕಡೆ ಕಂಡುಬರುವ ಏಕೈಕ ಪಕ್ಷಿ ಎಂಬ ಹೆಸರನ್ನು ಪಡೆದಿದೆ. ಮುಷ್ಟಿ ಗಾತ್ರದ, ಬೂದು ಮಿಶ್ರಿತ ಕಂದು ಬಣ್ಣದ ಪುಟ್ಟ ಗುಬ್ಬಚ್ಚಿಗಳು ಅಂದಾಜು 5 ಇಂಚು ಉದ್ದ, 25 ಗ್ರಾಂ ತೂಕ ಇದೆ. ಡೆನ್ಮಾರ್ಕ್ ನಲ್ಲಿ ಕಾಲಿಗೆ ರಿಂಗ್ ಹಾಕಿ ಗುರುತಿಸಲಾದ ಗುಬ್ಬಚ್ಚಿ 19 ವರ್ಷ 9 ತಿಂಗಳು ಕಾಲ ಬದುಕಿರುವುದು ಒಂದು ದಾಖಲೆಯಾಗಿದೆ. ತಾಯಿ ಗುಬ್ಬಿ ನಾಲ್ಕಾರು ಮೊಟ್ಟೆಗಳನ್ನು ಇಟ್ಟು ರಾತ್ರಿ ಪೂರ್ತಿ ಅವುಗಳ ಮೇಲೆ ಕುಳಿತು ಕಾವ ಕೊಡುತ್ತದೆ. ಹತ್ತರಿಂದ ಹದಿನೈದು ದಿನಗಳಲ್ಲಿ ಮೊಟ್ಟೆ ಚಿಪ್ಪನ್ನು ಭೇದಿಸಿ ಮರಿಗಳು ಹೊರ ಬರುತ್ತವೆ. ತಂದೆ- ತಾಯಿ ಗುಬ್ಬಚ್ಚಿಗಳು ಮುಂಜಾನೆಯಿಂದ ಸಾಯಂಕಾಲದವರೆಗೂ ನಿರಂತರವಾಗಿ ಮರಿಗಳಿಗೆ ಪೌಷ್ಟಿಕಾಂಶ ತುಂಬಿದ ಹಸಿರು ಕಾಳುಗಳನ್ನು ತಿನಿಸುತ್ತಾ ಬರುತ್ತವೆ. ಎರಡು ವಾರಗಳ ನಂತರ ಮರಿಗಳಿಗೆ ರೆಕ್ಕ ಪುಕ್ಕ ಬಂದು ಹೊರಬರುತ್ತವೆ. ಇಂತಹ ಸಂದರ್ಭದಲ್ಲಿ ಚಿಕ್ಕ ಗುಬ್ಬಚ್ಚಿ ಮರಿಗಳು ಗೂಡಿನಿಂದ ಹೊರಬರುವ ಸಂದರ್ಭದಲ್ಲಿ ಕೆಳಗಡೆ ಬಿದ್ದು ಬೆಕ್ಕು, ನಾಯಿ, ಹದ್ದು, ಕಾಗೆಗಳಿಗೆ ಆಹಾರವಾಗಿ ನಾಶವಾಗಿರುವ ಅನೇಕ ಸಂದರ್ಭಗಳು ಇವೆ.
ಕಾಂಕ್ರೀಟ್ ಮನೆಗಳಲ್ಲೂ ಕೂಡ ಗುಬ್ಬಚ್ಚಿ ಗೂಡು ಕಟ್ಟುವ ವಾತಾವರಣವನ್ನು ನಿರ್ಮಿಸಬೇಕು. ಅವುಗಳಿಗೆ ಆಹಾರ, ನೀರು ಯಥೇಚ್ಛವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಜೊತೆಗೆ ನಮ್ಮ ಮನೆಯ ಮುಂದೆ ಸಾಕಷ್ಟು ಮರಗಳನ್ನು ಬೆಳೆಸಿ, ಅಲ್ಲಿಯೂ ಕೂಡ ಗೂಡು ಕಟ್ಟಲು ವಾತಾವರಣ ನಿರ್ಮಿಸಬೇಕು. ಜೊತೆಗೆ ಮಕ್ಕಳಲ್ಲೂ ಕೂಡ ಆಸಕ್ತಿ ಮೂಡಿಸಬೇಕು. ಒಟ್ಟಾರೆಯಾಗಿ “ವಿಶ್ವ ಗುಬ್ಬಿಗಳ ದಿನಾಚರಣೆ”ಯಂದು ಅವುಗಳ ಉಳಿವಿಕೆಗಾಗಿ ನಾವೆಲ್ಲರೂ ಹೋರಾಡಬೇಕು.
–ಕಾಳಿಹುಂಡಿ ಶಿವಕುಮಾರ್, ಮೈಸೂರು.
ಒಳ್ಳೆಯ ಲೇಖನ. ಎಲ್ಲರ ಸಹಕಾರದಿಂದ ಗುಬ್ಬಿ ಉಳಿಸಬೇಕಾದ ಅವಶ್ಯಕತೆ ಇದೆ
ವಿಶ್ವ ಗುಬ್ಬಿ ದಿನಾಚರಣೆ ಯಂದು ..ಆ ಪುಟ್ಟ ಜೀವಿಯ ಬಗ್ಗೆ..ಬರೆದ ಲೇಖನ ಮುದ ತಂದು ನಮ್ಮ ಬಾಲ್ಯದ ದಿನ ನೆನಪಿಗೆ ಬಂತು ಸಾರ್ ಅದಕ್ಕಾಗಿ ವಂದನೆಗಳು…
ಪುಟ್ಟ ಹಕ್ಕಿ, ಗುಬ್ಬಿಗಳ ಕುರಿತಾದ ಕಳಕಳಿಯ ಲೇಖನ ಎಚ್ಚರಿಕೆಯ ಗಂಟೆಯಂತೆ ಸೊಗಸಾಗಿ ಮೂಡಿ ಬಂದಿದೆ.
ಜಾಗೃತಿ ಮೂಡಿಸುವ ಸುಂದರ ಹಾಗೂ ಮಾಹಿತಿ ಪೂರ್ಣ ಲೇಖನ
ನಿಸರ್ಗದ ಸಕಲ ಜೀವಿಗಳೊಡನೆ ಜೀವಿಸುವುದನ್ನು ಮರೆತ ಮಾನವನಿಂದಲೇ ಪುಟ್ಟ ಗುಬ್ಬಚ್ಚಿ ಕೂಡಾ ದೂರವಾಗುತ್ತಿದೆ. ಸಾಂದರ್ಭಿಕ ಲೇಖನ ಚೆನ್ನಾಗಿ ಮೂಡಿಬಂದಿದೆ.
ಪ್ರಸ್ತುತ ಬರಹ