ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 4
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ರಮ್ಯ ಇಫ್ ಯು ಡೋಂಟ್ ಮೈಂಡ್ ಒಂದು ಕಪ್ ಸ್ಟಾಂಗ್ ಕಾಫಿ ಸಿಗುತ್ತದಾ?”
“ಈಗೆಂತಹ ಕಾಫಿ? ಊಟದ ಸಮಯವಾಯ್ತು……
“ಊಟ ಮಾಡುವಾಗ ನೀರಿನ ಬದಲು ಕಾಫಿ ಕೊಟ್ಟರೆ ಕುಡಿಯುವವನು ನಾನು. ಕಾಫಿ ಕೊಡಿ. ಆಮೇಲೆ ಊಟ ಮಾಡ್ತೀನಿ.”
ರಮ್ಯಾ ಕಾಫಿ ತಂದಳು.
“ನಮ್ಮನೆ ಕಥೆ ಕೇಳಿದ್ರೆ ಏನು ಹೇಳ್ತಿಯೋ ಏನೋ?”
ನಿಮ್ಮನೆ ಕಥೇನಾ?”
”ಹುಂ, ನಮ್ಮ ತಂದೆ ಹೊಳೆ ನರಸೀಪುರದವರು. ಹೈಸ್ಕೂಲು ಮೇಷ್ಟ್ರಾಗಿದ್ದರು. ನಮ್ಮ ತಾತ ಶಾನುಭೋಗರು. ತೋಟ, ಗದ್ದೆ ಇತ್ತು. ನಮ್ಲಂದೆ ಅವರಿಗೆ ಒಬ್ಬನೇ ಮಗ, ನಮ್ಮ ತಾತ ಮಗನಿಗೆ ಕೃಷಿಯಲ್ಲಿ ಆಸಕ್ತಿ ಇಲ್ಲಾಂತ ತಿಳಿದ ಮೇಲೆ ಭೂಮಿ ಮಾರಿಬಿಟ್ಟು ಮೈಸೂರಿನ ಒಂಟಿಕೊಪ್ಪಲಿನಲ್ಲಿ ಒಂದು ದೊಡ್ಡ ಮನೆ ತೆಗೆದುಕೊಟ್ರಂತೆ.”
“ನೀನು ನನ್ನ ಹಾಗೆ ಹಳ್ಳಿಯಲ್ಲಿ ಕೊಳೆಯಬೇಡ. ಮೈಸೂರಲ್ಲಿ ಇದ್ದುಕೊಂಡು ಮಕ್ಕಳನ್ನು ಚೆನ್ನಾಗಿ ಓದಿಸು” ಅಂದರಂತೆ.
“ನೀವು ಮೈಸೂರಿನಲ್ಲಿದ್ರಾ?”
“ಹುಂ. ನಮ್ಮ ತಂದೆ ಮೈಸೂರಿಗೆ ವರ್ಗ ಮಾಡಿಸಿಕೊಂಡ್ರು, ನಾವು ನಾಲ್ಕು ಜನ ಗಂಡು ಮಕ್ಕಳೂ ಮೈಸೂರಿನಲ್ಲೇ ಓದಿದ್ದು, ನನ್ನ ದೊಡ್ಡ ಅಣ್ಣ ಶಂಕರ ಡಾಕ್ಟರ್. ಎರಡನೆಯ ಅಣ್ಣ ರಾಜೇಶ ಇಂಜಿನಿಯರ್, ನಾನು ಇಂಜಿನಿಯರ್ ನನ್ನ ತಮ್ಮ ಶ್ರೀನಿಧಿ ಲಾಯರ್.”
“ವೆರಿಗುಡ್.”
“ನನಗಿನ್ನೂ ನೆನಪಿದೆ. ನಾವು ಮೊದಲು ಮೈಸೂರಿನಲ್ಲಿ ದೊಡ್ಡ ಮನೆಯಲ್ಲಿದ್ದೆವು. ಆ ಮನೆಗೆ ದೊಡ್ಡ ಕಾಂಪೌಂಡ್ ಇತ್ತು. ನಾವು ಅಲ್ಲಿ ಆಟ ಆಡ್ತಿದ್ದೆವು. ನಮ್ಮನೆಯಲ್ಲಿ ದೊಡ್ಡ ಹಾಲ್ ಇತ್ತು. ಐದು ರೂಮುಗಳಿದ್ದವು. ದೊಡ್ಡ ಅಣ್ಣ ಶಂಕರ ದಾವಣಗೆರೆಗೆ ಎಂ.ಬಿ.ಬಿ.ಎಸ್ ಓದಲು ಹೋದ. ನನ್ನ ಎರಡನೇ ಅಣ್ಣ ರಾಜೇಶ ಸೂರತ್ಕಲ್‌ನಲ್ಲೇ ಓದಬೇಕೂಂತ ಹಠ ಹಿಡಿದ. ಅವರಿಬ್ಬರೂ ಹೊರಗೆ ಹೋದಮೇಲೆ ನಮ್ಮ ತಂದೆ ನಾವಿದ್ದ ಮನೆಯನ್ನು ಒಂದು ಕಂಪನಿಗೆ ಬಾಡಿಗೆಗೆ ಕೊಟ್ಟು ಕೃಷ್ಣಮೂರ್ತಿಪುರಂನಲ್ಲಿ ಒಂದು ಸಣ್ಣ ಮನೆಗೆ ಶಿಫ್ಟ್ ಆದರು’’.
‘ಆಮೇಲೆ?’
“ನಾನು ಪಿ.ಯು.ಸಿ. ಮುಗಿಸಿ ಎನ್.ಐ.ಇ. ಕಾಲೇಜಿಗೆ ಸೇರಿಕೊಂಡೆ. ನಮಗೆ ಆಗ ಏನೂ ಗೊತ್ತಾಗ್ತಿರಲಿಲ್ಲ. ಅಪ್ಪ ಟ್ಯುಟೋರಿಯಲ್ಸ್ ಗೂ ಪಾಠ ಮಾಡಕ್ಕೆ ಹೋಗ್ತಿದ್ರು.
“ನಿಮ್ಮಣ್ಣ ಫಾರಿನ್‌ನಲ್ಲಿದ್ರಲ್ವಾ?”
‘ಹುಂ. ಎಂ.ಡಿ. ಮಾಡಕ್ಕೆ ಫಾರಿನ್ ಹೋದವರು, ಅಲ್ಲೇ ಸೆಟ್ ಆದರು. ಇವರಂತೆ ಎಂ.ಡಿ. ಮಾಡಲು ಬಂದಿದ್ದ ಡಾ|| ರಚನಾ ಕೈ ಹಿಡಿದರು. ನನ್ನ ಎರಡನೇ ಅಣ್ಣ ಸೂರತ್ಕಲ್‌ನಲ್ಲಿ ಓದುವಾಗಲೇ ಬಾಂಬೆ ಹುಡುಗಿಯೊಬ್ಬಳನ್ನು ಲವ್ ಮಾಡಿದ. ಅಪ್ಪ- ಅಮ್ಮನ ಒಪ್ಪಿಗೆ ಪಡೆದು ಮದುವೆಯಾದ. ನಾನು ಓದು ಮುಗಿಸಿ ಬೆಂಗಳೂರಲ್ಲಿ ಸೆಟ್ಲ್ ಆದೆ. ನನ್ನ ತಮ್ಮ ಲಾ ನಲ್ಲಿ ಪಿ.ಎಚ್.ಡಿ. ಮಾಡಿ, ಧಾರವಾಡದಲ್ಲಿ ಸೆಟ್ಲ್ ಆದ. ನಾನು, ನನ್ನ ತಮ್ಮ , ಅಮ್ಮ-ಅಪ್ಪನ್ನ ನಮ್ಮ ಜೊತೆ ಬರಲು ಒತ್ತಾಯ ಮಾಡಿದ್ವಿ, ಆದರೆ ಅವರು ಮೈಸೂರು ಬಿಟ್ಟು ಬರಲು ಒಪ್ಪಲಿಲ್ಲ…
“ಮೈಸೂರಿನಲ್ಲಿರುವ ತುಂಬಾ ಜನ ಹಾಗೆ.”
“ನಾವು ಸ್ವಾರ್ಥಿಗಳಾಗಿ ಬಿಟ್ಟೆವು. ನಮ್ಮ ನಮ್ಮ ಸಂಸಾರದಲ್ಲಿ ಮುಳುಗಿಹೋದ್ವಿ, ನಾನೇ ಅಪ್ಪನಿಗೆ ಹತ್ತಿರವಿದ್ದವನು. ಅವರ ಬೇಕು ಬೇಡ ಗಮನಿಸಬೇಕಿತ್ತು. ವರ್ಷದಲ್ಲಿ ಒಂದು ವಾರವಾದರೂ ಅವರ ಜೊತೆ ಕಳೆಯಬಹುದಿತ್ತು. ವರ್ಷಕ್ಕೆ ಒಮ್ಮೆಯಾದರೂ ಬೆಂಗಳೂರಿಗೆ ಅವರನ್ನು ಕರೆತಂದು ಚೆಕಪ್ ಮಾಡಿಸಬಹುದಿತ್ತು. ನಾನೂ ಗಮನಕೊಡಲಿಲ್ಲ. ನನ್ನ ತಮ್ಮ ಶ್ರೀನಿಧಿ ಕೂಡ ಗಮನ ಕೊಡಲಿಲ್ಲ. ನಮ್ಮ ಅಣ್ಣಂದಿರಂತೂ ಬಿಡು. ಬೇರೆ ದೇಶಗಳಲ್ಲಿದ್ರು. ಅಪರೂಪಕ್ಕೆ ಮೈಸೂರಿಗೆ ಬಂದರೂ ಹೋಟೆಲ್‌ನಲ್ಲಿ ಇಳಿದುಕೊಂಡು ತಂದೆ-ತಾಯಿಯನ್ನು ನೋಡಲು ಬರಿದ್ರು.”
“ಈಗೇನಾಯ್ತು? ನೀನೆ ಒತ್ತಾಯ ಮಾಡಿ ಕರೆದುಕೊಂಡು ಬಾ.”
“ನಮ್ಮ ತಂದೆ-ತಾಯಿ ವೃದ್ಧಾಶ್ರಮ ಸೇರಿಕೊಂಡಿದ್ದಾರೆ. ಯಾಕೆ ಹೀಗೆ ಮಾಡಿದ್ರಿ ಅಂತ ಕೇಳಿದ್ದಕ್ಕೆ ‘ನನಗೆ 85 ವರ್ಷ, ನಿಮ್ಮ ಅಮ್ಮನಿಗೆ 80 ವರ್ಷ. ಯಾವ ಧೈರ್ಯದಿಂದ ಇಬ್ಬರೇ ಇರೋದು ಹೇಳು. ಆಶ್ರಮದಲ್ಲಾದರೆ ಸಹಾಯಕ್ಕೆ ಜನ ಇದ್ದಾರೆ’ ಅಂದು ಬಿಟ್ರು. ನನಗೆ ಆಗ ಏನೂ ಅನ್ನಿಸಲಿಲ್ಲ.
ನಿಜ ಹೇಳಲಾ ಆದಿ. ‘ ನಮ್ತಂದೆ -ತಾಯಿ ಬೆಂಗಳೂರಿಗೆ ಬರದೇ ಇರೋದೇ ಒಳ್ಳೆಯದು’ ಅನ್ನಿಸ್ತು.
“ಯಾಕೆ?”
ನಮ್ಮನೆಯಲ್ಲಿ ನಮ್ಮ ಜೊತೆ ನನ್ನ ಅತ್ತೆ-ಮಾವ ಇದ್ದಾರೆ. ‘ನಮ್ತಂದೆ -ತಾಯಿ ಬಂದಿದ್ದಿದ್ರೆ , ನಮ್ಮತ್ತೆ-ಮಾವನ್ನ ಎಲ್ಲಿಗೆ ಕಳಿಸೋದು?’ ಅನ್ನಿಸ್ತು.
“ಏನಾದ್ರೂ ಏರ್ಪಾಡು ಮಾಡಬಹುದಿತ್ತು.”
ಆಗ ಹೊಳೆಯಲಿಲ್ಲ ಕಣೋ. ಹೇಗೂ ಅವರೇ ಬಯಸಿ ವೃದ್ಧಾಶ್ರಮ ಸೇರಿದ್ದಾರೆ. ಅಲ್ಲಿ ಅನುಕೂಲವಿಲ್ಲದಿದ್ರೆ ಹೋಗ್ತಿದ್ರಾ?” ಅಂದ್ಕೊಂಡು ಸುಮ್ಮನಿದ್ದೆ.
“ನೀನು ನಿಮ್ತಂದೆ -ತಾಯಿನ್ನ ವೃದ್ಧಾಶ್ರಮಕ್ಕೆ ಹೋಗಿ ನೋಡ್ತಿರಲಿಲ್ವಾ?”
“ಹೋಗ್ತಿದ್ದೆ. ಇಂತಹ ದಿನ ಬರ್‍ತೀನೀಂತ ಫೋನ್ ಮಾಡಿರ್‍ತಿದ್ದೆ. ಏನಾದರೂ ತಿಂಡಿ, ಹಾರ್ಲಿಕ್ಸ್ ಬಾಟಲ್, ಹಣ್ಣುಗಳನ್ನು ತೆಗೆದುಕೊಂಡು ಹೋಗ್ತಿದ್ದೆ. ಅವರು ವಿಸಿಟರ್ ರೂಂನಲ್ಲಿ ಕಾಯ್ದಿರಿದ್ರು.
“ಏನಾದ್ರೂ ಬೇಕಿದ್ರೆ ಹೇಳಿ ” ಅಂತಿದ್ದೆ. ಅವರು ಹೇಳ್ತಿರಲಿಲ್ಲ. ನಮ್ಮ ಭೇಟಿ ತುಂಬಾ ಯಾಂತ್ರಿಕವಾಗಿರ್‍ತಿತ್ತೂಂತ ಈಗ ಅನ್ನಿಸ್ತಿದೆ.”
“ಈಗಲೂ ಕಾಲ ಮಿಂಚಿಲ್ಲ. ಇಷ್ಟು ಕೊರಗುವುದರ ಬದಲು ಅವರನ್ನು ಕರೆದುಕೊಂಡು ಬಾ.”
”ನಮ್ಮಣ್ಣನಿಗೆ ಜ್ಞಾನೋದಯವಾಗಿ ಅವನು ಆ ಕೆಲಸ ಮಾಡಲು ಹೊರಟಿದ್ದಾನೆ. ನಮಗೂ ಅವನ ಮಾತು ಕೇಳಿದ ಮೇಲೆ ನಮ್ಮ ತಪ್ಪು ಗೊತ್ತಾಗಿದೆ.”
“ಏಳಿ ಊಟ ಮಾಡಿ, ನಿಮ್ಮ ಮಾತು ಮುಂದುವರೆಸಿ ಗಂಟೆ ಎರಡೂವರೆಯಾಗ್ತಿದೆ”.
ರಮ್ಯಾ ಅನ್ನ, ಕೂಟು, ತಿಳಿಸಾರು ಮಾಡಿ ಹಪ್ಪಳ, ಸಂಡಿಗೆ ಕರೆದಿದ್ದಳು.
”ರಮ್ಯಾ ಊಟ ತುಂಬಾ ಚೆನ್ನಾಗಿದೆ. ಅಮ್ಮನ ಕೈರುಚಿ ನೆನಪಾಗ್ತಿದೆ.”
”ನಾನು ಅಡಿಗೆ ಕಲಿತಿದ್ದೇ ನಮ್ಮತ್ತೆಯವರಿಂದ. ಅವರು ತುಂಬಾ ಚೆನ್ನಾಗಿ ಅಡಿಗೆ ಮಾಡ್ತಾರೆ.’
ಊಟದ ನಂತರ ಮೂವರೂ ಹಾಲ್‌ನಲ್ಲಿ ಸೇರಿದರು.
”ನಮ್ಮ ದೊಡ್ಡಣ್ಣ ಇದ್ದಿದ್ದು ನ್ಯೂಯಾರ್ಕ್‌ನಲ್ಲಿ, ಅವನ ಹೆಂಡತೀನೂ ಡಾಕ್ಟರ್. ಅವನಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ಡಾಕ್ಟರ್.”
”ಡಾಕ್ಟರ್ ಫ್ಯಾಮಿಲಿ ಅನ್ನು.”
“ಹಾಗೇ ಅಂದ್ರೆ, ನಮ್ಮಣ್ಣನಿಗೆ ಮೊದಲಿಂದಲೂ ಮೈಸೂರಿನ ಬಗ್ಗೆ ತುಂಬಾ ಮೋಹ. ಮೊದಲ ಮಗನ ತಲೆಯಲ್ಲಿ ಮೈಸೂರಿನ ಬಗ್ಗೆ ತನ್ನ ಕನಸಿನ ಬಗ್ಗೆ ತುಂಬಿದ್ದ.
“ನೀನು ಡಾಕ್ಟರ್ ಆಗತ್ತಲೂ ಮೈಸೂರಿಗೆ ವಾಪಸ್ಸು ಹೋಗೋಣ. ಅಲ್ಲಿ ನರ್ಸಿಂಗ್ ಹೋಂ ಶುರುಮಾಡೋಣ” ಅಂತಿದ್ದಂತೆ. ಅವನ ದೊಡ್ಡ ಮಗ ಅಭಿಷೇಕ್ ಒಪ್ಪಿದ್ದ. ನಮ್ಮಣ್ಣ 5 ವರ್ಷದ ಹಿಂದೆ ಮೈಸೂರಿಗೆ ಬಂದು ಹಿನಕಲ್ ಹತ್ತಿರ ಹತ್ತು ಎಕರೆ ಭೂಮಿ ತೆಗೆದುಕೊಂಡು ದೊಡ್ಡ ನರ್ಸಿಂಗ್ ಹೋಂ ಕಟ್ಟಿಸಿದ್ದ. ಅದರ ಪ್ರಾರಂಭೋತ್ಸವಕ್ಕೆ ನೀನು ಬರಲೇಬೇಕು” ಅಂತ ಅಭಿಷೇಕ್ ಗೆ ಹೇಳಿದ್ದ. ಈ ಐದು ವರ್ಷದ ಅವಧಿಯಲ್ಲಿ ಮಣಿಪಾಲ್ ಮೆಡಿಕಲ್ ಕಾಲೇಜು ಪ್ರೊಫೆಸರ್ ಮಗಳು ಡಾ|| ಶಿಖಾ ಜೊತೆ ಮಗನ ಮದುವೆ ಮಾಡಿದ್ದ”
”ನಿಮ್ಮಣ್ಣಂಗೆ ತುಂಬಾ ದೂರಾಲೋಚನೆ”.
ಮಗ, ಸೊಸೆ ನರ್ಸಿಂಗ್ ಹೋಂ ಉದ್ಘಾಟನೆಗೆ ಬರ್‍ತಾರೆ ಅಂದುಕೊಂಡು ಡೇಟ್ ಫಿಕ್ಸ್ ಮಾಡಲು ಮಗನಿಗೆ ಕಾಲ್ ಮಾಡಿದ.
“ಡ್ಯಾಡ್, ಶಿಖಾಗೆ ಇಂಡಿಯಾಗೆ ವಾಪಸ್ಸು ಬರಲು ಇಷ್ಟವಿಲ್ಲವಂತೆ. ನಾನು ಅಮೇರಿಕಾದಲ್ಲಿರವವನು ಎಂದು ನನ್ನನ್ನು ಮದುವೆಯಾದಳಂತೆ. ಅವಳು ಅಮೇರಿಕಾ ಬಿಟ್ಟು ಬರಲ್ಲಾಂತಿದ್ದಾಳೆ. ನಾನೇನು ಮಾಡಲಿ ನೀವೇ ಹೇಳಿ” ಅಂದನಂತೆ ಅಭಿಷೇಕ್.
“ಛೆ…..”
“ನೀವು ನೋಡಿದ ಹುಡುಗಿಯನ್ನೇ ನಾನು ಮದುವೆಯಾಗಿದ್ದೇನೆ. ನಾನು ಮೈಸೂರಿಗೆ ಬಂದರೆ ನಮ್ಮ ಸಂಸಾರ ಹಾಳಾಗಿ ಹೋಗುತ್ತದೆ. ಏನ್ಮಾಡಲಿ ನೀವೇ ಹೇಳಿ” ಅಂದನಂತೆ,
ಅಣ್ಣನಿಗೆ ಶಾಕ್ ಆಯಿತಂತೆ. ಮಕ್ಕಳು ನಮ್ಮ ಮಾತು ಕೇಳಲಿಲ್ಲಾಂತ ಅಣ್ಣ ಹುಚ್ಚನಂತಾಗಿದ್ದ……..”
“ಆಮೇಲೇನಾಯ್ತು?”
ಅಣ್ಣನಿಗೆ ಆಗ ತನ್ನ ತಂದೆ-ತಾಯಿಯ ತ್ಯಾಗ ನೆನಪಾಯಿತಂತೆ. ಆ ದೊಡ್ಡ ಮನೆ ನೆನಪಾಯಿತಂತೆ. ಅದನ್ನು ಹುಡುಕಿದನಂತೆ. ಆ ಜಾಗದಲ್ಲಿ ಖಾಲಿ ಸೈಟು ಇತ್ತಂತೆ. ಒಬ್ಬ ರಾಜಕಾರಣಿ ಆ ಸೈಟು ಕೊಂಡಿದ್ದರಂತೆ. ಆತ ಆ ಸೈಟು ಕೊಡಲು ಒಪ್ಪಿದರಂತೆ. ಪೇಪರ್ ನೋಡುವಾಗ, ಒಂದು ಫೈನಾನ್ಸ್ ಕಾರ್ಪೋರೇಷನ್‌ನಿಂದ ಅವರು ಸೈಟು ಕೊಂಡಿದ್ದು ತಿಳಿಯಿತಂತೆ.”
“ಯಾವ ಫೈನಾನ್ಸ್ ಕಾರ್ಪೋರೇಷನ್ ಅದು?”
‘ಕಾಮಧೇನು ಫೈನಾನ್ಸ್ ಕಾರ್ಪೋರೇಷನ್, ನಮ್ಮ ತಂದೆ ಮನೆಯನ್ನು 20 ವರ್ಷ ಒತ್ತೆ ಇಟ್ಟಿದ್ದರಂತೆ. ಆ ಹಣದಿಂದಲೇ ನಮ್ಮನ್ನೆಲ್ಲಾ ಓದಿಸಿದ್ರಂತೆ. ಆದರೆ ಮನೆ ಬಿಡಿಸಿಕೊಳ್ಳಲಾಗದೆ
ಆ ಸಂಸ್ಥೆಗೇ ಮಾರಿದ್ದರಂತೆ. ಈ ವಿಚಾರ ತಿಳಿದು ಅಣ್ಣನಿಗೆ ತುಂಬಾ…… ಬೇಜಾರಾಯ್ತಂತೆ”.
“ನಿಮ್ಮ ತಂದೆ-ತಾಯಿ ಇದ್ದ ಸಣ್ಣ ಮನೆ?”
“ಅದು ಬಾಡಿಗೆ ಮನೆಯಂತೆ. ಅಣ್ಣ, ನಮ್ಮಂದೆ-ತಾಯಿಯಿದ್ದ ವೃದ್ಧಾಶ್ರಮಕ್ಕೆ ಹೋದನಂತೆ. ಆಗ ನಮ್ಮ ಅತ್ತಿಗೆ ಮಗ-ಸೊಸೇನ್ನ ಕರ್‍ಕೊಂಡು ಬರ್‍ತೀನೀಂತ ಅಮೇರಿಕಾಕ್ಕೆ ಹೋಗಿದ್ರಂತೆ. ಅಣ್ಣ ವೃದ್ಧಾಶ್ರಮಕ್ಕೆ ಹೋದಾಗ ಬೇರೆ ಬೇರೆ ವೃದ್ಧರ ಪರಿಚಯವಾಯಿತಂತೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅಣ್ಣ ನಮ್ಮನ್ನೆಲ್ಲಾ ಮೈಸೂರಿಗೆ ಕರೆಸಿಕೊಂಡು ಈ ವಿಚಾರ ಹೇಳಿದ”.
“ನಾನು ದೂರದಲ್ಲಿದ್ದೆ. ನಂಗೆ ಇಲ್ಲಿ ವಿಚಾರ ಗೊತ್ತಿರಲಿಲ್ಲ. ನೀವೆಲ್ಲಾ ಏನು ಮಾಡ್ತಿದ್ರಿ? ಅಮ್ಮ-ಅಪ್ಪ ಯಾಕೆ ವೃದ್ಧಾಶ್ರಮ ಸೇರಲು ಬಿಟ್ರಿ? ನಿಮಗೆ ಹಣಕಾಸಿನ ಕೊರತೆಯಿದ್ದರೆ ನನ್ನ
ಹತ್ತಿರ ಹೇಳಬೇಕಾಗಿತ್ತು” ಅಂದ. ನಮಗೂ ನಮ್ಮ ತಪ್ಪಿನ ಅರಿವಾಗಿತ್ತು. ನಾವೆಲ್ಲಾ ಸೇರಿ ಅಮ್ಮ-ಅಪ್ಪನ್ನ ಕರೆಯೋಣಾಂತ ಹೋದ್ವಿ”
“ಅವರು ಒಪ್ಪಿದ್ರಾ?”
‘ಆ ದಿನ ಅವರು ತುಂಬಾ ದುಃಖದಲ್ಲಿದ್ದರು. ನಿಜ ಹೇಳಬೇಕೂಂದರೆ ಇಡಿಯ ಆಶ್ರಮ ಆದಿನ ಅಳ್ತಾ ಇತ್ತು. ಅಡಿಗೆಯವರು ಕೊನೆಗೆ ಆಶ್ರಮಕ್ಕೆ ಹಾಲು, ಹಣ್ಣು, ಸಾಮಾನು, ಸರಬರಾಜು ಮಾಡುವವರು ಎಲ್ಲಾ ಅಳ್ತಿದ್ರು”.
”ಯಾಕೆ?”
”ನಮ್ಮ ತಂದೆ ಇರುವ ಆಶ್ರಮದಲ್ಲಿ ಶಂಕರ್‌ನಾರಾಯಣ್ ಅನ್ನುವ ರಿಟೈರ್ ಜಡ್ಜ್ ಇದ್ದಾರೆ. ಆತನಿಗೆ ಹೆಂಡತಿ ಇಲ್ಲ. ಒಬ್ಬನೇ ಮಗ ಅಮೇರಿಕಾದಲ್ಲಿದ್ದ. ಈತನಿಗೆ ೬೪-೬೫ ವರ್ಷವಿರಬಹುದು, ಮಗ-ಸೊಸೆ, ಮೊಮ್ಮಗ ಇದ್ರು, ಮಗ ತಂದೆಗೆ ಆಶ್ರಮದಲ್ಲಿ ಒಂದು ಕಾಟೇಜ್ ತೆಗೆದುಕೊಂಡು, ಅಡಿಗೆಯವರು, ಒಬ್ಬ ಕೇರ್‌ಟೇಕರ್‌ನ ಇಟ್ಟಿದ್ದನಂತೆ. ತಂದೆಯ ಆಕೌಂಟ್‌ನಲ್ಲಿ ಹತ್ತು ಲಕ್ಷ ಹಾಕಿ, ಪ್ರತಿ ತಿಂಗಳೂ ವೃದ್ಧಾಶ್ರಮಕ್ಕೆ ದುಡ್ಡು ಬರುವಂತೆ ಮಾಡಿ, ಅವರು ಆ ಹಣದಲ್ಲಿ ಅಡಿಗೆಯವರಿಗೆ, ಕೇರ್ ಟೇಕರ್‌ಗೆ ಹಣ ಬರುವಂತೆ ಮಾಡಿದ್ನಂತೆ.
ಪ್ರತಿ ಭಾನುವಾರ ತಂದೆ ಜೊತೆ ಮಾತಾಡ್ತಿದ್ದನಂತೆ. ನಾವು ಹೋದ ದಿನ ಶಂಕರ್‌ನಾರಾಯಣ್ ಮಗನ ಫ್ಯಾಮಿಲಿ ಆಕ್ಸಿಡೆಂಟ್‌ನಲ್ಲಿ ಹೋಗಿಬಿಟ್ಟಿತ್ತು. ”
” ಓ ಮೈ ಗಾಡ್ “
‘ಶಂಕರ್ ನಾರಾಯಣ್‌ಗೆ ಈ ವಿಚಾರ ಹೇಗೆ ಹೇಳುವುದೂಂತ ಒದ್ದಾಡ್ತಿದ್ರು”.
“ಎಂತಹ ಬ್ಯಾಡ್‌ಲಕ್ ಅಲ್ವಾ?”
“ನಾವು ಏನೂ ಮಾತನಾಡದೆ ವಾಪಸ್ಸು ಬಂದೆವು. ಆಮೇಲೆ ಅಣ್ಣ ಅಗಾಗ್ಗೆ ವೃದ್ಧಾಶ್ರಮಕ್ಕೆ ಭೇಟಿಕೊಟ್ಟೂ ಅಮ್ಮ-ಅಪ್ಪನ್ನ ಮನೆಗೆ ಬರಲು ಒಪ್ಪಿಸಿದ್ದಾನೆ. ಮೊದಲು ನಮ್ಮ ಮನೆ ಇದ್ದ ಸ್ಥಳದಲ್ಲೇ ನಾಲ್ಕು ಬೆಡ್‌ರೂಂ ಮನೆ ಕಟ್ಟಿಸಿದ್ದಾನೆ. ಅದೇ ಮನೆಯಲ್ಲಿ ಅಮ್ಮ-ಅಪ್ಪನ ಮದುವೆಯ ೬೦ ವರ್ಷಗಳ ವಜ್ರಮಹೋತ್ಸವ ಆಚರಿಸಬೇಕೂಂತಿದ್ದೇವೆ. ಅವತ್ತು ಗಣಹೋಮ, ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದೇವೆ.”
“ನರ್ಸಿಂಗ್ ಹೋಂ ಏನ್ಮಾಡಿದ್ರು?”
“ಅಣ್ಣ ಅದನ್ನು ಮಾರಿಬಿಟ್ಟ, ಹೊಸ ಮನೆಯ ಒಂದು ಭಾಗದಲ್ಲಿ ಅಣ್ಣ-ಅತ್ತಿಗೆ ಕ್ಲಿನಿಕ್ ತೆಗೆಯುತ್ತಿದ್ದಾರೆ. ಹೋದ ವಾರ- ಮೈಸೂರಿಗೆ ಹೋಗಿದ್ದಾಗ ಅಪ್ಪ-ಅಮ್ಮನ್ನು ನೋಡಲು ಹೋಗಿದ್ದೆ….”
”ಶಂಕರ್ ನಾರಾಯಣ್ ಹೇಗಿದ್ದಾರೆ?”
“ಅವರೀಗ ಒಂದು ತರಹ ಭ್ರಮೆಯಲ್ಲಿದ್ದಾರೆ. ಅವರಿಗೆ ಮಗ ಸತ್ತಿರುವುದು ಗೊತ್ತೇ ಇಲ್ಲ. ಅವರ ಮನಸ್ಸು ಅದನ್ನು ನಂಬಲು ಸಿದ್ಧವಾಗೇ ಇಲ್ಲ. ಈಗಲೂ ಭಾನುವಾರಗಳಲ್ಲಿ ಫೋನ್ ಇಟ್ಕೊಂಡು ಮಗನ ಜೊತೆ ಮಾತಾಡ್ತಿರ್ತಾರೆ. ನೋಡಿ ತುಂಬಾ ಸಂಕಟವಾಯಿತು ಕಣೋ.”
“ನೀನು ಹೇಳಿರುವುದು ಕೇಳಿದರೆ ತುಂಬಾ ಭಯವಾಗತ್ತೆ, ನಾಳೆ ನಮ್ಮ ಗತಿಯೇನು ಅನ್ನಿಸತ್ತೆ” ಆದಿ ಹೇಳಿದ.
(ಮುಂದುವರಿಯುವುದು)
–ಸಿ.ಎನ್. ಮುಕ್ತಾ, ಮೈಸೂರು.
ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=39756
ಸಂಜೆಯ ಹೆಜ್ಜೆಗಳು ನಮ್ಮ ಮೈ..ಮನವನ್ನು ಆಲೋಚನೆಗೆ..ಒಡ್ಡುವಂತೆ ಮಾಡುತ್ತಾ ಕುತೂಹಲ ಹುಟ್ಟಿಸುತ್ತಾ ಸಾಗುತ್ತಿದೆ..ಮೇಡಂ
ಕಾದಂಬರಿಯ ಕಂತುಗಳು ತುಂಬಾ ಭಾವನಾತ್ಮಕವಾಗಿ ಕುತೂಹಲದಿಂದ ಮುಂದೆ ಸಾಗುತ್ತಿವೆ.
ಪ್ರತಿಯೊಬ್ಬರ ಬದುಕು ಅವರವರ ಜಾಗದಲ್ಲಿ ಇದ್ದಾಗ ಅಷ್ಟೇ ಅರಿವಿಗೆ ಬರುವುದು. ತುಂಬಾ ಚೆನ್ನಾಗಿ ಸಾಗುತ್ತಿದೆ ಕಥೆ.
ಧನ್ಯವಾದಗಳು ಪದ್ಮಾ, ನಾಗರತ್ನ. ಇಂದಿನ ಬರಹಗಳು ವ್ಯೆವಿಧ್ಯಮಯವಾಗಿದ್ದು ಮನಸ್ಸಿಗೆ ಮುದ ನೀಡುವಂತಿವೆ. ಹೇಮಮಾಲಾ ಹಾಗೂ ಸುರಹೊನ್ನೆ ಬಳಗದ ಎಲ್ಲರಿಗೂ ಅಭಿನಂದನೆಗಳು.
ಎಂದಿನಂತೆ, ಕುತೂಹಲಕಾರಿಯಾಗಿ ಮುಂದುವರಿಯುತ್ತಿರುವ ಹೆಜ್ಜೆಗಳ ಗುರುತುಗಳು ಮನಮುಟ್ಟುವಂತಿವೆ…ಧನ್ಯವಾದಗಳು ಮುಕ್ತಾ ಮೇಡಂ.